ಬೆಂಗ್ಳೂರಲ್ಲಿ ಮೂಡಲ ಮನೆ! ಇದೇ ನನ್ನ “ಉತ್ತರ’
Team Udayavani, Aug 4, 2018, 5:08 PM IST
ಬನ್ನಿ ಹಬ್ಬ, ರೊಟ್ಟಿ ಪಂಚಮಿ, ಸಂಕ್ರಾಂತಿ ಸಂಜೆ, ಯುಗಾದಿ ಸಂಜೆ, ಮೋಡಿಕಾರ ಆಟ, ಇಳಕಲ್ ಸೀರೆ, ಒರಳುಕಲ್ಲಿನಲ್ಲಿ ತಯಾರಿಸಿದ ಚಟ್ನಿ, ಹೇಳ್ತಾ ಹೋದ್ರೆ ಪಟ್ಟಿಗೆ ಕೊನೆಯೇ ಇಲ್ಲ. ಯಾವುದರ ಪಟ್ಟಿ ಎಂದಿರಾ? ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಮನಸ್ಸುಗಳನ್ನು ಒಂದು ಕ್ಷಣ ಅವರ ಊರಿಗೆ ಒಯ್ದುಬಿಡುವ ವಸ್ತುಗಳ ಪಟ್ಟಿ. ಕಾಸ್ಮೋಪಾಲಿಟನ್ ನಗರಿಯಲ್ಲಿ ಉತ್ತರಕರ್ನಾಟಕದ ಕಂಪನ್ನು ಹರಡುವ ಕೆಲಸದಲ್ಲಿ ಅನೇಕ ವ್ಯಕ್ತಿಗಳು, ಸಂಘಟನೆಗಳು ನಿರತವಾಗಿವೆ. ಅದರತ್ತ ಒಂದು ಸುತ್ತು!
ಬಾಜು ಮನಿ ಕಾಕು
ಬೆಳಗಾವಿ ಮೂಲದವರಾದ ಸೋನು ವೇಣುಗೋಪಾಲ್, ಎಂಜಿನಿಯರಿಂಗ್ ಓದುತ್ತಿದ್ದಾಗಲೇ ರೇಡಿಯೊ ಜಾಕಿಯಾಗುವ ಕನಸು ಕಟ್ಟಿಕೊಂಡವರು. ಬೆಂಗಳೂರಿನಲ್ಲಿ ಮನೆ. ಮದುವೆಯಾಗಿ ಸ್ವಿಟlರ್‌ಲ್ಯಾಂಡಿನಲ್ಲಿ ಕೆಲ ವರ್ಷ ನೆಲೆಸಬೇಕಾಗಿ ಬಂದಾಗ ಏಕತಾನತೆ ಕಳೆಯಲು ಅವರಿಗೆ ನೆರವಾಗಿದ್ದು ಸ್ನಾಪ್‌ಚಾಟಿನಲ್ಲಿ ಅವರೇ ಸೃಷ್ಟಿಸಿದ “ಬಾಜು ಮನಿ ಕಾಕು’ ಪಾತ್ರ. ಉತ್ತರ ಕರ್ನಾಟಕದ ಮಂದಿಯ ನಡುವೆ ಸೋನು, “ಕಾಕು'(ಚಿಕ್ಕಮ್ಮ) ಆಗಿಯೇ ಚಿರಪರಿಚಿತೆ. ಪ್ರತಿ ಸೋಮವಾರ ಒಂದೊಂದು ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುತ್ತಾ ಬಂದರು. ಒಂದು ವಾರ ವಿಡಿಯೋ ಮಿಸ್ ಆಯ್ತು ಅಂದರೆ ಸೋನು ಅವರಿಗೆ ಬರುವ ಮೊದಲ ಕರೆ ಅಜ್ಜಿಯದು. ಹೀಗಾಗಿ ಸ್ವಿಸ್‌ನಿಂದ ಬೆಂಗಳೂರಿಗೆ ವಾಪಸ್ಸಾದ ಮೇಲೂ ವಿಡಿಯೋ ಮಾಡುವುದನ್ನು ನಿಲ್ಲಿಸಿಲ್ಲ. ಅದರಿಂದ ಒಂದು ದೊಡ್ಡ ಅಭಿಮಾನಿ ಬಳಗವೇ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ. ಉತ್ತರ ಕರ್ನಾಟಕದ ಎಲ್ಲರ ಮನೆಯಲ್ಲೂ ಇರುವ ಕಾಕು ಈಕೆ. ಸ್ವಲ್ಪ ಹಳೆಯ ಕಾಲದವಳಾದ ಕಾಕು, ತನಗೆ ಸರಿ ತೋರದ್ದನ್ನು ತನ್ನ ಮೂಗಿನ ನೇರಕ್ಕೇ ಟೀಕೆ ಮಾಡುವಳು. ನಕ್ಕು ನಗಿಸುವ ಬಾಜು ಮನಿ ಕಾಕೂನನ್ನು ನೋಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗದು. ಇಂದು ಕಾಕೂನದ್ದೇ ಒಂದು ಫೇಸ್‌ಬುಕ್ ಪೇಜ್ ಇದೆ, ಯೂಟ್ಯೂಬ್ ಚಾನೆಲ್ ಇದೆ. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಮಂದಿ ತಮ್ಮೂರನ್ನು, ತಮ್ಮವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದುಕೊಂಡಾಗಲೆಲ್ಲಾ ಯುಟ್ಯೂಬ್ ಮತ್ತು ಫೇಸ್‌ಬುಕ್‌ನ ಬಾಜು ಮನಿ ಕಾಕೂ ಬಳಿಗೆ ಬರುತ್ತಾರೆ. ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕಾಕು, ಒಂದರ್ಥದಲ್ಲಿ ಉತ್ತರ ಕರ್ನಾಟಕದವರನ್ನು ಬೆಸೆಯುತ್ತಿರುವ ತಂತು. ಹಾಸ್ಯ ಕಾರ್ಯಕ್ರಮಗಳನ್ನೂ ನೀಡುವ ಸೋನು ಅವರಿಗೆ ಪ್ರಾಣೇಶ್ ಎಂದರೆ ತುಂಬಾ ಇಷ್ಟ. ಅವರನ್ನು ಭೇಟಿ ಮಾಡುವುದು ತುಂಬಾ ದಿನಗಳ ಕನಸು.
ಪ್ರತೀ ಸೋಮವಾರ ಬಾಜು ಮನಿ ಕಾಕು ಆಗುವ ಸೋನು, ರೇಡಿಯೋ ಸಿಟಿ ಎಫ್.ಎಂನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದಷ್ಟು ಬೇಗನೆ ರೇಡಿಯೊದಲ್ಲಿ ಕನ್ನಡ ಶೋ ನಡೆಸಿಕೊಡಲಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಕನ್ನಡದಲ್ಲೇ ಕಾರ್ಯಕ್ರಮ ಮೂಡಿ ಬರಲಿ ಅನ್ನೋದು ಅವರ ಅಭಿಮಾನಿಗಳ ಒತ್ತಾಸೆ.
www.sonuvenugopal.me
ಫೇಸ್‌ಬುಕ್ ಪೇಜ್: www.facebook.com/BaajuManiKaaku
ಎಲ್ಲರಿಗೂ ಬೇಕು ಈ ಲೋಕ
ರಾಜು ಹಿರೇಗೌಡರ್, ಪರಾಗ್ ಮತ್ತು ಗಂಗಾಧರ್, ಹುಬ್ಬಳ್ಳಿಯ ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜಿನ 2007ನೇ ಬ್ಯಾಚಿನ ವಿದ್ಯಾರ್ಥಿಮಿತ್ರರು. ಬೆಂಗಳೂರಿನಲ್ಲಿ ಒಳ್ಳೆಯ ವೃತ್ತಿಯೂ ಸಿಕ್ಕಿತು. ಪ್ರತೀ ಬಾರಿ ಮೂವರು ಗೆಳೆಯರೂ ಭೇಟಿಯಾದಾಗ ತಮ್ಮೂರು, ತಮ್ಮ ನೆಲದ ಸಂಸ್ಕೃತಿಯ ಬಗ್ಗೆಯೇ ಮಾತು. ಹೀಗೆ ಹುಟ್ಟಿಕೊಂಡಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಕುಟುಂಬಗಳನ್ನು ಬೆಸೆಯುವ ಯೋಚನೆ. ಆಗ ಮೊಳಕೆಯೊಡೆದ ಯೋಚನೆ ಈಗ ಬೃಹತ್ತಾಗಿ ಬೆಳೆದು “ಉತ್ತರ ಕರ್ನಾಟಕ ಸ್ನೇಹ ಲೋಕ’ ಜನ್ಮ ತಾಳಿದೆ. ದಶಕದ ಹಿಂದೆ ಮೊದಲ ಬಾರಿ ನಡೆದ ಸಭೆಯಲ್ಲಿ ಸುಮಾರು 12 ಕುಟುಂಬಗಳು ಸೇರಿದ್ದವು. ಕಳೆದ ಬಾರಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದು ಸುಮಾರು 150 ಉತ್ತರ ಕರ್ನಾಟಕ ಕುಟುಂಬಗಳು. ಸಂಘದ್ದೇ ಒಂದು ಜಾಲತಾಣವೂ ಇದೆ. ತೀರ್ಥಕ್ಷೇತ್ರ ದರ್ಶನ, ಟ್ರೆಕ್ಕಿಂಗ್, ಪ್ರವಾಸ… ಹೀಗೆ ಚೇತೋಹಾರಿ ಚಟುವಟಿಕೆಗಳು ಆಗಾಗ್ಗೆ ಆಯೋಜನೆಗೊಳ್ಳುತ್ತಿರುತ್ತವೆ. ಈ ಲಾಭರಹಿತ ಸಂಘದ ಹೆಗ್ಗಳಿಕೆ ಎಂದರೆ ಕೇವಲ ಮನರಂಜನಾ ಚಟುವಟಿಕೆಗಳಲ್ಲೇ ಕಳೆದು ಹೋಗದಿರುವುದು. ಕಿರಿಯರು ಮತ್ತು ಪಾಲಕರಲ್ಲಿ ಅರಿವು ಮತ್ತು ತಿಳಿವಳಿಕೆ ಹೆಚ್ಚಿಸುವ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಉತ್ತರಕರ್ನಾಟಕ ಭಾಗದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಾಬ್ ಪೋರ್ಟಲ್ ಕೂಡ ತೆರೆದಿದ್ದಾರೆ. ನಗರಕ್ಕೆ ಹೊಸದಾಗಿ ಬರುವವರು ಇದರ ನೆರವು ಪಡೆದುಕೊಳ್ಳಬಹುದು. ಯಾರಿಗಾದರೂ ತೊಂದರೆ ಎದುರಾದರೆ ಸದಸ್ಯರು ಒಬ್ಬರಿಗೊಬ್ಬರು ನೆರವಿನ ಹಸ್ತ ಚಾಚುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ “ಉತ್ತರ ಕರ್ನಾಟಕ ಸ್ನೇಹ ಲೋಕ’ ಸಂಘ, ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಒಂದು ದೊಡ್ಡ ಕೂಡು ಕುಟುಂಬ. www.uksl.org
“ಗದಗದಲ್ಲಿನ ಅಂಧರ ಶಾಲೆಗೆ ವಾಕಿಂಗ್ ಸ್ಟಿಕ್‌ಗಳನ್ನು ಉಚಿತವಾಗಿ ನೀಡುವುದರಿಂದ ಹಿಡಿದು ಅನೇಕ ಸಮಾಜಮುಖೀ ಚಟುವಟಿಕೆಗಳಲ್ಲಿ ಸಂಘ ಭಾಗಿಯಾಗಿದೆ’
– ಅರುಣ್ ಯಾದವಾಡ, ಕಾರ್ಯದರ್ಶಿ, ಉತ್ತರ ಕರ್ನಾಟಕ ಸ್ನೇಹ ಲೋಕ
ಉತ್ತರ ಕರ್ನಾಟಕ ಉತ್ಸವ
ಬೆಂಗಳೂರಿನಲ್ಲಿ ನಡೆಯುವ “ಉತ್ತರ ಕರ್ನಾಟಕ ಉತ್ಸವ’ ಒಂದು ದೊಡ್ಡ ಹಬ್ಬ. ಅದೆಷ್ಟು ದೊಡ್ಡದೋ ಅಷ್ಟೇ ವೈವಿಧ್ಯಮಯ. ಸುಮಾರು 600 ಮಂದಿ ಕಲಾವಿದರನ್ನು ಕರೆಸುತ್ತಾರೆ. ಬಾಯಲ್ಲಿ ನೀರೂರಿಸುವ 101 ಬಗೆಯ ಉತ್ತರ ಕರ್ನಾಟಕ ಶೈಲಿ ತಿಂಡಿ ತಿನಿಸುಗಳನ್ನು ಅಲ್ಲಿ ಪಟ್ಟಾಗಿ ಸವಿಯಬಹುದು. ಡೊಳ್ಳು ಕುಣಿತ, ಗರಡಿ ಗಮ್ಮತ್ತು ಆಟಗಳನ್ನು ಕಣ್ತುಂಬಿಕೊಳ್ಳಬಹುದು. ಜಾನಪದ ವಸ್ತು ಪ್ರದರ್ಶನವೂ ಇರುತ್ತದೆ. ಉತ್ತರ ಕರ್ನಾಟಕದ ಮನೆಗಳಿಂದಲೂ ಮಾಯವಾದ ಸಾಂಪ್ರದಾಯಿಕ ವಸ್ತುಗಳನ್ನು ಅಲ್ಲಿನ ಮಳಿಗೆಗಳಿಂದ ಖರೀದಿಸಬಹುದು. ಅರಮನೆ ಮೈದಾನದಲ್ಲಿ ನಡೆಯುವ ಈ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಸಂತುಷ್ಟರಾಗುತ್ತಾರೆ. ಈ ಉತ್ಸವದ ಹಿಂದಿರುವುದು ರಾಜಾಜಿನಗರದ “ಉತ್ತರ ಕರ್ನಾಟಕ ಸಂಘ’. ಪ್ರತಿ ವರ್ಷ “ಉತ್ತರ ಕರ್ನಾಟಕ ಉತ್ಸವ’ ಮಾಡಬೇಕೆನ್ನುವುದು ಸಂಘಟಕರ ಆಸೆ ಆದರೆ, ಕೆಲ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಸದಸ್ಯರದು. ಆದರೆ ದೊಡ್ಡ ಪ್ರಮಾಣದಲ್ಲಿಯಲ್ಲದಿದ್ದರೂ ಪ್ರತಿ ವರ್ಷ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಸಂಘ ನಡೆಸುತ್ತಲೇ ಇರುತ್ತದೆ. ಇತ್ತೀಚಿಗೆ ಆಯೋಜಿಸಿದ್ದ “ರೊಟ್ಟಿ ಉತ್ಸವ’ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದ ಹಾಗೆ ಕಲಾವಿದ ಬಿರಾದಾರ್ ಸಂಘದ ಸಕ್ರಿಯ ಸದಸ್ಯ. ಸಂಘ ನಡೆಸುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ. ನೆರೆದವರನ್ನು ರಂಜಿಸುತ್ತಾ ಓಡಾಡುತ್ತಾರೆ. ತಮ್ಮೂರಿನ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಕೊಡುವುದು ಕೂಡಾ ಸಂಘಟಕರ ಉದ್ದೇಶಗಳಲ್ಲೊಂದು. ಹಾಸ್ಯ ಕಲಾವಿದ ಪ್ರಾಣೇಶ್ ಅವರನ್ನು ಸುಮಾರು ಹದಿನೈದು ವರ್ಷಗಳ ಹಿಂದೆ ಈಗಿನಷ್ಟು ಪ್ರಸಿದ್ಧರಾಗಿರದೇ ಇದ್ದ ಸಮಯದಲ್ಲೇ ನಾವು ಉತ್ಸವಕ್ಕೆ ಕರೆಸಿದ್ದೆವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಸಂಘದವರು. ಈ ವರ್ಷ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಉತ್ಸವ ನಡೆಯಲಿದೆ.
ಬೆಂಗಳೂರಿನಲ್ಲಿ ನೆಲೆಸಿರುವ ನಮ್ಮೂರಿನವರನ್ನು ಕಲೆ ಹಾಕೋದು, ನಮ್ಮ ಸಂಸ್ಕೃತಿಯನ್ನು ಪ್ರಚುರ ಪಡಿಸೋದು ಮಾತ್ರ ನಮ್ಮ ಉದ್ದೇಶವಲ್ಲ. ನಮ್ಮ ಉದ್ದೇಶ, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕವನ್ನು, ಜೊತೆ ಸೇರಿಸೋದು.
– ಚಂದ್ರಶೇಖರ್ ಶಾಂತಗಿರಿ, ಅಧ್ಯಕ್ಷರು, ಉತ್ತರ ಕರ್ನಾಟಕ ಸಂಘ
ಎಲ್ಲರ ಕಾಲೂ ಎಳೆಯುತ್ತೆ ಈ ಪೇಜು
ಇದು ಖಾನಾವಳಿಯ ಹೆಸರಲ್ಲ. ಜವಾರಿ ಕನ್ನಡದಲ್ಲಿರುವ ಫೇಸ್‌ಬುಕ್ ಟ್ರಾಲ್ ಪೇಜ್ ಇದು. ಒಮ್ಮೆ ಭೇಟಿ ಕೊಟ್ಟರೆ, ನಗು ಗ್ಯಾರೆಂಟಿ. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೆ, ಸದಭಿರುಚಿಯ ಹಾಸ್ಯದ ಮೂಲಕ ಜನರ ಆರೋಗ್ಯವನ್ನು ಹೆಚ್ಚಿಸುತ್ತಿರುವ ಪೇಜ್ “ಉತ್ತರ ಕರ್ನಾಟಕ ಸ್ಪೆಷಲ್’. ಯಾವುದೇ ನಿರ್ದಿಷ್ಟ ಪಕ್ಷ, ವ್ಯಕ್ತಿ, ಸಂಘ ಅಥವಾ ವಿಚಾರಧಾರೆಯ ಪಕ್ಷಪಾತ ಇಲ್ಲಿ ನಡೆಯೋದಿಲ್ಲ. ಎಲ್ಲರ ಕಾಲನ್ನೂ ಇಲ್ಲಿ ಎಳೆಯಲಾಗುತ್ತೆ. ಹಾಸ್ಯ ಒಂದೇ ಇಲ್ಲಿನ ಮಂತ್ರ, ಜಪ. ತಪ ಎಲ್ಲಾ. ಪೇಜ್ ಅನ್ನು ನಡೆಸುತ್ತಿರುವವರು ಉತ್ತರ ಕರ್ನಾಟಕದ ಆರು ಮಂದಿ. ಚಿನ್ಮಯ್, ವರದರಾಜ್, ಕಿರಣ್, ವಿವೇಕ್ ಕಾರ್ತಿಕ್ ಮತ್ತು ಗುರುನಾಥ್. ಪೇಜ್ ಸ್ಥಾಪಿಸಿದ್ದು ಚಿನ್ಮಯ್. ಸದಸ್ಯರು ಒಬ್ಬೊಬ್ಬರು ಒಂದೊಂದು ಕಡೆಯಿದ್ದಾರೆ. ವಿವೇಕ್ ಕಾರ್ತಿಕ್ ಮತ್ತು ಗುರುನಾಥ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ವೃತ್ತಿಯಲ್ಲಿದ್ದಾರೆ. ಲಂಚ್ ಬ್ರೇಕ್ ಇರಲಿ, ಟೀ ಬ್ರೇಕ್ ಇರಲಿ, ಒಂದು ಚಿಕ್ಕ ವಿರಾಮ ಸಿಕ್ಕ ಕೂಡಲೆ ಪೇಜ್‌ನಲ್ಲಿ ಏನಾದರೂ ಅಪ್‌ಡೇಟ್ ಹಾಕುತ್ತಾರೆ. ಆ ಮೂಲಕ ನಗರ ಪ್ರದೇಶಗಳ ಜಂಜಡದ ನಡುವೆ ತಮ್ಮೂರನ್ನು ನೆನೆಸಿಕೊಳ್ಳುವಂತೆ ಮಾಡಿ ಫೇಸ್‌ಬುಕ್ಕಿಗರನ್ನು ನಗಿಸಿ ಹಗುರಾಗಿಸುತ್ತಾರೆ. ಅಂದಹಾಗೆ ಈ ಪೇಜ್‌ಗೆ ಎರಡೂವರೆ ಲಕ್ಷ ಮಂದಿ ಚಂದಾದಾರರಿದ್ದಾರೆ!
ಫೇಸ್‌ಬುಕ್ ಪೇಜ್: www.facebook.com/JawariKannada
ಬೆಳಗಾವಿಯಲ್ಲಿ ಎಂ.ಟೆಕ್ ಓದುತ್ತಿದ್ದಾಗ ವಿದ್ಯಾರ್ಥಿಗಳಲ್ಲಿ ಅನೇಕರು ಕನ್ನಡ ಮಾತಾಡಲು ಹಿಂಜರಿಯುತ್ತಿದ್ದರು. ಎಲ್ಲಿ ಇತರರು ತಮ್ಮನ್ನು ಕಡೆಯಾಗಿ ನೋಡುತ್ತಾರೋ ಎಂಬ ಹಿಂಜರಿಕೆ ಇದಕ್ಕೆ ಕಾರಣ. ಹೇಗಾದರೂ ಮಾಡಿ ಈ ಹಿಂಜರಿಕೆಯನ್ನು ತೊಡೆದುಹಾಕಬೇಕು ಅಂತ ಈ ಪೇಜ್ ಶುರು ಮಾಡಿದೆ.
– ಚಿನ್ಮಯ್, ಸ್ಥಾಪಕ ಸದಸ್ಯ, “ಉತ್ತರ ಕರ್ನಾಟಕ ಸ್ಪೆಷಲ್’ ಫೇಸ್‌ಬುಕ್ ಪೇಜ್
ಕಲೆಯೇ “ಉತ್ತರ’
ಚಿತ್ರಕಲೆಯಲ್ಲಿ ಹಡಪದ್, ಖಂಡೇರಾವು, ಅಂದಾನಿ, ಸುನಿಲ್, ದೊಡ್ಡಮನಿ ಅವರದು ದೊಡ್ಡ ಹೆಸರು. ಅವರೆಲ್ಲರ ನಡುವಿನ ಸಾಮ್ಯತೆ ಎಂದರೆ ಅವರೆಲ್ಲರೂ ಉತ್ತರ ಕರ್ನಾಟಕ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದವರು. ಅಲ್ಲಿನವರ ಚಿತ್ರಗಳಲ್ಲಿ ಉತ್ತರ ಕರ್ನಾಟಕದ ಸೊಗಡನ್ನು ಗುರುತಿಸಬಹುದು. ಸಾಂಸ್ಕೃತಿಕ, ರಾಜಕೀಯ ಸ್ಥಿತ್ಯಂತರಗಳನ್ನು ಗುರುತಿಸಬಹುದು. ಅಲ್ಲಿನ ಬಿಸಿಲು, ಬವಣೆ, ಜನಜೀವನವನ್ನು ಕಲೆಯ ಮೂಲಕ ಜಗತ್ತಿಗೇ ಸಾರಿದರು. ಕಲಬುರ್ಗಿಯ ಬಳಿಯ ಕಣ್ಣೂರು ಎಂಬ ಕುಗ್ರಾಮದವರು ದೊಡ್ಡಮನಿ. ಒಂದು ಕಾಲದಲ್ಲಿ ಡ್ರಾಯಿಂಗ್ ಎಂದರೇನೆಂದೇ ಗೊತ್ತಿಲ್ಲದವರು ಪಶ್ಚಿಮ ಬಂಗಾಳದ ಶಾಂತಿನಿಕೇತನದಿಂದ ಕಲೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದರು, ಅಸಂಖ್ಯ ಕಲಾಪ್ರದರ್ಶನಗಳನ್ನು ಕ್ಯೂರೇಟ್ ಮಾಡಿದರು. ಹಲವು ಯುವ ಪ್ರತಿಬೆಗಳನ್ನು ಗುರುತಿಸಿ ಮಾನ್ಯತೆ ದೊರಕಿಸಿಕೊಟ್ಟರು. ಇಂದು ದೇಶ ವಿದೇಶಗಳ ಪ್ರಖ್ಯಾತ ಕಲಾಪ್ರದರ್ಶನಗಳಿಂದ ದೊಡ್ಡಮನಿಯವರಿಗೆ ಆಹ್ವಾನ ಬರುತ್ತದೆ. ಇಂದಿರಾನಗರದ ಸಿ.ಎಂ.ಎಚ್ ರಸ್ತೆಯಲ್ಲಿ ಅವರದೆ “ದೊಡ್ಡಮನಿ ಆರ್ಟ್ ಸ್ಟುಡಿಯೊ’ ನಡೆಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡುತ್ತಾರೆ. ಅಮೆರಿಕ, ಈಜಿಪ್ಟ್, ಶ್ರೀಲಂಕಾ, ಆಸ್ಟ್ರೇಲಿಯಾದಿಂದೆಲ್ಲಾ ಅವರ ಬಳಿ ಕಲಿಯಲು ಬರುತ್ತಾರೆಂದರೆ, ದೊಡ್ಡಮನಿರಿಗಿರುವ ಹೆಸರನ್ನು ಊಹಿಸಬಹುದು. ಅಷ್ಟೂ ದೇಶಗಳಿಂದ ಬರುವ ವಿದ್ಯಾರ್ಥಿಗಳು ವಾಪಸ್ ಹೋಗುವಾಗ ಉತ್ತರಕರ್ನಾಟಕವನ್ನೂ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಾರೆ.
ಭೂಮಿ ಮೇಲಿನ ಬದುಕು ಸಾಧ್ಯವಾಗಿರೋದು ಪ್ರೀತಿ ವಿಶ್ವಾಸಗಳಿಂದ. ಮನಸ್ಸಿಗೆ ಬೆಳಕು ಬೇಕು. ಆ ಬೆಳಕೇ ಬುದ್ಧ. ನಾನು ಈಗ ಬುದ್ಧನ ಸರಣಿಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಬುದ್ಧ ತನ್ನ ಹಿತೋಪದೇಶಗಳಲ್ಲಿ ಜೀವದಿಂದಿದ್ದಾನೆ ಅನ್ನೋದು ನನ್ನ ನಂಬಿಕೆ. ಅವನ ಬೆಳಕನ್ನು ಕಲಾಮಾಧ್ಯಮದ ವ್ಯಕ್ತಪಡಿಸೋಕೆ ಚಿಕ್ಕದಾಗಿ ಪ್ರಯತ್ನಿಸುತ್ತಿದ್ದೇನೆ.
– ದೊಡ್ಡಮನಿ
www.doddamani.com
Lolಬಾಗ್‌ನಲ್ಲಿ ಜವಾರಿ ಕನ್ನಡ
ಕಾಮಿಡಿಯಲ್ಲಿ ಉತ್ತರ ಕರ್ನಾಟಕ ಕಲಾವಿದರ ಖದರ್ರೆà ಬೇರೆ. ಜವಾರಿ ಭಾಷೆಯ ಗಮ್ಮತ್ತೇ ಅಂಥದ್ದು. ಹಾಸ್ಯ ಅಲ್ಲಿನವರಿಗೆ ನಿರಾಯಾಸವಾಗಿ ಒಲಿದುಬಂದಿರುತ್ತದೆ. ಬೆಂಗಳೂರಿನಲ್ಲಿ ಐ.ಟಿ ಉದ್ಯೋಗ ಮಾಡಿಕೊಂಡು ಹಾಸ್ಯ ತಂಡವೊಂದರ ಸದಸ್ಯನಾಗಿ 60ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿರುವವರು ಕಾರ್ತಿಕ್ ಪತ್ತಾರ್. ಇವರು ಉತ್ತರ ಕರ್ನಾಟಕದ ಸೊಗಡಿನಲ್ಲೇ ನಗಿಸುತ್ತಾರೆ. ಲವಲೇಶವೂ ಬೆರಕೆಯಿಲ್ಲ! ಕಲಬುರ್ಗಿಯ ಕೆಂಬಾವಿ ಅವರ ಊರು. ಊರಿನಲ್ಲಿ ಗಣಪತಿ ಉತ್ಸವದಂಥ ಸಾಂಸ್ಕೃತಿಕ ಉತ್ಸವಗಳಲ್ಲಿ ಮಿಮಿಕ್ರಿ ಮಾಡುತ್ತಿದ್ದವರು ಇಂದು ಐಟಿ ಮಂದಿಯನ್ನು ನಗಿಸುತ್ತಿದ್ದಾರೆ. ಅವರಿರುವ ತಂಡದ ಹೆಸರು “ಔಟlಬಾಗ್’. ಅನುಪ್ ಮಯ್ಯ, “ಬೂ ಮೈ ಶೋ’ ಯೂಟ್ಯೂಬ್ ಚಾನೆಲ್ ಖ್ಯಾತಿಯ ಪವನ್ ವೇಣುಗೋಪಾಲ್, ಸುದರ್ಶನ್ ಮತ್ತು ಹಂಪಕುಮಾರ್ ಅಂಗಡಿ ಇತರೆ ಸದಸ್ಯರು. ಆಗಸ್ಟ್ 18ರಂದು ತಂಡ ಹನುಮಂತನಗರದ ಕೆ. ಎಚ್ ಕಲಾಸೌಧದಲ್ಲಿ ಪ್ರದರ್ಶನ ನೀಡುತ್ತಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಬಹುದು. ಕಾರ್ತಿಕ್ ಮೊಬೈಲಿಗೆ ಕರೆ ಮಾಡಿದರೆ ಕೇಳಿ ಬರುವ ರಿಂಗ್‌ಟೋನ್ ಯಾವುದು ಗೊತ್ತಾ? ಅಂಬರೀಷ್ ಅಭಿನಯಿಸಿದ್ದ “ಅಂದವೋ ಅಂದವೋ ಕನ್ನಡ ನಾಡು…’. ನೂರಕ್ಕೆ ನೂರು ಪ್ರತಿಶತ ನಿಜ. ಏನಂತೀರಾ?
ಒಮ್ಮೆ ನನ್ನ ಶೋಗೆ ದಾನಿಶ್ ಸೇಠ್(ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್) ಬಂದಿದ್ದರು. ನನ್ನ ಜವಾರಿ ಕನ್ನಡ ಕೇಳಿ ಯಾವ ಕನ್ನಡಾನಪ್ಪ ಇದು ಅಂತ ಉಸಿರು ಬಿಟ್ಟಿದ್ದರು. ನಮ್ಮ ಶೈಲಿಯಲ್ಲೇ ಮಾತಾಡಲು ಕಷ್ಟಪಟ್ಟು ಪ್ರಯತ್ನಿಸಿ ಬೆನ್ನು ತಟ್ಟಿದರು.
– ಕಾರ್ತಿಕ್ ಪತ್ತಾರ್, Lolಬಾಗ್ ಹಾಸ್ಯತಂಡದ ಸದಸ್ಯ
ಯೂಟ್ಯೂಬ್ ಚಾನೆಲ್: : goo.gl/gqTivH
ಖಾನಾವಳಿ
ಬೆಂಗಳೂರಿನಲ್ಲಿರುವ ಖಾನಾವಳಿಗಳನ್ನು ಲೆಕ್ಕವಿಟ್ಟವರಿಲ್ಲ. ಊರ ತುಂಬಾ ಹಬ್ಬಿರುವ ಪಿಜ್ಜಾ, ಬರ್ಗರ್ ಸ್ಯಾಂಡ್‌ವಿಚ್ ಜಾಯಿಂಟ್‌ಗಳ ನಡುವೆ ಓಯೆಸಿಸ್‌ನಂತಿವೆ ಖಾನಾವಳಿಗಳು. ಬೆಂಗಳೂರಿಗರಿಗೆ ತಮ್ಮ ಬೇರನ್ನು ನೆನಪಿಸುವುದರಲ್ಲಿ ಜೋಳದ ರೊಟ್ಟಿ, ಕೆಂಪು ಮೆಣಸಿನಕಾಯಿ ಚಟ್ನಿಯ ಪಾಲೂ ಇದೆ. ಖಾನಾವಳಿಯ ಫಲಕದಲ್ಲಿ ಅಗಸಿ ಪುಡಿ, ಎಣ್ಣೆಗಾಯಿ ಪಲ್ಯ, ದೊಣ್ಣೆಮೆಣಸಿನಕಾಯಿ ಪಲ್ಯ, ಪುಂಡಿ ಸೊಪ್ಪು, ಬೆಣ್ಣೆ ಇನ್ನೂ ಹತ್ತು ಹಲವು ಭಕ್ಷ್ಯಗಳನ್ನು ಹೆಸರುಗಳನ್ನು ಓದುತ್ತಿದ್ದರೆ ಎಲ್ಲವನ್ನೂ ತಟ್ಟೆಗೆ ಹಾಕಿಸಿಕೊಳ್ಳುವ ಮನಸ್ಸಾದರೆ ಅತಿಶಯೋಕ್ತಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.