ಉರುಳೇ ಇವರಿಗೆ ಕರುಳು!
Team Udayavani, Nov 9, 2019, 5:13 AM IST
ಡಾ. ರಾಜ್‌ಕುಮಾರ್ ನಂಜನಗೂಡಿಗೆ ಹೋದಾಗೆಲ್ಲ ಉರುಳು ಸೇವೆ ಮಾಡುತ್ತಿದ್ದದ್ದು ನಿಮಗೆ ಗೊತ್ತೇ ಇದೆ. ಅದೇ ರೀತಿ ಬೆಂಗಳೂರಿನ ಹನುಮಂತ ನಗರದ ಗೋಪಾಲಕೃಷ್ಣ ಆಚಾರ್‌ಗೆ ದೇವಸ್ಥಾನ ಕಂಡರೆ ಸಾಕು ; ಉರುಳು ಸೇವೆ ಮಾಡಲು ನಿಂತು ಬಿಡುತ್ತಾರೆ. ಸುಮಾರು 15 ವರ್ಷಗಳಿಂದ ಉರುಳು ಸೇವೆ ಮಾಡುತ್ತಲೇ ಇರುವ ಇವರು, ಮಂತ್ರಾಲಯದಲ್ಲಿ 13 ಸಾವಿರ, ತಿರುಪತಿಯಲ್ಲಿ 2 ಸಾವಿರ ಬಾರಿ ಉರುಳು ಸೇವೆ ಮಾಡಿದ್ದಾರೆ! ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ಉರುಳು ಸೇವೆ ಮಾಡಿರುವುದು ಇವರ ಹೆಗ್ಗಳಿಕೆ. ಇವರ ಉರುಳುವ ಹಿಂದಿನ ಸೇವಾ ರಹಸ್ಯ ಏನು? ಇಲ್ಲಿದೆ ಮಾಹಿತಿ.
ನಿಮಗೆ ತಿರುಮಲ ದೇಗುಲದ ಪ್ರಾಕಾರದ ಸುತ್ತಳತೆ ಎಷ್ಟು ಅಂತ ಗೊತ್ತಾ? ಎನ್.ಆರ್. ಕಾಲೋನಿಯ ರಾಘವೇಂದ್ರ ಸ್ವಾಮಿ ಮಠದ ಪ್ರಾಕಾರದ ಸುತ್ತಳತೆ? ಅದೆಲ್ಲ ಬಿಡಿ, ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ ಉರುಳು ಸೇವೆ ಮಾಡುತ್ತಾರಲ್ಲ; ಆ ಜಾಗದ ವಿಸ್ತೀರ್ಣ ಎಷ್ಟಿದೆ ಅಂತ ತಿಳಿದಿದೆಯಾ? ನೀವು ನೂರು ಬಾರಿ ಹೋದರೂ ಅದು ತಿಳಿಯಲ್ಲ. ಏಕೆಂದರೆ, ನಾವೆಲ್ಲ ಬರೀ ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿಕೊಂಡು ಬರುತ್ತೇವೆ. ಆದರೆ, ಬೆಂಗಳೂರಿನ ಈ ಗೋಪಾಲಕೃಷ್ಣ ಆಚಾರ್ ಅವರನ್ನು ಕೇಳಿ ನೋಡಿ. ಕರ್ನಾಟಕದ ಬಹುತೇಕ ದೇವಾಲಯಗಳ ಪ್ರಾಂಗಣಗಳ ಅಳತೆ ಇವರ ನಾಲಿಗೆಯ ಮೇಲಿದೆ.
ತಿರುಪತಿಯ ಮಹಾಪ್ರಾಕಾರ ಒಂದೂ ಕಾಲು ಕಿ.ಮೀ., ಮಂತ್ರಾಲಯದ ಪ್ರಾಂಗಣ ಕಾಲು ಕಿ.ಮೀ., ಅಂತೆಲ್ಲ ಹೇಳುತ್ತಾ ಹೋಗುತ್ತಾರೆ. ಮಂತ್ರಾಲಯಕ್ಕೆ ಪ್ರತಿವಾರ ಹೋಗಿ ಉರುಳು ಸೇವೆ ಮಾಡಿದ್ದಾರೆ. ಹೀಗಾಗಿ, ಇವರ ಮೈ, ಕೈ ಕರ್ನಾಟಕದ ಬಹುತೇಕ ದೇವಾಲಯಗಳ ಪ್ರಾಕಾರಗಳಿಗೆ ಒಗ್ಗಿ ಹೋಗಿದೆ; ಉರುಳು ಸೇವೆಯಿಂದ. ಮಂತ್ರಾಲಯ ಒಂದರಲ್ಲೇ 13ಸಾವಿರ, ತಿರುಪತಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಉರುಳು ಸೇವೆ ಮಾಡಿದ ಹೆಗ್ಗಳಿಕೆ ಈ ಆಚಾರ್‌ರದ್ದು. ಉರುಳುವುದು ಇವರಿಗೆ ನೀರು ಕುಡಿದಂತೆ. ಮೈ ಕೈ ನೋವು, ಮಂಡಿ ನೋವು ಬಿಲ್‌ಕುಲ್ ಯಾವುದೂ ಇವರ ಬಳಿ ಸುಳಿಯುವುದಿಲ್ಲ.
ಪ್ರತಿ ವಾರ ತಿರುಪತಿಗೆ ಗೋಪಾಲ ಕೃಷ್ಣ ಆಚಾರ್ಯರು ಈಗ ಪ್ರತಿವಾರ ತಿರುಪತಿಯಾತ್ರೆ ಮಾಡುತ್ತಿದ್ದಾರೆ. ತಿರುಮಲದ ಪ್ರಾಂಗಣದಲ್ಲಿ ಉರುಳು ಸೇವೆಗೆಂದೇ ಮೂರು ಪ್ರಾಕಾರಗಳಿವೆ. ಮಹಾಪ್ರಾಕಾರ, ಮಧ್ಯಮ ಪ್ರಾಕಾರ, ಒಳಪ್ರಾಕಾರ ಅಂತ. ಈ ಮೂರರಲ್ಲೂ ಆಚಾರರು ಉರುಳು ಸೇವೆ ಮಾಡುತ್ತಲೇ ಇದ್ದಾರೆ. ಪ್ರತಿ ಸೋಮವಾರ ಬೆಳಗ್ಗೆ 6 ಗಂಟೆಗೆ ರೈಲು ಹತ್ತಿದರೆ, ಮಂಗಳವಾರ ಬೆಳಗಿನ ಜಾವ ಉರುಳು ಸೇವೆ ಪೂರೈಸಿ, ದರ್ಶನ ಮಾಡಿ, ಮಧ್ಯಾಹ್ನ 2 ಗಂಟೆಗೆ ಬೆಂಗಳೂರಲ್ಲಿ ಹಾಜರ್. ಆಕಾಶವೇ ಕಳಚಿ ಬಿದ್ದರೂ ವಾರದ ಈ ಎರಡೂ ದಿನ ಉರುಳು ಸೇವೆ ಮಾಡದೇ ಇರುವುದೇ ಇಲ್ಲ.
ತಿರುಪತಿಯಲ್ಲಿ ಮಂಗಳವಾರ ಒಂದು ದಿನ ಮಾತ್ರ 750 ಮಂದಿಗೆ ಉರುಳು ಸೇವೆಗೆ ಅವಕಾಶ ಇದೆ. ಆಚಾರರು ಇದರಲ್ಲಿ ಬಹಳ ಸೀನಿಯರ್. ಸುಮಾರು 15 ವರ್ಷದಿಂದ ಉರುಳು ಸೇವೆ ಮಾಡುತ್ತಿದ್ದಾರೆ. ಈಗಾಗಲೇ 672ವಾರಗಳು ಮುಗಿದಿವೆ. ಪ್ರತಿ ಸಾರಿ ಹೋದಾಗಲೂ ಎರಡು , ಮೂರು ಉರುಳು ಸೇವೆ ಗ್ಯಾರಂಟಿ. ಹೀಗಾಗಿ ಎರಡು ಸಾವಿರ ಉರುಳುಸೇವೆ ಪೂರೈಸಿದ ಹೆಗ್ಗಳಿಕೆ ಇವರ ಪಾಲಾಗಿದೆ. ತಿರುಪತಿಯಲ್ಲಿ ಒಂದು ಸಾರಿ ಉರುಳು ಸೇವೆ ಮಾಡಲು ಆಚಾರರಿಗೆ ಕೇವಲ 23 ನಿಮಿಷ ಸಾಕಂತೆ. ಬೇರೆಯವರಿಗೆ ಕನಿಷ್ಠ ಒಂದು ಗಂಟೆಯಾದರೂ ಬೇಕೇಬೇಕು. ಅಂದರೆ ಇವರ ದೇಹ ಅಷ್ಟರ ಮಟ್ಟಿಗೆ ಪಳಗಿ ಹೋಗಿದೆ.
ನಿಯಮ ಇದೆ: ರಾಯರು ಯಾವ ದೇವಸ್ಥಾನಕ್ಕೆ ಕಾಲಿಟ್ಟರೂ ಸಾಕು, ಮೊದಲು ದೇವರ ದರ್ಶನ: ಆನಂತರ, ಉರುಳು ಸೇವೆ ಮಾಡಲು ಸಜ್ಜಾಗಿ ಬಿಡುತ್ತಾರೆ. ಸ್ನಾನ ಮಾಡದೇ ಬಿಲ್‌ಕುಲ್ ಉರುಳು ಸೇವೆ ಮಾಡುವುದಿಲ್ಲ. ತಿರುಪತಿಯಲ್ಲಿ ರಾತ್ರಿ ಒಂದು ಗಂಟೆ ಹೊತ್ತಿಗೆ ಪುಷ್ಕರಿಣಿಯಲ್ಲಿ ಸ್ನಾನ ಮಾಡಿ, ಬಿಳಿ ಪಂಚೆ ಉಟ್ಟು, ಉರುಳುಸೇವೆಗೆ ನಿಲ್ಲುತ್ತಾರೆ. ಹಾಗೆಯೇ, ಮಂತ್ರಾಲಯಕ್ಕೆ ಹೋದರೆ, ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಉರುಳು ಸೇವೆಗೆ ಮುಂದಾಗುತ್ತಾರಂತೆ. ಆಚಾರ್ಯರು ಕೊಲ್ಹಾಪುರ ಮಹಾಲಕ್ಷ್ಮೀ ದೇವಾಲಯ ಬದರೀನಾಥ್, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಬೆಂಗಳೂರಿನ ಎನ್.ಆರ್.ಕಾಲೋನಿ ರಾಯರಮಠ, ವಿದ್ಯಾಪೀಠದ ಶ್ರೀ ಕೃಷ್ಣ ಮಠ, ಉಡುಪಿ ಕೃಷ್ಣ ಮಠದಲ್ಲಿ ಉರುಳು ಸೇವೆ ಮಾಡುತ್ತಲೇ ಇದ್ದಾರೆ.
ಆರೋಗ್ಯಕ್ಕೆ ಒಳ್ಳೆಯದು..: ಇಷ್ಟೊಂದು ಉರುಳು ಸೇವೆ ಮಾಡ್ತೀರಲ್ಲ, ನಿಮಗೆ ಏನೂ ಆಗಲ್ವಾ? ಎಂದು ಆಚಾರರನ್ನು ಕೇಳಿದರೆ-ಅವರ ಬಾಯಿಂದ ಮಾತು ಹೀಗೆ ಉರುಳಿತು. “ನನಗೆ ಈಗ 58 ವರ್ಷ. ಈವರೆಗೆ ಬಿ.ಪಿ, ಶುಗರ್ ಯಾವುದೂ ಬಂದಿಲ್ಲ. ಅದಕ್ಕೆ ಕಾರಣ ಉರುಳು ಸೇವೆ. ಹಾಗಂತ ನಾನು ಆರೋಗ್ಯಕ್ಕಾಗಿಯೇ ಉರುಳು ಸೇವೆ ಮಾಡುತ್ತಿದ್ದೀನಿ ಅಂತಲ್ಲ. ದೇವರ ಮೇಲಿನ ಭಕ್ತಿಯಿಂದಲೂ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಸುಮಾರು 15 ವರ್ಷಗಳಿಂದ ಉರುಳು ಸೇವೆ ಮಾಡುತ್ತಿರುವ ಆಚಾರ್ಯರು, ಆರ್‌ಬಿಐನಲ್ಲಿ ಉದ್ಯೋಗಿ ಆಗಿದ್ದರು. ಒಂದು ಕಡೆ ಉದ್ಯೋಗ ಮತ್ತೂಂದು ಕಡೆ ಉರುಳುವ ಹವ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು.
“ಶನಿವಾರ-ಭಾನುವಾರ ರಜಾ ಇರುತ್ತಿತ್ತು. ಆಗ ತಿರುಪತಿಗೆ ಹೋಗಿ ಎರಡು ದರ್ಶನ- ಐದು ಉರುಳು ಸೇವೆ ಮಾಡಿ, ಅಲ್ಲಿಂದ ಮಂತ್ರಾಲಯಕ್ಕೆ ಹೋಗಿ ನೂರೆಂಟು ಉರುಳು ಸೇವೆ ಮಾಡಿಕೊಂಡು, ಸೋಮವಾರ ಹಿಂತಿರುಗುತ್ತಿದ್ದೆ ‘ ಅಂತ ನೆನಪಿಸಿ ಕೊಳ್ಳುತ್ತಾರೆ ಆಚಾರ್. ಇವರಿಗೆ ಜಯನಗರ 5ನೇ ಬ್ಲಾಕ್‌ನ ರಾಘವೇಂದ್ರ ಸ್ವಾಮಿ ಮಠದಿಂದ ಹರಿ ಭಕ್ತ ಶಿಕಾಮಣಿ ಅನ್ನೋ ಬಿರುದು ಸೇರಿದಂತೆ ಹಲವು ಪ್ರಶಸ್ತಿಗಳು ದೊರೆತಿವೆ. ಇದರ ಜೊತೆಗೆ, ಆಚಾರ್ ನರ್ತನ ಸೇವೆ ಕೂಡ ಮಾಡುತ್ತಿದ್ದಾರಂತೆ. ಈಗಾಗಲೇ ರಾಜ್ಯದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಕೊಟ್ಟೂ ಹೆಸರು ಮಾಡಿದ್ದಾರೆ!
ಉರುಳುವುದು ಹೇಗೆ?: ಉರುಳು ಸೇವೆ ಮಾಡುವ ಮೊದಲು ಲಘುವಾಗಿ ಆಹಾರ ಸೇವಿಸಬೇಕು. ಉಪವಾಸ ಇದ್ದರೆ ಇನ್ನೂ ಒಳಿತು. ಮೊದಲ ಬಾರಿಗೆ ಉರುಳು ಸೇವೆ ಮಾಡುವಾಗ ಒಂದಿಷ್ಟು ಮೈ-ಕೈ ನೋವು ಬರುತ್ತದೆ. ಏಕೆಂದರೆ ಎಂದೂ ಬಗ್ಗಿರದ ದೇಹ ಮೊದಲ ಸಲ ಹೀಗೆ ಮಾಡುವಾಗ ನೋವು ಸಹಜ. ಆದರೆ ಅದು ಗಂಭೀರ ಪ್ರಮಾಣದಲ್ಲಿ ಆಗದಂತೆ ಎಚ್ಚರ ವಹಿಸಿದರೆ ಆಯಿತು. ಕೆಲವರಿಗಂತೂ ಮೊದಲ ಬಾರಿ ಉರುಳುವಾಗ ವಾಂತಿ ಆಗುವ ಸಾಧ್ಯತೆಯೂ ಉಂಟು.
* ಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.