ಮಾರ್ಕೆಟ್ ಎಂಬ ಜಾತ್ರೆಯಲ್ಲಿ ಜೀವನ ನಾಟಕ
Team Udayavani, Feb 4, 2017, 3:40 PM IST
ಸಮಯ: ಬೆಳಗಿನ ಜಾವದ ನಾಲ್ಕು ಗಂಟೆ!
ಹೊರಗೆಲ್ಲಾ ಗಾಢ ಕತ್ತಲಿರುತ್ತದೆ. ಸುತ್ತಲೂ ನೀರವ ಮೌನ. ಈ ನಿಶ್ಯಬ್ದವನ್ನು ಸೀಳಿಕೊಂಡು ಕನಕಪುರ/ ಮಾಗಡಿ/ಹೊಸಕೋಟೆ/ಗೌರಿಬಿದನೂರು/ಕುಣಿಗಲ್… ಈ ಯಾವುದೋ ಪ್ರದೇಶದ ಒಂದು ಊರಿಗೆ ಲಗೇಜ್ ವ್ಯಾನ್ ಬರುತ್ತದೆ. ಮೊದಲೇ ಹೇಳಿದ್ದ ಜಾಗದಲ್ಲಿ ಡ್ರೈವರು ಲಾರಿ ನಿಲ್ಲಿಸಿ, ಕೆಳಗಿಳಿದು ಕಿವಿಯ ಸುತ್ತಲೂ ಬರುವಂತೆ ಕ್ಯಾಪ್ ಹಾಕಿಕೊಳ್ಳುತ್ತಾನೆ/ ಮಫ್ಲರ್ ಸುತ್ತಿಕೊಳ್ಳುತ್ತಾನೆ. ನಂತರ ಬೇಗ ಬೇಗ ತುಂಬಿಸ್ರಿà, ಲೇಟಾಗಿ ಹೊರಟ್ರೆ, ಮಾರ್ಕೆಟ್‌ನಲ್ಲಿ ವ್ಯಾನ್ ನಿಲ್ಲಿಸೋಕೆ ಜಾಗ ಸಿಗಲ್ಲ. ಅಷ್ಟೇ ಅಲ್ಲ, ತರಕಾರಿ ಜಾಸ್ತಿ ಸಪ್ಲೆ„ ಆಗಿಬಿಟ್ರೆ ಯಾರಿಗೂ ಒಳ್ಳೆಯ ರೇಟ್ ಕೂಡ ಸಿಗಲ್ಲ, ಅನ್ನುತ್ತಲೇ ಸಿಗರೇಟಿಗೆ ಕಡ್ಡಿ ಗೀರುತ್ತಾನೆ. ನಂತರದ ಕೆಲವೇ ನಿಮಿಷಗಳಲ್ಲಿ ಹಣ್ಣು, ತರಕಾರಿ, ಸೊಪ್ಪು, ಕಾಯಿಪಲ್ಲೆ… ಹೀಗೆ ತರಹೇವರಿಯ ವಸ್ತುಗಳನ್ನು ತುಂಬಿಕೊಂಡ ಲಗೇಜ್ ವ್ಯಾನು ಬೆಂಗಳೂರಿನ ದಾರಿ ಹಿಡಿಯುತ್ತದೆ. ಡ್ರೈವರ್‌ನ ಪಕ್ಕದಲ್ಲಿರುವ ಲಗೇಜ್ ವ್ಯಾನ್‌ನ ಹಿಂಭಾಗದಲ್ಲಿ ಆ ಹಣ್ಣು/ತರಕಾರಿಯ ಮಾಲೀಕರಾದ ರೈತರು ಕುಳಿತಿರುತ್ತಾರೆ. ಇವತ್ತು ಮಾರ್ಕೆಟ್‌ನಲ್ಲಿ ಎಷ್ಟು ರೇಟ್ ಸಿಗಬಹುದು? ಎಷ್ಟು ಲಾಭ ಬರಬಹುದು ? ಲಾಭ ಬಂದರೆ ಮೊದಲು ಸಾಲ ತೀರಿಸಬೇಕು. ಮತ್ತೆ, ಯಾವುದಾದರೂ ಹೊಸ ಬೆಳೆ ತೆಗೆಯಬೇಕು. ಅಕಸ್ಮಾತ್ ಲಾಭ ಸಿಗದೇ ಹೋದರೆ.. ಲಗೇಜ್ ವ್ಯಾನ್‌ಗೆ ಕೊಡಬೇಕಾದಷ್ಟು ಬಾಡಿಗೆಯೂ ಗಿಟ್ಟದೇ ಹೋದರೆ.. ಹೀಗೆಲ್ಲಾ ಯೋಚಿಸುತ್ತಿರುತ್ತಾರೆ. ವ್ಯಾನ್ ಡ್ರೈವರ್‌ಗೆ ಇಂಥಾ ಗೊಂದಲಗಳಿಲ್ಲ. ಬೇಗ ಬೆಂಗಳೂರು ತಲುಪಿ ವಾಪಸ್ ಬರಬೇಕು. ಸಾಧ್ಯವಾದರೆ ಇವತ್ತು ನಾಲ್ಕು ಟ್ರಿಪ್ ಆದ್ರೂ ಹೊಡೀಬೇಕು… ಹೀಗೆಲ್ಲಾ ಅವನು ಕನಸು ಕಾಣುತ್ತಾನೆ! ಒಂದೇ ದಾರಿ, ಎರಡು ಕನಸು!
ಪ್ರೇಂ… ಕ್ರಿಂಕ್, ಕ್ರಿಂಕ್… ಎಂದು ಹಾರ್ನ್ ಮಾಡುತ್ತಾ ವ್ಯಾನು ಮಾರ್ಕೆಟ್ ತಲುಪುವ ವೇಳೆಗೆ ಐದು ಗಂಟೆ ಆಗಿಯೇ ಬಿಡುತ್ತದೆ. ಆ ವೇಳೆಯಲ್ಲಿ ಇಡೀ ಬೆಂಗಳೂರು ಸಕ್ಕರೆ ನಿದ್ರೆಯಲ್ಲಿರುತ್ತದೆ ನಿಜ. ಆದರೆ ಮಾರ್ಕೆಟ್ಟಿನಲ್ಲಿ ಜಾತ್ರೆಯಲ್ಲಿ ಕಾಣುವಷ್ಟು ಜನ ತುಂಬಿರುತ್ತಾರೆ. ಆ ಚುಮು ಚುಮು ಬೆಳಗಿನ ಜಾವದಲ್ಲಿ ಅಲ್ಲಿ ಸಿಗೋದು ಎರಡೇ ವೆರೈಟಿಯ ಜನ. ಕೊಳ್ಳುವವರು ಮತ್ತು ಮಾರುವವರು! ಒಂದು ಕ್ವಿಂಟಾಲ್‌ಗೆ ಹೇಗೆ? ಒಂದು ಮೂಟೆಗೆ ಎಷ್ಟು? ಎಂದೇ ಮಾತು ಶುರುವಾಗುತ್ತದೆ. ಕಡೆಗೊಮ್ಮೆ ಯಾವುದೋ ಒಂದು ಮೊತ್ತಕ್ಕೆ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಅಲ್ಲಿಗೆ ಮಾರಾಟದ ಒಂದು ಅಧ್ಯಾಯ ಮುಗಿಯುತ್ತದೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಬೆಳಗಿನ ಜಾವದಲ್ಲಿ ಫ್ಲೈ ಓವರ್‌ನಿಂದ ಕೆಳಗೆ ಇರುವ ಮಾರ್ಕೆಟ್‌ನ ಪ್ರದೇಶ ಒಂದರ್ಥದಲ್ಲಿ ಹಸಿರು ಮೈದಾನದಂತೆ ಕಾಣುತ್ತಿರುತ್ತದೆ. ಇದೇ ವೇಳೆಗೆ ತರಕಾರಿ, ಕಾಯಿಪಲ್ಲೆಗಳು ಹಾಳಾಗದಿರಲಿ ಎಂದು ಅದರ ಮೇಲೆ ಮುಚ್ಚಲೆಂದು ತಂದಿದ್ದ ಸೊಪ್ಪು, ಹಳೆಯ ಬಟ್ಟೆ, ಕೆಟ್ಟುಹೋದ ತರಕಾರಿ, ಹಣ್ಣುಗಳನ್ನು ಒಬ್ಬರ ನಂತರ ಒಬ್ಬರು ಒಂದೆಡೆಗೆ ಎಡೆಯುತ್ತಾರೆ. ಆರು ಗಂಟೆಯ ಹೊತ್ತಿಗೆ ಅದೇ ಒಂದು ಗುಡ್ಡೆಯಾಗುತ್ತದೆ. ಆ ಕಡೆಯಿಂದ ವಾಸನೆಯೂ ಬರಲು ಆರಂಭವಾಗುತ್ತದೆ.
ಅಂಥದೊಂದು ಸಮಯಕ್ಕೇ ಕಾದಿದ್ದಂತೆ ಬೀಡಾಡಿ ದನಗಳು ಅದೆಲ್ಲಿಂದಲೋ ಬಂದು ಆ ಕಸದ ಗುಡ್ಡೆಗೆ ಬಾಯಿ ಹಾಕುತ್ತವೆ. ಕೆಲವರು ಆ ದನಗಳಿಗೆ ಎರಡೇಟು ಹಾಕಿ ಓಡಿಸಿದರೆ ಮತ್ತೆ ಕೆಲವರು, ಅವುಗಳಿಗೆ ನಮಸ್ಕಾರ ಹಾಕಿ, ಬೆಳಗ್ಗೆ ಬೆಳಗ್ಗೆನೇ ಬಸವಣ್ಣನ ದರ್ಶನ ಆಗಿದೆ. ಇವತ್ತು ಖಂಡಿತ ನಮಗೆ ಒಳ್ಳೆದಾಗುತ್ತೆ ಎಂದು ಸಂಭ್ರಮಿಸುತ್ತಾರೆ. ಇಲ್ಲೂ ಅಷ್ಟೇ: ಒಂದೇ ದೃಶ್ಯ, ಎರಡು ಅರ್ಥಗಳನ್ನು ತೆರೆದಿಡುತ್ತದೆ. ಅವರವರ ಭಾವಕ್ಕೆ ಅವರವರ ಭಕುತಿಗೆ…
ಈ ಎಲ್ಲಾ ಗದ್ದಲದ ಮಧ್ಯೆಯೇ ಕಾಫೀ. ಬಿಸ್ಸಿಬಿಸಿ ಕಾಫಿ, ಚಾಯ್ ಎಂಬ ಧ್ವನಿ ಕೇಳಿಸುತ್ತದೆ. ಅದುವರೆಗೂ ಕೆಟ್ಟಗಾಳಿ, ಥಂಡಿ ಚಳಿ, ಒಂಥರಾ ವಾಸನೆ ಎಂದೆಲ್ಲಾ ಮೂಗು ಮುರಿಯುತ್ತಿದ್ದವರು. ತಕ್ಷಣವೇ ಅತ್ತ ತಿರುಗುತ್ತಾರೆ. ಒನ್ ಬೈಟು, ಥ್ರಿà ಬೈ ಸಿಕ್ಸ್ ಕಾಫಿಗೆ ಆರ್ಡರ್ ಮಾಡುತ್ತಾರೆ. ಏನೇನೂ ಲಾಭ ಆಗಲಿಲ್ಲ. ಅಸಲೇ ಕೈಗೆ ಬರಲಿಲ್ಲ. ಈ ಬೆಳೆಯಿಂದ ಲಾಸ್ ಮಾಡಿಕೊಂಡಿದ್ದೇ ಆಯ್ತು ಎಂದು ಅವರೆಲ್ಲ ಮಾತಾಡಿಕೊಂಡು ನಿಟ್ಟುಸಿರು ಬಿಡುವ ವೇಳೆಗೇ ನಾಲ್ಕು ಫ್ಲಾಸ್ಕ್ಗಳಲ್ಲಿದ್ದ ಕಾಫಿ/ ಟೀಯನ್ನೂ ಮಾರಿದ್ದಾಯ್ತು ಎಂಬ ಖುಷಿಯಲ್ಲಿ ಚಾಯ್‌ವಾಲಾ ಇರುತ್ತಾನೆ. ಈ ಹೊತ್ತಿಗೆ ಹಳ್ಳಿಗಳಿಂದ ಬಂದಿದ್ದ ರಾಶಿ ರಾಶಿ ತರಕಾರಿ, ಮಾರ್ಕೆಟ್‌ನ ಹಲವು ದಿಕ್ಕಿಗೆ ಹಂಚಿಹೋಗಿ ಕಸವಷ್ಟೇ ಉಳಿದುಕೊಂಡಿರುತ್ತದೆ. ಆಗಲೇ ಪ್ರತ್ಯಕ್ಷರಾಗುವ ಪೌರ ಕಾರ್ಮಿಕರು ಅದನ್ನೆಲ್ಲಾ ಸರಭರನೆ ಗುಡಿಸಿ ಹಾಕಿ ಕಳೆದೆರಡು ಗಂಟೆಯಲ್ಲಿ ಇಲ್ಲಿ ರಾಶಿ ರಾಶಿ ತರಕಾರಿ ಇದ್ದುದ್ದೇ ಸುಳ್ಳು ಎಂಬಂತೆ ಮಾಡಿ ಬಿಡುತ್ತಾರೆ.
ಹೀಗೇ ಮತ್ತಷ್ಟು ಸಮಯ ಕಳೆದು ಎಂಟು ಗಂಟೆ ಆಗುತ್ತಿದ್ದಂತೆ ಮಾರ್ಕೆಟ್‌ನ ಹೋಟೆಲೊಂದರಲ್ಲಿ ತಿಂಡಿಯ ಶಾಸ್ತ್ರ ಮುಗಿಸಿದ ರೈತ ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಾನೆ. ಹತ್ತು ಮೂಟೆ ತರಕಾರಿ ತಂದ್ರೂ ಜೇಬು ತುಂಬುವಷ್ಟು ದುಡ್ಡು ಸಿಗಲಿಲ್ಲ. ತುಂಬಾ ಲಾಸ್ ಆಗಿಹೋಯ್ತು! ಹೆಚ್ಚು ಕಡಿಮೆ ಇದೇ ಸಮಯಕ್ಕೆ ಅರ್ಧವಷ್ಟೇ ತುಂಬಿದ ಬ್ಯಾಗ್ ಹಿಡಿದುಕೊಂಡು ಓಡೋಡುತ್ತಲೇ ಬಂದು ಬಸ್ ಹತ್ತುವ ಶ್ರೀಸಾಮಾನ್ಯನೂ ಉದ್ಗರಿಸುತ್ತಾನೆ. 500 ರೂಪಾಯಿ ಖರ್ಚಾಯ್ತು, ಬ್ಯಾಗ್ ತುಂಬುವಷ್ಟು ತರಕಾರಿ ಸಿಗಲಿಲ್ಲ. ತುಂಬಾ ಲಾಸ್ ಆಗಿಹೋಯ್ತು!!!
ನಂಬಿ: ಈ ಜೀವನ ನಾಟಕ ಮಾರ್ಕೆಟ್ ಎಂಬ ಜಾತ್ರೆ ವರ್ಷಪೂರಾ ನಡೆಯುತ್ತಲೇ ಇರುತ್ತದೆ!
ಫೋಟೋ: ಹರ್ಷವರ್ಧನ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.