ಯಕ್ಷ ಟೀಚರ್: ಟೆಕ್ಕಿ ಕಟ್ಟಿದ ಯಕ್ಷ ದೇಗುಲ
Team Udayavani, Nov 24, 2018, 12:18 PM IST
ಯಕ್ಷಗಾನ ಗಂಡುಕಲೆಯೆಂದೇ ಪ್ರತೀತಿ. ಆದರೆ, ಇತ್ತೀಚೆಗೆ ಹೆಂಗಳೆಯರೂ ರಂಗಸ್ಥಳದಲ್ಲಿ ರಾರಾಜಿಸುತ್ತಿದ್ದಾರೆ. ಅಂಥ ಕಲಾವಿದೆಯರಲ್ಲಿ ಪ್ರಿಯಾಂಕ ಕೆ. ಮೋಹನ್ ಕೂಡ ಒಬ್ಬರು. ಬೆಂಗಳೂರಿನಲ್ಲಿ ಹುಟ್ಟಿ- ಬೆಳೆದು, ಸಾಫ್ಟ್ವೇರ್ ಉದ್ಯೋಗಿಯಾಗಿದ್ದುಕೊಂಡು ಅವರು ಕಲೆಯನ್ನು ಆರಾಧಿಸಿದ ರೀತಿ ಅನನ್ಯ. ಹಲವಾರು ವರ್ಷಗಳಿಂದ, ಉದ್ಯೋಗದ ಜೊತೆಜೊತೆಗೆ ಯಕ್ಷ ಶಿಕ್ಷಕಿಯಾಗಿದ್ದ ಪ್ರಿಯಾಂಕ, ಇತ್ತೀಚೆಗೆ ಉದ್ಯೋಗಕ್ಕೆ ಗುಡ್‌ಬೈ ಹೇಳಿ, ಸಂಪೂರ್ಣವಾಗಿ ಯಕ್ಷಗಾನದಲ್ಲಿ ತೊಡಗಿಕೊಂಡಿದ್ದಾರೆ.
ಪ್ರಿಯಾಂಕ, “ಯಕ್ಷದೇಗುಲ’ ಸಂಸ್ಥೆಯ ಸ್ಥಾಪಕ ಕೆ. ಮೋಹನ್ ಅವರ ಪುತ್ರಿ. ತಂದೆಯೇ ಆಕೆಯ ಮೊದಲ ಯಕ್ಷ ಗುರು. ನಂತರ, ಗುರು ಬನ್ನಂಜೆ ಸಂಜೀವ ಸುವರ್ಣ, ಕೃಷ್ಣಮೂರ್ತಿ ತುಂಗ, ಪ್ರಾಚಾರ್ಯ ಕೆ.ಪಿ. ಹೆಗಡೆಯವರಿಂದ ಯಕ್ಷಗಾನ ಕಲಿತು, ಹಿಮ್ಮೇಳ, ಮುಮ್ಮೇಳ, ಪ್ರಸಾಧನ, ಸಂಯೋಜನೆ ಮುಂತಾದ ಎಲ್ಲ ವಿಭಾಗಗಳಲ್ಲಿ ಪರಿಣತಿ ಪಡೆದರು. ಹಲವಾರು ವರ್ಷಗಳಿಂದ “ಯಕ್ಷದೇಗುಲ’ದಲ್ಲಿ ಶಿಕ್ಷಕಿಯಾಗಿರುವ ಈಕೆ, ಇಲ್ಲಿಯವರೆಗೆ 500ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಸುಭದ್ರೆಯಾಗಿ, ದ್ರೋಣ, ಧರ್ಮರಾಯ, ದುರ್ಯೋಧನನಾಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ. ಪ್ರಸಿದ್ಧ ರಂಗ ನಿರ್ದೇಶಕರಿಂದ ರಂಗ ತರಬೇತಿ ಪಡೆದು, ನಾಟಕಗಳಲ್ಲಿಯೂ ನಟಿಸಿದ್ದಾರೆ.
ಆನ್‌ಲೈನ್ ಯಕ್ಷ ತರಬೇತಿ ಯಕ್ಷಗಾನ ಕಲಿಯುವ ಆಸಕ್ತಿಯುಳ್ಳವರಿಗಾಗಿ, ಯೂಟ್ಯೂಬ್ ಚಾನೆಲ್ ತೆರೆದಿದ್ದು, ಸಣ್ಣ ವಿಡಿಯೊಗಳ ಮೂಲಕ ಯಕ್ಷಗಾನದ ಪ್ರಾಥಮಿಕ ತರಬೇತಿಯನ್ನೂ ನೀಡುತ್ತಿದ್ದಾರೆ ಪ್ರಿಯಾಂಕ. ತೆಂಕುತಿಟ್ಟು, ಬಡಗುತಿಟ್ಟು, ಮುಮ್ಮೇಳ, ಹಿಮ್ಮೇಳ, ಯಕ್ಷಗಾನ ಬೆಳೆದು ಬಂದ ರೀತಿ, ಇತಿಹಾಸದ ಕುರಿತು ವಿಡಿಯೊ ಮಾಡುವ ಆಲೋಚನೆ ಅವರಿಗಿದೆ. yakshadegula ಯೂಟ್ಯೂಬ್ ಚಾನೆಲ್‌ನಲ್ಲಿ ಅವರ ವಿಡಿಯೊಗಳನ್ನು ನೋಡಬಹುದು.
ಇಂದು ಕೃಷ್ಣಾರ್ಜನ ಕಾಳಗ
ಈಗಾಗಲೇ 50ಕ್ಕೂ ಹೆಚ್ಚು ಯಕ್ಷ ಪ್ರಸಂಗಗಳನ್ನು ಸಂಯೋಜಿಸಿರುವ ಪ್ರಿಯಾಂಕ, ಈಗ “ಕೃಷ್ಣಾರ್ಜುನ ಕಾಳಗ’ ಪ್ರಸಂಗವನ್ನು ಯಕ್ಷಪ್ರಿಯರ ಮುಂದಿಡುತ್ತಿದ್ದಾರೆ. ಇಂದು ಸಂಜೆಯ ಪ್ರದರ್ಶನದಲ್ಲಿ, ಸುಜಯೀಂದ್ರ ಹಂದೆ, ಶಿವಕುಮಾರ್ ಬೇಗಾರ್ ಮುಂತಾದ ಹಿರಿಯ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಖ್ಯಾತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ, ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಭಾಗವಹಿಸಲಿದ್ದಾರೆ.
ಎಷ್ಟೊಂದು ಕಲೆ- ಸಂಪ್ರದಾಯಗಳನ್ನು ನಾವು ಈಗಾಗಲೇ ಕಳೆದುಕೊಂಡು ಬಿಟ್ಟಿದ್ದೇವೆ. ಆಧುನಿಕತೆಯ ಎಲ್ಲ ಸವಾಲುಗಳನ್ನು ಮೀರಿ ಯಕ್ಷಗಾನ ಇನ್ನೂ ತನ್ನ ಛಾಪನ್ನು ಉಳಿಸಿಕೊಂಡಿದೆ. ಯಕ್ಷಗಾನ ಕೇವಲ ಕರಾವಳಿಯ ಕಲೆಯಲ್ಲ, ಇಡೀ ಕರ್ನಾಟಕದ ಸಂಸ್ಕೃತಿಯ ಒಂದು ಭಾಗ. ಈ ಕಲೆ ಮತ್ತಷ್ಟು ಜನರಿಗೆ ತಲುಪುವಂತಾಗಬೇಕು ಎಂಬುದು ನನ್ನ ಆಶಯ.
∙ಪ್ರಿಯಾಂಕ ಮೋಹನ್
ಯಾವಾಗ?: ನ. 24,
ಶನಿವಾರ, ಸಂಜೆ 6
ಎಲ್ಲಿ?: ಪರಂಪರಾ ಸಭಾಂಗಣ, #1259,
3ನೇ ಮುಖ್ಯರಸ್ತೆ, ಚೆನ್ನಮ್ಮನಕೆರೆ
ಹೆಚ್ಚಿನ ಮಾಹಿತಿಗೆ: 9448547237
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.