ರಾಜಪಥ ರೋಮಾಂಚನ
ಸೇನೆಯ ಪರೇಡಿನ ಹಿಂದಿನ ಕತೆ
Team Udayavani, Jan 25, 2020, 6:10 AM IST
ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ರೋಮಾಂಚನವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು. ಅಲ್ಲಿ ಜರುಗುವುದು ನಮ್ಮ ಸೇನಾಶಕ್ತಿಯ ವಿಶ್ವರೂಪ ದರ್ಶನ. ಭೂಸೇನೆ, ವಾಯುಸೇನೆ ಮತ್ತು ನೌಕಾದಳಗಳು 6 ತಿಂಗಳು ಮುಂಚೆಯಿಂದಲೇ ಗಣತಂತ್ರ ದಿವಸದ ಸಂಭ್ರಮಕ್ಕೆ ತಯಾರಿ ಆರಂಭಿಸುತ್ತವೆ…
ದೆಹಲಿಯ ರಾಜಪಥ ಇರುವುದು, ರಾಷ್ಟ್ರಪತಿ ಭವನ ಮತ್ತು 3 ಕಿ.ಮೀ. ದೂರವಿರುವ ಇಂಡಿಯಾ ಗೇಟ್‌ನ ನಡುವೆ. ಈಗಿರುವ ರಾಷ್ಟ್ರಪತಿ ಭವನದ ಜಾಗದಲ್ಲಿ ಒಂದು ಗುಡ್ಡವಿತ್ತು. ಅಲ್ಲಿ ಸುಮಾರು 300 ಕುಟುಂಬಗಳ ಹಳ್ಳಿಯಿತ್ತು; ಆ ಹಳ್ಳಿಯ ಮತ್ತು ಬೆಟ್ಟದ ಹೆಸರು “ರೈಸೀನಾ’ ಎಂದು. 1900ರ ಸುಮಾರಿನಲ್ಲಿ ಎಡ್ವಿನ್ ಲುಟಿಯನ್ ಎನ್ನುವ ವಾಸ್ತುಶಿಲ್ಪಿ, ತನ್ನ ತಂಡದೊಂದಿಗೆ ಬಂದು ಬ್ರಿಟಿಷ್ ಸರ್ಕಾರದ ಕಟ್ಟಡಗಳು, ಸಚಿವಾಲಯಗಳನ್ನು ನಿರ್ಮಿಸಲು ಇದೇ ಸೂಕ್ತ ಸ್ಥಳ ಎಂದು ನಿರ್ಧರಿಸಿ, ಈಗಿನ ಸಂಸದ್ ಭವನ, ನಾರ್ತ್ ಬಾಕ್, ಸೌತ್ ಬ್ಲಾಕ್ ಹಾಗೂ ರಾಷ್ಟ್ರಪತಿ ಭವನವನ್ನು ನಿರ್ಮಿಸುತ್ತಾನೆ. ಈ ವಾಸ್ತುಶಿಲ್ಪಿಯ ನೆನಪಿಗಾಗಿ ದೆಹಲಿಯ ಈ ಭಾಗವನ್ನು “ಲುಟಿಯನ್ಸ್ ಡೆಲ್ಲಿ’ ಎಂದೂ ಕರೆಯುತ್ತಾರೆ.
ಪ್ರಥಮ ವಿಶ್ವಯುದ್ಧ ಮತ್ತು ಆಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣಾರ್ಥ1921ರಲ್ಲಿ ಇಂಡಿಯಾ ಗೇಟ್ ಅನ್ನು ನಿರ್ಮಿಸಲಾಯಿತು. 1971ರ ಭಾರತ- ಪಾಕಿಸ್ತಾನದ ಯುದ್ಧದ ನಂತರ ಈ ಸ್ಮಾರಕವನ್ನು “ಅಮರ್ ಜವಾನ್ ಜ್ಯೋತಿ’ ಎಂದು ಹೆಸರಿಸಲಾಯಿತು. ಈ ಎರಡು ಐತಿಹಾಸಿಕ ಸ್ಥಳಗಳ ನಡುವಿನ 3 ಕಿ.ಮೀ. ಉದ್ದದ ವಿಶಾಲವಾದ ರಸ್ತೆಯನ್ನು “ರಾಜಪಥ’ವೆಂದು ಕರೆಯಲಾಗುತ್ತದೆ. ಇಲ್ಲೇ ನಡೆಯುವುದು, ನಮ್ಮ ದೇಶದ ಹೆಮ್ಮೆಯ ಸೈನ್ಯದ, ಸಂಸ್ಕೃತಿಯ, ಕಲೆಯ ಮತ್ತು ಸಾಹಸದ ಪ್ರದರ್ಶನ; ಪ್ರತಿವರ್ಷ ಜ.26ರಂದು ಆಚರಿಸುವ ಗಣರಾಜ್ಯೋತ್ಸವ ಸಂಭ್ರಮ. ಡಿಸೆಂಬರ್‌ನಿಂದಲೇ ಇಲ್ಲಿ ಗಣರಾಜ್ಯೋತ್ಸವದ ತಯಾರಿ ಗರಿಗೆದರಿಕೊಳ್ಳುತ್ತದೆ.
ಗಣರಾಜ್ಯೋತ್ಸವದ ಸಮಾರಂಭದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮತ್ತಿತರ ಗಣ್ಯರು ಒಂದೇ ಸ್ಥಳದಲ್ಲಿ ಉಪಸ್ಥಿತರಿರುವುದರಿಂದ, ಕೆಲವು ವಿಧ್ವಂಸಕ ಶಕ್ತಿಗಳಿಂದ ಇವರನ್ನು ರಕ್ಷಿಸುವುದು ಅತ್ಯಂತ ಪ್ರಮುಖ ಜವಾಬ್ದಾರಿ. ಇದಕ್ಕೆಂದೇ ರಾಷ್ಟ್ರಪತಿ ಭವನ ಮತ್ತು ಆಸುಪಾಸಿನ ಪ್ರದೇಶವನ್ನು ಶಾಶ್ವತವಾಗಿ ನಿಷೇಧಿತ ಸ್ಥಳ ಎಂದು ಘೋಷಿಸುತ್ತಾರೆ. ಅಪ್ಪಿತಪ್ಪಿಯೂ ಈ ಪ್ರದೇಶಗಳ ಮೇಲೆ ವಿಮಾನವಾಗಲಿ, ಡ್ರೋನ್‌ಗಳಾಗಲಿ ಹಾರುವಂತಿಲ್ಲ. ಹಾಗೇನಾದರೂ ಹಾರಿದರೆ, ಆ ವಿಮಾನವನ್ನು ಹೊಡೆದುರುಳಿಸಲು ಆಯಕಟ್ಟಿನ ಜಾಗಗಳಲ್ಲಿ ವಾಯು ರಕ್ಷಣಾ ತೋಪುಗಳಿವೆ. ಹೆಲಿಕಾಪ್ಟರ್‌ಗಳ ಗಸ್ತು ಇರುತ್ತದೆ. ಎಲ್ಲ ವೈರ್‌ಲೆಸ್ ತರಂಗಾಂತರದ ಸಂಭಾಷಣೆಗಳನ್ನು ನಿರಂತರವಾಗಿ ಗಮನವಿಟ್ಟು ಕೇಳಲೆಂದೇ ಒಂದು ವಿಭಾಗವಿದೆ. ಸಶಸ್ತ್ರರಾದ, ಆದರೆ ಸಾದಾ ಬಟ್ಟೆಯಲ್ಲಿ ಅಲ್ಲಲ್ಲಿ ಪುರುಷ ಮತ್ತು ಮಹಿಳಾ ಕಮಾಂಡೋಗಳು ಇರುತ್ತಾರೆ.
ಸೇನೆಯ ಪರೇಡಿನ ಸಿದ್ಧತೆ: ಭೂಸೇನೆ, ವಾಯುಸೇನೆ ಮತ್ತು ನೌಕಾದಳಗಳು 6 ತಿಂಗಳು ಮುಂಚೆಯಿಂದಲೇ ಗಣತಂತ್ರ ದಿವಸದ ಸಂಭ್ರಮಕ್ಕೆ ತಯಾರಿ ಆರಂಭಿಸುತ್ತವೆ. ಈ ವರ್ಷ ಇಂತಿಂಥ ರೆಜಿಮೆಂಟು, ರಾಜಧಾನಿಯ ಗಣರಾಜ್ಯೋತ್ಸವಕ್ಕೆ ಆಯ್ಕೆಯಾಗಿದೆ ಎಂದರೆ ಅಲ್ಲಿನ ಸೈನಿಕರು ಹೆಮ್ಮೆಯಿಂದ ಬೀಗುತ್ತಾರೆ. ಈ ಬೆಟಾಲಿಯನ್‌ನ ತೋಪುಗಳು ರಾಷ್ಟ್ರಪತಿಯವರು ಧ್ವಜಾರೋಹಣ ಮಾಡುವ ಸಮಯದಲ್ಲಿ, 21 ಕುಶಾಲ ತೋಪಿನ ಸೆಲ್ಯೂಟ್ ಕೊಡಲು ಆಯ್ಕೆಯಾಯಿತೆಂದರೆ, ಆ ತುಕಡಿಗೆ ಸಂದ ಗೌರವ. ಆಯ್ಕೆಯಾದ ಟ್ಯಾಂಕ್ ರೆಜಿಮೆಂಟು, ತನ್ನ ಟ್ಯಾಂಕುಗಳನ್ನು ದೆಹಲಿಗೆ ಸಾಗಿಸುತ್ತದೆ. ದೇಶದ ಮೂಲೆ ಮೂಲೆಯಿಂದ ಬಂದ ಈ ತುಕಡಿಗಳು ಡಿಸೆಂಬರ್ ಮೊದಲ ವಾರದಲ್ಲೇ ದೆಹಲಿಯ ದಂಡುಪ್ರದೇಶಕ್ಕೆ ಬಂದು ತಮ್ಮ ತಮ್ಮ ಟೆಂಟುಗಳ ಕ್ಯಾಂಪನ್ನು ಸ್ಥಾಪಿಸುತ್ತವೆ.
ಬೆಳಗ್ಗೆ ನಾಲ್ಕು ಗಂಟೆಗೇ ದೈಹಿಕ ದಂಡನೆ ಆರಂಭಗೊಳ್ಳುತ್ತದೆ. ಅವರವರ ಬೆಟಾಲಿಯನ್ ಕಮಾಂಡರ್ ಆದೇಶದ ಮೇಲೆ ದಿನದ ಕಾರ್ಯಕ್ರಮ ನಿರೂಪಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಅವರ ಕಮಾಂಡಿಂಗ್ ಆಫೀಸರ್ ಬಂದು, ತಮ್ಮ ತಂಡದ ಪ್ರಗತಿಯನ್ನು ವೀಕ್ಷಿಸುತ್ತಾರೆ. ತಂಡವನ್ನು ಹುರಿದುಂಬಿಸುತ್ತಾರೆ. ಅಗತ್ಯವಿದ್ದಲ್ಲಿ ಪರಿಷ್ಕರಿಸುತ್ತಾರೆ. ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದ ಹಾಗೆಯೇ ಹೊಸ ಬಣ್ಣ ಬಳಿದುಕೊಂಡು ಮಿರಮಿರ ಮಿಂಚುತ್ತಿರುವ ಟ್ಯಾಂಕುಗಳು, ತೋಪುಗಳನ್ನು ಕೆಂಪುಕೋಟೆಯ ಆವರಣಕ್ಕೆ ರವಾನಿಸುತ್ತಾರೆ. ರಾಜಪಥದಲ್ಲಿ ತಾಲೀಮು ನಡೆಯುತ್ತದೆ. ಅಷ್ಟೊತ್ತಿಗಾಗಲೇ ದೆಹಲಿಯಲ್ಲಿ ಚಳಿ, ಮಂಜಿನ ವಾತಾವರಣ, ಅದರಲ್ಲೂ ಧೃತಿಗೆಡದೆ ಹುರುಪಿನಿಂದ ಅಭ್ಯಾಸಗಳು ಸಾಗುತ್ತವೆ.
ವಾಯುಸೇನೆಯ ತಯಾರಿ: ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಇವರ ಸಿದ್ಧತೆಗಳು ನಡೆಯುತ್ತವೆ. ಈ ಸಲದ ಗಣತಂತ್ರದ ಪರೇಡಿನಲ್ಲಿ ರಫೇಲ್ ಯುದ್ಧ ವಿಮಾನದ ಒಂದು ಮಾಪಕ ಪ್ರತಿರೂಪವನ್ನು ಪ್ರದರ್ಶಿಸಲಾಗುತ್ತದೆ. ಇದರ ನಿರ್ಮಾಣ 3 ತಿಂಗಳ ಹಿಂದೆಯೇ ಪ್ರಾರಂಭವಾಯಿತು. ಪೂರ್ಣ ಪ್ರಮಾಣದ ಸಿದ್ಧತೆ ನಡೆದ ನಂತರ ಇದನ್ನು ರಿಹರ್ಸಲ್ ಸಮಯಕ್ಕೆ ರಾಜಪಥಕ್ಕೆ ರವಾನಿಸುತ್ತಾರೆ. ವಾಯುಸೇನೆಯ ಪ್ರಮುಖ ಚಟುವಟಿಕೆ, ಗಣರಾಜ್ಯೋತ್ಸವದ ಅಂತಿಮ ಹಂತದಲ್ಲಿ ನಡೆಯುವ ವಾಯು ಪ್ರದರ್ಶನ. ದೆಹಲಿಯ ಏರ್‌ಪೋರ್ಟ್‌ನಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ವಿಮಾನ ಲ್ಯಾಂಡ್ ಆಗುತ್ತದೆ ಮತ್ತು ಗಗನಕ್ಕೆ ಹಾರುತ್ತದೆ.
ಆದರೆ, ವಾಯು ಪ್ರದರ್ಶನ ಮತ್ತು ರಿಹರ್ಸಲ್ ಸಮಯದಲ್ಲಿ ನಾಗರಿಕ ವಾಯು ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಜ.18ರಿಂದಲೇ ಈ ಪ್ರಕ್ರಿಯೆ ಪ್ರಾರಂಭವಾಗಿ ಜ.26ಕ್ಕೆ ಅಂತ್ಯಗೊಳ್ಳುತ್ತದೆ. ಎಲ್ಲ ದೇಶ-ವಿದೇಶಗಳ ಏರ್‌ಲೈನುಗಳಿಗೆ ಈ ಮಾಹಿತಿಯನ್ನು ತಲುಪಿಸುವುದು, ಭಾರತೀಯ ನಾಗರಿಕ ವಿಮಾನ ಸಂಸ್ಥೆಯ ಕೆಲಸ. ರಾಜಪಥದ ಸಮೀಪದಲ್ಲಿ ವಾಯು ಸಂಚಾರ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ವಾಯು ಪ್ರದರ್ಶನದಲ್ಲಿ ಪಾಲ್ಗೊಳ್ಳುವ 30 ವಿವಿಧ ರೀತಿಯ ವಿಮಾನಗಳನ್ನು ಇಲ್ಲಿಂದಲೇ ನಿಯಂತ್ರಿಸುತ್ತಾರೆ. ಈ ವಿಮಾನಗಳು ವಾಯುಸೇನೆಯ ಹಲವಾರು ವಾಯುನೆಲೆಗಳಿಂದ ನಿರ್ಗಮಿಸುತ್ತವೆ.
ಅತಿ ವೇಗದ ಸುಖೋಯ್ ವಿಮಾನಗಳು ಗ್ವಾಲಿಯರ್‌ನಿಂದ ನಿರ್ಗಮಿಸಿದರೆ, ಅತಿದೊಡ್ಡ ಗ್ಲೋಬ್ ಮಾಸ್ಟರ್ ವಿಮಾನ ಚಂಡೀಗಢದಿಂದ ನಿರ್ಗಮಿಸುತ್ತದೆ. ಒಂದು ನಿಗದಿತ ಸ್ಥಳದಲ್ಲಿ ಇವು ಕೂಡಿ ಪ್ರದರ್ಶನ ನೀಡುತ್ತವೆ. ವಿಮಾನಗಳ ನಿಯಂತ್ರಣ ಬಹಳ ಕರಾರುವಾಕ್ಕಾಗಿ ನಡೆಯಬೇಕು. ಅತಿಯಾಗಿ ಮಂಜು ಕವಿದ ವಾತಾವರಣವಿದ್ದರೆ, ತುಂಬಾ ಪಕ್ಷಿಗಳು ರಾಜಪಥದ ಆಸುಪಾಸಿನಲ್ಲಿ ಕಾಣಿಸಿಕೊಂಡರೆ ಸುರಕ್ಷಣೆಯ ದೃಷ್ಟಿಯಿಂದ ಈ ವಾಯು ಪ್ರದರ್ಶನ ನಡೆಸಬೇಕೇ ಅಥವಾ ರದ್ದು ಮಾಡಬೇಕೇ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲು ಅನುಭವಿ ಪೈಲಟ್ ಒಬ್ಬರು ವಾಯು ನಿಯಂತ್ರಣ ಕೇಂದ್ರದಲ್ಲಿ ಉಪಸ್ಥಿತರಿರುತ್ತಾರೆ.
ಶಕ್ತಿ ಪ್ರದರ್ಶನದ ಸಮಯ: ಭೂಸೇನೆ, ವಾಯುಸೇನೆ, ನೌಕಾದಳದ ಪಥಚಲನೆಯ ದಳಗಳು ಒಂದರ ಹಿಂದೆ ಒಂದು; ಒಂದಕ್ಕಿಂತಲೂ ಮತ್ತೂಂದು ಉತ್ತಮ ಎನಿಸುವಂಥ ಶಿಸ್ತಿನ ಮೆರವಣಿಗೆ. ಒಟ್ಟು 12 ಸೇನೆಯ ತುಕಡಿಗಳ ನಂತರ ಬರುತ್ತವೆ, ಎನ್‌ಸಿಸಿ, ಎನ್ನೆಸ್ಸೆಸ್ ಶಾಲಾಮಕ್ಕಳ ವಾದ್ಯವೃಂದ… ಸಾಹಸೀ ಮಕ್ಕಳ ಆನೆಯ ಮೇಲೆ ಮೆರವಣಿಗೆ… ಹೀಗೆ ನಿರಂತರ ಅನುಭೂತಿ. ನಂತರ ಎಲ್ಲರ ಚಿತ್ತ ಆಕಾಶದತ್ತ. ವಾಯುಸೇನೆಯ ಬಲಪ್ರದರ್ಶನದ ಸಮಯ. ಬೃಹದಾಕಾರದ ವಿಮಾನಗಳು ಒಂದಕ್ಕೊಂದು ಅಂಟಿಕೊಂಡಿರುವಂತೆ ಗೋಚರಿಸುತ್ತವೆ. ಹಿಂದೆಯೇ ಬಾಣದ ಆಕಾರದಲ್ಲಿ ಶರವೇಗದಲ್ಲಿ ಘರ್ಜಿಸಿ ಕ್ಷಣಾರ್ಧದಲ್ಲಿ ಮರೆಯಾಗುವ ಯುದ್ಧ ವಿಮಾನಗಳು.
ಇನ್ನೊಂದು ರೌಂಡ್ ಮರಳಿ ಬರಬಾರದೇ ಎನ್ನಿಸುತ್ತದೆ. ಆಗ್ರಾ, ಚಂಡೀಗಢ, ಗ್ವಾಲಿಯರ್ ಮತ್ತು ಹಿಂಡನ್ ವಾಯುನೆಲೆಗಳಿಂದ ಬಂದ ಈ ವಿಮಾನಗಳಿಗೆ ರಾಜಪಥದ ಮೇಲೆ ಹಾರಾಡುವ ಅವಕಾಶ ಸಿಗುವುದು ಮಾತ್ರ ಕೆಲವು ಸೆಕೆಂಡುಗಳಷ್ಟು ಸಮಯ ಮಾತ್ರ. ಅಂತಿಮವಾಗಿ ಒಂದು ವಿಮಾನ ಆಕಾಶವನ್ನು ಭೇದಿಸಿಕೊಂಡು ಮರೆಯಾಗುವುದನ್ನು ನೋಡುತ್ತಾ, ಓಹ್! ಮುಗಿದೇಹೋಯಿತೇ ಎಂದುಕೊಳ್ಳುತ್ತಾ, ನೋಯುತ್ತಿರುವ ಕತ್ತುಗಳನ್ನು ಒತ್ತಿಕೊಳ್ಳುತ್ತಾ, ಮತ್ತೆ ಈ ವಿಸ್ಮಯ ನೋಡಲು ಒಂದು ವರ್ಷ ಕಾಯಬೇಕಲ್ಲ ಎಂದುಕೊಂಡು, ಅತಿಥಿಗಳು, ಸಭಿಕರು ನಿರ್ಗಮಿಸುತ್ತಾರೆ. ತಮ್ಮತಮ್ಮ ಮನೆಗಳ ಟಿವಿಯ ಮುಂದೆ ಕುಳಿತಿದ್ದ ಲಕ್ಷಾಂತರ ಭಾರತೀಯರಿಗೂ ಹಾಗೆಯೇ ಅನ್ನಿಸಬಹುದು.
ಬಣ್ಣದ ಹೊಗೆಯ ರಂಗೋಲಿ…: ರಾಜಪಥದ ಆಗಸದಲ್ಲಿ ಮೊದಲು ಕಾಣಿಸಿಕೊಳ್ಳುವುದು ಬೃಹದಾಕಾರದ ಗ್ಲೋಬ್ ಮಾಸ್ಟರ್ ವಿಮಾನ ಮತ್ತು ಅದರ ಇಬ್ಬದಿಯ ರೆಕ್ಕೆಗಳಿಗೆ ಅಂಟಿಕೊಂಡು ಬಣ್ಣದ ಹೊಗೆ ಸುರಿಸುತ್ತಾ ಹಾರುವ ವಿಮಾನಗಳು “ಸುಖೋಯ್- 31′ ಯುದ್ಧವಿಮಾನ. ಈ ವರ್ಷದ ವಿಶೇಷ ಆಕರ್ಷಣೆ ಎಂದರೆ, ವಾಯುಸೇನೆಯ “ಅಪಾಚೆ’ ಎನ್ನುವ ಆಕ್ರಮಣಕಾರಿ ಹೆಲಿಕಾಪ್ಟರ್ ಮತ್ತು ಅತಿಯಾದ ಭಾರವಾದ ವಸ್ತುಗಳನ್ನು ಸಾಗಿಸುವ “ಚುನೂಕ್’ ಹೆಲಿಕಾಪ್ಟರ್.
ಈ ಬಾರಿಯ ಅತಿಥಿ: 26 ಜನವರಿ 2020 ಗಣರಾಜ್ಯೋತ್ಸವಕ್ಕೆ ಆಮಂತ್ರಿಸಿರುವುದು ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೋಲ್ಸಾನಾರೋ ಮತ್ತು ಅವರ ಪತ್ನಿ.
* ವಿಂಗ್ ಕಮಾಂಡರ್ ಸುದರ್ಶನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.