ಯುಗಾದಿಯ ಬೇವಿನ ಕಹಿ,ಒಬ್ಬಟ್ಟಿನ ಸಿಹಿ
Team Udayavani, Mar 17, 2018, 10:38 AM IST
ಇದೀಗ ಹೊಸ ಸಂವತ್ಸರ ವಿಳಂಬಿಯ ಹೊಸ್ತಿಲಲ್ಲಿದ್ದೇವೆ. ವಸಂತ ಋತುವಿಗೆ ಮಧುದೂತಿ ಎಂಬ ಹೆಸರಿದೆ. ಮಧು ಅಂದರೆ ಜೇನು. ಚಳಿಗಾಲದಲ್ಲಿ ಬೋಳಾಗಿ ನಿಂತ ಗಿಡ ಮರಗಳೆಲ್ಲ ಚಿಗುರಿ ಹಸಿರೆಲೆ ಮತ್ತು ಬಣ್ಣದ ಹೂದಳೆಯುವ ಶ್ರಾಯವಿದು. ಜೇನ್ನೊಣಗಳಿಗೆ ಸಂತಸದ ಸುಗ್ಗಿ. ಏಕೆಂದರೆ ಇಡೀ ಪರಿಸರದ ತುಂಬ ರಾಶಿ ರಾಶಿ ಹೂಗಳು! ಹಾಗಾಗಿ ಜೇನ್ನೊಣಗಳು ಈ ಋತುವನ್ನು ಸಂಭ್ರಮದಿಂದ ಕಾಯುತ್ತವೆ. ಕೇವಲ ಜೇನ್ನೊಣಗಳಷ್ಟೆ ಅಲ್ಲ. ಗಿಣಿ, ಪಿಕಳಾರ, ಕೋಗಿಲೆ, ಮೈನಾದಂಥ ಕಾಡು ಹಕ್ಕಿಗಳಿಗೆ ಸಂತಸವೋ ಸಂತಸ. ಹೀಗಾಗಿ ಇಡೀ ವಸಂತವೇ ಹಬ್ಬದ ಮಾಸ. ಅದನ್ನೆ ಸೂಕ್ಷ್ಮವಾಗಿ ಗಮನಿಸಿದ್ದು ನಮ್ಮ ಅನಾದಿ ಮಾನವ ಸಮುದಾಯಗಳು. ನಮ್ಮ ಊರೂರಿನ ಕೇರಿಯ ದೇವ, ದೇವಿಯರ ಜಾತ್ರೆಗೆ ವಸಂತ ಮಾಸವನ್ನೇ ಆಯ್ಕೆ ಮಾಡಿಕೊಂಡಿವೆಯಲ್ಲ? ಇಂತಹ ಹಬ್ಬ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ದೇಸೀ ವೈದ್ಯಕೀಯ ಸಂಗತಿಗಳು ತಳುಕು ಹಾಕಿಕೊಂಡಿವೆ.
ಶಿಶಿರ ಋತು ಎಂದರೆ ಚಳಿಗಾಲ. ಮರಗಿಡಗಳ ಹಾಗೆಯೇ ಮೈ ಮನಗಳು ಮುದುರಿದ್ದ ಋತು ಅದು. ಆಗ ದೇಹದ ತುಂಬ ಸಂಚಯಗೊಂಡ ಜಿಡ್ಡು, ಅಂಟು, ಕಫವು ಸೂರ್ಯನ ಪ್ರಖರತೆಯಿಂದ ಕರಗತೊಡಗುತ್ತದೆ. ಆ ಋತುವೇ ವಸಂತ. ಹಾಗಾಗಿ ಜಾಠರಾಗ್ನಿ ಎಂದರೆ ಹೊಟ್ಟೆ ಹಸಿವು ಕೆಡುತ್ತದೆ, ಕುಗ್ಗುತ್ತದೆ. ಆಗ ಆಮ ಸಂಚಯ. ಅಜೀರ್ಣ ಸಹಜ. ಅದರಿಂದ ಆಮಯ(ರೋಗ)ಗಳ ಸರಮಾಲೆ ಉದ್ಭವವಾಗುತ್ತದೆ. ಆದ್ದರಿಂದ ಈ ದಿನಮಾನದಲ್ಲಿ ಲಘು ಆಹಾರಗಳಷ್ಟೆ ಸಾಕಾಗುತ್ತದೆ. ಮೆಣಸು ಕಾಳು ಪುಡಿ(ಪೆಪ್ಪರ್) ಹಾಕಿದ ಬೆಲ್ಲದ ಪಾನಕ ಕೊಡುವ ಸಂಪ್ರದಾಯ ದೇಗುಲಗಳ ವಸಂತೋತ್ಸವದಲ್ಲಿದೆ. ಪಾನಕದಲ್ಲಿ ಬಿಸಿ ಬಿಸಿ ನೀರು, ಬೆಲ್ಲ ಮತ್ತು ಕಾಳುಮೆಣಸು ಪುಡಿಗಳಷ್ಟೆ ಇರುತ್ತವೆ. ಮನೆಗೆ ಬಂದ ಅತಿಥಿಗಳಿಗೆ, ಮನೆಯವರಿಗೆ ಅಂಥ ಕಷಾಯ ಚೈತನ್ಯದಾಯಕ. ಕಡುಬಿಸಿಲಿನ ಬೇಗೆ ಮತ್ತು ಆಯಾಸ ಪರಿಹಾರಿ. ಕಫ ವಿಲಯನಕಾರಿ. ಬಿಸಿ ನೀರಿಗೆ ಶುಂಠಿ ಹಾಕಿ ಕುಡಿದರೆ ಕೂಡಾ ಅದೇ ತರಹದ ಗುಣಗಳಿವೆ. ಶುಂಠಿಯ ಪಾನಕ ಸೇವನೆಗೆ ಯೋಗ್ಯ. ಕಫ ಮರ್ದನಕ್ಕೆ ಜೇನಿಗಿಂತ ಉತ್ತಮವಾದದ್ದು ಬೇರೊಂದಿಲ್ಲ. ಆದರೆ ಹಳೆಯ ಜೇನು ತುಂಬ ಹಿತಕರ.
ಬೇವಿಗಿಂತ ಕಹಿ ವಸ್ತು ಬೇರಾವುದಿದೆ? ಅಂಥ ಬೇವಿನ ಬಳಕೆ ಯುಗಾದಿಯ ಸಂದರ್ಭದಲ್ಲಿ ಪ್ರಸಿದ್ಧ! ಹಾಗೆಯೇ ಬೆಲ್ಲಕ್ಕಿಂತ ಮಧುರ ವಸ್ತುವಿಲ್ಲ. ಬೇವಿನ ಮರದ ಎಳೆ ಚಿಗುರಗಳನ್ನು ಬೆಲ್ಲದ ಸಂಗಡ ಕೂಡಿಸಿ, ಸಾಂಕೇತಿಕವಾಗಿ ತಿನ್ನುವೆವು. ಅದರಲ್ಲಿಯೇ ಯುಗಾದಿ ಹಬ್ಬ ಮುಗಿಸುತ್ತೇವೆ. ಆದರೆ ಸತ್ಯ ಅಷ್ಟೇ ಅಲ್ಲ. ಅಂಥ ಕಹಿರಸವನ್ನು ನಿತ್ಯ ಸೇವಿಸಬೇಕು. ವಸಂತ ಋತು ಕಳೆಯುವವರೆಗೂ ಕಹಿಯ ಸೇವನೆ ಇರಬೇಕು. ಇದು ಆರೋಗ್ಯ ಸೂತ್ರದ ಪರಿಪಾಲನೆ. ನಿತ್ಯವೂ ಬೇವಿನಂಥ ಕಹಿಪದಾರ್ಥ ಸೇವಿಸಿದರಾಯಿತು. ಅದೇನು ಮುಷ್ಟಿಗಟ್ಟಲೆ ಬೇಡ. ಕಫ ಕರಗಿಸಲು ಒಂದೈದು ಗ್ರಾಂ ಸೇವನೆ ಮಾತ್ರ ಸಾಕು. ಅಮೃತಬಳ್ಳಿಯ ಎಲೆ, ಕಾಂಡ ಕೂಡ ಅತ್ಯಂತ ಕಹಿ. ನಾವು ಪೇಟೆಯವರು. ಇವೆಲ್ಲ ಸಿಗದು ಅಂದಿರಾ? ಅಡುಗೆ ಮನೆಯ ಮೆಂತ್ಯೆ ಇದೆಯಲ್ಲ. ಅದಕ್ಕಿಂತ ಕಹಿ ಸಂಭಾರ ಬೇರೆ ಇಲ್ಲ. ಅದರ ಸೇವನೆಯಿಂದ ಬಿಸಿಲುಗಾಲದ ಬೇಗೆ, ಬವಣೆ ಮತ್ತು ಜ್ವರ, ನೆಗಡಿ ಕಾಯಿಲೆ, ಮಲಬದ್ಧತೆ, ಮೂಲವ್ಯಾಧಿಯ ರಕ್ತಸ್ರಾವ ತಪ್ಪಿಸಬಹುದು ನೋಡಿ.
ಯುಗಾದಿ/ವಸಂತ ಋತು ಅಂದರೆ ಕಡು ಬಿಸಿಲಿನ, ಭಣ ಭಣ ಧಗೆಯ ಒಣ ಹವೆಯ ದಿನಗಳು. ಉತ್ತರದ ಜಿಲ್ಲೆಗಳಲ್ಲಂತೂ ಇನ್ನೂ ಹೆಚ್ಚಿನ ತಾಪಮಾನ. ಉತ್ತರ ಪ್ರದೇಶ, ಬಿಹಾರ, ಬಂಗಾಲದ ಶ್ರಮಾವಲಂಬಿ ಜನರು ಬಹಳ ಇಷ್ಟ ಪಡುವ ಒಂದು ಪಾನೀಯ ಇದೆ. ಅದನ್ನು ಅವರು ಸತ್ತು ಎನ್ನುತ್ತಾರೆ. ಅದನ್ನು ಹೇಗೆ ತಯಾರಿಸುತ್ತಾರೆ ಗೊತ್ತೆ? ಕಡಲೆಯ ಹಿಟ್ಟನ್ನು ನೀರಿನಲ್ಲಿ ಕದಡಿಸುವರು. ಅದಕ್ಕೆ ಲಿಂಬೆ ರಸ ಹಿಂಡುವರು. ಲೋಟದ ತುಂಬ ತುಂಬಿ ಕೊಡುತ್ತಾರೆ. ಯುಗಾದಿಯ ಒಬ್ಬಟ್ಟೂ ಅಂತಹದೇ ಒಂದು ತಿಂಡಿ. ಬೆಲ್ಲದ ಬಳಕೆಯಿಂದ ಕಫ ಕರಗುತ್ತದೆ. ಕಡಲೆಯ ಬಳಕೆಯಿಂದ ದೇಹದ ವಿಷ ತತ್ವ ಕಳೆಯುತ್ತದೆ. ಕಡಲೆಯ ಬಳಕೆಗೆ ನಮ್ಮಲ್ಲಿ ಅಷ್ಟು ಮಹತ್ವ ಇಲ್ಲ. ಉತ್ತರದ ಸತ್ತು ನಮ್ಮ ಹಾದಿ ಬೀದಿಯಲ್ಲೂ ಪರಿಚಯಿಸಲು ಅವಕಾಶ ಇದೆ. ಹಬ್ಬ, ಮದುವೆಯ ಅಡುಗೆಯ ಕಡಲೆಯ ಬೇಳೆಯ ಕೋಸಂಬರಿಯ ಬಳಕೆ ಕೂಡ ಅಂಥಹುದೇ ವಿಷ ಪರಿಹಾರಿ ಆಶಯದ್ದು.
ಹಿತಮಿತವಾದ ಲಘು ವ್ಯಾಯಾಮ ಮಾತ್ರ ಬೇಸಿಗೆಗೆ ಸೀಮಿತವಾಗಿರಲಿ. ಹದ ವೇಗದ ನಡಿಗೆ, ಸೂರ್ಯ ನಮಸ್ಕಾರಗಳು ಶಕ್ತಿ ಇದ್ದವರಿಗೆ ಮಾತ್ರ ಶಕ್ಯ. ಹಾಗೆಂದು ಕಿಲೋಮೀಟರ್‌ಗಟ್ಟಲೆ ಏದುಬ್ಬಸ ಪಡುತ್ತಾ ದೂರದ ನಡಿಗೆ ಖಂಡಿತ ತರವಲ್ಲ. ಹಣೆ ಮತ್ತು ಕಂಕುಳಲ್ಲಿ ಬೆವರೊಡೆದರೆ ಸಾಕು. ಅದು ಕೂಡಲೆ ನಡಿಗೆ ನಿಲ್ಲಿಸಬೇಕು ಎಂಬುದರ ಮುನ್ಸೂಚನೆ. ಎಣ್ಣೆ ಸ್ನಾನಕ್ಕಿಂತ ಹದ ಉಗುರು ಬಿಸಿ ನೀರ ಸ್ನಾನ ಸಾಕು. ಮೈಗೆ ಕಡಲೆಯ ಅಥವಾ ಸೀಗೆಯ ಹಿಟ್ಟು ಉಜ್ಜಿಕೊಳ್ಳುತ್ತಾ ಮೈತೊಳೆಯಿರಿ. ಕಫ ಸಂಚಯ ಮತ್ತು ಅನಗತ್ಯ ಕೊಬ್ಬು ಕರಗಲು ಅದು ಉಪಾಯ. ಸ್ನಾನದ ಅನಂತರ ಕರ್ಪೂರ, ಶ್ರೀಗಂಧ, ಅಗುರು, ಕುಂಕುಮ ಕೇಸರದ ಲೇಪನದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಅದರಿಂದ ಮನೋಲ್ಲಾಸ. ಚರ್ಮ ಕಾಯಿಲೆಗೆ ತಡೆ. ಆಯುರ್ವೇದ ಶಾಸ್ತ್ರದಲ್ಲಿ ವಸಂತ ವಮನ ಎಂಬ ಒಂದು ಸಂಗತಿ ಇದೆ. ವಸಂತ ಕಾಲದ ಕಫ ಸಂಚಯ ಹೋಗಲಾಡಿಸಲು ಕೈಗೊಳ್ಳುವ ಉಪಾಯ. ಪಂಚಕರ್ಮದ ಮೊದಲ ಚಿಕಿತ್ಸೆಯಾದ ವಮನ ಅಂದರೆ, ದೋಷ ಹೊರಹಾಕುವ ವಾಂತಿ ಮಾಡಿಸುವ ಚಿಕಿತ್ಸೆ. ಅದು ರೋಗಿಗಳಿಗೆ ಮಾತ್ರ ಅಲ್ಲ. ರೋಗ ಬರದಿರಲು ಮಾಡುವ ಸ್ವಸ್ಥರಿಗೆ ಕೈಗೊಳ್ಳುವ ಚಿಕಿತ್ಸೆ. ಮೂಗಿಗೆ ಹಾಕುವ ತೀಕ್ಷ್ಣ ತೈಲಾದಿಗಳ ನಸ್ಯಕರ್ಮ ಚಿಕಿತ್ಸೆ ಕೂಡಾ ವಸಂತ ಹಬ್ಬದಲ್ಲಿ ಸಮಯೋಚಿತ. ಇದು, ತಲೆಯ ದೋಷ ಸಂಗ್ರಹ ಹೊರಹಾಕುವ ಉಪಾಯವೂ ಆಗಿದೆ.
ಮಡೆಹಾಗಲ, ಹಾಗಲ, ಬೂದುಗುಂಬಳ, ಹೀರೆ, ಸೋರೆ, ಬದನೆ, ಬಾಳೆಯ ಕಾಯಿಗಳಂಥ ಕಹಿ, ಒಗರು ರಸದ ತರಕಾರಿಗಳು ವಸಂತ ಋತುವಿನಲ್ಲಿ ಅಡುಗೆಗೆ ಸೂಕ್ತ. ಮಾವಿನ ಕಾಯಿ ಮತ್ತು ಹಣ್ಣುಗಳೊದಗುವ ಕಾಲವಿದು. ಇಷ್ಟಾನುಸಾರ ಮೆಣಸು ಕಾಳು, ಶುಂಠಿ ಸಂಗಡ ಬಳಸಬಹುದು. ಅದರಿಂದ ಹೃದಯಕ್ಕೆ ಬಲ ಹೆಚ್ಚುತ್ತದೆ. ಕೋಕಂ ಎಂಬ ಹುಳಿ ಹಣ್ಣಿನ ಕಾಲ ಇದು. ಮುರುಗಲ ಎಂದರೂ ಅದೇನೆ. ಅದರ ಶರಬತ್ ಸೇವಿಸಿ. ಹೃದಯದ ಕಸುವು ಹೆಚ್ಚಿಸಕೊಳ್ಳಿರಿ. ಜೇನಿಗೆ ಜಲ ಕೂಡಿಸಿ ಬೇಸಿಗೆಯ ತಾಪ ಕಳೆಯಲು ಮತ್ತು ದೇಹ ತಂಪಾಗಿಸಲು ಸೇವಿಸಬಹುದು. ಬೇಸಿಗೆಯಲ್ಲಿ ಜೇನಿನ ಅತಿ ಬಳಕೆ ನಿಷಿದ್ಧ. ಸೂರ್ಯ ತಲುಪದ ಘನ ಕಾನನದಲ್ಲಿ ವನವಿಹಾರ, ತಂಪು ಜಾಗದಲ್ಲಿ(ಸಮ್ಮರ್ ಕಾಟೇಜ್) ವಾಸದ ಸಂದೇಶಗಳು ಆಯುರ್ವೇದ ಸಂತೆಗಳಲ್ಲಿವೆ. ನಡು ಮಧ್ಯಾಹ್ನದ ಬಿಸಿಲ ಧಗೆಗೆ ಅಂತಹ ನೆರಳಡಿಯಲ್ಲಿ ಕಾಲಕ್ಷೇಪ ಸೂಕ್ತ.
ಹಿಂದೆ ವನಭೋಜನ ಎಂಬ ಪರಿಕಲ್ಪನೆ ಇತ್ತು. ಊರಿನ ಮಂದಿಯೆಲ್ಲ ಕಾಡಿನ ಪರಿಸರದಲ್ಲಿ ಸೇರಿ ಕೂಡಿ ಕಲೆತು ಹಬ್ಬ ಮಾಡುತ್ತಿದ್ದರು. ಅಂತಹ ಗೋಷ್ಟಿ ಕಲಾಪವು ಇಂದು ನಿನ್ನೆಯದಲ್ಲ. ಗುಪ್ತರ ಯುಗದ ಪಳಿಯುಳಿಕೆ. ಇಂದಿಗೂ ಗ್ರಾಮಾಂತರ ಪ್ರದೇಶದ ಎಲ್ಲ ಜಾತ್ರೆ, ಊರಹಬ್ಬ ಆಚರಣೆ ಕಡು ಬೇಸಿಗೆಯಲ್ಲಿಯೇ ತಾನೆ? ಹೀಗೆ ದೇಹದ ಮತ್ತು ದೇಶದ, ಗ್ರಾಮದ ಆರೋಗ್ಯ ಪರಿಕಲ್ಪನೆ ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕ. ಬೇಸಿಗೆಯ ದಿನಗಳಲ್ಲಿ ಹಗಲು ನಿದ್ದೆ ಸಲ್ಲದು. ಅದರಿಂದ ಮತ್ತೆ ಕಫ ಸಂಚಯ ಹೆಚ್ಚುತ್ತದೆ. ಹೊಟ್ಟೆ ಬಿರಿವಷ್ಟು ಉಣದಿರಿ. ಶೀತದ ಮತ್ತು ಹುಳಿ ರಸದ ಆಹಾರ ಖಂಡಿತ ಬೇಡ. ಆಹಾರದಲ್ಲಿ ಕೊಬ್ಬಿನಂಶಕ್ಕೆ ಸಹ ಅಂಕುವಿಶರಲಿ. ಹೀಗೆ ಈ ಬಾರಿಯ ಯುಗಾದಿಯಲ್ಲಿ ಹೊಸ ಸಂಕಲ್ಪ ತೊಡೋಣ.
ಏನಂತೀರಿ?
ಡಾ.ಸತ್ಯನಾರಾಯಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.