ಇತಿಹಾಸ ಸೇರಲಿದೆಯೇ ಶತಮಾನ ಕಂಡ ಶಾಲೆ?
Team Udayavani, Apr 22, 2017, 4:49 PM IST
ಚಾಮರಾಜಪೇಟೆಯ ಕೋಟೆ ಹೈಸ್ಕೂಲ್‌ಗೆ ಈಗ 112 ವರ್ಷ. ಇದು ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರಂಭಿಸಿದ ಶಾಲೆ. ಒಂದು ಕಾಲದಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ತುಂಬಿದ್ದ ಶಾಲೆಯಲ್ಲಿ ಈಗ ಕೆಲವೇ ಮಂದಿ ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರಿನ ಪರಂಪರೆ ತಿಳಿಸುವ ಹಿನ್ನೆಲೆಯಿರುವ ಈ ಕಟ್ಟಡವನ್ನು ಸಂರಕ್ಷಿಸುವ ಮನಸ್ಸು ಸರ್ಕಾರಕ್ಕಾಗಲಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗಾಗಲಿ ಇಲ್ಲ.
ಪ್ರಾಥಮಿಕ ಶಿಕ್ಷಣ ಮತ್ತು ಮನುಷ್ಯರ ನಡುವೆ ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಕಲಿತ ವಿದ್ಯಾಲಯಗಳ ಪೈಕಿ ಎಲ್ಲರಿಗೂ ಮೊದಲು ನೆನಪಿಗೆ ಬರುವುದು ಪ್ರಾಥಮಿಕ ಶಾಲೆ, ಅಲ್ಲಿದ್ದ ಹೆಡಾ¾ಸ್ಟರ್ ಕೊಠಡಿ, ಶಾಲೆ ಆಚೆಗಿದ್ದ ಮೈದಾನ, ಕಬಡ್ಡಿ, ಖೋಖೋ ಆಡುತ್ತಿದ್ದ ಜಾಗಗಳನ್ನು ಯಾರೂ ಮರೆಯಲಾರರು. ಆನಂತರ, ಅದೇ ಶಾಲೆಯಲ್ಲಿ ತೀಡಿತಿದ್ದಿ, ಪಾಠ ಕಲಿಸಿದ ಗುರುಗಳು ನೆನಪಿಗೆ ಬರುತ್ತಾರೆ. ಹೀಗೆ, ಪ್ರಾಥಮಿಕ ಶಾಲೆಯ ನೆನಪು ನಮ್ಮ ಸ್ಮತಿ ಪಟಲದಲ್ಲಿ ಸದಾ ಹರಿದಾಡುತ್ತಿರುತ್ತದೆ.
ನಮ್ಮೂರ ಶಾಲೆಯೊಂದು ಶತಮಾನದ ಸಂಭ್ರಮ ಆಚರಿಸಿಕೊಂಡಿದೆ ಎಂದರೆ ಅದು ಊರಿನ ಪಾಲಿಗೆ ಹಬ್ಬವಿದ್ದಂತೆ. ಆ ಶಾಲೆಯ ಮೈದಾನದಲ್ಲಿ ಆಡಿ ಬೆಳೆದ ಬಹುತೇಕರು ಸೇರಿ, ಬಾಲ್ಯದ ನೆನಪುಗಳನ್ನು ಪುನರ್ ಮನನ ಮಾಡಿಕೊಳ್ಳುತ್ತಾರೆ. ಹೀಗೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೊಂದು ಸರ್ಕಾರಿ ಶಾಲೆ 12 ವರ್ಷದ ಹಿಂದೆ ಅದ್ಧೂರಿಯಾಗಿ ಶತಸಂಭ್ರಮ ಆಚರಿಸಿಕೊಂಡಿತ್ತು. ಅದುವೇ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್.
ಚಾಮರಾಜಪೇಟೆಯ ಕೋಟೆ ವೆಂಕಟರಮಣ ದೇವಸ್ಥಾನ ಹಾಗೂ ಟಿಪ್ಪು ಸುಲ್ತಾನರ ಸಮ್ಮರ್ ಪ್ಯಾಲೇಸ್‌ಗೆ ಅಂಟಿಕೊಂಡಂತೆಯೇ ಇರುವ 112 ವರ್ಷ ಹಳೆಯದಾದ ಕೋಟೆ ಹೈಸ್ಕೂಲ್ ಇಡೀ ಬೆಂಗಳೂರಿಗೇ ಹೆಸರುವಾಸಿ.
ಇತಿಹಾಸ:
1905ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸುಮಾರು ಮೂರೂವರೆ ಎಕರೆ ಪ್ರದೇಶದಲ್ಲಿ ಕೋಟೆ ಶಾಲೆಯನ್ನು ನಿರ್ಮಾಣ ಮಾಡಿದ್ದರು. ಆರಂಭದ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ಬರುಬರುತ್ತಾ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಯಿತು. 1980ರ ದಶಕದಲ್ಲಿ ಈ ಶಾಲೆ 1500 ರಿಂದ 2000 ವಿದ್ಯಾರ್ಥಿಗಳ ದಾಖಲಾತಿಯನ್ನು ಕಂಡಿದೆ.
ಶಾಲಾ ಆವರಣದಲ್ಲಿ ವಿಶಾಲವಾದ ಮೈದಾನ, ಸುತ್ತಲೂ ಗಿಡಮರಗಳು, ಪಕ್ಕದಲ್ಲೇ ಮಕ್ಕಳ ಕೂಟ, ನೂರಿನ್ನೂರು ಮೀಟರ್ ದೂರದಲ್ಲಿ ಕೆ.ಆರ್. ಮಾರುಕಟ್ಟೆ…. ಹೀಗೆ ಜನ ನಿಭಿಡ ಪ್ರದೇಶದ ಜತೆಗೆ ಆಧ್ಯಾತ್ಮಿಕ ನೆಲೆ, ಐತಿಹಾಸಿಕ ಹಿನ್ನೆಲೆಯ ಪ್ರದೇಶದಲ್ಲಿ ಈ ಶಾಲೆಯಿದೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿ, ಕೊಠಡಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ 1980ರಲ್ಲಿ ಕೋಟೆ ಪ್ರೌಢಶಾಲೆಯನ್ನು ವಿಭಾಗಿಸಿ, ಮೂಲ ಶಾಲೆಯನ್ನು ಹಳೇಕೋಟೆ ಪ್ರೌಢಶಾಲೆಯೆಂದೂ, ಹೊಸದಾಗಿ ನಿರ್ಮಿಸಿದ ಪ್ರೌಢಶಾಲೆಯನ್ನು ನೂತನಕೋಟೆ ಪ್ರೌಢಶಾಲೆಯೆಂದು ನಾಮಕರಣ ಮಾಡಲಾಯಿತು. ಕನ್ನಡ ಮಾಧ್ಯಮದ ಶಾಲೆಯಾದರೂ, ವಿದ್ಯಾರ್ಥಿಗಳಿಗೆ ಬರ ಇರಲಿಲ್ಲ. ನಂತರದ ವರ್ಷದಲ್ಲಿ ಎರಡೂ ಪ್ರೌಢಶಾಲೆಯಲ್ಲೂ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಲಾಯಿತು. ಅದೇ ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜನ್ನೂ ಆರಂಭಿಸಲಾಯಿತು.
ಕ್ಷೀಣಿಸುತ್ತಿದೆ ವಿದ್ಯಾರ್ಥಿಗಳ ಸಂಖ್ಯೆ:
ಸಾಹಿತ್ಯ ಹಾಗೂ ಕಲೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ ಚಾಮರಾಜಪೇಟೆ ಇತಿಹಾಸದಲ್ಲಿ ಕೋಟೆ ಪ್ರೌಢಶಾಲೆಯ ಸಾಧನೆಯೂ ಸೇರಿದೆ. ಬೆಂಗಳೂರು ನಗರ ಬೆಳೆಯುತ್ತಿದ್ದಂತೆ, ಇಲ್ಲಿನ ಹಲವು ಪೋಷಕರಿಗೆ ಖಾಸಗಿ ಶಾಲೆಗಳ ಮೋಹ ಆವರಿಸಿದ ನಂತರ, ಜೇನುಗೂಡಿನಂತಿದ್ದ ಕೋಟೆ ಪ್ರೌಢಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆಯಾಗುತ್ತಾ ಬಂತು. ಖಾಸಗಿ ಶಾಲೆಯಲ್ಲಿ ಕಲಿಯುವುದು ಪ್ರತಿಷ್ಠೆಯ ವಿಚಾರ ಎಂದು ಭಾವಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸದ ಪೋಷಕರು ಒಂದೆಡೆಯಾದರೆ, ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವ ಇನ್ನೊಂದೆಡೆ. ಈ ಕಾರಣದಿಂದಾಗಿ , ಒಂದು ಕಾಲದಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿ ಕಂಡಿದ್ದ ಕೋಟೆ ಪ್ರೌಢಶಾಲೆಯಲ್ಲಿ ಈಗ 100, 200 ವಿದ್ಯಾರ್ಥಿಗಳು ಮಾತ್ರ ಸೇರಿಕೊಳ್ಳುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಕಡಿಮೆ.
ವಿಲೀನಕ್ಕೆ ಆದೇಶ:
ಹಿಂದೊಮ್ಮೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಅವರನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಎರಡು ವಿಭಾಗವಾಗಿ ವಿಂಗಡಿಸಿದ್ದ ಸರ್ಕಾರವೇ ಈಗ ಮಕ್ಕಳ ಸಂಖ್ಯೆ ಕಡಿಮೆಯಾಗಿರುವುದರಿಂದ ಶಾಲೆಗಳ ವಿಲೀನಕ್ಕೆ ಆದೇಶ ನೀಡಿದೆ. ಅದರಂತೆ 2017-18ನೇ ಸಾಲಿನಿಂದ ಹಳೇಕೋಟೆ ಶಾಲೆ ಹಾಗೂ ನೂತನಕೋಟೆ ಶಾಲೆ ಒಂದೇ ಆವರಣದಲ್ಲಿ ನಡೆಯಲಿದೆ.
ರಾಜಧಾನಿಯಲ್ಲಿ ಶತಮಾನ ತುಂಬಿದ ಇಂತಹ ಶಾಲಾ ಕಟ್ಟಡವೊಂದಿದೆ ಎಂಬುದೇ ಹಮ್ಮೆಯ ವಿಷಯ. ಸರ್ಕಾರ ಅಥವಾ ಪಾಲಿಕೆ ಸ್ವಲ್ಪ ಮುತುವರ್ಜಿ ವಹಿಸಿದರೂ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸಿ ಮುಂದಿನ ಜನಾಂಗಕ್ಕೆ , ಇದು ನಮ್ಮ ನಗರದ ಹಿರಿಮೆ ಎಂದು ತೋರಿಸಬಹುದು. ರಾಜ್ಯದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ ಶಾಲಾ ಕಟ್ಟಡವಿದು. ಹೀಗಾಗಿ, ಸರ್ಕಾರ ಅಥವಾ ಇಲಾಖೆ ಇಂತಹ ಕಟ್ಟಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಕಟ್ಟಡವನ್ನು ಬೇರೆ ರೀತಿಯ ಬಳಕೆಗೆ ನೀಡದೆ ಮ್ಯೂಸಿಯಂ ಮಾಡಿ ಇಲ್ಲಿ ವ್ಯಾಸಾಂಗ ಮಾಡಿದ ಮಹನೀಯರ ಭಾವಚಿತ್ರ, ಅವರ ಸಾಧನೆಯ ಮಾಹಿತಿ ನೀಡುವಂತಿದ್ದರೆ ಎಷ್ಟು ಚೆಂದವಿರುತ್ತಿತ್ತಲ್ಲವೇ. ಆದರೆ, ನಮ್ಮನ್ನಾಳುವ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸುವುದಿಲ್ಲ ಎನ್ನುವುದೇ ವಿಪರ್ಯಾಸ.
ದೊರೆಸ್ವಾಮಿಯವರು ಓದಿದ ಶಾಲೆ:
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಹಾಗೂ ಮುತ್ಸದ್ದಿ ರಾಜಕಾರಣಿ ಎಂದೇ ಹೆಸರಾಗಿದ್ದ ವಿ.ಎಸ್.ಕೃಷ್ಣ ಅಯ್ಯರ್ ಸೇರಿದಂತೆ ಅನೇಕ ಸಾಹಿತಿಗಳು, ರಾಜಕೀಯ ನಾಯಕರನ್ನು ಸಮಾಜಕ್ಕೆ ನೀಡಿದ ಶಾಲೆ ಇದಾಗಿದೆ.
ಪ್ರೌಢಶಾಲೆಗೆ 100 ವರ್ಷ ಪೂರ್ಣಗೊಂಡಾಗ ಉತ್ಸವದ ಮಾದರಿಯಲ್ಲಿ ಸರ್ಕಾರದಿಂದಲೇ ಶತಮಾನೋತ್ಸವ ಆಚರಿಸಲಾಗಿತ್ತು. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್ ಸೇರಿದಂತೆ ಅವರ ಮಂತ್ರಿಮಂಡಲದ ಬಹುತೇಕ ಸಚಿವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯಲ್ಲಿ ಕಲಿತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆ ಸಂದರ್ಭದಲ್ಲಿ ಸನ್ಮಾನಿಸಲಾಗಿತ್ತು.
ಅಧ್ಯಾಪಕರಿದ್ದಾರೆ, ವಿದ್ಯಾರ್ಥಿಗಳಿಲ್ಲ
ನೂತನಕೋಟೆಯ ಪ್ರೌಢಶಾಲೆಯಲ್ಲಿ 2016-17ನೇ ಸಾಲಿನ ಕನ್ನಡ ಮಾಧ್ಯಮದಲ್ಲಿ 45 ಹಾಗೂ ಆಂಗ್ಲ ಮಾಧ್ಯಮದಲ್ಲಿ 88 ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ. ಹಾಗೆಯೇ ಈ ಪ್ರೌಢಶಾಲೆಯಲ್ಲಿ 10 ಕೊಠಡಿ, 11 ಬೋಧಕ ಸಿಬ್ಬಂದಿ, ಇಬ್ಬರು ಬೋಧಕೇತರ ಸಿಬ್ಬಂದಿ, ಇಬ್ಬರು ಡಿ ಗ್ರೂಪ್ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಹಳೇಕೋಟೆಯ ಪ್ರೌಢಶಾಲೆಯಲ್ಲಿ 2016-17ನೇ ಸಾಲಿನ ಕನ್ನಡ ಮಾಧ್ಯಮದಲ್ಲಿ 28 ಹಾಗೂ ಆಂಗ್ಲ ಮಾಧ್ಯಮದಲ್ಲಿ 104 ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು, 19 ಕೊಠಡಿ, 14 ಮಂದಿ ಬೋಧಕ ಸಿಬ್ಬಂದಿ, ಒರ್ವ ಬೋಧಕೇತರ ಹಾಗೂ ಓರ್ವ ಡಿ ಗ್ರೂಪ್ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.