ಬೀದಿ ಬೆಳಗುವ ಹುಡುಗ
ಹೀಗೊಂದು ಮಾನವೀಯ ಹಣತೆ
Team Udayavani, Oct 26, 2019, 4:09 AM IST
ಬೆಂಗಳೂರು ರಾತ್ರಿಯಾದರೆ, ದಿಗ್ಗೆಂದು ಝಗಮಗಿಸುತ್ತದೆ. ಆಕಾಶದ ನಕ್ಷತ್ರಗಳಷ್ಟೇ, ಇಲ್ಲೂ ಬೀದಿದೀಪಗಳು ಇವೆಯೇನೋ ಎಂಬ ಅಚ್ಚರಿಯಾಗುತ್ತದೆ. ಆದರೆ, ಬೀದಿ ಬದಿ ವ್ಯಾಪಾರ ಮಾಡುವ, ತಳ್ಳುಗಾಡಿಯ ಜೀವಗಳಿಗೆ, ರಾತ್ರಿ ಆಯಿತೆಂದರೆ ಬದುಕೇ ಕತ್ತಲು. ವ್ಯಾಪಾರ ನಡೆಸಲು ಬೆಳಕು ಸಾಲದು. ಅಂಥವರಿಗೆ, ದೀಪ ನೀಡಿ, ಅವರ ಕಂಗಳಲ್ಲಿ ಖುಷಿಯ ಬೆಳಕು ಕಾಣುವ ಹುಡುಗ ಆಕರ್ಷ್…
ಸಂಜೆ ಕವಿಯತ್ತಿತ್ತು. ಬನ್ನೇರುಘಟ್ಟ ರಸ್ತೆಯ ಬದಿಯಲ್ಲಿ ಕುಳಿತಿದ್ದ ಹೆಂಗಸಿನ ಮುಂದೆ ಹೂಗಳೇನೋ ನಗುತ್ತಿದ್ದವು. ಆದರೆ, ಆ ಹೂವಾಡಗಿತ್ತಿಯ ಮುಖ ಬಾಡಿದಂತಿತ್ತು. ಕತ್ತಲು ಆವರಿಸಿಬಿಟ್ಟರೆ, ಅವಳ ಹೂಗಳನ್ನು ಕೇಳುವವರಿಲ್ಲ. ಕುಳಿತ ಜಾಗದಲ್ಲಿ ಮೊದಲೇ ಬೆಳಕಿಲ್ಲ. “ಕಾಣದ ಕತ್ತಲಲ್ಲಿ, ಈಕೆ ಬಾಡಿದ ಹೂಗಳನ್ನು ಕೊಟ್ಟುಬಿಟ್ಟರೆ? ಮೊಳ ಹಿಡಿಯುವಾಗ ಮೋಸ ಮಾಡಿಬಿಟ್ಟರೆ?’ ಎನ್ನುವ ಭಾವದಿಂದ ನಿರುಕಿಸುತ್ತಾ, ಜನ ಸಮೀಪದಲ್ಲೇ ಹಾದು ಹೋಗುತ್ತಿದ್ದರೇ ವಿನಾ ಹೂಗಳನ್ನು ಕೊಳ್ಳುತ್ತಿರಲಿಲ್ಲ.
ಅವಳ ಕಳವಳ ಆಕರ್ಷ್ ಶ್ಯಾಮನೂರು ಎಂಬ ಯುವಕನ ಗಮನಕ್ಕೆ ಬಂತು. ಮರುದಿನವೇ ಆತ ಒಂದು ಉಡುಗೊರೆಯೊಂದಿಗೆ ಹೂವಾಡಗಿತ್ತಿಯ ಮುಂದೆ ನಿಂತಿದ್ದ. ಆಕೆಯ ಹೂ ಬುಟ್ಟಿಗಳ ಪಕ್ಕದಲ್ಲಿಯೇ, ಸೋಲಾರ್ ಪೋರ್ಟೆಬಲ್ ಲೈಟ್ ಅನ್ನು ಅಳವಡಿಸಿಬಿಟ್ಟ. ಅಲ್ಲಿದ್ದ ಹೂಗಳೆಷ್ಟು ತಾಜಾ ಎಂದು ಬೆಳಕು ಸಾರಿ ಹೇಳುತ್ತಿತ್ತು. ಅವಳು ಮಾರುವ ಹೂಗಳ ಮೇಲೆ ಜನಕ್ಕೆ ನಂಬಿಕೆ ಬಂತು. ರಾತ್ರಿ ಆವರಿಸುವುದರೊಳಗೆ, ಬುಟ್ಟಿಯಲ್ಲಿದ್ದ ಹೂಗಳೆಲ್ಲ ಖಾಲಿಯಾಗಿ, ಅದೇ ಹೂವಿನ ನಗುವಿನೊಂದಿಗೆ ಆಕೆ ಮನೆ ಸೇರುತ್ತಿದ್ದಳು. ಆ ಸೋಲಾರ್ ದೀಪದ ಉಪಕಾರ ಇಷ್ಟಕ್ಕೇ ನಿಲ್ಲಲಿಲ್ಲ. ಹೂಗಳೆಲ್ಲ ಮಾರಾಟವಾದ ಮೇಲೆ, ಆಕೆ ಲೈಟ್ ಅನ್ನು ಮನೆಗೆ ಕೊಂಡೊಯ್ಯುತ್ತಿದ್ದಳು. ಮಬ್ಬು ಬೆಳಕಿನಲ್ಲಿ ಓದುತ್ತಿದ್ದ ಮಕ್ಕಳು, ಈ ದೀಪದಡಿ ಓದಿ, ಪರೀಕ್ಷೆ ಬರೆದು, ಪಾಸಾಗುತ್ತಿದ್ದವು.
ಬೆಂಗಳೂರು ರಾತ್ರಿಯಾದರೆ, ದಿಗ್ಗೆಂದು ಝಗಮಗಿಸುತ್ತದೆ. ಆಕಾಶದ ನಕ್ಷತ್ರಗಳಷ್ಟೇ, ಇಲ್ಲೂ ಬೀದಿದೀಪಗಳು ಇವೆಯೇನೋ ಎಂಬ ಅಚ್ಚರಿಯಾಗುತ್ತದೆ. ಆದರೆ, ಮಾರುಕಟ್ಟೆಯ ಯಾವುದೋ ಮೂಲೆಯಲ್ಲಿ, ಕೆಲವು ಬಡಾವಣೆಗಳಲ್ಲಿ ಇನ್ನೂ ಬೀದಿ ದೀಪದ ಬೆಳಕು ಬಂದಿಳಿದಿಲ್ಲ. ಅಲ್ಲಿ ಹೂವಿಟ್ಟುಕೊಂಡು, ತರಕಾರಿಯನ್ನು ಗುಡ್ಡೆ ಹಾಕಿಕೊಂಡು, ಹಣ್ಣುಗಳನ್ನು ಮುಂದಿಟ್ಟುಕೊಂಡು, ಖರೀದಿಗೆ ಬರುವವರ ದಾರಿಯನ್ನೇ ಕಾಯುವ ಜೀವಗಳು ಸಾಕಷ್ಟಿರುತ್ತವೆ. ಸಂಜೆಯಾದರೆ, ರಾತ್ರಿಯ ಕಪ್ಪಾದರೆ, ಅವರಿಗೆ ದಿಗಿಲು. ಬರಿಗೈಯಲ್ಲಿ ಮನೆ ಸೇರಬೇಕಲ್ಲ? ಹೆಂಡತಿ- ಮಕ್ಕಳಿರುವ ಸಂಸಾರ ಸಾಕುವುದು ಹೇಗೆ?- ಅಂತ. ಇಂಥ ಮಂದಿಗೆ ಸೋಲಾರ್ ದೀಪಗಳನ್ನು ಹಂಚುತ್ತಾ, ಎರಡು ವರ್ಷದಿಂದ ವಿಶಿಷ್ಟವಾಗಿ ದೀಪಾವಳಿ ಆಚರಿಸುತ್ತಿರುವ ಹುಡುಗ, ಆಕರ್ಷ್ ಶ್ಯಾಮನೂರು. ಬೆಂಗಳೂರು ಮಾತ್ರವೇ ಅಲ್ಲ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗದ, ಒಟ್ಟು 260 ಮಂದಿಗೆ ಹೀಗೆ ಪೋರ್ಟೆಬಲ್ ಲೈಟ್ ಕೊಟ್ಟ ಉಪಕಾರಿ.
ಅಲ್ಲೊಂದು ವೃದ್ಧ ದಂಪತಿ. ದಾವಣಗೆರೆಯ ಒಂದು ಹಳ್ಳಿಯ ಮನೆಯಿಂದ ಮಗ ಅವರನ್ನು ಹೊರಗೆ ಹಾಕಿದ್ದ. ಅವರು ದಾವಣಗೆರೆಯ ರಿಂಗ್ ರೋಡ್ ಬಳಿ, ಒಂದು ಮರದ ಕೆಳಗೆ, ಟಾರ್ಪಲ್ ಕಟ್ಟಿಕೊಂಡು, ಪುಟ್ಟದಾಗಿ ವ್ಯಾಪಾರ ಮಾಡುತ್ತಾ, ರಾತ್ರಿಯಾದರೆ ಅಲ್ಲಿಯೇ ಮಲಗಿ, ಬದುಕು ಸಾಗಿಸುತ್ತಿದ್ದರು. ಸಂಜೆ ಕಳೆಯಿತೆಂದರೆ, ಅವರ ತರಕಾರಿ ಅಂಗಡಿಯತ್ತ ಯಾರೂ ಸುಳಿಯುತ್ತಿರಲಿಲ್ಲ. 5 ರೂ.ನ ಮೂರು ಕ್ಯಾಂಡಲ್ ಉರಿದು, ಬೆಳಕು ನೀಡಿದರೂ, ಅದರ ಬೆಳಕು ಜನರನ್ನು ಸೆಳೆಯಲು ಸೋಲುತ್ತಿತ್ತು. ಆಕರ್ಷ್, ಈ ವೃದ್ಧ ದಂಪತಿಯ ಡೇರೆಗೆ ಸೋಲಾರ್ ದೀಪ ಅಳವಡಿಸಿದ ಮೇಲೆ, ಅವರ ಬದುಕಿನ ಚಿತ್ರವೇ ಬದಲಾಗಿದೆ. ಅಲ್ಲಿಟ್ಟ ತರಕಾರಿಗಳು, ಜನರ ಕಣ್ಣಿಗೆ ಸ್ಪಷ್ಟವಾಗಿ ತೋರುತ್ತಿವೆ. ರಾತ್ರಿಯಾದರೂ ಗ್ರಾಹಕರು ಬಂದು, ಖುಷಿಯಿಂದ ವ್ಯಾಪಾರ ಮಾಡುತ್ತಿದ್ದಾರೆ.
ಕ್ರೌಡ್ ಫಂಡಿಂಗ್…: ಆಕರ್ಷ್, ಸೋಲಾರ್ ದೀಪದಾನವನ್ನು, ಸ್ನೇಹಿತರ, ಹಿತೈಷಿಗಳ ಜತೆಗೂಡಿ ಮಾಡುತ್ತಾರೆ. ಇದಕ್ಕಾಗಿ ಕ್ರೌಡ್ ಫಂಡ್ ಸಂಗ್ರಹಿಸುತ್ತಾರೆ. “ದೀಪಾವಳಿಯಲ್ಲಿ ಪಟಾಕಿ ಹಚ್ಚುವ ಇಚ್ಛೆ ಇಲ್ಲದವರು, ಆ ಹಣವನ್ನು ನಮಗೆ ಕ್ರೌಡ್ ಫಂಡಿಂಗ್ ರೂಪದಲ್ಲಿ ನೀಡಿ, ಅಸಹಾಯಕರಿಗೆ ನೆರವಾಗಬಹುದು’ ಎನ್ನುತ್ತಾರೆ, ಆಕರ್ಷ್. ಕೈಗಾಡಿ ತಳ್ಳುವ ಯಾವ ವ್ಯಾಪಾರಿಗೆ ದೀಪದ ಅಗತ್ಯವಿದೆ? ಅವರು ನಿಜವಾಗಿಯೂ ಸಂಕಷ್ಟದಲ್ಲಿದ್ದಾರಾ? ಎಂಬುದನ್ನು ಪರಿಶೀಲಿಸಲೂ, ಇವರದ್ದೇ ಒಂದು ತಂಡವೂ ಇದೆ. ಅವರು ಪರಿಶೀಲಿಸಿದ ಮೇಲೆಯೇ, ದೀಪದಾನ ನಡೆಯುತ್ತದೆ.
ಚೈನಾ ಉತ್ಪನ್ನಗಳಲ್ಲ…: “ನಾವು ನೀಡುವ ಈ ಸೋಲಾರ್ ದೀಪಗಳು ಚೀನಾದ ಉತ್ಪನ್ನಗಳಲ್ಲ. ಬೆಂಗಳೂರಿನ ಕಾರ್ಖಾನೆಗಳಲ್ಲಿ ಇವು ಸಿದ್ಧಗೊಳ್ಳುತ್ತವೆ. ಈ ಉತ್ಪನ್ನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ, ಗುಣಮಟ್ಟಕ್ಕೆ ಪ್ರಾಶಸ್ತ್ಯ ನೀಡುತ್ತೇವೆ. ವ್ಯಾಪಾರಿಗಳಿಗೆ ರಫ್ ಆ್ಯಂಡ್ ಟಫ್ ಆಗಿ ಬಳಕೆ ಆಗುವಂಥ, ದೀಪಗಳನ್ನೇ ನೀಡುತ್ತೇವೆ’ ಎನ್ನುತ್ತಾರೆ ಆಕರ್ಷ್. ಮತ್ತೆ ದೀಪಾವಳಿ ಬಂದಿದೆ. ಆಕರ್ಷ್ ಕೈಗಿಟ್ಟ ಸೋಲಾರ್ ದೀಪಗಳೇಕೋ, ಮಾನವೀಯ ಪ್ರೀತಿಯ ಹಣತೆಯಂತೆ ಸಾಲುಗಟ್ಟಿ ತೋರುತ್ತಿವೆ.
ವಿಶೇಷತೆಗಳೇನು..?
– ಇವರು ನೀಡುವ ಕಿಟ್‌ನಲ್ಲಿ, ಸೋಲಾರ್ ಲೈಟ್, ಬ್ಯಾಟರಿ ಬಾಕ್ಸ್, 2 ಬಲುºಗಳು ಇರುತ್ತವೆ.
– 8 ತಾಸು ನಿರಂತರ ಬೆಳಕು ನೀಡುವ ವ್ಯವಸ್ಥೆ.
– ಮೊಬೈಲ್ ಚಾರ್ಜಿಂಗ್ ಸೌಲಭ್ಯ.
ನಿಮ್ಮ ಅಕ್ಕಪಕ್ಕ ಯಾರಾದರೂ ಇದ್ದರೆ..?: ನಿಮ್ಮ ಬಡಾವಣೆಯ ಸಮೀಪ ಯಾರಾದರೂ ಬೀದಿಬದಿಯ ವ್ಯಾಪಾರಿಗಳು ಬೆಳಕಿನ ಸಮಸ್ಯೆ ಅನುಭವಿಸುತ್ತಿದ್ದಾರೆಯೇ? ಅವರ ಹೆಸರು, ಜಿಯೋಲೊಕೇಶನ್, ಮಾರಾಟಗಾರರ ಛಾಯಾಚಿತ್ರಗಳ- ಇತ್ಯಾದಿ ವಿವರಗಳನ್ನು +919606677223 ಸಂಖ್ಯೆಗೆ ಕಳುಹಿಸಬಹುದು.
ಎರಡು ವರ್ಷದ ಹಿಂದೆ ವಿಶಿಷ್ಟವಾಗಿ ದೀಪಾವಳಿ ಆಚರಿಸಲು ಯೋಚಿಸಿ, ಸೋಲಾರ್ ದೀಪದಾನ ಶುರುಮಾಡಿದೆ. ಇಂದು ಬೀದಿ ಬದಿ ವ್ಯಾಪಾರ ಮಾಡುವ ನೂರಾರು ಮಂದಿಗೆ, ಈ ದೀಪ ಆಸರೆಯಾಗಿದೆ.
-ಆಕರ್ಷ್ ಶ್ಯಾಮನೂರು, ಬೆಂಗಳೂರಿನ ಯುವಕ
* ಕೀರ್ತಿ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.