World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
ಧ್ಯೇಯವಾಕ್ಯ: 'ಎಲ್ಲೆಡೆಯೂ ಉತ್ಕೃಷ್ಟ ಆರೈಕೆಯ ಲಭ್ಯತೆ'
Team Udayavani, Nov 17, 2024, 1:30 PM IST
ಪ್ರತೀ ವರ್ಷ ನವೆಂಬರ್ 17ರಂದು ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನವನ್ನು ಆಚರಿಸಲಾಗುತ್ತದೆ. ಶಿಶುಗಳ ಅವಧಿಪೂರ್ವ ಜನಿಸುವುದು ಮತ್ತು ಅದರಿಂದ ಕುಟುಂಬಗಳ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಅಭಿಯಾನ ಈ ದಿನಾಚರಣೆಯ ಉದ್ದೇಶವಾಗಿದೆ. ಈ ವರ್ಷ ಅವಧಿಪೂರ್ವ ಶಿಶು ಜನನ ದಿನದ ಧ್ಯೇಯವಾಕ್ಯವು ‘ಎಲ್ಲೆಡೆಯೂ ಉತ್ಕೃಷ್ಟ ಆರೈಕೆಯ ಲಭ್ಯತೆ’ ಎಂಬುದಾಗಿದ್ದು, ಅವಧಿಪೂರ್ವ ಜನಿಸಿದ ಎಲ್ಲ ಶಿಶುಗಳು ಕೂಡ ಬದುಕುಳಿದು ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗುವಂತಹ ಉತ್ಕೃಷ್ಟ ಗುಣಮಟ್ಟದ ಆರೈಕೆಯ ಅವಕಾಶ ಪಡೆಯಲು ಸಾಧ್ಯವಾಗಬೇಕೆಂದು ಈ ಧ್ಯೇಯವಾಕ್ಯದ ಆಶಯವಾಗಿದೆ.
– ಅವಧಿಪೂರ್ವ ಶಿಶು ಜನನಕ್ಕೆ ಕಾರಣವೇನು ಮತ್ತು ಇದು ನಮ್ಮ ದೇಶದಲ್ಲಿ ಯಾಕೆ ಅತೀ ಸಾಮಾನ್ಯವಾಗಿ ಸಂಭವಿಸುತ್ತದೆ? ಮಹಿಳೆಯೊಬ್ಬರು ಗರ್ಭ ಧರಿಸಿದ ಬಳಿಕ ಎಷ್ಟು ಅವಧಿಯಲ್ಲಿ ಶಿಶುವಿಗೆ ಜನ್ಮ ನೀಡಬಹುದು ಮತ್ತು ಅದು ಸುರಕ್ಷಿತವಾಗಿ ಬದುಕುಳಿಯಬಹುದು? ಇಂತಹ ಅವಧಿಪೂರ್ವ ಶಿಶುಗಳ ಜಾಗತಿಕವಾಗಿ ಸ್ವೀಕೃತವಾಗಿರುವ ವರ್ಗೀಕರಣ ಹೇಗಿದೆ?
ಉತ್ತರ: ಗರ್ಭ ಧಾರಣೆಗೆ ಸಂಬಂಧಿಸಿ ಗರ್ಭಿಣಿಯು ಹೊಂದಿರುವ ಅನಾರೋಗ್ಯಗಳು, ತಾಯಿ ಹೊಂದಿರುವ ದೀರ್ಘಕಾಲೀನ ಅನಾರೋಗ್ಯಗಳು, ಸೋಂಕುಗಳು, ಅವಳಿ ಶಿಶು ಗರ್ಭ, ತಾಯಿಯ ಗರ್ಭಕೋಶದಲ್ಲಿ ಇರಬಹುದಾದ ಸಮಸ್ಯೆಗಳು, ಶಿಶುವಿನ ಸುತ್ತ ಹೆಚ್ಚುವರಿ ದ್ರವಾಂಶ ತುಂಬಿರುವುದು ಮತ್ತು ತಾಯಿಗೆ ಪೌಷ್ಟಿಕಾಂಶ ಕೊರತೆ ಇತ್ಯಾದಿ ಕಾರಣಗಳಿಂದ ಅವಧಿಪೂರ್ವ ಶಿಶು ಜನನವಾಗುತ್ತದೆ. 24 ವಾರಗಳು ಸಂಪೂರ್ಣಗೊಂಡ ಗರ್ಭಾವಸ್ಥೆಯ ಬಳಿಕ ಅಥವಾ 500 ಗ್ರಾಂಗಳಿಗಿಂತ ಹೆಚ್ಚು ದೇಹ ತೂಕ ಹೊಂದಿ ಜನಿಸಿದ ಯಾವುದೇ ಶಿಶು ಬದುಕುಳಿಯಲು ಶಕ್ತವಾಗಿರುತ್ತದೆ ಮತ್ತು ಲಭ್ಯವಿದ್ದರೆ ಸಂಪೂರ್ಣ ಚಿಕಿತ್ಸೆಯನ್ನು ಅದಕ್ಕೆ ಒದಗಿಸಬೇಕು. ಗರ್ಭಸ್ಥ ಶಿಶುವಿನ ವಿಷಯದಲ್ಲಿ ಇದನ್ನು ‘ಬದುಕುಳಿಯುವ ಅವಧಿ’ ಎಂದು ಪರಿಗಣಿಸಲಾಗುತ್ತದೆ. 24 ಸಂಪೂರ್ಣ ವಾರಗಳಿಗಿಂತ ಮುನ್ನ ಗರ್ಭವನ್ನು ತೆಗೆದುಹಾಕುವುದನ್ನು ‘ಗರ್ಭಪಾತ’ ಎಂದು ಕರೆಯಲಾಗುತ್ತದೆ. 24-28 ವಾರಗಳ ನಡುವಣ ಅವಧಿಯಲ್ಲಿ ಜನಿಸಿದ ಶಿಶುಗಳನ್ನು ‘ಅತ್ಯಂತ ಅವಧಿಪೂರ್ವ’ ಎಂದೂ, ಅವುಗಳ ಜನನ ಕಾಲದ ದೇಹತೂಕವು 2 ಕಿಲೊಗ್ರಾಂಗಿಂತ ಕಡಿಮೆ ಇದ್ದರೆ ‘ಅತ್ಯಂತ ಕಡಿಮೆ ದೇಹತೂಕದ ಶಿಶುಗಳು ಎಂದೂ ಕರೆಯಲಾಗುತ್ತಿದ್ದು, ಇಂತಹ ಶಿಶುಗಳು ಬದುಕುಳಿಯುವುದಕ್ಕೆ ಅಪಾರ ಚಿಕಿತ್ಸೆ, ನಿಗಾ ಬೇಕಾಗುತ್ತದೆ. 28ರಿಂದ 32 ವಾರಗಳ ನಡುವೆ ಜನಿಸಿದ ಶಿಶುಗಳು ‘ಅತೀ ಅವಧಿಪೂರ್ವ ಶಿಶು’ಗಳಾದರೆ 32ರಿಂದ 34 ವಾರಗಳ ನಡುವೆ ಜನಿಸಿದ ಶಿಶುಗಳು ‘ಮಧ್ಯಮ ಅವಧಿಪೂರ್ವ ಶಿಶು’ಗಳಾಗಿರುತ್ತವೆ. 34 ಸಂಪೂರ್ಣ ವಾರಗಳ ಬಳಿಕ ಆದರೆ 37 ಸಂಪೂರ್ಣ ವಾರಗಳಿಗಿಂತ ಮುನ್ನ ಜನಿಸಿದ ಶಿಶುಗಳನ್ನು ‘ವಿಳಂಬ ಅವಧಿಪೂರ್ವ ಶಿಶುಗಳು’ ಎನ್ನಲಾಗುತ್ತದೆ. 1ರಿಂದ 1.5 ಕಿಲೊಗ್ರಾಂ ದೇಹತೂಕ ಹೊಂದಿ ಜನಿಸಿದ ಯಾವುದೇ ಶಿಶುವನ್ನು ಅತ್ಯಂತ ಕಡಿಮೆ ದೇಹತೂಕದ ಶಿಶು ಎಂದೂ, 2.5 ಕಿಲೊಗ್ರಾಂಗಿಂತ ಕಡಿಮೆ ಆದರೆ 1.5 ಕಿಲೊಗ್ರಾಂಗಿಂತ ಹೆಚ್ಚು ದೇಹತೂಕ ಹೊಂದಿರು ಶಿಶುವನ್ನು ಕಡಿಮೆ ದೇಹತೂಕದ ಶಿಶು ಎನ್ನಲಾಗುತ್ತದೆ.
– ಅವಧಿಪೂರ್ವ ಶಿಶು ಜನನಕ್ಕೆ ಸಂಬಂಧಿಸಿ ಅತೀ ಸಾಮಾನ್ಯವಾಗಿರುವ ವೈದ್ಯಕೀಯ ಸಮಸ್ಯೆ ಏನು?
ಉತ್ತರ: ಅವಧಿಪೂರ್ವ ಜನಿಸಿದ ಶಿಶುವಿನಲ್ಲಿ ಯಾವುದೇ ದೇಹಾಂಗ ವ್ಯವಸ್ಥೆಗಳು ಕೂಡ ಪೂರ್ಣವಾಗಿ ಬೆಳವಣಿಗೆ ಹೊಂದಿರುವುದಿಲ್ಲ. ಶ್ವಾಸಕೋಶಗಳು ಪೂರ್ಣ ಬೆಳವಣಿಗೆ ಆಗದೆ ಇರುವುದರಿಂದ ಉಸಿರಾಟಕ್ಕೆ ಸಂಬಂಧಿಸಿ ತೀವ್ರ ತೊಂದರೆ ಉಂಟಾಗಬಹುದು ಮತ್ತು ಶಿಶುವನ್ನು ವಿಶೇಷ ವೆಂಟಿಲೇಟರ್ ಆಧಾರದಲ್ಲಿ ಇರಿಸಬೇಕಾಗಬಹುದು. ಜತೆಗೆ ಅವಧಿಪೂರ್ವ ಜನಿಸಿದ ಶಿಶುಗಳು ಹೈಪೊಥರ್ಮಿಯಾ, ರಕ್ತದಲ್ಲಿ ಸಕ್ಕರೆಯಂಶ ಕಡಿಮೆಯಾಗುವುದು ಮತ್ತು ಸೋಂಕುಗಳಿಗೆ ಸುಲಭ ವಾಗಿ ತುತ್ತಾಗಬಲ್ಲವು. ಕರುಳುಗಳು ಬೆಳವಣಿಗೆ ಹೊಂದದೆ ಇರುವುದರಿಂದ ಸ್ತನ್ಯಪಾನವನ್ನು ಅರಗಿಸಿ ಕೊಳ್ಳುವುದು ಕಷ್ಟವಾಗಬಹುದಲ್ಲದೆ ಕರುಳುಗಳ ಇತರ ಸಮಸ್ಯೆಗಳು ಕೂಡ ತಲೆದೋರಬಹುದಾಗಿದೆ. ಇಂತಹ ಶಿಶುಗಳಲ್ಲಿ ವಾಂತಿ ಮತ್ತು ಸ್ತನ್ಯ ಪಾನ ಅಸಹಿಷ್ಣುತೆ ಸಾಮಾನ್ಯವಾಗಿರುತ್ತದೆ. ರಕ್ತನಾಳಗಳು ಪೂರ್ಣವಾಗಿ ಬೆಳವಣಿಗೆ ಹೊಂದದೆ ಇರುವುದರಿಂದ ಕಣ್ಣು ಗಳು ಮತ್ತು ಮೆದುಳಿನಲ್ಲಿ ತೊಂದರೆಗಳು ಕಾಣಿಸಿ ಕೊಳ್ಳಬಹುದು. ಭ್ರೂಣ ನಾಳಗಳು ಇನ್ನೂ ತೆರೆದೇ ಇರುವುದರಿಂದಾಗಿ ಹೃದಯ ಕೂಡ ಬಾಧಿತವಾಗಿ ಪೇಟೆಂಟ್ ಡಕ್ಟಸ್ ಆರ್ಟರಿಯೋಸಸ್‌ನಂತಹ ಸಮಸ್ಯೆ ಗಳು ಉಂಟಾಗಬಹುದು. ಶ್ರವಣ ಶಕ್ತಿಗೂ ತೊಂದರೆ ಯಾಗಬಹುದು.
-ಡಾ| ರಾಜೇಂದ್ರ ಪ್ರಸಾದ್
-ಡಾ| ಜಯಶ್ರೀ ಪಿ.
-ಡಾ| ಶೀಲಾ ಮಥಾಯ್
ನಿಯೋನೇಟಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ
ಮುಂದಿನ ವಾರಕ್ಕೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.