ಒಂದರಿಂದ ಹತ್ತು ಹಬ್ಬದೂಟದ ಗಮ್ಮತ್ತು
Team Udayavani, Mar 17, 2018, 10:07 AM IST
ಯುಗಾದಿ ಹಬ್ಬದ ಸಡಗರ, ಅದ್ಧೂರಿತನ ಅಡಗಿರುವುದೇ ಅಡುಗೆ ಮನೆಯಲ್ಲಿ. ಈ ಸಲ ನಿಮ್ಮ ಮನೆಯ ಹಬ್ಬದಡುಗೆಯ ಹೈಲೈಟ್ ಏನು? ಅದೇ ಶ್ಯಾವಿಗೆ ಪಾಯಸ, ಅದೇ ಕ್ಯಾರೆಟ್ ಕೋಸುಂಬರಿಯೇ? ಈ ಹಳೇ ಖಾದ್ಯಗಳು ಹೊಸ ಹಬ್ಬಕ್ಕೆ ಮ್ಯಾಚ್ ಆಗುವುದಾದರೂ ಹೇಗೆ? ಹೊಸ ಖಾದ್ಯಗಳನ್ನು ಸವಿಯುತ್ತಾ ಸಂವತ್ಸರವನ್ನು ಸ್ವಾಗತಿಸಿದರೆ, ಅದರ ಗಮ್ಮತ್ತೇ ಬೇರೆ. ಪ್ರಿಯ ಓದುಗರಿಗಾಗಿ “ಉದಯವಾಣಿ’ಯೇ ಸೂಚಿಸುತ್ತಿರುವ 10 ವಿಭಿನ್ನ ಮೆನು ನಿಮ್ಮ ಮುಂದಿದೆ. ನಾಳೆಯ (ಭಾನುವಾರ) ಹಬ್ಬದಲ್ಲಿ ನಿಮ್ಮ ಬಾಳೆಲೆಯ ಮೇಲೆ ಇವೆಲ್ಲವೂ ಕಾಣಿಸಿಕೊಳ್ಳಲಿಯೆಂಬ ಆಶಯ ನಮ್ಮದು. ಪ್ರಯೋಗಿಸಿ, ರುಚಿ ಹೇಗಿತ್ತು ಎಂಬುದನ್ನು ನಮಗೆ ತಿಳಿಸಿ…
1. ತರಕಾರಿ ಸುರುಳಿ (ವೆಜ್ ರೋಲ್)
ಬೇಕಾಗುವ ಸಾಮಗ್ರಿ: ಸಣ್ಣಗೆ ದುಂಡಾಗಿ ಹೆಚ್ಚಿದ ಬೆಂಡೆಕಾಯಿ 6-7, ಎಲೆಕೋಸು ಸಣ್ಣಗೆ ಹೆಚ್ಚಿದ್ದು 3 ಚಮಚ, ತುರಿದುಕೊಂಡ ಆಲೂಗೆಡ್ಡೆ 3 ಚಮಚ, ಕೊತ್ತಂಬರಿ ಸೊಪ್ಪು, ರುಚಿಗೆ ಸ್ವಲ್ಪ ತೆಂಗಿನ ತುರಿ, ಸ್ವಲ್ಪ ದನಿಯಾ ಪುಡಿ
ಸ್ವಲ್ಪ ಮಾನ ಪುಡಿ, ಸ್ವಲ್ಪ ಗರಂ ಮಸಾಲ, ಅಚ್ಚಖಾರದ ಪುಡಿ ಅಥವಾ ಹಸಿ ಮೆಣಸಿನಕಾಯಿ (ಸಣ್ಣಗೆ ಹಚ್ಚಿದ್ದು) ಕಡಲೆ ಹಿಟ್ಟು 1 ಸಣ್ಣ ಬಟ್ಟಲು (ಮೇಲಿನ ಸಾಮಗ್ರಿಗಳು ಕೂಡಿಕೊಳ್ಳಲು) ಅಕ್ಕಿ ಹಿಟ್ಟು 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಮೈದಾ 1 ಬಟ್ಟಲು.
ಮಾಡುವ ವಿಧಾನ: ಮೈದಾ ಹಿಟ್ಟನ್ನು ಬಿಟ್ಟು, ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಒಟ್ಟಿಗೆ ಕಲೆಸಿ ಚಿಕ್ಕ ಚಿಕ್ಕ ಕೊಳವೆ ಆಕಾರದಲ್ಲಿ ಸಿದ್ಧ ಮಾಡಿ. ಮೈದಾ ಹಿಟ್ಟಿಗೆ ಚಿಟಿಕೆ ಅರಿಶಿನ, ಒಂದು ಚಮಚ ಎಣ್ಣೆ, ಕೊಂಚ ಉಪ್ಪು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ನಂತರ ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಹಾಳೆಯ ಮೇಲೆ ಸಣ್ಣ ಉಂಡೆ ಇಟ್ಟು ಚಿಕ್ಕ ಪೂರಿಯಾಗಿ ಲಟ್ಟಿಸಿಕೊಳ್ಳಿ. ಅದರಲ್ಲಿ ಮೇಲೆ ಹೇಳಿದ ತರಕಾರಿ ಉಂಡೆಯನ್ನಿಟ್ಟು ಸುರುಳಿ ಮಾಡಿ. ಅಕ್ಕ ಪಕ್ಕ ಪಲ್ಯ ಹೊರಬರದಂತೆ ಮುಚ್ಚಿ. ನಿಧಾನವಾಗಿ ಕಾದ ಎಣ್ಣೆಯಲ್ಲಿ ಒಂದೊಂದಾಗಿ ಹಾಕುತ್ತಾ ಕೆಂಬಣ್ಣ ಬರುವವರೆಗೆ ಕರಿಯಿರಿ.
ಬೋಂಡಾ, ಅಂಬೊಡೆ, ಪಕೋಡ ತಿನ್ನುವ ಬಾಯಿಗೆ ಈ ತರಕಾರಿ ಸುರುಳಿ (ವೆಜ್ ರೋಲ್) ಹೊಸ ಸ್ವಾದ, ಹೊಸ ರುಚಿ ಕೊಡುವುದಂತೂ ನಿಜ.
– ಸವಿತಾ ನಾಗೇಶ್, ಬೆಂಗಳೂರು
2. ಹುರುಳಿ ಕಾಳಿನ ಹೋಳಿಗೆ
ಬೇಕಾಗುವ ಸಾಮಗ್ರಿ: ಕಣಕಕ್ಕೆ- ಮೈದಾ ಹಿಟ್ಟು-2 ಕಪ್, ಚಿರೋಟಿ ರವೆ-1 ಕಪ್, ಅಕ್ಕಿ ಹಿಟ್ಟು-2 ಚಮಚ, ಹೂರಣಕ್ಕೆ-ಹುರುಳಿಕಾಳು-1 ಕಪ್, ಬೆಲ್ಲದ ತುರಿ-1 ಕಪ್, ತೆಂಗಿನ ತುರಿ-1/2 ಕಪ್, ಗಸಗಸೆ ಪುಡಿ-1/4 ಕಪ್, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1 ಕಪ್
ಮಾಡುವ ವಿಧಾನ: ಹುರುಳಿ ಕಾಳುಗಳನ್ನು ಏಳೆಂಟು ಗಂಟೆ ನೀರಿನಲ್ಲಿ ನೆನೆಸಿ, ಬಸಿದು ಬೇಯಿಸಿ ತಣಿಸಿ. ನಂತರ, ತೆಂಗಿನ ತುರಿ ಸೇರಿಸಿ ನೀರು ಹಾಕದೆ, ಗಟ್ಟಿಯಾಗಿ ಅರೆಯಿರಿ. ಬಾಣಲೆ ಕಾಯಲಿರಿಸಿ, ಅರೆದ ಮಿಶ್ರಣ ಹಾಗೂ ಬೆಲ್ಲದ ತುರಿಯನ್ನು ಹಾಕಿ, ನೀರಿನ ಪಸೆ ಇಂಗುವವರೆಗೆ ಕಲಕುತ್ತಿರಿ. ನಂತರ, ಗಸಗಸೆ ಪುಡಿ, ಏಲಕ್ಕಿ ಪುಡಿ, ಸ್ವಲ್ಪ ತುಪ್ಪ ಸೇರಿಸಿ ಗಟ್ಟಿಯಾಗುವವರೆಗೆ ಕಲಕಿ ಒಲೆಯಿಂದ ಕೆಳಗಿರಿಸಿದರೆ ಹೂರಣ ತಯಾರು.
ಮೈದಾ ಹಿಟ್ಟು, ಚಿರೋಟಿ ರವೆ, ಅಕ್ಕಿ ಹಿಟ್ಟುಗಳನ್ನು ಸೇರಿಸಿ, ಸ್ವಲ್ಪ ಎಣ್ಣೆ ಹಾಕಿ, ನೀರಿನೊಂದಿಗೆ ಪೂರಿ ಹಿಟ್ಟಿನ ಹದಕ್ಕೆ ಕಣಕ ಕಲಸಿ, ಒಂದು ಗಂಟೆ ನೆನಯಲಿರಿಸಿ. ಕಣಕದಿಂದ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ತಟ್ಟಿ. ಹೂರಣ ತುಂಬಿಸಿ, ಮೃದುವಾಗಿ ಲಟ್ಟಿಸಿ, ತುಪ್ಪ ಇಲ್ಲವೇ ಎಣ್ಣೆ ಸವರಿ, ಕಾಯಿಸಿದ ಕಾವಲಿಯ ಮೇಲೆ ಹರಡಿ. ಎರಡೂ ಬದಿಗಳಿಗೂ ತುಪ್ಪ ಸವರಿ, ಹೊಂಬಣ್ಣ ಬರುವವರೆಗೆ ಬೇಯಿಸಿದರೆ ರುಚಿರುಚಿಯಾದ ಹುರುಳಿ ಕಾಳಿನ ಹೋಳಿಗೆ ರೆಡಿ.
– ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
3. ನೆಲಗಡಲೆ ಕೋಸಂಬರಿ
ಬೇಕಾಗುವ ಸಾಮಗ್ರಿ: ನೆನೆಸಿದ ನೆಲಗಡಲೆ 1ಬಟ್ಟಲು, ತುರಿದ ಬೀಟ್‌ರೂಟ್ 1/2 ಬಟ್ಟಲು, ಕಾಯಿತುರಿ 1/2ಬಟ್ಟಲು, ಸಣ್ಣಗೆ ಹೆಚ್ಚಿದ ಹಸಿಮೆಣಸು -ಎರಡು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಲಿಂಬೆರಸ- 2ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ಕೊಬ್ಬರಿಎಣ್ಣೆ – 2 ಚಮಚ, ಇಂಗು, ಸಾಸಿವೆ, ಒಣಮೆಣಸು, ಕರಿಬೇವು.
ಒಗ್ಗರಣೆ ಹಾಕಿ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಬೆರೆಸಿದರೆ ಕೋಸಂಬರಿ ಸಿದ್ಧ.
– ಮಾಲಿನಿ ಗುರುಪ್ರಸನ್ನ, ಬೆಂಗಳೂರು
4. ನೆಲ್ಲಿಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ: ಕೊಬ್ಬರಿ ತುರಿ-1 ಕಪ್, ಒಣಮೆಣಸು-6, ಜೀರಿಗೆ-ಅರ್ಧ ಚಮಚ, ಸಾಸಿವೆ-ಅರ್ಧ ಚಮಚ, ಹುಣಸೆ ರಸ-ಅರ್ಧ ಚಮಚ, ಬೆಟ್ಟದ ನೆಲ್ಲಿಕಾಯಿ (ಒಣಗಿಸಿಟ್ಟ ನೆಲ್ಲಿಕಾಯಿಯೂ ಆಗುತ್ತದೆ) ರುಚಿಗೆ ತಕ್ಕಷ್ಟು ಉಪ್ಪು,
ಸ್ವಲ್ಪ ಎಣ್ಣೆ.
ಮಾಡುವ ವಿಧಾನ: ಒಣಮೆಣಸು, ಜೀರಿಗೆ, ಸಾಸಿವೆಯನ್ನು ಎಣ್ಣೆಯಲ್ಲಿ ಹುರಿದುಕೊಳ್ಳಿ. ತುರಿದ ಕೊಬ್ಬರಿ, ನೆಲ್ಲಿಕಾಯಿ, ಹುಣಸೆ ರಸ ಹಾಗೂ ಉಪ್ಪನ್ನು ಹದಕ್ಕೆ ತಕ್ಕಷ್ಟು ನೀರಿನೊಂದಿಗೆ ಬೆರೆಸಿ ರುಬ್ಬಿ. ನಂತರ ಒಗ್ಗರಣೆ ಹಾಕಿದರೆ, ರುಚಿರುಚಿಯಾದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ.
– ರತ್ನಾವತಿ, ಮೈಸೂರು
5. ಹಾಗಲಕಾಯಿ ಪಲ್ಯ
ಬೇಕಾಗುವ ಸಾಮಗ್ರಿ : ಹಾಗಲಕಾಯಿ 1 ಕೆಜಿ, 1 ಕೊಬ್ಬರಿ, ಚಿಟಿಕೆ ಇಂಗು, 2 ಹಿಡಿ ಕಡಲೆಬೇಳೆ, 1 ಹಿಡಿ ಉದ್ದಿನಬೇಳೆ, 5 ಚಮಚ ದನಿಯ, 2 ಚಮಚ ಜೀರಿಗೆ, 1 ಚಮಚ ಸಾಸಿವೆ, ಹುಣಸೆ ಹಣ್ಣು ನಿಂಬೆಹಣ್ಣಿನ ಗಾತ್ರ (ಹುಳಿ ಮಜ್ಜಿಗೆಯೂ ಆಗುತ್ತೆ) 15 ಒಣಮೆಣಸು, ಕರಿಬೇವಿನ ಸೊಪ್ಪು
ಒಗ್ಗರಣೆಗೆ: ಕೊಬ್ಬರಿ ಎಣ್ಣೆ, 1 ಚಮಚ ಉದ್ದಿನ ಬೇಳೆ, ಸಾಸಿವೆ, 7-8 ಎಸಳು ಕರಿಬೇವು, 2 ಒಣಮೆಣಸು
ಮಾಡುವ ವಿಧಾನ : ಹಾಗಲ ಕಹಿ ತೆಗೆಯುವ ವಿಧಾನ –
ಮೊದಲು ಹಾಗಲಕಾಯಿಯ ಬೀಜ ತೆಗೆದು, ತೆಳು ಹೋಳುಗಳನ್ನಾಗಿ ಕತ್ತರಿಸಿ ಹುಣಸೆ ಹಣ್ಣಿನ ರಸ /ಹುಳಿ ಮಜ್ಜಿಗೆಯಲ್ಲಿ ಹಾಕಿ, ಒಂದು ಚಮಚ ಅರಶಿನ ಪುಡಿ ಮತ್ತು ಒಂದು ಹಿಡಿ (ಮುಷ್ಟಿ) ಹರಳು ಉಪ್ಪು ಸೇರಿಸಿ ಇಪ್ಪತ್ತು ನಿಮಿಷಗಳ ಕಾಲ ನೆನೆಸಿಡಿ. ನಂತರ ಚೆನ್ನಾಗಿ ತೊಳೆದು, ನೀರು ಬಸಿದರೆ ಕಹಿ ಹೋಗುತ್ತದೆ.
ಈಗ ಬಾಣಲೆಗೆ ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ದನಿಯ, ಜೀರಿಗೆ, ಸಾಸಿವೆ, ಇಂಗು, ಒಣಮೆಣಸು, ಹಾಕಿ ಎರಡು ಚಮಚ ಕೊಬ್ಬರಿ ಎಣ್ಣೆ ಹಾಕಿ, ಕೆಂಬಣ್ಣಕ್ಕೆ ತಿರುಗುವ ತನಕ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಅದನ್ನು ಕೆಳಗಿಳಿಸಿ ಸ್ವಲ್ಪ ತಣ್ಣಗಾದ ಮೇಲೆ ಹುಣಸೆ ಹಣ್ಣಿನೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿ.
ಮತ್ತೂಂದು ಬಾಣಲೆಗೆ 7-8 ಚಮಚ ಕೊಬ್ಬರಿ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಒಣಮೆಣಸಿನ ಚೂರು ಹಾಗೂ ಒಗ್ಗರಣೆ ಸಾಮಗ್ರಿಗಳನ್ನು ಹಾಕಿ, ಒಗ್ಗರಣೆ ಸಿಡಿದ ಮೇಲೆ ಹಾಗಲಕಾಯಿ ಹಾಕಿ ಹುರಿಯಿರಿ, ಅದಕ್ಕೆ ಚಿಟಿಕೆ ಅರಶಿಣ ಹಾಕಿ. ನಂತರ ಹೋಳುಗಳು ಮುಚ್ಚುವ ಮಟ್ಟಕ್ಕೆ ನೀರು ಹಾಕಿ, 7-8 ಉಂಡೆ ಬೆಲ್ಲ, ಒಂದು ಮುಷ್ಟಿ ಹರಳುಪ್ಪು ಹಾಕಿ ಮುಚ್ಚಿಡಿ. ನೀರು ಬತ್ತಲು ಆರಂಭವಾಗಿ, ಹೋಳು ಮು¨ªೆಯಾಗುತ್ತಿದ್ದಂತೆ ಆರಂಭದಲ್ಲಿ ಪುಡಿ ಮಾಡಿಟ್ಟ ಮಸಾಲೆ ಹಾಗೂ ಕೊಬ್ಬರಿ ತುರಿ ಬೆರೆಸಿ ಚೆನ್ನಾಗಿ ಮಗುಚಬೇಕು.
– ಸುಮ ನಾಗೇಂದ್ರ, ಆಗುಂಬೆ
6. ಸೇಬು ಹಣ್ಣಿನ ಪಾಯಸ
ಬೇಕಾಗುವ ಸಾಮಗ್ರಿ: ಸೇಬು ಹಣ್ಣು 1/2 ಕಿಲೋ, ಹಾಲು 1 ಲೀ, ಒಣ ಅಂಜೂರ ನಾಲ್ಕು, ಒಣದ್ರಾಕ್ಷಿ ಸ್ವಲ್ಪ, ತುಪ್ಪ 4 ಚಮಚ, ಏಲಕ್ಕಿ ಪುಡಿ 1/4 ಚಮಚ, ಸಕ್ಕರೆ 1 1/2 ಕಪ್, ಚಿರೋಟಿ ರವೆ 2 ಚಮಚ
ಮಾಡುವ ವಿಧಾನ: ಸೇಬಿನ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನು ಮಾಡಿಕೊಳ್ಳಿ. ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಒಣ ದ್ರಾಕ್ಷಿಯನ್ನು ಹುರಿದುಕೊಳ್ಳಿ. ಹಾಗೆಯೇ ಚಿರೋಟಿ ರವೆಯನ್ನೂ ಹುರಿಯಿರಿ. ನಂತರ ಅಂಜೂರವನ್ನು ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಳ್ಳಿ. ಸೇಬು ಹಣ್ಣನ್ನು ತುಪ್ಪದಲ್ಲಿ ಬಾಡಿಸಿ. ನಂತರ ಅರ್ಧ ಲೀಟರ್ ಹಾಲು ಹಾಕಿ ಸೇಬು ಹಣ್ಣು ಸೇರಿಸಿ ಕುದಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಬೆಂದ ಮೇಲೆ ಉಳಿದ ಹಾಲನ್ನು ಹಾಕಿ ಕುದಿಸಿ. ಕುದಿಯುವಾಗ ಚಿರೋಟಿ ರವೆ ಹಾಕಿ. ಹುರಿದ ದ್ರಾಕ್ಷಿ, ಅಂಜೂರ, ಏಲಕ್ಕಿ ಪುಡಿ ಹಾಕಿ ಹತ್ತು ನಿಮಿಷ ಬೇಯಿಸಿದರೆ ಪಾಯಸ ಸಿದ್ಧ.
– ವೇದಾವತಿ ಎಚ್.ಎಸ್, ಬೆಂಗಳೂರು
7. ದಿಢೀರ್ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಲಿಂಬೆ ಹಣ್ಣು -5, ಜೀರಿಗೆ 1 ಚಮಚ, ಸಾಸಿವೆ 3 ಚಮಚ, ಮೆಂತೆ ಅರ್ಧ ಚಮಚ, ಉಪ್ಪು ರುಚಿಗೆ, ಕೆಂಪು ಮೆಣಸಿನ ಪುಡಿ 100 ಗ್ರಾಂ, ನೀರು (ಉಪ್ಪಿನ ಅಳತೆಯ ಮೂರರಷ್ಟು), ಹುಣಸೆ ಹಣ್ಣು (ಒಂದು ನೆಲ್ಲಿಕಾಯಿಯ ಗಾತ್ರದಷ್ಟು ) ಒಗ್ಗರಣೆಗೆ ಇಂಗು.
ಮಾಡುವ ವಿಧಾನ: ಮೊದಲು ಜೀರಿಗೆ, ಸಾಸಿವೆ, ಮೆಂತೆಯನ್ನು ಚೆನ್ನಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಒಂದು ನಿಂಬೆ ಹಣ್ಣಿನಲ್ಲಿ ಎಂಟು ಹೋಳುಗಳಂತೆ ಸಣ್ಣದಾಗಿ ಹೆಚ್ಚಿ ಒಂದು ಬೌಲ್‌ನಲ್ಲಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಉಪ್ಪನ್ನು ಹಾಕಿ ಅದರ ಮೂರರಷ್ಟು ನೀರು ಹಾಕಿ 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಅದೇ ನೀರಿನಿಂದ ಒಂದು ಸೌಟು ನೀರು ತೆಗೆದು ಹುಣಸೆ ಹಣ್ಣನ್ನು ನೆನೆಸಿ ಹಿಂಡಿ ತೆಗೆದ ರಸವನ್ನು ,ಹೆಚ್ಚಿದ ನಿಂಬೆ ಕಾಯಿಯ ಹೋಳುಗಳೊಂದಿಗೆ ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಹೋಳುಗಳನ್ನು ಸೇರಿಸಿದ ಮೇಲೆ ಮತ್ತೆ ಐದು ನಿಮಿಷ ಕುದಿಸಿ ನಂತರ ತಣ್ಣಗಾಗಲು ಬಿಡಿ. ತಣ್ಣಗಾದ ಮಿಶ್ರಣಕ್ಕೆ ಮೊದಲೇ ಮಾಡಿಟ್ಟುಕೊಂಡ ಜೀರಿಗೆ, ಸಾಸಿವೆ, ಮೆಂತೆ ಪುಡಿ ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ ಇಂಗಿನ ಒಗ್ಗರಣೆ ಕೊಟ್ಟು ಚೆನ್ನಾಗಿ ಕಲಸಿದರೆ ಉಪ್ಪಿನ ಕಾಯಿ ಸವಿಯಲು ಸಿದ್ದ.
– ವಿದ್ಯಾ ದತ್ತಾತ್ರಿ, ಹೊಸಕೊಪ್ಪ
8. ಕರಿಬೇವು ರಸಂ
ಬೇಕಾಗುವ ಸಾಮಗ್ರಿ: ಕರಿಬೇವು ಒಂದು ಕಟ್ಟು, ಧನಿಯಾ 3 ಚಮಚ, ಜೀರಿಗೆ 2 ಚಮಚ, ಮೆಣಸಿನ ಪುಡಿ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 4, ಗುಂಟೂರು ಮೆಣಸಿನಕಾಯಿ 3, ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರದಷ್ಟು,
ಬೆಲ್ಲ ಮತ್ತು ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೇಲೆ ತಿಳಿಸಿದ ಮೆಣಸು , ಜೀರಿಗೆ, ಧನಿಯಾ, ಒಣ ಮೆಣಸಿನಕಾಯಿಯನ್ನು ಮಿಕ್ಸರ್ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಚೆನ್ನಾಗಿ ತೊಳೆದ ಕರಿಬೇವಿನ ಎಳೆಗಳು, ಹುಣಸೆಹಣ್ಣು, ನೀರನ್ನು ಹಾಕಿ ಚೆನ್ನಾಗಿ ರುಬ್ಬಿ. ಆ
ಮಿಶ್ರಣವನ್ನು ಜರಡಿಗೆ ಹಾಕಿ 4 ಲೋಟ ನೀರು ಹಾಕಿ ಸೋಸಿಕೊಳ್ಳಿ .
ಕಾದ ಬಾಣಲೆಗೆ 2 ಚಮಚ ಎಣ್ಣೆ , ಸಾಸಿವೆ, ಜೀರಿಗೆ, ಒಣ ಮೆಣಸಿನಕಾಯಿ 2, ಇಂಗು, ಕರಿಬೇವು ಹಾಕಿ ಜರಡಿ ಹಿಡಿದ ಕರಿಬೇವಿನ ರಸ ಸೇರಿಸಿ ನಂತರ ಬೆಲ್ಲ ಹಾಗೂ ಉಪ್ಪು ಹಾಕಿ ಕುದಿಸಿದಿರೆ ಕರಿಬೇವಿನ ರಸಂ ತಯಾರು .
– ಕೀರ್ತನಾ ದಿನೇಶ್
9. ರಸಾಯನ
ಬೇಕಾಗುವ ಸಾಮಗ್ರಿ : ನಾಲ್ಕು ಮಾವಿನ ಹಣ್ಣು, ಒಂದು ಕಪ್ ಕೊಬ್ಬರಿ ತುರಿ, ಒಂದು ಲೋಟ ಹಾಲು, ಮೂರು ಏಲಕ್ಕಿ,ನಾಲ್ಕು ಉಂಡೆ ಬೆಲ್ಲ.
ಮಾಡುವ ವಿಧಾನ : ಮಾವಿನ ಹಣ್ಣಿನ ಸಿಪ್ಪೆ ಬಿಡಿಸಿ, ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ತೆಂಗಿನ ತುರಿ, ಏಲಕ್ಕಿ, ಬೆಲ್ಲ ಮತ್ತು ಒಂದು ಚಿಟಿಕೆ ಉಪ್ಪನ್ನು ನುಣ್ಣಗೆ ರುಬ್ಬಿ, ನಂತರ ಕತ್ತರಿಸಿದ ಹಣ್ಣಿನೊಂದಿಗೆ (ಹೋಳು) ಬೆರೆಸಿ. ಕಾಯಿಸಿ ತಣಿಸಿದ ಹಾಲನ್ನು ಸೇರಿಸಿ ಮಿಕÕ… ಮಾಡಿ, ಅಗತ್ಯ ಇದ್ದರೆ ಕೊಂಚ ನೀರು ಬೆರೆಸಿ. ರುಚಿ ರುಚಿ ರಸಾಯನ ಸವಿಯಲು ಸಿದ್ಧ..
– ಭಾರತಿ ಕುಮಾರಯ್ಯ, ಅಸೀಮನೆ
10. ಮೋರು ಕರಿ (ಮಜ್ಜಿಗೆ ಹುಳಿ, ಕೇರಳ ಸ್ಟೈಲ್)
ಬೇಕಾಗುವ ಸಾಮಗ್ರಿ: ಬಣ್ಣದ ಸೌತೆ (ಮಂಗಳೂರು ಸೌತೆ) 1, ಮೊಸರು 1/2 ಲೀಟರ್, ತೆಂಗಿನ ತುರಿ ಸ್ವಲ್ಪ, ಹುಣಸೆ ಹಣ್ಣಿನ ದಪ್ಪ ರಸ 2 ಚಮಚ, ಬೆಲ್ಲ (ಅಡಿಕೆ ಗಾತ್ರ) ಹಸಿ ಮೆಣಸು 2, ಬ್ಯಾಡಗಿ ಮೆಣಸು 2-3, ಜೀರಿಗೆ 1 ಚಮಚ, ಸಾಸಿವೆ 1 ಚಮಚ, ಅರಿಶಿನ ಒಂದು ಚಿಟಿಕೆ, ಉಪ್ಪು ರುಚಿಗೆ ತಕ್ಕಷ್ಟು, ಕರಿಬೇವು.
ಮಾಡುವ ವಿಧಾನ: ಬಣ್ಣದ ಸೌತೆ ಕಾಯಿಯನ್ನು ಚೆನ್ನಾಗಿ ತೊಳೆದು ಮಧ್ಯದ ತಿರುಳು, ಬೀಜ ತೆಗೆದು ಒಂದು ಇಂಚು ಉದ್ದ, ಕಾಲು ಇಂಚು ದಪ್ಪಕ್ಕೆ ಕತ್ತರಿಸಿಕೊಳ್ಳಬೇಕು. ದಪ್ಪ ತಳದ ಪಾತ್ರೆಗೆ ಕತ್ತರಿಸಿದ ಸೌತೆ ಕಾಯಿ, ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಬೇಯಿಸಿ. ತೆಂಗಿನ ತುರಿ, ಜೀರಿಗೆ, ಅರ್ಧ ಚಮಚ ಸಾಸಿವೆ ಹಾಕಿ ನುಣ್ಣಗೆ ರುಬ್ಬಿ. ಮೊಸರನ್ನು ಮಿಕ್ಸಿಯಲ್ಲಿ ತಿರುಗಿಸಿ ದಪ್ಪ ಮಜ್ಜಿಗೆ ಮಾಡಿಕೊಳ್ಳಿ.
ಬೆಂದ ತರಕಾರಿಗೆ, ಮಜ್ಜಿಗೆ, ಹುಣಸೆ ರಸ, ಬೆಲ್ಲ, ಉಪ್ಪು, ಅರಶಿನ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡುತ್ತಾ, ಆಗಾಗ ಮಗುಚಿ ಮಜ್ಜಿಗೆ ಒಡೆಯದಂತೆ ನೋಡಿಕೊಳ್ಳಿ. ಒಲೆಯ ಉರಿ ದೊಡ್ಡದಿದ್ದರೆ ಅಥವ ಮಗಚುವುದನ್ನು ಬಿಟ್ಟರೆ ಮಜ್ಜಿಗೆ ಒಡೆಯುವ ಸಾಧ್ಯತೆಯಿದೆ. ಸುಮಾರು 15-20 ನಿಮಿಷದ ನಂತರ ಸಣ್ಣದಾಗಿ ಕುದಿ ಬರತೊಡಗಿದ ಮೇಲೆ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ. ತಕ್ಷಣ ರುಬ್ಬಿದ ಕಾಯಿಯನ್ನು ಹಾಕಿ ತಿರುಗಿಸಿ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಬೇಕು.
ಇದು ಕೇರಳ ಶೈಲಿಯ ಅಡುಗೆಯಾಗಿದ್ದು, ನಾವು ಮಾಡುವ ಮಜ್ಜಿಗೆ ಹುಳಿಗಿಂತ ರುಚಿಯಲ್ಲಿ ಭಿನ್ನವಾಗಿರುತ್ತದೆ. ಬಣ್ಣದ ಸೌತೆಕಾಯಿ ಬದಲು,ಬೀನ್ಸ್, ಸೀಮೆ ಬದನೆಕಾಯಿ ಬಳಸಿಯೂ ತಯಾರಿಸಬಹುದು.
– ಗೀತಾ ಕುಂದಾಪುರ
ಹಬ್ಬದ ಬಿಸಿಬಿಸಿ ಪಾಕ ಪ್ರಯೋಗದ ವಿಡಿಯೋ ನೋಡಲು ಈ ಲಿಂಕನ್ನು ಟೈಪ್ ಮಾಡಿ http://bit.ly/2GA9MDW
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.