ಗೊಮ್ಮಟ ಗಿರಿಗಳು


Team Udayavani, Feb 17, 2018, 12:08 PM IST

2-a.jpg

ಬಾಹುಬಲಿಯ ಶಿಲ್ಪಗಳು ಹೆಚ್ಚಾಗಿ ಬೌದ್ಧಿಕ ಮತ್ತು ಭೌತಿಕ ಎಂಬ ಎರಡು ವಿಧಗಳಲ್ಲಿ ಕರ್ನಾಟಕದಲ್ಲಿ ಪ್ರಸರಣಗೊಂಡಿವೆ. ಮೊದಲನೆಯದು ಅಕ್ಕರಗಳ  ಅಕ್ಕರೆಯಲ್ಲಿ ಒಡಮೂಡಿದ ಶಿಲ್ಪವಾದರೆ; ಎರಡನೆಯದು ಲೋಹ ಮತ್ತು ಶಿಲೆಯಲ್ಲಿ ಅರಳಿದ ಕಲೆ. ಒಂದು ಅಮೂರ್ತ; ಇನ್ನೊಂದು ಮೂರ್ತ. ಈ ಎರಡೂ ಕಲೆಯ ಸಂಪ್ರದಾಯಗಳು ಒಂದರ ಮೇಲೊಂದು ಪ್ರಭಾವ ಬೀರಿರುವ ಅಂಶಗಳು ಕರ್ನಾಟಕದ ಸನ್ನಿವೇಶದಲ್ಲಿ ಕಂಡುಬರುತ್ತವೆ. 

ಗೊಮ್ಮಟ ಶಿಲ್ಪದ ಚಿತ್ರಣ
ಜಿನಧರ್ಮದ 24 ತೀರ್ಥಂಕರರಲ್ಲಿ ಪಾರ್ಶ್ವನಾಥ ಮತ್ತು ಕೇವಲಿಗಳಲ್ಲಿ ಬಾಹುಬಲಿಯ ಮೂರ್ತಿಶಿಲ್ಪಗಳು ನೈಜ ಚಿತ್ರಣದ ಪ್ರತೀಕಗಳು. ಇವರ ಪ್ರತಿಮೆಗಳನ್ನು ಬಹುತೇಕ ಕಡೆಗೆ ಜ್ಞಾನೋದಯವಾಗುವ ಸಂದರ್ಭದ ಸ್ಥಳದ ಪರಿಸರದಂತೆಯೇ ಚಿತ್ರಿಸಲಾಗಿದೆ. ಕಮಠೊಪಸರ್ಗದ ಪಾರ್ಶ್ವನಾಥ, ಕಾಯೋತ್ಸರ್ಗದ ಬಾಹುಬಲಿ ಎಂದು ಈ ಮೂರ್ತಿಗಳಿಗೆ ಹೆಸರು. ಉಪಸರ್ಗಗಳೆಂದರೆ ತೊಂದರೆ. ಪಾರ್ಶ್ವನಾಥ ಮತ್ತು ಬಾಹುಬಲಿಗೆ ಜ್ಞಾನೋದಯ ಪಡೆಯುವಲ್ಲಿ ಇವರಿಗೆ ಇತರ ತೀರ್ಥಂಕರರು, ಕೇವಲಿಗಳಿಗಿಂತ ನಾನಾ ವಿಧದ ಉಪಸರ್ಗಗಳು ಎದುರಾದವು. ಆದರೂ ಘನಘೋರವಾದ ತಮ್ಮ ತಪಸ್ಸಿನಿಂದ ಹಿಂದೆ ಸರಿಯದ ಇವರು ಅಂತಿಮವಾಗಿ ಆತೊ¾àನ್ನತಿಯ ಮಾರ್ಗ ಕಂಡುಕೊಂಡರು. ಬಹುಶಃ ಈ ಅಂಶದಿಂದಲೇ ಪಾರ್ಶ್ವನಾಥ ಮತ್ತು ಬಾಹುಬಲಿಯನ್ನು ಒಟ್ಟೊಟ್ಟಿಗೆ ಚಿತ್ರಿಸುವ ಪರಂಪರೆ ಕರ್ನಾಟಕದ ಆರಂಭಿಕ ಶಿಲ್ಪಕಲೆಯಲ್ಲಿ ಕಂಡು ಬರುತ್ತದೆ. ಬಾದಾಮಿ ಐಹೊಳೆಯ ಗುಹಾಂತರ ಬಸದಿಗಳನ್ನು ಈ ಅಂಶಕ್ಕೆ ಉದಾಹರಣೆಯಾಗಿ­ಸಬಹುದು. 

 ಬಾದಾಮಿ ಐಹೊಳೆಯಲ್ಲಿ ಭುಜದವರೆಗೂ ಇಳಿಬಿದ್ದ ಕೂದಲು, ಶ್ರವಣಬೆಳಗೊಳ ಇತ್ಯಾದಿ ಬಾಹುಬಲಿ ಶಿಲ್ಪಗಳಲ್ಲಿ ತಲೆಯಲ್ಲಿ ಸುರುಳಿಯಾಕಾರದ ಗುಂಗುರು ಕೂದಲುಗಳನ್ನು ಚಿತ್ರಿಸಲಾಗಿದೆ. ಈ ರೀತಿಯ ಚಿತ್ರಣ ಬೇರೆ ಬೇರೆ  ಶೈಲಿಯದ್ದೆಂದು ಪ್ರತಿಪಾದಿಸುವ ವಿದ್ವಾಂಸರಿದ್ದಾರೆ. ಆದರೆ ಇಲ್ಲಿ ಯಾವ ಶೈಲಿಯೂ ಇಲ್ಲ ಎಂಬುದನ್ನು ಗಮನಿಸಬೇಕು. ಶ್ರವಣಬೆಳಗೊಳದ ಗೊಮ್ಮಟ ತಪೋನಿರತ ಆರಂಭಿಕ ಬಾಹುಬಲಿಯ ಚಿತ್ರಣ. ಆಗತಾನೆ ರಾಜ್ಯವನ್ನು ತ್ಯಜಿಸಿದ ತಪದಲ್ಲಿ ಮಗ್ನನಾದ ಬಾಹುಬಲಿಯನ್ನು ಶಿಲ್ಪಿ ಇಲ್ಲಿ ಒಡಮೂಡಿಸಿದ್ದಾನೆ. ಬಾದಾಮಿ ಗುಹಾಂತರ ಬಸದಿಯಲ್ಲಿನ ಬಾಹುಬಲಿ ತಪದ ಕೊನೆಯ ಹಂತದ ಚಿತ್ರಣ. ಈ ಹಂತಕ್ಕಾಗಲೇ ಬಾಹುಬಲಿಗೆ ತಲೆಗೂದಲು ಭುಜದವರೆಗೂ ಇಳಿಬಿದ್ದಿದ್ದವು. 

ಸುವರ್ಣಲೇಪಿತ ಲೋಹದ ಪ್ರಾಚೀನ ಗೊಮ್ಮಟ
ಅಮೇರಿಕದ ನ್ಯೂಯಾರ್ಕ್‌ ಮೆಟ್ರೋಪಾಲಿಟಿನ್‌ ವಸ್ತುಸಂಗ್ರಾಹಾಲಯದಲ್ಲಿ ಸುವರ್ಣ ಲೇಪಿತ ಪಂಚಲೋಹದ ಬಾಹುಬಲಿಯ ಮೂರ್ತಿಯೊಂದಿದೆ. 11.1 ಸೆ.ಮೀ ಇರುವ ಈ ಮೂರ್ತಿಯನ್ನು ಸ್ಯಾಮೂಲ್‌ ಎಲಿನ್‌ಬರ್ಗ್‌ ಎಂಬುವವರು 1987ರಲ್ಲಿ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಸ್ತು ಸಂಗ್ರಹಾಲಯದ ದಾಖಲೆಗಳ ಪ್ರಕಾರ, ಈ ಮೂರ್ತಿಯು ಕರ್ನಾಟಕದಿಂದ ಬಂದಿದ್ದು, ಬಾದಾಮಿ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದ್ದು ಎಂದಿದೆ. ಅಲ್ಲದೇ ಮೂರ್ತಿಯ ಕಾಲವನ್ನು 6-7ನೆಯ ಶತಮಾನದ್ದೆಂದು ಹೇಳಲಾಗಿದೆ. ಈ ಮೂರ್ತಿಯ ಬಗ್ಗೆ ಅಧ್ಯಯನ ಮಾಡಿದ ನಾಡೋಜ ಪೊ›. ಹಂ.ಪ ನಾಗರಾಜಯ್ಯನವರು ಇದು “ಇದುವರೆಗೂ ಉಳಿದು ಬಂದಿರುವ ಬಾಹುಬಲಿ ಮೂರ್ತಿಗಳಲ್ಲಿಯೇ ಅತ್ಯಂತ ಪ್ರಾಚೀನತಮ ಎಂದಿದ್ದಾರೆ’. ಅವರು ಸಂಶೋಧಿಸಿದ ಪ್ರಕಾರ ಮೂರ್ತಿಯ ಕಾಲ ಐದು-ಆರನೆಯ ಶತಮಾನಕ್ಕೆ ಸಲ್ಲುತ್ತದೆ. ಈ ಆಧಾರದ ಮೇಲೆ ಮೂರ್ತಿಯ ಕಾಲವನ್ನು ಕದಂಬರ ಆಡಳಿತದ ಕೊನೆಯ ಹಾಗೂ ಬಾದಾಮಿ ಚಾಲುಕ್ಯರ ಆಡಳಿತದ ಪ್ರಾರಂಭದ ಕಾಲಘಟ್ಟ ಎಂದು ಗುರುತಿಸಬಹುದು. 

ಬಾದಾಮಿಯ ಬಾಹುಬಲಿ
 ಇಲ್ಲಿರುವ ಶೈವ, ವೈಷ್ಣವ, ಜೈನ ಗುಹಾಲಯಗಳು ಚಾಲುಕ್ಯರ ಕಲಾ ಸಿರಿವಂತಿಕೆಯ ಕನ್ನಡಿಗಳು. ಇದರಲ್ಲಿ ಜೈನ ಗುಹಾಲಯವು ಒಂದು ಬಸದಿ. ಇದು ಇಲ್ಲಿರುವ ಎಲ್ಲಾ ಗುಹಾಲಯಗಳಿಗಿಂತ ಮೇಲಿರುವುದರಿಂದ ಮೇಗಣ ಬಸದಿ ಎಂಬ ಉಪನಾಮವಿದೆ. ಸುಮಾರು ಏಳೂವರೆ ಅಡಿ ಇರುವ ಮೇಣ ಬಸದಿಯ ಬಾಹುಬಲಿಯನ್ನು ಪೀಠದ ಮೇಲೆ ಕಾಯೋತ್ಸರ್ಗದ ಭಂಗಿಯಲ್ಲಿ ಚಿತ್ರಿಸಲಾಗಿದೆ. ಇದೊಂದು ಉಬ್ಬು ಶಿಲ್ಪದ ಮಾದರಿ. ಈ ಶಿಲ್ಪದಲ್ಲಿ ನಿರ್ಲಿಪ್ತ ಭಾವದ ಮೊಗ, ಏರು ಬಾಚಿದಂತಿರುವ ತಲೆಕೂದಲುಗಳು, ನೀಳವಾದ ಭುಜಬಲದ ಮೇಲೆ ಇಳಿಬಿದ್ದ ಕೇಶಗಳು, ಕೈಕಾಲುಗಳನ್ನು ಆವರಿಸಿದ ಬಳ್ಳಿಗಳು, ಕಾಲ ಬಳಿ ಹೆಡೆಯೆತ್ತಿ ಆಡುತ್ತಿರುವ ನಾಲ್ಕು ಸರ್ಪಗಳು, ಬಾಹುಬಲಿಯ ಹಿನ್ನಲೆಯಲ್ಲಿ ಕಾಡಿನ ಚಿತ್ರಣ, ಎಡಬಲದಲ್ಲಿ ನಿಂತ ಮತ್ತು ಕುಳಿತ ಖೇಚರಿಯರು ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ಬಾಹುಬಲಿಯು ಕೇವಲಜ್ಞಾನ ಪಡೆಯುವ ಅಂತಿಮ ಹಂತದ ಚಿತ್ರಣವಾಗಿದೆ. 

ಐಹೊಳೆಯ ಬಾಹುಬಲಿ 
ಚಾಲುಕ್ಯರು ಬಾದಾಮಿಯಂತೆ ಐಹೊಳೆಯಲ್ಲಿಯೂ ಗುಹಾಂತರ ಬಸದಿಯನ್ನು ನಿರ್ಮಿಸಿದರು. ಇಲ್ಲಿರುವ ಮೇಗುತಿ ಜಿನಾಲಯವೇ ಆ ಗುಹಾಂತರ ಜಿನಮಂದಿರ. ಇದನ್ನು  ಕ್ರಿ.ಶ 675-700 ರಲ್ಲಿ ರಚಿಸಲಾಯಿತು.ಈ ಮೇಗುತಿ ಬಸದಿಯಲ್ಲಿ ಪ್ರವೇಶ ಬಾಗಿಲ ಬಲಭಾಗಕ್ಕೆ ವಿರಾಜಮಾನವಾದ ಬಾಹುಬಲಿಯ ಉಬ್ಬುಶಿಲ್ಪವೊಂದಿದೆ. ಶಿಲೆಯಲ್ಲಿ ರಚಿತವಾದ ಕರ್ನಾಟಕದ ಎರಡನೆಯ ಬಾಹುಬಲಿಯಿದು. ಬಾದಾಮಿ ಬಾಹುಬಲಿ ಶಿಲ್ಪದ ಕಲಾ ನೈಪುಣ್ಯತೆ ಕಂಡುಬರದು. ಬಹುಶಃ ಶಿಲೆಯ ಗುಣಮಟ್ಟದ ಕೊರತೆ ಶಿಲ್ಪಿಯ ಕೈ ಹಿಡಿದಿದೆ. ಸಂಪ್ರದಾಯದಂತೆ ಕಾಯೋತ್ಸರ್ಗದ ಬಾಹುಬಲಿ ಪ್ರತಿಮೆ, ಪಾದದ ಬಳಿ ಹುತ್ತಗಳು, ಅವುಗಳಿಂದೆದ್ದು ಬಂದ ಹೆಡೆ ಸಹಿತ ನಾಗಮಣಿಯುಕ್ತ ಸರ್ಪಗಳು, ಕೈ ಕಾಲನ್ನು ಆವರಿಸಿದ ಬಳ್ಳಿಗಳು, ನೀಳಕೇಶ, ಕಾಡಿನ ಚಿತ್ರಣಗಳಿವೆ. ಮೂರ್ತಿಯ ಪಕ್ಕ ನಿಂತ ಖೇಚರಿಯರು ಇಲ್ಲಿರುವುದು ವಿಶೇಷ.

ಹಳ್ಳೂರು ಬಾಹುಬಲಿಗಳು
ಬಾಗಲಕೋಟೆ ಜಿಲ್ಲೆ ಮತ್ತು ತಾಲ್ಲೂಕಿನ ಹಳ್ಳೂರು ಎಂಬ ಗ್ರಾಮದಲ್ಲಿ ಬಾದಾಮಿ ಚಾಲುಕ್ಯರ ಶೈಲಿಯ ಬಸದಿಯೊಂದಿದೆ. ಇದನ್ನು ಸ್ಥಳೀಯರು “ಮೇಲ್ಗುಡಿ’ ಎಂದು ಕರೆಯುತ್ತಾರೆ. ಈ ಬಸದಿಯ ಬಲ ಮತ್ತು ಎಡ ಹೊರಭಿತ್ತಿಗಳಲ್ಲಿ ಎರಡೆರಡರಂತೆ ಮನುಷ್ಯ ಗಾತ್ರದ ನಾಲ್ಕು ಬಾಹುಬಲಿಯ ಶಿಲ್ಪಗಳನ್ನು ಕಾಣಬಹುದು. ಈ ಎಲ್ಲಾ ಶಿಲ್ಪಗಳು ಅರ್ಧ ಪ್ರಮಾಣದಲ್ಲಿ ದುಂಡು ಶಿಲ್ಪಗಳಾಗಿ ಗೋಚರಿಸುತ್ತವೆ. ಸಣ್ಣ ಪ್ರಮಾಣದ ವ್ಯತ್ಯಾಸಗಳೊಂದಿಗೆ ನಾಲ್ಕೂ ಬಾಹುಬಲಿಗಳ ದೇಹ ರಚನೆ ಒಂದೇ ತೆರನಾಗಿದೆ. ಎರಡು ಶಿಲ್ಪಗಳಲ್ಲಿ ನಾಗಮಣಿಯುಕ್ತ ಹೆಡೆ ಬಿಚ್ಚಿದ ಹುತ್ತದಿಂದ ಹೊರಬರುತ್ತಿರುವ 4 ಸರ್ಪಗಳನ್ನು ಚಿತ್ರಿಸಿದ್ದಾರೆ. ಇನ್ನೆರಡು ಬಾಹುಬಲಿ ಶಿಲ್ಪಗಳ ಪಾದದ ಬಳಿ ಅಕ್ಕ-ಪಕ್ಕ ಒಂದೊಂದರಂತೆ ಎರಡೆರಡು ಸರ್ಪಗಳನ್ನು ಕೆತ್ತಲಾಗಿದೆ. ಎಲ್ಲಾ ಶಿಲ್ಪಗಳ ಪಾದಗಳ ಮಧ್ಯದಿಂದ ಏಕದಂಟಿನ ಬಳ್ಳಿ ಹೊರಟು ತೊಡೆ ಮತ್ತು ಮೊಣಕಾಲು ಮಧ್ಯಭಾಗದಲ್ಲಿ ಟಿಸಿಲೊಡೆದು ತೊಡೆ ಮತ್ತು ಕೈಗಳನ್ನಾವರಿಸಿದೆ. 

ಶ್ರವಣಬೆಳಗೊಳದ ಲೋಹದ ಬಾಹುಬಲಿ 
ಮುಂಬೈನ ಮೆಟ್ರೋಪಾಲಿಟಿನ್‌ ವಸ್ತುಸಂಗ್ರಹಾಲಯದಲ್ಲಿ 8ನೆಯ ಶತಮಾನದ ಕಾಲಾವಧಿಯ ಕಾಯೋತ್ಸರ್ಗದ ಲೋಹದ ಬಾಹುಬಲಿ ಮೂರ್ತಿಯೊಂದಿದೆ. ಇದು ಶ್ರವಣಬೆಳಗೊಳದಿಂದ ತಂದಿದ್ದು ಎಂದು ನಾಡೋಜ ಹಂಪ ನಾಗರಾಜಯ್ಯನವರು ಹೇಳುತ್ತಾರೆ. ಇದೊಂದು ಸ್ವತಂತ್ರ ವಿಗ್ರಹವಾಗಿದ್ದು, ದುಂಡು ಶಿಲ್ಪದ ಮಾದರಿಯಾಗಿದೆ. ಈ ಮೂರ್ತಿಯ ಅಸ್ತಿತ್ವದಿಂದ 8ನೆಯ ಶತಮಾನದ ಹೊತ್ತಿಗಾಗಲೇ ಕರ್ನಾಟಕದಲ್ಲಿ ಅದರಲ್ಲೂ ಶ್ರವಣಬೆಳಗೊಳದಲ್ಲಿ ಲೋಹದ ಮೂರ್ತಿಗಳನ್ನು ತಯಾರಿಸುವ ಉದ್ಯಮ ಬೆಳೆದಿತ್ತು ಎಂಬುದನ್ನು ಮನಗಾಣಬಹುದು. ಪ್ರಸ್ತುತ ಬಾಹುಬಲಿಯ ಲೋಹದ ಶಿಲ್ಪದ ಕಲಾ ನೈಪುಣ್ಯತೆಯ ಆಧಾರದಿಂದ ಶ್ರವಣಬೆಳಗೊಳ ಒಂದು ಉನ್ನತ ದರ್ಜೆಯ ಲೋಹದ ಮೂರ್ತಿಗಳನ್ನೇ ತಯಾರಿಸುವ ಕೇಂದ್ರವಾಗಿತ್ತು ಎಂದು ಹೇಳಬಹುದು.
ಬಾಹುಬಲಿ ಲೋಹದ ಬಿಂಬವು ಚಿಕ್ಕದಾದರೂ ಪ್ರಮಾಣ ಬದ್ಧವಾಗಿದೆ. ಪಾದದ ಹಿಮ್ಮಡಿಯಿಂದ ಹೊರಟ ವಲ್ಲರಿಗಳು ಮೊಣಕಾಲನ್ನು ಬಳಸಿ ತೊಡೆಯ ಮುಂಭಾಗ  ಹಿಂಭಾಗವನ್ನು ಆವರಿಸಿದೆ. ಕೈಗಳಿಗೆ ನಿರಾಧಾರ ಬಳ್ಳಿಗಳನ್ನು ಚಿತ್ರಸಲಾಗಿದೆ. ಏರುಬಾಚಿದ ಕೂದಲುಗಳು ಭುಜದ ಮೇಲೂ ಇಳಿಗೊಂಡಿವೆ. ನೀಳಕರ್ಣ, ನಾಸಿಕ, ನಯನ, ಕದಪು, ಬಾಹುಗಳು, ಎದೆಯ ಭಾಗ, ಸೊಂಟ, ತೊಡೆ, ಕೈ ಕಾಲುಗಳ ಪ್ರಮಾಣಗಳನ್ನು ಶಿಲ್ಪಿ ಪ್ರಮಾಣಬದ್ಧವಾಗಿ ಕೆತ್ತಿದ್ದಾನೆ. 

ಗುಡ್ಡದ ಬಾಹುಬಲಿ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಂಬುಜದ ಸಾಂತರರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಹೊಂಬುಜವನ್ನು ರಾಜಧಾನಿ­ಯನ್ನಾಗಿ ಮಾಡಿಕೊಂಡ ಇವರು ಕಲೆ, ಶಿಲ್ಪ, ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹವಿತ್ತರು. ಹೊಂಬುಜ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಈಗಲೂ ಉಳಿದುಬಂದಿರುವ ಅವರ ಸ್ಮಾರಕಗಳು ಕಲಾ ರಾಯಭಾರಿಗಳಂತಿವೆ. ಸಾಂತರರು ಜೈನರಾಗಿದ್ದರಿಂದ ಸಹಜವಾಗಿಯೇ ಅವರು ತಮ್ಮ ರಾಜಧಾನಿಯಲ್ಲಿ ಜೈನ ಸ್ಮಾರಕ ­ಗಳನ್ನು ನಿರ್ಮಿಸಿದರು. ಇವರ ಕೀರ್ತಿ ಹರಡಲು ಪಂಚಕೂಟ ಬಸದಿಯೊಂದೆ ಸಾಕು. ಜೈನ ವಾಸ್ತುಶಿಲ್ಪದ ವಿಶಿಷ್ಟ ಮಾದರಿ ಪಂಚಕೂಟ ಬಸದಿ ಸಾಂತರರ ಕೀರ್ತಿಮುಖವನ್ನು ಊಧ್ವìಕ್ಕೆ ಕೊಂಡೊಯ್ಯವುದು ಗುಡ್ಡದ ಬಾಹುಬಲಿ ಬಸದಿ.    
ಸದ್ಯ ಕಲ್ಲು ಬಸದಿ ನಾಶವಾಗಿದ್ದು, ಇದೇ ಆವರಣದಲ್ಲಿ ಹೊಸದಾಗಿ ಬಸದಿಯೊಂದನ್ನು ಕಟ್ಟಿಸಿ ಪಾರ್ಶ್ವನಾಥ ತೀರ್ಥಂಕರರ ಜೊತೆ ಪ್ರಾಚೀನ ಬಾಹುಬಲಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಬಾಹುಬಲಿ ಮೂರ್ತಿಯು ಕ್ರಿ.ಶ 898 ರ ರಚನೆ. ನಾಲ್ಕುವರೆ ಅಡಿ ಇರುವ ಗುಡ್ಡದ ಬಾಹುಬಲಿಯು ಕರಿ ಕಲ್ಲಿನಲ್ಲಿ ಕೆತ್ತನೆಯಾಗಿದೆ. ಇಲ್ಲಿಯೂ ಸಂಪ್ರದಾಯದಂತೆ ಕಾಲು ಮತ್ತು ಕೈಗಳಿಗೆ ಹಬ್ಬಿದ ಮಾಧವೀಲತೆ ಮತ್ತು ಭುಜದ ಮೇಲೆ ಇಳಿಬಿದ್ದಿರುವ ಕೇಶಗಳನ್ನು ಚಿತ್ರಿಸಲಾಗಿದೆ. ತಲೆಯ ಮೇಲೆ ಮುಕ್ಕೊಡೆ ಇರುವುದು ವಿಶೇಷ. ತೀರ್ಥಂಕರರನ್ನು ಹೊರತು ಪಡಿಸಿದರೆ ಕೇವಲಿಗಳಲ್ಲಿ ಬಾಹುಬಲಿಗೆ ಮಾತ್ರ ಈ ಗೌರವ ಸಲ್ಲುತ್ತದೆ. 

ಕಂಬದಹಳ್ಳಿ ಬಾಹುಬಲಿ
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕಂಬದಹಳ್ಳಿಯು ಶ್ರವಣಬೆಳಗೊಳದಿಂದ 18 ಕಿ.ಮೀ ದೂರದಲ್ಲಿದೆ. ಇದೊಂದು ಪ್ರಾಚೀನ ಜೈನ ಕೇಂದ್ರ. ಇಲ್ಲಿನ ಪಂಚಕೂಟದ ಬಸದಿಯು ಜೈನ ವಾಸ್ತು ಶಿಲ್ಪದ ಹಿರಿಮೆ. 2005ರಲ್ಲಿ ಕಂಬದಹಳ್ಳಿಯಲ್ಲಿ ಉತVನನ ನಡೆಸಿದಾಗ ಐದೂವರೆ ಅಡಿಯ ಭಗ್ನ ಬಾಹುಬಲಿಯ ಮೂರ್ತಿಯೊಂದು ದೊರೆತಿದೆ. ಕೈಕಾಲುಗಳು ಮುಕ್ಕಾಗಿವೆ. ರುಂಡಮುಂಡಗಳು ಬೇರೆಬೇರೆಯಾಗಿ ದೊರೆತರೂ ಇವೆರಡನ್ನು ಮತ್ತೆ ಜೋಡಿಸಿ ಈಗ ಪಂಚಕೂಟ ಬಸದಿಯ ದ್ವಾರದ ಎಡ ಗೋಡೆಯ ಭಿತ್ತಿಗೆ ಆನಿಸಿ ಇಡಲಾಗಿದೆ. 

ನಸುನೀಲಿ ಶಿಲೆಯಲ್ಲಿ ಕೆತ್ತನೆಯಾದ ಕಂಬದಹಳ್ಳಿಯ ಬಾಹುಬಲಿಯ ಮೂರ್ತಿಯು ಕರ್ನಾಟಕದಲ್ಲಿನ ಮೊದಲ ಸ್ವತಂತ್ರ ದುಂಡು ಶಿಲ್ಪ (ಶಿಲೆ). ನವಿರಾದ ವಲ್ಲರಿಗಳು ಹಿಂಗಾಲಿನಿಂದ ತೊಡೆ ಬಳಸಿ ಸೊಂಟದತ್ತ ಮುಖಮಾಡಿವೆ. ಮತ್ತು ಅಲ್ಲಿಗೆಯೇ ಕೊನೆಗೊಂಡಿವೆ. ತೋಲುಗಳಲ್ಲಿಯೂ ಈ ಕೆತ್ತನೆಯಿದೆ. ನೀಳಕರ್ಣ, ಸುರುಳಿಯಾಕಾರದ ತಲೆಗೂದಲು, ಭುಜದ ಮೇಲೆ ಇಳಿಬಿದ್ದ ಕೇಶಗಳು ಪ್ರಮಾಣಬದ್ಧವಾಗಿವೆ.                                                                                                                             
ಅರೆತಿಪ್ಪೂರು ಬಾಹುಬಲಿ
ತಲಕಾಡಿನ ಗಂಗರ ಗಂಗವಾಡಿ 96000 ಆಡಳಿತ ಘಟಕದ ಒಂದು ಗ್ರಾಮ ಈಗಿನ ಅರೆತಿಪ್ಪೂರು (ತಿಪೂರು). ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿಗೆ ಸೇರಿದ ಈ ಊರು ಪ್ರಾಚೀನ ಜೈನ ಕೇಂದ್ರ. ಅಂತೆಯೇ ಜೈನ ತೀರ್ಥಸ್ಥಳವೂ ಹೌದು. “”ಕ್ರಿ. ಶ. 9ರಿಂದ 17ನೆಯ ಶತಮಾನದವರೆಗೆ ಹೆಸರುವಾಸಿಯಾದ ಈ ತೀರ್ಥ ಸ್ಥಳವು ಕೆಳಲೆ ನಾಡಿಗೆ ಸೇರಿತ್ತು; ಎರಡನೆಯ ಶ್ರವಣಬೆಳಗೊಳ ಎನಿಸಿತ್ತು.” ಇಲ್ಲಿಯೂ ಶ್ರವಣಬೆಳಗೊಳ ಮಾದರಿಯಲ್ಲಿ ಎರಡು ಬೆಟ್ಟಗಳಿದ್ದು ಜೈನ ಸ್ಮಾರಕಗಳನ್ನು ಹೊಂದಿವೆ. ಕನಕಗಿರಿ ಎಂದು ಕರೆಯಲ್ಪಡುವ ಚಿಕ್ಕ ಬೆಟ್ಟದಲ್ಲಿ ಬಸದಿಗಳ ಸಮುತ್ಛಯ ಇದ್ದುದಾಗಿ ಅಲ್ಲಿ ಬಿದ್ದಿರುವ ಅವಶೇಷಗಳು, ತಳಪಾಯಗಳಿಂದ ಗೋಚರವಾಗುತ್ತದೆ. ಎಎಸ್‌ಐ ನವರು ಇಲ್ಲಿ ಮತ್ತಷ್ಟು ಜೈನ ಸ್ಮಾರಕಗಳನ್ನು 2016ರಲ್ಲಿ ಪತ್ತೆ ಹಚ್ಚಿದ್ದಾರೆ.  ಈ ಬೆಟ್ಟದಲ್ಲಿ ಒಂದು ನೀರೊªàಣಿ ಇದ್ದು ಅಲ್ಲಿನ ಬಂಡೆಯಲ್ಲಿ ತೀರ್ಥಂಕರರ ಶಿಲ್ಪಗಳನ್ನು ಕೆತ್ತಲಾಗಿದೆ. ಇನ್ನು ದೊಡ್ಡಬೆಟ್ಟ ಎಂದು ಕರೆಯಲ್ಪಡುವ “ಶ್ರವಣಪ್ಪನಗುಡ್ಡ’ದಲ್ಲಿ 12 ಅಡಿ ಎತ್ತರವಾದ ಬಾಹುಬಲಿಯ ಶಿಲ್ಪವಿದೆ. 

ತೇರಿನ ಬಸದಿಯ ಗೊಮ್ಮಟ
ಕರ್ನಾಟಕದ ಬಾಹುಬಲಿಯ ಪ್ರಾಚೀನ ಬಸದಿಗಳಲ್ಲಿ ಈಗಲೂ ತನ್ನ ಮೂಲ ಸ್ವರೂಪವನ್ನು ಹಾಗೇ ಉಳಿಸಿಕೊಂಡು ಬಂದಿರುವ ಏಕೈಕ ಬಸದಿ ತೇರಿನ ಬಸದಿ. ಈ ಬಸದಿಯು ಶ್ರವಣಬೆಳಗೊಳದ ಚಂದ್ರಗಿರಿ (ಚಿಕ್ಕಬೆಟ್ಟ)ಯ ಮೇಲಿದೆ. ಇದು ಬಾಹುಬಲಿಯ ಬಸದಿಯಾದರೂ ರೂಢಿಯಲ್ಲಿ “ತೇರಿನ ಬಸದಿ’ ಎಂದು ಕರೆಯಲ್ಪಡುತ್ತದೆ. ಬಸದಿಯ ಮುನ್ನೆಲೆಯಲ್ಲಿ ತೇರಿನ ಆಕಾರದ ಕಲ್ಲಿನ ಬೃಂದಾವನ (ಮಂದಾರ) ರಚನೆಯಿಂದ ಈ ಬಸದಿಗೆ ತೇರಿನ ಬಸದಿ ಎಂದು ಹೆಸರಾಯ್ತು. ಈ ಆಕರ್ಷಕ ತೇರಿನ ಸುತ್ತ ಸಾಕಷ್ಟು ಜನಬಿಂಬಗಳಿವೆ.  

ದಡಗದ ಬಾಹುಬಲಿ ಕೂಟ
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ದಡಗ ಗ್ರಾಮವು ಪ್ರಾಚೀನ ಜೈನ ಕೇಂದ್ರ. ಹೊಯ್ಸಳರ ಕಾಲದಲ್ಲಿ ಇದೊಂದು ತೀರ್ಥಕ್ಷೇತ್ರವೂ ಆಗಿತ್ತು. ಊರಲ್ಲಿ ಮನೆಯೊಂದರ ಹತ್ತಿರ ನಿಲ್ಲಿಸಿರುವ ಜೈನಶಾಸನದಲ್ಲಿ ದಡಗದೊಳಗೆ 12ನೆಯ ಶತಮಾನದ “ಬಾಹುಬಲಿಯ ಕೂಟ’ವೊಂದಿದ್ದಾಗಿ ತಿಳಿದು ಬರುತ್ತದೆ. 

ಅಖಂಡ ಬಾಗಿಲ ಬಾಹುಬಲಿ
ಶ್ರವಣಬೆಳಗೊಳದ “ಗೊಮ್ಮಟ ಬೆಟ್ಟ’ದ (ಇಂದ್ರಗಿರಿ) ಅಖಂಡ ಬಾಗಿಲ ಬಲಗಡೆ ಆಳೆತ್ತರದ ಒಂದು ಬಾಹುಬಲಿ ಮೂರ್ತಿ ಇದೆ. ಇದೊಂದು ಸರಳ ಶಿಲ್ಪವಾದರೂ ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಶಿಲ್ಪವನ್ನು ಭರತೇಶ್ವರ (ಭರತೀಮಯ್ಯ) ಮಾಡಿಸಿದ. ಕಾಲ 12ನೆಯ ಶತಮಾನ. ಈ ಹಿಂದೆ ಭರತಿಮಯ್ಯ ಮತ್ತು ಅವನ ಸಹೋದರ ಸೇರಿ ದಡಗದಲ್ಲಿ (ನಾಗಮಂಗಲ ತಾ. / ಮಂಡ್ಯ ಜಿ.) ಬಾಹುಬಲಿಯ ಕೂಟವೊಂದನ್ನು ಕ್ರಿ.ಶ. 1132ರಲ್ಲಿ ಮಾಡಿಸಿದ್ದರು.

ಬಸದಿ ಹೊಸಕೋಟೆಯ ಗೊಮ್ಮಟ
ಹೊಯ್ಸಳ ಕಾಲಾವಧಿಯಲ್ಲಿ ರಚನೆಯಾದ ಬಸದಿ ಹೊಸಕೋಟೆಯ ಗೊಮ್ಮಟಮೂರ್ತಿಯು 12ನೆಯ ಶತಮಾನದ ರಚನೆ. ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟನನ್ನು ನಿರ್ಮಿಸಿದ ನಂತರ ಬೃಹತ್‌ ಬಾಹುಬಲಿಯ ಮೂರ್ತಿಗಳನ್ನು ನಿಲ್ಲಿಸುವ ಸಂಪ್ರದಾಯ ಬೆಳೆದು ಬಂತು. ಈ ಸಂಪ್ರದಾಯದ ಮೊದಲ ಘಟ್ಟದ ಬೃಹತ್‌ ಬಾಹುಬಲಿಯ ನಿರ್ಮಾಣದ ಪ್ರಯೋಗ ಬಸದಿ ಹೊಸಕೋಟೆ ಯಲ್ಲಿ ನಡೆಯಿತು. 18 ಅಡಿಯ ಇಲ್ಲಿನ ಗೊಮ್ಮಟ ಖಡ್ಗಾಸನ ಭಂಗಿಯದು ಮೂರ್ತಿ ಬೃಹತ್ತಾಗಿದೆ. ಕರಿಕಲ್ಲಿನಲ್ಲಿ ರಚನೆಯಾದ ಗೊಮ್ಮಟ ಮೂರ್ತಿಯು ಮೊದಲ ಬಯಲಲ್ಲಿ ನಿಂತಿತ್ತು. ಈಗ ತೆರೆದ ಆಲಯವನ್ನು ನಿರ್ಮಿಸಲಾಗಿದೆ. 

ಕಾರ್ಕಳ ಗೊಮ್ಮಟ
ಶ್ರವಣಬೆಳಗೊಳದ ಗೊಮ್ಮಟನನ್ನು ಅನುಸರಿಸಿ ನಿರ್ಮಾಣ ವಾದ ಬೃಹತ್‌ ಬಾಹುಬಲಿ ಮೂರ್ತಿಯೊಂದು ಕಾರ್ಕಳದಲ್ಲಿದೆ. 42 ಅಡಿ ಎತ್ತರದ ಈ ಬಾಹುಬಲಿ ವಿಗ್ರಹವು ಕಲಾ ನೈಪುಣ್ಯಯಲ್ಲಿ ಶ್ರವಣಬೆಳಗೊಳದ ಗೊಮ್ಮಟನನ್ನು ಮೀರಿಸದು. ಈ ವಿಗ್ರಹವನ್ನು ಕೆತ್ತಿದ ಶಿಲ್ಪಿ ಶಂಭು. ಇವನು ಶ್ರವಣಬೆಳಗೊಳದ ಗೊಮ್ಮಟನಷ್ಟೇ ಸುಂದರವಾದ ಮೂರ್ತಿಯನ್ನು ತಾನೂ ಕೆತ್ತಬೇಕೆಂಬ ಮಹದಾಸೆ ಹೊಂದಿದ್ದರೂ ಮೂರ್ತಿ ನಿರ್ಮಾಣಕ್ಕೆ ಬಳಸಿದ ಶಿಲೆಯು ಅವನಿಗೆ ಸ್ಪಂದಿಸಿದಂತೆ ಕಂಡಿಲ್ಲ. ಆದರೂ ಪ್ರಯತ್ನ ಪಟ್ಟಿದ್ದಾನೆ. 

ಗೊಮ್ಮಟಗಿರಿಯ ಗೊಮ್ಮಟ
ಮೈಸೂರಿನಿಂದ 23 ಕಿ.ಮೀ.ದೂರದಲ್ಲಿ ಗೊಮ್ಮಟಗಿರಿ ಎಂಬ ಜೈನ ತೀರ್ಥಕ್ಷೇತ್ರವೊಂದಿದೆ. ಹುಣಸೂರು ತಾಲ್ಲೂಕಿನ ಇಲವಾಲ ಗ್ರಾಮದ ಬಳಿ ಇರುವ ಈ ಗೊಮ್ಮಟಗಿರಿಯಲ್ಲಿ, ಹೆಸರೆ ಹೇಳುವಂತೆ ಗೊಮ್ಮಟನ ಮೂರ್ತಿಯೊಂದಿದೆ. “”ಚೆಂಗಾಳ್ವ ಅರಸು ಮನೆತನ­ ದವರು ಈ ಮೂರ್ತಿಯನ್ನು ಪ್ರತಿಷ್ಠೆ ಮಾಡಿಸಿದರೆಂಬ ಹಾಗೂ ಇಲ್ಲಿ ಗೊಮ್ಮಟಪುರ ಎಂಬ ಪಟ್ಟಣವೇ ಇದ್ದಿರಬೇಕೆಂಬ ಹೇಳಿಕೆ ಇದೆ”. ಅಖಂಡ ಕಲ್ಲು ಬಂಡೆಯ ಮೇಲೆ 16 ಅಡಿ ಎತ್ತರದ ಗೊಮ್ಮಟನನ್ನು ಪೀಠದ ಮೇಲೆ ಸ್ಥಾಪನೆ ಮಾಡಲಾಗಿದೆ. ತೆರೆದ ಗರ್ಭಗೃಹ, ಪ್ರದಕ್ಷಿಣಾ ಪಥವನ್ನು ಇಲ್ಲಿ ಕಾಣಬಹುದು. ಇದೊಂದು ಬಯಲು ಬಸದಿ. ಭಾಗಶಃ ದುಂಡು ಶಿಲ್ಪದ ಕೆತ್ತನೆಯ ಗೊಮ್ಮಟ ಮೂರ್ತಿ ಇದು. ಮೊಣಕಾಲಿನಿಂದ ಪಾದದವರೆಗೆ ಹಿನ್ನೆಲೆಯನ್ನು ಬಳಸಲಾಗಿದೆ. 

ಧರ್ಮಸ್ಥಳದ ಬಾಹುಬಲಿ

ಧರ್ಮಸ್ಥಳದಲ್ಲಿರುವ ಬಾಹುಬಲಿ ಬಹು ಜನಪ್ರಿಯ. ರಂಜಾಳ ಗೋಪಾಲ ಶೆಣೈ ಎನ್ನುವ ಶಿಲ್ಪಿ 1967 ಪ್ರಾರಂಭಿಸಿ 1973ರಲ್ಲಿ ಮುಗಿಸಿದರು. ಇದನ್ನು ಒಂದೇ ಬಂಡೆಯಲ್ಲಿ ಕೆತ್ತಿದ ಮೂರ್ತಿ. ಸುಮಾರು 39 ಅಡಿಗಳ ಎತ್ತರವಿದೆ. ಮೂರ್ತಿಯ ತಲೆಗೂದಲು ಭುಜದವರೆಗೂ ಇಳೆಬಿದ್ದಿದ್ದು, ಕಾಲ ಬುಡದಲ್ಲಿ ಹಾವುಗಳು ಹತ್ತುತ್ತಿರುವಂತೆ ಕೆತ್ತಲಾಗಿದೆ. ಇಡೀ ಮೂರ್ತಿಯ ತೂಕ 174 ಟನ್ನುಗಳಷ್ಟಿದೆ.  

ವೇಣೂರು ಭುಜಬಲಿ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ ವೇಣೂರು. ಕರ್ನಾಟಕದ ಬೃಹತ್‌ ಬಾಹುಬಲಿ ಮೂರ್ತಿಗಳು ಗುಡ್ಡದಲ್ಲಿ, ಎತ್ತರ ಪ್ರದೇಶದಲ್ಲಿ ಸ್ಥಾಪಿತವಾಗಿದ್ದು ವಿಶೇಷ. ಆದರೆ ವೇಣೂರೂ ಭುಜಬಲಿ ಪ್ರತಿಮೆ ಮಾತ್ರ ನೆಲಮಟ್ಟದಲ್ಲಿ ಪ್ರತಿಷ್ಠೆಯಾಗಿದೆ. ಈ ಮೂರ್ತಿಯು ವೇಣೂರು ಅರಸ “”ವೀರ ತಿಮ್ಮಣ್ಣ ಅಜಿಲನಿಂದ ಕ್ರಿ.ಶ. 1604 ಇಸವಿ ಮಾರ್ಚ್‌ ತಿಂಗಳ 1ನೇ ತಾರೀಕಿನಂದು ಪ್ರತಿಷ್ಠಾಪಿಸಲ್ಪಟ್ಟಿತ್ತು ಎಂದು ಇದೇ ಮೂರ್ತಿಯ ಎಡ ಬಲಗಳಲ್ಲಿರುವ ಶಾಸನಗಳಿಂದ ತಿಳಿದುಬರುತ್ತದೆ”. 

ರವಿಕುಮಾರ ಕೆ.ನವಲಗುಂದ

ಟಾಪ್ ನ್ಯೂಸ್

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.