ಶತಮಾನ ಕಂಡ ಚರ್ಚುಗಳು

ಕರುನಾಡಿನ ಇಗರ್ಜಿಗಳ ವಾಸ್ತುಶಿಲ್ಪ ನೋಟ

Team Udayavani, Dec 21, 2019, 6:12 AM IST

shatamana

ಯಾವುದೇ ಕಟ್ಟಡಕ್ಕೆ ಆಯುಸ್ಸು ಹೆಚ್ಚಿದಂತೆ, ಅದರ ಸೌಂದರ್ಯವೂ ಹೆಚ್ಚುತ್ತದೆ. ಈ ಮಾತಿಗೆ ಚರ್ಚುಗಳು ಕೂಡ ಹೊರತಲ್ಲ. ಕರುನಾಡಿನಲ್ಲಿ ಶತಮಾನಗಳನ್ನು ದಾಟಿದ ಹಲವು ಚರ್ಚುಗಳಿವೆ. ಬ್ರಿಟಿಷ್‌, ಪೋರ್ಚ್‌ಗೀಸ್‌ ಹಾಗೂ ಫ್ರೆಂಚ್‌ ವಾಸ್ತುಶಿಲ್ಪಿಗಳ ಕೈಚಳಕದಲ್ಲಿ ರೂಪುಗೊಂಡ ಪ್ರಮುಖ ಚರ್ಚುಗಳ ಒಂದು ನೋಟ ಇಲ್ಲಿದೆ…

ಮುಗಿಲಿಗೆ ಮುತ್ತಿಕ್ಕುವಂತೆ ಚೂಪಾದ ಗೋಪುರ, ಅದರ ಮೇಲೆ ಶಿಲುಬೆ ಕಂಡಿತೆಂದರೆ, ಅದೇ ಚರ್ಚ್‌ ಎಂದು ಗೊತ್ತಾಗುವುದು ಸಹಜ. ಚರ್ಚ್‌ ಕಟ್ಟಡಗಳಿಗೆ ವಿವಿಧ ನಾಮಾಂಕಿತಗಳಿವೆ. ಪಾದ್ರಿಗಳು ಇರುವ ದೇವಾಲಯವನ್ನು “ಚರ್ಚ್‌’ ಎಂದೂ, ಬಿಷಪರು ಪೂಜಿಸುವ ದೇವಾಲಯವನ್ನು “ಕೆಥೆಡ್ರಲ್‌’ ಎಂದೂ, ಕಾನ್ವೆಂಟು ಆಸ್ಪತ್ರೆಗಳಲ್ಲಿನ ಆರಾಧನಾ ಮಂದಿರವನ್ನು “ಚಾಪೆಲ್‌’ ಎಂದೂ, ಎಲ್ಲೆಡೆಯಿಂದ ಜನ ಜಾತ್ರೆ ಸೇರುವ ದೇವಾಲಯಗಳನ್ನು “ಬೆಸಿಲಿಕಾ’ ಎಂದೂ ಕರೆಯುತ್ತಾರೆ.

ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ಮೇಲೆ ಇಲ್ಲಿ ಪೋರ್ಚುಗೀಸ್‌, ಇಟಾಲಿಯನ್‌, ಜರ್ಮನ್‌ ಮತ್ತು ಫ್ರೆಂಚ್‌ ವಾಸ್ತುಶಿಲ್ಪಿಗಳು ತಮ್ಮದೇ ಶೈಲಿಯಲ್ಲಿ ಚರ್ಚುಗಳನ್ನು ಕಟ್ಟಿದರು. “ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ರಾಯಚೂರು ಜಿಲ್ಲೆಯ ಮುದಗಲ್‌ ಎಂಬಲ್ಲಿ ಕಟ್ಟಿದ ಚರ್ಚು ಕನ್ನಡನಾಡಿನ ಪ್ರಾಚೀನ ಚರ್ಚು’ ಎಂದು ಮೆಡೋಸ್‌ ಟೇಲರ್‌ ದಾಖಲಿಸುತ್ತಾನೆ. ಈಗ ಅದು ನೆಲಸಮಗೊಂಡು, ಜೀರ್ಣೋದ್ಧಾರದ ಕಟ್ಟಡ ಎದ್ದಿದೆ. ನಂತರದ, ಅತಿ ಹಳೆಯ ಚರ್ಚು, ಕಲಬುರ್ಗಿಯ ಚಿತ್ತಾಪುರದ್ದು. ಅದೂ 5 ವರ್ಷಗಳ ಹಿಂದೆ ಜೀರ್ಣೋದ್ಧಾರದ ವೇಳೆ ಹೊಸ ಚರ್ಚು ಕಟ್ಟಲು ಸ್ಥಳಾಭಾವದ ಕಾರಣ ನೆಲಸಮಗೊಂಡಿದೆ.

17ನೇ ಶತಮಾನದಿಂದೀಚೆಗಷ್ಟೇ ಇನ್ನುಳಿದ ಚರ್ಚುಗಳು ಮೂರ್ತರೂಪ ತಳೆದವು. ಇವೆಲ್ಲದರ ನಿರ್ಮಾಣದ ಹಿಂದೆ, ಬ್ರಿಟಿಷ್‌, ಪೋರ್ಚುಗೀಸ್‌ ಹಾಗೂ ಫ್ರೆಂಚ್‌ ವಾಸ್ತುಶಿಲ್ಪಿಗಳ ಕೈಚಳಕವನ್ನು ಕಾಣಬಹುದು. ಚರ್ಚುಗಳನ್ನು ಕಟ್ಟಲು ಸುದೀರ್ಘ‌ವಾದ ಲೆಕ್ಕಾಚಾರ, ಸಂಕೀರ್ಣ ಜ್ಯಾಮಿತಿ, ಕರಾರುವಾಕ್ಕಾದ ಗಣಿತಸೂತ್ರಗಳು, ಉನ್ನತ ತಂತ್ರಜ್ಞಾನ, ಅಗಾಧ ಪರಿಶ್ರಮ ಹಾಗೂ ನಿಪುಣ ಕಾರ್ಮಿಕರು ಬೇಕಾಗುತ್ತಾರೆ.  ಕನ್ನಡನಾಡಿನಲ್ಲಿರುವ, ಶತಮಾನಗಳನ್ನು ಕಂಡ ಐರೋಪ್ಯ ಶೈಲಿಯ ಪ್ರಮುಖ ಚರ್ಚುಗಳ ರಚನೆ, ವಾಸ್ತುಶಿಲ್ಪದ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಸಂತ ಲಾರೆನ್ಸರ ಬೆಸಿಲಿಕಾ, ಕಾರ್ಕಳ: ಗೋಥಿಕ್‌ ಶೈಲಿ, 260 ವರ್ಷ
“ಕಾರ್ಲೆದ್‌ ದೆವರ್‌’ ಎಂದು ತುಳುವರು ಕರೆವ ಕಾರ್ಕಳದ ಸಂತ ಲಾರೆನ್ಸರ ದೇವಾಲಯವನ್ನು 1759ರಲ್ಲಿ ಹಡಗು ಕಟ್ಟುವ ರೀತಿಯಲ್ಲಿ ಭಾರೀ ಸಾಗುವಾನಿ ಮರಗಳನ್ನು ಬಳಸಿ ಕಟ್ಟಲಾಗಿದೆ. ಗೋಥಿಕ್‌ ಶೈಲಿಯ ಈ ಚರ್ಚು, ಮಂಗಳೂರು ಹೆಂಚು ಹೊದಿಸಿದ ಎತ್ತರದ ಮರದ ದಿಮ್ಮಿಗಳ ಚಾವಣಿ ಹೊಂದಿದೆ. ಬೃಹತ್‌ ಬಾಗಿಲು ಕಿಟಕಿಗಳು, ಎರಡೂ ಬದಿಯ ವಪ್ಪಾರು ಓಣಿಗಳು, ಐರೋಪ್ಯ ನೆಲಹಾಸುಗಳು, ಕರಾವಳಿಯಲ್ಲಿ ವೇಗವಾಗಿ ಬೀಸುವ ಗಾಳಿ ಮಳೆಯನ್ನು ತಡೆದುಕೊಳ್ಳಬಲ್ಲ ದಪ್ಪನೆಯ ಗೋಡೆಗಳನ್ನು ಹೊಂದಿದೆ.

ಸಂತ ಅನ್ನಮ್ಮ ದೇವಾಲಯ, ವಿರಾಜಪೇಟೆ: ಗೋಥಿಕ್‌ ಶೈಲಿ, 227 ವರ್ಷ
ಮಂಗಳೂರು ಪ್ರದೇಶದ ನಿಮ್ನವರ್ಗದ ಕ್ರೈಸ್ತರೈತರು ವಲಸೆ ಬಂದಾಗ, ಅವರಿಗಾಗಿ ಕೊಡಗಿನ ರಾಜ ವೀರರಾಜೇಂದ್ರರ ನೆರವಿನಿಂದ 1792ರಲ್ಲಿ ವಿರಾಜಪೇಟೆಯಲ್ಲಿ ಒಂದು ಚರ್ಚ್‌ ತಲೆಯೆತ್ತಿತು. ಎತ್ತರದ ದಿಬ್ಬದ ಮೇಲೆ ವಿರಾಜಮಾನವಾಗಿರುವ ಈ ಚರ್ಚು, ಅರ್ಧಚಕ್ರದ ಕಮಾನು - ಬಾಗಿಲುಗಳನ್ನೂ, ಚೂಪು ಕಮಾನುಳ್ಳ ಕಿಟಕಿಗಳನ್ನೂ ಹೊಂದಿದೆ. ಚರ್ಚಿಗೆ ವೀರರಾಜೇಂದ್ರ ದೊರೆಯು ಕೊಡುಗೆಯಾಗಿ ನೀಡಿದ ಹಿತ್ತಾಳೆಯ ಎಣ್ಣೆದೀಪ (ಕುತ್ತುಂಬೊಳ್ಚ) ಗಳನ್ನು ಇಂದಿಗೂ ನೋಡಬಹುದು. ದೇವಾಲಯದ ಮುಂಭಾಗದ ಬೃಹತ್‌ ಗೋಪುರದಲ್ಲಿ ಫ್ರಾನ್ಸ್‌ನಿಂದ ತರಿಸಲಾದ 2 ಗಂಟೆಗಳಿವೆ. ಪುತ್ರ ಯೇಸುವಿನ ಕಳೇಬರವನ್ನು ತನ್ನ ಮಡಿಲಲ್ಲಿರಿಸಿಕೊಂಡು ವ್ಯಾಕುಲ ಪಡುತ್ತಿರುವ ಮೇರಿ ಮಾತೆಯ ಚಿತ್ತಾರವಿದೆ.

ಸಂತ ಮಾರ್ಕ್‌ನ ಕೆಥೆಡ್ರಲ್‌, ಎಂ.ಜಿ. ರಸ್ತೆ, ಬೆಂಗಳೂರು: ಬ್ರಿಟಿಷ್‌ ಶೈಲಿ, 207 ವರ್ಷ
ಯೇಸುಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಮಾರ್ಕ್‌ನ ಹೆಸರಿನಲ್ಲಿ ಕಟ್ಟಲಾದ ಚರ್ಚ್‌ ಇದು. 1812ರಲ್ಲಿ ನಿರ್ಮಾಣವಾಯಿತು. ಈ ಚರ್ಚು ಇಂಗ್ಲಿಷ್‌ ವಾಸ್ತುವಿನಂತಿದ್ದು, ದೊಡ್ಡದಾದ ಗುಮ್ಮಟ ಇದರ ಆಕರ್ಷಣೆ. ಪ್ರಶಾಂತ ಒಳಾವರಣದ ಗೋಡೆಗಳ ಮೇಲಿನ ಬಿಲ್ಗಾರ ಪ್ರತಿಮೆಗಳು ಚರ್ಚಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಮಧುರ ದನಿಯ ಗಂಟೆಗಳಿಂದ ಸಜ್ಜುಗೊಂಡ ಈ ಗುಡಿಯು 17ನೇ ಶತಮಾನದ ಪೌಲನ ಕೆಥೆಡ್ರಲ್‌ ಅನ್ನು ಹೋಲುತ್ತದೆ. ಈ ಚರ್ಚಿನಲ್ಲಿ ನುಡಿಸಲಾಗುವ ಪೈಪ್‌ ಆರ್ಗನ್‌ನಿಂದ ಹೊರಡುವ ಪಂಚಮ ಸ್ವರವಲ್ಲರಿಯನ್ನು ಆಲಿಸುವುದೇ ಒಂದು ಸೊಗಸಾದ ಅನುಭವ.

ಸಂತ ಆಂಡ್ರೂಸ್‌ ಚರ್ಚು , ಕಬ್ಬನ್‌ ರಸ್ತೆ, ಬೆಂಗಳೂರು: ಪ್ರಸ್ಬಿಟೇರಿಯನ್‌ ಶೈಲಿ, 153 ವರ್ಷ
ಪ್ರಸ್ಬಿಟೇರಿಯನ್‌ ಹಿನ್ನೆಲೆಯ ಸ್ಕಾಟಿಷ್‌ ಯೋಧರು ಮತ್ತು ಜನಸಾಮಾನ್ಯರ ಆಸಕ್ತಿಯ ಫ‌ಲವಾಗಿ ಈ ಚರ್ಚ್‌ ಮೈದಳೆಯಿತು. ಮೊದಲಿಗೆ ಈ ಗುಂಪು ದಂಡುಪ್ರದೇಶದ (ಕಂಟೋನ್ಮೆಂಟ್‌) ಮನೆಯೊಂದರಲ್ಲಿ ಸೇರುತ್ತಿತ್ತು. 1866ರಲ್ಲಿ 45 ಸಾವಿರ ರೂ.ಗಳಲ್ಲಿ ಸಾಂಪ್ರದಾಯಿಕ ಪ್ರಸ್ಬಿಟೇರಿಯನ್‌ ಶೈಲಿಯಲ್ಲಿ ಈ ಗುಡಿ ಸಿದ್ಧವಾಯಿತು. ಹೆಚ್ಚಿನ ಪಾಲು ಯೋಧರೇ ಇದರ ಸದಸ್ಯರಾಗಿದ್ದ ಕಾರಣದಿಂದ, ಚರ್ಚಿನ ಗೋಡೆಗಳ ತುಂಬೆಲ್ಲ ಹಿತ್ತಾಳೆಯ ವೀರಪದಕಗಳೇ ತೂಗುತ್ತಿವೆ. ಈ ಚರ್ಚಿನ ಹೊರಗೋಡೆಗಳಿಗೆ ಆವೆಗೆಂಪು ಬಣ್ಣ ಬಳಿಯಲಾಗಿದೆ. ನಮ್ಮ ಹೈಕೋರ್ಟು, ಶೇಷಾದ್ರಿ ಮೆಮೋರಿಯಲ್‌ ಹಾಲ್‌ ಹಾಗೂ ಸೇಂಟ್‌ ಜಾನ್‌ ಚರ್ಚುಗಳೂ ಇದೇ ಬಣ್ಣವನ್ನೇ ಹೊಂದಿವೆ. ಈ ಚರ್ಚಿನಲ್ಲಿ 1881ರಲ್ಲಿ ಅಳವಡಿಸಲಾದ ಪೈಪ್‌ ಆರ್ಗನ್‌ ಎಂಬ ವಾದ್ಯ ಹಾಗೂ ಗೋಪುರದಲ್ಲಿ ಶೋಭಿಸುತ್ತಿರುವ 1893ರಲ್ಲಿ ಅಳವಡಿಸಿದ ಬೃಹತ್‌ ಗಡಿಯಾರಗಳು ಇನ್ನೂ ಸುಸ್ಥಿತಿಯಲ್ಲಿವೆ.

ಸಂತ ಮರಿಯಾ ಬೆಸಿಲಿಕಾ, ಶಿವಾಜಿನಗರ, ಬೆಂಗಳೂರು:”ಫ್ರೆಂಚ್‌ ಶೈಲಿ, 137 ವರ್ಷ
ಗಟ್ಟಿಮುಟ್ಟಾಗಿಯೂ, ಕಲಾತ್ಮಕವಾಗಿಯೂ ಇರುವ ಚರ್ಚ್‌ ಇದು. ಟಿಪ್ಪುಸುಲ್ತಾನನ ಮರಣಾನಂತರ ಫ್ರೆಂಚ್‌ ಪಾದ್ರಿ ಅಬ್ಬೆದ್ಯುಬುವಾರವರ ಪ್ರಯತ್ನದಿಂದ 1803ರಲ್ಲಿ ಇಂದು ಶಿವಾಜಿನಗರ ಎನಿಸಿಕೊಂಡಿರುವ ಬಿಳೇಕಹಳ್ಳಿ (ಬಿಳಿ ಅಕ್ಕಿ ಹಳ್ಳಿ) ಎಂಬ ಊರಿನಲ್ಲಿ ಪುಟ್ಟ ಚರ್ಚ್‌ ಒಂದು ತಲೆಯೆತ್ತಿತು. 1813ರಲ್ಲಿ ಬ್ರಿಟಿಷರ ಸೇನಾತುಕಡಿಯ ನೌಕರರು, ಬಿಳೇಕಹಳ್ಳಿಯ ಈ ಚರ್ಚ್‌ ಅನ್ನು ಮೇಲ್ದರ್ಜೆಗೇರಿಸಿದರು. ಆದರೆ, ಈಗಿರುವ ಭವ್ಯ ಚರ್ಚ್‌ ಅನ್ನು ಫ್ರೆಂಚ್‌ ಪಾದ್ರಿ ಕ್ಲೀನೆ, 1875-82ರ ಅವಧಿಯಲ್ಲಿ ಕಟ್ಟಿಸಿದರು. ಗೋಥಿಕ್‌ ಶೈಲಿಯ ಈ ಚರ್ಚಿನಲ್ಲಿ ಗಗನಚುಂಬಿ ಗೋಪುರ ಎದ್ದು ಕಾಣುತ್ತದೆ. ಒಳಗೆ ಪೂಜಾಪೀಠದ ಹಿಂದಿನ ಗೋಡೆಯಲ್ಲಿ ತಂದೆ- ತಾಯಿಯರೊಂದಿಗೆ ಯೇಸುಕ್ರಿಸ್ತನಿರುವ ವರ್ಣಸಂಯೋಜನೆಯ ಗಾಜಿನ ಫ‌ಲಕವಿದೆ. ಕಂಬಗಳ ಮೇಲೆ ಗಾರೆಯಿಂದ ಬಿಡಿಸಲಾದ ದ್ರಾಕ್ಷಾಲತೆ ಮುಂತಾದ ಉಬ್ಬುಚಿತ್ರಗಳು, ಚರ್ಚಿನೊಳಗಿನ ಕರುಣಾದ್ರಮಯಿ ಮೇರಿತಾಯಿಯ ಪ್ರತಿಮೆ, ಕಲಾತ್ಮಕ ಕುಸುರಿಯ ಮರದ ಪೀಠೊಪಕರಣಗಳು ಹಾಗೂ ಚರ್ಚಿನ ಒಳಾಂಗಣ ವಿನ್ಯಾಸ ಮನಸೆಳೆಯುವಂತಿವೆ. ಅಂದು ಈ ಚರ್ಚು ಕಟ್ಟಲು 29,659 ರೂ.ಗಳು ವೆಚ್ಚವಾಗಿತ್ತು.

ಮಿಲಾಗ್ರೆಸ್‌ ಚರ್ಚು, ಮಂಗಳೂರು: ರೋಮನ್‌ ಶೈಲಿ, 108 ವರ್ಷ
ಆಂಗ್ಲೋ- ಮೈಸೂರು ಯುದ್ಧಗಳ ಸಂದರ್ಭದಲ್ಲಿ ನಲುಗಿ ಉಡುಗಿದ ಮಂಗಳೂರಿನ ಈ ಚರ್ಚನ್ನು ಫ್ರೆಂಚ್‌ ಮಿಷನರಿಗಳು 1814ರಲ್ಲಿ ಮರು ನಿರ್ಮಾಣ ಮಾಡಿದ್ದರಾದರೂ, 1911ರಲ್ಲಿ ಅದೂ ನೆಲಕಚ್ಚಿದ್ದರಿಂದ ಜೆಸ್ವಿತ್‌ ವಾಸ್ತುಶಿಲ್ಪಿ ಪಾದ್ರಿಯೊಬ್ಬರು ರೋಮನ್‌ ಶೈಲಿಯಲ್ಲಿರುವ ಈಗಿನ ಚರ್ಚನ್ನು ಕಟ್ಟಿಸಿದರು. ಇದು ಅರ್ಧವೃತ್ತಾಕಾರ ಕಮಾನುಗಳ ಅಂಗಳವನ್ನೂ, ಕಿಟಕಿಗಳನ್ನೂ ಹೊಂದಿದೆ. ಮುಂಭಾಗದಲ್ಲಿ ರೋಮನ್‌ ಶೈಲಿಯ ಮುಂಗೋಡೆಯನ್ನೂ, ಎರಡು ಚಚ್ಚೌಕದ ಗೋಪುರಗಳನ್ನೂ ಹೊಂದಿದೆ. ಗೋಪುರಗಳಲ್ಲಿ ಯೂರೋಪಿನಿಂದ ತರಿಸಿದ ಎರಡು ಕಂಚಿನ ಗಂಟೆಗಳನ್ನು ಇಡಲಾಗಿದೆ.

ಸಂತ ಪ್ಯಾಟ್ರಿಕ್‌ ಚರ್ಚು, ಬ್ರಿಗೇಡ್‌ ರಸ್ತೆ, ಬೆಂಗಳೂರು: ಗೋಥಿಕ್‌ ಶೈಲಿ, 178 ವರ್ಷ
ಟಿಪ್ಪುವನ್ನು ಸೋಲಿಸಿ, ಮೈಸೂರಲ್ಲಿ ನೆಲೆ ಕಂಡಿದ್ದ ಬ್ರಿಟಿಷರು, ಮಲೇರಿಯಾಕ್ಕೆ ಹೆದರಿ ಅಲ್ಲಿಂದ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ ಮೇಲೆ, ಅವರ ಐರಿಶ್‌ ಸೈನಿಕರು ಚಂದಾ ಎತ್ತಿ ತಮಗಾಗಿ ನಿರ್ಮಿಸಿಕೊಂಡ ಈ ಚರ್ಚ್‌ ಇದು. ಬೆಂಗಳೂರಿನ ಬ್ರಿಗೇಡ್‌ ರಸ್ತೆಯಲ್ಲಿದೆ. 1841ರಲ್ಲಿ ಕಟ್ಟಲಾದ ಈ ಕಟ್ಟಡವು ಸುಂದರವಾದ ಒಳಾಂಗಣ ವಿನ್ಯಾಸ, ಅಷ್ಟೇ ಸುಂದರವಾದ ಹೊರಾಂಗಣ, ಮುಗಿಲಿಗೆ ಚಾಚಿದ ಎರಡು ಗೋಪುರಗಳು, ಬಲು ವಿಸ್ತಾರವಾದ ಜಗುಲಿ ಮತ್ತು ವಿಶಾಲವಾದ ನಿವೇಶನದ ಮಧ್ಯೆ ಪ್ರಶಾಂತವಾಗಿದೆ. ಇದೂ ಗೋಥಿಕ್‌ ಶೈಲಿಯದ್ದಾಗಿದ್ದು, ಎತ್ತರದ ಬಾಗಿಲು- ಕಿಟಕಿಗಳೂ, ದಿವ್ಯಭವ್ಯ ಪೀಠವೂ ಇದೆ. ಪ್ರಸಿದ್ಧ ಮಿಥಿಕ್‌ ಸೊಸೈಟಿಯ ಸ್ಥಾಪಕರಾದ ಫ್ರೆಂಚ್‌ ಪಾದ್ರಿ ಆಂತೋನ್‌ ಮರೀ ತಾಬಾ ಅವರ ಪಾರ್ಥಿವ ಶರೀರವನ್ನು ಈ ಚರ್ಚಿನೊಳಗೆ ಸಮಾಧಿ ಮಾಡಲಾಗಿದೆ.

ಹೋಲಿ ಟ್ರಿನಿಟಿ ಚರ್ಚು, ಬೆಂಗಳೂರು: ಇಂಗ್ಲಿಷ್‌ ರಿನೈಸಾನ್ಸ್‌ ಶೈಲಿ, 168 ವರ್ಷ
ಬೆಂಗಳೂರಿನ ಸೈನಿಕ ವಸಾಹತುಗಳಲ್ಲಿದ್ದ ಕ್ರೈಸ್ತಯೋಧರು ತಮಗಾಗಿ ಒಂದು ಚರ್ಚನ್ನು ಕಟ್ಟಬೇಕೆಂದು ಅಂದಿನ ಬ್ರಿಟಿಷ್‌ ಸರ್ಕಾರವನ್ನು ಕೋರಿಕೊಂಡ ಪರಿಣಾಮವಾಗಿ, ಈ ಕಟ್ಟಡ ತಲೆಯೆತ್ತಿತು. 1851ರಲ್ಲಿ ಇಂಗ್ಲಿಷ್‌ ರಿನೈಸಾನ್ಸ್‌ ಶೈಲಿಯಲ್ಲಿ ಇದು ನಿರ್ಮಾಣಗೊಂಡಿದೆ. ಸುಮಾರು 700 ಮಂದಿಗೆ ಸ್ಥಳಾವಕಾಶ ಕಲ್ಪಿಸುವ ಈ ದೇವಾಲಯದ ಪೀಠದಲ್ಲಿ ಹಿತ್ತಾಳೆಯ ಶಿಲುಬೆಯಿದೆ. ಹಿಂಬದಿಯ ಗೋಡೆಯಲ್ಲಿ ಯೇಸುಕ್ರಿಸ್ತ ಸ್ನಾನದೀಕ್ಷೆ ಪಡೆಯುತ್ತಿರುವ ಗಾಜಿನ ವರ್ಣಚಿತ್ತಾರದ ಫ‌ಲಕವಿದೆ. ದೇವರ ಮೂರು ರೂಪಗಳಾದ ಸರ್ವಶಕ್ತ, ಯೇಸುಕ್ರಿಸ್ತ ಮತ್ತು ಪವಿತ್ರಾತ್ಮರ ಸಂಯೋಗವಿರುವ ಪರಮತ್ರಿತ್ವವನ್ನು ಈ ಚಿತ್ರ ಪ್ರಕಟಿಸುತ್ತಿದೆ.

ಸಂತ ಪೌಲ್‌ ಚರ್ಚ್‌, ಬೀದರ್‌: ಬಹಮನಿ ಶೈಲಿ, 114 ವರ್ಷ
ಕರ್ನಾಟಕದ ತುತ್ತತುದಿಯಲ್ಲಿರುವ ಬೀದರ್‌ನಲ್ಲಿ ಮೊತ್ತಮೊದಲು ಕ್ರೈಸ್ತ ಧರ್ಮವನ್ನು ಬಿತ್ತಿದವರು ಮೆಥಡಿಸ್ಟರು. 1903ರಲ್ಲಿ ಇಲ್ಲಿ ಚರ್ಚ್‌ ಸ್ಥಾಪನೆಯಾಯಿತು. ಮಂಗಲಪೇಟೆಯ ಸಂತ ಪೌಲರ ಮೆಥಡಿಸ್ಟ್‌ ಚರ್ಚಿನ ಗೋಪುರದ್ವಯದ ಮೇಲೆ ಗುಮ್ಮಟಗಳಿವೆ ಹಾಗೂ ಮುಸಲ್ಮಾನ್‌ ಶೈಲಿಯ ಮಾಡು, ಕಟಾಂಜನ ಹೊಂದಿದೆ. ನಿಜಾಮರ ಆಳ್ವಿಕೆಯಲ್ಲಿದ್ದ ಈ ಪ್ರದೇಶದ ಕಟ್ಟಡಗಳು ಬಹಮನಿ ಶೈಲಿಯನ್ನು ಹೊಂದಿರುವುದು ಅತ್ಯಂತ ಸಹಜ.

* ಸಿ. ಮರಿಜೋಸೆಫ್

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.