ನಗೂ ಎಂದಿದೆ “ನಿಮ್ಹಾನ್ಸ್’
ಮುಳ್ಳಿನ ತೋಟದ ಮಲ್ಲಿಗೆ ಹೂಗಳು
Team Udayavani, Feb 29, 2020, 6:12 AM IST
ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. “ಹುಚ್ಚಾಸ್ಪತ್ರೆ’ ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ. ನಾವೆಷ್ಟು ಪೂರ್ವಾಗ್ರಹಪೀಡಿತರಾಗಿದ್ದೇವೆ, ನಮ್ಮ ಅಭಿಪ್ರಾಯಗಳು ಅದೆಷ್ಟು ಸುಳ್ಳು ಎಂದು ತಿಳಿಯಲು ನಿಮ್ಹಾನ್ಸ್‌ಗೆ ಭೇಟಿ ಕೊಡಬೇಕು…
ಅವೆನ್ಯೂ ರಸ್ತೆಯಲ್ಲಿ, “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಕಟ್ಟಡವಿರುವ ಜಾಗದಲ್ಲಿ 1847ರಲ್ಲಿ ರಾಜ್ಯದ ಮೊತ್ತ ಮೊದಲ ಮಾನಸಿಕ ಚಿಕಿತ್ಸಾ ಕೇಂದ್ರ ಶುರುವಾಗಿತ್ತು. ಬ್ರಿಟಿಷ್ ಸೈನಿಕರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಶುರುವಾದ ಈ ಕೇಂದ್ರಕ್ಕೆ ಊಹಿಸಿದ್ದಕ್ಕಿಂತ ಹೆಚ್ಚಿನ ಮಂದಿ ದಾಖಲಾದರು, ನಾಗರಿಕರೂ ಬರತೊಡಗಿದರು. ಆಗ ಇನ್ನೂ ದೊಡ್ಡ ಸ್ಥಳ ಬೇಕೆಂದಾಗ ಮೈಸೂರು ಮಹಾರಾಜರು, ಲಕ್ಕಸಂದ್ರದ ಬಳಿ ಜಾಗ ಮಂಜೂರು ಮಾಡಿದರು. 1937ರಲ್ಲಿ ನಿಮ್ಹಾನ್ಸ್(ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೊ ಸೈನ್ಸಸ್) ಈಗಿರುವ ಸ್ಥಳದಲ್ಲಿ ಕಾರ್ಯಾರಂಭಿಸಿತು. ಅಂದಿನಿಂದಲೂ ನಿಮ್ಹಾನ್ಸ್, ಬೆಂಗಳೂರಿನ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಬಹಳ ಹಿಂದೆ ಬೆಂಗಳೂರಿನ ಜನರು ಪಿಕ್‌ನಿಕ್ ಮಾಡಲೆಂದೇ ತಿಂಡಿ ಪ್ಯಾಕ್ ಮಾಡಿಕೊಂಡು ಕುಟುಂಬಸಮೇತರಾಗಿ ಬರುತ್ತಿದ್ದರಂತೆ.
ಆಗಿನ್ನೂ ಹೊಸೂರು ರಸ್ತೆ ನಿರ್ಮಾಣವಾಗಿರಲಿಲ್ಲ. ಹಾಗಾಗಿ ವಾಹನ ಸಂಚಾರ ವಿರಳವಿತ್ತು. 25 ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ನಿಮ್ಹಾನ್ಸ್‌ನಲ್ಲಿರುವ ಸಸ್ಯ ಸಂಪತ್ತು ಇಂದಿಗೂ ವಿಸ್ಮಯ ಹುಟ್ಟಿಸುತ್ತದೆ. ಆಲದ ಮರ, ಅರಳಿ ಮರ, ಮಾವು, ಹಲಸು, ಹೂ ಬಿಡುವ ವಿದೇಶಿ ಗಿಡಗಳು ಮಾತ್ರವಲ್ಲದೆ ಶುದ್ಧ ಗಾಳಿ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣವಾಗುವ ಮರಗಳನ್ನೂ ಇಲ್ಲಿ ಕಾಣಬಹುದಾಗಿದೆ. ಇಲ್ಲಿನ ಮ್ಯೂಸಿಯಂನಲ್ಲಿ ನಿಮ್ಹಾನ್ಸ್‌ನ ಇತಿಹಾಸ, ಅಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಯಂತ್ರಗಳು, ವಿಧಾನಗಳ ಮಾಹಿತಿ ಮುಂತಾದುದರ ಮಾಹಿತಿ ಪಡೆಯಬಹುದು. ಆಡಿಯೋ ವಿಶುವಲ್ ಸೌಲಭ್ಯವೂ ಇರುವುದರಿಂದ ಟಚ್‌ಸ್ಕ್ರೀನ್‌ನ ಸಹಾಯದಿಂದ ಡಿಜಿಟಲ್ ಮಾಹಿತಿಯನ್ನೂ ಪಡೆಯಬಹುದು. ನಿಮ್ಹಾನ್ಸ್ ಕುರಿತಾದ ಕಿರುಚಿತ್ರಗಳನ್ನೂ ಅಲ್ಲಿ ವೀಕ್ಷಿಸಬಹುದು.
ಯೋಗ ಚಿಕಿತ್ಸೆ: ಯೋಗ ಚಿಕಿತ್ಸಾ ವಿಭಾಗ ಇತ್ತೀಚಿಗೆ ಶುರುವಾಗಿದ್ದು ರೋಗಿಗಳಿಗೆ ಯೋಗ ಶಿಕ್ಷಣದ ಮೂಲಕ ಚಿಕಿತ್ಸೆ ನೀಡುವ ಕೆಲಸದಲ್ಲಿ ನಿರತವಾಗಿದೆ. ಈ ಯೋಗ ಕೇಂದ್ರದ ವೈಶಿಷ್ಟವೆಂದರೆ ಇಲ್ಲಿ ರೋಗಿಗಳಿಗೆ ಮಾತ್ರವೇ ಅಲ್ಲ, ಅವರ ಮನೆಯವರಿಗೂ ಯೋಗದ ಮೂಲಕ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಬಗೆಯನ್ನು ಕಲಿಸಿಕೊಡಲಾಗುತ್ತದೆ. ಮಾನಸಿಕ ರೋಗದಿಂದ ಬಳಲುತ್ತಿರುವವರಿಗೆ ಸಿಗುವ ಅತ್ಯುತ್ತಮ ಚಿಕಿತ್ಸೆ ಅವರ ಸುತ್ತಮುತ್ತಲಿನವರಿಂದಲೇ ಲಭ್ಯವಾಗುತ್ತದೆ. ದಿನಂಪ್ರತಿ ರೋಗಿಗಳ ಜೊತೆ ಇರುವವರು ಅವರ ಮನೆಯವರೇ ಆಗಿರುವುದರಿಂದ ಅವರ ಮೇಲೂ ಜವಾಬ್ದಾರಿ, ಒತ್ತಡವಿರುತ್ತದೆ. ಮನೋರೋಗಿಗಳನ್ನು ಸಂಭಾಳಿಸುವುದು ಸುಲಭವಲ್ಲ ಅಪಾರ ಮಾನಸಿಕಸ್ಥೈರ್ಯ ಮತ್ತು ತಾಳ್ಮೆ ಬೇಕಾಗುತ್ತದೆ. ಹೀಗಾಗಿ ರೋಗಿಯ ಮನೆಯವರಿಗೂ ಯೋಗ ಚಿಕಿತ್ಸೆ ನೀಡುವುದರಿಂದ ಅವರನಲ್ಲಿನ ಒತ್ತಡ ಕಳೆದು ಮನಸ್ಸು ಹಗುರಾಗುತ್ತದೆ.
ಯಾತನಾ ರಹಿತ ಕರೆಂಟ್ ಶಾಕ್: ಆಕ್ರಮಣಕಾರಿ ವರ್ತನೆ ತೋರುವ ಮಾನಸಿಕ ಅಸ್ವಸ್ಥರಿಗೆ ಕರೆಂಟ್ ಶಾಕ್ ನೀಡುವ ದೃಶ್ಯವನ್ನು ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಬಹುತೇಕರು ನೋಡಿಯೇ ಇರುತ್ತಾರೆ. ಅದನ್ನು “ಇಸಿಟಿ’ ಎಂದು ಕರೆಯುತ್ತಾರೆ. ಆ ದೃಶ್ಯಗಳಲ್ಲಿ ಕರೆಂಟು ಪಾಸ್ ಮಾಡಿದಾಗ ರೋಗಿಗಳು ವಿಲವಿಲನೆ ಒದ್ದಾಡಿಬಿಡುತ್ತಾರೆ. ಸ್ವಲ್ಪ ನಾಟಕೀಯ ಎನಿಸಿದರೂ ಅದರಲ್ಲಿ ಸತ್ಯಾಂಶವಿದೆ ಎನ್ನುತ್ತಾರೆ ಮನೋವೈದ್ಯರು. ಆಗಿನ ಕಾಲದ ತಂತ್ರಜ್ಞಾನ ರೋಗಿಗಳಿಗೆ ಹಿಂಸೆ ನೀಡುವಂತಿತ್ತು. ಆದರೆ, ಈಗ ಹಾಗಿಲ್ಲ. ಸುಧಾರಿತ ತಂತ್ರಜ್ಞಾನದಿಂದಾಗಿ ನೋವಿಲ್ಲದೆ ಈ ಪ್ರಕ್ರಿಯೆ ಮುಗಿದುಹೋಗುತ್ತದೆ. ಚಿಕ್ಕ ಪ್ರಮಾಣದಲ್ಲಿ ನೀಡುವ ಕರೆಂಟ್ ಶಾಕ್ ದೇಹ ಪೂರ್ತಿ ಹರಿಯುವುದಿಲ್ಲ. ಅದರ ಹರಿವು ತಲೆಗಷ್ಟೆ ಸೀಮಿತ. ಅಲ್ಲದೆ, ಕರೆಂಟ್ ಕೊಡುವ ಮೊದಲು ಅನಸ್ತೇಸಿಯ ಕೊಡಲಾಗುತ್ತದೆ. ಇದರಿಂದಾಗಿ ರೋಗಿಗಳು ನಿದ್ರಾವಸ್ಥೆಗೆ ಜಾರುತ್ತಾರೆ. ಹೀಗೆ ಸದ್ದಿಲ್ಲದಂತೆ, ನೋವಿಲ್ಲದಂತೆ ಕೆಲವೇ ಸೆಕೆಂಡುಗಳಲ್ಲಿ ಪ್ರೊಸೀಜರ್ ಮುಗಿದುಹೋಗುತ್ತದೆ.
ರೋಸಸ್ ಕೆಫೆ ಮತ್ತು ಬೇಕರಿ: ಗುಲಾಬಿ ಪ್ರೀತಿಯ ಸಂಕೇತ. ಅದೇ ಹೆಸರಿನಲ್ಲಿ ನಿಮ್ಹಾನ್ಸ್ ಆವರಣದೊಳಗೆ ಶುರುವಾಗಿರುವ ರೋಸಸ್ ಕೆಫೆ ಅನೇಕ ಕಾರಣಗಳಿಗೆ ವಿಶೇಷ ಎನ್ನಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆಯುತ್ತಿರುವ ಮನೋರೋಗಿಗಳೇ ಇಲ್ಲಿ ಆಹಾರಖಾದ್ಯಗಳನ್ನು ತಯಾರಿಸಿ ಬಂದವರಿಗೆ ಬಡಿಸುತ್ತಾರೆ. ಇದು ಲಾಭರಹಿತವಾಗಿದ್ದು ಬಂದವರು ತಮಗಿಷ್ಟ ಬಂದಷ್ಟು ಧನಸಹಾಯವನ್ನು ಮಾಡಬಹುದಾಗಿದೆ. ಅಷ್ಟೂ ಮೊತ್ತ ಕೆಫೆಗೆ ವಿನಿಯೋಗವಾಗುತ್ತದೆ. “ರೋಗಿಗಳು ಒಂದಲ್ಲ ಒಂದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ಮನೋಬಲ ವೃದ್ಧಿಸುತ್ತದೆ ಮತ್ತು ಸಮಾಜದಲ್ಲಿ ಬೆರೆಯಲು ಆತ್ಮವಿಶ್ವಾಸ ಮೂಡುತ್ತದೆ. ಇದೇ ರೋಸಸ್ ಕೆಫೆಯ ಹಿಂದಿನ ಉದ್ದೇಶ.’ ಎನ್ನುತ್ತಾರೆ ನಿರ್ದೇಶಕಿ ಸುರಯ್ನಾ ಭಾನು.
ಇಲ್ಲಿ ಕಡಲೆ ಕಾಳು ಉಸಲಿ, ನಿಂಬೆ ಹಣ್ಣಿನ ಪಾನಕ, ಕೇಕ್ ಮುಂತಾದ ಖಾದ್ಯಗಳು ಮೆನುವಿನಲ್ಲಿದೆ. ಇಲ್ಲಿನ ಮೆನು ಸೀಮಿತವಾದರೂ ರೋಗಿಗಳಿಗೆ ದೊರೆಯುತ್ತಿರುವ ಸಹಾಯ ಮಾತ್ರ ಅಸೀಮವಾದುದು. ನಿಮ್ಹಾನ್ಸ್‌ನಲ್ಲಿ ರೋಗಿಗಳೇ ನಡೆಸುವ ಬೇಕರಿ ಘಟಕವೂ ಇದೆ. ಬ್ರೆಡ್, ಪ್ಲಮ್ ಕೇಕ್, ಬಿಸ್ಕತ್ತುಗಳು ಅಲ್ಲಿ ತಯಾರಾಗುತ್ತವೆ. ಅಲ್ಲದೆ ಸಣ್ಣಪ್ರಮಾಣದ ಕರಕುಶಲ ವಸ್ತು ತಯಾರಿಕಾ ಘಟಕವೂ ಇದೆ. ಪೇಪರ್ ಕ್ರಾಫ್ಟ್, ವಿವಿಧ ಗಾತ್ರದ ಮೇಣದ ಬತ್ತಿಗಳು ಇಲ್ಲಿ ತಯಾರಾಗುತ್ತವೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ನಾವೆಲ್ಲರೂ ಸ್ಥೈರ್ಯ ಕಳೆದುಕೊಳ್ಳುತ್ತೇವೆ, ಕುಗ್ಗಿ ಹೋಗುತ್ತೇವೆ. ಪ್ರೀತಿಪಾತ್ರರು ಕೈಹಿಡಿದು ಮೇಲೆತ್ತಿದಾಗ ಮತ್ತೆ ಪುಟಿದ ಕಾರಂಜಿಯಂತಾಗುತ್ತೇವೆ. ಹಾಗೆಯೇ, ನೊಂದಿರುವವರನ್ನು ಕೈಹಿಡಿದು ಮೇಲೆತ್ತಿ ಜೀವನಪ್ರೀತಿ ತುಂಬುವ ಕೆಲಸದಲ್ಲಿ ನಿಮ್ಹಾನ್ಸ್ ನಿರತವಾಗಿದೆ.
ನಿಮ್ಹಾನ್ಸ್‌ನಲ್ಲಿ ಪುಟ್ಟಣ್ಣ ಕಣಗಾಲ್: ಜನಸಾಮಾನ್ಯರಲ್ಲಿ ಹುಚ್ಚಾಸ್ಪತ್ರೆ ಕುರಿತು ಕೆಟ್ಟ ಅಭಿಪ್ರಾಯ ಬರುವುದರಲ್ಲಿ ಸಿನಿಮಾಗಳ ಪಾಲು ಅಧಿಕವಾದುದು. ಹುಚ್ಚಾಸ್ಪತ್ರೆಯನ್ನು ಭೀತಿ ಮೂಡುವಂತೆ ಇಲ್ಲವೇ ಹಾಸ್ಯಾಸ್ಪದವಾಗಿ ತೋರಿಸುವುದರಿಂದಲೇ ಜನರು ತಮಗೆ ಮಾನಸಿಕ ಸಮಸ್ಯೆ ಇದ್ದರೂ ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಲು ಹಿಂದೇಟು ಹಾಕುವುದು. ಆ ನಿಟ್ಟಿನಲ್ಲಿ ನಿಮ್ಹಾನ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಇಂದಿಗೂ ಪುಟ್ಟಣ್ಣ ಕಣಗಾಲ್‌ರನ್ನು ನೆನೆಸಿಕೊಳ್ಳುತ್ತಾರೆ. ಮಾನಸಿಕ ಸಮಸ್ಯೆ ಮತ್ತು ಮಾನಸಿಕ ಚಿಕಿತ್ಸಾ ಕೇಂದ್ರಗಳನ್ನು ಮನರಂಜನೆಯ ವಸ್ತುವಾಗಿಸದೆ ವಾಸ್ತವವನ್ನು ತೋರಿಸಿದ್ದರಿಂದಲೇ ಇಂದು “ಶರಪಂಜರ’ ಸಾರ್ವಕಾಲಿಕ ಶ್ರೇಷ್ಠ ಕನ್ನಡ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಅಂದಹಾಗೆ, “ಶರಪಂಜರ’ ಸಿನಿಮಾದ ಚಿತ್ರಕಥೆ ಬರೆಯುವ ಸಂದರ್ಭದಲ್ಲಿ ಅವರು ನಿಮ್ಹಾನ್ಸ್‌ಗೆ ಬಂದು ವೈದ್ಯರ ಬಳಿ ಮಾತುಕತೆ ನಡೆಸಿ, ರೋಗಿಗಳೊಂದಿಗೆ ಸಂವಹನ ನಡೆಸಿದ್ದನ್ನು ಹಿರಿಯ ವೈದ್ಯರು ನೆನಪಿಸಿಕೊಳ್ಳುತ್ತಾರೆ.
ಮಾನಸಿಕ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಲು ಯಾರೊಬ್ಬರೂ ಹಿಂಜರಿಯಬಾರದು. ಅದರಿಂದಲೇ ಮಾನಸಿಕ ಕಾಯಿಲೆ ಉಲ್ಬಣವಾಗುವುದು. ಸಮಾಜದಲ್ಲಿ ಮಾನಸಿಕ ಸ್ವಾಸ್ಥ್ಯಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಬೇಕಿದೆ.
-ಡಾ. ಮೀನಾ ಕೆ.ಎಸ್., ಹೆಚ್ಚುವರಿ ಪ್ರಾಧ್ಯಾಪಕಿ, ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗ, ನಿಮ್ಹಾನ್ಸ್
* ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.