ಕಾರ್ ದೀವಾನಾ ಹೋತಾ ಹೈ…
272 ವಿಂಟೇಜ್ ಕಾರುಗಳ ಒಡೆಯ
Team Udayavani, Jun 1, 2019, 3:10 AM IST
ಡಾ. ರವಿಪ್ರಕಾಶ್, ಖ್ಯಾತ ಹೃದಯ ತಜ್ಞ. ಇವರ ಹೃದಯಕ್ಕೆ ಸ್ಟೆಥೋಸ್ಕೋಪ್ ಇಟ್ಟರೆ ಕೇಳಿಸೋದು ಮಾತ್ರ, ವಿಂಟೇಜ್ ಕಾರುಗಳ “ವ್ರೂಂ ವ್ರೂಂ’ ಶಾಸ್ತ್ರೀಯ ಸಂಗೀತ. ಒಮ್ಮೆ ಇವರ ಕಾರ್ ಶೆಡ್‌ಗಳ ಷಟರ್ ತೆರೆದರೆ, ನೀವು ಸರ್ರನೆ “ರೋಮನ್ ಹಾಲಿಡೇಸ್’ನಂಥ ಹಳೇ ಸಿನಿಮಾಗಳ ಯುಗಕ್ಕೇ ಜಾರಿರುತ್ತೀರಿ…
“ಹತ್ತೇ ಹತ್ತು ನಿಮಿಷ ಹೋಗೋದು ತಡ ಆಗಿದ್ದಿದ್ರೂ, ಕುವೆಂಪು ಕಾರು ಆ ಸಾಬಣ್ಣನ ಗುಜರಿ ಕ್ರಾಸ್ ಸೇರಿತ್ತು. ನಿರ್ದಯವಾಗಿ ಪುಡಿಗಟ್ಟಿ, ಅದನ್ನು ತೂಕಕ್ಕೆ ಇಟ್ಟಿರುತ್ತಿದ್ದ!’ ಮಳೆ ಶ್ರುತಿ ಹಾಡುತ್ತಿತ್ತು. ಹೀಗೆ ಹೇಳಿದ್ದು “ರಸಋಷಿ’ಯ ಕಾರಿನ ಕಿವಿಗೆ ಬಿತ್ತೇನೋ, ಆ “ಸ್ಟುಡಿಬೇಕರ್ ಕಮಾಂಡರ್’ನ ಹೆಡ್‌ಲೈಟಿನ ಕಂಗಳಲ್ಲಿ ನೀರು ತಟತಟನೆ ಜಾರುತ್ತಿತ್ತು. ಹೇಮಾಮಾಲಿನಿಯ ಕೆನ್ನೆಯಂತೆ ನುಣುಪಾಗಿದ್ದ ಬ್ಯಾನೆಟ್ಟಿನ ಮೇಲೆ ಬೆರಳು ಸವರುತ್ತಾ, ಡಾ. ರವಿಪ್ರಕಾಶ್, ನೆನಪುಗಳನ್ನು ರಿವರ್ಸ್ ಗೇರ್‌ನಲ್ಲಿ ಓಡಿಸುತ್ತಿದ್ದರು…
1997ರ ಹೊತ್ತು. “ಶಿವಾಜಿನಗರದ ಗುಜರಿಯತ್ತ ಯಾವ್ದೋ ಕಾರ್ ಹೋಗ್ತಾ ಇದೆ, ಹೋಗಿ ನೋಡು’ ಅಂತ ಗೆಳೆಯನೊಬ್ಬ ಫೋನು ಮಾಡಿದನಂತೆ. ಸೇಂಟ್ ಜಾನ್ಸ್‌ನಲ್ಲಿ ಹೃದಯ ತಜ್ಞರಾಗಿದ್ದ ಡಾ. ರವಿಪ್ರಕಾಶ್, ಕೆಲವೇ ನಿಮಿಷಗಳಲ್ಲಿ ಶಿವಾಜಿನಗರದ ಗಲ್ಲಿ ಮುಟ್ಟಿದ್ದರು. ನೋಡಿದರೆ, ಸ್ಟುಡಿಬೇಕರ್ ಕಾರು! “ಎಷ್ಟಕ್ಕೆ ಕೊಡ್ತೀಯಪ್ಪಾ?’, ಗುಜರಿ ಸಾಬಣ್ಣನಿಗೆ ಕೇಳಿದರು.
“30 ಸಾವ್ರ ಕೊಟ್ಟಿದ್ದೀನಿ, ಇದರ ಬಿಡಿಭಾಗಗಳನ್ನು ಮಾರಿದ್ರೂ ನಂಗೊಳ್ಳೆ ದುಡ್ಡಾಗುತ್ತೆ’, ಅಂತೆಳಿ ಇವರನ್ನು ಮೇಲಿಂದ ಕೆಳಕ್ಕೆ ನೋಡಿದ. ಬಕ್ರಾ ಪಾರ್ಟಿನೇ ಇರಬೇಕೆಂದು ಅಂದಾಜಿಸಿ, “ಇನ್ನರ್ಧ ಗಂಟೇಲಿ 50 ಸಾವ್ರ ಕೊಡೋದಾದ್ರೆ, ಈ ಕಾರ್ ಕೊಡ್ತೀನಿ’ ಅಂದುಬಿಟ್ಟ, ಪಾಕಾ. ಅಷ್ಟ್ ಅರ್ಜೆಂಟಾಗಿ 50 ಸಾವಿರ! ಎಲ್ಲಿಂದ? ಅಲ್ಲೇ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿದ್ದ ಗೆಳೆಯನಿಗೆ ಹೇಳಿ, ಫುಲ್ ಕ್ಯಾಶ್ ಹಿಡಿದು ಬಂದಾಗ, ಗುಜರಿ ಸಾಬಣ್ಣ ಮನಸ್ಸು ಬದಲಿಸಿದ್ದ.
“ಇಲ್ಲಾ, ಈ ಕಾರಿನ ರೇಟು 60 ಸಾವ್ರ. ಅದಕ್ಕಿಂತ ಒಂದ್ ಪೈಸೇನೂ ಕಮ್ಮಿ ಇಳಿಯಲ್ಲ’ ಅಂತಂದ. ಉದಾರಿ ಡಾಕು ಯಾವತ್ತೂ ಚೌಕಾಸಿ ಯಾತ್ರೆ ಮಾಡಿದವರೇ ಅಲ್ಲ. ಕಾರಿನ ದಾಖಲೆ ಕೈಯಲ್ಲಿ ಹಿಡಿದು, ಅದರಲ್ಲಿ “ಕೆ.ವಿ. ಪುಟ್ಟಪ್ಪ’ ಅಂತ ಇದ್ದಿದ್ದನ್ನು ಕಂಡು, ಹತ್ತೇ ನಿಮಿಷದಲ್ಲಿ 10 ಸಾವಿರ, ಆತನ ಕೈಗಿಟ್ಟರು. ಪುಟ್ಟ ಫ್ಲ್ಯಾಶ್‌ಬ್ಯಾಕ್. ಈ ಕಾರನ್ನು ಹೊಸತಾಗಿ ಕೊಂಡ ದಿನ, ಕುವೆಂಪು ಅವರ ಖುಷಿಗೆ ಬ್ರೇಕ್ ಇದ್ದಿರಲಿಲ್ಲ.
ಪದೇಪದೆ ಶೆಡ್‌ಗೆ ಹೋಗಿ, ಕಾರನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದರಂತೆ. ಅಡುಗೆಮನೆಯಿಂದ, ಇದನ್ನು ಗಮನಿಸುತ್ತಿದ್ದ ಹೇಮಾವತಿಯವರು, “ಅದೇನು ಅಷ್ಟು ಸಂಭ್ರಮ! ಕಾರನ್ನು ಮತ್ತೆ ಮತ್ತೆ ನೋಡಿ ಬರುವುದು? ಮುಟ್ಟಿ ಮುಟ್ಟಿ ಬರುತ್ತಿರುವಿರಲ್ಲಾ…?’ ಅಂತ ಕೇಳಿದ್ದರಂತೆ. ಅದಕ್ಕೆ ಕುವೆಂಪು, “ಯಾವುದು ಹೊಸತು ಬಂದರೂ, ಮತ್ತೆ ಮತ್ತೆ ನೋಡುವೆ;
ಮುಟ್ಟಿ ಮುಟ್ಟಿ ನೋಡುವೆ. ನೀನು ಹೊಸತಾಗಿ ಬಂದಾಗಲೂ ಹಾಗೆ ಮಾಡಿರಲಿಲ್ಲವೇನು?’ ಎಂದು ತಮಾಷೆ ಮಾಡಿದ್ದರಂತೆ. ಕುವೆಂಪು ತಮ್ಮ ಮಡದಿಯಂತೆ ಪ್ರೀತಿಸುತ್ತಿದ್ದ ಕಾರು; ತೇಜಸ್ವಿ ಮೊದಲ ಬಾರಿಗೆ ಡ್ರೈವಿಂಗ್ ಕಲಿತ ಕಾರು, ಇಂದು ಡಾ. ರವಿಪ್ರಕಾಶ್ ಅವರ ಗ್ಯಾರೇಜಿನಲ್ಲಿ ತಣ್ಣಗೆ ಕತೆ ಹೇಳುತಿದೆ.
272 ವಿಂಟೇಜ್ ಕಾರುಗಳ ಒಡೆಯ: ಡಾ. ರವಿಪ್ರಕಾಶ್, ಖ್ಯಾತ ಹೃದಯ ತಜ್ಞ. ಇವರ ಹೃದಯಕ್ಕೆ ಸ್ಟೆಥೋಸ್ಕೋಪ್ ಇಟ್ಟರೆ ಕೇಳಿಸೋದು ಮಾತ್ರ, ವಿಂಟೇಜ್ ಕಾರುಗಳ “ವ್ರೂಂ ವ್ರೂಂ’ ಶಾಸ್ತ್ರೀಯ ಸಂಗೀತ. ಒಮ್ಮೆ ಇವರ ಕಾರ್ ಶೆಡ್‌ಗಳ ಷಟರ್ ತೆರೆದರೆ, ನೀವು ಸರ್ರನೆ “ರೋಮನ್ ಹಾಲಿಡೇಸ್’ನಂಥ ಸಿನಿಮಾದ ಯುಗಕ್ಕೇ ಜಾರಿರುತ್ತೀರಿ.
ರಾಜ- ಮಹಾರಾಜರ ಕಾರುಗಳಿಂದ ಹಿಡಿದು, 1-2ನೇ ಮಹಾಯುದ್ಧದಲ್ಲಿ ಸೈನಿಕರನ್ನು ಹೊತ್ತ ಜೀಪು, ಲಾರ್ಡ್ ಮೌಂಟ್ ಬ್ಯಾಟನ್‌ನ ಕಾರು, ಮೋತಿಲಾಲ್ ನೆಹರು, ಟಾಟಾ- ಬಿರ್ಲಾ, ಎಂಜಿಆರ್ ಕಾರು, ಜಗತ್ತಿನ ಮೊದಲ ಕಾರುಗಳಾದಿಯಾಗಿ, ದಕ್ಷಿಣ ಭಾಷಾ ಸಿನಿಮಾಗಳಲ್ಲಿ ವಿಜೃಂಭಿಸುವ, ಅದರಲ್ಲೂ ಮೊನ್ನೆಯ “ಕೆಜಿಎಫ್’ ಸಿನಿಮಾದಲ್ಲಿ ಯಶ್ ಅನ್ನು ಅತ್ತಿಂದಿತ್ತ ಹೊತ್ತು ಮೆರೆಸಿತಲ್ಲಾ, ಆ ಕಾರುಗಳ ಮಹಾನ್ ದರ್ಶನ ಇಲ್ಲಾಗುತ್ತೆ.
ಬೆನ್, ಎಂಜಿ ಮೋಟಾರ್ಸ್, ಫೋರ್ಡ್, ಶೆವರ್‌ಲೆಟ್, ಸನ್‌ಬೀಮ್… ಒಂದಾ ಎರಡಾ? ಇದಲ್ಲದೇ, ಕ್ಯಾಟ್‌ಲಾಗ್ಸ್, 18 ಸಾವಿರ ಆಟೋ ಮ್ಯಾಗಜಿನ್, ಸಹಸ್ರಾರು ಪುಟ್ಟ ಕಾರು, ಸ್ಟೀರಿಂಗ್‌ನ ಇತಿಹಾಸ, ಚಕ್ರಗಳ ಹಾದಿ… ಇಲ್ಲೆಲ್ಲವೂ ಆಟೋಮಯ.
ಮೊದಲ ಕಾರೇ, ಬ್ಯಾಟನ್‌ದು…: ರವಿಪ್ರಕಾಶ್, ಆಗಿನ್ನೂ ಮೆಡಿಕಲ್ ಸ್ಟೂಡೆಂಟು. ಗೆಳೆಯನೊಟ್ಟಿಗೆ ತಮಿಳುನಾಡಿನ ಶೋಲಾವರಂನತ್ತ ಹೊರಟಾಗ, ಆರ್ಮಿ ಜನರಲ್ ಒಬ್ಬರ ವಿಂಟೇಜ್ ಕಾರು ಕಣ್ಣಿಗೆ ಬಿತ್ತಂತೆ. ಅದು ಮಾರಾಟಕ್ಕಿರೋದು ಗೊತ್ತಾದಾಗ, ಅವರು ಹೇಳಿದ 40 ಸಾವಿರ ರುಪಾಯಿ, ತನ್ನ ಬಳಿ ಇಲ್ಲವೆಂದು, ಬರಿಗೈಯಲ್ಲಿ ಮನೆಗೆ ಮರಳಿದ್ದರು.
ಕೆಲವು ದಿನಗಳ ನಂತರ ಒಂದು ಪತ್ರ ಬಂತು. “ಬಂದು, ನಿಮ್ಮ ಕಾರನ್ನು ತಗೊಂಡು ಹೋಗಿ’ ಎಂಬ ವಿನಂತಿ ಅದರಲ್ಲಿತ್ತು. ಆ ಪತ್ರದ ಹಿಂಭಾಗ ನೋಡಿದರೆ, ಆರ್ಮಿ ಜನರಲ್‌ರ ಪತ್ನಿಯ ಹೆಸರು! ಜನರಲ್ ತೀರಿಹೋಗಿದ್ದರು. ಕಾರನ್ನು ಆಸೆಪಟ್ಟಿದ್ದ ರವಿಪ್ರಕಾಶರ ಹೆಸರಿನಲ್ಲಿ, ಅವರು ಉಯಿಲು ಬರೆದಿದ್ದರಂತೆ.
ಲಾರ್ಡ್ ಮೌಂಟ್ ಬ್ಯಾಟನ್, ಭಾರತದಿಂದ ಹೊರಡುವಾಗ, ತಮ್ಮ “ಸನ್‌ಬೀಮ್ ಟಾಲ್‌ಬೋಟ್’ ಕಾರನ್ನು ಜನರಲ್‌ಗೆ ಕೊಟ್ಟಿದ್ದರು. ಜಗತ್ತಿನಲ್ಲಿ ಸನ್‌ಬೀಮ್‌ಗಳಿದ್ದರೂ, ಅವೆಲ್ಲ 1 ಲೀಟರ್‌ನವು. ಇದು 2 ಲೀಟರ್‌ನ ಎಂಜಿನ್ ಕೆಪಾಸಿಟಿ, 2 ಸಾವಿರ ಸಿ.ಸಿ.ಯದ್ದು. ಅದು ಇಂದು ಹುರುಪಿನಲ್ಲಿ ಓಡಾಡುತ್ತಿದೆ.
ಅಣ್ಣಾವ್ರ ಹೃದಯ ಕೈಗ್ ಬಂದಿತ್ತು!: ಡಾ. ರವಿಪ್ರಕಾಶ್, ಕಾರು ಕಲೆಕ್ಟರ್ ಅಷ್ಟೇ ಅಲ್ಲ; ಅದ್ಭುತ ಕಾರ್ ರೇಸರ್ ಕೂಡ. 1985ರಲ್ಲಿ ಅಣ್ಣಾವ್ರ ಜತೆ “ಅದೇ ಕಣ್ಣು’ ಚಿತ್ರದಲ್ಲಿ ನಟಿಸುವಾಗ, ಕಾರು ಓಡಿಸುವ ಒಂದು ದೃಶ್ಯವಿತ್ತು. ಅದು ಡಾಲ್ಫಿನ್ ಕಾರು. ಅಣ್ಣಾವ್ರನ್ನು ಪಕ್ಕದಲ್ಲಿ ಕೂರಿಸಿಕೊಂಡು, ಒಂದು ರೌಂಡ್ ಜುಮ್ಮನೆ ಹೋಗಿ ಸ್ವಿಂಗ್ ಮಾಡಿದರಂತೆ. ಅಣ್ಣಾವ್ರು, “ಅಬ್ಬಬ್ಟಾ, ಹೆಂಗ್ ಓಡಿಸ್ತೀರ್ರೀ ಡಾಕ್ಟ್ರೇ? ನನ್ನ ಹೃದಯ, ನನ್ನ ಕೈಯಲ್ಲಿ- ಬಾಯಲ್ಲಿ ಬಂದಿಟ್ಟಿದೆ’ ಅಂತಂದಿದ್ದರಂತೆ.
ಕೊನೆಗೆ ಬ್ರಿಡ್ಜ್ ಮೇಲೆ ಹಾರಿಸುವ ಸ್ಟಂಟ್‌ಗಳನ್ನು ಮಾಡಿದ್ದೂ ಇವರೇ. ಅಣ್ಣಾವ್ರ ಕೊನೆಯ ದಿನಗಳಲ್ಲೂ ಚಿಕಿತ್ಸೆ ನೀಡಿದ್ದ ಡಾ. ರವಿ ಪ್ರಕಾಶ್, ಆ ನೆನ ಪನ್ನು ಇವತ್ತಿಗೂ ಸ್ಮರಿಸುತ್ತಾರೆ. ಕರ್ನಾಟಕ 1000, ಚಾರ್‌ಮಿನಾರ್ ಚಾಲೆಂಜು, ಸಹ್ಯಾದ್ರಿ ರೇಂಜ್ ರ್ಯಾಲಿ ಗೆದ್ದಿರುವ ಡಾಕುó, ದೇಶದ ಘಟಾನುಘಟಿ ಕಾರ್ ರೇಸರ್‌ಗಳನ್ನು ಕಲ್ಕತ್ತಾದ ಅಂಬಾಸಡರ್ ರೇಸ್‌ನಲ್ಲಿ ಹಿಂದಿಕ್ಕಿದ ಸಾಹಸಿ ಕೂಡ ಹೌದು.
ಕೈ ತಪ್ಪಿದ ಜಾಕೀಶ್ರಾಫ್ ಕಾರು: “ಕೆಲವು ಮಹಾರಾಜರ ಕಾರುಗಳು ನನ್ನ ಕೈತಪ್ಪಿ ಹೋಗಿವೆ. ಅದನ್ನು ನೆನೆದರೆ, ಈಗಲೂ ನಿದ್ದೆ ಬರೋಲ್ಲ’ ಎನ್ನುವ ಇವರಿಗೆ, ಸದಾ ಕಾಡುವ ಕಾರು, ಜಾಕೀ ಶ್ರಾಫ್ ಪಾಲಾಗಿದ್ದ “ಮರ್ಸಿಡಿಸ್ 540 ಕೆ’. ಅದು ಬೇಕೇ ಬೇಕೆಂದು, ಬೆಂಗಳೂರಿನ ಸ್ನೇಹಿತರೊಬ್ಬರಿಗೆ ಅಡ್ವಾನ್ಸ್ ಕೊಟ್ಟು, ಇವರು ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರಂತೆ.
ಗೆಳೆಯನೂ ಆಗಿದ್ದ ಜಾಕೀಶ್ರಾಫ್, ಇಲ್ಲಿಗೆ ಪುರ್ರನೆ ಬಂದು, ಆ ಕಾರನ್ನು ತಗೊಂಡು ಹೋದರು. ಆ ಕಾರೂ ಈಗ ಜಾಕೀಶ್ರಾಫ್ ಕೈಯನ್ನೂ ದಾಟಿದೆ. ಹಾಗೆ 8-10 ಕಾರು ಗಳನ್ನು ಮಿಸ್ ಮಾಡಿ ಕೊಂಡ ಚಿಂತೆ ಇವರಿಗಿದ್ದರೂ, “ಒಂದಲ್ಲ ಒಂದಿನ ಆ ಕಾರುಗಳೆಲ್ಲ ನನ್ನನ್ನು ಹುಡುಕ್ಕೊಂಡು ಬರುತ್ತವೆ’ ಎನ್ನುವಾಗ ವೈದ್ಯರ ಆತ್ಮವಿಶ್ವಾಸ ಟಾಪ್‌ಗೆàರ್‌ನಲ್ಲಿತ್ತು.
ದೇಶದ ಅತಿದೊಡ್ಡ ಕಾರ್ ಮ್ಯೂಸಿಯಂ: ಪ್ರಸ್ತುತ ಇಷ್ಟೆಲ್ಲ ವಿಂಟೇಜ್ ಕಾರುಗಳನ್ನು ಡಾಕು ಸಲುಹುತ್ತಿರುವುದು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಕಲಾಫಾರ್ಮ್ನಲ್ಲಿ. ಮುಂದಿನ 3 ವರ್ಷ ದೊಳಗೆ ದೇಶದ ಅತಿದೊಡ್ಡ ವಿಂಟೇಜ್ ಕಾರ್ ಮ್ಯೂಸಿಯಂ ತೆರೆಯಲು, ಈಗಾಗಲೇ ಅವರು ಸಮೀಪದ ಮೈಲಸಂದ್ರದಲ್ಲಿ 16 ಎಕರೆ ಜಾಗವನ್ನು ಮೀಸಲಿಟ್ಟಿದ್ದಾರೆ.
ಇಲ್ಲಿ ಆಟೋ ಹಿಸ್ಟರಿಯ ಅನಾವರಣವೇ ಆಗಲಿದೆ. ಒಟ್ಟು 20 ಲಕ್ಷ ಚದರಡಿ. ಅದರಲ್ಲಿ ಮ್ಯೂಸಿಯಮ್ಮೇ ಎಂಟೂವರೆ ಲಕ್ಷ ಚದರಡಿ. ಇದಕ್ಕಂತಲೇ “ರುಷಿ ಟ್ರಸ್ಟ್’ ಅನ್ನು ತೆರೆಯ ಲಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಇದರಲ್ಲಿ ಒಬ್ಬರು ಟ್ರಸ್ಟಿ. ವೈದ್ಯರ ಕಾರುಗಳಲ್ಲದೇ, ಗೆಳೆಯರ ಕಾರುಗಳೂ ಸೇರಿ, 800ಕ್ಕೂ ಅಧಿಕ ಕಾರುಗಳ ದರ್ಶನ ಇಲ್ಲಿ ಸಿಗಲಿದೆ.
ಗೋಣಿ ಚೀಲದಲ್ಲಿ ಕಾರು ಬಂತು!: ವಿಂಟೇಜ್ ಕಾರುಗಳಲ್ಲೂ ಅನೇಕವು ಆಸ್ಪತ್ರೆಗೆ ಬರುವ ರೋಗಿಗಳಂತೆ. ಕೆಲವು ಕಾರುಗಳನ್ನು ಖರೀದಿಸುವಾಗ ಅವಕ್ಕೆ ಹೃದಯ, ಕಿಡ್ನಿ, ಮೆದುಳುಗಳೇ ಇರುವುದಿಲ್ಲ. ಆದರೂ, ಅದನ್ನು ಖರೀದಿಸಿ, ವರ್ಷಾನುಗಟ್ಟಲೆ, ಆ ಕಾರಿನ ಬಗ್ಗೆ ಸ್ಟಡಿ ಮಾಡಿ, ಮೆಕಾನಿಕ್‌ಗಳ ಜತೆ, ಹಗಲು ರಾತ್ರಿ ಶ್ರಮಿಸಿ, ಪರಿಪೂರ್ಣ ಮಾಡದಿದ್ದರೆ, ವೈದ್ಯರಿಗೆ ನಿದ್ದೆ ಬಾರದು. ಅದರಲ್ಲೂ 1915ನೇ ಇಸವಿಯ ನಾಗಾಲ್ಯಾಂಡ್‌ನ, ಫೋರ್ಡ್ “ಟಿ’ ಮಾಡೆಲ್ಲಿನ ಕಾರ್‌ಗೆ ಮರುಜೀವ ನೀಡಿದ ಪ್ರಸಂಗವೇ ಒಂದು ರೋಮಾಂಚನ.
12 ಗೋಣಿ ಚೀಲಗಳಲ್ಲಿ, ಅದರ ಬಿಡಿಭಾಗಗಳನ್ನು ತುಂಬಿಕೊಂಡು ತಂದು, ಒಂದು ವರ್ಷ ಸತತ ಕೆಲಸ ಮಾಡಿ, ಎದ್ದು ಓಡಾಡುವ ಹಾಗೆ ಮಾಡಿಬಿಟ್ಟರು.ಇಲ್ಲಿರುವ ಶತಮಾನಗಳ ಕಾರುಗಳ ಎದೆಬಡಿತ ಬಲ್ಲ ಕಾರ್ ಡಾಕುó, ಈಗ ದೇಶದ ಅತಿದೊಡ್ಡ “ವಿಂಟೇಜ್ ಕಾರ್ ಮ್ಯೂಸಿಯಂ’ಗೆ ಸಕಲ ಸಿದ್ಧರಾಗಿದ್ದಾರೆ. ನೂರಾರು ಕಾರುಗಳು ಸಾಲಾಗಿ ನಿಂತು ತಮ್ಮ ಕತೆ ಹೇಳಲಿವೆ…
ಸಿನಿಮಾದಲ್ಲಿ ನಟಿಸಿದ ಕಾರುಗಳು: ಡಾಕ್ಟ್ರ ಕಾರುಗಳು ಪ್ರಮುಖವಾಗಿ ರಜನೀಕಾಂತ್‌ರ “ಲಿಂಗಾ’, ಕಮಲ್ ಹಾಸನ್‌ರ “ಹೇ ರಾಮ್’, ಪುನೀತ್‌ರ “ಪರಮಾತ್ಮ’, ಸುದೀಪ್ ಅವರ “ಬಚ್ಚನ್’, ಯಶ್ ಅವರ ಕೆಜಿಎಫ್ ಅಲ್ಲದೇ, ಅಣ್ಣಾವ್ರ, ಅಂಬರೀಶ್ ಮತ್ತು ದರ್ಶನ್‌ರ ಹಲವು ಚಿತ್ರಗಳಲ್ಲಿ ನಟಿಸಿವೆ.
ಯಾರ್ಯಾರ ಕಾರು ಆಕರ್ಷಣೆ?: ಕುವೆಂಪು, ಲಾರ್ಡ್ ಮೌಂಟ್ ಬ್ಯಾಟನ್, ದೇಶದ ಪ್ರಖ್ಯಾತ ಮಹಾರಾಜರದ್ದು, ಜೆಆರ್‌ಡಿ ಟಾಟಾ, ಎಂಜಿಆರ್, ಕೆ.ಆರ್. ನಾರಾಯಣನ್, ಆರ್. ವೆಂಕಟರಮಣನ್…
ಮಗಳೇ ಉಸ್ತುವಾರಿ: ಡಾ. ರವಿಪ್ರಕಾಶ್ ಅವರ ಈ ಕಾರಿನ ಸಾಮ್ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು, ಕಿರಿ ಮಗಳು ರುಪಾಲಿ. ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ಕಾರುಗಳನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. 12 ಮಂದಿ ಮೆಕಾನಿಕ್‌ಗಳು ಕಾರಿನ ಚಿಕಿತ್ಸೆಗೆ ಸಹಕರಿಸುತ್ತಾರೆ.
* ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.