ನಾನಾ ರೂಪದ 1 ರೂ.!
Team Udayavani, Dec 2, 2017, 1:13 PM IST
ಒಂದು ರೂ. ನೋಟು! ಪುಟ್ಟದಾಗಿ, ಒಂದು ತೋರುಬೆರಳಿನ ಉದ್ದದ ಈ ನೋಟನ್ನು ನೋಡಿದಾಕ್ಷಣ ನಮ್ಮ ಕಣ್ಮುಂದೆ ಬಾಲ್ಯದ ದೃಶ್ಯಗಳು ಬಿಚ್ಚಿಕೊಳ್ಳುತ್ತವೆ. ಆ ನೋಟು ಹಿಡಿದೇ ಪೆಪ್ಪರ್‌ಮಿಂಟ್ ತರಲು ಅಂಗಡಿಗೆ ಹೋಗಿದ್ದು, ನೆಂಟರ ಮನೆಗೆ ಹೋದಾಗ ಅವರು ಪ್ರೀತಿಯಿಂದ ಮಕ್ಕಳ ಕೈಗಿಟ್ಟಿದ್ದು ಅದೇ ಒಂದು ರೂಪಾಯಿಯ ನೋಟೇ!
ಆದರೆ, ಬರುಬರುತ್ತಾ ರೂಪಾಯಿ ಮೌಲ್ಯ ಹೆಚ್ಚಾದಂತೆಲ್ಲ, 1 ರೂ.ನ ಬೆಲೆ ಬಗ್ಗೆ ತಾತ್ಸಾರ ಭಾವ ಬೆಳೆಯತೊಡಗಿತು. ಗರಿಗರಿ ನೋಟುಗಳ ನಡುವೆ, 1 ರೂ.ನ ಪುಟಾಣಿ ನೋಟು, ಮುದ್ದೆ ಮಾಡಿಕೊಂಡು ಕುಳಿತು, ಅಕ್ಷರಶಃ ಮೂಲೆಗುಂಪಾಯಿತು. ಅದೇ ವೇಳೆ 1 ರೂ.ನ ಚಿಲ್ಲರೆಗಳು ನವನವೀನ ರೂಪದಲ್ಲಿ, ಹೊಸ ಹೊಳಪಿನಲ್ಲಿ ಸದ್ದುಮಾಡಿದವು. ಆ ಸದ್ದಿನ ನಡುವೆ ಈ ನೋಟಿನ ಕೂಗನ್ನು ಕೇಳುವವರೇ ಇಲ್ಲದಂತಾಯಿತು.
ಈಗ ಅದೇ 1 ರೂ.ನ ನೋಟುಗಳು ಬೆಂಗಳೂರಿನ ಹಾದಿ ಹಿಡಿದಿವೆ. ನೀವು ಸೀದಾ ಯು.ಬಿ. ಸಿಟಿಗೆ ಹೋದರೆ, ಅಲ್ಲಿನ ಸಬ್‌ಲೈಮ್ ಗ್ಯಾಲರಿಯಲ್ಲಿ, ನಮ್ಮಿಂದ ದೂರವಾದ 1 ರೂ.ನ ನೋಟುಗಳನ್ನು ಕಣ್ತುಂಬಿಕೊಂಡು ಬರಬಹುದು. ಅಲ್ಲಿ 1 ರೂ.ನ ವೈವಿಧ್ಯ ನೋಟುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕಾರಣ, ಈ 1 ರೂ.ಗೆ 100 ವರ್ಷ ತುಂಬಿದೆ!
ಆ ನೋಟು ಹುಟ್ಟಿದ ಕತೆ: 1914ರಲ್ಲಿ ಮೊದಲ ಜಾಗತಿಕ ಯುದ್ಧ ನಡೆದಾಗ, ನೋಟುಗಳು ಚಲಾವಣೆ ಕಳೆದುಕೊಳ್ಳುವ ಭಯ ಜನರನ್ನು ಕಾಡಿತು. ಅವರು ಬ್ಯಾಂಕ್‌ಗಳಿಗೆ ಧಾವಿಸಿ ತಮ್ಮಲ್ಲಿದ್ದ ನೋಟುಗಳನ್ನು ಬೆಳ್ಳಿಯ ನಾಣ್ಯಗಳೊಂದಿಗೆ ಬದಲಾವಣೆ ಮಾಡಿಕೊಂಡರು. ಜನರಿಗೆ ಬೇಕಾದಷ್ಟು ನಾಣ್ಯಗಳನ್ನು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗದೆ, ಹೊಸ ನಾಣ್ಯಗಳನ್ನು ಟಂಕಿಸಲು ಸರ್ಕಾರ ಮುಂದಾಯ್ತು.
ಆಗ ನಾಣ್ಯಗಳನ್ನು ಬೆಳ್ಳಿಯಲ್ಲಿ ಟಂಕಿಸಲಾಗುತ್ತಿತ್ತು. ನಾಣ್ಯಗಳಿಗೆ ಬೇಡಿಕೆ ಹೆಚ್ಚಾದಂತೆ, ಬೆಳ್ಳಿಯ ಕೊರತೆ ಉಂಟಾಯಿತು. ಆಗ ಸರ್ಕಾರ ಕಡಿಮೆ ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡುವ ನಿರ್ಧಾರ ತಾಳಿತು. ಹೀಗೆ 1917ರ ನವೆಂಬರ್ 30ರಂದು ಮೊದಲ ಬಾರಿಗೆ 1 ರೂಪಾಯಿ ನೋಟುಗಳು ಚಾಲ್ತಿಗೆ ಬಂದವು.
ಮ್ಯೂಸಿಯಂ ಸೇರಿತು!: ಹೊಸದನ್ನು ನಮ್ಮ ಜನ ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. 1 ರೂ. ಹೊಸ ನೋಟುಗಳು ಬಿಡುಗಡೆಯಾದಾಗ ಜನ ಅದನ್ನು ಸ್ವೀಕರಿಸಲು ಹಿಂದೆ ಮುಂದೆ ನೋಡಿದರು. 1 ರೂ. ನೋಟು ಜನರ ವಿಶ್ವಾಸ ಗಳಿಸಲು ಒಂದೆರಡು ವರ್ಷಗಳೇ ಬೇಕಾದವು. ಕಾಲಕ್ರಮೇಣ ನೋಟಿನ ರೂಪ, ವಿನ್ಯಾಸದಲ್ಲಿ ಹಲವಾರು ಬದಲಾವಣೆಗಳಾದವು. 1994ರ ನಂತರ ಈ ನೋಟುಗಳ ಚಲಾವಣೆಯೂ ನಿಂತುಹೋಯ್ತು. ಆಮೇಲೆ 1 ರೂ. ನೋಟುಗಳು ಮ್ಯೂಸಿಯಂ, ನಾಣ್ಯ ಸಂಗ್ರಹಕಾರರ ಕೈ ಸೇರಿದವು.
ಯಾಕಾಗಿ ಪ್ರದರ್ಶನ?: ಪ್ರಸ್ಟೀಜ್ ಗ್ರೂಪ್‌ನ ಎಂ.ಡಿ. ಹಾಗೂ ಇಂಟರ್‌ನ್ಯಾಷನಲ್ ಬ್ಯಾಂಕ್ ನೋಟ್ ಸೊಸೈಟಿಯ ಇಂಡಿಯಾ ಬ್ಯಾಂಕ್‌ನೋಟ್ ಕಲೆಕ್ಟರ್ ಚಾಪ್ಟರ್‌ನ ಚೇರ್‌ಮನ್ ಆಗಿರುವ ರೆಜ್ವಾನ್ ರಜಾಕ್ ಅವರು “ಒನ್ ರುಪೀ ಒನ್ ಹಂಡ್ರೆಡ್ ಇಯರ್ 1917-2017′ ಪುಸ್ತಕ ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಭಾರತೀಯ ನೋಟುಗಳ ಸಂಗ್ರಹಕಾರರಾಗಿರುವ ಅವರು, ತಮ್ಮ ಸಂಗ್ರಹದಲ್ಲಿರುವ ಹಳೆಯ ನೋಟು ಮತ್ತು ನಾಣ್ಯಗಳ ಪ್ರದರ್ಶನ ಹಮ್ಮಿಕೊಂಡಿದ್ದಾರೆ. ಈ ಪ್ರದರ್ಶನ ಒಂದು ವಾರಗಳ ಕಾಲ ನಡೆಯಲಿದೆ.
1 ರೂ. ನೋಟಿನ ಚರಿತೆ
* 1917ರಲ್ಲಿ 1 ರೂ. ನೋಟಿನ ಮೊದಲ ಮುದ್ರಣ.
* 1994ರ ನಂತರ 1 ರೂ. ನೋಟುಗಳ ಪ್ರಿಂಟ್ ಸ್ಥಗಿತ.
* 2015ರ ನಂತರ ನೋಟುಗಳು ಮತ್ತೆ ಚಲಾವಣೆಗೆ.
* ಇಲ್ಲಿಯವರೆಗೆ 125 ಬಗೆಯ, ಬೇರೆ ಬೇರೆ ಕ್ರಮಸಂಖ್ಯೆ ಮತ್ತು ಸಹಿ ಇರುವ ನೋಟುಗಳು ಚಲಾವಣೆಗೆ.
* ನೋಟಿನ ವಿನ್ಯಾಸದಲ್ಲಿ 28 ಬಾರಿ ಬದಲಾವಣೆ.
* ಮೊದಲ 1 ರೂ ನೋಟಿನ ಮೇಲೆ ಕಿಂಗ್ ಜಾರ್ಜ್ 5 ಚಿತ್ರ. 1926ರ ನಂತರ ಈ ನೋಟುಗಳ ಚಲಾವಣೆ ನಿಂತಿತು.
* 2ನೇ ಮಹಾಯುದ್ಧದ ನಂತರ ಪ್ರಿಂಟ್ ಆದ ನೋಟುಗಳ ಮೇಲೆ 6ನೇ ಕಿಂಗ್ ಜಾರ್ಜ್ ಚಿತ್ರ.
* 1970ರವರೆಗೆ ಭಾರತದ 1 ರೂ. ನೋಟುಗಳು ಪರ್ಷಿಯಾ ಹಾಗೂ ಗಲ್ಫ್ ದೇಶಗಳಾದ ದುಬೈ, ಬೆಹ್ರಿನ್, ಮಸ್ಕಟ್, ಓಮನ್‌ಗಳಲ್ಲೂ ಚಲಾವಣೆಯಲ್ಲಿದ್ದವು.
* ಸ್ವಾತಂತ್ರಾನಂತರ, ಮೊದಲ ಬಾರಿಗೆ 1948ರಲ್ಲಿ ಪ್ರಿಂಟ್ ಆದ ಮೊದಲಿದ್ದ ನೋಟುಗಳಿಗಿಂತ ಭಿನ್ನ ಆಕಾರ ಮತ್ತು ಬಣ್ಣ ಹೊಂದಿದ್ದವು. ಜೊತೆಗೆ 8 ಭಾರತೀಯ ಭಾಷೆಗಳಲ್ಲಿ “ಒಂದು ರೂಪಾಯಿ’ ಎಂದು ಬರೆಯಲ್ಪಟ್ಟಿತ್ತು. 1956ರಲ್ಲಿ ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಮಲಯಾಳಂ ಭಾಷೆಯೂ ಸೇರಿಕೊಂಡಿತು.
* 1949ರಲ್ಲಿ ಪ್ರಿಂಟ್ ಆದ ನೋಟಿನಲ್ಲಿ ಮೊದಲ ಬಾರಿಗೆ ಅಶೋಕ ಸ್ತಂಭದ ಚಿತ್ರ ಅಚ್ಚಾಯಿತು.
* ಕೇವಲ 1 ರೂ ನೋಟಿನಲ್ಲಿ ಮಾತ್ರ “ಗವರ್ನ್ಮೆಂಟ್ ಆಫ್ ಇಂಡಿಯಾ’ ಎಂದು ಬರೆದಿದೆ. ಉಳಿದೆಲ್ಲ ನೋಟುಗಳಲ್ಲಿ “ಭಾರತೀಯ ರಿಸರ್ವ್ ಬ್ಯಾಂಕ್’ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿರುತ್ತದೆ.
* 1 ರೂ. ನೋಟಿನ ಮೇಲೆ ಆರ್‌ಬಿಐ ಗವರ್ನರ್ ಬದಲು ಫಿನಾನ್ಸ್ ಸೆಕ್ರೆಟರಿ ಸಹಿ ಇರುತ್ತದೆ.
-ಎಲ್ಲಿ?: ಸಬ್‌ಲೈಮ್ ಗ್ಯಾಲರಿ, ಯುಬಿ ಸಿಟಿ
-ಯಾವಾಗ?: ಡಿಸೆಂಬರ್ 7ರವರೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.