ದಂತಕಾರಣ್ಯ!
Team Udayavani, Jan 13, 2018, 3:28 PM IST
“ಬಾ ಪುಟ್ಟ ಈ ಚೇರ್ ಮೇಲೆ ಕೂತ್ಕೊ’, “ಏನೂ ಮಾಡಲ್ಲ ನಿಂಗೆ, ಬಾಯಿ ಆ ಮಾಡು’, “ಚೂರೇ ಚೂರೂ ನೋವಾಗಲ್ಲ’, “ಇಲ್ಲ, ಇವತ್ತು ಇಂಜೆಕ್ಷನ್ ಕೊಡೋದಿಲ್ಲ’, “ಚಾಕ್ಲೇಟ್ ಕೊಡ್ತೀನಿ ಅಳ್ಬೇಡ…’ ಮಕ್ಕಳ ಆಸ್ಪತ್ರೆಯಲ್ಲಿ ಇಂಥ ಮಾತುಗಳು ತೀರಾ ಸಾಮಾನ್ಯ.
ಇನ್ನು ಡೆಂಟಲ್ ಕ್ಲಿನಿಕ್‌ಗಳಲ್ಲಿ ಮಕ್ಕಳ ಬಾಯಿ ತೆಗೆಸೋದು, ಮುಚ್ಚಿಸೋದು ಎರಡೂ ಕಷ್ಟದ ಕೆಲಸವೇ. ಆದರೆ, ಈ ಕ್ಲಿನಿಕ್‌ನಲ್ಲಿ ಅಂಥ ತಲೆನೋವೇ ಇಲ್ಲ. ಮಕ್ಕಳು ಜಾಸ್ತಿ ಹಠ ಮಾಡದೆ ವೈದ್ಯರ ಮಾತು ಕೇಳುತ್ತಾರೆ. ಯಾಕಂದ್ರೆ, ಇದು ಆಸ್ಪತ್ರೆಯೇ, ಆದರೂ, ಆಸ್ಪತ್ರೆ ಥರ ಇಲ್ಲ. ಇದನ್ನು ನೀವು ಕಾಡಿನೊಳಗಿನ ಕ್ಲಿನಿಕ್ ಅನ್ನಬಹುದು. ಇಲ್ಲಾ, ಕ್ಲಿನಿಕ್‌ನೊಳಗೇ ಕಾಡು ಅನ್ನಲೂಬಹುದು…
“ಮರ, ಪಕ್ಷಿ, ಜಿಂಕೆ, ನೀರಿನ ಜುಳು ಜುಳು ಶಬ್ದ, ಹಕ್ಕಿಗಳ ಚಿಲಿಪಿಲಿ, ದೊಡ್ಡ ಗೋರಿಲ್ಲಾ, ಜಂಗಲ್‌ಬುಕ್‌ನ ಮೋಗ್ಲಿ… ಅಮ್ಮ ಇದೆಲ್ಲಿಗೆ ಕರೆದುಕೊಂಡು ಬಂದು ನನ್ನನ್ನ? ಆಸ್ಪತ್ರೆಗೆ ಹೋಗ್ತಿದೀವಿ ಅಂದಿದು. ಆದ್ರೆ, ಇದೊಳ್ಳೆ ಕಾಡಿದ್ದ ಹಾಗಿದೆ..’
ವಾತ್ಸಲ್ಯ ಡೆಂಟಲ್ ಕ್ಲಿನಿಕ್‌ಗೆ ಬರೋ ಮಕ್ಕಳಿಗೆ ಹೀಗೆ ಗೊಂದಲ ಆಗೋದು ಸಹಜ. ಯಾಕೆಂದರೆ, ಆಸ್ಪತ್ರೆ ಅಂದ್ರೆ ಸ್ಟ್ರೆಚರ್, ನರ್ಸ್, ಮಾತ್ರೆ ವಾಸನೆ, ಇಂಜೆಕ್ಷನ್… ಅನ್ನೋ ಕಲ್ಪನೆಯನ್ನು ಈ ಕ್ಲಿನಿಕ್ ಸುಳ್ಳು ಮಾಡಿದೆ. ಮಕ್ಕಳಿಗಾಗಿಯೇ ವಿಶೇಷವಾಗಿ, “ಡೆಂಟೋ ಜಂಗಲ್’ ಎಂಬ ಥೀಮ್ ಪಾರ್ಕ್ ಅನ್ನು ಇಲ್ಲಿ ಸೃಷ್ಟಿಸಲಾಗಿದ್ದು, ಆಸ್ಪತ್ರೆಗೆ ಬಂದಿದ್ದೇವೆ ಅನ್ನೋ ಭಯ ಮಕ್ಕಳಲ್ಲಿ ಮೂಡುವುದೇ ಇಲ್ಲ. ಮಕ್ಕಳು ಆಟವಾಡುತ್ತಲೇ, ಯಾವ ಹೆದರಿಕೆಯೂ ಇಲ್ಲದೆ ಚಿಕಿತ್ಸೆಗೆ ಸಹಕರಿಸುತ್ತಾರೆ.
ಏನಿದು ಡೆಂಟೋ ಜಂಗಲ್?: ಇದು ವಾತ್ಸಲ್ಯ ಡೆಂಟಲ್ ಕ್ಲಿನಿಕ್‌ನ ಸ್ಥಾಪಕ, ಮಕ್ಕಳ ದಂತ ತಜ್ಞ ಡಾ. ಶ್ರೀವತ್ಸ್ ಭಾರದ್ವಾಜ್ ಅವರ ವಿನೂತನ ಕಲ್ಪನೆ. ಎರಡು ದಶಕಗಳಿಂದ ಮಕ್ಕಳ ದಂತ ತಜ್ಞರಾಗಿರುವ ಇವರಿಗೆ, ಮಕ್ಕಳಿಗೆ ಚಿಕಿತ್ಸೆ ಕೊಡೋದು ಎಷ್ಟು ಕಷ್ಟದ ಕೆಲಸ ಅಂತ ಚೆನ್ನಾಗಿ ಗೊತ್ತು. ಮಕ್ಕಳು ಹಠ ಮಾಡದೇ, ಡೆಂಟಲ್ ಚೇರ್ ಮೇಲೆ ಕುಳಿತುಬಿಟ್ಟರೆ ಅರ್ಧ ಚಿಕಿತ್ಸೆಯೇ ಮುಗಿದಂತೆ.
ಆದರೆ, ಅವರನ್ನು ಓಲೈಸಲು ಹೆತ್ತವರ, ವೈದ್ಯರ ಅರ್ಧ ಬುದ್ಧಿಯೇ ಖರ್ಚಾಗಿ ಬಿಡುತ್ತೆ. ಯಾಕಂದ್ರೆ, ಗೋಡೆ ಮೇಲೆ ಏನೋ ಚಿತ್ರ ತೂಗು ಹಾಕಿ, ಟಿ.ವಿ.ಯಲ್ಲಿ ಕಾಟೂìನ್ ಹಾಕಿಬಿಟ್ಟರೆ ಆಸ್ಪತ್ರೆಗಳ ಬಗ್ಗೆ ಮಕ್ಕಳಿಗಿರುವ ಹೆದರಿಕೆ ಹೋಗುವುದಿಲ್ಲ. ಅದಕ್ಕಾಗಿ ಏನಾದರೂ ವಿಭಿನ್ನವಾಗಿ ಮಾಡಬೇಕು ಅಂತ ಅನ್ನಿಸಿದಾಗ ಹೊಳೆದದ್ದೇ ಈ “ಡೆಂಟೋ ಜಂಗಲ್’.
ಜಂಗಲ್ಲೇ ಯಾಕೆ?: ತಮ್ಮಲ್ಲಿಗೆ ಬರುವ ಮಕ್ಕಳನ್ನು ಮಾತಾಡಿಸುತ್ತಾ, ಭಾರದ್ವಾಜ್ ಅವರಿಗೆ ಒಂದು ವಿಷಯ ಅರ್ಥವಾಗಿತ್ತು. ಅದೇನೆಂದರೆ, ಬೆಂಗಳೂರಿನ ಮಕ್ಕಳಿಗೆ ಕಾಡಿನ, ಪ್ರಾಣಿಗಳ ಬಗ್ಗೆ ಕಲ್ಪನೆಯೇ ಇಲ್ಲ ಅಂತ. ಕ್ಲಿನಿಕ್‌ಗೆ ಬಂದವರಲ್ಲಿ “ನೀವು ಕುಡಿಯುವ ಹಾಲು ಎಲ್ಲಿಂದ ಬರುತ್ತೆ?’ ಅಂತ ಕೇಳಿದಾಗ, ಹೆಚ್ಚಿನ ಮಕ್ಕಳು “ನಂದಿನಿ ಡೇರಿ’, “ಮಿಲ್ಕ್ ಮ್ಯಾನ್‌ನಿಂದ’ ಅಂತ ಹೇಳಿದ್ದರು. ಪಾಪ, ಈಗಿನ ಮಕ್ಕಳು ಪರಿಸರದಿಂದ ಎಷ್ಟೊಂದು ದೂರಾಗಿದ್ದಾರೆ, ಡೆಂಟಲ್ ಥೀಮ್ ಪಾರ್ಕ್ ಮೂಲಕವಾದರೂ ಅವರಿಗೆ ಕಾಡಿನ ಪರಿಚಯ ಮಾಡಿ ಕೊಡೋಣ ಅಂತ ನಿರ್ಧರಿಸಿದರು.
ಏನೇನಿದೆ?: ಕಾಡಿನ ವಾತಾವರಣವನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಮರ, ಗಿಡ, ಹಕ್ಕಿ, ನೀರಿನ ಶಬ್ದ, ಪಕ್ಷಿಗಳ ಕಲರವ, ಅಷ್ಟೇ ಅಲ್ಲ ವಾತಾವರಣವೂ ಕಾಡಿನಷ್ಟೇ ತಂಪಾಗಿದೆ. ಬೇರೆ ಕ್ಲಿನಿಕ್‌ಗಳಂತೆ ಇಲ್ಲಿ ಸಾಧಾರಣ ರೂಂಗಳಲ್ಲಿ ಚಿಕಿತ್ಸೆ ಕೊಡುವುದಿಲ್ಲ. ಮರದ ಪೊಟರೆ, ಬಾಯೆ¤ರೆದ ಹಕ್ಕಿ, ಗೋರಿಲ್ಲಾ ಬಾಯಿ, ಡೈನೋಸಾರಸ್ ಮೊಟ್ಟೆ, ಸಿಂಹದ ಗುಹೆ, ಗುಡಿಸಲು, ಸಣ್ಣ ಬಸ್, ಸ್ಪೈಡರ್‌ಮ್ಯಾನ್… ಹೀಗೆ ಚಿಕಿತ್ಸಾ ಕೋಣೆಗಳನ್ನು ವಿಭಿನ್ನವಾಗಿ ನಿರ್ಮಿಸಲಾಗಿದ್ದು, ಮಕ್ಕಳು ಇವುಗಳ ಒಳಗೆ ಕುಳಿತು ಚಿಕಿತ್ಸೆ ಪಡೆಯುತ್ತಾರೆ.
ದೊಡ್ಡ ಬಾಯಿ: 10-12 ಅಡಿ ಎತ್ತರದ, 3ಡಿ ತಂತ್ರಜ್ಞಾನದಲ್ಲಿ ಮನುಷ್ಯನ ಬಾಯಿಯನ್ನು ಇಲ್ಲಿ ನಿರ್ಮಿಸಲಾಗಿದ್ದು, ಮಕ್ಕಳು ಇದರೊಳಗೆ ಹೊಕ್ಕು ನೋಡಬಹುದು. ಹಲ್ಲುಗಳು ಹೇಗಿರುತ್ತವೆ, ಹಲ್ಲು ಉಜೊದು ಹೇಗೆ? ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ತಿಳಿಸಿ ಕೊಡಲಾಗುತ್ತದೆ.
ನಾನು ಗುಹೆಯೊಳಗೆ ಹೋಗ್ತಿನಿ…: ಜಾತ್ರೆಗೆ ಹೋದ ಮಕ್ಕಳು ನನಗೆ ಅದು ಬೇಕು, ಇದು ಬೇಕು ಅಂತ ಕೇಳುತ್ತಾರಲ್ಲ, ಇಲ್ಲಿಯೂ ಹಾಗೆಯೇ “ನಾನು ಸಿಂಹದ ಗುಹೆಯೊಳಗೆ ಹೋಗ್ತಿàನಿ’, “ನಂಗೆ ಈ ಪೊಟರೆಯೊಳಗೆ ಟ್ರೀಟ್‌ಮೆಂಟ್ ಕೊಡಿ’ ಅಂತ ಮಕ್ಕಳೇ ಡೆಂಟಲ್ ಚೇರ್ ಮೇಲೆ ಹೋಗಿ ಕುಳಿತು ಬಿಡುತ್ತಾರೆ. ಅಂದ ಮೇಲೆ, ಅವರನ್ನು ಓಲೈಸುವ, ಬಾಯಿ ತೆಗೆಯುವಂತೆ ಪೂಸಿ ಹೊಡೆಯುವ ಅಗತ್ಯವೇ ಇಲ್ಲ ಅನ್ನುತ್ತಾರೆ ಇಲ್ಲಿನ ಡೆಂಟಿಸ್ಟ್‌ಗಳು.
ದೇಶದಲ್ಲಿ ಇದೇ ಮೊದಲು: ಭಾರತದಲ್ಲಿಯೇ ಪ್ರಪ್ರಥಮ ಹಾಗೂ ವಿಭಿನ್ನ ಅನ್ನಿಸುವ ಈ “ಡೆಂಟೋ ಜಂಗಲ್’ನ ನಿರ್ಮಾಣಕ್ಕೆ 150 ಕ್ರಿಯೇಟಿವ್ ಆರ್ಟಿಸ್ಟ್‌ಗಳು ಸುಮಾರು 8-9 ತಿಂಗಳ ಕಾಲ ದುಡಿದಿದ್ದಾರೆ. ಈ ಥೀಂ ಪಾರ್ಕ್‌ನ ಸಮಗ್ರ ಕೆಲಸದ ಹೊಣೆ ಹೊತ್ತಿದ್ದು ಚೀಫ್ ಸ್ಟ್ರಾಟೆಜಿ ಆಫೀಸರ್ ಶರ್ಮಿಳಾ ಉಡುಪ ಅವರು. ಒಟ್ಟಾರೆ 2 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ಭಾರತದಲ್ಲಿ ಇಲ್ಲಿಯವರೆಗೆ ಇಂಥದ್ದೊಂದು ಸೃಜನಾತ್ಮಕ ಪ್ರಯತ್ನವನ್ನು ಯಾವ ಆಸ್ಪತ್ರೆಯೂ ಮಾಡಿಲ್ಲ.
ಸಾಗಿ ಬಂದ ದಾರಿ: ವಾತ್ಸಲ್ಯ ಡೆಂಟಲ್ ಕ್ಲಿನಿಕ್ ಸ್ಥಾಪನೆಯಾಗಿದ್ದು 2003ರಲ್ಲಿ. ಮಕ್ಕಳ ದಂತ ತಜ್ಞ ಡಾ. ಶ್ರೀವತ್ಸ ಭಾರದ್ವಾಜ್ ಇದರ ಸ್ಥಾಪಕರು. ಜೆಪಿ ನಗರ ಅಷ್ಟೇ ಅಲ್ಲದೆ, ಕನಕಪುರ, ಕೋರಮಂಗಲ, ರಾಜಾಜಿನಗರ, ಅರೆಕೆರೆ, ಜಯನಗರದಲ್ಲಿಯೂ ವಾತ್ಸಲ್ಯ ಕ್ಲಿನಿಕ್‌ನ ಶಾಖೆಗಳಿವೆ. ಬೆಂಗಳೂರಿನ ಟಾಪ್ 10 ಡೆಂಟಲ್ ಕ್ಲಿನಿಕ್‌ಗಳಲ್ಲಿ ವಾತ್ಸಲ್ಯ ಸಹ ಒಂದು ಅನ್ನೋದು ಇನ್ನೊಂದು ಹೆಗ್ಗಳಿಕೆ.
ವಿಳಾಸ: ವಾತ್ಸಲ್ಯ ಡೆಂಟಲ್ ಕ್ಲಿನಿಕ್, ಶ್ರಾವಣಿ ಬಿಲ್ಡ್‌ಟೆಕ್, 745/ಎ/ಬಿ/ ಫಸ್ಟ್ ಫ್ಲೋರ್, 24ನೇ ಮುಖ್ಯರಸ್ತೆ, ಜೆಪಿ ನಗರ
ಸಂಪರ್ಕ: 9900114151
* ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.