ಹೃದಯವೇ ಧರ್ಮದ ಮೂಲವಯ್ಯ!
Team Udayavani, Sep 29, 2018, 3:42 PM IST
ಇಂದು ವಿಶ್ವ ಹೃದಯ ದಿನ. ಪ್ರೀತಿಯ- ಮಾನವೀಯತೆಯ ದ್ಯೋತಕವಾಗಿರುವ, ಮುಷ್ಟಿಯಗಲದ ಅಂಗದ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವ ದಿನ. ಇದೇ ಸಂದರ್ಭದಲ್ಲಿ, ಮೂರು ದಶಕಗಳಿಂದ ಹೃದ್ರೋಗ ತಜ್ಞರಾಗಿ, ಶ್ರೀ ಜಯದೇವ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸಿ.ಎನ್. ಮಂಜುನಾಥ್ ಅವರು, ತಮ್ಮ ವೈದ್ಯಕೀಯ ಪಯಣದ ಕೆಲವು ಹೃದಯಸ್ಪರ್ಶಿ ಘಟನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಟಿಪ್ಸ್‌ಗಳೂ ಇಲ್ಲಿವೆ…
ಹೃದಯಾಘಾತ ಶ್ರೀಮಂತರ, ಪಟ್ಟಣವಾಸಿಗರ ಕಾಯಿಲೆ ಎಂಬ ಮಾತೊಂದಿತ್ತು. ಆದರೆ, ಈಗ ಹಳ್ಳಿಯ ಕಡುಬಡವರೂ, ನಲವತ್ತರ ಪ್ರಾಯ ದಾಟದವರೂ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಚಿಕಿತ್ಸೆಯ ವೆಚ್ಚ ಭರಿಸಲಾಗದೆ, ಅಸಹಾಯಕ ಸ್ಥಿತಿಯಲ್ಲಿರುವ ಸಾವಿರಾರು ರೋಗಿಗಳಿಗೆ ಜಯದೇವ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತೇವೆ. ಅಂಥ ಕೆಲವು ಘಟನೆಗಳು ವೈದ್ಯರ ಹೃದಯದಲ್ಲಿ ಬೆಚ್ಚಗೆ ಕುಳಿತುಬಿಡುತ್ತವೆ.
1. ಇತ್ತೀಚೆಗೆ ಹಳ್ಳಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಚಿಕಿತ್ಸೆಗೆ ಕರಕೊಂಡು ಬಂದಿದ್ದಳು. ಆಕೆಯ ಗಂಡನಿಗೆ 38 ವರ್ಷ ಅಷ್ಟೇ. ಆ್ಯಂಜಿಯೋಪ್ಲಾಸ್ಟಿ ಮಾಡಬೇಕಾದ ಅಗತ್ಯವಿತ್ತು. ಚಿಕಿತ್ಸೆಯ ವೆಚ್ಚವಾಗಿ 50 ಸಾವಿರ ರೂ. ಪಾವತಿಸಿ ಎಂದಾಗ ಆಕೆ ಕಣ್ಣೀರಿಡುತ್ತಾ, “ಎಲ್ಲಿಂದ ತರೋದು ಸಾರ್? ಇದ್ದ ಒಂದು ಹಸುವನ್ನೂ ಮಾರಿ, ಇವರನ್ನು ಇಲ್ಲಿಗೆ ಕರಕೊಂಡು ಬಂದಿದ್ದೇನೆ’ ಎಂದು ಗೋಳಾಡಿದಳು. ಅದನ್ನು ಕೇಳಿ ಬೇಜಾರಾಯಿತು. ಯಾಕಂದ್ರೆ, ಆ ಹಸು ಅವರ ಮನೆಯ ಆಧಾರಸ್ತಂಭವಾಗಿತ್ತು. ಕೊನೆಗೆ, ರೋಗಿಗೆ ಉಚಿತ ಚಿಕಿತ್ಸೆ ನೀಡಿದೆವು. ಆಕೆ ಮೊದಲು ಪಾವತಿಸಿದ್ದ ಹಣವನ್ನೂ ವಾಪಸ್ ಮಾಡಿ, ಹಸುವನ್ನು ಖರೀದಿಸುವಂತೆ ಹೇಳಿದೆವು.
2. ನಮ್ಮ ಸಂಸ್ಕೃತಿಯಲ್ಲಿ ತಾಳಿಗೆ ಬಹಳ ಮಹತ್ವವಿದೆ. ಎಂಥ ಕಷ್ಟ ಕಾಲದಲ್ಲಿಯೂ ಅದನ್ನು ಮಾರುವುದಿಲ್ಲ. ಆದರೆ, ಬಹಳಷ್ಟು ಮಹಿಳೆಯರು ತಾಳಿಯನ್ನು ಅಡವಿಟ್ಟು, ಗಂಡನನ್ನು ಆಸ್ಪತ್ರೆಗೆ ಕರೆ ತರುತ್ತಾರೆ. ಬೋಳು ಕುತ್ತಿಗೆಯಲ್ಲಿ ಅರಿಶಿನ ದಾರವಿರುತ್ತದೆ. ಅಂಥವರಿಗೆ ಕೈಲಾದಷ್ಟು ಸಹಾಯ ಮಾಡುತ್ತೇವೆ. ಚಿಕಿತ್ಸೆಗೂ ಮೊದಲು ಹಣ ಕಟ್ಟಿ ಅಂತ ಯಾವತ್ತೂ ಹೇಳುವುದಿಲ್ಲ. ಟ್ರೀಟ್‌ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್ ಎಂಬುದು ಜಯದೇವ ಆಸ್ಪತ್ರೆಯ ಧ್ಯೇಯ ವಾಕ್ಯ.
3. ಕೂಲಿ ಮಾಡುವ ದಂಪತಿಯೊಬ್ಬರು ತಮ್ಮ ಸಣ್ಣ ಮಗುವನ್ನು ಕರೆದುಕೊಂಡು ಬಂದಿದ್ದರು. ಮದುವೆಯಾಗಿ ಅದೆಷ್ಟೋ ವರ್ಷಗಳ ನಂತರ, ಆ ಮಗು ಹುಟ್ಟಿತ್ತು. ದುರಾದೃಷ್ಟ, ಆ ಕಂದಮ್ಮನ ಹೃದಯದಲ್ಲಿ ರಂಧ್ರವಿತ್ತು. “ಮಗ ಹುಟ್ಟಿದ ಅಂತ ಖುಷಿ ಪಡುವುದೋ, ಅವನನ್ನು ಉಳಿಸಿಕೊಳ್ಳಲು ದುಡ್ಡಿಲ್ಲವಲ್ಲ ಅಂತ ದುಃಖೀಸುವುದೋ? ನಿಮ್ಮನ್ನೇ ನಂಬಿಕೊಂಡು ಬಂದಿದ್ದೇವೆ’ ಅಂತ ಆ ದಂಪತಿ ಕಣ್ಣೀರಾದಾಗ, ಹಣಕ್ಕಿಂತ ಆ ಪುಟ್ಟ ಜೀವವೇ ನಮಗೆ ಮುಖ್ಯವೆನಿಸಿತು.
4. ಈ ಘಟನೆ ನಡೆದು ಏಳೆಂಟು ವರ್ಷಗಳಾದರೂ ನನ್ನನ್ನು ಪದೇಪದೆ ಕಾಡುತ್ತದೆ. ಹೃದಯಾಘಾತಕ್ಕೀಡಾದ ತಂದೆಯನ್ನು ಗುಲ್ಬರ್ಗಾದಿಂದ ಬಾಡಿಗೆ ಕಾರಿನಲ್ಲಿ ಕರಕೊಂಡು ಬಂದಿದ್ದ ಮಗ. 65 ವರ್ಷದ ಆ ರೋಗಿಯ ಹೃದಯ ಬಡಿತ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿತ್ತು. “ತತ್‌ಕ್ಷಣ ಚಿಕಿತ್ಸೆ ಕೊಡಿಸಬೇಕು, 75 ಸಾವಿರ ರೂ. ಖರ್ಚಾಗುತ್ತೆ’ ಅಂದರು ನಮ್ಮ ಸಿಬ್ಬಂದಿ. ಪಾಪ, ಮಗನ ಬಳಿ ಇದ್ದ ದುಡ್ಡೆಲ್ಲಾ ಕಾರು ಬಾಡಿಗೆಗೇ ಮುಗಿದುಹೋಗಿತ್ತು. ದಿಕ್ಕು ತೋಚದ ಅವನು, “ನನ್ನ ಕೈಲಿ ಬಿಡಿಗಾಸೂ ಇಲ್ಲಾ ಸಾರ್. ಅಪ್ಪನನ್ನು ಇದೇ ಕಾರಿನಲ್ಲಿ ವಾಪಸ್ ಕರಕೊಂಡು ಹೋಗಿ, ಅಂತ್ಯಸಂಸ್ಕಾರ ಮಾಡುತ್ತೇನೆ. ಇನ್ನೇನು ಮಾಡೋಕೆ ಸಾಧ್ಯ?’ ಎಂದುಬಿಟ್ಟ! ಅಯ್ಯೋ ಅನ್ನಿಸಿತು. ತಕ್ಷಣ ಚಿಕಿತ್ಸೆ ನೀಡಿದೆವು. ಈಗಲೂ ಆ ರೋಗಿ ಆರಾಮಾಗಿ ಇದ್ದಾರೆ ಅನ್ನೋದು ಸಮಾಧಾನದ ವಿಷಯ.
5. ಆತ ಎಟಿಎಂನ ಸೆಕ್ಯುರಿಟಿ ಗಾರ್ಡ್. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ. ಹೃದಯ ಕಸಿ ಮಾಡಿಸುವುದೊಂದೇ ದಾರಿ. 15 ಲಕ್ಷ ರೂ. ಖರ್ಚಾಗುತ್ತದೆ ಅಂದಿದ್ದರು, ಬೇರೆ ಆಸ್ಪತ್ರೆ ವೈದ್ಯರು. ಅವನನ್ನು ಜಯದೇವಕ್ಕೆ ಕರಕೊಂಡು ಬಂದ ಹೆಂಡತಿ ಮತ್ತು ಸಣ್ಣ ಮಕ್ಕಳು ಸೀದಾ ನನ್ನ ಕಾಲಿಗೆರಗಿದರು. ದಯವಿಟ್ಟು ಗಂಡನನ್ನು ಉಳಿಸಿಕೊಡಿ ಅಂತ ಆಕೆಯೂ, ಅಪ್ಪನನ್ನು ಬದುಕಿಸಿ ಅಂತ ಆ ಪುಟಾಣಿಗಳು ಕಾಲು ಬಿಡದೆ ಗೋಗರೆದರು. ಅದೊಂದು ತೀರಾ ಭಾವುಕ ಕ್ಷಣ. ಉಚಿತವಾಗಿಯೇ ರೋಗಿಗೆ ಹೃದಯ ಕಸಿ ಮಾಡಿದೆವು. ಅವತ್ತು ನಾವು ಉಳಿಸಿದ್ದು ಒಂದು ಜೀವವನ್ನಲ್ಲ, ಇಡೀ ಕುಟುಂಬದ ಬದುಕನ್ನು.
ಹರಕೆ ಹೊತ್ತು ತೀರಿಸಿದ್ದೆ!
ರೋಗಿಗಳು ನೀವೇ ದೇವರು ಅಂತ ನಮಗೆ ಕೈ ಮುಗಿಯುತ್ತಾರೆ. ನಾವು ರೋಗಿಗಳನ್ನು ಬದುಕಿಸಪ್ಪಾ ತಂದೆ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇವೆ. ಸ್ವಂತ ಆಸೆಗಳನ್ನು ಪೂರೈಸಲು ನಾನೆಂದೂ ದೇವರನ್ನು ಬೇಡಿಕೊಂಡಿಲ್ಲ. ಆದರೆ, ರೋಗಿಗಳ ವಿಷಯದಲ್ಲಿ ಮನಸಲ್ಲೇ ಸುಮಾರು ಸಲ ಹರಕೆ ಕಟ್ಟಿದ್ದೇನೆ. ಹರಕೆ ಫಲಿಸಿದೆ. ಧರ್ಮಸ್ಥಳದ ಮಂಜುನಾಥನಿಗೆ 2-3 ಸಲ ಹರಕೆ ತೀರಿಸಿದ್ದೇವೆ.
ಅದು ಆಂತರಿಕ ಯುದ್ಧ
ರೋಗಿಗಳ ಕುಟುಂಬಕ್ಕಿಂತ ಹತ್ತುಪಟ್ಟು ಜಾಸ್ತಿ ಆತಂಕ ವೈದ್ಯರಿಗಿರುತ್ತದೆ. ಆದರೆ, ಅದನ್ನು ಎಲ್ಲರ ಮುಂದೆ ತೋರಿಸಿಕೊಳ್ಳುವಂತಿಲ್ಲ. ಅದು ನಮ್ಮೊಳಗೆ ನಿತ್ಯವೂ ನಡೆಯುವ ಆಂತರಿಕ ಯುದ್ಧ. ಕೆಲವೊಮ್ಮೆ ಚಿಕಿತ್ಸೆಯೆಲ್ಲಾ ಚೆನ್ನಾಗಿ ನಡೆಯಿತು ಅನ್ನೋವಾಗಲೇ ಕೆಟ್ಟದ್ದು ನಡೆದುಬಿಡುತ್ತದೆ. ಆಗ ಇಡೀ ದಿನ ಮನಸ್ಸು ಅಳುತ್ತಿರುತ್ತದೆ. ಮನೆಗೆ ಹೋದಾಗ ಹೆಂಡತಿ ಕೇಳುತ್ತಾಳೆ, “ಡಾಕ್ಟ್ರೇ, ಯಾಕೆ ಮುಖ ಬಾಡಿದೆ? ಏನಾದ್ರೂ ಹೆಚ್ಚುಕಡಿಮೆ ಆಯ್ತಾ?’ ಅಂತ.
ಹೃದಯಗಳೀಗ ಮೊದಲಿನಂತಿಲ್ಲ…
1. ವರ್ಷದಿಂದ ವರ್ಷಕ್ಕೆ ಹೃದಯ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ.
2. ಭಾರತದಲ್ಲಿ ಹೃದಯಾಘಾತವೇ ನಂ.1 ಕಿಲ್ಲರ್.
3. ಶೇ. 25ರಷ್ಟು ಮಂದಿ ಹೃದಯಾಘಾತಕ್ಕೆ ಬಲಿ.
4. 30-40 ವಯೋಮಾನದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ.
5. ಮೆನೋಪಾಸ್‌ಗೂ ಮುಂಚೆ ಹೃದಯಾಘಾಕ್ಕೀಡಾಗುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ.
ಹೃದಯ ಯಾವಾಗ ಕೈಕೊಡುತ್ತೆ?
– ಅಧಿಕ ರಕ್ತದೊತ್ತಡ, ಮಧುಮೇಹ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಬೊಜ್ಜಿನ ಸಮಸ್ಯೆ ಮತ್ತು ಅತಿಯಾಸೆ.
– ಬದಲಾದ ಜೀವನಶೈಲಿ.
– ವಿಭಜಿತ ಕುಟುಂಬಗಳಿಂದಾಗಿ ಹೆಚ್ಚಿದ ಸಾಂಸಾರಿಕ ಒತ್ತಡ.
– ಸಾಧನೆಯ ಹಪಹಪಿಗೆ ಹೆಚ್ಚೆಚ್ಚು ಒತ್ತಡಗಳನ್ನು ಮೈಮೇಲೆ ಎಳೆದುಕೊಳ್ಳುವುದು.
– ವಾಯುಮಾಲಿನ್ಯ (ಪ್ರತಿ ತಿಂಗಳು 150-200 ಬಸ್ಸು, ಕ್ಯಾಬ್ ಚಾಲಕರು ಹೃದಯ ಚಿಕಿತ್ಸೆಗೆಂದು ಜಯದೇವಕ್ಕೆ ಬರುತ್ತಾರೆ).
– ಆಹಾರ ಪದ್ಧತಿಯಲ್ಲಾದ ಬದಲಾವಣೆ.
– ಸಾಮಾಜಿಕ ಜಾಲತಾಣಗಳು ಹರಡುತ್ತಿರುವ ಮಾನಸಿಕ ಅಶಾಂತಿ.
– ಬದುಕಿನೆಡೆಗೆ ಮಿತಿಮೀರಿದ ನಿರೀಕ್ಷೆ.
ನೀವು ಸೇಫ್ ಆಗಬೇಕಾ?
– ಧೂಮಪಾನದಿಂದ ದೂರವಿರಿ
– ಒತ್ತಡ ಬೇಡ
– ಫಾಸ್ಟ್‌ಫುಡ್ ಸೇವನೆ ಸಲ್ಲ
– ಪ್ರತಿದಿನ 30-40 ನಿಮಿಷ ವ್ಯಾಯಾಮ ಮಾಡಿ
– ಪ್ರತಿ ದಿನ ಅರ್ಧ ಗಂಟೆ ನಡೆಯುವುದು ಒಳ್ಳೆಯದು
– ಮೆಟ್ಟಿಲುಗಳನ್ನು ಹತ್ತಿ. ದೇಹಕ್ಕೆ ವ್ಯಾಯಾಮದ ಜೊತೆಗೆ, ಹೃದಯದ ಸಂಬಂಧಿ ಕಾಯಿಲೆಗಳಿದ್ದರೆ, ಅದರ ಲಕ್ಷಣಗಳು ಗೋಚರಿಸುತ್ತವೆ.
– 35 ವರ್ಷ ದಾಟಿದ ಗಂಡಸರು, 45 ವರ್ಷ ದಾಟಿದ ಹೆಂಗಸರು ಪ್ರತಿ ವರ್ಷ ಹೃದಯ ತಪಾಸಣೆ, ಬಿ.ಪಿ., ಸಕ್ಕರೆ ಕಾಯಿಲೆಯ ಪರೀಕ್ಷೆ ಮಾಡಿಸಿಕೊಳ್ಳಿ.
– ಕುಟುಂಬದಲ್ಲಿ ಯಾರಾದರೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ತುತ್ತಾಗಿದ್ದರೆ, ಇತರ ಸದಸ್ಯರು ಹೆಚ್ಚಿನ ನಿಗಾ ವಹಿಸಬೇಕು.
– ಎರಡು ವರ್ಷಕ್ಕೊಮ್ಮೆ ಟ್ರೆಡ್‌ಮಿಲ್ ಇಸಿಜಿ ಮಾಡಿಸಿಕೊಳ್ಳಿ (ಟ್ರೆಡ್‌ಮಿಲ್ ಮೇಲೆ àಡುತ್ತಾ ಇಸಿಜಿ) ಆಗ ಮುಂದೆ ಹೃದಯಾಘಾತಕ್ಕೆ ತುತ್ತಾಗುವ ಸಂಭವವಿದೆಯಾ ಎಂದು ತಿಳಿಯುತ್ತೆ.
ಹೃದಯ ತಪಾಸಣೆಗೆ ಬನ್ನಿ…
ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಅ.11-12ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹಾಗೂ 13-14ರಂದು ಮೈಸೂರಿನ ಜಯದೇವದಲ್ಲಿ, ಬಡ ರೋಗಿಗಳಿಗೆ ಉಚಿತ ಆ್ಯಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟ್ ಅಳವಡಿಕೆ ಮಾಡಲಾಗುತ್ತದೆ. ಸುಮಾರು 200 ಜನರಿಗಷ್ಟೇ ಅವಕಾಶವಿದ್ದು, ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು.
ನಿಮ್ಮದು ಕುಳಿತೇ ಮಾಡುವ ಕೆಲಸವಾ?
ಆಫೀಸಿನ ಎಸಿ ರೂಮಿನಲ್ಲಿ ಕುಳಿತು ಮಾಡುವ ಕೆಲಸ ಆರಾಮು ಅಂತ ನಾವು ಭಾವಿಸುತ್ತೇವೆ. ಆದರೆ, ಅದು ಕೆಲಸವಲ್ಲ, ಸಿಟ್ಟಿಂಗ್ ಡಿಸೀಸ್. ಸತತವಾಗಿ, 3-4 ಗಂಟೆ ಕುಳಿತುಕೊಳ್ಳುವುದು 5 ಸಿಗರೇಟ್ ಸೇವನೆಗೆ ಸಮ. ಮಹಿಳೆಯರು ಧಾರಾವಾಹಿ ನೋಡಲೆಂದು ಟಿ.ವಿ.ಯ ಮುಂದೆ ಗಂಟೆಗಟ್ಟಲೆ ಪ್ರತಿಷ್ಠಾಪಿಸಲ್ಪಡುವುದು ಕೂಡ ಆರೋಗ್ಯ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.
– ಪ್ರಿಯಾಂಕ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.