ಭೂಲೋಕದಲ್ಲಿ ಯಮರಾಜ…
Team Udayavani, Jul 28, 2018, 4:30 PM IST
ಯಮರಾಜ ಬೆಂಗಳೂರಿಗೆ ಬಂದಿದ್ದ! ಇಲ್ಲಿನ ಗಜಿಬಿಜಿ ರಸ್ತೆಗಳಲ್ಲಿ ಕಾಣಿಸಿಕೊಂಡು ಹಲೋ ಎಂದ! ಹೆಲ್ಮೆಟ್ ತೊಡದ ದ್ವಿಚಕ್ರ ವಾಹನ ಸವಾರರನ್ನು ನಿಲ್ಲಿಸಿ “ಯಮಲೋಕದಲ್ಲಿ ಜಾಗ ಇಲ್ಲ ಕಣÅಯ್ನಾ, ಶಿರಸ್ತ್ರಾಣ ಧರಿಸಿ ವಾಹನ ಚಲಾಯಿಸಿ’ ಎಂದು ಬುದ್ಧಿವಾದವನ್ನೂ ಹೇಳಿದ. ಯಮನ ವೇಷಧಾರಿಯ ಮೂಲಕ ಹೆಲ್ಮೆಟ್‌ನ ಪ್ರಾಮುಖ್ಯತೆಯ ಅರಿವು ಮೂಡಿಸಲು ಮುಂದಾಗಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಕ್ರಮದಿಂದ ಇದು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಯಮ ಬರೆದ ಕಾಲ್ಪನಿಕ ಪತ್ರವೊಂದು ನಮ್ಮ ಕೈ ಸೇರಿದ್ದು ಅದನ್ನು ಯಥಾವತ್ತಾಗಿ ನೀಡಿದ್ದೇವೆ. ಇದನ್ನು ಓದಿಯಾದರೂ ಹೆಲ್ಮೆಟ್ ಬಗ್ಗೆ ನಿರ್ಲಕ್ಷ್ಯ ತೋರುವುದಿಲ್ಲ ಎಂಬ ಆಶಾಬಾವ ನಮ್ಮದು.
ಎಂ.ಜಿ. ರೋಡಿನಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದೆ. ಸುತ್ತಮುತ್ತಲಿನ ಮನುಷ್ಯರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಒಬ್ಬ ಪುಟಾಣಿ ಹುಡುಗ, ತಾಯಿಯ ಬಳಿ “ಅಮ್ಮಾ, ಅಲ್ನೋಡು. ಯಾರೋ ಯಮನ ವೇಷ ಹಾಕಿಕೊಂಡು ಹೋಗ್ತಿದ್ದಾರೆ’ ಅಂತ ನಕ್ಕೂ ಬಿಟ್ಟ. ಅನೇಕರು ನನಗೆ ಮತಿ ಭ್ರಮಣೆ ಆಗಿದೆಯೇನೋ ಎಂದುಕೊಂಡಿರಲೂಬಹುದು. ಆದರೆ ಎಲ್ಲರೂ ಅಲ್ಲ. ಇಲ್ಲಿನ ರಸ್ತೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯುವುದು ಸಾಮಾನ್ಯವಾಗಿರುವುದರಿಂದ ಕೆಲವರಾದರೂ ನಾನು ಸಿನಿಮಾ ಪಾತ್ರಧಾರಿ ಅಂತ ಅಂದುಕೊಂಡಿರುತ್ತಾರೆ. ನಿಜ ಹೇಳಬೇಕೆಂದರೆ ನಾನು ಹೀಗೆಲ್ಲಾ ಹೊರಗಡೆ ಕಾಣಿಸಿಕೊಂಡವನೇ ಅಲ್ಲ. ನನ್ನ ಭೇಟಿಗೂ ಒಂದು ಕಾರಣವಿತ್ತು. ಬೆಂಗಳೂರಿನ ರಸ್ತೆಗಳನ್ನು ನಮ್ಮ ಯಮಪುರಿಯ ರಸ್ತೆಗಳಿಗೆ ಹೋಲಿಸುವುದನ್ನು ಕೇಳಿ ಕೇಳಿ ಬೇಸತ್ತು ಹೋಗಿದ್ದೆ. ಅದಕ್ಕೇ ಪ್ರತ್ಯಕ್ಷವಾಗಿ ನೋಡಿಕೊಂಡು ಹೋಗೋಣವೆಂದೇ ಬಂದಿದ್ದೆ. ಆದರೆ, ಒಂದು ಬಾರಿ ನಗರ ಪ್ರದಕ್ಷಿಣೆ ಹಾಕುವಷ್ಟರಲ್ಲಿ ಯಮಪುರಿಯ ರಸ್ತೆಗಳಿಗೂ ಬೆಂಗಳೂರಿನ ರಸ್ತೆಗಳಿಗೂ ಇರುವ ಸಾಮ್ಯತೆ ಕಂಡು ಚಕಿತಗೊಂಡಿದ್ದೆ.
ಚಿತ್ರಗುಪ್ತರಿಗೊಂದು ಜಂಗಮ ಕರೆ ಮಾಡಿ, ಅವರ ಲೆಕ್ಕಪುಸ್ತಕದಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡೆ. ಅವರು ಗಹಗಹಿಸಿ ನಕ್ಕರು. ಅದೂ ಗೊತ್ತಿಲ್ಲವೆ ಎಂದು ಅಣಕವಾಡಿದಂತಿತ್ತು ಅವರ ನಗು. ಬೆಂಗಳೂರೊಂದರಲ್ಲೇ ಅತ್ಯಧಿಕ ಸಂಖ್ಯೆಯ ಯಮಕಿಂಕರರು ನಿಯೋಜನೆಗೊಂಡಿದ್ದಾರೆ ಎಂದು ತಿಳಿದು ಅಬ್ಬಬ್ಟಾ ಎನಿಸಿತು. ಅವರಲ್ಲಿ ಕೆಲವರನ್ನು ಭೇಟಿ ಕೂಡಾ ಮಾಡಿದೆ. ತಾವು ಕರ್ತವ್ಯ ನಿರ್ವಹಿಸುವ ರಸ್ತೆ ಮೇಲೆ, ಇಂತಿಷ್ಟು ಸಮಯದಲ್ಲಿ ಏನಾದರೊಂದು ಅವಘಡ ಸಂಭವಿಸಿಯೇ ತೀರುತ್ತದೆ. ಹೀಗಾಗಿ ಬಿಡುವೇ ಇಲ್ಲದಷ್ಟು ಕೆಲಸ. ನನ್ನ ಜೊತೆ ಇನ್ನೊಬ್ಬ ಕಿಂಕರನನ್ನು ನಿಯೋಜಿಸಲು ಚಿತ್ರಗುಪ್ತರಲ್ಲಿ ಮನವಿ ಸಲ್ಲಿಸಿ ತಿಂಗಳುಗಳು ಕಳೆದಿವೆ ಎಂದೊಬ್ಬ ಕಿಂಕರ ಅಹವಾಲು ತೋಡಿಕೊಂಡ. ಅವನನ್ನು ಸಮಾಧಾನಿಸಿ ಕಳುಹಿಸಿದೆ. ಇಲ್ಲಿಯ ತನಕ ನಗರದಲ್ಲಿ ಸಂಭವಿಸಿರುವ ಅಪಘಾತಗಳ ಸಂಖ್ಯೆ 2,336. ಈಗ ಇನ್ನೂ ಜುಲೈ ತಿಂಗಳು, ಮುಂದೆ ಅರ್ಧ ವರ್ಷ ಕಳೆಯುವುದಿದೆ. ಅದು ಹೋಗಲಿ ಒಂದು ದಿನಕ್ಕೆ ಸಂಚಾರಿ ನಿಯಮ ಉಲ್ಲಂ ಸಿ ದಂಡಕ್ಕೆ ತುತ್ತಾಗುವವರ ಸಂಖ್ಯೆ ಎಷ್ಟಿರಬಹುದು, ಊಹಿಸಿ ನೋಡೋಣ: ಸುಮಾರು 1 ಲಕ್ಷ! ಅವರಲ್ಲಿ ಮುಕ್ಕಾಲು ಪಾಲು ದ್ವಿಚಕ್ರವಾಹನ ಸವಾರರು.
ನಮಗೆ ಯಾಕೆ ಮನುಷ್ಯರ ಉಸಾಬರಿ ಎಂದಿರಾ? ಅದಕ್ಕೂ ಕಾರಣವಿದೆ. ನಮ್ಮ ಯಮಪುರಿಯಲ್ಲೂ ದಿನೇ ದಿನೇ ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಮಸ್ಯೆಗಳೂ ಹೆಚ್ಚುತ್ತಿವೆ. ಈ ಕಾರಣಕ್ಕೇ ಮನುಷ್ಯರು ಹೆಚ್ಚು ಕಾಲ ಭೂಮಿ ಮೇಲೆಯೇ ಸುರಕ್ಷಿತವಾಗಿ ಬಾಳಲು ಉಪಾಯ ಹೇಳಿ ಕೊಡುತ್ತಿರುವುದು. ಎಲ್ಲಾ ಪ್ರಕರಣಗಳಲ್ಲಿಯೂ ಸಾವನ್ನು ತಡೆಯುವುದು ಅಸಾಧ್ಯ, ಆದರೆ ಅಪಘಾತದ ವಿಷಯದಲ್ಲಿ ತಡೆಯಬಹುದು. ಅಲ್ಲದೆ ಉಪಾಯ ತುಂಬಾ ಸರಳ- ಹೆಲ್ಮೆಟ್ ಧರಿಸುವುದು. ಹಿಮಾಲಯ ಹತ್ತಿ ಸಂಜೀವನಿ ತರಬೇಕಿಲ್ಲ. ವರ್ಷಗಟ್ಟಲೆ ಘೋರ ತಪಸ್ಸು ಕೂರಬೇಕಿಲ್ಲ. ನಿಮ್ಮನ್ನು ಶಿರಸ್ತ್ರಾಣ ಧರಿಸಲು ಪ್ರೇರೇಪಿಸಬಲ್ಲ ಮಾಹಿತಿಯೊಂದು ನನ್ನ ಬಳಿಯಿದೆ. ಅಪಘಾತಗಳಿಂದ ಪ್ರಾಣಾಪಾಯಕ್ಕೆ ತುತ್ತಾದವರಲ್ಲಿ ಶೇ 97ರಷ್ಟು ಮಂದಿ ಶಿರಸ್ತ್ರಾಣ ಧರಿಸದವರು. ಅಲ್ಲಿಗೆ ಶಿರಸ್ತ್ರಾಣದ ಮಹತ್ವ ಗೊತ್ತಾಗಿರಬೇಕಲ್ಲ.
ಎಲ್ಲಾ ಗೊತ್ತಿದ್ದೂ ಯಾಕೆ ಶಿರಸ್ತ್ರಾಣ ಧರಿಸುವುದಿಲ್ಲ ಎಂದು ಕುತೂಹಲವಾಯಿತು. ಚಿತ್ರಗುಪ್ತರಿಗೆ ಕರೆ ಮಾಡಲು ಮನಸ್ಸಾಗಲಿಲ್ಲ. ಗೂಗಲ್ ಮಹಾಶಯನನ್ನು ಕೇಳಿದೆ. ಹೆದರಿ, ನಡುಗಿ, ಬೇಕಾದ್ದು ಬೇಡವಾದ್ದು, ಎಲ್ಲಾ ಮಾಹಿತಿಯನ್ನೂ ಒದರಿಬಿಟ್ಟ. ಕೆಲವರು ತಲೆಗೂದಲ ಅಂದ ಚೆಂದ ಕೆಡುತ್ತದೆಂಬ ಕಾರಣಕ್ಕೆ ಶಿರಸ್ತ್ರಾಣ ಧರಿಸುವುದಿಲ್ಲವಂತೆ. ತಲೆಯೇ ಹಾರಿ ಹೋಗುವ ಪರಿಸ್ಥಿತಿಯಲ್ಲಿ ತಲೆಗೂದಲ ಅಂದ ಚೆಂದದ ಬಗ್ಗೆ ಯೋಚಿಸುತ್ತಾರಲ್ಲ ಎನ್ನುವುದೇ ಹಾಸ್ಯಾಸ್ಪದ. ಗಾಳಿಯಾಡದೆ, ಬೆವರಿ ಅಸಹನೆಯಿಂದ ಶಿರಸ್ತ್ರಾಣವನ್ನು ತಲೆಯಿಂದ ಕೈಗೆ ತೊಟ್ಟುಕೊಳ್ಳುವವರೂ ಒಂದು ವರ್ಗ. ಆದರೆ ರಕ್ತ ಒಸರುವುದಕ್ಕಿಂತ, ಬೆವರನ್ನು ಒರೆಸಿಕೊಳ್ಳುವುದು ಸಹನೀಯವಲ್ಲವೆ? ಇದೆಲ್ಲಾ ಹೋಗಲಿ, ಇನ್ನೊಂದು ವರ್ಗವಿದೆ: ಸ್ವಾತಂತ್ರ್ಯಕ್ಕಾಗಿ ಶಿರಸ್ತ್ರಾಣ ತ್ಯಾಗ ಮಾಡುವವರದ್ದು. ಮುಂದಿನ ತಿಂಗಳು ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದರಲ್ಲಿದ್ದೀರಿ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದು ಕೇಳಿದ್ದೀರಿ, ಇದೇನಿದು ಶಿರಸ್ತ್ರಾಣ ತ್ಯಾಗ? ಇದು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಮಾಡುವ ತ್ಯಾಗ. ಹಕ್ಕಿ ಆಕಾಶದಲ್ಲಿ ಹಾರಾಡುವಂತೆ, ಜೀವನದ ಎಲ್ಲಾ ಬಂಧನಗಳು ಕಳಚಿ ಹೋಗುವಂತೆ ವೇಗವಾಗಿ ಸವಾರಿ ಮಾಡುವ ಗೀಳಿದು. ಇದನ್ನು “ಸೂಪರ್‌ಮ್ಯಾನ್ ಕಾಂಪ್ಲೆಕ್ಸ್’ ಎಂದು ಕರೆಯುತ್ತಾರಂತೆ.
ವೆಂಟಿಲೇಟೆಡ್ ಹೆಲ್ಮೆಟ್
ಮನೆ ಕಟ್ಟುವಾಗ ಅದರ ವೆಂಟಿಲೇಷನ್ ಕುರಿತು ಗಮನ ಹರಿಸುವುದು ಸಹಜ. ಚೆನ್ನಾಗಿ ಗಾಳಿ ಆಡುವಂತೆ ಕಿಟಕಿ, ಬಾಗಿಲುಗಳು, ಕಿಂಡಿಗಳನ್ನು ಪ್ಲಾನರ್‌ಗಳು ವಿನ್ಯಾಸಗೊಳಿಸಿರುತ್ತಾರೆ. ಅಂಥದೇ ನಿಯಮಾವಳಿಗಳನ್ನು ಹೆಲ್ಮೆಟ್ ವಿಚಾರದಲ್ಲೂ ಜಾರಿಗೊಳಿಸಲು ಸರ್ಕಾರ ಯೋಚಿಸುತ್ತಿದೆ. ಮುಂದಿನ ವರ್ಷದಿಂದ ಕಡ್ಡಾಯವಾಗಿ ವೆಂಟಿಲೇಷನ್‌ಯುಕ್ತ ಹೆಲ್ಮೆಟ್‌ಗಳು ಮಾರುಕಟ್ಟೆಗೆ ಬರಲಿವೆ. ಆಗ ಶಿರಸ್ತ್ರಾಣ ತೊಡದಿರಲು ಬೆವರಿನ ನೆಪ ಹೇಳಲಾಗದು.
ಹೆಲ್ಮೆಟ್ ಧರಿಸದವರನ್ನು ಪತ್ತೆ ಹಚ್ಚುವ ತಂತ್ರಜ್ಞಾನ
ಹೆಲ್ಮೆಟ್ ಧರಿಸದೇ ಇರುವವರನ್ನು ಪತ್ತೆ ಹಚ್ಚುವ ಸ್ವಯಂಚಾಲಿತ ತಂತ್ರಜ್ಞಾನವೊಂದನ್ನು ವಿದ್ಯಾರ್ಥಿಗಳು ಇತ್ತೀಚಿಗಷ್ಟೆ ಅಭಿವೃದ್ಧಿ ಪಡಿಸಿದ್ದಾರೆ. ಇವರು ಹೈದರಾಬಾದ್‌ನ ಐಐಟಿ ವಿದ್ಯಾರ್ಥಿಗಳು. ಪೂರ್ಣ ಪ್ರಮಾಣದಲ್ಲಿ ಈ ಸಂಶೋಧನೆ ಯಶಸ್ವಿಯಾದರೆ ಹೆಲ್ಮೆಟ್ ಧರಿಸದ ವಾಹನ ಸವಾರರನ್ನು ಪತ್ತೆ ಹಚ್ಚಿ ದಂಡ ಕಟ್ಟಿಸುವುದು ನೀರು ಕುಡಿದಂತೆ. ಹೆಲ್ಮೆಟ್ ಧರಿಸದ ತಲೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿ ಅದರ ಮೂಲಕ ಕಂಟ್ರೋಲ್‌ರೂಂನ ಸರ್ವರ್‌ಗಳನ್ನು ತಲುಪುತ್ತದೆ. ಅಲ್ಲಿ ಸಾಫ್ಟ್ವೇರ್ ಮೂಲಕ ಆ ವ್ಯಕ್ತಿಯ ಅಥವಾ ವಾಹನದ ಮಾಹಿತಿ ರೆಕಾರ್ಡ್ ಆಗುತ್ತೆ, ದಂಡವನ್ನೂ ವಿಧಿಸುತ್ತೆ. ದಂಡವನ್ನು ಮನೆಗೆ ತಲುಪಿಸುವುದಷ್ಟೆ ಉಳಿದಿರುವ ಕೆಲಸ.
ಚಿತ್ರಗಳು: ಫಕ್ರುದ್ದೀನ್ ಎಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.