ಛೋಟಾ ಬ್ರೇಕ್
ಟ್ರಾಫಿಕ್ ಪೊಲೀಸರಿಗೆ ಮಸಾಜ್ ಟಾನಿಕ್
Team Udayavani, Nov 30, 2019, 6:11 AM IST
ಟ್ರಾಫಿಕ್ ಪೊಲೀಸರು ದಿನವಿಡೀ ನಿಂತೇ ಇರಬೇಕು. ಜೊತೆಗೆ, ಟ್ರಾಫಿಕ್‌ನ ಅಬ್ಬರ, ನಿಯಮ ಮುರಿದು ತಲೆನೋವು ಕೊಡುವ ವಾಹನ ಚಾಲಕರು, ಬಿಸಿಲು, ಧೂಳು, ಹೊಗೆ, ಕಿವಿಗಡಚಿಕ್ಕುವ ಶಬ್ದದ ಕಿರಿಕಿರಿ ಬೇರೆ. ಅವರ ಕಷ್ಟವನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡುವ ಉದ್ದೇಶದಿಂದ, ಕೈ- ಕಾಲುಗಳಿಗೆ ಮಸಾಜ್ ಮಾಡುತ್ತಾರೆ, ದಿನೇಶ್ ಬಾಬು…
ಕಳ್ಳರನ್ನು ಹೆಡೆಮುರಿ ಕಟ್ಟಿ, ಮಂಡಿಯೂರಿ ಕೂರುವಂತೆ ಮಾಡುವುದು ಪೊಲೀಸರ ಕೆಲಸ. ಆದರೆ, ಕಳೆದ ವಾರ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಬೇರೆಯದೇ ಚಿತ್ರಣವಿತ್ತು. ಅಲ್ಲಿ, ಟ್ರಾಫಿಕ್ ಪೊಲೀಸರೇ ಒಬ್ಬೊಬ್ಬರಾಗಿ ಮಂಡಿ ಚಾಚಿ, ಕುರ್ಚಿಯ ಮೇಲೆ ಕುಳಿತಿದ್ದರು. ಅವರ ಎದುರಿಗಿದ್ದ ದಿನೇಶ್ ಬಾಬು, ಪೊಲೀಸರ ಕೈ-ಕಾಲಿಗೆ ಎಣ್ಣೆ ಹಚ್ಚಿ, ಮಸಾಜ್ ಮಾಡುತ್ತಿದ್ದರು. ಮಸಾಜ್ ಮಾಡಿಸಿಕೊಂಡು ನಿರಾಳರಾದ ನಂತರ ಪೊಲೀಸರು ಮತ್ತೆ ತಮ್ಮ ಡ್ನೂಟಿಗೆ ಧಾವಿಸುತ್ತಿದ್ದರು.
ಹೀಗೊಂದು ಅವಕಾಶ ಕಲ್ಪಿಸಿದವರು, ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು. ಟ್ರಾಫಿಕ್ ಪೊಲೀಸರು ದಿನವಿಡೀ ನಿಂತೇ ಇರಬೇಕು. ಜೊತೆಗೆ, ಟ್ರಾಫಿಕ್‌ನ ಅಬ್ಬರ, ನಿಯಮ ಮುರಿದು ತಲೆನೋವು ಕೊಡುವ ವಾಹನ ಚಾಲಕರು, ಬಿಸಿಲು, ಧೂಳು, ಹೊಗೆ, ಕಿವಿಗಡಚಿಕ್ಕುವ ಶಬ್ದದ ಕಿರಿಕಿರಿ ಬೇರೆ. ಅವರ ಕಷ್ಟವನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡುವ ಉದ್ದೇಶದಿಂದ, ಕೈ-ಕಾಲುಗಳಿಗೆ ಮಸಾಜ್ ಮಾಡಿ ದಣಿವು ನೀಗಿಸುವ ಪ್ರಯತ್ನ ಶುರುವಾಗಿದೆ. ಮಲ್ಲೇಶ್ವರ ಸೇರಿದಂತೆ ಐದು ಸಂಚಾರ ಠಾಣೆಗಳಲ್ಲಿ ಈಗಾಗಲೇ ಮಸಾಜ್ ನಡೆದಿದ್ದು, ದಿನೇಶ್ ಬಾಬು ಎಂಬುವರು ಈ ಸೇವೆ ನೀಡಿದ್ದಾರೆ.
ಮೂಲತಃ ಶ್ರೀರಾಮಪುರದವರಾದ ದಿನೇಶ್ ಬಾಬು, ಸುಮಾರು ಹತ್ತು ವರ್ಷಗಳಿಂದ ಮಸಾಜ್ ಚಿಕಿತ್ಸೆಯಲ್ಲಿ ಪರಿಣತರು. ತಮ್ಮ ಮನೆಯ ಸಮೀಪದಲ್ಲಿರುವ ಜಿಎಯುಸಿಜಿ ಡಾಕ್ಟರ್ ಅಸೋಸಿಯೇಷನ್‌ನಲ್ಲಿ ಸ್ವಯಂಸೇವಕರಾಗಿ ದುಡಿಯುತ್ತಾ, ಮಸಾಜ್ ಚಿಕಿತ್ಸೆ ಹಾಗೂ ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ಕಲಿತಿದ್ದಾರೆ. ಶ್ರೀರಾಮಪುರದ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಅವರಿಗೆ ಪರಿಚಯವಿದ್ದ ದಿನೇಶ್ ಬಾಬು, ಅವರ ಕೋರಿಕೆಯ ಮೇರೆಗೆ ಈಗ ಪೊಲೀಸ್ ಠಾಣೆಗೆ ಬಂದು ಮಸಾಜ್ ಸೇವೆ ನೀಡುತ್ತಿದ್ದಾರೆ. ಮಲ್ಲೇಶ್ವರವಷ್ಟೇ ಅಲ್ಲ, ಪೀಣ್ಯ, ಜಾಲಹಳ್ಳಿ, ಬನಶಂಕರಿ, ಚಿಕ್ಕಪೇಟೆ, ಸುಬ್ರಹ್ಮಣ್ಯಪುರ ಠಾಣೆಯ ಟ್ರಾಫಿಕ್ ಪೊಲೀಸರು ಕೂಡಾ ಮಸಾಜ್‌ನ ಲಾಭ ಪಡೆದಿದ್ದಾರೆ.
ಒಬ್ಬರಿಗೆ ಇಪ್ಪತ್ತು ನಿಮಿಷ: ಒಬ್ಬ ಪೊಲೀಸ್‌ಗೆ ಮಸಾಜ್ ಮಾಡಲು ಸುಮಾರು ಇಪ್ಪತ್ತು ನಿಮಿಷ ಬೇಕು. ಕಾಲಿನ ಮಂಡಿಯವರೆಗೆ, ಕೈ, ಬೆನ್ನು, ಕುತ್ತಿಗೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದ ನಂತರ, “ಈಗ ಆರಾಮ್ ಅನ್ನಿಸ್ತಿದೆ’ ಅಂತ ಪೊಲೀಸರು ಹೇಳ್ಳೋದನ್ನು ಕೇಳಲು ದಿನೇಶ್ ಅವರಿಗೆ ಖುಷಿಯಾಗುತ್ತದಂತೆ.
ನೀವೂ ಮಸಾಜ್ ಮಾಡ್ಕೊಳ್ಳಿ…: ಟ್ರಾಫಿಕ್ ಪೊಲೀಸರಷ್ಟೇ ಅಲ್ಲ, ಕಂಡಕ್ಟರ್‌ಗಳು, ಮೆಟ್ರೋ ಸೆಕ್ಯೂರಿಟಿ ಮುಂತಾದ ಕೆಲಸ ಮಾಡುವವರು ದಿನವಿಡೀ ನಿಂತೇ ಇರಬೇಕಾಗುತ್ತೆ. ಅವರೆಲ್ಲರೂ ದಿನಾ ಸಂಜೆ ಕೈ-ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಮಸಾಜ್ ಎಣ್ಣೆ (ಎಣ್ಣೆಯಲ್ಲಿ ಮೆಂತಾಲ್ ಇರಬಾರದು/ ಉರಿ ಬರಬಾರದು) ಅಥವಾ ಸಾಸಿವೆ ಎಣ್ಣೆಯನ್ನು ಕೈ-ಕಾಲಿಗೆ ಹಚ್ಚಿ, ನಯವಾಗಿ ತಿಕ್ಕಿ ಮಸಾಜ್ ಮಾಡಿ, ಬಿಸಿನೀರಿನಲ್ಲಿ ಉಪ್ಪು ಹಾಕಿ, ಕಾಲನ್ನು ಇಟ್ಟುಕೊಂಡು ಇಪ್ಪತ್ತು ನಿಮಿಷ ಕಣ್ಮುಚ್ಚಿ ಕುಳಿತರೆ, ದಿನದ ದಣಿವು ಕಡಿಮೆಯಾಗುತ್ತದೆ ಅಂತಾರೆ ದಿನೇಶ್.
ಅಂಗಡಿ ನಡೆಸುತ್ತಾರೆ…: ಜೀವನಾಧಾರಕ್ಕೆ ಅಂಗಡಿ ನಡೆಸುತ್ತಿರುವ ದಿನೇಶ್ ಬಾಬು, ಮಸಾಜ್ ಸೇವೆಯನ್ನು ಪ್ರವೃತ್ತಿಯಾಗಿ ನಡೆಸುತ್ತಿದ್ದಾರೆ. ಜೊತೆಗೆ, ಬಾಲ್ಯದಿಂದಲೂ ಸಿನಿಮಾ ಡ್ಯಾನ್ಸರ್ ಆಗುವ ಕನಸು ಕಾಣುತ್ತಿದ್ದ ಇವರು, ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಡ್ಯಾನ್ಸ್ ಕೂಡಾ ಹೇಳಿ ಕೊಡುತ್ತಾರೆ.
ಅಪ್ಪನ ಕಷ್ಟ ನೋಡಿದ್ದೆ…: ನನ್ನ ತಂದೆಯವರು ರೇಲ್ವೆ ಪ್ರೊಟೆಕ್ಷನ್ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗನ್ ಹಿಡಿದು, ದಿನವಿಡೀ ರೇಲ್ವೆ ಸ್ಟೇಷನ್ ಎದುರು ನಿಲ್ಲಬೇಕಿತ್ತು. ಸಣ್ಣವನಿದ್ದಾಗ ಅಪ್ಪನ ಕೆಲಸ ಎಷ್ಟು ಕಷ್ಟದ್ದು ಅಂತ ನನಗೆ ಗೊತ್ತಿರಲಿಲ್ಲ. ಆದರೆ, ನಾನು ಏಳನೇ ಕ್ಲಾಸ್‌ನ ಪಬ್ಲಿಕ್ ಪರೀಕ್ಷೆ ಸಮಯದಲ್ಲಿ ಅಪ್ಪ ನನ್ನನ್ನು ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಇದ್ದರೆ ನಾನು ಓದುವುದಿಲ್ಲ ಅಂತ!
ಸೆಕ್ಯುರಿಟಿಗಳಿಗಾಗಿ ಮೀಸಲಿದ್ದ ಕೋಣೆಯಲ್ಲಿ ಕುಳಿತು ನಾನು ಓದಿಕೊಳ್ಳುತ್ತಿದ್ದೆ. ಅಪ್ಪ ಅವತ್ತು ಬೆಳಗ್ಗೆ 8ಕ್ಕೆ ಗನ್ ಹಿಡಿದು ನಿಂತವರು. ರಾತ್ರಿ 10 ಗಂಟೆವರೆಗೂ ನಿಂತೇ ಇದ್ದರು. ಆಗ ನನಗೆ ಅವರ ಕಷ್ಟ ಅರ್ಥವಾಯ್ತು. ಅದಾದ ನಂತರ, ಪ್ರತಿದಿನ ಅಪ್ಪ ಕೆಲಸ ಮುಗಿಸಿ ಬಂದಾಗ ಅವರಿಗೆ ಮಸಾಜ್ ಮಾಡುವುದು, ಕೈ- ಕಾಲು ತುಳಿಯುವುದು ಮಾಡುತ್ತಾ ಅವರ ಆಯಾಸವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೆ. ಈಗ ನನಗೆ ಟ್ರಾಫಿಕ್ ಪೊಲೀಸ್‌ರಿಗೆ ಮಸಾಜ್ ಮಾಡಲು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ.
ಇದು ನಮ್ಮ ಕಮಿಷನರ್ ಸಾಹೇಬರಿಂದ ಬಂದಿರುವ ಸೂಚನೆ. ದಿನಾ 8-10 ಗಂಟೆ ನಿಂತೇ ಕೆಲಸ ಮಾಡುವ ಟ್ರಾಫಿಕ್ ಪೊಲೀಸರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅಂತ ಅವರು ಹೇಳುತ್ತಿರುತ್ತಾರೆ. ಕೈ- ಕಾಲಿಗೆ ಮಸಾಜ್ ನೀಡಿದರೆ ಉಪಯೋಗ ಆಗಬಹುದು ಅಂತ ದಿನೇಶ್ ಬಾಬು ಅವರನ್ನು ಕರೆಸಿದೆವು. ಮಸಾಜ್ ಸಂದರ್ಭದಲ್ಲಿ ಸಿಬ್ಬಂದಿಯ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ತಿಳಿಯಿತು. ಒಬ್ಬರಿಗೆ ಕುತ್ತಿಗೆಯೇ ಸ್ವಲ್ಪ ವಾರೆಯಾಗಿತ್ತು. ಇನ್ನೊಬ್ಬರಿಗೆ ಕಾಲಿನಲ್ಲಿ ತುಂಬಾ ಸಮಯದಿಂದ ನೋವು ಇದ್ದು, ನಡೆಯಲು ಕಷ್ಟವಾಗುತ್ತಿತ್ತು. ಹೀಗೆ ಮಸಾಜ್ ಮಾಡುವುದರಿಂದ ಅಂಥ ತೊಂದರೆಗಳಿಗೆ ಸ್ವಲ್ಪ ಪರಿಹಾರ ಸಿಗಬಹುದು.
-ಅನಿಲ್, ಮಲ್ಲೇಶ್ವರ ಸರ್ಕಲ್ ಇನ್‌ಸ್ಪೆಕ್ಟರ್
* ಪ್ರಿಯಾಂಕ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.