ಬೂತಯ್ಯನ ಊರಿನಲ್ಲಿ…
"ಅನ್ನ ಅನ್ನ' ಎಂದ ಹೋಟೆಲ್ಲು, ಇತರ ಕತೆಗಳು
Team Udayavani, Dec 28, 2019, 6:14 AM IST
ದುಡ್ಡೇ ಎಲ್ಲವೂ ಅಲ್ಲ. ಪ್ರೀತಿ- ನಂಬಿಕೆ- ಮಾನವೀಯತೆಯೇ ಶಾಶ್ವತ ಎಂಬ ಜೀವನದ ಸರಳಸೂತ್ರ ಹೇಳಿದ “ಬೂತಯ್ಯನ ಮಗ ಅಯ್ಯು’ ತೆರೆಮೇಲೆ ಮೂಡಿ, ಈಗ 45 ವರ್ಷಗಳು. ಅಲ್ಲಿ ಗುಳ್ಳ ಆಗಿದ್ದ ನಟ ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿ, ನಾಡಿದ್ದಿಗೆ (ಡಿ.30) ಭರ್ತಿ 10 ವರ್ಷಗಳು. ಆ ಸರಿದು ಹೋದ ಕಾಲ, ಕಣ್ಮರೆಯಾದ ನಟನನ್ನು ಜೀವಂತವಾಗಿಟ್ಟ ಕಳಸಾಪುರ ಮಾತ್ರ ಕಣ್ಣಿನ ಮುಂದೆ ಹಾಗೆಯೇ, ಅಂದಿನ ಚೆಲುವು ತುಂಬಿಕೊಂಡೇ, ಹಳೇ ಹಾಡು ಹಾಡುತ್ತಿದೆ…
ವಿರಸವೆಂಬ ವಿಷಕೆ, ಬಲಿಯಾದೆ ಏತಕೆ?- ಈ ಹಾಡು ಕೇಳುವಾಗ, ನಾನು ಚಿಕ್ಕಮಗಳೂರಿನ ಸನಿಹವಿದ್ದೆ. ಅದು “ಬೂತಯ್ಯನ ಮಗ ಅಯ್ಯು’ ಚಿತ್ರದ ಹಾಡು. ಆ ಸಿನಿಮಾದ ಚಿತ್ರೀಕರಣವಾಗಿದ್ದು, ಅಲ್ಲಿಯೇ ಚಿಕ್ಕಮಗಳೂರಿನ ಸನಿಹದ ಕಳಸಾಪುರ ಅನ್ನೋ ಪುಟ್ಟ ಹಳ್ಳಿಯಲ್ಲಿ. ಬೂತಯ್ಯನ ಅಟ್ಟಹಾಸವನ್ನು ತೆರೆ ಮೇಲೆ ಹತ್ತಾರು ಬಾರಿ ನೋಡಿದ್ದ ನನಗೆ, ಸಿನಿಮಾದ ಶೂಟಿಂಗ್ ನಡೆದ ಪ್ರತಿ ತಾಣಗಳೂ, ಮನದೊಳಗೆ ಕಾಡುತ್ತಲೇ ಇದ್ದವು.
ಬೂತಯ್ಯ ಓಡಾಡಿದ್ದು, ಅಪ್ಪನ ಶವವನ್ನು ಅಯ್ಯು ನಿರ್ಜನ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಗುಳ್ಳನ ಮದುವೆ ದಿಬ್ಬಣ ಬಂದಿದ್ದು, “ಅನ್ನ’ “ಅನ್ನ’ ಎನ್ನುತ್ತಾ ನಾಲ್ವರು ಎರಡೇ ರೂಪಾಯಿಯಲ್ಲಿ ಫುಲ್ ಊಟ ಹೊಡೆದ ಜಾಗಗಳು, ಈಗ ಹೇಗಿವೆ ಎನ್ನುವ ಕುತೂಹಲವಿತ್ತು. ಇದೆಲ್ಲ ಯೋಚಿಸುತ್ತಲೇ ಕಾರು, ಕಳಸಾಪುರದ ಮುಖ್ಯರಸ್ತೆಗೆ ಬಂದಾಗಿತ್ತು. ಚಿತ್ರದಲ್ಲಿ ನೋಡಿದ್ದ ಅಂದಿನ ಕಳಸಾಪುರಕ್ಕೂ ಈಗಿನ ಕಳಸಾಪುರಕ್ಕೂ ಅಜಗಜಾಂತರ.
1974ನೇ ಇಸವಿಯಲ್ಲಿ ಗುಳ್ಳನ ಮದುವೆ ದಿಬ್ಬಣ ಹೋಗಿದ್ದ ರಸ್ತೆ, ಅಂದು ಬರೀ ಕಲ್ಲು- ಮಣ್ಣನ್ನು ಹಾಸಿಕೊಂಡಿತ್ತು. ಇಂದು ಅದು ಕಾಂಕ್ರೀಟ್ ಹೊದಿಸಿಕೊಂಡಿದೆ. ಅದೇ ರಸ್ತೆಯಲ್ಲಿಯೇ ಮುಂದಕ್ಕೆ ಹೋದಾಗ, ಫುಲ್ ಊಟ ಕೊಟ್ಟ ಹೋಟೆಲ್‌ನ ಜಾಗ. ಅದ್ಭುತ ಹಾಸ್ಯಮಯವಾದ ಆ ದೃಶ್ಯ ತೆಗೆದ ತಾಣ, ಸಿನಿಮಾದಲ್ಲಿ ಹೋಟೆಲ್ ಇದ್ದಿರಬಹುದು. ಆದರೆ, ಅದು ವಾಸ್ತವವಾಗಿ ಒಂದು ಕುಟುಂಬದ ಮನೆ. ಅದನ್ನು ನಿರ್ದೇಶಕ ಸಿದ್ದಲಿಂಗಯ್ಯನವರು ಜಾಣ್ಮೆಯಿಂದ ಹೋಟೆಲ್ ಆಗಿ ಮಾರ್ಪಡಿಸಿದ್ದರಂತೆ.
ಆ ಹೋಟೆಲ್, ಇಂದು ಇಬ್ಬರು ಅಣ್ಣ- ತಮ್ಮಂದಿರ ನಿಲಯ. ಎರಡು ಕುಟುಂಬಗಳು ಅಲ್ಲಿ ವಾಸಿಸುತ್ತಿವೆ. ಹೋಟೆಲ್ ಕ್ಯಾಷಿಯರ್ ಕೂತಿದ್ದ ಜಾಗ ಈಗ ಪಡಸಾಲೆಯಾಗಿದೆ. ನಾಲ್ವರು ಮುಸುಕುಧಾರಿಗಳು “ಅನ್ನ’, “ಅನ್ನ’ ಎನ್ನುತ್ತಾ ಊಟ ಮಾಡಿದ ಒಳಕೋಣೆಯೊಳಗೆ ಬೀರು, ಕುರ್ಚಿಗಳು ಬಂದು ಕುಳಿತಿವೆ. ಅಲ್ಲೇ ಇಟ್ಟ ಟಿ.ವಿ.ಯ ಮುಂದೆ ಮನೆಯವರೆಲ್ಲ ಕುಳಿತು, “ಬೂತಯ್ಯನ…’ ಚಿತ್ರವನ್ನು ಹತ್ತಾರು ಸಲ ನೋಡಿದ್ದಾರೆ. ಹಾಗೆ ನೋಡುವಾಗಲೆಲ್ಲ ಪುಟ್ಟ ಮಕ್ಕಳಿಗೆ, “ಇದು ನಮ್ಮನೆ ನೋಡ್ರೋ’ ಎಂದು ಪುಳಕಿತರಾಗಿ ಹೇಳಿದ್ದಾರೆ.
ಹೋಟೆಲ್ ದೃಶ್ಯ ಚಿತ್ರೀಕರಿಸಿದ ತಾಣದ ಪಕ್ಕದಲ್ಲಿಯೇ ಇರೋದು ಬೂತಯ್ಯನ ಮನೆ. ಆ ಚಿತ್ರದಲ್ಲಿ ಬೂತಯ್ಯನ ಮನೆ, ಊರಿನವರ ಕೋಪಕ್ಕೆ ಸಿಲುಕಿ, ಬೆಂಕಿಗೆ ಆಹುತಿಯಾಗುತ್ತದೆ. ಶೂಟಿಂಗ್ ವೇಳೆ ಮನೆಯ ಮಾಲೀಕನ ಅನುಮತಿ ಪಡೆದು, ನಿಜವಾಗಿಯೂ ಆ ಮನೆಯನ್ನು ಸುಟ್ಟಿದ್ದರಂತೆ. ಸರಿಯಾಗಿ ಬೆಂಕಿ ಹೊತ್ತಿಕೊಳ್ಳಲಿಲ್ಲ ಎಂಬ ಕಾರಣಕ್ಕೆ, ಮತ್ತೆರಡು ಸಲ ಬೆಂಕಿ ಕೊಟ್ಟು, ಮಾಡನ್ನು ಉರುಳಿಸಿದ್ದರಂತೆ.
ಅದ್ಭುತವಾಗಿ ಕಟ್ಟಿದ್ದ ಆ ಮನೆಗೆ ನಿಜವಾಗಿಯೂ ಬೆಂಕಿಯಿಟ್ಟ ಕತೆಯನ್ನು ಊರಿನವರಿಂದ ಕೇಳಿ, ನನಗೇ “ಅಯ್ಯೋ’ ಅಂತನ್ನಿಸಿತು. ಇಂದು ಅದೇ ಜಾಗದಲ್ಲಿ ಹೊಸ ಮನೆ ಎದ್ದುನಿಂತಿದೆ. “ಬೂತಯ್ಯನ ಮನೆ’ ಅಂತಲೇ ಅದಕ್ಕೂ ಕರೆಯುತ್ತಾರೆ. ಊರಿನ ಸರ್ಕಲ್‌ಗೂ “ಬೂತಯ್ಯನ ವೃತ್ತ’ ಅಂತಲೇ ಇಟ್ಟಿದ್ದಾರೆ. ಬೂತಯ್ಯನ ಮನೆಯ ಹಿಂಭಾಗದಲ್ಲಿ ಚಿತ್ರದಲ್ಲಿ ತೋರಿಸಿದ್ದ ಕೊಟ್ಟಿಗೆ, ಈಗಲೂ ಹಾಗೆಯೇ ಇದೆ. ಸ್ವಲ್ಪವೂ ಬದಲಾದಂತೆ ಕಾಣಲಿಲ್ಲ.
ಅದರಾಚೆಗಿರುವ ಗುಳ್ಳನ ಮನೆಯನ್ನು ಸ್ವಲ್ಪ ಮಾರ್ಪಾಡು ಮಾಡಿದ್ದನ್ನು ಕಂಡೆ. ಗುಳ್ಳನ ಮನೆ ರಸ್ತೆಯಲ್ಲಿಯೇ ವಾದಿರಾಜ ಸ್ವಾಮಿ ದೇವಸ್ಥಾನವಿದೆ. ಚಿತ್ರದಲ್ಲಿ ಬರುವ ಗಾಡಿ ಓಡಿಸುವ ಸ್ಪರ್ಧೆ ಮುಕ್ತಾಯ ಕಾಣುವುದು ಇದೇ ದೇವಸ್ಥಾನದ ಮುಂದೆ. ಅಂದು ಪ್ರತಿ ಮನೆಯಲ್ಲೂ ಎತ್ತುಗಳನ್ನು ಸಾಕುತ್ತಿದ್ದರು. ಎತ್ತಿನಗಾಡಿಗಳೂ ಇದ್ದವು. ಈಗ ಹಲವರ ಮನೆಗೆ ಟ್ರ್ಯಾಕ್ಟರ್, ಟಿಲ್ಲರ್‌ಗಳು ಬಂದಿವೆ.
ಅಯ್ಯು, ತನ್ನ ಅಪ್ಪ ಬೂತಯ್ಯನ ಹೆಣವನ್ನು ಗಾಡಿಯಲ್ಲಿ ತುಂಬಿಕೊಂಡು ಹೋದ ರಸ್ತೆಯಲ್ಲಿ ನಡೆದಾಡಿದಾಗ, ಈ ಊರು ಈಗಲೂ, ಹಿಂದೆಯೂ ಎಷ್ಟೊಂದು ಚೆಂದವಿತ್ತು ಅಂತನ್ನಿಸಿತು. ಗುಳ್ಳನ ಅಪ್ಪ ದೇವಯ್ಯ ನೇಣು ಹಾಕಿಕೊಂಡ ಆಲದ ಮರ, ತಂಪು ಗಾಳಿ ಬೀಸುತ್ತಿತ್ತು. ಅಂದು ಶೂಟಿಂಗ್ ಅನ್ನು ಕಣ್ಣರಳಿಸಿಕೊಂಡು ನೋಡಿದ್ದ ಚಿಣ್ಣರು, ಈಗ ಹಣ್ಣುಗೂದಲಿನ ಅಜ್ಜ- ಅಜ್ಜಿಯರು. ಅವರ ಕಂಗಳಲ್ಲಿ ಇನ್ನೂ ಚಿತ್ರದ “ನೆನಪುಗಳ ಶೋ’ ನಡೆಯುತ್ತಿತ್ತು. ಊರಿನ ಹಲವರು ಸಿನಿಮಾದಲ್ಲಿ ಜೂನಿಯರ್ ಕಲಾವಿದರಾಗಿ ನಟಿಸಿದ್ದರಂತೆ.
ಬೂತಯ್ಯನ ಮನೆ ಲೂಟಿ ಆಗುವಾಗ, ಎತ್ತಿನ ಸ್ಪರ್ಧೆ ನೋಡುವಾಗ, ಮದುವೆ ದಿಬ್ಬಣಕ್ಕೆ ಸಾಕ್ಷಿಯಾಗುವಾಗ, ಅನೇಕರು ಕಾಣಿಸಿಕೊಂಡಿದ್ದಾರೆ. ದುಡ್ಡೇ ಎಲ್ಲವೂ ಅಲ್ಲ. ಪ್ರೀತಿ- ನಂಬಿಕೆ- ಮಾನವೀಯತೆಯೇ ಶಾಶ್ವತ ಎಂಬ ಜೀವನದ ಸರಳಸೂತ್ರ ಹೇಳಿದ “ಬೂತಯ್ಯನ ಮಗ ಅಯ್ಯು’ ತೆರೆಮೇಲೆ ಮೂಡಿ, ಈಗ 45 ವರ್ಷಗಳು. ಅಲ್ಲಿ ಗುಳ್ಳ ಆಗಿದ್ದ ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿ, ನಾಡಿದ್ದಿಗೆ (ಡಿ.30) ಭರ್ತಿ 10 ವರ್ಷಗಳು. ಈ ಸಂಗತಿಗಳನ್ನೆಲ್ಲ ಜೀವಂತವಾಗಿಟ್ಟ ಕಳಸಾಪುರ ಮಾತ್ರ ಕಣ್ಣಿನ ಮುಂದೆ ಹಾಗೆಯೇ, ಅಂದಿನ ಚೆಲುವು ತುಂಬಿಕೊಂಡೇ, ಹಳೇ ಹಾಡು ಹಾಡುತ್ತಿದೆ.
ಟೆಂಟ್‌ನಲ್ಲಿ ಊರಿನವರಿಗೆ ಸ್ಪೆಷಲ್ ಶೋ!: ಬೂತಯ್ಯನ ಚಿತ್ರ ತೆರೆಕಂಡ ಮೇಲೆ, ಊರಿನವರಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಆಗ ಕಳಸಾಪುರದಲ್ಲಿದ್ದ ಬೀರಲಿಂಗೇಶ್ವರ ಎಂಬ ಟೆಂಟ್ ಚಿತ್ರಮಂದಿರದಲ್ಲಿ ಸಿನಿಮಾವನ್ನು ತೋರಿಸಲಾಗಿತ್ತು. ಪರದೆ ಮೇಲೆ ಊರನ್ನು ಕಂಡಾಗ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ, ಆ ಹೊತ್ತಿನಲ್ಲಿ ಈ ಊರಿನಲ್ಲಿ ಕರೆಂಟೇ ಇದ್ದಿರಲಿಲ್ಲ. 90ರ ದಶಕದಲ್ಲಿ ವಿದ್ಯುತ್ ಬಂದಾಗ, ಟಿ.ವಿ.ಗಳಲ್ಲಿ ಮತ್ತೆ ಬೂತಯ್ಯನ ದರ್ಶನವಾಯಿತು. ಶೂಟಿಂಗ್ ಆಗುವ ವೇಳೆ 600 ಮನೆಗಳಿದ್ದ ಊರು, ಈಗ 2 ಸಾವಿರ ಮನೆಯ ದೊಡ್ಡ ಊರಾಗಿ ಬೆಳೆದಿದೆ.
“ಬೂತಯ್ಯ…’ ಸಿನಿಮಾದ ಶೂಟಿಂಗ್ ಆಗುವಾಗ ನಾವಿನ್ನೂ ಹುಟ್ಟಿಯೇ ಇರಲಿಲ್ಲ. ಟಿವಿಯಲ್ಲಿ ಚಿತ್ರ ಬಂದಾಗಲೆಲ್ಲ, ನಮ್ಮೂರನ್ನು ನೋಡಿ ಖುಷಿಯಾಗುತ್ತದೆ. ಅಂದು 2 ತಿಂಗಳು ಶೂಟಿಂಗ್ ನಡೆದಿತ್ತು ಎಂದು ಊರಿನ ಹಿರಿಯರು ಹೇಳುತ್ತಾರೆ.
-ರಘು ಸಿ., ಕಳಸಾಪುರದ ಯುವಕ
* ರೂಪೇಶ್ ರಾಜಣ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.