ಸಿಂಹಾಚಲಂ ಸಂಪಿಗೆ
Team Udayavani, Feb 24, 2018, 5:48 PM IST
ಯುವಶಕ್ತಿ ತಂಡವು ಇತ್ತೀಚೆಗೆ ರಂಗಶಂಕರದಲ್ಲಿ ಮೊದಲ ಪ್ರದರ್ಶನವಾಗಿ ಅಭಿನಯಿಸಿದ “ಸಿಂಹಾಚಲಂ ಸಂಪಿಗೆ’ ಎಂಬ ವಿಶಿಷ್ಟ ನಾಟಕವು ಹಲವು ಕಾರಣಗಳಿಂದ ಮಹತ್ವದ್ದಾಗಿತ್ತು.
ಒಂದು ಗಂಟೆಗಿಂತ ಹೆಚ್ಚು ಕಾಲ ಪ್ರೇಕ್ಷಕರನ್ನು ಹಿಡಿದು ಕೂರಿಸುವುದೇ ದೊಡ್ಡ ಸಾಹಸವಾಗಿರುವಾಗ, ಈ ಪ್ರಯೋಗವು ಎರಡು ತಾಸು ನೋಡುಗರನ್ನು ರಂಜಿಸಿತು. ಅತ್ಯಂತ ಲವಲವಿಕೆಯ ನಿರೂಪಣೆಯೇ ಇಲ್ಲಿನ ವಿಶೇಷ ಸೆಳೆತ.
ಶ್ರೀ ರಮಣ ಅವರ ತೆಲುಗಿನ ಕಥೆಗಳನ್ನು ವಸುಧೇಂದ್ರ ಅವರು “ಮಿಥುನ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಳ್ಳಾರಿ ಪರಿಸರಕ್ಕೆ ಒಗ್ಗುವಂತೆ, ಇವೆಲ್ಲಾ ಕನ್ನಡದ್ದೇ ಕಥೆಗಳು ಎಂಬಂತೆ ಅವರು ಅನುವಾದಿಸಿದ್ದಾರೆ. ಅದರಲ್ಲಿನ ನಾಲ್ಕು ಕಥೆಗಳನ್ನು ಆಯ್ದು ರಂಗರೂಪಕ್ಕೆ ತಂದು ನಿರ್ದೇಶಿಸಿದವರು ಯುವಶ್ರೀ ತಂಡದ ನಿರ್ದೇಶಕ ಶಂಕರ್ ಗಣೇಶ್. ಪೋಲಿಕಿಟ್ಟಿ, ರೋಮಿಯೊ ಲವ್ಸ್ ಅನಾರ್ಕಲಿ, ಮಾವಿನಗುಡಿ ಕಾಲೊನಿ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ ಭರವಸೆ ಮೂಡಿಸಿದ್ದ ಶಂಕರ್ ಗಣೇಶ್, “ಸಿಂಹಾಚಲಂ ಸಂಪಿಗೆ’ಯಲ್ಲಿ ಇನ್ನಷ್ಟು ಪಕ್ವಗೊಂಡಿದ್ದಾರೆ. ಮೂಲ ಕಥೆಗೆ ನ್ಯಾಯ ಒದಗಿಸುವಂತೆ ನಾಟಕ ರೂಪಿಸಿದ ಇವರ ಜಾಣ್ಮೆಗೆ ಶರಣು. ಸಂಬಂಧವೇ ಇಲ್ಲದ ಕಥೆಗಳ ಎಳೆಯನ್ನು ಜೋಡಿಸಿ ನಾಟಕ ರೂಪಿಸುವುದು ಸಾಮಾನ್ಯ ಸಂಗತಿಯಲ್ಲ. ಪ್ರತಿ ಫ್ರೆàಂನಲ್ಲೂ ಶಂಕರ್‌ರ ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಸ್ವತಃ ವಸುಧೇಂದ್ರರೇ ತಮ್ಮ ಕಥೆಗಳ ರಂಗರೂಪವನ್ನು ಕಂಡು ಸಂತೋಷಪಟ್ಟಿದ್ದಾರೆ.
ಅಡುಗೆಯ ಸ್ವಾದವನ್ನು ಒಗ್ಗರಣೆ ಹೇಗೆ ಹೆಚ್ಚಿಸುತ್ತದೋ ಹಾಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಬದುಕಿಗೆ ಸ್ವಾದ ನೀಡುತ್ತವೆ. ಇಂಥ ಸಣ್ಣ ಸಣ್ಣ ವಿಷಯಗಳಿಗೆ ಒತ್ತು ನೀಡುವ ಮಿಥುನ, ಬಂಗಾರದ ಕಡಗ, ಸೋಡಾಗೋಲಿ, ಧನಲಕ್ಷ್ಮಿಯ ಕಥೆಗಳನ್ನು ಆಯ್ದುಕೊಂಡು ಈ ನಾಟಕವನ್ನು ಹೆಣೆಯಲಾಗಿದೆ. ಯಾವುದೇ ಅತಿರೇಕಗಳಿಲ್ಲದ, ತಿಳಿಯಾದ ಅನುಭವ ನೀಡುವುದರಿಂದ ಈ ನಾಟಕ ಆಪ್ತವೆನಿಸುತ್ತದೆ. ಎಲ್ಲಿಯೂ ವಿಚಾರದ ಹೊರೆಯಿಂದ ನಾಟಕ ಕುಸಿಯುವುದಿಲ್ಲ. ಸಂಭಾಷಣೆಗಳು ಭಾಷಣವಾಗದಂತೆ, ಪಾತ್ರಗಳು ಫಿಲಾಸಫರ್‌ಗಳಾಗದಂತೆ ಎಚ್ಚರ ವಹಿಸಲಾಗಿದೆ.
ನಾಟಕದುದ್ದಕ್ಕೂ ಬಳ್ಳಾರಿ ಕನ್ನಡದ ಬಳಕೆ ಇದೆ. ಮಧ್ಯೆ ಮಧ್ಯೆ ಬಳಸಿರುವ ತೆಲುಗು ಮಾತು, ಹಳೆಯ ತೆಲುಗು ಹಾಡುಗಳು, ಮೂಲ ಕಥೆ ತೆಲುಗಿನದ್ದು ಎಂದು ನೆನಪಿಸುತ್ತವೆ. ನೇಟಿವಿಟಿಗೆ ಒತ್ತು ನೀಡಿರುವುದು, ವಾಸ್ತವತೆಗೆ ಹತ್ತಿರವಿರುವುದು ಇಲ್ಲಿನ ಮುಖ್ಯವಾದ ಅಂಶ. ಸಂಗೀತವಂತೂ ಎಷ್ಟು ಸೊಗಸಾಗಿದೆಯೆಂದರೆ, ನಮ್ಮ ಲಹರಿಯನ್ನು ಹಗುರವಾಗಿ ಆವರಿಸುವಷ್ಟು. ನೆರಳು- ಬೆಳಕಿನ ವಿನ್ಯಾಸವೂ ಒಪ್ಪವಾಗಿದೆ. ರಂಗಪರಿಕರ, ಪ್ರಸಾದನದಲ್ಲಿ ಎಲ್ಲೆಡೆಯೂ ರಾಜಿಯಾಗದ ಅಭಿರುಚಿ ಎದ್ದು ಕಾಣುವಂತಿತ್ತು.
ನಾಲ್ಕು ಕಥೆಗಳಿದ್ದರೂ ತೆರೆಯ ಮೇಲಿದ್ದುದು ಹನ್ನೊಂದೇ ಕಲಾವಿದರು. ಸೂತ್ರಧಾರನಾಗಿ ಕಾಣಿಸಿಕೊಂಡು ನಾಟಕದುದ್ದಕ್ಕೂ ಹಲವು ಪಾತ್ರಗಳನ್ನು ನಿರ್ವಹಿಸಿದ ಅನಿರುದ್ಧ್ ವೇದಾಂತಿಯ ಅಭಿನಯ ಅದ್ಭುತ. ಧ್ವನಿ ಮತ್ತು ಆಂಗಿಕಾಭಿನಯದಲ್ಲಿ, ನಟನೆಗಾಗಿಯೇ ಹುಟ್ಟಿರುವಂತೆ ಕಾಣುವ ಈತ ರಂಗಭೂಮಿಯಲ್ಲಿ ಬಹಳ ಕಾಲ ನೆಲೆ ನಿಲ್ಲಬಲ್ಲ ಪ್ರತಿಭೆ. “ಬಂಗಾರದ ಕಡಗ’ದಲ್ಲಿ ವೃದ್ಧ ವಿಧವೆಯ ಪಾತ್ರ ನಿರ್ವಹಿಸಿದ ನಟ ವಿಜಯ್ ಕುಲಕರ್ಣಿಯವರ ಬಾಡಿ ಲಾಂಗ್ವೇಜ್ ಸೊಗಸಾಗಿತ್ತು. ಗೌರಿಯವರ ಮಾಗಿದ ಅನುಭವವೂ ನೆನಪಿನಲ್ಲಿ ಉಳಿಯುವಂಥದ್ದು. ಸೋಡಾ ಮಾರುವ ನಾಯ್ಡು, ಸೋಡಾಗೋಲಿಗಾಗಿ ಹಂಬಲಿಸುವ ಹುಡುಗ, ಧನಲಕ್ಷ್ಮಿಯ ಚಾಣಾಕ್ಷತನ ಪ್ರೇಕ್ಷಕರ ಮನಸೂರೆಗೊಂಡವು. ರಂಗದ ಹಿಂದೆ ಶ್ರಮಿಸಿರುವ ರಘು ಶಿರಸಿ, ವಿಜಯ್ ಬೆಣಚ, ಹೇಮಂತ್, ಸುಜಯ್ ಅವರ ಕೊಡುಗೆಯೂ ದೊಡ್ಡದೇ.
ವ್ಯಾವಹಾರಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಕೃತಕವಾಗಿ ಹೋದ ಈ ಸಂದರ್ಭದಲ್ಲಿ, “ಸಿಂಹಾಚಲಂ ಸಂಪಿಗೆ’ ಮನಸ್ಸುಗಳ ನಡುವೆ ಗಾಢಸಂಬಂಧ ಬೆಳೆಯುವ ಕುಸುರಿ ಕೆಲಸ ಮಾಡುತ್ತದೆ. ಇಡೀ ನಾಟಕದಲ್ಲಿ ಜೀವನಪ್ರೀತಿಯ ಉತ್ಸಾಹವೊಂದು ಪುಟಿದಾಡುತ್ತಿದೆ.
– ಡಾ.ಎಚ್.ಎಸ್. ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.