ಕೇಳಿಸಿತೇ? ನಾನು ಕಲಾಸೌಧ!
Team Udayavani, Sep 16, 2017, 4:49 PM IST
ರಂಗಶಂಕರದ ಹೊರತಾಗಿ ಬೆಂಗಳೂರಿನಲ್ಲಿ ನಾಟಕಗಳಿಗೆ ಸೂಕ್ತ ವೇದಿಕೆಗಳು ಕಡಿಮೆ. ಈ ಕೊರತೆಯನ್ನು ಬಹುತೇಕ ನೀಗಿಸಿದ್ದು, ಹನುಮಂತನಗರದ ಕೆ.ಎಚ್. ಕಲಾಸೌಧ. ಬೆಟ್ಟದ ಮೇಲೆ, ಬಂಡೆಗಳ ಒಡಲಲ್ಲಿ, ದಟ್ಟ “ಹಸಿರ ಛತ್ರಿ’ಯ ನೆರಳಿನಲ್ಲಿ ನಗುತ್ತಾ ನಿಂತಿದ್ದ ಆ ಸೌಧದೊಳಗೆ ಕೇಳಿಸಿದ ಚಪ್ಪಾಳೆಗಳನ್ನು ಮರೆಯಲಾದೀತೆ!? ಆದರೆ, ಬಿಬಿಎಂಪಿಯ ಬಾಡಿಗೆ ಲೆಕ್ಕಾಚಾರದ ಕಾರಣಕ್ಕೆ ಕೆ.ಎಚ್. ಕಲಾಸೌಧದ ಒಡೆತನಗಳು ಬದಲಾದಾಗಲೆಲ್ಲ ಆ ರಂಗಮಂದಿರ ತಲ್ಲಣಿಸಿದೆ. ಕೆಲವೊಮ್ಮೆ ಅನಾಥವಾಗಿ ಬೀಗ ಜಡಿದುಕೊಂಡು, ಮೌನವಾಗಿದೆ. ಕಳೆದ 7 ತಿಂಗಳಿಂದ ಇಲ್ಲಿ ನಾಟಕಗಳೇ ನಡೆದಿಲ್ಲ. “ಕಲಾಸೌಧ ಮುಚ್ಚಬೇಡಿ’ ಎಂಬ ಕೂಗೂ ಅರಣ್ಯರೋಧನವಾಗಿತ್ತು. ಆದರೆ, ಈಗ “ಪ್ರಭಾತ್ ಟ್ರೂಪ್’ ಟೆಂಡರ್ ಪ್ರಕ್ರಿಯೆ ಮೂಲಕ ಅದರ ಉಸ್ತುವಾರಿಯ ಹೊಣೆ ಹೊತ್ತು, ಒಂದು ಭರವಸೆ ಮೂಡಿಸಿದೆ. ಇಲ್ಲಿ ಕಲಾಸೌಧವೇ ಮಾತಾದಾಗ, ಕೇಳಿಸಿದ್ದಿಷ್ಟು…
– ಪಿ.ಡಿ. ಸತೀಶ್‌ಚಂದ್ರ, ರಂಗ ಕಲಾವಿದ- ಕಿರುತೆರೆ ನಟ
ಹೌದು, ನಾನು ಕೆ.ಎಚ್. ಕಲಾಸೌಧ. ಮತ್ತೆ ಮತ್ತೆ ಅನಾಥನಾಗುತ್ತಾ, ಪುನಃ ಬೆಳಕು ಕಾಣುತ್ತಾ, ಗ್ರಹಣ ಬಿಟ್ಟ ಚಂದಿರನಂತೆ ಹೊಳೆಯುವ ಸೌಧ. ನನ್ನ ಕಥೆಯಲ್ಲಿ ಏನೂ ಕಮರ್ಷಿಯಲ… ಟ್ವಿಸ್ಟ್ ಇಲ್ಲ, ಡ್ನೂಯಟ್ ಇಲ್ಲ, ಹಿಟ್ ಆಗೋ ಯಾವುದೇ ಚಾನ್ಸ್ ಇಲ್ಲ. ಆದ್ರೂ ನಿಮ್ಮಲ್ಲಿ ಕೆಲವರಿಗಾದರೂ “ಯಾಕೆ ಮತ್ತೆ ಅನಾಥ?’ ಆಗುತ್ತೇನೆ ಅನ್ನೋ ಕುತೂಹಲಕ್ಕೋಸ್ಕರ ನನ್ನ ಕಥೆಯನ್ನ ಸೀರಿಯಲ… ಥರ ಎಳೀದೆ ಬರೀ ಶಾರ್ಟ್ ಫಿಲಂ ಥರಹ ಹೇಳ್ತೀನಿ ಕೇಳಿ.
2004ರಲ್ಲಿ ನನ್ನ ಜನನವಾಯಿತು. ನಾನಿದ್ದ ಕಡೆ, ಬಂಡೆ, ಮೆಟ್ಟಿಲು ಮತ್ತೆ ಪ್ರೇಮಿಗಳು ಸೇರೋ ಗಿಡಗಳಿದ್ದವಂತೆ. ಆದರೆ, ಮಾಜಿ ಮಹಾ ಪೌರರು ಮತ್ತು ಹಲವು ಬಾರಿ ನಾನಿರುವ ಹನುಮಂತನಗರದ ಕಾರ್ಪೋರೇಟರ್ ಆದ ಮಾನ್ಯ ಚಂದ್ರಶೇಖರ್‌ರವರ ಕನಸು ನಾನಾಗಿ ನಾನು ಅವರ ನನಸಾದ ವರ್ಷ. ನಂತರ ಅನೇಕ ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳಿಗೆ ಕೆಲವು ಬಾರಿ ನನ್ನ ಬಾಗಿಲನ್ನು ತೆಗೆದು ಮತ್ತೆ ಮುಚ್ಚುತ್ತಿದ್ದರು. ಹಾಗೆ ಒಂದೆರಡು ವರ್ಷವಾದ ಮೇಲೆ ನನ್ನ ಜೀವನಕ್ಕೆ ಕಾರಣವಾದ ಸಾಕು ತಂದೆ ಬಿ.ಬಿ.ಎಂ.ಪಿ.ಗೆ ನನ್ನ ಕಡೆ ಗಮನ ಕೊಡೋದು ಕಷ್ಟ ಆಯ್ತು ಅನ್ಸುತ್ತೆ, ಪಾಪ ಏನು ಕೆಲಸಾನೋ ಏನೋ? ಇಷ್ಟು ದೊಡ್ಡ ಊರು ನೋಡ್ಕೊàಬೇಕು, ನನ್ನ ಕಡೆ ಗಮನ ಮುಗಿದೇ ಹೋಯ್ತು. ಯಾರಿಗೂ ಬೇಕಾಗದೆ, ಗೂಬೆ, ಬಾವಲಿ, ಪಾರಿವಾಳ, ಬೆಕ್ಕು, ನಾಯಿ ಮತ್ತು ಬೆಕ್ಕಿನ ಸೈಜ್ ಇರೋ ಹೆಗ್ಗಣಗಳಿಗೆ ಆಶ್ರಯವಾಗಿ ನನ್ನ ಜೀವನ ಸಾಗಿತ್ತು. ಯಾವಾಗ್ಲೋ ಅವರಿಗೆ ಬೇಕಾದಾಗ ಬರೋ ಸೆಕ್ಯೂರಿಟಿ ಮಾತಾಡ್ಕೊಳ್ಳೋದು ಕೇಳಿಸ್ಕೊಂಡಿದ್ದೆ, ನನ್ನ ಥರಹ ಸುಮಾರು ಸಾಕುಮಕ್ಕಳು ಇದೇ ಥರ ಅನಾಥರಾಗಿದಾರೆ ಅಂತ, ಆಗ್ಲೆ ಗೊತ್ತಾಗಿದ್ದು ಅನಾಥ ಅಂದ್ರೆ ಏನೂ ಅಂತ!
ಬೇರೆ ಮಕ್ಕಳ ಕಥೆ ಕೇಳಿದ್ರೆ ನನ್ನ ಕಥೇನೆ ವಾಸಿ ಅನ್ನಿಸ್ತಿತ್ತು. ಈ ಸೆಕ್ಯೂರಿಟಿ ಇಲ್ಲದಿರೋ ಸಮಯ ನೋಡಿ ಕಳ್ಳರು ಒಳಗೆ ಬಂದು ನನ್ನ ಕಟೈìನ್ ಹರಿದು, ಅದರಿಂದ ಶಾಲು- ಬೆಡ್ ಶೀಟ… ಮಾಡಿಕೊಂಡರು. ನನ್ನ ಪಾಲಿಶ್ ಎಣ್ಣೆ ಕಾಣದ ಸ್ಟೇಜ್ ಮುಂದೆ ಬೆಂಕಿ ಹಾಕಿ ಅಡುಗೇನೂ ಮಾಡಿದರು. ಕದಿಯೋಕೆ ಏನೂ ಇಲ್ಲ ಅಂತ ಅಲ್ಲಿದ್ದ ಕಟೈìನ್ ಮೋಟಾರೂ, ಭಾರಕ್ಕೆ ಅಂತ ಇಟ್ಟಿರೋ 30 ಕೆ.ಜಿ. ಬೊಟ್ಟುಗಳು, ಸಿಕ್ಕ ಎಲ್ಲಾ ಕಬ್ಬಿಣದ ತುಂಡುಗಳನ್ನ ಹೊತ್ತೂಯ್ದರು. ಬಾಗಿಲಿಗೆ ಹಾಕಿರೋ ಬೀಗ ಕೂಡ ಬಿಡಲಿಲ್ಲ!ಇಷ್ಟರಲ್ಲಿ ನನ್ನ ಕೇಬಲ್‌ಗಳೆಲ್ಲಾ ಊಟದ ಪ್ರಾಕ್ಟೀಸ್ ಮಾಡೋ ಬೆಕ್ಕಿನ ಸೈಜ್ ಇರೋ ಹೆಗ್ಗಣಗಳಿಗೆ ಬಲಿಯಾಗಿತ್ತು. ತಿಳಿಗಂದು ಬಣ್ಣದ ನನ್ನ ಕಾಪೆìಟ… ಮೇಲೆ 2 ಇಂಚು ಧೂಳು ಕೂತು ಕಪ್ಪಾಗಿತ್ತು. ಬಿಳಿಯ ಟೈಲ್ಸ… ಕಪ್ಪು ಧೂಳಿನ ನಡುವೆ ಹುಗಿದುಹೋಗಿತ್ತು. ನಾನು ಕೂಡ ನನ್ನ ತಂದೆಯ ಅನೇಕ ಸಾಕುಮಕ್ಕಳಂತೆ ನೆಲಸೇರಬಹುದು ಎಂಬ ಭಯವು… ಈಗ ಆಸೆಯಾಗಿ ನಿಂತಿತ್ತು.
2009ರಲ್ಲಿ ಯಾರೋ ಪ್ರಕಸಂ ಅನ್ನೋ ತಂಡದವರು ಬಂದ್ರು, ಮೇ ತಿಂಗಳಲ್ಲಿ ನನ್ನ ಬಾಗಿಲು ಸುಮಾರು ಎರಡು ವರ್ಷಗಳ ನಂತರ ತೆಗೆಯಿತು. ಒಳಗೆ ಬಂದ ರಾಮಾಂಜನೇಯ ಗುಡªದ ತಂಪಾದ ಗಾಳಿ ಕುಡಿದ ನನಗೂ ಜೀವ ಬಂದಹಾಗಾಯ್ತು. ಆದ್ರೂ ಮನದಲ್ಲಿ ಅಳುಕು, ನಾನೋ ವರ್ಷಾನುಗಟ್ಟಲೆ ಕಟ್ಟಿಕೊಂಡಿರೋ ಕೊಳೆ, ಕಸ, ಧೂಳು ಇವನ್ನೆಲ್ಲ ಎಲ್ಲೆಲ್ಲಿ ಸಾಧ್ಯಾನೋ ಅಲ್ಲೆಲ್ಲಾ ತುಂಬಿಸಿಕೊಂಡಿದ್ದೆ. ನನ್ನಲ್ಲಿರೋ ಕೇಬಲ್ಲು, ಲೈಟ್ಸು, ಜನರೇಟರು, ಎ.ಸಿ. ಏನೂ ಕೆಲಸ ಮಾಡ್ತಿಲ್ಲ. ಇವರು ಮುನಿಸಿಕೊಂಡು ಹೋದರೆ ಏನು ಕಥೆ ಅನ್ನಿಸ್ತು ಅಥವಾ ನನ್ನ ಸಮಯ ಮುಗಿದಿದೆ, ನನ್ನ ಮಣ್ಣು ಮಾಡೋಕೆ ಬಂದವರಾ ಅನ್ನಿಸ್ತು, ಇಲ್ಲಾ ನನಗೆ ಮೇಕಪ್ ಮಾಡಿ ಬೇರೇ ಏನಾದ್ರೂ ಮಾಡಬಹುದಾ ಎಂಬ ಕುತೂಹಲ ಕೂಡ ಬಂತು. ಒಳಗೆ ಬಂದ ಈ ತಂಡದವರೂ ನಮ್ಮ ಸೆಕ್ಯೂರಿಟಿ ತರಹ, “ಛೇ ಎಂಥಾ ಜಾಗ! ಹೀಗಾಗಿದೆಯಲ್ಲಾ?’ ಅಂತ ಬೇಜಾರು ಮಾಡಿಕೊಂಡರು. ಆಮೇಲೆ ಹೊರಟರು. ತಿಂಗಳಾದಮೇಲೆ ಏನೂ ಆಗಲಿಲ್ಲ ಅನ್ನೋದು ಗೊತ್ತಾದಮೇಲೆ ಮತ್ತದೇ ಬೇಸರ, ಅದೇ ಪ್ರಾಣಿಗಳು, ಅದೇ ಸೆಕ್ಯೂರಿಟಿ, ಅವರಿಗಿಂತ ಹೆಚ್ಚು ಬರೋ ಕಳ್ಳರು, ಕಳ್ಳ ಪ್ರೇಮಿಗಳು, ಮತ್ತೆ ನನ್ನ ಎಂದೂ ಮುಗಿಯದ ನನ್ನ ಕೊನೆಯ ಕನಸು.
2009ರ ಡಿಸೆಂಬರ್, ಮತ್ತೆ ಪ್ರಕಸಂ ತಂಡ ಬಂದರು, ನಾನು “ಇವರು ಮತ್ತೆ ಯಾಕಪ್ಪಾ$ಬಂದ್ರು?’ ಅಂದುಕೊಳ್ಳೋ ಅಷ್ಟರಲ್ಲಿ 20 ಜನ ಕೆಲಸಾ ಮಾಡೋರನ್ನ ಕರಕೊಂಡು ಬಂದ್ರು. ಕರೀ ನಾಯೀನ ಬಿಳೀ ನಾಯಿ ಮಾಡೋ ಥರಹ ನನ್ನ ಇಂಚಿಂಚೂ ಬಿಡದೆ ತಿಕ್ಕೀ ತಿಕ್ಕೀ ತೊಳೆದರು. ಪ್ರಾಣಿಗಳನ್ನೆಲ್ಲಾ ಹೊರಕ್ಕೆ ಹಾಕಿ ಇವರು ಬಂದರು. ಕೆಲಸ ಮಾಡದ ಎಲ್ಲಾ ನನ್ನ ಅಂಗಗಳಿಗೆ ಅವು ಇದೆ, ಅದಕ್ಕೆ ಇದೇ ಕೆಲಸ ಅಂತ ತೋರಿಸಿಕೊಟ್ರಾ.
ಹೊಸತ್ರಲ್ಲಿ ಅಗಸ ಎತ್ತೆತ್ತಿ ಒಗೀತಾನೆ ಅಂತ ನಾನೂ ಪ್ರಾಣಿ ಸ್ನೇಹಿತರನ್ನೆಲ್ಲಾ ಕಳೆದುಕೊಂಡಿದ್ದರೂ, ಮತ್ತೆ ಮೊದಲಿನ ಥರಹ ಆಗ್ತಿರೋ ಸಂತೋಷದಲ್ಲಿದ್ದೆ. ಸರಿ, ಇವರು ಮೊದಲಿನ ಥರಹ ಕಾರ್ಯಕ್ರಮಗಳನ್ನ ಮಾಡ್ತಿರಲಿಲ್ಲ. ಏನೋ ನಾಟಕ ಅಂತೆ, ಭಾವಗೀತೆಯಂತೆ, ಕಿರುಚಿತ್ರವಂತೆ, ನೃತ್ಯವಂತೆ, ಅಭ್ಯಾಸವಂತೆ, ಕಲೆಯಂತೆ ಇಷ್ಟೇ ಅಲ್ಲ, ನನ್ನ ಹೊರಗಿರೋ ಗೋಡೆಮೇಲೆ ಆನೆ ಚಿತ್ರ ಬರೆದ್ರಲ್ಲಾ, ಆಗ ನನಗೆ ಇವರ ಮೇಲೆ ವಿಶ್ವಾಸ ಬಂತು, ಇವರು ಅಗಸರಲ್ಲಾ, ನನ್ನ ಅರಸನನ್ನಾಗಿ ಮಾಡೋಕೆ ಬಂದವರು ಅಂತ! 5 ವರ್ಷ ನನ್ನ ಲೀಸ್‌ಗೆ ತೊಗೊಂಡಿದಾರೆ ಅಂದಮೇಲೆ ಸಾಮಾನ್ಯರಲ್ಲಾ ಅಂತ ಅಂದುಕೊಂಡೆ. ನನ್ನ ಸಾಕುತಂದೆಗೆ ಬೇಡವಾಗಿರೋ ನನ್ನ ಇಷ್ಟೊಂದು ಪ್ರೀತಿ ಯಾರೂ ಮಾಡಿರಲಿಲ್ಲ. ಬರೀ ಒಳಗಲ್ಲ, ಕೆಳಗಿರೋ ಹಾಲ್ ಹೊರಗಿನ ಮೆಟ್ಟಿಲು ಎಲ್ಲಾ ಕಡೆ ಕಲೆಯ ಹೊಳೆ. ನನಗೆ ಕಲಾ ಸೌಧ ಎಂದು ಏಕೆ ಹೆಸರಿಟ್ಟಿದ್ದರೆ ಅಂತ ಈಗ ನನಗೆ ಗೊತ್ತಾಯ್ತು.
ಮೊದಲಿಗೆ ಬಂದ ಜನರು ಕಡಿಮೆ ಇದ್ರೂ ಒಂದು ವರ್ಷ ಮುಗಿಯೋ ಹೊತ್ತಲ್ಲಿ ನನ್ನ ಹೆಸರು ಪ್ರತೀ ಪೇಪರ್‌ನ ನಗರದಲ್ಲಿ ಇಂದು ಕಾಲಂನಲ್ಲಿ ಪ್ರತೀದಿನ ಬರೋಹಾಗಾಯ್ತು. ವಿದೇಶ, ದೇಶ, ಶಾಲೆ, ಕಾಲೇಜು, ನಾಟಕ ಸ್ಪರ್ಧೆ ಇನ್ನೂ ಏನೇನೋ. ಇದೆಲ್ಲಾ ಗೊತ್ತೇ ಇರದ ನನಗೆ ದಿನಕ್ಕೊಂದು ರಸದೂತಣ.
All good things must come to an end ಅನ್ನೋ ಗಾದೆ ಮಾತಿನಂತೆ ಫೆ.5, 2017 ಬಂತು. ನನ್ನನ್ನು ಸಾಕಿದ ಅಪ್ಪನಿಗೆ ನಾನು ಇದ್ದಕ್ಕಿದ್ದಹಾಗೆ ಬೇಕಾದೆ, ನನ್ನಿಂದ ಸಂಪಾದನೆ ಮಾಡಬಹುದು ಅನ್ನೋದು ಗೊತ್ತಾಗಿದೆ, ಅದಕ್ಕೆ ಹೀಗೆ ಅಂತ ಪ್ರಕಸಂನ ತಂಡದವರು ಕೊರಗಿದ್ದು ಇನ್ನೂ ನನ್ನ ಕಿವೀನಲ್ಲಿ ಕೊರಗಿದೆ. ಅವರೂ 2014ರಲ್ಲಿ ಲೀಸ್ ಮುಗಿದ ಮೇಲೆ 2017ರ ವರೆಗೂ ನನ್ನ ಸಾಕುತಂದೆ ಕೈಕಾಲು ಹಿಡಿದು, ಕಾಡಿ ಬೇಡಿ ನನ್ನ ಬೀಚ್ ರಿಸಾರ್ಟ್ ಅನ್ನು ಉಳಿಸಿಕೊಳ್ಳೋ ಪ್ರಯತ್ನಮಾಡಿದ್ರಂತೆ. ನನ್ನ ಮುಂದೆ ನಾಟಕ, ಸಂಗೀತದ ಹೋರಾಟ ಕೂಡ ಮಾಡಿ, ಸಾಕುತಂದೆಯ ಕಡೆಯ ದೊಡ್ಡ ತಂಡ ಬಂದು ಕಣ್ಣೊರೆಸಿ ಹೋಗಿದ್ದು ನಾನೂ ನೋಡಿದೆ. ಮತ್ತೆ ಮಾರ್ಚ್, ಏಪ್ರಿಲ…, ಮೇ… ತಿಂಗಳು ಉರುಳುತ್ತಾ ಹೋಯ್ತು. ಪ್ರಕಸಂನವರು ಕೈಕಟ್ಟಿರೋ ಕೈದಿಯ ಥರಹ ನನ್ನ ಮುಂದೆ ನಿಲ್ಲೋದು ನೋಡಿದ್ರೆ ಬೇಜಾರಾಗುತ್ತೆ.
ಈಗ ವಾರದ ಹಿಂದೆವರೆಗೂ ಮತ್ತದೇ ಬೇಸರ, ಅದೇ ಪ್ರಾಣಿಗಳು, ಅದೇ ಸೆಕ್ಯೂರಿಟಿ, ಅವರಿಗಿಂತ ಹೆಚ್ಚು ಬರೋ ಕಳ್ಳರು, ಕಳ್ಳ ಪ್ರೇಮಿಗಳನ್ನು ನೋಡಿದೆ. ಆದರೆ, ಈಗೊಂದು ನನ್ನ ಕಿವಿಗೆ ಬಿದ್ದಿದೆ; ಪ್ರಭಾತ್ ಟ್ರೂಪ್‌ನವರು ನನ್ನನ್ನು ನೋಡಿಕೊಳ್ಳುವ ಹೊಣೆ ಹೊತ್ತಿದ್ದಾರಂತೆ. ದಿಢೀರನೆ ಎದುರಾಗಿದ್ದ ಅನಾಥ ಭಾವ, “ಪ್ರಭಾತ್’ ಮೂಲಕ ಕಳಚಿಕೊಳ್ಳುತ್ತಿದೆಯೆಂಬ ಆಶಾಭಾವ ನನ್ನದು. ನನಗೆ ಮತ್ತೆ ವೈಭವದ ಕಳೆ ಬರುತ್ತದೆ. ನಾಟಕ, ನೃತ್ಯ- ಸಂಗೀತ ಸವಿಯುತ್ತಾ ನೀವು ನನ್ನೆದುರಿಗೆ ಚಪ್ಪಾಳೆ ಹೊಡೆಯುತ್ತೀರಿ. “ನಗರದಲ್ಲಿ ಇಂದು’ ಕಾಲಂನಲ್ಲಿ ಮತ್ತೆ ನನ್ನದೇ ಹೆಸರು ಓಡಾಡುತ್ತೆ.
ಇತಿ ನಿಮ್ಮ
ಕೆ.ಎಚ್. ಕಲಾಸೌಧ
ನಾಟಕದಿಂದ ವೋಟು ಬೀಳ್ಳೋದಿಲ್ಲ!
ಫೆಬ್ರವರಿಯಿಂದ ಕಲಾಸೌಧದಲ್ಲಿ ಯಾವುದೇ ನಾಟಕಗಳು ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಕನ್ನಡ ನಾಟಕಗಳನ್ನು ನಡೆಸಲು ಇರುವಂಥ ಜಾಗಗಳು ಕೆಲವೇ ಕೆಲವು. ಬಿಬಿಎಂಪಿ ಅವರಿಗೆ ಕಲಾಸೌಧದಿಂದ ಬಂದ ಬಾಡಿಗೆಯನ್ನೇ ನಂಬಿಕೊಳ್ಳುವಂಥ ಅಗತ್ಯ ಏನಾದರೂ ಇದೆಯಾ? ಎಷ್ಟೋ ಮಂದಿ ಶ್ರೀಮಂತರು ಬಿಬಿಎಂಪಿಗೆ ತೆರಿಗೆ ಕೊಡದೇ ಕುಳಿತಿದ್ದಾರೆ. ಅಂಥದ್ದರಲ್ಲಿ ಕಲಾಸೌಧವನ್ನೇ ಗುರಿಯಾಗಿಸಿದ್ದೇಕೆ? ಯಾಕಂದ್ರೆ, ನಾಟಕ ಮಾಡುವುದರಿಂದ ಅವರಿಗೆ ವೋಟು ಬೀಳುವುದಿಲ್ಲ. ಕಲಾಸೌಧದಿಂದ ರಾಜಕೀಯ ಲಾಭವಿಲ್ಲ. ಹಾಗಾಗಿ, ಈ ರೀತಿಯ ಅಸಡ್ಡೆ. ರಂಗಭೂಮಿ ಹಿನ್ನೆಲೆಯವರು ಸಚಿವರಾಗಿದ್ದಾರೆ, ರಾಜ್ಯಸಭೆಯಲ್ಲಿದ್ದಾರೆ. ಆದರೆ, ಅವರೂ ಈ ಕುರಿತು ಧ್ವನಿಯೆತ್ತಿಲ್ಲ. ಕನ್ನಡದ ರಂಗಭೂಮಿ ಕಲಾವಿದರಿಗೆ ಕರ್ನಾಟಕ ಸರ್ಕಾರದಿಂದಲೇ ಬೆಂಬಲ ಸಿಗುವುದಿಲ್ಲ ಅಂದರೆ ಏನು ಮಾಡೋಣ? ಈಗ ಪ್ರಭಾತ್ ಟ್ರೂಪ್‌ನವರಿಗೆ ಗುತ್ತಿಗೆಗೆ ನೀಡಿದ್ದಾರೆ ಎಂಬ ಸುದ್ದಿಯಿದೆ. ಹಾಗಾದರೂ ಮತ್ತೆ ಕಲಾಸೌಧದಲ್ಲಿ ಕನ್ನಡ ನಾಟಕಗಳು ನಡೆಯುವಂತಾಗಲಿ.
– ರಾಜೇಂದ್ರ ಕಾರಂತ್, ಪ್ರಸಿದ್ಧ ರಂಗಕರ್ಮಿ
ಹೊಸ ಪೀಳಿಗೆಯ ಕನಸುಗಳಿಗೆ ವೇದಿಕೆ
ಕೆ.ಎಚ್. ಕಲಾಸೌಧ ಬೆಂಗಳೂರಿನ ಸಾಂಸ್ಕೃತಿಕ ನಕಾಶೆಯಲ್ಲಿ ಕಳೆದ ಐದಾರು ವರ್ಷಗಳಿಂದ ಬಹುಮುಖ್ಯ ತಾಣವಾಗಿ ಬೆಳೆದಿದೆ. ಅನೇಕ ಹೊಸ ನಾಟಕಗಳು, ಹೊಸ ತಲೆಮಾರಿನವರ ಕನಸುಗಳಿಗೆ ವೇದಿಕೆಯಾಗಿದೆ. ಇಂಥದ್ದೊಂದು ತಾಣಕ್ಕೆ ಕಳೆದ ಕೆಲವು ತಿಂಗಳಿಂದ ಬೀಗಮುದ್ರೆ ಬಿದ್ದಿತ್ತು. ಇದರಿಂದಾಗಿ ಕನ್ನಡದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ತೊಂದರೆ ಆಗಿತ್ತು.
ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯನ್ನು ಸಕಾಲಕ್ಕೆ ಮುಗಿಸದೇ ಹೋದದ್ದು ಮತ್ತು ರಂಗಭೂಮಿಯ ಅರಿವಿಲ್ಲದ ಜನ ಟೆಂಡರ್ ಪಡೆದುಕೊಂಡದ್ದು ಅನೇಕ ತೊಂದರೆಗೆ ಕಾರಣವಾಗಿತ್ತು. ಹೀಗಾಗಿ ಪ್ರ.ಕಾ.ಸಂ. ಸಂಸ್ಥೆಯು ಸುಮಾರು ಐದಾರು ವರ್ಷ ಕಷ್ಟಪಟ್ಟು ಬೆಳೆಸಿದ್ದ ಪ್ರೇಕ್ಷಕರ ಸಮೂಹ ಮತ್ತು ಅಲ್ಲಿ ಪ್ರದರ್ಶನ ನೀಡುತ್ತಿದ್ದ ಹಲವು ತಂಡಗಳು ತೊಂದರೆ ಅನುಭವಿಸಿದ್ದವು.
ಈ ಎಲ್ಲಾ ಸಮಸ್ಯೆ ನಿವಾರಣೆಯಾಗುವಂತೆ ಈಗ ನಮ್ಮ ನಾಡಿನ ಹೆಸರಾಂತ ರಂಗಭೂಮಿ ತಂಡ ಪ್ರಭಾತ್ ಕಲಾವಿದರು ಟೆಂಡರ್ ಪ್ರಕ್ರಿಯೆ ಮೂಲಕ ಕೆ.ಎಚ್. ಕಲಾಸೌಧದ ನಿರ್ವಹಣೆ ಪಡೆದಿದ್ದಾರೆ. ಇದು ಸಂತೋಷದ ವಿಷಯ. ಈ ಹೊಸ ನಿರ್ವಾಹಕರು ಸೌಧದ ಬಾಡಿಗೆಯನ್ನು ಕೈಗೆಟಕುವಂತೆ ಇರಿಸಬೇಕು. ಕನ್ನಡ ಹವ್ಯಾಸಿ ರಂಗ ತಂಡಗಳಿಗೆ ಆದ್ಯತೆ ನೀಡಬೇಕು.
– ಬಿ. ಸುರೇಶ, ಕಿರುತೆರೆ ನಿರ್ದೇಶಕ
ಟೆಂಡರ್ ಪ್ರಕ್ರಿಯೆ ಮೂಲಕ ಕೆ.ಎಚ್.ಕಲಾಸೌಧದ ಉಸ್ತುವಾರಿ ನಮಗೆ ಸಿಕ್ಕಿದೆ. ಬಿಬಿಎಂಪಿ ಮತ್ತು ನಮ್ಮ ನಡುವೆ ಕೆಲವು ಲೀಗಲ್ ಪ್ರಕ್ರಿಯೆಗಳು ಇನ್ನೂ ಬಾಕಿ ಉಳಿದಿವೆ. ಅದೆಲ್ಲಾ ಮುಗಿಯಲು ಇನ್ನೂ 10-15 ದಿನ ಬೇಕಾಗುತ್ತದೆ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ನವೀಕರಣ ಮುಂತಾದ ಕೆಲಸಗಳು ಆಗಬೇಕಿರುವುದರಿಂದ ನವೆಂಬರ್‌ನಿಂದ ಮತ್ತೆ ನಾಟಕಗಳನ್ನು ಶುರು ಮಾಡುವ ಯೋಚನೆಯಿದೆ.
-ವಿಜಯ್, ಪ್ರಭಾತ್ ಟ್ರೂಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.