ಬೆಂಗಳೂರು- ಎವರೆಸ್ಟ್ ಒಂದು ರೇಖಾಚಿತ್ರ
Team Udayavani, Nov 23, 2019, 5:11 AM IST
ಬೆಂಗಳೂರು ಇರುವುದು ಇಲ್ಲಿ. ಮೌಂಟ್ ಎವರೆಸ್ಟ್ ಇರುವುದು ಆ ಹಿಮಾಲಯದ ತುದಿಯಲ್ಲಿ. ಇಲ್ಲಿಗೂ- ಅಲ್ಲಿಗೂ ಇರುವ ಚಾರಿತ್ರಿಕ ನಂಟನ್ನು ಇತಿಹಾಸ ಸಂಶೋಧಕ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ವಿಸ್ಮಯ ಸಂಗತಿಗಳೊಂದಿಗೆ ಬಿಚ್ಚಿಡುತ್ತಾರೆ…
ಎಲ್ಲಿಯ ಬೆಂಗಳೂರು, ಎಲ್ಲಿಯ ಮೌಂಟ್ ಎವರೆಸ್ಟ್? ಎತ್ತಣಿಂದೆತ್ತ ಸಂಬಂಧ ಎಂದು ವ್ಯಾಖ್ಯಾನಿಸುವ ಮೊದಲು, ಒಂದು ಚಾರಿತ್ರಿಕ ನಂಟಿನ ಗಂಟನ್ನು ಬಿಚ್ಚಿಡಲೇಬೇಕು. ಇವೆರಡೂ ತಾಣಗಳಿಗೂ ನೇರ ಸಂಬಂಧವಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇಲ್ಲಿಂದ ಎಳೆದ ರೇಖೆಯೊಂದು, ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ತುದಿ ಮುಟ್ಟಿದೆ! ಈ ಅಪರೂಪದ ಚಾರಿತ್ರಿಕ ಸಂಗತಿಯ ಮೇಲೆ ಈಗ ಬೆಳಕು ಚೆಲ್ಲಿರುವುದು, ಇತಿಹಾಸ ಸಂಶೋಧಕ ಧರ್ಮೇಂದ್ರ ಕುಮಾರ್ ಅರೇನಹಳ್ಳಿ. 1799ರಲ್ಲಿ ನಡೆದ ಆಂಗ್ಲೋ- ಮೈಸೂರು ಯುದ್ಧದಲ್ಲಿ ಟಿಪ್ಪುು ಮರಣಿಸಿದ ಕತೆ ಗೊತ್ತೇ ಇದೆ.
ಆ ಯುದ್ಧದಲ್ಲಿ ಬ್ರಿಿಟಿಷರ ಜಯಕ್ಕೆ ಕಾರಣನಾದವನು, ಲೆ. ಕರ್ನಲ್ ವಿಲಿಯಂ ಲ್ಯಾಂಬ್ಡನ್ ಎಂಬಾತ. ಮಂಡ್ಯದ ಸುತ್ತಮುತ್ತ ಟಿಪ್ಪುವಿನ ಇರುವಿಕೆಗಾಗಿ ಹುಡುಕಾಡುತ್ತಿದ್ದರು. ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರಗಳ ಸಹಾಯದಿಂದ ಟಿಪ್ಪು ಎಲ್ಲಿ ಅಡಗಿದ್ದಾನೆಂದು (ಶ್ರೀರಂಗಪಟ್ಟಣದಿಂದ ಬೆಂಗಳೂರು ಯಾವ ದಿಕ್ಕಿಗೆ ಇದೆಯೆಂದು) ನಿಖರವಾಗಿ ಹೇಳಿದ ಅದ್ಭುತ ಆಸ್ಟ್ರೋನಾಟ್ ಈತ. ಯುದ್ಧದ ನಂತರ ವಿಲಿಯಂ ಲ್ಯಾಂಬ್ಡನ್, ಇಡೀ ಭಾರತದ ಟ್ರಿಗ್ನೋಮೆಟ್ರಿಕಲ್ ಸರ್ವೇ (ವಿಸ್ತೀರ್ಣವನ್ನಷ್ಟೇ ಅಲ್ಲ ಎತ್ತರ, ಆಳ, ಅಗಲವನ್ನೂ ನಿಖರವಾಗಿ ತಿಳಿಸುವ ಸಮೀಕ್ಷೆ) ಮಾಡಲು ಬಯಸಿದ. ಆ ಕೆಲಸ ಶುರುವಾಗಿದ್ದು ಬೆಂಗಳೂರಿನಿಂದ, ಮುಗಿದಿದ್ದು ಮೌಂಟ್ ಎವರೆಸ್ಟ್‌ನ ತುದಿಯಲ್ಲಿ!
ಸರ್ವೇ ಶುರುವಾಯಿತು…: ಇಡೀ ಭಾರತವನ್ನು ಸರ್ವೇ ಮಾಡುವ ಅತಿ ದೊಡ್ಡ ಕೆಲಸ ಶುರುವಾಗಿದ್ದು, ಬೆಂಗಳೂರಿನ ಹೆಣ್ಣೂರು ಬಂಡೆಯಿಂದ. 1800ರಲ್ಲಿ, ಅಲ್ಲಿಂದ ಈಗಿನ ಮೇಖ್ರಿ ಸರ್ಕಲ್ ಇರುವ ಸ್ಥಳದವರೆಗೆ ಒಂದು ಬೇಸ್‌ಲೈನ್ ಎಳೆಯಲಾಯ್ತು. (ಸರ್ವೇ ಶುರು ಮಾಡುವ ಮೊದಲು ಬೇಸ್‌ಲೈನ್ ಹಾಕಿ, ಅಳತೆ ಶುರು ಮಾಡುತ್ತಾರೆ) ಆ ಎರಡು ಸ್ಥಳಗಳ ದೂರವನ್ನು 7.9 ಮೈಲು ಅಂತ ಸರ್ವೇಯಲ್ಲಿ ದಾಖಲಿಸಲಾಗಿತ್ತು. ಉಪಗ್ರಹ ಆಧಾರಿತ ಸರ್ವೇಯಲ್ಲೂ ಅದೇ ಅಳತೆ ದಾಖಲಾಗಿದ್ದು, ಲ್ಯಾಂಬ್ಡನ್‌ನ ಅಳತೆಯ ನಿಖರತೆಗೆ ಹಿಡಿದ ಕನ್ನಡಿ. ಮುಂದೆ, ಪೂರ್ವ ಕರಾವಳಿ ಮತ್ತು ಪಶ್ಚಿಮ ಕರಾವಳಿಯನ್ನು ಅಳತೆ ಮಾಡಬೇಕೆಂದು, ಮದ್ರಾಸ್‌ನಿಂದ (ಪೋರ್ಟ್ ಸೇಂಟ್ ಜಾರ್ಜ್) ಉಳ್ಳಾಲದವರೆಗೂ ಅಳೆಯಲಾಗುತ್ತದೆ.
800 ಜನರ ತಂಡ, 137 ವರ್ಷ!: ಈ ಸರ್ವೇ ಪೂರ್ತಿಗೊಳ್ಳಲು 137 ವರ್ಷ ಹಿಡಿಯಿತು. ಸುಮಾರು 800 ಸೈನಿಕರು, 70 ಆನೆ, 100ಕ್ಕೂ ಹೆಚ್ಚು ಕುದುರೆಗಳು ಇದಕ್ಕಾಗಿ ಪಾದ ಸವೆಸಿದವು. ಈ ಕೆಲಸ ನಡೆಯುತ್ತಿರುವಾಗಲೇ, ಕರ್ನಲ್ ವಿಲಿಯಂ ಲ್ಯಾಂಬ್ಡನ್ 1824ರಲ್ಲಿ ಮಹಾರಾಷ್ಟ್ರದಲ್ಲಿ ತೀರಿಕೊಂಡ. ಮುಂದೆ ಅವನ ಶಿಷ್ಯ, ಜಾರ್ಜ್ ಎವರೆಸ್ಟ್ ಈ ಕೆಲಸದ ಮುಂಚೂಣಿ ವಹಿಸುತ್ತಾನೆ.
ಆತ ಮತ್ತೆ ಬೆಂಗಳೂರಿಗೆ ಬಂದು (ಆ ಮೂರು ದಶಕಗಳಲ್ಲಿ ಸರ್ವೇಗೆ ಬಳಸುತ್ತಿದ್ದ “ಥಿಯೋಡಲೈಟ್’ ಎಂಬ ಉಪಕರಣ ಆಧುನೀಕರಣಗೊಂಡಿರುತ್ತದೆ) ಹೊಸ ಉಪಕರಣಗಳನ್ನು ಬಳಸಿ, ಹಳೆಯ ಜಾಗಗಳನ್ನು ಮತ್ತೆ ಅಳೆಯುತ್ತಾಾನೆ. ಈತನ ಕಾಲದಲ್ಲಿಯೂ ಸರ್ವೇ ಮುಗಿಯುವುದಿಲ್ಲ. ಅವನ ನಂತರ ಸರ್ವೇ ಕೆಲಸ ಕೈಗೊಂಡ ಅಧಿಕಾರಿಗಳು 1937ರಲ್ಲಿ ಎವರೆಸ್ಟ್ ಶಿಖರವನ್ನು ತಲುಪಿ, ಈ ಅಳತೆಯಾತ್ರೆಗೆ ಮುಕ್ತಾಯ ಹಾಡುತ್ತಾರೆ.
ಎವರೆಸ್ಟ್‌ನ ನೆನಪಿಗಾಗಿ ಆ ಶಿಖರಕ್ಕೆ ಆತನ ಹೆಸರನ್ನೇ ಇಡಲಾಗುತ್ತದೆ. 137 ವರ್ಷಗಳ ಕಾಲ ನಡೆದ ಈ ಗ್ರೇಟ್ ಟ್ರಿಗ್ನೋಮೆಟ್ರಿಕ್ ಸರ್ವೇ, ಮಾನವ ಅಳೆದ ಅತಿ ಮುಖ್ಯ ಭೂ ಸಮೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಬೆಂಗಳೂರಿನ ಸಂಪಿಗೆಹಳ್ಳಿ, ನಾಗವಾರ, ವಿಶ್ವನಾಥ ನಾಗೇನಹಳ್ಳಿ ಅಷ್ಟೇ ಅಲ್ಲದೆ, ಮಂಗಳೂರು, ಶಿವಮೊಗ್ಗ, ಕೋಲ್ಕತ್ತಾಾ, ಮದ್ರಾಾಸ್, ಮುಂತಾದೆಡೆ ಈ ಸರ್ವೇಯ ಗುರುತುಗಳನ್ನು ಇಂದಿಗೂ ಕಾಣಬಹುದು.
ಫೇಸ್‌ಬುಕ್‌ನಲ್ಲಿ ಕಂಡ ಚರಿತ್ರೆ: ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರು 6 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾಾರೆ. ಸಿವಿಲ್ ಎಂಜಿನಿಯರ್ ಆಗಿ ಗಲ್‌ಫ್‌ನಲ್ಲಿ 18 ವರ್ಷ ಕೆಲಸ ಮಾಡಿರುವ ಇವರು, 2013ರಲ್ಲಿ ಬೆಂಗಳೂರಿಗೆ ಬಂದು, ಕನ್ಸಲ್ಟೆನ್ಸಿ ಶುರುಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ, ಮೈಸೂರು ಸಂಸ್ಥಾನದ ಇತಿಹಾಸದ ಸಂಶೋಧನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹುದುಗಿ ಹೋದ ಐತಿಹಾಸಿಕ ಸಂಗತಿಗಳನ್ನು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ತರುತ್ತಿದ್ದಾರೆ.
* ಪ್ರಿಯಾಂಕ ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.