ಕರುನಾಡ ಸಿರಿಧಾನ್ಯ ವೈಭವ : ಉಂಡು ಹೋಗಿ ಕೊಂಡೂ ಹೋಗಿ
Team Udayavani, Jun 2, 2018, 12:42 PM IST
ಮಾಲ್ ಸಂಸ್ಕೃತಿ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಹೊತ್ತಿನಲ್ಲಿ ಸಿರಿಧಾನ್ಯ ಮೇಳಗಳು ನಡೆಯುತ್ತಿರುವುದು ಮತ್ತು ಅದಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿರುವುದು ದೊಡ್ಡ ವಿಷಯ. ನಮ್ಮ ಆಹಾರ ಪದ್ಧತಿ ಕಾರ್ಪೊರೆಟ್ ಕಂಪನಿಗಳ ಅಧೀನದಲ್ಲಿದೆ ಎನ್ನುವುದು ಕಹಿ ಸತ್ಯ. ವಿದೇಶಿ ಕಂಪನಿಗಳು ತಮ್ಮ ಆಹಾರೋತ್ಪನ್ನಗಳನ್ನು ದೇಶದ ಮಾರುಕಟ್ಟೆಯಲ್ಲಿ ಬಿಕರಿ ಮಾಡುವ ಉಮೇದಿನಲ್ಲಿ ನಮ್ಮ ಸ್ವಂತ ಆಹಾರ ಪದ್ಧತಿಗೇ ಪೆಟ್ಟು ನೀಡುತ್ತಾ ಬಂದಿವೆ. ಖಾಸಗಿ ಕಂಪನಿಗಳ ಜಾಹೀರಾತುಗಳಿಗೆ ಮರುಳಾಗಿ, ಶತಶತಮಾನಗಳಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬಂದ ಆಹಾರ ಪದ್ಧತಿಯನ್ನು ಗಾಳಿಗೆ ತೂರುವಲ್ಲಿ ನಮ್ಮ ಪಾಲೂ ಇದೆ. ಹೀಗಾಗಿ ಅದರ ಭರಾಟೆಯ ನಡುವೆಯೂ, ನಮ್ಮ ಹಿರಿಯರು ಕಂಡುಕೊಂಡ ಆರೋಗ್ಯಕರ ಆಹಾರಪದ್ಧತಿಯನ್ನು ನೆನಪಿಸಲು ಸಿರಿಧಾನ್ಯ ಮೇಳಗಳು ಮುಖ್ಯವಾಗುತ್ತವೆ. ಅಂಥದ್ದೊಂದು ಬೃಹತ್ ಸಿರಿಧಾನ್ಯ ಮೇಳ “ಗ್ರಾಮೀಣ ಕುಟುಂಬ ಉತ್ಸವ’ ನಗರದಲ್ಲಿ ಆಯೋಜನೆಯಾಗಿದೆ.
ಗ್ರಾಮೀಣ ಕುಟುಂಬ ಉತ್ಸವ
ಸಿರಿಧಾನ್ಯಗಳ ಮಹತ್ವವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ “ಗ್ರಾಮೀಣ ಕುಟುಂಬ’ ಸಂಸ್ಥೆ ಕಳೆದ 6 ವರ್ಷಗಳಿಂದ ಸಿರಿಧಾನ್ಯ ಮೇಳವನ್ನು ಆಯೋಜಿಸುತ್ತಾ ಬಂದಿದೆ. ಸಿರಿಧಾನ್ಯ ಮೇಳದಲ್ಲಿ ಬರೀ ಸಿರಿಧಾನ್ಯಗಳ ಮಾರಾಟ ಮಾತ್ರ ಇರುವುದಿಲ್ಲ. ಸಿರಿಧಾನ್ಯಗಳ ಕುರಿತು ವರ್ಷಗಳಿಂದ ಜನರಲ್ಲಿ ಅರಿವನ್ನು ಮೂಡಿಸುತ್ತಿರುವ ಆಹಾರ ತಜ್ಞ ಖಾದರ್ ಅವರ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನೂ ಮೇಳ ಒಳಗೊಂಡಿರುವುದು ವಿಶೇಷ. ಹೀಗಾಗಿ ಆಸಕ್ತರು ಸಿರಿಧಾನ್ಯಗಳ ಕುರಿತು ಹೆಚ್ಚಿನ ತಿಳಿವಳಿಕೆಯನ್ನು ಪಡೆಯುವುದರ ಜೊತೆಗೆ ಸ್ಥಳದಲ್ಲೇ ಸಿರಿಧಾನ್ಯ ಖಾದ್ಯಗಳ ರುಚಿಯನ್ನೂ ಸವಿಯಬಹುದು. ಈ ಉತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಹೀಗಾಗಿ ಆಸಕ್ತರು ತಮಗೆ ಅನುಕೂಲವೆನಿಸಿದ ಸಮಯದಲ್ಲಿ ಈ ಮೇಳಕ್ಕೆ ಭೇಟಿ ನೀಡಬಹುದು.
ಇನ್ನೂ ಏನೇನಿದೆ?
ಮೂರು ದಿನಗಳ ಕಾಲ ನಡೆಯುವ ಸಿರಿಧಾನ್ಯ ಮೇಳದಲ್ಲಿ ಮೊದಲ ದಿನ, ಜೂನ್ 8ರಂದು ಸಿರಿಧಾನ್ಯ ಬೆಳೆದ ರೈತರಿಗೆ ಸನ್ಮಾನ ಏರ್ಪಾಡಾಗಿದೆ. ರೈತರಿಗೆ ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡುವ ಉದ್ದೇಶ ಇದರ ಹಿಂದಿದೆ. ಎರಡನೇ ದಿನ, ಜೂನ್ 9ರಂದು ರೈತರಿಗೆ ಉಚಿತ ಸಿರಿಧಾನ್ಯ ಬೆಳೆಯುವ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಸಿರಿಧಾನ್ಯದ ಕುರಿತು ಜನಸಾಮಾನ್ಯರಲ್ಲಿ ಇರುವ ಮುಖ್ಯವಾದ ತಪ್ಪುಕಲ್ಪನೆ ಎಂದರೆ ದೈನಂದಿನ ಜೀವನದಲ್ಲಿ ಅದನ್ನು ಬಳಸುವುದು ಕಷ್ಟ ಎನ್ನುವುದು. ಹೀಗಾಗಿ ಯಾವೆಲ್ಲಾ ಖಾದ್ಯವನ್ನು, ಹೇಗೆ ತಯಾರಿಸಬಹುದು ಎನ್ನುವುದನ್ನು ತಿಳಿಸಿಕೊಡಲು “ಉಚಿತ ಸಿರಿಧಾನ್ಯ ಅಡುಗೆ ತರಬೇತಿ’ ಕಾರ್ಯಕ್ರಮವನ್ನು ಜೂ.9ರಂದು ಹಮ್ಮಿಕೊಳ್ಳಲಾಗಿದೆ. ಕೊನೆಯ ದಿನ ಅಂದರೆ ಜೂನ್ 10ರಂದು ಸಿರಿಧಾನ್ಯ ಪರಿಣತ ಖಾದರ್ ಅವರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಶಾಪಿಂಗ್ ಮಾಹಿತಿ
ನವಣೆ 34 ರೂ.
ಸಾಮೆ 65 ರೂ.
ಅರ್ಕಾ 58 ರೂ.
ಊದಲು 57 ರೂ.
ಕೊರಲು 130 ರೂ.
ಬರಗು 57 ರೂ.
ಮೇಲಿನ ಎಲ್ಲಾ 6 ವಿಧಗಳ ಸಿರಿಧಾನ್ಯಗಳನ್ನು ತಲಾ 25 ಕೆ.ಜಿ.ಯಂತೆ ಖರೀದಿಸಿದರೆ ರಿಯಾಯಿತಿ ದರ ಮಾತ್ರವಲ್ಲದೆ ಬೆಂಗಳೂರಿಗರಿಗೆ ಉಚಿತ ಹೋಂ ಡೆಲಿವರಿ ಸೌಲಭ್ಯವಿದೆ. ಇದಲ್ಲದೆ ಪ್ರಯತ್ನಿಸಿ ನೋಡಲು ಬಂದವರು 550ರೂ. ಮತ್ತು 300ರೂ.ಗಳ ಎರಡು ಸಿರಿಧಾನ್ಯ ಪ್ಯಾಕೇಜ್‌ಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.
ಎಲ್ಲಿ?: ಡಾ. ಮರೀಗೌಡ ಸ್ಮಾರಕ ಭವನ, ಲಾಲ್‌ಬಾಗ್
ಯಾವಾಗ?: ಜೂನ್ 8- 10, ಬೆಳಿಗ್ಗೆ 8- ಸಂಜೆ 7
ರಾಗಿ ತಿಂದವ ನಿರೋಗಿ!
ಪಾಶ್ಚಾತ್ಯರು ಮಾಡಿದ್ದೆಲ್ಲವೂ ಶ್ರೇಷ್ಠ ಎಂಬ ಭ್ರಮೆಯಲ್ಲಿ, ಎಲ್ಲವನ್ನೂ ಕುರುಡಾಗಿ ಅನುಕರಿಸುತ್ತಿದ್ದೇವೆ. ಇದರ ಪರಿಣಾಮ ರೈತರ ಹೊಲ ಗದ್ದೆಗಳನ್ನೂ ದಾಟಿ ನಮ್ಮೆಲ್ಲರ ಅಡುಗೆಮನೆಯೊಳಗೆ ಬಂದು ಕುಳಿತುಬಿಟ್ಟಿದೆ. ನಮ್ಮ ರೈತರು ಬೆಳೆಯುವ ಸಿರಿಧಾನ್ಯಕ್ಕಿಂತ ಅಮೇರಿಕಾದ ರೈತರು ಬೆಳೆಯುವ ಧಾನ್ಯಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತೆ ಅಂತ ಯಾವ ಪುಣ್ಯಾತ್ಮ ನಂಬಿಸಿದನೋ ಗೊತ್ತಿಲ್ಲ. ಅದನ್ನು ನಮ್ಮ ಜನ ಕಣ್ಮುಚ್ಚಿ ನಂಬಿ ಬಿಟ್ಟಿದ್ದಾರೆ. ಎರಡು ದಶಕಗಳ ಹಿಂದೆ ಪಿಜ್ಜಾ, ಸಾಫ್ಟ್ ಡ್ರಿಂಕ್ಸ್, ನೂಡಲ್ಸ್, ಕಾರ್ನ್ಫ್ಲೇಕ್ಸ್, ಚಿಪ್ಸ್ ಇವೆಲ್ಲಾ ಚೈನೀಸ್ ರೆಸ್ಟೋರೆಂಟುಗಳಲ್ಲಿ ಮಾತ್ರ ಸಿಗುತ್ತಿತ್ತು. ಈಗ ನಮ್ಮ ಮನೆಯ ಡಬ್ಬ, ಶೆಲು#ಗಳಲ್ಲಿ ಜಾಗ ಪಡೆದಿವೆ. ಅಷ್ಟು ಮಾತ್ರವಲ್ಲ, ನಮ್ಮ ಮನೆಯಲ್ಲೇ ಸಿದ್ಧಗೊಳ್ಳುತ್ತಿವೆ.
ನಮ್ಮಲ್ಲಿ ಮೊದಲಿನಿಂದಲೂ ವೈವಿಧ್ಯಮಯ ಆಹಾರಪದ್ಧತಿ ಇದೆ. ಉತ್ತರಕರ್ನಾಟಕದ ರೊಟ್ಟಿ, ಕರಾವಳಿಯ ಅವಲಕ್ಕಿ, ಮೈಸೂರಿನ ಸೊಪ್ಸಾರು ಮುದ್ದೆಯೂಟ. ನಮ್ಮ ಪರಂಪರಾಗತ ಆಹಾರಕ್ರಮದಲ್ಲಿ ರುಚಿಯ ಜೊತೆಗೆ ಆರೋಗ್ಯವೂ ಇದೆ. ಈಗಂತೂ ಯಾರಿಗೆ ನೋಡಿದರೂ ಸಕ್ಕರೆ ಕಾಯಿಲೆ. ಅದು ಬಂದ ಮೇಲೆ ಎಲ್ಲಿಂದಲೋ ರಾಗಿ ತಂದು ತಿನ್ನಲು ಶುರುಮಾಡುತ್ತಾರೆ. ಮೊದಲಿನಿಂದಲೂ ಸರಿಯಾಗಿ ರಾಗಿ ತಿಂದು ಆರೋಗ್ಯದಿಂದ ಇರಬಹುದಿತ್ತಲ್ಲವೇ? ಇದನ್ನು ನಾವು ಮಾಡುವುದಿಲ್ಲ. ಈಗೀಗ ಜನರಲ್ಲಿ ಈ ಕುರಿತು ಕಾಳಜಿ ಬೆಳೆಯುತ್ತಿರುವುದು ಖುಷಿಯ ಸಂಗತಿ.
– ಡಾ. ಖಾದರ್, ಸಿರಿಧಾನ್ಯ ಪರಿಣತರು
ನಾನು ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಟೀಚರ್ ಆಗಿದ್ದೆ. ಅಲ್ಲಿಗೆ ಬರುತ್ತಿದ್ದವರಲ್ಲಿ ಹೆಚ್ಚಿನವರು ರೈತರಾಗಿದ್ದರು. ಒಮ್ಮೆ ಅವರು ಓದು ಬರಹಕ್ಕೂ ಜೀವನಕ್ಕೂ ಏನು ಸಂಬಂಧ ಅಂತ ಕೇಳಿದರು. ನಾನು ಶಿಕ್ಷಣದಿಂದ ಬದುಕಿಗೆ ಸಹಾಯವಾಗುತ್ತೆ ಅಂತ ಹೇಳಿದೆ. ಅವರು ಓದು ಬರಹ ಕಲಿತರೂ ಕೃಷಿಯಲ್ಲಿ ನಷ್ಟ ತಪ್ಪಿದ್ದಲ್ಲ, ಅದರಿಂದ ಸಹಾಯವಾಗೋದು ಅನುಮಾನ ಅಂದಾಗ ಅವರಿಗೆ ಉತ್ತರಿಸಲು ನನಗೆ ಸಾಧ್ಯವಾಗಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ನಾನು ಕೆಲಸಕ್ಕೆ ರಾಜಿನಾಮೆ ನೀಡಿದೆ. ರೈತ ವಿದ್ಯಾರ್ಥಿಗಳು ಹೇಳಿದ್ದು ಸರಿಯಾಗಿಯೇ ಇತ್ತು. ಅವರ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಹೀಗಾಗಿ ನಾನು ರೈತರ ಮತ್ತು ಮಾರುಕಟ್ಟೆಯ ನಡುವೆ ಸೇತುವೆಯಾಗಲು ನಿರ್ಧರಿಸಿದೆ. ಹೀಗಾಗಿ ಗ್ರಾಮೀಣ ಕುಟುಂಬ ಸಂಸ್ಥೆಯನ್ನು ಸ್ಥಾಪಿಸಿದೆ. ಅದರ ಮುಖೇನ ರೈತರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳತೊಡಗಿದೆ. ಜನರಲ್ಲಿ ಸಿರಿದಾನ್ಯ ಕುರಿತ ತಿಳಿವಳಿಕೆ ಮೂಡಿಸುವುದು ಈ ಮೇಳದ ಉದ್ದೇಶ.
-ಎಂ.ಎಚ್. ಶ್ರೀಧರಮೂರ್ತಿ, ಉತ್ಸವ ಆಯೋಜಕರು
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.