ಶ್ರೀ ರಾಮ ನವಮಿ ಸಂಗೀತೋತ್ಸವದ ಹಿಂದೆ- ಮುಂದೆ


Team Udayavani, Apr 8, 2017, 5:19 PM IST

6555444.jpg

ರಾಮನವಮಿ ಅಂದಾಕ್ಷಣ ನೆನಪಾಗುವುದು ಚಾಮರಾಜಪೇಟೆಯ ಮೈದಾನದಲ್ಲಿ ನಡೆಯುವ ಸಂಗೀತೋತ್ಸವವೇ. ಈ ಕಾರ್ಯಕ್ರಮಕ್ಕೆ ದಶಕಗಳ ಇತಿಹಾಸವಿದೆ. ಇದಕ್ಕೊಂದು ಚರಿತ್ರೆಯಿದೆ. ಹಿನ್ನೆಲೆಯಿದೆ. ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಒಮ್ಮೆ ಹಾಡಿದರೆ ಜೀವನ ಸಾರ್ಥಕ ಎನ್ನುವ ಕಲಾವಿದರಿದ್ದಾರೆ. ಸಂಗೀತ ಕ್ಷೇತ್ರದ ಮಹಾನ್‌ ತಾರೆಗಳಾದ ಬಿಡಾರಂ ಕೃಷ್ಣಪ್ಪ, ಪಿಟೀಲು ಚೌಡಯ್ಯ, ಚೆಂಬೈ ವೈದ್ಯನಾಥ ಬಾಗವತರ್‌, ಅರಿಯಾರ್ಕುಡಿ ಸಹೋದರರು, ಎಂ.ಎಸ್‌ ಸುಬ್ಬುಲಕ್ಷಿ$¾, ಯೇಸುದಾಸ್‌, ಎಸ್‌.ಪಿ ಬಾಲಸುಬ್ರಹ್ಮಣ್ಯಂ… ಇವರೆಲ್ಲಾ ರಾಮನವಮಿ ಉತ್ಸವದಲ್ಲಿ ಹಾಡಿದ್ದಾರೆ! ರಾಮನವಮಿ ಸಂಗೀತೋತ್ಸವದಲ್ಲಿ ಇಂತಿಂಥ ಕಛೇರಿಗಳನ್ನು ಮಿಸ್‌ ಮಾಡಲೇಬಾರದು ಎಂದು ತಿಂಗಳುಗಳ ಮೊದಲೇ ನಿರ್ಧರಿಸುವ ಸಂಗೀತ ಪ್ರೇಮಿಘಲೂ ಇದ್ದಾರೆ.

ನೂರಾ ಏಳು ವರ್ಷಗಳ ಹಿಂದೆ ತೀರಾ ಆಕಸ್ಮಿಕವಾಗಿ ಆರಂಭವಾದ, ಆನಂತರದಲ್ಲಿ ಒಂದು ವ್ರತದಂತೆ, ಸಂಪ್ರದಾಯದಂತೆ, ಜಾತ್ರೆಯಂತೆ ನಡೆಯುತ್ತ ಬಂದಿರುವ ವಿಶಿಷ್ಟ ಆಚರಣೆ ಶ್ರೀರಾಮನವಮಿ ಉತ್ಸವ. ಈ ಉತ್ಸವದ ಮಹತ್ವ, ಆ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳು, ಇತ್ಯಾದಿ ವಿವರಗಳನ್ನೆಲ್ಲ ಮೊಗೆದು ಕೊಡುವ ಪುಟ್ಟ ಪ್ರಯತ್ನ ಇಲ್ಲಿದೆ.

ನಮ್ಮ ಬೆಂಗಳೂರು ಕಲಾ ರಸಿಕತೆಯ ರಾಜಧಾನಿಯೂ ಹೌದು. ರಾಮನವಮಿ ಉತ್ಸವ ಮೊದಲು ಆರಂಭವಾಗಿದ್ದು ಬೆಂಗಳೂರು ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಬಳಿಯಿರುವ ಚಿಕ್ಕಲಾಲ್‌ಬಾಗ್‌ನ ತುಳಸೀವನದಲ್ಲಿ. ರಾಮನವಮಿ ಉತ್ಸವಕ್ಕೆ ನಾಂದಿ ಹಾಡಿದವರು “ತುಳಸೀ ರಾಮದಾಸ’ ಎಂಬುವರು. ಮಲ್ಲೇಶ್ವರದ ರಾಮ ಭಜನಾ ಸಭಾ ಶತಸಂಭ್ರಮವನ್ನು ಕಂಡಿದೆ.

ಬೆಂಗಳೂರಿನ ರಾಮೋತ್ಸವಕ್ಕೆ ಸಂಗೀತಲೋಕದ ದಂತಕಥೆಯಾಗಿದ್ದ ಬಿಡಾರಂ ಕೃಷ್ಣಪ್ಪನವರ ಕೊಡುಗೆಯೂ ಇದೆ. “1910ರ ಸುಮಾರಿನಲ್ಲಿ ಚಿಕ್ಕಪೇಟೆಯಲ್ಲಿ ಸಾಹೂಜಿಯವರ ಮಹಡಿಯ ಮೇಲೆ ಆಗ ಸನ್ಮಾರ್ಗ ಪ್ರವರ್ತಕ ಸಭೆಯವರು ರಾಮೋತ್ಸವ ನಡೆಸುತ್ತಿದ್ದರು. ಅಲ್ಲಿ ಬಿಡಾರಂ ಕೃಷ್ಣಪ್ಪನವರೂ ಹಾಡುತ್ತಿದ್ದರು. ಅವರ ಹಾಡು ಬೆಂಗಳೂರಿಗೇ ಒಂದು ಆವೇಶವನ್ನುಂಟು ಮಾಡಿತು. ಎಲ್ಲಿ ಹೋದರೂ ಅವರ ಸಂಗೀತದ ಪ್ರಶಂಸೆಯೇ” ಎಂದು ಡಿವಿಜಿಯವರು ತಮ್ಮ  ಜ್ಞಾಪಕ ಚಿತ್ರಶಾಲೆ-2 “ಕಲೋಪಾಸಕರು’ ಇದರಲ್ಲಿ ದಾಖಲಿಸಿದ್ದಾರೆ.

ಹೀಗೆ ಪ್ರಾರಂಭವಾದ ರಾಮನವಮಿ ಸಂಗೀತೋತ್ಸವ, ಆನಂತರದಲ್ಲಿ ಶ್ರೀರಾಮಸೇವಾ ಮಂಡಳಿ ಸಂಸ್ಥೆಯನ್ನು ಸ್ಥಾಪಿಸಿ ರಾಮೋತ್ಸವವನ್ನು ಒಂದು ವ್ರತದಂತೆ ನಡೆಸಲು ಕಾರಣಕರ್ತರಾದವರು ಎಸ್‌.ವಿ. ನಾರಾಯಣ ಸ್ವಾಮಿಯವರು. 14 ವರ್ಷದ ಬಾಲಕನಾಗಿದ್ದಾಗ ನಾರಾಯಣಸ್ವಾಮಿಯವರು ತಮ್ಮ ವಾರಗೆಯ ಉಳಿದ ಹುಡುಗರಂತೆ ಬಡಾವಣೆಯಲ್ಲಿ ಚಂದಾ ಸಂಗ್ರಹಿಸಿ ಕಾಮನಹಬ್ಬ, ಗಣೇಶನ ಹಬ್ಬವನ್ನು ಸಂಘಟಿಸುತ್ತಿದ್ದರು.

ಮೊದಲ ವರ್ಷದ ಹಬ್ಬಗಳ ನಂತರ ಸಂಗ್ರಹಿಸಿದ ಮೊತ್ತದಲ್ಲಿ ಸ್ವಲ್ಪ ಹಣ ಉಳಿಯಿತು. ಆಗ ನಾರಾಯಣ ಸ್ವಾಮಿಗೆ ಹೊಳೆದದ್ದೇ ಮುಂಬರುವ ಶ್ರೀರಾಮನವಮಿ. ಹೀಗೆ ಆಕಸ್ಮಿಕ ರೀತಿಯಲ್ಲಿ 1939ರಲ್ಲಿ ಶ್ರೀರಾಮೋತ್ಸವವನ್ನು ಸ್ನೇಹಿತರ ಜೊತೆಗೂಡಿ ಪ್ರಾರಂಭಿಸಿದರು. ನಂತರ ಅದಕ್ಕೇ ಸಂಪೂರ್ಣವಾಗಿ ಅಂಟಿಕೊಂಡರು. ಆರಂಭದ 3-4 ವರ್ಷ ಹರಿಕಥೆ, ಉಪನ್ಯಾಸ ಮತ್ತು ದೇವರ ನಾಮಕ್ಕೆ ಸೀಮಿತವಾಗಿತ್ತು. ಆದರೆ, ನಾರಾಯಣಸ್ವಾಮಿಗೆ  ಮೊದಲಿನಿಂದಲೂ ಶಾಸ್ತ್ರೀಯ ಸಂಗೀತದ ಅಭಿರುಚಿ ಇತ್ತು. ಶಂಕರಪುರ, ಬಸವನಗುಡಿಯ ಕೆಲ ಮನೆಗಳಲ್ಲಿ ನಡೆಯುತ್ತಿದ್ದ ಕಚೇರಿಗಳಿಂದ ಪ್ರಭಾವಿತರಾಗಿ ತಮ್ಮ ಮಂಡಳಿಯಲ್ಲೂ ಸಂಗೀತ ಕಚೇರಿ ನಡೆಸಲು ಮುಂದಾದರು.

ಮೊದಲ 4-5 ವರ್ಷ ಚಾಮರಾಜ ಪೇಟೆಯ 3ನೇ ರಸ್ತೆಯಲ್ಲಿ ನಡೆಯುತ್ತಿದ್ದ ಉತ್ಸವ ನಂತರ ವಿಶಾಲವಾದ ಶ್ರೀರಾಮೇಶ್ವರ ದೇವಸ್ಥಾನದ ಮೈದಾನಕ್ಕೆ ಸ್ಥಳಾಂತರವಾಯಿತು. ಮಂಡಲಿಯ  ರಾಮೋತ್ಸವ ಹಿಗ್ಗಿತು. 15-20 ದಿನಗಳ ಸಂಗೀತ ಕಚೇರಿ ಏರ್ಪಾಡಾಯಿತು. ಆ ಕಾಲದಲ್ಲಿ ನಡೆದ ಕಚೇರಿಗಳೆಂದರೆ ಸೇಲಂ ದೇಶಿಕನ್‌, ಅಯ್ನಾಮಣಿ ಅಯ್ಯರ್‌, ತಂಗಮ್ಮಾಳ್‌, ಪಾಲ್ಗಾಟ್‌ ಸೀತಾರಾಮ ಭಾಗವತರ್‌, ಚೆಂಬೈ ವೈದ್ಯನಾಥ ಭಾಗವತರ್‌, ರಾಜರತ್ನ ಪಿಳೈ ಮುಂತಾದವರದ್ದು. ಸತತವಾಗಿ ಸಾಕಷ್ಟು ವರ್ಷ ಇವರೆಲ್ಲರೂ ರಾಮೋತ್ಸವ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದಾರೆ.

1949ರಿಂದ ರಾಮನವಮಿ ಸಂಗೀತೋತ್ಸವ ಬಿ.ಡಿ.ಸಿ.ಸಿ ಬ್ಯಾಂಕಿನ ಆವರಣದಲ್ಲಿ ಕಾರ್ಯಾರಂಭ ಮಾಡಿತು. 1952ರಲ್ಲಿ ಮಂಡಳಿಯ ರಾಮೋತ್ಸವವು ಕೋಟೆ ಸಿಟಿ ಇನ್‌ಸ್ಟಿಟ್ಯೂಟ್‌ ಪಕ್ಕದ ಖಾಲಿ ನಿವೇಶನಕ್ಕೆ ಸ್ಥಳಾಂತರವಾಯಿತು. ಅಲ್ಲಿ ಶ್ರೀಮತಿ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಪ್ರಥಮ ಸಂಗೀತ ಕಛೇರಿ ನಡೆಯಿತು. 1980ರಲ್ಲಿ ನಡೆದ ಎಂ.ಎಸ್‌. ಸುಬ್ಬಲಕ್ಷ್ಮಿಯವರ ಸಂಗೀತ ಕಚೇರಿ ಭಾರತದಾದ್ಯಂತ ಆಕಾಶವಾಣಿಯಲ್ಲಿ ನೇರ ಪ್ರಸಾರವಾಯಿತು.

ಮೈಸೂರಿನ ಮಹಾರಾಜರೂ, ಸಂಗೀತ ಶಾಸ್ತ್ರಜ್ಞರೂ, ಕಲಾ ಪೋಷಕರೂ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್‌ 1955ರಲ್ಲಿ ಮಂಡಲಿಯ ರಾಮೋತ್ಸವ ಸಂಗೀತ ಕಚೇರಿಯನ್ನು ಉದ್ಘಾಟಿಸಿದರು. ಅದೇ ರೀತಿ 1957ರಲ್ಲಿ ಸಿ. ರಾಜಗೋಪಾಲ ಚಾರಿಯವರೊಂದಿಗೆ ರಾಮೋತ್ಸವ ಉದ್ಘಾಟನೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಭಾಗವಹಿಸಿದ್ದರು.

ಚಳುವಳಿಯ ಬಿಸಿ: ಆದರೆ ಇಂತಹ ಸಂಗೀತಾರಾಧನೆ ಒಂದು ಸಂದರ್ಭದಲ್ಲಿ ಸಾತ್ವಿಕ ಚಳುವಳಿಯನ್ನು ಎದುರಿಸಬೇಕಾಯಿತು. 1962ರ ಏಪ್ರಿಲ್‌ನಲ್ಲಿ ಶ್ರೀರಾಮನವಮಿ ಭರಾಟೆ. ಆವತ್ತಿನ ಸಂದರ್ಭದಲ್ಲಿ ರಾಮನವಮಿ ಬಂತೆಂದರೆ, ಸುಮಾರು 2-21/2 ತಿಂಗಳ ರಾಮೋತ್ಸವ ಸಂಗೀತ ಕಾರ್ಯಕ್ರಮದಲ್ಲಿ ಹೊರ ರಾಜ್ಯದ ಸಂಗೀತಗಾರರಿಗೆ ಸುಗ್ಗಿ. ಇದನ್ನು ಕಂಡ ಅನಕೃ, ಮ. ರಾಮಮೂರ್ತಿ, ನಾಡಿಗೇರ್‌ ಕೃಷ್ಣರಾಯರು ಮತ್ತು ಎಂ.ಎನ್‌. ನಟರಾಜ್‌ ಗೆಳೆಯರೊಂದಿಗೆ ಸೇರಿ, ಉತ್ಸವದಲ್ಲಿ ಕನ್ನಡ ಸಂಗೀತ ಕಲಾವಿದರನ್ನು ಕಡೆಗಣಿಸಿರುವುದನ್ನು ವಿರೋಧಿಸಿ ಚಳುವಳಿ ರಂಗಕ್ಕಿಳಿದರು. ಎಂ.ಎಸ್‌. ಸುಬ್ಬಲಕ್ಷ್ಮಿಯವರ ಚಾಮರಾಜಪೇಟೆ ರಾಮೋತ್ಸವ ಸಂಗೀತ ಕಚೇರಿಯ ದಿನದಂದೇ ಚಿಕ್ಕಲಾಲ್‌ಬಾಗಿನಿಂದ ಅನಕೃರವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಕಪ್ಪು ಬಾವುಟ ಪ್ರದರ್ಶನ ನಡೆಯಿತು. ಆದರೂ ಸುಬ್ಬಲಕ್ಷ್ಮಿಯವರ ಸಂಗೀತ ಕಚೇರಿ ನಿಲ್ಲಲಿಲ್ಲ. ಅವರಿಗೆ ಅವಮಾನ ಮಾಡುವ ಉದ್ದೇಶವಿಲ್ಲದಿದ್ದರೂ, ಸಾಂಗವಾಗಿ ಮತ್ತು ಶಾಂತವಾಗಿ ಪ್ರತಿಭಟನೆ ನಡೆದರೂ ಕನ್ನಡ ವಿರೋಧಿ ಗುಂಪಿಗೆ ಬೇಡವಾಗಿದ್ದ ಈ ಚಳುವಳಿಯಿಂದಾಗಿ “ಮಹಾನ್‌ ಕಲಾವಿದೆ ಎಂ.ಎಸ್‌.ಎಸ್‌.ಗೆ ಅವಹೇಳನ, ಕಲ್ಲೇಟು’ ಎಂದೆಲ್ಲಾ ಪತ್ರಿಕೆಗಳಲ್ಲಿ ಸುದ್ದಿ ಬಂತು. ಈ ಬಗ್ಗೆ ಅನಕೃ ಪತ್ರಿಕಾ ಪ್ರಕಟಣೆಯನ್ನು ಕೊಡಬೇಕು ಅನ್ನುವಷ್ಟರಲ್ಲಿ ಮದ್ರಾಸಿನಿಂದ ಎಂ.ಎಸ್‌. ಸುಬ್ಬಲಕ್ಷ್ಮಿಯವರೇ ಹೇಳಿಕೆ ನೀಡಿ “ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದೆಲ್ಲಾ ಶುದ್ಧ ಸುಳ್ಳು. ಅನಕೃರವರು ನನಗೆ ಪರಿಚಿತರೂ ಕೂಡ. ಅವರು ಕಲಾವಿದರನ್ನು ಕೀಳಾಗಿ ನೋಡುವ ವ್ಯಕ್ತಿಯಲ್ಲ’ ಎಂದು ವಿವರಣೆ ನೀಡಿದರು.

ಈ ಚಳುವಳಿಯ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ಒಂದೊಂದು ಬಡಾವಣೆಯಲ್ಲೂ ಒಂದೊಂದು ಕನ್ನಡ ಸಂಘಗಳು ತಲೆ ಎತ್ತಿದವು. ಹಾಗೆ ಆರಂಭಗೊಂಡ ಕನ್ನಡ ಸಂಘಗಳಲ್ಲಿ ರಾಜಾಜಿನಗರದ ಕನ್ನಡ ಸಹೃದಯ ಸಂಘವೂ ಒಂದು.

ಅನಕೃ ಅವರ ತಪಸ್ಸಿನ ಫ‌ಲವಾಗಿ 1969ರ ಡಿಸೆಂಬರ್‌ನಲ್ಲಿ “”ಕರ್ನಾಟಕ ಗಾನ ಕಲಾ ಪರಿಷತ್ತು’ ಅಸ್ತಿತ್ವಕ್ಕೆ ಬಂದಿತು.

ಕರ್ನಾಟಕ ಗಾನ ಕಲಾ ಪರಿಷತ್ತಿನ ಮೊದಲ ವಿದ್ವತ್‌ ಸಮ್ಮೇಳನದ ಎಲ್ಲಾ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದ ಅನಕೃ, ಇಡೀ ವಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ “”ನನಗೆಷ್ಟು ಸಂತೋಷವಾಗಿದೆಯೆಂದರೆ ನಾನು ನೋಡಬೇಕೆಂದಿದ್ದ ವೈಭವದ ಸಿರಿಯನ್ನು ಬಯಸಿದ್ದಕ್ಕಿಂತ ಹೆಚ್ಚಾಗಿ ನೋಡಿದ್ದೇನೆ. ದೇವರಿಗೆ ಕೃತಜ್ಞ. ನಾನು ನಾಳೆಯೇ ಸಾಯುವುದಾದರೂ ಸಂತೋಷದಿಂದ ಸಾಯುತ್ತೇನೆ” ಎಂದಿದ್ದರು.
ಸಂಗೀತ ಕೇಳಲು ಸೀಟು ಹಿಡಿಯುತ್ತಿದ್ದ ಕಾಲವದು!
ನಾನು ಹತ್ತು ವರ್ಷದವನಿದ್ದಾಗಿನಿಂದಲೇ ಶ್ರೀ ರಾಮ ಸೇವಾ ಮಂಡಳಿಯವರು ಆಯೋಜಿಸುವ ರಾಮನವಮಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ರಾತ್ರಿ ಎಷ್ಟು ಹೊತ್ತಾದರೂ ಸಂಗೀತ ಕೇಳಿ ಕತ್ತಲಲ್ಲಿಯೇ ನಾನೂ, ಅಪ್ಪನೂ 3 ಕಿ.ಮೀ ನಡೆದೇ ತ್ಯಾಗರಾಜನಗರದಲ್ಲಿದ್ದ ಮನೆಗೆ ತಲುಪಿದ್ದೂ ಇದೆ. 
ಒಂದು ಸಲ ಏನಾಯ್ತು ಅಂದರೆ- ಮಧುರೈನಿಂದ ಕರೆಸಿದ್ದ ಮಣಿ ಅಯ್ಯರ್‌ ಅವರ ಗಾಯನ, ಎಂ. ಎಸ್‌ ಗೋಪಾಲಕೃಷ್ಣನ್‌ ಅವರ ವಯಲಿನ್‌ ವಾದನ ಏರ್ಪಾಡಾಗಿತ್ತು. ಶೋತೃಗಳು ಉತ್ಸುಕತೆಯಿಂದಲೇ ಸಂಗೀತ ಕೇಳಲು ಕುಳಿತಿದ್ದರು. ಕಛೇರಿ ಪ್ರಾರಂಭವಾಯಿತು. ಜನರಲ್ಲಿ ಸಣ್ಣಗೆ ಗೊಂದಲ ಶುರುವಾಯಿತು. ವೇದಿಕೆ ಮೇಲೆ ಗಾಯಕ, ಮತ್ತು ಮೃದಂಗ ಬಾರಿಸುವವರ ಬಳಿ ಮಾತ್ರವೆ ಮೈಕ್‌ ಅನ್ನು ಅಳವಡಿಸಿದ್ದರು. ಇದರಿಂದಾಗಿ ಗೋಪಾಲಕೃಷ್ಣನ್‌ ಅವರ ವಯಲಿನ್‌ ವಾದನ ಹಿಂದಿದ್ದ ಕೇಳುಗರನ್ನು ಮುಟ್ಟುತ್ತಿರಲಿಲ್ಲ. ಅದಕ್ಕೇ ಜನರು ಸಣ್ಣಕೆ ಜಗಳ ಶುರುಮಾಡಿದ್ದರು. ಮಣಿ ಅಯ್ಯರ್‌ ಅವರು ಕಛೇರಿ ಪ್ರಾರಂಭವಾಗಿದೆಯಾದ್ದರಿಂದ ಮಧ್ಯದಲ್ಲೇ ನಿಲ್ಲಿಸಲು ಆಗುವುದಿಲ್ಲ ಎಂದುಬಿಟ್ಟರು. ಆದರೆ ಸಭಿಕರು ಬಿಡಬೇಕಲ್ಲ. ವಯಲಿನ್‌ಗೆ ಮೈಕ್‌ ಕೊಡಲೇ ಬೇಕೆಂದು ಹಟ ಹಿಡಿದರು. 
ಮತ್ತೆ ಮೈಕ್‌ ಕೊಟ್ಟ ಮೇಲೆ, ಕಛೇರಿ ಪ್ರಾರಂಭವಾದಾಗ ಮನಸ್ಥಿತಿ ಕೆಟ್ಟು ಮಣಿ ಅಯ್ಯರ್‌ ಅವರಿಗೆ ಹಾಡಲು ತುಸು ಕಷ್ಟವಾಯಿತು. ಸ್ವಲ್ಪಹೊತ್ತು ಅಷ್ಟೆ. ಸಂಗೀತವನ್ನು ಆವಾಹಿಸಿಕೊಂಡ ಮೇಲೆ ಎಲ್ಲಿಯ ಮುನಿಸು!? ತ್ಯಾಗರಾಜರ ಕೀರ್ತನೆಯನ್ನು ಅವರು ಹಾಡುತ್ತಿದ್ದರು. ಅವರು ಅದರೊಳಗೆ ಮುಳುಗುತ್ತಿದ್ದಂತೆಯೇ ಅದ್ಭುತ ಸಂಗೀತ ಲೋಕವೆ ಅಲ್ಲಿ ಸೃಷ್ಟಿಯಾಯಿತು. 3 ಗಂಟೆಗಳ ಕಾಲ ಗಾನಸುಧೆ ಹರಿಯಿತು. ಶ್ರೋತೃಗಳೂ ಮೈಮರೆತರು. ಅಷ್ಟು ಚೆನ್ನಾದ ಕಚೇರಿ ನಾನು ಮತ್ತೆ ನೋಡಲಿಲ್ಲ, ಕೇಳಲಿಲ್ಲ.
ಆಗಿನ ಕಾಲದ ಕೋಟೆ ಮೈದಾನದ ರಾಮೋತ್ಸವದ ಮತ್ತೂಂದು ನೆನಪೆಂದರೆ, ಸಂಗೀತ ಕಾರ್ಯಕ್ರಮ ಶುರುವಾಗುವುದಕ್ಕೆ ಎಷ್ಟೋ ಹೊತ್ತು ಮುಂಚೆ ಜನರು ಮುಗಿಬಿದ್ದು ಸೀಟು ಹಿಡಿಯುತ್ತಿದ್ದುದು. ತಮ್ಮ ಟವೆಲ್ಲನ್ನೋ, ಛತ್ರಿಯನ್ನೋ ಕುರ್ಚಿ ಮೇಲೆ ಇರಿಸಿ ಸೀಟು ಸಿಗದಿದ್ದವರೊಡನೆ ಜಗಳಕ್ಕಿಳಿಯುತ್ತಿದ್ದ ಕಾಲ ಅದು!
– ಗಮಕಿ ಕೃಷ್ಣಮೂರ್ತಿ

ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು…
ಪ್ರತಿಷ್ಠಿತ ವೇದಿಕೆ, ಕೋಟೆ ಮೈದಾನದ ರಾಮನವಮಿ ಉತ್ಸವದ್ದು. ಅಲ್ಲಿ ಕಛೇರಿ ನೀಡಿರುವವರೆಲ್ಲರೂ ಸಂಗೀತ ಕ್ಷೇತ್ರದ ದಿಗ್ಗಜರು, ಮಹನೀಯರು. ಎಂ.ಎಸ್‌ ಸುಬ್ಬುಲಕ್ಷಿ$¾, ಜೇಸುದಾಸ್‌, ಶ್ರೀಕಂಠನ್‌ ಎಲ್ಲರೂ ಹುಲಿಗಳೇ. ಅಂಥ ವೇದಿಕೆಯಲ್ಲಿ ನಾನೂ ಕಾರ್ಯಕ್ರಮ ಕೊಡುವ ಸುಸಂದರ್ಭ ಒದಗಿದಾಗ ಭಯ ಆಗಿತ್ತು. ಆದರೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂತು. ಈಗ ಅಷ್ಟು ದೊಡ್ಡ ವೇದಿಕೆಯಲ್ಲಿ ನಾನೂ ಕಾರ್ಯಕ್ರಮ ನೀಡಿದ್ದೆ ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹಿಂದೆಲ್ಲಾ ಕೋಟೆ ಮೈದಾನದ ರಾಮನವಮಿ ಉತ್ಸವದಲ್ಲಿ ಹೆಚ್ಚಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳೇ ನಡೆಯುತ್ತಿದ್ದುದು. ಅಂಥ ಸಮಯದಲ್ಲಿ ದಿ. ಸಿ. ಅಶ್ವಥ್‌, ರತ್ನಮಾಲಾ ಪ್ರಕಾಶ್‌ ಮತ್ತು ನಾನು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟೆವು. ಜನರಿಂದ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲಿ ಬರುತ್ತಿದ್ದ ಶ್ರೋತೃಗಳು ಸಂಗೀತದಲ್ಲಿ ಉತ್ತಮ ಅಭಿರುಚಿಯುಳ್ಳವರಾಗಿರುತ್ತಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ಕೂತಿದ್ದು ಹೋಗುತ್ತಿದ್ದರು.
– ಮಾಲತಿ ಶರ್ಮಾ

ಮಂಡಳಿಯ ವಿರುದ್ಧ ಕೂಗು ಹಾಕಿದ್ದ ಅನಕೃ
ಕನ್ನಡ ಕಾದಂಬರಿಕಾರ ಅನಕೃ ಅವರ ಸಹೋದರ ರಾಮರಾವ್‌ ಶ್ರೀರಾಮ ಸೇವಾ ಮಂಡಳಿಯ ಕಾರ್ಯದರ್ಶಿಯಾಗಿದ್ದ ಸಂದರ್ಭ ನಡೆದ ಘಟನೆ. ಕೋಟೆ ಮೈದಾನದ ರಾಮೋತ್ಸವ ಸಂಗೀತ ಹಬ್ಬ ದೇಶಾದ್ಯಂತ ಅದಾಗಲೇ ಹೆಸರುವಾಸಿಯಾಗಿತ್ತು. ಶ್ರೋತೃಗಳು ನಾಡಿನ ಎಲ್ಲೆಡೆಯಿಂದದಲೂ ಸಂಗೀತ ಕೇಳಲು ಧಾವಿಸುತ್ತಿದ್ದರು. ಎಷ್ಟೇ ಜನಪ್ರಿಯತೆ ಪಡೆದಿದ್ದರೂ ಉತ್ಸವದ ಬಗ್ಗೆ ಒಂದು ಅಸಮಾಧಾನ ಕನ್ನಡಿಗರಲ್ಲಿ ಇದ್ದೇ ಇತ್ತು. ಅದೇನೆಂದರೆ ಅಲ್ಲಿ ಕಛೇರಿ ನೀಡಲು ಕರೆಸುತ್ತಿದ್ದ ಬಹುತೇಕ ಸಂಗೀತಗಾರರು ಮದ್ರಾಸಿನವರೇ ಆಗಿರುತ್ತಿದ್ದರು. ಇದರ ಬಗ್ಗೆ ಹಲವರಿಗೆ ಆಕ್ಷೇಪವಿತ್ತು. ಅನಕೃ ಅವರೂ ಅವರಲ್ಲೊಬ್ಬರಾಗಿದ್ದರು. ಸ್ಥಳೀಯ ಕನ್ನಡ ಪ್ರತಿಭೆಗಳಿಗೂ ಮನ್ನಣೆ ಕೊಡಬೇಕು ಅಂತ ಸ್ವಂತ ಅಣ್ಣನ ವಿರುದ್ಧವೇ ಕೂಗು ಹಾಕಿದರು. ಕನ್ನಡಿಗರೂ ಈ ಹೋರಾಟವನ್ನು ಬೆಂಬಲಿಸಿದರು. ಮಂಡಳಿಯವರು, ಕನ್ನಡ ಸಂಗೀತಗಾರರಿಗೂ ಅವಕಾಶ ನೀಡುತ್ತೇವೆ ಎಂದ ಮೇಲೆಯೇ ಹೋರಾಟ ನಿಂತಿದ್ದು.
– ಸತ್ಯಮೂರ್ತಿ ಜಿ. ಎಸ್‌, ಹಿರಿಯ ನಾಗರಿಕ, ರಾಮೋತ್ಸವ ಶೋತೃ

ಮೊದಲ ರಾಮೋತ್ಸವಕ್ಕೆ ತಗುಲಿದ್ದು 4. ರು., ಈಗ?
ನಮ್ಮ ತಂದೆಯವರು(ಎಸ್‌.ವಿ ನಾರಾಯಣಸ್ವಾಮಿ ರಾವ್‌) ಹುಡುಗರಾದಾಗಿನಿಂದಲೂ ಕಾರ್ಯಕ್ರಮ ಸಂಘಟನೆಯಲ್ಲಿ ಮುಂದಿದ್ದರು. ಅದೇ ಹುರುಪಿನಲ್ಲಿ 1939ರಲ್ಲಿ ರಾಮನವಮಿ ಉತ್ಸವವನ್ನು ಶುರುಮಾಡಿ 2000ನೇ ಇಸವಿ ತನಕ ಪ್ರೀತಿ ಹಾಗೂ ಭಕ್ತಿಯಿಂದ ನಡೆಸಿಕೊಂಡು ಬಂದರು. ಮೂರು ರಾಷ್ಟ್ರಪತಿಗಳು ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದಾರೆ. ಚಕ್ರವರ್ತಿ ಸಿ. ರಾಜಗೋಪಾಲಾಚಾರಿಯವರು ಕೋಟೆ ಮೈದಾನದ ರಾಮೋತ್ಸವವನ್ನು ಟೆಂಪಲ್‌ ಆಫ್ ಮ್ಯೂಸಿಕ್‌ ಎಂದು ಕರೆದಿದ್ದರು. ಎಂ.ಎಸ್‌ ಸುಬ್ಬುಲಕ್ಷಿ$¾ಯವರು ಇದೇ ಉತ್ಸವದಲ್ಲಿ 32 ಕಛೇರಿಗಳನ್ನು ನೀಡಿರುವುದು ದಾಖಲೆ. ಅದು ಅವರಿಗೆ ಈ ಉತ್ಸವದ ಮೇಲಿದ್ದ ಪ್ರೀತಿ, ಗೌರವ ಮತ್ತು ನಂಬಿಕೆ. 

ರಾಮೋತ್ಸವ ಮಾಡುವಾಗ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತೆಂಗಿನ ಗರಿ ಚಪ್ಪರದಡಿ ನಡೆಯುತ್ತಿದ್ದ ರಾಮೋತ್ಸವ ಈಗ ವಾಟರ್‌ಪ್ರೂಫ್ ಪೆಂಡಾಲ್‌ ಆಗಿ ಬದಲಾಗಿದೆ. ಸಂಗೀತದ ಗುಣಮಟ್ಟ ಹೆಚ್ಚಿಸಲು ಆರ್ಟಿಫಿಷಿಯಲ್‌ ಫ್ಲೋರಿಂಗ್‌ ಮಾಡಿಸುತ್ತೇವೆ. ಒಂದು ದೊಡ್ಡ ಮೈದಾನವನ್ನು ಸಭಾಂಗಣವಾಗಿ ಬದಲಾಯಿಸುವುದು ಕಡಿಮೆ ಕಷ್ಟದ ಕೆಲಸವೇನಲ್ಲ. ಕಾರ್ಯಕ್ರಮದಲ್ಲಿ ಯಾರು ಕಛೇರಿ ನೀಡಬೇಕೆಂಬುದನ್ನು ಸಮಿತಿಯಲ್ಲಿ ನಿರ್ಧರಿಸಲಾಗುತ್ತದೆ. ಆಮೇಲೆಯೇ ಸಂಗೀತಗಾರರನ್ನು ಸಂಪರ್ಕಿಸಿ, ಉತ್ಸವಕ್ಕೆ ಆಹ್ವಾನಿಸುವುದು. ಈಗ ಸಂಗೀತಗಾರರ ಸಂಭಾವನೆಯೂ ಹೆಚ್ಚಿದೆ.ಮೊತ್ತಮೊದಲ ರಾಮೋತ್ಸವಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತಾ 4 ರು. ಈಗಾದರೆ ಸುಮಾರು 80 ಲಕ್ಷ ರು.

1988ರಲ್ಲಿ ಉತ್ಸವ ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ವೆಂಕಟರಾಮನ್‌ ಅವರನ್ನು ರಾಮೋತ್ಸವದ ಉದ್ಘಾಟನೆಗೆ ಆಹ್ವಾನಿಸಿದ್ದೆವು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನೂ ಅವರು ಬಿಡುಗಡೆಗೊಳಿಸಲಿದ್ದರು. ಅವರು ವೇದಿಕೆ ಮೇಲೆ ಬರುವುದು ಕೊಂಚ ತಡವಾಯಿತು. ಅಷ್ಟು ಹೊತ್ತಿಗೆ ಅದೆಲ್ಲಿಂದಲೋ ಕೋತಿಯೊಂದು ವೇದಿಕೆ ಮೇಲೆ ಬಂದು ಸ್ಮರಣ ಸಂಚಿಕೆಯ ಕಟ್ಟು ಬಿಚ್ಚಿ ಕಾರ್ಯಕ್ರಮ ಉದ್ಘಾಟಿಸಿತು.
ಇಂದಿನ ಬದಲಾದ ಕಾಲಕ್ಕೆ ನಮ್ಮ ರಾಮನವಮಿ ಉತ್ಸವವೂ ಬದಲಾಗುತ್ತಾ ಬಂದಿದೆ. ಹೆಸರಾಂತ ಸಂಗೀತಗಾರರ ಜೊತೆಗೇ ಯುವ ಪ್ರತಿಭೆಗಳಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಯೂತ್‌ ಮ್ಯೂಸಿಕ್‌ ಫೆಸ್ಟಿವಲ್‌ ಎಂಬು ಪ್ರತ್ಯೇಕ ವಿಭಾಗವನ್ನು ಮಾಡಿಕೊಂಡಿದ್ದೇವೆ. ಪ್ರತಿ ದಿನ ಸಂಜೆ 5.15 ರಿಂದ 6.15ರ ತನಕ ಆಯ್ದ ಯುವಸ್ಪರ್ಧಿಗಳು ಪ್ರದರ್ಶನ ನೀಡಬಹುದು. ಅದಕ್ಕಾಗಿ ಮೊದಲು ಅವರು ನಮ್ಮಲ್ಲಿಗೆ ಬಂದು ಅರ್ಜಿ ಸಲ್ಲಿಸಿರಬೇಕು. ರಾಮೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಪ್ರತಿಭೆಗಳಿಗೆ ಬಹುಮಾನವೂ ಇದೆ.
– ವರದರಾಜ್‌, ಸಂಘಟಕರು

– ಅಂಜನಾದ್ರಿ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.