“ಚೆಕಾವ್ ಟು ಶಾಂಪೇನ್’ : ಅಭಿನಯದಲ್ಲಿ ಏಕತಾರಿ ಶೃತಿ
Team Udayavani, Oct 14, 2017, 4:26 PM IST
ಕಥೆಗಳಲ್ಲಿ ಒಂದು ಲೋಕವಿರುತ್ತದೆ; ಬದುಕಿನ ವೈವಿಧ್ಯವಿರುತ್ತದೆ. ಅವು ಲೇಖಕನ ಖಾಸಗಿ ಅನುಭವಗಳೂ ಆಗಿರಬಹುದು ಅಥವಾ ಆತ ಜಗತ್ತ ನ್ನು ತನ್ನ ಕಾಣ್ಕೆ ಗೆ ಅನುಸಾರವಾಗಿ ಕಾಣುವ ನೋಟಕ್ರಮವೂ ಆಗಿರಬಹುದು. ಕಥೆ ಕಟ್ಟುವ ಅಥವಾ ಹೆಣೆಯುವುದರ ಹಿಂದೆ ಒಂದು ಕೌಶಲ್ಯವಿದ್ದಂತೆ ಅದನ್ನು ಎಲ್ಲ ಕಾಲಕ್ಕೂ ದಾಟಿಸಿ ಹಲವರ ಬದುಕಿನ ಅನುಭವಗಳ ಭಾಗವಾಗಿಸುವ ಲೇಖಕ ಮಾತ್ರ ಬಹಳ ಕಾಲ ಉಳಿಯುತ್ತಾನೆ, ಮತ್ತೆ ಮತ್ತೆ ಮನಸ್ಸುಗಳನ್ನು ಕಲಕುತ್ತಿರುತ್ತಾನೆ.
ರಷ್ಯಾದ ಖ್ಯಾತ ಕಥೆಗಾರ, ನಾಟಕಕಾರ ಆ್ಯಂಟನ್ ಚೆಕಾವ್ ಕನ್ನಡದ ಸಂವೇದನೆಗೂ ಹೊಸಬನಲ್ಲ. ಆತ ಶ್ರೇಷ್ಠ ನಾಟಕಗಳನ್ನು ಬರೆದು ಅವು ಇಂದಿಗೂ ಪ್ರಯೋಗಗೊಳ್ಳುತ್ತಿದ್ದರೂ ಅವನ ಕಥೆಗಳನ್ನು ಮತ್ತೆ ರಂಗರೂಪಕ್ಕೆ ಅಳವಡಿಸಲಾಗುತ್ತಿದೆ. ನಾಟಕ ಹಾ ಗೂ ಕಥೆಯ ಪ್ರಾಕಾರ ಬೇರೆಬೇರೆಯಾದರೂ ಚೆಕಾವ್ ತನ್ನ ಕಥೆಗಳಲ್ಲೂ ನಾಟಕೀಯ ಗುಣವನ್ನು ಹೇರಳವಾಗಿ ಅಡಕಗೊಳಿಸಿರುವುದರಿಂದ ಅವು ದೃಶ್ಯಗಳಾಗಿ ಪಾತ್ರಗಳಾಗಿ ಮೈದಾಳುತ್ತಿವೆ.
ಧಾರವಾಡದ ರಂಗಾಯಣ ರೆಪರ್ಟರಿ ಕಲಾವಿದರು ಈಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ “ಚೆಕಾವ್ ಟು ಶಾಂಪೇನ್’ ಪ್ರದರ್ಶಿಸಿದ ನಾಟಕದಲ್ಲಿ ಮೇಲಿನ ಮಾತುಗಳು ಮತ್ತೆ ಮನದಟ್ಟಾದವು. ಹೇಮಾ ಪ ಟ್ಟಣ ಶೆಟ್ಟಿ ಚೆಕಾವ್‌ನ ಕಥೆಗಳನ್ನು ರಂಗರೂಪಕ್ಕೆ ಅಳವಡಿಸಿದ್ದರು.
ಪ್ರತಿ ಕಥಾ ರಚನೆಯ ಹಿಂದೊಂದು ಕಥೆಯಿರುತ್ತದೆ. ಒಂದು ಸಂದರ್ಭವಿರುತ್ತದೆ. ಒಂದು ದರ್ಶನವಿರುತ್ತದೆ. ಅದು ಕಥೆಯಂತೆಯೇ ಸ್ವಾರಸ್ಯಪೂರ್ಣ ಎಂದೇನಿಲ್ಲ. ಇರಬೇಕೆಂಬ ನಿಯಮವೂ ಇಲ್ಲ. ಶ್ರೇಷ್ಠ ಕಥೆಗಳನ್ನು ಬರೆದ ಕಥೆಗಾರ ಚೆಕಾವ್ ಕೂಡ ಇಂಥ ಕಥಾಹಿನ್ನೆಲೆಗಳಿಗೆ ಮತ್ತು ಅವು ಗ ಳು ಸೃಷ್ಟಿಯಾದ ಸಂದರ್ಭಗಳಿಗೆ ಹೊರತಲ್ಲ. ಈರಂಗ ರೂಪದ ವೈಶಿಷ್ಟéವೆಂದರೆ ಚೆಕಾವ್ ತನ್ನ ಕಥೆಗಳು ಸೃಷ್ಟಿಯಾದ ಹಿನ್ನೆಲೆಗಳನ್ನು ಹೇಳುವುದರೊಂದಿಗೆ ಕಥೆಗಳನ್ನು ಆರಂಭಿಸುತ್ತಾನೆ. ಕೆಲವಕ್ಕೆ ಹಿನ್ನೆಲೆ, ಮತ್ತೆ ಕೆಲವಕ್ಕೆ ಕಥೆಯ ಪಾತ್ರಗಳ ಸ್ವಭಾವಗಳಿಗೆ ಸಂಬಂಧಿಸಿದಂತೆ ಮಾತುಗಳ ಧ್ವನಿತವಿದೆ. ಚೆಕಾವ್ ಇಲ್ಲಿ ನಿರೂಪಕನೂ ಹೌದು, ಕೆಲವು ಕಥೆಗಳೊಗಿನ ಪಾತ್ರವೂ ಹೌದು. ಕಥೆಗಳ ಹಿನ್ನೆಲೆಗಳಿಗೆ ಸಂಬಂಧಿಸಿದಂತೆ ಚೆಕಾವ್ ಖುದ್ದಾಗಿ ಹೇಳಿಕೊಂಡಿರುವುದರ ನಿರೂಪಣೆಗಳನ್ನು ಹೇಮಾ ಪಟ್ಟಣಶೆಟ್ಟಿಯವರು ಎಲ್ಲಿಂದ ಹೆಕ್ಕಿದರು ಎಂಬ ಪ್ರಶ್ನೆಗಳು ಮೂಡಿತು. ನಾಟಕದ ಆರಂಭದಲ್ಲಿ ಚೆಕಾವ್ ತನ್ನ ಬಗ್ಗೆ ಪರಿಚಯಿಸಿಕೊಳ್ಳುವ ಮಾತುಗಳನ್ನು ಓದಿದ್ದು ನೆನಪಿದೆ; ಆದರೆ, ಕಥಾ ಹಿನ್ನೆಲೆಗಳಿಗೆ ಸಂಬಂಧಿಸಿದ ಚೆಕಾವ್‌ಗಳ ನಿರೂಪಣೆಗಳನ್ನು ಕೇಳಿರಲಿಲ್ಲ. ಅವು ಇಲ್ಲಿ ಕೇಳಿ ಬಂದವು. ಇವು ನಿಜಕ್ಕೂ ಚೆಕಾವ್ ಹೇಳಿರುವಂಥವೋ ಅಥವಾ ಹೇಮಾರವರು ರಂಗರೂಪದ ಬೆಳವಣಿಗೆಗೆ ಚೆಕಾವ್‌ನ ಕಥೆಗಳ ಆಶಯಗಳನ್ನು ಗ್ರಹಿಸಿ ಪೂರಕವಾಗಿ ಬರೆದಿರುವಂಥವೋ, ಒಟ್ಟಿನಲ್ಲಿ ಸಮಂಜಸ ಅನಿಸಿದವು.
ಇದನ್ನು ರಂಗದ ಮೇಲೆ ತರುವಲ್ಲಿ ವಿನ್ಯಾಸದ್ದೇನೂ ತೊಡಕು ಅನಿಸಲಿಲ್ಲ. ಚಿದಂಬರರಾವ್ ಜಂಬೆ ರಂಗವನ್ನು ಬೇರೆ ಬೇರೆ ಬಗೆಗಳಲ್ಲಿ ಮತ್ತು ಪರಿಕರಗಳನ್ನು ಬಳಸಿಕೊಂಡ ಬಗೆಯಲ್ಲಿ ಹೊಸತನವಿತ್ತು. ಆದರೆ, ತೊಡಕು ಅನಿಸಲು ಆರಂಭಿಸಿದ್ದು ಅಭಿನಯದ ಶೈಲಿಯಲ್ಲಿ. ಹೆಂಗಸೊಬ್ಬಳು ಬ್ಯಾಂಕಿಗೆ ಬಂದು ಸಂಬಂಧವೇ ಇಲ್ಲದ ವಿಷಯಕ್ಕೆ ಮ್ಯಾನೇಜರ್‌ನನ್ನು ಬೆಚ್ಚಿಸುವುದು, ಅದಕ್ಕೆ ಮ್ಯಾನೇಜರ್ ಪದೇಪದೇ ಚೇರಿನಿಂದ ಉರುಳುತ್ತ ನೆಲದ ಮೇಲೆ ಹುಳುವಿನಂತೆ ತೆವಳುವುದು, ಆ ಹೆಂಗಸು ಮ್ಯಾನೇಜರ್‌ನ ಟೇಬಲ್ ಹತ್ತಿ ಕರಾಟೆ ಮಾದರಿಯಲ್ಲಿ ಕಾಲುಗಳನ್ನು ಅಗಲಿಸಿ ನಿಲ್ಲುವುದು ಎಲ್ಲವೂ ಅತಿರೇಕ ಅನಿಸಿದವು. ಬೆಳಕಿನ ತಾಣಗಳನ್ನು ವಿಭಜಿಸಿಕೊಂಡ ಕ್ರಮ ಚೆನ್ನಾಗಿತ್ತು. ಸಂಗೀತದಲ್ಲಿ ಅಬ್ಬರವಿತ್ತು. ಚೆಕಾವ್‌ನ ಸುಂದರ ಕಥೆಗಳು ಇಲ್ಲಿ ಒಂದೇ ಜಾಡಿಗೆ ಸಿಕ್ಕಿಕೊಂಡದ್ದು ವಿಪರ್ಯಾಸದಂತಿತ್ತು.
– ಎನ್.ಸಿ. ಮಹೇಶ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.