ಸಿನಿಮಾ ರಾಶಿ
12ನೇ ಬಿಐಎಫ್ಎಫ್ನ "ಕಂಪ್ಲೀಟ್ ಪಿಕ್ಚರ್'
Team Udayavani, Feb 22, 2020, 6:10 AM IST
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಆಸೆ- ನಿರೀಕ್ಷೆಗಳ ತೋರಣ ಕಟ್ಟಿದೆ. ಫೆ.26ರಿಂದ ಮಾ.4ರ ವರೆಗೆ, 7 ದಿನಗಳ ಕಾಲ, ವಿಶ್ವದ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಚಿತ್ರಗಳನ್ನು ಚಿತ್ರೋತ್ಸವ ಹೊತ್ತುತರುತ್ತಿದೆ. ಫಿಲ್ಮ್ ಫೆಸ್ಟ್‌ನ ವಿಹಂಗಮ ನೋಟವೊಂದು ಇಲ್ಲಿದೆ…
ಫಿಲ್ಮ್ ಫೆಸ್ಟಿವಲ್ ಎನ್ನುವುದು, ಕುಳಿತಲ್ಲಿಯೇ ಜಗತ್ತನ್ನು ತೋರಿಸುವ ಬಣ್ಣದ ಕಿಟಕಿ. ಬೆಂಗಳೂರಿನ ಸಿನಿಪ್ರಿಯರ ಬಳಿಗೆ ಈಗ ಆ ಮಾಯಾಕಿಟಕಿ ಓಡೋಡಿ ಬರುತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಆಸೆ- ನಿರೀಕ್ಷೆಗಳ ತೋರಣ ಕಟ್ಟಿದೆ. ಫೆ.26ರಿಂದ ಮಾ.4ರ ವರೆಗೆ, 7 ದಿನಗಳ ಕಾಲ, ವಿಶ್ವದ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಚಿತ್ರಗಳನ್ನು ಚಿತ್ರೋತ್ಸವ ಹೊತ್ತುತರುತ್ತಿದೆ.
ಈಚಿನ ವರುಷಗಳಲ್ಲಿ ವಿಶ್ವದ ಪ್ರಖ್ಯಾತ ಚಲನಚಿತ್ರೋತ್ಸವಗಳಾದ ಕ್ಯಾನೆ, ಬರ್ಲಿನ್, ಮಾಸ್ಕೋ, ಬೂಸಾನ್, ವೆನಿಸ್, ಟೊರಾಂಟೊ, ಗೋವಾ, ಮುಂಬೈ, ಕೇರಳ ಮುಂತಾದೆಡೆ ಪ್ರಶಸ್ತಿ ಗಳಿಸಿದ ಅಥವಾ ಸುದ್ದಿಮಾಡಿದ ಪ್ರಮುಖ ಚಿತ್ರಗಳನ್ನು ಹೆಕ್ಕಿ ತೆಗೆದು, ಅವುಗಳನ್ನು ಈ 12ನೇ ಬೆಂಗಳೂರು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟ್‌ನಲ್ಲಿ ಪ್ರದರ್ಶಿಸುತ್ತಿರುವ ಆಯೋಜಕರ ಶ್ರಮ ದೊಡ್ಡದು.
ದಿಗ್ಗಜ ನಿರ್ದೇಶಕರ ಕಲಾಕೃತಿಗಳು: 60 ರಾಷ್ಟ್ರಗಳ ಸುಮಾರು 200 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಯು.ಕೆ.ಯ ಕೆನ್ ಲೋಚ್, ಗ್ರೀಸ್‌ನ ಕೊಸ್ಟಾಗವರಸ್, ಪೋಲೆಂಡ್‌ನ ರೋಮನ್ ಪೊಲಾನಿಸ್ಕಿ, ಸ್ವೀಡನ್‌ನ ರಾಯ್ ಆಂಡರ್ಸನ್, ಇಸ್ರೇಲ್/ ಫ್ರಾನ್ಸ್‌ನ ಎಲಿ ಸುಲೇಮಾನ್, ಬೆಲ್ಜಿಯಂನ ಡಾರ್ಡನ್ ಸೋದರರು, ಕೊರಿಯಾದ ಬೊಂಗ್ ಜೂನ್ ಹೊ, ಸ್ಪೇನ್‌ನ ಪೆದ್ರೋ ಅಲ್ಮೋಡವರ್, ಜಪಾನಿನ ತಕಾಶಿ ಮೀಕಿಯ್, ಬ್ರೆಜಿಲ್‌ನ ಫರ್ನಾಂಡೊ ಮಿರೆಲ್ಲೆಸ್, ಪೋರ್ಚುಗಲ್‌ನ ಪೆಡ್ರೋ ಕೊಸ್ಟಾ, ಟಿಬೆಟ್‌ನ ಪೆಮ ಸೆಡನ್, ಯು.ಕೆ.ನ ಟೆೆರೆನ್ಸ್ ಮಲಿಕ್- ಈ ಖ್ಯಾತ ನಿರ್ದೇಶಕರ ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ.
ಪ್ರಶಸ್ತಿಗೆ ಪೈಪೋಟಿ: ಈ ಬಾರಿಯ ಸಿನಿಮೋತ್ಸವದ ಸ್ಪರ್ಧಾ ವಿಭಾಗದಲ್ಲಿ ಏಷ್ಯಾ ಚಿತ್ರಗಳು (13), ಭಾರತೀಯ ಚಿತ್ರಗಳು (13), ಕನ್ನಡ ಚಿತ್ರಗಳು (14) ಹಾಗೂ ಕನ್ನಡದ ಜನಪ್ರಿಯ ಮನರಂಜನಾ ಚಿತ್ರಗಳು (10) ಪ್ರಶಸ್ತಿಗಳಿಗಾಗಿ ಪೈಪೋಟಿ ನಡೆಸಲಿವೆ. ಸಮಕಾಲೀನ (Contemporary) ವಿಶ್ವ ಸಿನಿಮಾದ ವಿಭಾಗದಲ್ಲೂ ಹೆಸರಾಂತ ನಿರ್ದೇಶಕರ ಚಿತ್ರಗಳಿವೆ. ಈ ಬಾರಿಯ ದೇಶ ಕೇಂದ್ರಿತ (country focus) ವಿಭಾಗದಲ್ಲಿ ಫಿಲಿಪ್ಪೀನ್ಸ್, ಜರ್ಮನಿ ಮತ್ತು ಆಸ್ಟ್ರೇಲಿಯಾ ಚಿತ್ರಗಳಿವೆ. ಪುನರಾವಲೋಕನ (Retrospectives)ವಿಭಾಗದಲ್ಲಿ ರಷ್ಯಾದ ಹೆಸರಾಂತ ನಿರ್ದೇಶಕ ಆಂದ್ರೆ ಥಾರ್ಕೋವ್ಕಿ ಹಾಗೂ ನಮ್ಮವರೇ ಆದ ಬಹುಭಾಷಾ ತಾರೆ ಅನಂತನಾಗ್‌ರ ಚಿತ್ರಗಳಿವೆ.
ರಷ್ಯಾದ ಸರ್ಗಿ ಐಸೆನ್‌ಸ್ಟೆನ್, ಅಮೆರಿಕದ ಚಾರ್ಲಿ ಚಾಪ್ಲಿನ್, ಬಸ್ಟರ್ ಕೀಟನ್, ಜಪಾನಿನ ಅಕಿರಾ ಕುರುಸೋವಾ, ಸ್ವೀಡನ್‌ನ ಇಂಗ್ಮರ್ ಬರ್ಗ್ಮನ್, ಇಟಲಿಯ ವಿಟ್ಟೋರಿಯಾ ದಿಸಿಕಾ, ಫ್ರಾನ್ಸ್‌ನ ಜೀನ್ ಲೂಕ್ ಗೊದಾರ್ಡ್ ಹಾಗೂ ಭಾರತದ ಸತ್ಯಜಿತ್ ರೇ ಅವರ ಚಿತ್ರಗಳನ್ನು ನೋಡದೇ ಇರಲು ಸಾಧ್ಯವಿಲ್ಲ. ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ ವಿಭಾಗದಲ್ಲಿ ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ತಾನಸೇನ್, ಮೀರಾಬಾಯಿ ಸೇರಿದಂತೆ ಸಂಗೀತ ಪ್ರಧಾನ ಚಿತ್ರಗಳಿರುತ್ತವೆ.
ಆತ್ಮಕಥೆ- ವ್ಯಕ್ತಿಚಿತ್ರಗಳು: ಈ ವಿಭಾಗದಲ್ಲಿ ಚಲನಚಿತ್ರ ನಿರ್ಮಾತೃಗಳು, ಸಾಹಿತಿಗಳು, ಕಲಾವಿದರು, ಸಂಗೀತಗಾರರ ಬದುಕಿನ ಕುರಿತ ಸಿನಿಮಾಗಳು ಗಮನ ಸೆಳೆಯಲಿವೆ. ಚಿತ್ರಕಲಾವಿದ ಆಂದ್ರೆ ರುಬ್ಲೇವ ಕುರಿತ ಚಿತ್ರ, ಚಿಂತಕ ಹಾಗೂ ಸಂಗೀತಗಾರ ರಾಜೀವ್ ತಾರಾನಾಥ್, ಸಂಗೀತಗಾರ್ತಿ- ಕಲಾವಿದೆ ಹೆಲೆನ್ ರೆಡ್ಡಿ, ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಕನ್ನಡ ಸಾಹಿತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಖ್ಯಾತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ವ್ಯಕ್ತಿಚಿತ್ರಗಳು ಈ ಬಾರಿಯ ವಿಶೇಷ.
ನನ್ನ ಆಯ್ಕೆಯ ಸಿನಿಮಾ
ಅಡಲ್ಟ್ಸ್ ಇನ್ ದಿ ರೂಮ್: ಕಾಸ್ಟಾ ಗೌರಾಸ್ ನಿರ್ದೇಶನದ “ಅಡಲ್ಟ್ಸ್ ಇನ್ ದಿ ರೂಮ್’ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೇನೆ. ಯಾರು ಚೆಂಡನ್ನು ಎತ್ತ ಒದ್ದರೂ ಗೋಲು ಮಾತ್ರ ಯಾವಾಗಲೂ ಅಮೆರಿಕದ್ದೇ. ಸುಮಾರು ಇದೇ ಅರ್ಥ ಕೊಡುವ ಸಾಲೊಂದನ್ನು ಎಲ್. ಬಸವರಾಜು ಅವರ ಒಂದು ಬರಹದಲ್ಲಿ ಓದಿದ್ದೆ. ಪವರ್ ಪಾಲಿಟಿಕ್ಸ್ ವ್ಯಕ್ತಿಗತ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ವ್ಯಾಪಿಸುವ, ನಿರ್ವಹಿಸಲ್ಪಡುವ ಪರಿ ನನಗೆ ಯಾವಾಗಲೂ ಕುತೂಹಲ ಹುಟ್ಟಿಸುತ್ತದೆ. 2015ರ ಸಮಯದಲ್ಲಿ ಗ್ರೀಸ್‌ನ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಶಕ್ತಿಗಳು ಅದನ್ನು ನಡೆಸಿಕೊಂಡ ಪರಿ ಚಿತ್ರದ ವಸ್ತು.
-ಸಂಧ್ಯಾರಾಣಿ, ಲೇಖಕಿ
ಗೋಲ್ಡನ್ ವಾಯ್ಸಸ್: ಈ ಬಾರಿ ಇಸ್ರೇಲಿ ಸಿನಿಮಾವೊಂದನ್ನು ನೋಡುವುದಕ್ಕೆ ಕಾತುರನಾಗಿದ್ದೇನೆ. “ಗೋಲ್ಡನ್ ವಾಯ್ಸಸ್’ ಎಂಬ ಈ ಸಿನಿಮಾಕ್ಕೆ “ಐಎಂಡಿಬಿ’ಯಲ್ಲಿ ಸಾಕಷ್ಟು ಒಳ್ಳೆಯ ರೇಟಿಂಗ್ ದಕ್ಕಿದೆ. ಜೊತೆಗೆ ಅದರ ಕತೆಯ ಸಾರಾಂಶವೂ ಆಕರ್ಷಕವಾಗಿದೆ. ರಷ್ಯಾದಿಂದ ಇಬ್ಬರು ಸಿನಿಮಾ ಡಬ್ಬಿಂಗ್ ಕಲಾವಿದರು ಬದುಕಿಗಾಗಿ ವಲಸೆ ಹೋಗುವ ಕಥನವಿದಂತೆ. ಒಂದು ದೇಶ ನೆಲ ಕಚ್ಚಿದಾಗ, ಅದರಿಂದ ಹಲವಾರು ಜೀವಕ್ಕೆ ಧಕ್ಕೆಯಾಗುತ್ತದೆ. ಜೊತೆಗೆ ಭಾಷೆ ಮತ್ತು ಸಂಸ್ಕೃತಿಗೂ ಧಕ್ಕೆಯಾಗುತ್ತದೆ. ರಷ್ಯಾ ಪತನಗೊಂಡಾಗ ಆದ ತಲ್ಲಣಗಳನ್ನು ಡಬ್ಬಿಂಗ್ ಕಲಾವಿದರ ಬದುಕಿನ ಹೋರಾಟದ ಮೂಲಕ ಈ ಚಿತ್ರ ಕಟ್ಟಿಕೊಡುತ್ತದೆಯೆಂದೂ, ಅದು ವಿಶೇಷವಾಗಿದೆಯೆಂದೂ ನೋಡಿದವರು ತಿಳಿಸಿದ್ದಾರೆ. ಸಿನಿಮೋತ್ಸವದಲ್ಲಿ ಕೇವಲ ಒಂದೇ ಸಿನಿಮಾ ನೋಡುವುದು ಲಕ್ಷಣವಲ್ಲ. ಹತ್ತಾರು ಸಿನಿಮಾಗಳನ್ನು ಲಾಟರಿ ಎತ್ತಿ ನೋಡಿಬಿಡಬೇಕು. ಒಂದೆರಡು ಒಳ್ಳೆಯ ಸಿನಿಮಾಗಳು ಖಂಡಿತಾ ಚೆನ್ನಾಗಿರುತ್ತವೆ.
-ವಸುಧೇಂದ್ರ, ಕಥೆಗಾರ
“ಎ ಕಾಲೋನಿ’ಯಿಂದ ಹೊರಟು…: ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನನ್ನ ಆಯ್ಕೆಗಳು ಹೀಗಿವೆ: ಡಿಸೆಲ್ಲೆ ಅವರ “ಎ ಕಾಲೋನಿ’, ಆಂಡರ್ಸನ್ ಅವರ “ಅಬೌಟ್ ಎಂಡ್ಲೆಸ್ನೆಸ್’, ಇವಾಜಿಸ್ ಅವರ “ಹೌಸ್’, ಟೆಡೆನ್ ಅವರ “ಬಲೂನ್’, ಆಂಡ್ರಿಯ ಅವರ “ಲಿಲ್ಲಿಯನ್’, ದೋರ್ಜಿ ಅವರ “ಲೂನಾನ ಎ ಯಾಕ್ ಇನ್ ದ ಕ್ಲಾಸ್ ರೂಂ’, ಅಲ್ಟರ್ ಅವರ “ಎ ಟೇಲ್ ಆಫ್ ಥ್ರಿ ಸಿಸ್ಟರ್’, ಮಿರ್ಲಾನ್ ಅವರ “ರನ್ನಿಂಗ್ ಟು ದ ಸ್ಕೈ’, ಸುಲೇಮಾನ್ ಅವರ “ಇಟ್ ಮಸ್ಟ್ ಬಿ ಹೆವನ್’, ಬೋಬೋರಾಲ್ ಅವರ “ಇಸ್ಕಾ’. ಇವೆಲ್ಲದರ ಜೊತೆಗೆ “ಆಂದ್ರೆ ಥಾರ್ಕೋವಿ ಅವರ “ರೆಟ್ರಾಸ್ಪೆಕ್ಟಿವ್ ವಿಭಾಗ’ದಲ್ಲಿ ಇರುವ ಸಿನಿಮಾಗಳು. ಈ ಸಿನಿಮಾಗಳು ನೋಡುಗನಿಗೆ ಥೀಮ್ಯಾಟಿಕ್ ವ್ಯಾಲ್ಯೂ ಮಾತ್ರವಲ್ಲದೆ, ಈಸ್ತೆಟಿಕ್ ಮತ್ತು ಸಿನಿಮ್ಯಾಟಿಕ್ ವ್ಯಾಲ್ಯೂ ಕಾರಣವಾಗಿ ಬಹುಕಾಲ ಮನಸ್ಸಲ್ಲಿ ಉಳಿಯುತ್ತವೆ.
-ಬಿ. ಸುರೇಶ, ನಿರ್ದೇಶಕ- ನಿರ್ಮಾಪಕ
“ದಿ ವಿಸ್ಲರ್ಸ್’, ಮತ್ತೆರಡು…: ಫಿಲ್ಮ್ ಪೆಸ್ಟಿವಲ್‌ನಲ್ಲಿ 3 ಚಿತ್ರಗಳು ನನಗೆ ಕುತೂಹಲ ಹುಟ್ಟಿಸಿವೆ.
1. ದಿ ವಿಸ್ಲರ್ಸ್: ಕೊರ್ನೆಲ್ಯು ಪೊರಂಬಯು ನಿರ್ದೇಶನದ ಈ ರೊಮೇನಿಯನ್ ಚಿತ್ರವು ಸೆವೆಲ್ಲೆ ಯುರೋಪಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಉತ್ತಮ ಚಿತ್ರಕಥೆ ಪ್ರಶಸ್ತಿ ಗೆದ್ದಿದೆ. ಕ್ರೈಂ ಥ್ರಿಲ್ಲರ್‌ಗಳನ್ನು ಇಷ್ಟಪಡುವ ಮಂದಿ ನೋಡಬೇಕಾದ ಚಿತ್ರ.
2. ವೆನ್ ದಿ ಮೂನ್ ವಾಸ್ ಫಾಲ್: ನರ್ಗೆಸ್ ಅಬ್ಯಾ ಎಂಬ ಮಹಿಳೆಯ ನಿರ್ದೇಶನದ ಈ ಇರಾನಿಯನ್ ಚಿತ್ರ ತನ್ನ ನೈಜ ನಿರೂಪಣೆಯಿಂದ ನೋಡುಗರ ಮನ ಗೆದ್ದಿದೆ.
3. ಬೇಟ್: ಮಾರ್ಕ್ ಜೆಂಕಿನ್ ನಿರ್ದೇಶನದ ಈ ಚಿತ್ರ ಕಳೆದ ವರ್ಷ ಆಅಊಖಅ ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಉತ್ತಮ ಛಾಯಾಗ್ರಹಣ, ಹೊಸ ಬಗೆಯ ನಿರೂಪಣೆಗಾಗಿ ಈ ಚಿತ್ರವನ್ನು ನೋಡಬೇಕಾಗಿದೆ.
-ಶ್ರೀನಿಧಿ ಡಿ.ಎಸ್., ಕಿರುತೆರೆ ಸಂಭಾಷಣೆಕಾರ
ಸ್ಯಾಂಡಲ್‌ವುಡ್ ಟಾಕ್
ಕನ್ನಡ ಚಿತ್ರಗಳು ನಮ್ಮ ನೆಲದಿಂದಲೇ ಜಾಗತಿಕವಾಗಿ ಗುರುತಿಸಿಕೊಳ್ಳಬೇಕು. ಅದಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಒಳ್ಳೆಯ ವೇದಿಕೆ. ಜಾಗತಿಕ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಲು, ನಮಗೆ ಇಲ್ಲಿಂದಲೇ ಪ್ರೇರಣೆಯೂ ಸಿಗುತ್ತದೆ.
-ದಯಾಳ್ ಪದ್ಮನಾಭನ್, ನಿರ್ದೇಶಕ – ನಿರ್ಮಾಪಕ
ನಾವು ಜಗತ್ತಿನ ಬೇರೆ ಬೇರೆ ಇಂಟರ್ ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ಗಳಿಗೆ ಹೋಗುತ್ತೇವೆ. ಆದ್ರೆ ನಮ್ಮಲ್ಲೇ ಇಂಟರ್ ನ್ಯಾಶನಲ್ ಫಿಲಂ ಫೆಸ್ಟಿವಲ್ ನಡೆಯುತ್ತಿದ್ದರೂ, ನಮ್ಮ ಚಿತ್ರರಂಗದವರೇ ಅನೇಕರು ಆ ಕಡೆ ತಲೆ ಕೂಡ ಹಾಕುವುದಿಲ್ಲ. ನನ್ನ ಪ್ರಕಾರ, ಬೆಂಗಳೂರು ಚಲನಚಿತ್ರೋತ್ಸವವನ್ನು ನಾವೆಲ್ಲರೂ ಹಬ್ಬದಂತೆ ಆಚರಿಸಬೇಕು.
-ಅದಿತಿ ಪ್ರಭುದೇವ, ನಾಯಕ ನಟಿ
ನಾನು ಮೊದಲಿನಿಂದಲೂ ಚಲಚಿತ್ರೋತ್ಸವಗಳನ್ನು, ಹಬ್ಬದ ಸಂಭ್ರಮದಂತೆ ನೋಡುತ್ತ ಬಂದವನು. ಚಲನಚಿತ್ರೋತ್ಸವಗಳು ಸುಮ್ಮನೆ ಒಂದಷ್ಟು ಸಿನಿಮಾ ನೋಡಿಕೊಂಡು ಬರುವಂಥವಲ್ಲ. ಅವು ನಮ್ಮ ಅರಿವು, ಆಲೋಚನೆ ಎಲ್ಲದರ ವ್ಯಾಪ್ತಿಯನ್ನು ವಿಸ್ತರಿಸುತ್ತವೆ.
-ಪಿ. ಶೇಷಾದ್ರಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ
ಮೊದಲೆಲ್ಲ ಫಿಲ್ಮ್ ಫೆಸ್ಟಿವಲ್ ಅಂದ್ರೆ ಬೇರೆ ಬೇರೆ ದೇಶಗಳ ಪ್ರಸಿದ್ಧ ಚಿತ್ರೋತ್ಸವಗಳ ಹೆಸರು ಹೇಳುತ್ತಿದ್ದರು. ಈಗ ಆ ಸಾಲಿನಲ್ಲಿ ಬಿಐಎಫ್ಎಫ್ ಸೇರಿಕೊಂಡಿದೆ. ಇವತ್ತು ಚಿತ್ರರಂಗದ ಮಾರುಕಟ್ಟೆ, ವ್ಯಾಖ್ಯಾನ, ವ್ಯಾಕರಣ ಬದಲಾಗುತ್ತಿರುವಾಗ, ಇಂಥ ಫೆಸ್ಟಿವಲ್‌ಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ.
– ಸಂಚಾರಿ ವಿಜಯ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ, ರಂಗಕರ್ಮಿ
4- ಕಡೆಗಳಲ್ಲಿ ಚಿತ್ರೋತ್ಸವ ಪ್ರದರ್ಶನ
7- ದಿನಗಳ ಸಿನಿಮಾ ಜಾತ್ರೆ
24- ಕನ್ನಡ ಸಿನಿಮಾಗಳು
60- ದೇಶಗಳ ಸಿನಿಮಾ
200- ಚಿತ್ರಗಳ ಪ್ರದರ್ಶನ
ಕನ್ನಡ ಚಿತ್ರಗಳು
ಮನರಂಜನೆ ವಿಭಾಗ: ಅವನೇ ಶ್ರೀಮನ್ನಾರಾಯಣ, ಬೆಲ್ ಬಾಟಂ, ಐ ಲವ್ ಯೂ ನನ್ನೇ ಪ್ರೀತ್ಸೆ, ಕಾಳಿದಾಸ ಕನ್ನಡ ಮೇಷ್ಟ್ರು, ಕವಲುದಾರಿ, ಕಿಸ್, ಮುನಿರತ್ನ ಕುರುಕ್ಷೇತ್ರ, ನಟಸಾರ್ವಭೌಮ, ಪೈಲ್ವಾನ್, ಯಜಮಾನ.
ಸ್ಪರ್ಧಾ ವಿಭಾಗ: 96, ಅಭ್ಯಂಜನ, ಬೆಲ್ ಬಾಟಂ, ಭಿನ್ನ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಕವಲುದಾರಿ, ಮುಂದಿನ ನಿಲ್ದಾಣ, ಒಂದು ಶಿಕಾರಿಯ ಕಥೆ, ಪಿಂಗಾರ, ರಾಗಭೈರವಿ, ರಂಗನಾಯಕಿ, ಸವರ್ಣದೀರ್ಘ ಸಂಧಿ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಶುಭಮಂಗಳ.
ಶೋ ಎಲ್ಲೆಲ್ಲಿ?: ಪಿವಿಆರ್ ಸಿನಿಮಾಸ್ ಒರಾಯನ್ ಮಾಲ್, ನವರಂಗ್ ಥಿಯೇಟರ್, ಡಾ. ರಾಜ್‌ಭವನ್- ಕಲಾವಿದರ ಸಂಘ, ಸುಚಿತ್ರಾ ಫಿಲ್ಮ್ ಸೊಸೈಟಿ
* ಬಿ.ಎಸ್. ಮನೋಹರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫ್ರಾನ್ಸ್ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್ ಫಿಲಿಯೋಜಾ ನಿಧನ
ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
Mangaluru; ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣ: ಇಬ್ಬರು ಖುಲಾಸೆ
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.