ನಿಂತಿತು ನೋಡಾ, ಬೆಂಗಳೂರು
ಓಡುವ ನಗರದ ಮೌನದ ಜೋಗುಳ
Team Udayavani, Mar 14, 2020, 6:04 AM IST
ಮೊನ್ನೆ ಮೊನ್ನೆಯ ತನಕ ವಾಲಗದ ಸದ್ದಿನಲ್ಲಿ ಮೈಮರೆತಿದ್ದ, ಭರತನಾಟ್ಯದ ತಾಂ ಥೈ ದಿದ್ದಿತಾಂಗೆ ಸಾಕ್ಷಿಯಾಗಿದ್ದ, ಹೊಸದೊಂದು ನಾಟಕಕ್ಕೆ ವೇದಿಕೆ ಒದಗಿಸಿದ್ದ ಸ್ಥಳಗಳು, “ಹೇಳಲಾರೆ ಕಾರಣ’ ಎಂಬಂತೆ ಗಪ್‌ಚುಪ್ ಆಗಿಬಿಟ್ಟಿವೆ! ದಿನವೂ ಮೈಮೇಲೇ ಹೋಗುವಂತೆ ನುಗ್ಗಿ ಬರುತ್ತಿದ್ದ ವಾಹನಗಳ ಕರ್ಕಶ ಸದ್ದಿಗೆ, ಕಾಲರಾ ಮಾರಿಗೆ, ಕೂಗುಮಾರಿಯ ಹಾಡಿಗೂ ಬೆಚ್ಚದಿದ್ದ ಬೆಂಗಳೂರು, ಕೊರೋನಾ ಎಂಬ ಹೆಮ್ಮಾರಿಗೆ ಹೆದರಿ ನಡುಗತೊಡಗಿದೆ…
ವರ್ಷದ 365 ದಿನವೂ ಗಿಜಿಗಿಜಿ ಅನ್ನುವಂಥ ಊರು, ನಮ್ಮ ಬೆಂಗಳೂರು. ಈ ಊರಲ್ಲಿ 300ಕ್ಕೂ ಹೆಚ್ಚು ಕಲ್ಯಾಣಮಂಟಪಗಳಿವೆ. 200ಕ್ಕೂ ಹೆಚ್ಚು ಸಭಾಂಗಣಗಳಿವೆ. 50ಕ್ಕೂ ಮೀರಿದ ರಂಗಮಂದಿರಗಳಿವೆ. ಪ್ರತಿಯೊಂದು ಬಡಾವಣೆಯಲ್ಲೂ ಐದಕ್ಕೂ ಹೆಚ್ಚು ಬಯಲು ರಂಗಮಂದಿರಗಳಿವೆ. ಇವೆಲ್ಲಾ ವರ್ಷವಿಡೀ ಬ್ಯುಸಿಯಾಗಿರುತ್ತವೆ.
ಇಲ್ಲೇನಾದರೂ ಕಾರ್ಯಕ್ರಮ ಮಾಡಬೇಕು ಅಂದರೆ, ಮೂರು ಅಥವಾ ಆರು ತಿಂಗಳ ಮೊದಲೇ ಜಾಗ ಕಾಯ್ದಿರಿಸಬೇಕು! ಶನಿವಾರ ಭಾನುವಾರಗಳಲ್ಲಂತೂ ರಂಗಮಂದಿರ, ಸಭಾಂಗಣ, ಕಲ್ಯಾಣಮಂಟಪಗಳು ಸಿಗಬೇಕೆಂದರೆ ಪುಣ್ಯ ಮಾಡಿರಬೇಕು! ಹಾಗಿತ್ತು ಪರಿಸ್ಥಿತಿ… ಅಂಥ ಗಿಜಿಗಿಜಿ ಜಾಗಗಳೆಲ್ಲ ಈಗಿಂದೀಗಲೇ ಖಾಲಿ ಹೊಡೆಯತೊಡಗಿವೆ. ಮೊನ್ನೆ ಮೊನ್ನೆಯ ತನಕ ವಾಲಗದ ಸದ್ದಿನಲ್ಲಿ ಮೈಮರೆತಿದ್ದ,
ಭರತನಾಟ್ಯದ ತಾಂ ಥೈ ದಿದ್ದಿತಾಂಗೆ ಸಾಕ್ಷಿಯಾಗಿದ್ದ, ಹೊಸದೊಂದು ನಾಟಕಕ್ಕೆ ವೇದಿಕೆ ಒದಗಿಸಿದ್ದ ಸ್ಥಳಗಳು, “ಹೇಳಲಾರೆ ಕಾರಣ’ ಎಂಬಂತೆ ಗಪ್‌ಚುಪ್ ಆಗಿಬಿಟ್ಟಿವೆ! ದಿನವೂ ಮೈಮೇಲೇ ಹೋಗುವಂತೆ ನುಗ್ಗಿ ಬರುತ್ತಿದ್ದ ವಾಹನಗಳ ಕರ್ಕಶ ಸದ್ದಿಗೆ, ಕಾಲರಾ ಮಾರಿಗೆ, ಕೂಗುಮಾರಿಯ ಹಾಡಿಗೂ ಬೆಚ್ಚದಿದ್ದ ಬೆಂಗಳೂರು, ಕೊರೋನಾ ಎಂಬ ಹೆಮ್ಮಾರಿಗೆ ಹೆದರಿ ನಡುಗತೊಡಗಿದೆ.
ಸಭಾಂಗಣ ಖಾಲಿ ಇಲ್ಲ…: ಪುಸ್ತಕ ಬಿಡುಗಡೆ, ಸಿಡಿಯೊಂದರ ಲೋಕಾರ್ಪಣೆ, ಮಕ್ಕಳ ರಂಗಪ್ರವೇಶ, ನಾಟಕವೊಂದರ ಮೊದಲ ಪ್ರದರ್ಶನ- ಇಂಥ ಕಾರ್ಯಕ್ರಮಗಳೆಲ್ಲ ಬೆಂಗಳೂರಲ್ಲೇ ನಡೆಯಬೇಕು ಎಂಬುದು ಎಲ್ಲರ ಆಸೆ, ಕನಸು! ಬೆಂಗಳೂರಲ್ಲಿ ಪ್ರೋಗ್ರಾಂ ಮಾಡಿದ್ರೆ ಹೆಚ್ಚು ಜನರನ್ನು ತಲುಪಬಹುದು, ಪತ್ರಿಕೆಗಳಲ್ಲಿ ಸುದ್ದಿ ಹಾಕಿಸಬಹುದು, ಆ ಮೂಲಕವೂ ಪ್ರಚಾರ ಪಡೆಯಬಹುದು ಎಂಬುದೇ ಈ ಯೋಚನೆಯ ಹಿಂದಿದ್ದ ಸರಳ ಲೆಕ್ಕಾಚಾರ.
“ಪುಸ್ತಕ ಬರೆಯುವುದು, ಪ್ರಿಂಟ್ ಮಾಡಿಸುವುದು, ಮಕ್ಕಳಿಗೆ ಡ್ಯಾನ್ಸ್ ಕಲಿಸುವುದು, ನಾಟಕದ ನಿರ್ದೇಶನ ಮಾಡುವುದು…’ ಇವೆಲ್ಲಾ ಸುಲಭ. ಆದರೆ, ಕಾರ್ಯಕ್ರಮಕ್ಕೆ ಆಡಿಟೋರಿಯಂ ಹುಡುಕುವುದಿದೆಯಲ್ಲ, ಅದೇ ನಿಜವಾದ ಕಷ್ಟ ಎಂಬುದು ಎಲ್ಲರ ಮಾತಾಗಿತ್ತು. ಪ್ರತಿಯೊಂದು ಬಡಾವಣೆಯಲ್ಲೂ 20ರ ಸಂಖ್ಯೆಯಲ್ಲಿದ್ದ ಸಭಾಂಗಣಗಳು ವರ್ಷವಿಡೀ ಬ್ಯುಸಿಯಾಗಿರುತ್ತಿದ್ದವು. ಎಲ್ಲ ಸಭಾಂಗಣಗಳ ತಾಯಿಯಂತಿರುವ ರವೀಂದ್ರ ಕಲಾಕ್ಷೇತ್ರದಲ್ಲಂತೂ ಒಂದೇ ದಿನದಲ್ಲಿ ನಾಲ್ಕು ಕಾರ್ಯಕ್ರಮಗಳು ನಡೆದಿದ್ದೂ ಉಂಟು.
ಚಾಮರಾಜಪೇಟೆಯಲ್ಲಿರುವ ಸಾಹಿತ್ಯ ಪರಿಷತ್ ಸಭಾಂಗಣ, ಗಾಂಧಿಬಜಾರ್‌ನ ವಾಡಿಯಾ ಹಾಲ್, ಕೆ.ಆರ್.ರಸ್ತೆಯ ಗಾಯನ ಸಮಾಜ, ಮಲ್ಲೇಶ್ವರದ ಸೇವಾಸದನ, ಅನನ್ಯ ಸಭಾಂಗಣ, ಹನುಮಂತನಗರದ ಕಲಾಸೌಧ, ಜೆ.ಪಿ.ನಗರದ ರಂಗಶಂಕರ, ಬಸವೇಶ್ವರ ನಗರದ ಕೆಎಲ್‌ಇ ಕಲಾಪೂರ್ಣಿಮ, ವೈಯಾಲಿಕಾವಲ್‌ನ ಚೌಡಯ್ಯ ಹಾಲ್, ಜೆ.ಸಿ.ರಸ್ತೆಯ ಎಡಿಎ ರಂಗಮಂದಿರ, ಕೋರಮಂಗಲದ ಅಟ್ಟ ಗಲಾಟ, ಕೆಂಗೇರಿಯ ಬ್ರಾಹ್ಮಣ ಸಭಾ ಮಂದಿರ… ಇವೆಲ್ಲಾ “ಹೌಸ್‌ಫುಲ್’ ಬೋರ್ಡ್‌ನ ಜೊತೆಗೇ ಉಸಿರಾಡುತ್ತಿದ್ದ ತಾಣಗಳು.
ಟೌನ್‌ಹಾಲ್ ಮರೆಯುವುದುಂಟೆ?: ಸದಾ ಗಿಜಿಗಿಜಿ ಅನ್ನುತ್ತಲೇ ಇರುವ ತಾಣ ಅಂದುಕೊಂಡಾಗ ನೆನಪಾಗುವ ಇನ್ನೊಂದು ತಾಣ ಟೌನ್‌ಹಾಲ್. ಕಾರ್ಮಿಕರು, ನೌಕರರು, ಶೋಷಿತರು, ಶೋಷಕರು, ಪೋಷಕರು, ಬಾಲಕರು, ಹೋರಾಟಗಾರರು, ಹಾರಾಟಗಾರರು, ಮಾರಾಟಗಾರರು, ಪ್ರಗತಿಪರರು, ಅವರ ವಿರೋಧಿಗಳು, ರಾಜಕೀಯ ನಾಯಕರು, ಅವರ ಹಿಂಬಾಲಕರು, ಎಡ, ಬಲ, ಮಧ್ಯ, ನಡುಪಂಥದವರು- ಹೀಗೆ,
ಛಪ್ಪನ್ನೈವತ್ತಾರು ಬಗೆಯ ಜನರೆಲ್ಲ ತಮಗೆ ಅನ್ಯಾಯವೋ, ಅಸಮಾಧಾನವೋ ಆದಾಗ ಓಡೋಡಿ ಬಂದು ಮನದ ರೋಷವನ್ನೆಲ್ಲ ಹೇಳಿಕೊಳ್ಳುತ್ತಿದ್ದುದೇ ಟೌನ್‌ಹಾಲ್‌ನ ಕಲ್ಲುಗಳ ಮೇಲೆ ಕೂತು; ಟೌನ್‌ಹಾಲ್‌ನ ಮುಂದೆ ನಿಂತು! ಮೊನ್ನೆಮೊನ್ನೆಯವರೆಗೂ ವಾರಕ್ಕೆ ಎರಡಾದರೂ ಪ್ರತಿಭಟನೆಗಳಿಗೆ, ಧಿಕ್ಕಾರದ ಮಾತುಗಳಿಗೆ ಟೌನ್‌ಹಾಲ್‌ನ ಅಂಗಳ ಸಾಕ್ಷಿಯಾಗುತ್ತಿತ್ತು. “ಪ್ರತಿಭಟನೆಗಿದು ಜಾಗವಲ್ಲ’ ಎಂಬ ಹುಕುಂ ಹೊರಬಿದ್ದ ಮೇಲೆ- ಬಸ್ಸು, ಲಾರಿ, ಬೈಕು, ಕಾರುಗಳ ಹಾರನ್‌ಗಳು ಟೌನ್‌ಹಾಲ್‌ನ ಗೋಡೆಗೆ ಅಪ್ಪಳಿಸುತ್ತಿದ್ದವು.
ಈಗ ಕೊರೊನಾ ಕಾರಣಕ್ಕೆ ಒಂದಿಡೀ ವಾರ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ! ಇಷ್ಟು ದಿನ ಬೆಳಗ್ಗೆ, ಸಂಜೆ, ಮಧ್ಯಾಹ್ನ – ನಗರದ ಉದ್ದಗಲಕ್ಕೂ ಮಾತಿನ ಬಾಂಬು ಮತ್ತು ಒರಿಜಿನಲ್ ಆಟಂ ಬಾಂಬುಗಳು ಗಂಟೆಗೊಮ್ಮೆ ಸಿಡಿದಾಗಲೂ ಬೆಚ್ಚದಿದ್ದ ಬೆಂಗಳೂರು ಒಂದಿಡೀ ವಾರ ಮಾತಿಲ್ಲದೆ, ಹಾಡಿಲ್ಲದೆ, ರಂಗ ಸಂಗೀತದ ಜೋಗುಳವಿಲ್ಲದೆ, ಕೊಳಲಿನ ನಾದ ಕೇಳದೆ ಇರಬೇಕಲ್ಲ ಎಂಬ ಯೋಚನೆಗೇ ಬೆಚ್ಚುತ್ತಿದೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.