“ಹೇ ಸಿರಿ’ ಬೆಳಕಿನಲ್ಲಿ ನಗುವಿನ ನಾಗಾಲೋಟ
Team Udayavani, Apr 28, 2018, 4:32 PM IST
ಡ್ರಾಮಾ ಅಂದರೆ “onflict'(ಸಂಘರ್ಷ) ಎಂಬ ಒಂದು ಮಾತಿದೆ. ಆ ಮಾತಿಗೆ ಪೂರಕವಾಗುವಂತೆ ಸಮಸ್ಯೆಯಿಂದಲೇ ಶುರುವಾಗುತ್ತದೆ, ದಿವ್ಯಾ ಕಾರಂತ್ ರಚಿಸಿ ನಿರ್ದೇಶಿಸಿರುವ ಹಾಸ್ಯ ನಾಟಕ “ಹೇ ಸಿರಿ’. ಕಚೇರಿಗೆ ಹೋಗುವ ಗಡಿಬಿಡಿಯಲ್ಲಿರುವ ರೇಖಾಳ ಮೊಬೈಲ್ ಸಿಗುತ್ತಿಲ್ಲ. ಅದರ ಹುಡುಕಾಟದಲ್ಲಿದ್ದಾಗಲೇ ಮಗಳು ಸಿರಿ ಕೂಡಾ ಕಾಣೆಯಾಗಿರುವುದು ಗೊತ್ತಾಗುತ್ತೆ.
ಮಗಳು ಇಲ್ಲೇ ಎಲ್ಲೋ ಹೋಗಿರ್ತಾಳೆ ಎಂದು ಪತಿ ಸುಂದರ್ ಸಂದರ್ಭವನ್ನು ತಿಳಿಯಾಗಿಸಲು ಯತ್ನಿಸಿದ್ದು ರೇಖಾಳಿಗೆ ಎಲ್ಲಿಲ್ಲದ ಕೋಪ ತರಿಸುತ್ತದೆ. ಪತಿಯ ಅಸೀಮ ನಿರ್ಲಿಪ್ತತೆಯನ್ನು ಅವಳು ಸಹಿಸಲೊಲ್ಲಳು. ಏನು ಮಾಡಿದರೂ ಮಗಳ ಸುಳಿವು ಸಿಗದೇ ಹೋದಾಗ ಸುಂದರ್‌ಗೂ ಆತಂಕವಾಗುತ್ತದೆ. ಅದೇ ಸಮಯಕ್ಕೆ ಮಗರಾಯನ ಆಗಮನ.
ಪ್ರತಿದಿನ ಅಪ್ಪ- ಅಮ್ಮ ಆಫೀಸಿಗೆ ಹೋದಮೇಲೆ ಗರ್ಲ್ಫ್ರೆಂಡ್ ಜೊತೆ ಮನೆಗೆ ಬರುತ್ತಿದ್ದ ಅವನು ಎಂದಿನಂತೆ ಅಮ್ಮ ಮನೆಯಲ್ಲಿಲ್ಲ ಎಂದುಕೊಂಡು ಗೆಳತಿಯ ಜೊತೆಯಲ್ಲೇ ಬಂದಿದ್ದ. ಮನೆಯಲ್ಲಿ ಅಮ್ಮನನ್ನು ಕಂಡು ಗಲಿಬಿಲಿ, ನಿರಾಸೆ ಎಲ್ಲವೂ ಏಕಕಾಲಕ್ಕೆ ಉಂಟಾಗಿ ತಡಬಡಾಯಿಸುತ್ತಾನೆ. ರೇಖಾ ಮಗನನ್ನು ಆಮೇಲೆ ವಿಚಾರಿಸಿಕೊಳ್ಳೋಣ ಸದ್ಯಕ್ಕೆ ಮಗಳು ಸಿಕ್ಕರೆ ಸಾಕೆಂದು ಪ್ರಾರ್ಥಿಸುತ್ತಾಳೆ.
ತಮ್ಮ ಮಕ್ಕಳು ಯಾವ ಸಮಯದಲ್ಲಿ ಏನು ಮಾಡುತ್ತಿರುತ್ತಾರೆ, ಅವರ ಸ್ನೇಹಿತರು ಯಾರ್ಯಾರು? ಮನೆಯಿಂದ ಹೊರಗಡೆ ಅವರ ವರ್ತನೆ ಹೇಗಿರುತ್ತೆ? ಸ್ವಂತ ಮಕ್ಕಳ ಬಗ್ಗೆಯೇ ಇಷ್ಟು ಗೊತ್ತಿಲ್ಲದ, ಮಕ್ಕಳಿಗಾಗಿ ತಮ್ಮ ಜೀವನವನ್ನೇ ಸವೆಸುತ್ತಿದ್ದೇವೆಂಬ ಕಾರಣಕ್ಕೆ ಅವರು ತಮಗೆ ಋಣಿಯಾಗಿರಬೇಕೆಂದು ಅಪೇಕ್ಷಿಸುವ ತಂದೆ ತಾಯಿಗಳು, ಸ್ವೇಚ್ಚೆಯನ್ನು ಅಪೇಕ್ಷಿಸುವ ಮಕ್ಕಳು,
ಇಂಥ ಮಂದಿ ಇರುವ ಕುಟುಂಬ ಕೇವಲ ರೇಖಾ- ಸುಂದರ್ ಅವರದು ಮಾತ್ರ ಅಲ್ಲ, ಅಭಿವೃದ್ಧಿಯೆಡೆಗೆ ನಾಗಲೋಟದಲ್ಲಿರುವ ಆಧುನಿಕ ಸಮಾಜದ ಪ್ರತಿಯೊಂದು ಕುಟುಂಬದ ಪ್ರತಿರೂಪ ಈ ಕುಟುಂಬ. ಈ ನಾಲ್ವರೇ ಅಲ್ಲ. ಪ್ರೀತಿಸಿದವನನ್ನೇ ಮದುವೆಯಾಗಬೇಕಿತ್ತು ಎಂದು ಹಪಹಪಿಸುತ್ತಾ ಪರಪುರುಷರನ್ನು ಆಸೆಗಣ್ಣಿನಿಂದ ನೋಡುವ ರೇಖಾಳ ತಂಗಿ, ಮತ್ತಾಕೆಯ ಸಾಧು ಗಂಡ, ಸುಂದರ್‌ನ ಸ್ನೇಹಿತ ಮತ್ತು ಅಪ್ಪ- ಅಮ್ಮನಿಗಿಂತ ಸಿರಿಯನ್ನು ಚೆನ್ನಾಗಿ ಬಲ್ಲ ಪಕ್ಕದ ಮನೆಯ ಹುಡುಗ ಅಭಿ.
ಈ ಪಾತ್ರಗಳೆಲ್ಲವೂ ನಾಟಕಕ್ಕೆ ಓಘ ಒದಗಿಸುತ್ತದೆ. ಈ ಪಾತ್ರಗಳು ಒಂದು ಕ್ಷಣವೂ ಪ್ರೇಕ್ಷಕನನ್ನು ನಾಟಕದ ಪರಿಧಿಯಾಚೆ ಯೋಚಿಸಲು ಬಿಡುವುದಿಲ್ಲ. ಅಷ್ಟು ಬಿಗಿಯಾಗಿದೆ ನಾಟಕದ ನಿರೂಪಣಾ ಶೈಲಿ. ಸಿರಿಯನ್ನು ಹುಡುಕುವ ಪ್ರಕ್ರಿಯೆಯಲ್ಲಿ ನಾಟಕ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅಕ್ಕ- ತಂಗಿ ಇಬ್ಬರ ಕುಟುಂಬಗಳನ್ನೂ ಅಲ್ಲಾಡಿಸುವಂಥ ಕಹಿಸತ್ಯಗಳು ಬೆಳಕಿಗೆ ಬರುತ್ತವೆ.
ತಾಯಿ ರೇಖಾ ಮಗನ ಕಪಾಳಕ್ಕೆ ಬಾರಿಸಿದ ಆ ಒಂದು ಕ್ಷಣದಲ್ಲಂತೂ ಪ್ರೇಕ್ಷಕರ ನಗು ಒಮ್ಮೆಲೇ ನಿಂತುಹೋಗಿ ಗರಬಡಿದವರಂತೆ ಗಪ್‌ಚುಪ್ಪಾಗಿಬಿಡುತ್ತಾರೆ. ಇಂಥ ಹಲವು ಸನ್ನಿವೇಶಗಳು ಚಾಟಿ ಏಟಿನಂತೆ ಆಗಾಗ ಬಂದು ಹೋಗುತ್ತವೆ. ನಾಟಕದ ಪೋಸ್ಟರ್‌ನಲ್ಲಿ “ಕನ್ನಡ- ಸಂಸ್ಕೃತ ನಾಟಕ’ ಎಂದು ಬರೆದಿದ್ದನ್ನು ಓದಿ ನಾಟಕದಲ್ಲಿ ಸಂಸ್ಕೃತ ಸಂಭಾಷಣೆಯಿರಬಹುದು ಎಂದುಕೊಂಡವರೇ ಹೆಚ್ಚು.
ಆದರೆ ಇಲ್ಲಿರುವುದು ಆ ಸಂಸ್ಕೃತವಲ್ಲ, ಬೇರೆಯದೇ ಸಂಸ್ಕೃತ ಎಂದು ತಿಳಿಯಲು ಮೂರು ನಾಲ್ಕು ನಿಮಿಷಗಳು ಸಾಕು. ಗಂಭೀರವಾದ ಕಥಾವಸ್ತುವೊಂದನ್ನು ಕೈಗೆತ್ತಿಕೊಂಡಿದ್ದರ ಹೊರತಾಗಿಯೂ ಸಂಭಾಷಣೆಯ ಮೂಲಕ ಪ್ರೇಕ್ಷಕರನ್ನು ಬಿದ್ದೂ ಬಿದ್ದೂ ನಗಿಸಿರುವ ಶ್ರೇಯ ದಿವ್ಯಾ ಕಾರಂತ್‌ರಿಗೆ ಸಲ್ಲಬೇಕು. ಈ ನಾಟಕದ ವೈಶಿಷ್ಟéವೆಂದರೆ ನಗಿಸುತ್ತಲೇ ಚಿಂತನೆಗೆ ಹಚ್ಚುವುದು. ಲಘುಧಾಟಿಯಲ್ಲಿ ಸಾಗುತ್ತಿದ್ದಾಗಲೇ ನಾಟಕ ಕೆಲವೇ ಕ್ಷಣಗಳಲ್ಲಿ ಗಂಭೀರತೆ ಪಡೆದುಕೊಳ್ಳುತ್ತದೆ.
ಕೆಲವೇ ಕ್ಷಣಗಳಲ್ಲಿ ಮತ್ತೆ ಎಲ್ಲವೂ ತಿಳಿಯಾಗಿ ನಗುವನ್ನುಕ್ಕಿಸುತ್ತದೆ. ನಾಟಕದ ಪ್ರಮುಖ ಪಾತ್ರಧಾರಿ ಸಿರಿಯ ದರ್ಶನ ಎಲ್ಲೂ ಆಗದೇ ಇರುವುದು ನಾಟಕದ ಇನ್ನೊಂದು ತಂತ್ರ. ಲಕ್ಷಿ ಶ್ರೀ ಭಾಗವತರ್, ಸಂತೋಷ್ ಕರ್ಕಿ, ಅಂಜನ್ ಭಾರದ್ವಾಜ್, ವಿನುತಾ ವಿಶ್ವನಾಥ್, ಸಚಿನ್ ಶ್ರೀನಾಥ್, ದಿವ್ಯಾ ಮೂರ್ತಿ, ದರ್ಶನ್ ಗೌಡ, ಹೇಮಂತ್ ಕುಮಾರ್ ನಾಟಕದ ಪಾತ್ರವರ್ಗದಲ್ಲಿದ್ದಾರೆ. ಇವರೆಲ್ಲರ ಅಭಿನಯ ನೋಡುತ್ತಿದ್ದರೆ, ಯಾರೇ ಆದರೂ ನಕ್ಕು ಹಗುರಾಗದೆ ಬೇರೆ ಆಯ್ಕೆಯೇ ಇಲ್ಲ!
* ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.