ಓದು ಮಗುವೇ ಕತೆ ಪುಸ್ತಕವ…
Team Udayavani, Mar 10, 2018, 3:55 PM IST
ಭಾರತದ ಪ್ರತಿ ಮಗುವಿನ ಕೈಗೂ ಕತೆಪುಸ್ತಕ ಕೊಡುವ ಚಳವಳಿ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದು ಸಾಧ್ಯವಾಗಿರುವುದು ಪ್ರಥಮ್ ಬುಕ್ಸ್ ಎಂಬ ಲಾಭರಹಿತ ಸಂಸ್ಥೆಯೊಂದರಿಂದ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಈ ಚಳವಳಿ ಏನಿರಬಹುದು?
ಮಕ್ಕಳಿಗೆ ಅನ್ನದ ತುತ್ತು ತಿನ್ನದೇ ಹೋದಾಗ ಅಮ್ಮ ಏನು ಮಾಡುತ್ತಾಳೆ? ಮಗುವನ್ನೆತ್ತಿಕೊಂಡು ಅಂಗಳಕ್ಕೆ ಬಂದು ಚಂದ್ರನನ್ನು ತೋರಿಸುತ್ತಾ, ಚಂದಮಾಮನ ಕತೆ ಹೇಳುತ್ತಾಳೆ. ಬೆರಗಿನಿಂದ ಕತೆ ಕೇಳುವ ಪುಟ್ಟ ಮಗುವಿಗೆ ಕತೆಯ ನಡುವೆ ಅಮ್ಮ ಬಾಯಿಗೆ ತುತ್ತಿಟ್ಟಿದ್ದು ಗೊತ್ತೇ ಆಗುವುದಿಲ್ಲ. ಕತೆಯ ಹಿಂದಿರುವ ಜಾದೂ ಅದು. ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಲು, ಅವರನ್ನು ವಿದ್ಯಾವಂತರನ್ನಾಗಿಸಲು, ಜ್ಞಾನಿಗಳನ್ನಾಗಿಸಲು ತಯಾರು ಮಾಡುವುದೇ ಕತೆಗಳು. ಕತೆಗಳನ್ನು ಭಾರತದ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಪ್ರಾರಂಭವಾದ ನಾನ್‌ಪ್ರಾಫಿಟ್ (ಲಾಭರಹಿತ) ಪ್ರಕಾಶನ ಸಂಸ್ಥೆ “ಪ್ರಥಮ್ ಬುಕ್ಸ್’. ರೋಹಿಣಿ ನಿಲೇಕಣಿ, ಸುಝಾನ್ ಸಿಂಗ್ ಮತ್ತಿತರರು ಇದರ ರೂವಾರಿಗಳು. ಸದ್ಯ ಸುಝಾನ್ ಅವರೊಬ್ಬರೇ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಸಂಸ್ಥೆ ಶುರುವಾಗಿದ್ದು 2004ರಲ್ಲಿ. ಅಂದಿನಿಂದ ಇಂದಿನವರೆಗೆ ಸುಮಾರು 107 ಭಾಷೆಗಳಲ್ಲಿ 2500ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದೆ. ಉತ್ತಮ ಗುಣಮಟ್ಟದ ಪುಸ್ತಕ ಮತ್ತು ಬರವಣಿಗೆಯನ್ನು ಮಕ್ಕಳಿಗೆ ತಲುಪಿಸುವ ಉದ್ದೇಶವಿದ್ದುದರಿಂದ ಪುಸ್ತಕಕ್ಕೆ ಕಡಿಮೆ ಬೆಲೆಯನ್ನೇ ನಿಗದಿಪಡಿಸಲಾಗಿದೆ. ಈಗ ಆ ಕತೆ ಪುಸ್ತಕಗಳ ಬೆಲೆ ಸರಾಸರಿ 40 ರೂ.! ಭಾರತ ವೈವಿಧ್ಯಮಯ ದೇಶ ಎನ್ನುವುದನ್ನು ಚಿಕ್ಕಂದಿನಿಂದಲೇ ಪಠ್ಯಪುಸ್ತಕಗಳಲ್ಲಿ ಓದಿಕೊಂಡು ಬಂದವರು ನಾವು. ಅದರಂತೆ ಅಸಂಖ್ಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಇವೆಲ್ಲವನ್ನೂ ಒಗ್ಗೂಡಿಸುವ ಪ್ರಯತ್ನವೂ ಪ್ರಥಮ್ ಬುಕ್ಸ್‌ನಿಂದ ಆಗುತ್ತಿದೆ. ಹೇಗೆಂದರೆ ಎಲ್ಲಾ ಸಂಸ್ಕೃತಿಗಳಲ್ಲೂ ಅದರದ್ದೇ ಆದ ನಾಣ್ಣುಡಿ, ಕತೆಗಳಿರುತ್ತವೆ. ಆಯಾ ಕತೆಗಳನ್ನು ಅವರ ಭಾಷೆಯಲ್ಲಿ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಪ್ರಕಟವಾಗುವುದರಿಂದ ಇತರೆ ಮಕ್ಕಳೂ ತಿಳಿದುಕೊಂಡಂತಾಗುತ್ತದೆ.
ಕತೆಗಳ ಹಿಂದಿರುವವರು…
ಪ್ರಥಮ್ ಬುಕ್ಸ್ ಹೊರತಂದಿರುವ ಪುಸ್ತಕಗಳನ್ನು ನೋಡುವ ಪುಸ್ತಕ ಎಂದು ಬೇಕಾದರೂ ಕರೆಯಬಹುದು. ಏಕೆಂದರೆ, ಅದರಲ್ಲಿ ಬರೀ ಅಕ್ಷರಗಳು ಮಾತ್ರವೇ ಇರುವುದಿಲ್ಲ, ಬಣ್ಣ ಬಣ್ಣದ ಆಕರ್ಷಕ ಚಿತ್ರಗಳೂ ಇರುತ್ತವೆ. ಹೀಗಾಗಿ ಚಿತ್ರ ನೋಡುವುದು ಕೂಡಾ ಕತೆ
ಓದಿದ ಅನುಭವವನ್ನೇ ಕೊಡುತ್ತದೆ. ಪ್ರಥಮ್ ಒಂದು ಲಾಭರಹಿತ ಸಂಸ್ಥೆಯಾಗಿರುವುದರಿಂದ ಬಹಳಷ್ಟು ಪ್ರತಿಭಾನ್ವಿತ ಬರಹಗಾರರು, ಚಿತ್ರಕಾರರು ಅವರ ಜೊತೆ ಕೈಜೋಡಿಸಿದ್ದಾರೆ. ಅವರೇ ಕತೆಗಳ ಅನುವಾದ ಮತ್ತು ರಚನೆಯಲ್ಲಿ ತೊಡಗಿದ್ದಾರೆ.
ಸ್ಟೋರಿ ವೀವರ್
ಪುಸ್ತಕ ಪ್ರಕಾಶನದಿಂದ ಹೆಸರು ಮಾಡಿದರೂ, ಇನ್ನೂ ಹೆಚ್ಚು ಮಕ್ಕಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಇದ್ದೇ ಇತ್ತು. ಈ ಸಮಸ್ಯೆಯನ್ನು ದಾಟಿಕೊಳ್ಳಲು ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಹೊಳೆದ ಮಾರ್ಗವೇ “ಸ್ಟೋರಿ ವೀವರ್’.ಈಗಿನ ತಾಂತ್ರಿಕ ಯುಗದಲ್ಲಿ ಅತಿ ಹೆಚ್ಚು ಓದುಗರನ್ನು ಜನರನ್ನು ಕ್ಷಣಮಾತ್ರದಲ್ಲಿ, ಹೆಚ್ಚಿನ ಖರ್ಚಿಲ್ಲದೆ ತಲುಪಲು ಸಾಧ್ಯವಾಗಿರುವುದು ಇಂಟರ್‌ನೆಟ್‌ನಿಂದ. ಹೀಗಾಗಿ ಮಕ್ಕಳ ಪುಸ್ತಕ ಪ್ರಕಾಶನದ ಜೊತೆ ಜೊತೆಗೆ ಇಂಟರ್‌ನೆಟ್‌ನಲ್ಲೂ ಪ್ರಥಮ್ ಬುಕ್ಸ್‌ನ ಕತೆಗಳನ್ನು ಓದಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವುದು ಸ್ಟೋರಿ ವೀವರ್ ಸ್ಥಾಪನೆಯ ಹಿಂದಿದ್ದ ಉದ್ದೇಶ. ಆಮೇಲೆ ನಡೆದಿದ್ದೆಲ್ಲಾ ಮ್ಯಾಜಿಕ್. ಪುಸ್ತಕ ಪ್ರಕಾಶನದಲ್ಲಿ 13 ವರ್ಷಗಳ ಕಾಲ ಮಾಡಿದ ಸಾಧನೆಯ ಎರಡು ಪಟ್ಟು ಅಧಿಕ ಸಾಧನೆ ಬರೇ ಎರಡೇ ವರ್ಷಗಳಲ್ಲಿ ಆಯಿತು. ಈಗ ಇಲ್ಲಿನ ಕತೆಗಳನ್ನು ಆನ್‌ಲೈನ್‌ನಲ್ಲೇ ಓದಬಹುದು. storyweaver.org.in/stories
ಭಾಷೆಗಳ ಗಡಿ ಮೀರಿದೆ
ಅಲ್ಲದೆ 24 ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಕತೆಗಳು, 104 ಭಾಷೆಗಳಿಗೆ ಏರಿವೆ. ಪ್ರಮುಖ ಭಾಷೆಗಳು ಮಾತ್ರವಲ್ಲದೆ,ಬೆಳಕಿಗೆ ಬಾರದ ಸ್ಥಳೀಯ ಭಾಷೆಗಳಿಗೂ ಪ್ರಥಮ್ ಬುಕ್ಸ್ ಸಂಸ್ಥೆ ಪ್ರಾಮುಖ್ಯತೆ ನೀಡುತ್ತಿರುವುದು ಗಮನಾರ್ಹ. ಈಗ ಕೊಂಕಣಿ, ಸಂಸ್ಕೃತ ಮತ್ತು ಭಾರತದ ಬುಡಕಟ್ಟು ಭಾಷೆಗಳೇ ಅಲ್ಲದೆ ಆಫ್ರಿಕನ್ ಭಾಷೆಯಲ್ಲೂ ಕತೆಗಳು ಪ್ರಕಟಗೊಳ್ಳುತ್ತಿವೆ. ಜಗತ್ತಿನ ಅತಿ ದೊಡ್ಡ ಗ್ರಂಥಾಲಯ ಎಂದು ಖ್ಯಾತಿ ಪಡೆದ ಲೈಬ್ರರಿ ಆಫ್ ಕಾಂಗ್ರೆಸ್ ನೀಡುವ ಲಿಟರೆಸಿ ಅವಾರ್ಡ್‌ಗೆ ಪ್ರಥಮ್ ಬುಕ್ಸ್ ಪಾತ್ರವಾಗಿತ್ತು. ಆ ಮೂಲಕ ಜಗತ್ತಿನಾದ್ಯಂತ ಪ್ರಥಮ್ ಬುಕ್ಸ್ ಗುರುತಿಸಲ್ಪಟ್ಟಿತ್ತು. ಅಲ್ಲದೆ ಇಂಟರ್‌ನೆಟ್‌ನ ದಿಗ್ಗಜ ಸಂಸ್ಥೆ ಗೂಗಲ್ ಕಳೆದ ವರ್ಷ ಭಾರತದ ನಾಲ್ಕು ಸರಕಾರೇತರ ಸಂಸ್ಥೆಗಳಿಗೆ ಒಟ್ಟು 54 ಕೋಟಿ ರೂ.ಗಳಷ್ಟು ಧನಸಹಾಯವನ್ನು ಬಿಡುಗಡೆಗೊಳಿಸಿತ್ತು. ಆ ನಾಲ್ಕು ಸಂಸ್ಥೆಗಳಲ್ಲಿ “ಪ್ರಥಮ್- ಸ್ಟೋರಿ ವೀವರ್’ ಕೂಡಾ ಒಂದು!
ಕುವೆಂಪು, ಕಾರಂತರ ಮಕ್ಕಳ ಕೃಷಿ…
ಕನ್ನಡದಲ್ಲಿ ಈವರೆಗೆ ಸುಮಾರು 280 ಪುಸ್ತಕಗಳು ಬಂದಿವೆ. ಪ್ರಥಮ್ ಬುಕ್ಸ್ ಕನ್ನಡದ ಹೆಸರಾಂತ ಕವಿ ಮತ್ತು ಸಾಹಿತಿಗಳ 6 ಸೆಟ್ ಚಿತ್ರಪುಸ್ತಕಗಳನ್ನು ಬಿಡುಗಡೆಗೊಳಿಸಲಿದೆ. ಕುವೆಂಪು, ಶಿವರಾಮ ಕಾರಂತ, ಪಂಜೆ ಮಂಗೇಶರಾಯರು, ಜಿ.ಪಿ. ರಾಜರತ್ನಂ, ಬಿ.ಕೆ. ತಿರುಮಲಮ್ಮ ಮತ್ತು ಸಿದ್ದಯ್ಯ ಪುರಾಣಿಕ ಮುಂತಾದ ಮೇರು ಸಾಹಿತಿಗಳ ಮಕ್ಕಳ ಸಾಹಿತ್ಯಗಳನ್ನು ಪರಿಚಯಿಸಿದೆ.
ಮಾತೃಭಾಷೆಯ ಕತೆಗಳು ಮಗು ಮತ್ತು ಸಮಾಜದ ನಡುವೆ ಸಂಬಂಧವನ್ನು ಬೆಸೆಯುತ್ತವೆ. ಕತೆಗಳ ಮೂಲಕ ಮಕ್ಕಳು ತಮ್ಮ ಸುತ್ತಮುತ್ತಲ ಪರಿಸರವನ್ನು ಅರ್ಥಮಾಡಿಕೊಳ್ಳುತ್ತಾರೆ. ಹೀಗಾಗಿ, ಕತೆಗಳನ್ನು ಓದುವುದು ಮಕ್ಕಳ ಬೌದ್ಧಿಕ ವಿಕಾಸದ ದೃಷ್ಟಿಯಿಂದ ತುಂಬಾ ಒಳ್ಳೆಯದು.
● ಸುಝಾನ್ ಸಿಂಗ್, ಸಹ ಸ್ಥಾಪಕಿ
ಕತೆಪುಸ್ತಕಗಳನ್ನು ಇಲ್ಲಿಂದ ಕೊಳ್ಳಬಹುದು store.prathambooks.org/easybrowse
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.