ಅಕ್ಷರ ಲೋಕದ ಅಂಗಳದಲ್ಲಿ…
Team Udayavani, Apr 20, 2019, 2:33 PM IST
ನಾವು ಓದಿದ, ಆಸಕ್ತರು ಓದಬಹುದಾದ ಪುಸ್ತಕಗಳ ಸಂಕ್ಷಿಪ್ತ ಪರಿಚಯ, ಹೊಸ ಪ್ರಕಟಣೆಗಳ ಅವಲೋಕನ ಈ ಅಂಕಣದಲ್ಲಿ ಪ್ರಕಟವಾಗಲಿದೆ…
ಮತ್ತೆ ಮತ್ತೆ ಗಾಂಧಿ
ರಂಗಭೂಮಿ ಕಲಾವಿದೆ, ನಟಿ, ನಿರ್ದೇಶಕಿ, ನಾಟಕ ರಚನೆಗಾರ್ತಿ ಎಂದೆಲ್ಲಾ ಹೆಸರಾಗಿದ್ದವರು ಎಸ್. ಮಾಲತಿ. ಶಿವಮೊಗ್ಗಕ್ಕೆ ಸಮೀಪದ ಸಾಗರದಲ್ಲಿದ್ದ ಅವರು ಮಾಲತಿ ಸಾಗರ ಎಂಬ ಹೆಸರಿಂದಲೂ ಜನಪ್ರಿಯರಾಗಿದ್ದರು. “ಸಾಗರದಂಥ ಸಣ್ಣ ಊರಿನಲ್ಲಿ ಬದುಕುತ್ತಿರುವ ನನ್ನನ್ನು ವಿದೇಶದ ವಿದ್ಯಮಾನಗಳು ತಲ್ಲಣಗೊಳಿಸುತ್ತವೆ. ಇಂಥ ಸಂದರ್ಭದಲ್ಲಿ ಸಮಾನ ಮನಸ್ಕರ ಜೊತೆ ಮಾತಾಡಬೇಕು ಅನಿಸುತ್ತದೆ ಆದರೆ, ಚರ್ಚೆ ಮಾಡಲು ಯಾರೂ ಸಿಗುವುದಿಲ್ಲ. ಅಂಥ ಸಂದರ್ಭದಲ್ಲಿ, ನನ್ನೊಳಗಿನ ಮಾತುಗಳನ್ನು ಹೇಳಿಕೊಳ್ಳಲು, ನನ್ನ ಅನಿಸಿಕೆಗಳನ್ನು ಹೊರಗಿನ ಪ್ರಪಂಚದೊಂದಿಗೆ ಹಂಚಿಕೊಳ್ಳಲು ನಾನು ಬರವಣಿಗೆಯ ಮೊರೆ ಹೋಗುತ್ತೇನೆ’ ಎಂದಿದ್ದರು ಮಾಲತಿ.
ಅಂಥದೊಂದು ಧ್ಯಾನಸ್ಥ ಸ್ಥಿತಿಯಲ್ಲಿ ಅವರು ಬರೆದಿರುವ ಕೃತಿಯೇ -” ಗಾಂಧಿ, ಒಂದು ಬೆಳಕು’ ಎಂಬ ನಾಟಕ. ಗಾಂಧೀಜಿ ಒಬ್ಬ ಹೋರಾಟಗಾರ, ಛಲಗಾರ, ರೈತಬಂಧು, ದಲಿತ ಬಂಧು, ಕಾರ್ಮಿಕ ಮಿತ್ರ ಎಂಬುದಕ್ಕೆ ಅವರು ನಡೆಸಿದ ಅಹಮದಾಬಾದ್ ಗಿರಣಿ ಕಾರ್ಮಿಕರ ಸತ್ಯಾಗ್ರಹ, ಖೇಡಾ ರೈತರ ಹೋರಾಟ, ಕ್ವಿಟ್ ಇಂಡಿಯಾ ಚಳವಳಿ ಉಪ್ಪಿನ ಸತ್ಯಾಗ್ರಹ, ಸ್ವಾತಂತ್ರ್ಯಹೋರಾಟಗಳೆಲ್ಲ ಸಾಕ್ಷಿ. ಇಂಥ ವ್ಯಕ್ತಿಯ ಬದುಕನ್ನು ಇಂದಿನ ಜನಾಂಗ ತಪ್ಪದೇ ನೆನಪು ಮಾಡಿಕೊಳ್ಳಲಿ ಎಂಬ ಉದ್ದೇಶದಿಂದಲೇ ಈ ನಾಟಕ ಬರೆದೆ ಎಂದಿದ್ದಾರೆ ಲೇಖಕಿ. ಬಾಲಕ ಗಾಂಧಿಯನ್ನು ಆಳವಾಗಿ ಪ್ರಭಾವಿಸಿದ ‘ಸತ್ಯ ಹರಿಶ್ಚಂದ್ರ’ನ ಕಥೆಯನ್ನು ಈ ನಾಟಕದಲ್ಲಿ ಇಡಿಯಾಗಿ ಬಳಸಿಕೊಳ್ಳಲಾಗಿದೆ.
ಗಾಂಧಿ, ಒಂದು ಬೆಳಕು.
ಲೇ: ಎಸ್. ಮಾಲತಿ,
ಪ್ರ. ನವಕರ್ನಾಟಕ ಪಬ್ಲಿಕೇಶನ್ಸ್, ಬೆಂಗಳೂರು
ಅಸ್ತಿತ್ವ ಕುರಿತ ಟಿಪ್ಪಣಿ
ದೇಹವನ್ನು ಆರೋಗ್ಯವಾಗಿಡಲು ಪೌಷ್ಠಿಕ ಆಹಾರ ಮತ್ತು ನಿಯಮಿತ ಅಂಗಸಾಧನೆಗಳು ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಿಡಿತ ನಮ್ಮ ಕೈಯಲ್ಲೇ ಇದೆ ಎಂಬ ಸಂಗತಿಯನ್ನು ನಿರೂಪಿಸಲಾಗಿದೆ. ಒಟ್ಟು ಒಂಬತ್ತು ಪ್ರಬಂಧಗಳಿಂದ ಕೂಡಿರುವ ಈ ಪುಸ್ತಕದಲ್ಲಿ ಮೊದಲನೆ ಪ್ರಬಂಧವು ಪುಷ್ಟಿಕರವಾದ ಆಹಾರ ಸೇವನೆ ಕುರಿತು ವಿವರ ಮಾಹಿತಿ ನೀಡುತ್ತದೆ.
ಉಳಿದ ಎಂಟು ಪ್ರಬಂಧಗಳಲ್ಲಿ ಯೋಗ ಸಾಧನೆಯಿಂದ ಪಡೆಯಬಹುದಾದ ಲಾಭ, ಪ್ರಾಣ ಮತ್ತು ಆತ್ಮದ ಸ್ವರೂಪ, ದೇಹ ಸಂಬಂಧದಲ್ಲಿ ನಾನು ಮತ್ತು ಮನಸ್ಸು ಎಂಬುದಕ್ಕಿರುವ ಅರ್ಥ, ಆಧುನಿಕ ವಿಜ್ಞಾನದ ಹಿನ್ನೆಲೆಯಲ್ಲಿ ಪರಬ್ರಹ್ಮ ಪರಿಕಲ್ಪನೆಯ ಪ್ರಸ್ತುತತೆ, ದೇವರ ಅಸ್ತಿತ್ವದ ವಿಚಾರವಾಗಿ ಋಗ್ವೇದದಲ್ಲಿ ಹೇಳಿರುವ ಮಾತು, ಭಗವದ್ಗೀತೆಯಿಂದ ನಾವು ಪಡೆಯುವ ತಿಳಿವಳಿಕೆ ಮತ್ತು ಪಾಠಗಳು, ರಾಮಾಯಣ- ಮಹಾಭಾರತದ ಕಥೆಗಳಲ್ಲಿ ಕಂಡು ಬರುವ ವಿಜ್ಞಾನ ಕಲ್ಪನೆಗಳು ಇತ್ಯಾದಿ ವಿವರಗಳಿವೆ. ಯೋಗಾಸನದ ವೈಶಿಷ್ಟ್ಯಗಳನ್ನೂ ಆಸನಗಳ ಬಗೆಯನ್ನೂ, ಇದನ್ನು ಆಚರಿಸುವುದರಿಂದ ಆಗುವ ಪ್ರಯೋಜನಗಳನ್ನು ವಿವರವಾಗಿ ಹೇಳಲಾಗಿದೆ.
ಜೀವವು ವಿಧಿ ನಿಯಮವೂ ಅಲ್ಲ, ಆಕಸ್ಮಿಕವೂ ಅಲ್ಲ. ಅದು ವಿಕಾಸಕ. ನಾವು ಪ್ರತಿಯೊಬ್ಬರೂ ಈ ಭೂಮಿಯ ಮೇಲಿರುವುದು ಆಕಸ್ಮಿಕವೇ ಎಂಬುದು ಲೇಖಕರ ಖಚಿತ ಮಾತು.
ಪ್ರೇಮ, ಸೌಂದರ್ಯ, ಆನಂದ.
ಲೇ: ಸಿ.ಎಂ. ರಾಮಕೃಷ್ಣ,
ಪ್ರ: ಸಪ್ನ ಬುಕ್ ಹೌಸ್, ಬೆಂಗಳೂರು-59
ಕತ್ತಲೆ- ಬೆಳಕು
2018 ಆಗಸ್ಟ್ 15,16,17- ಈ ದಿನಗಳನ್ನು ಕೊಡಗಿನ ಜನ ಎಂದೆಂದೂ ಮರೆಯಲಾಗದು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಕಸಿದುಕೊಂಡ ಪ್ರಕೃತಿ ವಿಕೋಪ, ತನ್ನ ಕರಾಳ ಸ್ವರೂಪವನ್ನು ತೋರಿಸಿದ ದಿನಗಳವು. ಈ ದುರಂತ ಕ್ಷಣಗಳನ್ನು ಪ್ರತ್ಯಕ್ಷ ಕಂಡವರಲ್ಲಿ, ಆ ವಿಕೋಪಕ್ಕೇ ಸೆಡ್ಡು ಹೊಡೆದು ಜನರನ್ನು ರಕ್ಷಿಸಿದವರಲ್ಲಿ ಪತ್ರಕರ್ತ ಕಿಶೋರ್ ರೈ ಕತ್ತಲೆ ಕಾಡು ಅವರೂ ಒಬ್ಬರು.
ಆಗಸ್ಟ್ 15ರ ರಾತ್ರಿಯಿಂದ ಆರಂಭಗೊಂಡು, ಸತತ ನಾಲ್ಕು ದಿನಗಳ ಕಾಲ ಉಂಟಾದ ಜಲಸ್ಫೋಟದ ಅವಧಿಯಲ್ಲಿ ಆ ಪ್ರವಾಹಕ್ಕೆ ಸಿಲುಕಿದವರ ಸಹಾಯಕತೆ, ಭೀತಿಯ ಜೊತೆಗೆ ಆಪತ್ತಿಗೆ ಈಡಾದವರ ಸಮಯ ಪ್ರಜ್ಞೆ, ಮನೋಸ್ಥೈರ್ಯ, ಪರಿಸ್ಥಿತಿಯಿಂದ ಪಾರಾಗಿ ಬರುವವರು ಹಿಂದೆ ಉಳಿದವರಿಗಾಗಿ, ತೊಂದರೆಗೆ ಸಿಲುಗಿಕೊಂಡವರಿಗಾಗಿ ಮಿಡಿಯುವುದು, ಸಾಕು ಪ್ರಾಣಿಗಳ ಪ್ರೀತಿ ಇಂಥವೇ ಹಲವು ಸಂದರ್ಭಗಳನ್ನು ಲೇಖಕರು ಈ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಬರಹದ ಆರಂಭದಿಂದ ಅಂತ್ಯದವರೆಗೂ ಪತ್ರಕರ್ತನೊಬ್ಬನ ವೃತ್ತಿಯ ತುರ್ತುಗಳು ಮತ್ತು ಆತನ ಅಂತಃ ಕರಣದ ಮಾನವೀಯ ಸೆಲೆಗಳು ಹೆಣೆದುಕೊಂಡೇಸಾಗಿವೆ.
ಲೇಖಕನಷ್ಟೇ ಅಲ್ಲ; ಮಹಾನ್ ಸಾಹಸಿಯೂ ಆಗಿರುವ ಕಿಶೋರ್, ಓಡಾಡಲು ಸಾಧ್ಯವೇ ಇಲ್ಲದಿದ್ದ ಒಬ್ಬ ವ್ಯಕ್ತಿಯನ್ನು ರಸ್ತೆ ಸಂಪರ್ಕವೇ ಇಲ್ಲದಿದ್ದ ಅವರ ಮನೆಯಿಂದ ಕುಸಿದಿದ್ದ ಗುಡ್ಡಗಳ ಆವಶೇಷಗಳ ನಡುವೆ, ಜಾರುತ್ತಿದ್ದ ನೆಲದ ಮೇಲೆ ಹೆಜ್ಜೆ ಹಾಕುತ್ತಾ ಜೋಪಾನವಾಗಿ ಕರೆತರುವ ಸಂದರ್ಭವನ್ನು ಓದಿದಾಗ, ಅವರ ಸಾಹಸ ಪ್ರಜ್ಞೆಗೆ ಸೆಲ್ಯೂಟ್ ಹೊಡೆಯಬೇಕು ಅನ್ನಿಸುತ್ತದೆ.
ಪ್ರಕೃತಿ ಮುನಿದ ಹಾದಿಯಲ್ಲಿ…
ಲೇ: ಕಿಶೋರ್ ರೈ ಕತ್ತಲೆಕಾಡು,
ಪ್ರ:ಕ-ವನ ಪ್ರಕಾಶನ, ಮಡಿಕೇರಿ
ಅಳಿಸಲಾಗದ ಲಿಪಿ…
ಪ್ರಾಚೀನ ಜ್ಞಾನ ಪರಂಪರೆಯನ್ನು ಒಡಲಲ್ಲಿ ಇಟ್ಟುಕೊಂಡಿರುವ ಅತಿ ಮುಖ್ಯ ವಸ್ತುಗಳೆಂದರೆ ಹಸ್ತಪ್ರತಿಗಳು. ನಾವು ಈ ದಿನಗಳಲ್ಲಿ ಏನನ್ನೇ ಬರೆದರೂ ಅದನ್ನು ಕಂಪ್ಯೂಟರಿನಲ್ಲಿ ಹಾಕಿಟ್ಟು “ಸೇವ್’ ಮಾಡುತ್ತೇವೆ. ಇಲ್ಲವಾದರೆ ಹಾಳೆಗಳಲ್ಲಿ ಬರೆದಿಟ್ಟು ಕಾಪಾಡುತ್ತೇವೆ. ಈ ಜಗತ್ತಿಗೆ “ಹಾಳೆ’ಬರುವ ಮೊದಲೂ ಸಾಹಿತ್ಯವಿತ್ತು. ಕವಿಗಳಿದ್ದರು. ಕಾವ್ಯವಿತ್ತು.
ಅದೆಲ್ಲಾ ಜೋಪಾನವಾಗಿ ಉಳಿದುಕೊಂಡಿದ್ದು ತಾಳೆಗರಿಗಳಲ್ಲಿ. ಆಧುನಿಕ ಪೂರ್ವದ ಚಂಪೂ, ವಚನ- ಸ್ವರವಚನ- ಷಟ್ಪದಿ- ಸಾಂಗತ್ಯ, ತ್ರಿಪದಿ-ಗದ್ಯ- ಪದ್ಯಗಳ ಬರಹವೆಲ್ಲ “ಅಮರ’ ಎಂಬಂತೆ ಉಳಿದುಕೊಂಡಿದ್ದು ಹಸ್ತಪ್ರತಿಗಳಲ್ಲಿ ಮಾತ್ರ. ಈ ನಾಡಿನ ಇತಿಹಾಸ, ಸಂಸ್ಕೃತಿ, ಧರ್ಮ ಜೀವನದ ಬಗ್ಗೆ ತಿಳಿಯಲು ಹಸ್ತಪ್ರತಿಗಳು ಸಹಾಯ ಮಾಡುತ್ತವೆ. ಹಸ್ತಪ್ರತಿಗಳ ಕಾರಣದಿಂದ ಕವಿಯ ಕಾಲ, ಕೃತಿ, ಪರಿಸರದ ಬಗ್ಗೆ ಹಲವು ಸಂಗತಿಗಳು ತಿಳಿದು ಬಂದಿವೆ. ಪ್ರಾಚೀನ ಸಾಹಿತ್ಯ ಕುರಿತು ಹೊಸ ಹೊಸ ಸಂಗತಿಗಳನ್ನು ತಿಳಿಯುವುದಕ್ಕೂ ಸಾಧ್ಯವಾಗಿದೆ.
ಹಳಗನ್ನಡ ಹಾಗೂ ಅದಕ್ಕೂ ಹಿಂದಿನ ಸಾಹಿತ್ಯದ ಬಗ್ಗೆ, ವ್ಯಾಕರಣ, ಅಲಂಕಾರ- ಛಂದಸ್ಸು-ಕಾವ್ಯ ಮೀಮಾಂಸೆಯ ಬಗ್ಗೆ ಸಾಹಿತ್ಯ ಪ್ರೇಮಿಗಳಿಗೆ ಆಸಕ್ತಿ ಹೆಚ್ಚಿಸಲು ಹಸ್ತಪ್ರತಿ ಶಾಸ್ತ್ರದ ಅಧ್ಯಯನ ಅಗತ್ಯವಾದುದು ಎಂಬ ವಿವರಣೆ ಈ ಪುಸ್ತಕದಲ್ಲಿದೆ.
ಹಸ್ತಪ್ರತಿ ವ್ಯಾಸಂಗ-17,
ಲೇ: ಡಾ. ಎಫ್. ಬಿ. ಹಳ್ಳಿಕೇರಿ.
ಪ್ರ: ಪ್ರಸಾರಂಗ, ಕನ್ನಡ ವಿವಿ ಹಂಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.