ಆಕಾಂಕ್ಷ ರೇಖೆಗಳು: ಮಹಿಳೆಯರಿಗಾಗಿ ಮಹಿಳೆಯರೇ ಆಯೋಜಿಸಿದ ಕಲಾಪ್ರದರ್ಶನ
Team Udayavani, Jun 2, 2018, 12:30 PM IST
ಚಿತ್ರಕಲೆಯೊಳಗೆ ಎಷ್ಟೆಲ್ಲ ಹೆಣ್ಣಿನ ಹೆಜ್ಜೆಗುರುತು! ಡಾ ವಿನ್ಸಿಯ ಕುಂಚದಲ್ಲಿ ಮೊನಾಲಿಸಾ ನಸುನಕ್ಕಾಗ, ರಾಜಾ ರವಿವರ್ಮನ ಕೈಚಳಕದಲ್ಲಿ ಶಾಕುಂತಲೆ ಸೆಳೆದಾಗ, ದಮಯಂತಿ ನಳನ ಪಕ್ಕ ನಿಂತು ನಾಚಿದಾಗ ಹೆಣ್ಣೇ ಕಲೆಗೆ ಕಣ್ಣೆಂದು ಜಗತ್ತು ಭಾವಿಸಿತ್ತು. ರವಿವರ್ಮನಂತೂ ಬೆಳದಿಂಗಳಡಿಯಲ್ಲಿ ಚಂದ್ರನಿಗೆ ಹೊಟ್ಟೆಕಿಚ್ಚಾಗುವಂತೆ ಹೊಳಪು ಬೀರುತ್ತಾ ಕುಳಿತ ಸಾಮಾನ್ಯ ಹೆಣ್ಣಿನಿಂದ ಹಿಡಿದು ರಾಣಿ- ಮಹಾರಾಣಿಯರ ತನಕ ಚೆಲುವೆಯರನ್ನೇ ಕಲೆಗೆ ವಸ್ತು ಮಾಡಿಕೊಂಡ. ಅವನದ್ದೇ ಕಾಲದಲ್ಲಿನ ಕಲಾವಿದರ ಕೈಯಿಂದ ಕ್ಯಾಲೆಂಡರ್ ಗರ್ಲ್ಸ್ ಅರಳಿಕೊಂಡಾಗಲೂ, ಕ್ಯಾನ್ವಸ್ಸಿನ ಮೇಲಿನ ಕನ್ಯಾಕುಮಾರಿಗಳಿಗೆ ಮನಸೋತಿದ್ದೆವು. ಆಧುನಿಕ ಚಿತ್ರಕಾರರೂ ಹೆಣ್ಣನ್ನು ಚೌಕಟ್ಟಿನಿಂದ ಆಚೆಯಿಟ್ಟು ಯಾವತ್ತೂ ನೋಡಿದವರಲ್ಲ.
ಆದರೆ, ಸ್ತ್ರೀ ಅಂದರೆ ಅಷ್ಟೇ ಸಾಕೆ? ಆಕೆ ಕುಂಚ ಹಿಡಿಯುವುದು ಯಾವಾಗ? ಎನ್ನುವ ಪ್ರಶ್ನೆ ಎದ್ದಾಗ ಅಮೃತಾ ಶೇರ್ ಗಿಲ್‌ರಂಥವರು ಸು#ರದ್ರೂಪಿ ಚೆಲುವೆಯರ ಚಿತ್ತಾರ ಬಿಡಿಸಿ ಭರವಸೆ ಮೂಡಿಸಿದ್ದು ಗೊತ್ತೇ ಇದೆ. ಈಗಂತೂ ಚಿತ್ರಕಾರಿಣಿಯರ ದೊಡ್ಡ ಪರಂಪರೆಯೇ ಹುಟ್ಟಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ 50 ಮಹಿಳೆಯರ, 500ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ. ನಾಲಕ್ಕು ಗ್ಯಾಲರಿಗಳಲ್ಲಿ ಆರು ದಿನ ಹೆಣ್ಣೇ ಚೆಲ್ಲಿದ ಓಕುಳಿಯ ರಸದೌತಣ.
ಇದೆಲ್ಲ “ಆಕಾಂಕ್ಷ’ ಮ್ಯಾಜಿಕ್!
“ಆಕಾಂಕ್ಷ’ ಎನ್ನುವುದು ಒಂದು ಸಂಘಟನೆ. ಇದರ ರೂವಾರಿಯರು: ಶ್ಯಾಮಲಾ ರಮಾನಂದ್, ಉಷಾ ರೈ ಮತ್ತು ಕವಿತಾ ಪ್ರಸನ್ನ. ತಾವು ರಚಿಸಿದ ಕಲಾಕೃತಿಗಳನ್ನೂ ಪ್ರದರ್ಶಿಸಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿದ್ದ ಈ ಮೂವರು 2012ರಲ್ಲಿ ಒಂದೆಡೆ ಸೇರಿ ಕಟ್ಟಿದ ಸಮೂಹವೇ “ಆಕಾಂಕ್ಷ’. ಅದೀಗ 500 ಸದಸ್ಯರ ದೊಡ್ಡ ಬಳಗ. “ಆಕಾಂಕ್ಷ’ದ ನೆರಳಿನಲ್ಲಿ ಮೂಡಿದ ಚಿತ್ತಾರಗಳು ಕಲಾಪ್ರಿಯರನ್ನು ಬೆರಗುಗೊಳಿಸಿವೆ. ಇದೀಗ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ “ಆಕಾಂಕ್ಷ’ದ 5ನೇ ವಾರ್ಷಿಕ ಕಲಾಪ್ರದರ್ಶನದ ವಿಶೇಷವಾಗಿ, “ಇನ್‌ಕ್ರೆಡಿಬಲ್ ಇಂಡಿಯಾ’ ಶೀರ್ಷಿಕೆಯಡಿಯಲ್ಲಿ ಸ್ತ್ರೀ ಕಲಾವಿದರ ಕಲಾಕೃತಿಗಳನ್ನು ಇಡಲಾಗುತ್ತಿದೆ. “ಭಾರತದ ಸಾಮಾಜಿಕ, ಭೌಗೋಳಿಕ, ಧಾರ್ಮಿಕ ವೈವಿಧ್ಯಮಯ ಹರಿವು ಇರುವ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ’ ಎನ್ನುತ್ತಾರೆ ಆಯೋಜಕರು.
ಚಿತ್ರಕಲೆ ಯಾರ ಸ್ವತ್ತಲ್ಲ. ಅದಕ್ಕೆ ವಯಸ್ಸಿನ ಮಿತಿಯೂ ಇಲ್ಲ. ಇಲ್ಲಿ ಗೃಹಿಣಿಯರೂ ಇದ್ದಾರೆ. ಹಿರಿಯ ಮಹಿಳೆಯರೂ ಇದ್ದಾರೆ. ಅವರ ಅತ್ಯುತ್ತಮ ಕಲಾಕೃತಿಗಳು ಪ್ರದರ್ಶನಕ್ಕೆ ಸಾಕ್ಷಿ ಆಗಲಿವೆ.
ಆಸರೆಯಾದ ಆಕಾಂಕ್ಷ!
ಉಳಿದೆಲ್ಲಾ ಕ್ಷೇತ್ರಗಳಲ್ಲಿರುವಂತೆ ಕಲಾ ಕ್ಷೇತ್ರದಲ್ಲೂ ಪುರುಷರಿಗೆ ಇರುವಷ್ಟು ಅವಕಾಶಗಳು ಮಹಿಳೆಗೆ ಇಲ್ಲ. ಇಂಥ ಸಾಮಾಜಿಕ ಸಮಸ್ಯೆಗೆ ಪರಿಹಾರವಾಗಿದ್ದು “ಆಕಾಂಕ್ಷ’. ಚಿತ್ರಕಲೆಯನ್ನೇ ವೃತ್ತಿಯಾಗಿಸಿಕೊಳ್ಳಬೇಕು ಎಂಬ ಕನಸು ಹೊತ್ತು, ಯಾವ್ಯಾವುದೋ ಕಾರಣಕ್ಕಾಗಿ ಇಂಥ ಅವಕಾಶ ಕಳಕೊಂಡವರಿಗೆ ಈ ಸಂಸ್ಥೆ ಧೈರ್ಯ ತುಂಬಿತು. “ಇನ್ನು ನನ್ನಿಂದ ಕಲಾಕೃತಿಗಳ ಪ್ರದರ್ಶನ ಸಾಧ್ಯವೇ ಇಲ್ಲವೇನೋ’ ಎಂದು ಹಿಂಜರಿದವರೂ ಇಲ್ಲಿ ಅದ್ಭುತಗಳನ್ನೇ ಸೃಷ್ಟಿಸಿರುವರು. “ಅಡುಗೆ ಮನೆಯೇ ಜೀವನದ ಸಾಧನೆ ಆಗ್ಹೋಗುತ್ತಾ’ ಎಂದುಕೊಂಡ ಗೃಹಿಣಿಯರೂ ಈ ಪ್ರದರ್ಶನದಲ್ಲಿ ಕೈಚಳಕ ತೋರಿಸಿರುವುದನ್ನು ಕಾಣಬಹುದು.
“ಆಕಾಂಕ್ಷ’ ಪ್ರತಿವರ್ಷವೂ ಹೊಚ್ಚಹೊಸ ಕಲಾವಿದೆಯರನ್ನು ಪರಿಚಯಿಸುತ್ತಿದೆ. 2015ರಲ್ಲಿ 67 ಮಂದಿ, 500ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಿದ್ದು ಕೂಡ ಹೆಮ್ಮೆಯ ಸಂಗತಿ. ಹೆಣ್ಣಿನ ಬಣ್ಣದ ಲೋಕವನ್ನು ಕಂಗಳಿಂದ ಬರಮಾಡಿಕೊಳ್ಳುವ ಸರದಿ ನಿಮ್ಮದು.
ಯಾರಿಂದ ಚಾಲನೆ?
ವಿಭಿನ್ನ ಸಮೂಹ ಕಲಾಪ್ರದರ್ಶನವನ್ನು ಜೈನ್ ವಿಶ್ವವಿದ್ಯಾಲಯದ ಡೀನ್ ಡಾ. ಚೂಡಾಮಣಿ ನಂದಗೋಪಾಲ್ ಉದ್ಘಾಟಿಸಲಿದ್ದಾರೆ. ಲೇಖಕಿ ಡಾ. ಸಂಧ್ಯಾ ರೆಡ್ಡಿ, ಡಾ. ಪ್ರಮಿಳಾ ಲೋಚನ್, ಹಿರಿಯ ಕಲಾವಿದೆ ಶಿರ್ಲೆ ಮ್ಯಾಥ್ಯೂ ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಹಿಳೆ ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಯಾರಿಗೂ ಕಾದು ಕುಳಿತಿರಬೇಕಿಲ್ಲ. ಆಕೆ ಸ್ವತಂತ್ರವಾಗಿ ಇಂಥ ಪ್ರದರ್ಶನ ಮಾಡುವ ಶಕ್ತಿ ಪಡೆದುಕೊಳ್ಳಬೇಕು. ಆಕೆಗೆ ಈ ಸಮಾಜದಿಂದ ನೈತಿಕ ಬೆಂಬಲ ಸಿಗಬೇಕು.
– ಶ್ಯಾಮಲಾ ರಮಾನಂದ್
ಅಗ್ನಿ ಹೋತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.