ವಿಷ್ಣು ಕಣ್ಣಲ್ಲಿ ಬಿಸಿ ನೀರ ಬುಗ್ಗೆ
Team Udayavani, Jul 21, 2018, 3:57 PM IST
“ನಾಗರಹಾವು ಸಿನಿಮಾನ 50 ರೀಲಲ್ಲಿ ಮಾಡಿಕೊಡ್ತಾರಂತೆ’
ನಿರ್ಮಾಪಕ ವೀರಾಸ್ವಾಮಿಗಳು ಇದ್ದಕ್ಕಿದ್ದಂತೆ ಹೀಗಂದರು. ಕಾರು ಆಗ ಬೆಂಗಳೂರು ಬಿಟ್ಟು ಚಿತ್ರದುರ್ಗದ ಕಡೆ ಹೊರಟಿತ್ತು. “ನಾಗರಹಾವು’ ಚಿತ್ರದ ಮುಹೂರ್ತಕ್ಕಾಗಿ. ವೀರಾಸ್ವಾಮಿಗಳ ಪಕ್ಕದಲ್ಲಿದ್ದ ನಟ ಶಿವರಾಮ್ ಅವರಿಗೆ ಸ್ವಾಮಿಗಳ ಮಾತು ಕೇಳಿ ಸ್ವಲ್ಪ ಗಾಬರಿಯಾಯಿತು. ಏಕೆಂದರೆ, ಅಷ್ಟು ಕಡಿಮೆ ರೀಲಲ್ಲಿ ಚಿತ್ರ ಮಾಡೋಕೆ ಸಾಧ್ಯವೇ ಇರಲಿಲ್ಲ.
“ಹೌದಾ, ಯಾರು ಹೇಳಿದ್ದು?’ ಅಂದರು ಶಿವರಾಮಣ್ಣ.
“ಪುಟ್ಟಣ್ಣ ಕಣಗಾಲ್’
“ಪುಟ್ಟಣ್ಣನಾ… ಅವರಾದರೆ ಮಾಡಿಕೊಡ್ತಾರೆ. ಚಿಂತೆ ಇಲ್ಲ. ಯಾವುದಕ್ಕೂ 10 ರೀಲ್ ಹೆಚ್ಚಿಗೆ ಇಟ್ಟುಕೊಂಡಿರಿ ಅಂದರು ಶಿವರಾಮಣ್ಣ.
“ಇಷ್ಟು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಆಗುತ್ತಾ?’ ವೀರಾಸ್ವಾಮಿಗಳು ಮತ್ತೆ ಕೆದಕಿದರು.
“ಇದನ್ನು ಯಾರು ಹೇಳಿದರು..’ ಆಶ್ಚರ್ಯ ಸೂಚಕವಾಗಿ ಕೇಳಿದರು ಶಿವರಾಮಣ್ಣ.
“ಇದನ್ನೂ ಹೇಳಿದ್ದೂ ಪುಟ್ಟಣ್ಣನೇ’
“ಪುಟ್ಟಣ್ಣ ಹೇಳಿದರೆ ಗ್ಯಾರಂಟಿ ಮಾಡಿಕೊಡ್ತಾರೆ. ಯಾವುದಕ್ಕೂ ಒಂದು ಹತ್ತು ಲಕ್ಷ ಹೆಚ್ಚಿಗೆ ಇಟ್ಟುಕೊಳ್ಳಿ’
ಅಂದರು ಶಿವರಾಮಣ್ಣ.
ವೀರಾಸ್ವಾಮಿಗಳು ಪುಟ್ಟಣ್ಣರ ಬಗ್ಗೆ ಹೀಗೆ ಕೇಳಲು ಕಾರಣವೂ ಇತ್ತು. ಆ ಹೊತ್ತಿಗೆ ಪುಟ್ಟಣ್ಣ ಜನಪ್ರಿಯತೆಯ ತುತ್ತುತುದಿಯಲ್ಲಿದ್ದರು. ಹಾಗೆಯೇ, ಇವರು ಬರೀ ನಾಯಕಿ ಪ್ರಧಾನ ಚಿತ್ರ ಮಾಡ್ತಾರೆ ಅನ್ನೋ ಕೂಗೂ ಇತ್ತು. ಇಂಥ ಮುಹೂರ್ತದಲ್ಲೇ ನಾಗರಹಾವು ಅನ್ನೋ ಹೀರೋ ಓರಿಯೆಂಟೆಡ್ ಚಿತ್ರ ಮಾಡಲು ಕೈ ಹಾಕಿದ್ದು.
ಎಲ್ಲಕ್ಕಿಂತ ಮುಖ್ಯವಾಗಿ ಪುಟ್ಟಣ್ಣನವರ ಬಗ್ಗೆ ಒಂದಷ್ಟು ಅಪಪ್ರಚಾರವೂ ನಡೆದು ಹೋಗಿತ್ತು.
ಅದೇನೆಂದರೆ, ಪುಟ್ಟಣ್ಣನವರು ಶೂಟಿಂಗ್ ಸಮಯದಲ್ಲಿ ನಿದ್ದೆ ಮಾಡ್ತಾರಂತೆ, ಇದ್ದಕ್ಕಿದ್ದಂತೆ ಪ್ಯಾಕಪ್ ಮಾಡಿಸ್ತಾರಂತೆ, ಅನಾವಶ್ಯಕವಾಗಿ, ನಾಗರಹಾವು ಥರ ಆಡ್ತಾರಂತೆ.. ಹೀಗೆ ಎಲ್ಲ ಕಡೆ ಹರಡಿದ್ದ ಅಂತೆ ಕಂತೆಗಳೆಲ್ಲವೂ ವೀರಸ್ವಾಮಿಗಳ ಕಿವಿಗೂ ನುಗ್ಗಿಬಿಟ್ಟಿದ್ದವು. ಶಿವರಾಮಣ್ಣಗೆ ಪುಟ್ಟಣ್ಣನವರು ಖಾಸಾ ಖಾಸಾ ಆಗಿದ್ದರಿಂದ ವೀರಾಸ್ವಾಮಿಗಳು ಹೀಗೆ “ವಿಚಾರಣೆ’ಗೆ ಗುರಿಪಡಿಸಿದ್ದರು. ಉತ್ತರ ಮುಗಿಯುವ ಹೊತ್ತಿಗೆ ಚಿತ್ರದುರ್ಗದ ಕೋಟೆ ಬಂದಿತ್ತು. ಅದರ ಮುಂದೆ ದೊಡ್ಡ ಪೆಂಡಾಲ್. ಜನವೋ ಜನ. ನೀವೂ ಬನ್ನಿ, ಮುಹೂರ್ತಕ್ಕೆ ಹೋಗಿಬರೋಣ ಅಂತ ವೀರಸ್ವಾಮಿಗಳು ಶಿವರಾಮಣ್ಣನನ್ನು ಆವತ್ತು ಕಾರಲ್ಲಿ ಕರೆದುಕೊಂಡು ಬಂದಿದ್ದರು.
ಮುಂದೇನಾಯ್ತು ಅನ್ನೋದನ್ನ ಶಿವರಾಮಣ್ಣ ಹೇಳ್ತಾರೆ ಕೇಳಿ.
” ಆವತ್ತು, ಮುಹೂರ್ತ ಎಲ್ಲ ಮುಗೀತು. ನನ್ನ ಕ್ಯಾರಕ್ಟರ್ 8 ದಿನದ ನಂತರ ಬರುತ್ತೆ ಅಂದಿದ್ದರು. ಹಾಗಾಗಿ, ಪುಟ್ಟಣ್ಣಾಜಿ, ನಾನು ಹೊರಡ್ತೀನಿ ಅಂದೆ. ಅವರು” ಶಿವರಾಮಣ್ಣ ಹಾಡುಗಳ ಶೂಟ್ ಇದೆ. ನೀವಿದ್ದರೆ ಅನುಕೂಲ ಆಗುತ್ತೆ. ಇರಿ’ ಅಂದರು. ನನಗೂ ಏನೂ ಅಂಥಾ ಕೆಲಸ ಇರಲಿಲ್ಲ. ಆಗ ಹಾವಿನದ್ವೇಷ, ಹನ್ನೆರಡು ವರುಷ ಹಾಡು ಶೂಟ್ ಮಾಡುತ್ತಿದ್ದರು. ಅದಕ್ಕಾಗಿ 100 ಅಡಿಯ ಟ್ರ್ಯಾಲಿ ಸಿದ್ಧವಾಗಿತ್ತು. ಮೊದಲ ಕೆಲಸ ಏನೆಂದರೆ ಆ ಟ್ರಾÂಲಿ ತಳ್ಳೋದು. ಇದೇನು ಕಡಿಮೆ ಕೆಲಸ ಅಂದೊRಬೇಡಿ. ಬಹಳ ಅನುಭವ ಬೇಕು. ಹಾಡು, ಅದರ ರಿದಂ, ಡೈಲಾಗು ಅದರ ಹಿಂದಿನ ರಿದಂ ಹೀಗೆ ಎಲ್ಲಕ್ಕೂ ತಕ್ಕಂತೆ ಟ್ರ್ಯಾಲಿ ತಳ್ಳಬೇಕು. ಶಾಟ್ ಮುಗಿದ ಮೇಲೂ ಎಲ್ಲೂ ಜರ್ಕ್ ಹೊಡೆಯದಂತೆ ಹೊಡಿದಂಗೆ ನೋಡಿಕೊಳ್ಳಬೇಕು. ಇಲ್ಲಾಂದ್ರೆ, ಇಡೀ ಶೂಟಿಂಗ್ ದಂಡ ಆಗೋಗುತ್ತೆ. ನಾನು ಅದನ್ನು ಮಾಡ್ತಾ ಹೋದೆ’
ಚಿತ್ರದುರ್ಗದಲ್ಲಿ ಶೂಟಿಂಗ್ ಅನ್ನು ಸಾಹಸ ಮಾಡೋದೂ ಅಂತಲೇ ಹೇಳಬೇಕು. ಎಲ್ಲಿ ಕ್ಯಾಮರ ಇಟ್ಟರೂ ಅಲ್ಲೆಲ್ಲಾ ಬಂಡೆಗಳೇ. ಅದರ ಸಂದಿಯಲ್ಲಿ ಯಾರಾದರೂ ತಲೆ ತೂರಿಸಿಬಿಡೋರು. ಗೊತ್ತೇ ಆಗ್ತಿರಲಿಲ್ಲ. ಇದನ್ನೆಲ್ಲಾ ಕ್ಲಿಯರ್ ಮಾಡಿ ಶೂಟಿಂಗ್ ಮಾಡೋ ಹೊತ್ತಿಗೆ ಸಾಕು ಸಾಕಾಗಿ ಹೋಗೋದು. ಆದ್ರೂ ಮಾಡಿದ್ವಿ. ಆಗತಾನೇ ಕರ್ನಾಟಕಕ್ಕೆ ಮದರಾಸಿಂದ ಇಂಡಸ್ಟ್ರೀ ನಿಧಾನಕ್ಕೆ ಹೆಜ್ಜೆ ಊರುತ್ತಿತ್ತು. ಹೀಗಾಗಿ ಶೂಟಿಂಗ್‌ಗೆ ಸುಜಾತ ಮೂವೀಸ್ ಅನ್ನೋ ಮದರಾಸು ಮೂಲದ ಯೂನಿಟ್ ತಗೊಂಡಿದ್ವಿ. ಅವರ ಜೊತೆ ತಮಿಳಿನಲ್ಲಿ ಮಾತಾಡಬೇಕಾದದ್ದು ಅನಿವಾರ್ಯ. ಕ್ಯಾಮರಾಮನ್ ಚಿಟ್ಟಿಬಾಬುಗೂ ಕನ್ನಡ ಬರುತ್ತಿರಲಿಲ್ಲ. ಹೀಗೆ ಕೋಟೆ ಹತ್ತಿರ ಶೂಟ್ ಮಾಡುವಾಗ- ತಂತ್ರಜ್ಞರ ಹತ್ತಿರ ತೆಲುಗು, ತಮಿಳಿನಲ್ಲಿ ಮಾತನಾಡುತ್ತಿದ್ದಾಗ…ಅದನ್ನು ನೋಡೋಕೆ ಬಂದವರು- ಲೇ, ಇವರು ಬರೀ ತಮಿಳಿನಲ್ಲಿ ಮಾತಾಡ್ತಾರೆ. ಕನ್ನಡಾನೇ ಬರೋಲ್ಲ. ಏನ್ ಪಿಕ್ಚರ್ ಮಾಡ್ತಾರೋ’ ಅಂತ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲಿ ಒಬ್ಬನನ್ನು ಹಿಡ್ಕೊಂಡು ಬಂದು, ನಮ್ಮ ಕಷ್ಟನ ಹೇಳಿ, ಈಗ ಹೇಳಪ್ಪಾ ಅಂದರೆ “ತಪ್ಪಾಯ್ತು ಸಾರ್, ಬಿಟ್ಟುಬಿಡಿ ಅಂದ. ಓಹೋ, ಸಾರ್ ಅನ್ನೋದು ಕನ್ನಡ ಭಾಷೇನ ? ಯಾರು ಕಂಡು ಹಿಡಿದ್ರು ಹೇಳಪ್ಪಾ ? ಅಂತೆಲ್ಲಾ ಕ್ಲಾಸ್ ತಗೊಳ್ತಾ ಇದ್ವಿ.
ದುರ್ಗದ ಶೂಟಿಂಗ್ ಪಾರ್ಟ್‌ಅನ್ನು ಒಂದೇ ಶೆಡ್ನೂಲ್‌ನಲ್ಲಿ ಮುಗಿಸಬೇಕಿತ್ತು. ಮಳೆ, ಮೋಡ, ಹೊಸ ಕಲಾವಿದರು… ಹೀಗಾಗಿ ನಾವು ಅಂದುಕೊಂಡಂತೆ ಮಾಡಲು, ಆಗಲಿಲ್ಲ. ನಾವು ಶೂಟಿಂಗ್ ಶುರುಮಾಡುವ ಹೊತ್ತಿಗೆ ದುರ್ಗದಲ್ಲಿ ಹಿರಣ್ಣಯ್ಯನವರ ನಾಟಕದ ಕಂಪೆನಿ ತೆರೆದಿತ್ತು. ನಾವೆಲ್ಲ, ದೇವೇÅ ಬೆಳಗ್ಗೆ ಶೂಟಿಂಗ್ ಇದೆ. ಯಾವ ಕಾರಣಕ್ಕೂ ಸಂಜೆ ತನಕ ಮಳೆ ಬೀಳುವಂತೆ ನೋಡಿಕೊಳ್ಳಪ್ಪಾ ಅಂತ ಬೇಡಿಕೊಳ್ತಾ ಇದ್ವಿ. ಹಿರಣ್ಣಯ್ಯನವರು, ದೇವ್ರೇ ಸಂಜೆ ನಾಟಕದ ಶೋ ಇದೆ. ಯಾವ ಕಾರಣಕ್ಕೂ ಸಂಜೆ ಮಳೆ ಬೇಡಪ್ಪಾ ಅಂತ ಕೇಳಿಕೊಳ್ಳೋರು. ಇದನ್ನು ಊರಿನ ಜನ ಕೇಳಿಸಿಕೊಂಡೋ ಏನೋ- ನೀವು ಸಿನಿಮಾ, ನಾಟಕ ಅಂತೆಲ್ಲ ನಮ್ಮೂರಿಗೆ ಬಂದು, ಇಲ್ಲಿ ಮಳೇನೇ ಇಲ್ಲದಂಗೆ ಮಾಡ್ತಾ ಇದ್ದೀರಿ ಅಂತ ತಮಾಷೆಗೆ ಕಾಲು ಎಳೆಯೋರು.
ದುರ್ಗದ ಐಬಿಯಲ್ಲಿ ಎರಡು ರೂಮು. ಕಲಾವಿದರಿಗಾಗಿ ಊರ ಒಳಗೆ ಒಂದು ದೊಡ್ಡ ಮನೆ. ಊಟ ತಿಂಡಿ ಮಾಡಲಿಕ್ಕಾಗಿಯೇ ಪ್ರತ್ಯೇಕವಾಗಿ ಇನ್ನೊಂದು ಮನೆ ಇತ್ತು. ಐಬಿಯಲ್ಲಿದ್ದ ಎರಡು ರೂಮಲ್ಲಿ ಒಂದು ಪ್ರೊಡಕ್ಷನ್‌ಗೆ, ಇನ್ನೊಂದು ಪುಟ್ಟಣ್ಣನವರಿಗೆ. ಅದರಲ್ಲಿ ಒಂದು ಮಂಚ. ಟೇಬಲ್, ಕುರ್ಚಿ ಹಾಕಿದ್ದರು. ನೋಡೋರಿಗೆ ನಿರ್ದೇಶಕರೇನಪ್ಪ ದೊಡ್ಡ ರೂಮಿಟ್ಟುಕೊಂಡಿದ್ದಾನೆ ಅನಿಸೋದು. ಆದರೆ, ಪುಟ್ಟಣ್ಣನವರು ತಮ್ಮ ಜೊತೆ ಸಹಾಯಕ ನಿರ್ದೇಶಕರು, ಕ್ಯಾಮರಾಮನ್, ವಿಷ್ಣುವರ್ಧನ್- ಇಷ್ಟೂ ಜನರನ್ನು ಆ ರೂಮಿನಲ್ಲೇ ಸೇರಿಸಿಕೊಂಡಿದ್ದರು. ರಾತ್ರಿ ವಿಷ್ಣುವರ್ಧನ್‌ರನ್ನು ಮಂಚದ ಮೇಲೆ ಮಲಗಿಸಿ, ತಾವು ನೆಲದ ಮೇಲೆ, ಸಹ ನಿರ್ದೇಶಕರ ಜೊತೆ ನಿದ್ದೆ ಮಾಡುತ್ತಿದ್ದರು. ಇದು ಯಾರಿಗೂ ಗೊತ್ತಿರಲಿಲ್ಲ.
“ನಾಗರಹಾವು’ ಶೂಟಿಂಗ್‌ನಲ್ಲೇ ಸಂಪತ್‌ಕುಮಾರ್‌ಗೆ ವಿಷ್ಣುವರ್ಧನ ಅಂತ ಹೆಸರಿಟ್ಟಿದ್ದು. ಅದು ಕೋಟೆಯ ಕೆಳಗೋ, ಸೆಟ್ ಹಾಕಿದ್ದ ಮನೆಯಲ್ಲೋ ನೆನಪಿಲ್ಲ. ಒಟ್ಟಾರೆ ಆವತ್ತು ಹೆಸರಿಟ್ಟು ಪುಟ್ಟಣ್ಣ ಹೀಗೆ ಹೇಳಿದರು- ವಿಷ್ಣುವರ್ಧನ ಅನ್ನೋ ಹೆಸರು ಏಕೆ ಇಟ್ಟೆ ಅಂದರೆ, ಅವನಂಥ ಸುಂದರ, ಪರಿಪೂರ್ಣ ವ್ಯಕಿತ್ವದ ರಾಜ ಮತ್ತೂಬ್ಬನಿಲ್ಲ. ನೀನೂ ಹಾಗೆ ಆಗಬೇಕು. ಈತನಕ ನನ್ನನ್ನು ಮಹಿಳಾಪ್ರಧಾನ ನಿರ್ದೇಶಕ ಅಂತ ಕರೆಯುತ್ತಿದ್ದರು. ಹೀರೋ ಪ್ರಧಾನ ಚಿತ್ರವನ್ನೂ ಮಾಡುತ್ತೀನಿ ಅಂತ ತೋರಿಸೋಕೆ ಈ ಪ್ರಯತ್ನ ಮಾಡುತ್ತಿದ್ದೇನೆ. ಆರ್ಡನರಿ ಚಿತ್ರ ಅಂದೊRà ಬೇಡ. ನಿನಗಾಗಿ, ಚಿತ್ರಕ್ಕಾಗಿ ನನ್ನಲ್ಲಿ ಏನೇನಿದೆಯೋ ಅದನ್ನೆಲ್ಲಾ ಧಾರೆ ಎರೆಯುತ್ತಿದ್ದೇನೆ. ನೀನು ಕೇವಲ ಈ ಚಿತ್ರಕ್ಕೆ ಮಾತ್ರ ಹೀರೋ ಅಲ್ಲ. ಕನ್ನಡ ಚಿತ್ರರಂಗದ ದೊಡ್ಡ ಹೀರೋ ಆಗಬೇಕು ಅನ್ನೋದು ನನ್ನ ಉದ್ದೇಶ. ಇದಕ್ಕೆ ನಿನ್ನ ಪೂರ್ತಿ ಸಹಕಾರಬೇಕು ಅಂತೆಲ್ಲ ಹೇಳಿದ್ದರು.
ವಿಷ್ಣು ಸಂಪೂರ್ಣ ಗಮನ ನಟನೆ, ಈ ಸಿನಿಮಾ ಕಡೆಗಷ್ಟೇ ಇರಬೇಕು. ಅದಕ್ಕಾಗಿ ಸಮಯ ಸಿಕ್ಕಾಗೆಲ್ಲಲ್ಲಾ ರಿಹರ್ಸಲ್ ಮಾಡಬೇಕು ಅನ್ನೋದು ಪುಟ್ಟಣ್ಣರ ನಿರೀಕ್ಷಿಯಾಗಿತ್ತು. ಹುಡುಗು ಬುದ್ದಿ ಕೇಳಬೇಕಾ? ವಿಷ್ಣು, ಪುಟ್ಟಣ್ಣರ ರೂಮಿನಿಂದ ಮೆಲ್ಲಗೆ ಆಗಾಗ ಮೇಕಪ್ ಮನೆಗೆ ಹೋಗೋದು, ಅಲ್ಲಿ ಹರಟೆ ಹೊಡೆಯೋದು, ಜೋಕ್ ಕಟ್ ಮಾಡೋದು ಮಾಡ್ತಾ ಇದ್ದ. ಶೂಟಿಂಗ್ ಸಮಯದಲ್ಲಿ ಶಿಸ್ತಾಗಿರೋನು. ಆಮೇಲೆ ಕೈಗೆ ಸಿಗ್ತಾ ಇರಲಿಲ್ಲ. ಇದು ಪುಟ್ಟಣ್ಣರ ಕಿವಿಗೂ ಬಿದ್ದಿತ್ತು.
ಆಗೆಲ್ಲಾ, ನಾವು ಪಾಠ ಮಾಡ್ತಾ ಇದ್ವಿ. “ಲೋ, ವಿಷ್ಣು, ಹೀರೋ ಮಾಡೋದು ಅಂದರೆ ಸುಮ್ಮನೆ ಅಲ್ಲ ಕಣೋ. ಅದೊಂಥರ ಶಿಲ್ಪಿ ಕೆತ್ತನೆ ಮಾಡಿದಂಗೆ. ಅದಕ್ಕೆ ನೀನು ಸಹಕರಿಸಬೇಕು ಅಂತೆಲ್ಲಾ ಇಡೀ ಸಿನಿಮಾ ಶೂಟಿಂಗ್ ಮುಗಿಯೋ ತನಕ ಹೇಳ್ತಾನೇ ಇದ್ವಿ. ಅವನದು ಕೆಲಸ ಮಾಡೋ ಸಮಯದಲ್ಲಿ ಕೆಲ್ಸ ಮಾಡೋಣ. ಆಮೇಲೆ ಜಾಲಿಯಾಗಿರೋಣ ಅನ್ನೋ ತತ್ವ.
ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಊರುಗೋಲು ತಗೊಂಡು ಹೊಡೆಯೋ ದೃಶ್ಯ ಇದೆ. ಅದು ಕೋಟೆಯ ಮೇಲಗಡೆ ಇರುವ ತುಪ್ಪದ ಕೊಳದ ಹತ್ತಿರ ತೆಗೆದದ್ದು. ಪುಟ್ಟಣ ಸೀನ್ ಹೇಳಿದರು. ಅಶ್ವತ್ಥ್ ಪಾತ್ರವನ್ನು ಆವಾಹಿಸಿಕೊಂಡು, ಭಾವೋದ್ವೇಗವನ್ನು ತಡೆಯಲಾಗದೆ ಕೋಲು ತಗೊಂಡು ವಿಷ್ಣುಗೆ ನಿಜವಾಗಿಯೂ ಹೊಡೆದೇ ಬಿಟ್ಟರು. ಏಟು ಬಿದ್ದ ಜಾಗ ಊದಿಕೊಂಡಿತು. ರಭಸಕ್ಕೆ ಕೋಲು ಮೂರು ತುಂಡಾಯಿತು. ಶೂಟಿಂಗ್ ನಡೆಯುತ್ತಿದೆ. ವಿಷ್ಣು ನೋವನ್ನು ಹೇಳಿಕೊಳ್ಳುವಂತಿಲ್ಲ. ನೋವು ಕೋಪವಾಗಿ ಬಲದಲಾಯಿತು. ಚಿತ್ರದಲ್ಲಿ ಕಲ್ಲನ್ನು ಎತ್ತುವ ದೃಶ್ಯವನ್ನು ಗಮನಿಸಿ. ವಿಷ್ಣು ಕಣ್ಣು ಕೆಂಪಾಗಿ, ಮೂತಿ ಚೂಪಾಗಿ, ನೋವಿನ ಕಣ್ಣೀರು ಸುರಿಯುತ್ತದೆ. ಇತ್ತ ವಿಷ್ಣುಗೆ ಹೊಡೆದ ಅಶ್ವತ್ಥರ ಕಣ್ಣಲ್ಲಿ ಹೆದರಿಕೆ ನೀರು-” ಏನಪ್ಪ, ಸಂಪತ್ತು, ಗೊತ್ತಾಗಲಿಲ್ಲ ಕಣಪ್ಪಾ, ಕ್ಷಮಿಸಪ್ಪ. ನಿನಗೆ ಹೊಡೆದೇ ಬಿಟ್ಟೆ’ ಅಂತ ವಿಷ್ಣುವನ್ನು ಕೇಳಿದಾಗ- “ಬಿಡಿ ಸಾರ್, ಪರವಾಗಿಲ್ಲ. ಏನಾಗಿಲ್ಲ’ ಅಂದು ವಿಷ್ಣು ಹೊರಟು ಹೋದ.
ಈ ಚಿತ್ರದ ಮದಗಜಗಳು ಅಂದರೆ ವಿಷ್ಣು ಮತ್ತು ಅಂಬರೀಷ್. ವ್ಯಕ್ತಿತ್ವಕ್ಕೆ ತಕ್ಕಂತೆ ಪಾತ್ರಗಳಿವೆ. ಹುಡುಗೀನ ಚುಡಾಯಿಸೋದರಲ್ಲಿ ಅಂಬರೀಷ ಎತ್ತಿದ ಕೈ. ಇಬ್ಬರೂ ಫೈಟ್ ಮಾಡುವ ಸೀನ್ ಇದೆ. ಇವರು ಹೇಗೆ ಅಂದರೆ, ಸ್ವಲ್ಪ ಉರುಳಾಡ್ರಪ್ಪಾ ಅಂದರೆ ನಿಜವಾಗಿ ಗಲ್ಲಾಪಟ್ಟಿ ಹಿಡಿದು ಉರುಳಾಡೋರು. ಫೈಟ್ ಮಾಡ್ರೋ ಅಂದರೆ ನಿಜವಾಗಿಯೂ ಹಾಗೇ ಮಾಡೋರು. ಹಾಗಿತ್ತು. ಯೌವ್ವನದ ಹುರುಪು. ಕೊನೆಗೆ ಫೈಟ್ ಮಾಸ್ಟರ್ ಬಂದು ಬಿಡಿಸಿದ್ದೂ ಇದೆ.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.