ಕೌಶಲಗಳಲ್ಲೇ ಯಾತ್ರೆಯ ದರ್ಶನ
Team Udayavani, Oct 5, 2019, 3:07 AM IST
ಸಾಹಿತ್ಯದ ಆಯಾ ಪ್ರಾಕಾರಗಳಿಗೆ ಅದರದ್ದೇ ಆದ ಅನನ್ಯತೆ ಇದೆ. ಅದನ್ನು ಅದರದೇ ಕ್ರಮದಲ್ಲಿ ಪರಿಕಿಸಿದರೆ ಅದರ ವಿನ್ಯಾಸದಲ್ಲೇ ರೂಪು ತಳೆಯುತ್ತದೆ ಮತ್ತು ರಸಾಸ್ವಾದವನ್ನೂ ನೀಡುತ್ತದೆ. ಉದಾಹರಣೆಗೆ, ಕಾವ್ಯ ಇದ್ದದ್ದು ವಾಚನಕ್ಕೆ. “ಕಾವ್ಯವಾಚನ’ ಎಂದೇ ಕರೆದು ರೂಢಿ. ಅದನ್ನು ಗಮಕದಲ್ಲಿ ಹಾಡುತ್ತೀರೋ, ಲಯಬದ್ಧವಾಗಿ ಓದುತ್ತೀರೋ ಅದು ನಿಮಗೆ ಬಿಟ್ಟಿದ್ದು. ನಾಟಕ ನೋಟಕ್ಕೆ ಸಂಬಂಧಿಸಿದ್ದು. ಕಾಳಿದಾಸ ಅದನ್ನು “ದೃಶ್ಯಯಜ್ಞ’ ಎಂದಿದ್ದಾನೆ.
ನಾಟಕ ಇರುವುದು ವಾಚನಕ್ಕೆ ಅಲ್ಲದಿದ್ದರೂ ರಂಗಕ್ಕೆ ದೃಶ್ಯಗಳನ್ನು ಅಳವಡಿಸುವ ಪೂರ್ವದಲ್ಲಿ ವಾಚನ ಮಾಡುವುದು ಬೇರೆ ಸಂಗತಿ. ಮೇಘದೂತವನ್ನು ಕಾವ್ಯವಾಗಿಸಿದ ಕಾಳಿದಾಸನೇ “ಶಾಕುಂತಲ’ ವನ್ನು ನಾಟಕವಾಗಿ ಕಟ್ಟಿದ. ಇದರ ಅರ್ಥ ಯಾವುದು? ಯಾವ ಫಾರ್ಮ್ ತೆಗೆದುಕೊಳ್ಳುತ್ತವೆ? - ಎಂದು ಕವಿಗೆ ಗೊತ್ತು. ಗೊತ್ತಿರಬೇಕು, ಕೂಡ. ಹಾಗೆ ತಿಳಿದಿದ್ದರೆ ಮಾತ್ರವೇ ಆಯಾ ಕೃತಿಗೆ ಅನನ್ಯತೆ ದೊರಕಿಸಿಕೊಡಲು ಸಾಧ್ಯವಾಗುತ್ತದೆ.
ಆದರೆ, ಇದು ಬೇರೆ ಕಾಲ; ಪರ್ವ ಕಾಲ. ಪ್ರಯೋಗಗಳ ಕಾಲ. ಕೃತಿ- ಕಾವ್ಯವೋ ಕಾದಂಬರಿಯೋ, ಕಥೆಯೋ ಅದನ್ನು ರಂಗಕ್ಕೆ ಅಳವಡಿಸುವ ಸಾಹಸಕ್ಕಿಳಿಯುವ ಕಾಲ. ಈ ಕಾರ್ಯದಲ್ಲಿ ಯಶಸ್ಸು ಗಳಿಸಿದವರಿದ್ದಾರೆ, ಸೋತ ಮತ್ತು ಸೋಲುತ್ತಿರುವವರೂ ಇದ್ದಾರೆ. ಈಚೆಗೆ ಅದಮ್ಯ ರಂಗಸಂಸ್ಕೃತಿ ಟ್ರಸ್ಟ್‌ನವರು ಕೆ.ಎಚ್. ಕಲಾಸೌಧದಲ್ಲಿ ಮಹಾಕವಿ ಕಾಳಿದಾಸನ “ಮೇಘದೂತ’ ಕಾವ್ಯವನ್ನು ರಂಗಕ್ಕೆ ಅಳವಡಿಸಿದ್ದರು.
ಇದರ ರಂಗರೂಪ ಪ್ರೊ. ನಾರಾಯಣ ಘಟ್ಟ ಅವರದು. ಕಾವ್ಯದ ವಾಚನಕ್ಕೆ ಕಿವಿಗೊಡುವಾಗ ಕೇಳುಗರಲ್ಲಿ ಚಿತ್ರಗಳು ಕಟ್ಟಿಕೊಳ್ಳುತ್ತವೆ. ಇಲ್ಲಿ ಕಲ್ಪಿಸಿಕೊಳ್ಳಲಿಕ್ಕೆ ಅಡೆತಡೆ ಇಲ್ಲ. ಕವಿಯೂ ಹಾಗೆಯೇ ಮೇಘವೊಂದನ್ನು ಪಾತ್ರವನ್ನಾಗಿ ಕಡೆಯುತ್ತಾನೆ. ಅದಕ್ಕೆ ಮಾತು ದಕ್ಕಿಸಿಕೊಡುತ್ತಾನೆ. ತನ್ನ ಪ್ರತಿಭೆ ಮೆರೆಯುತ್ತಾನೆ. ಪ್ರೊ. ನಾರಾಯಣ ಘಟ್ಟ ಮತ್ತು ನಿರ್ದೇಶಕ ಮಾಲತೇಶ ಬಡಿಗೇರ್ ಇಬ್ಬರ ಹೆಣಿಗೆ ಈ “ಮೇಘದೂತ ದರ್ಶನ’.
ರಂಗರೂಪ ಕಾರರು ಸಾಧ್ಯವಾದಷ್ಟೂ ಸಂಸ್ಕೃತದ ಬನಿಯನ್ನ ಕನ್ನಡಕ್ಕೆ ತರುವಲ್ಲಿ ಯಶಸ್ವಿ ಯಾಗಿದ್ದಾರೆ. ಅವುಗಳನ್ನು ದೃಶ್ಯವಾಗಿ ಕಟ್ಟುವಾಗ ಮಾಲತೇಶ ಬಡಿಗೇರ್, ಕಾಳಿದಾಸನ ಪಾತ್ರಗಳ ಜೊತೆಗೆ ಆತನ ದೃಶ್ಯ ಜಗತ್ತನ್ನು ರಂಗಪರಿಕರಗಳ ಕಲೆಗಾರಿಕೆಯಲ್ಲಿ ಕಟ್ಟಿದ್ದಾರೆ. ಇದೊಂದು ರೀತಿ ರಂಗರೂಪಕಾರರ ಮತ್ತು ನಿರ್ದೇಶಕರ ಜುಗಲ್‌ಬಂದಿ ಇದ್ದಂತೆ ಕಾಣುತ್ತದೆ. ಇದರ ಪರಿಕ್ರಮ ಕಿವಿ ಮತ್ತು ಕಣ್ಣುಗಳಿಗೆ ಹಿತವಾಗಿತ್ತು.
ಆದರೆ, ನಡುನಡುವೆ ಇಡೀ ಪ್ರಯೋಗವನ್ನು ಹಾಡು ಕುಣಿತಗಳಿಂದಲೇ ಕಟ್ಟುತ್ತಾ ಹೋದದ್ದು ಒಂದೇ ತೆರ ಎಂದು ಅನಿಸತೊಡಗಿತು. ಸ್ಥಾಯಿಭಾವಗಳು ಬೇರೆಬೇರೆಯಾದರೂ ಹಾಡುಗಳು ಮತ್ತು ಅದರ ಲಯ ಅವುಗಳನ್ನು ಪೂರಾ ಆವರಿಸಿ ಕೊಂಡಂತೆ ಅನಿಸಿತು. ಮಾತು ಮತ್ತು ಹಾಡಿನಲ್ಲಿರುವ ವರ್ಣನಾ ಭಾಗಗಳನ್ನು ಮತ್ತೆ ವಿಭಾಗಿಸಿಕೊಂಡು ಮೌನ, ಯಾತನೆ ಮತ್ತು ದುಃಖಕ್ಕೆ ಹಾಡಲ್ಲದ ಒಂದು ಭಾವ ದಕ್ಕಿಸಿಕೊಟ್ಟಿದ್ದರೆ, ನಾಟಕ ಮತ್ತಷ್ಟು ಗಾಢ ಅನಿಸುತ್ತಿತ್ತು. ಆದರೆ, ಒಂದು ಯಕ್ಷನ ವಿರಹ ಲೋಕವನ್ನು ಅಭಿನಯ ಮತ್ತು ತಮ್ಮ ಕಲೆಗಾರಿಕೆಯ ರಂಗಪರಿಕರಗಳ ಚಿತ್ರಗಳಲ್ಲಿ ಕಟ್ಟಿ ಕಾಣಿಸಿದ್ದು, ಬಹಳಕಾಲ ಮನಸ್ಸಿನಲ್ಲಿ ಉಳಿಯುತ್ತವೆ.
* ಎನ್.ಸಿ. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.