ಅಡಿಕೆ ಕೃಷಿ ಯಶಸ್ಸಿಗೆ 5 ಸೂತ್ರಗಳು
Team Udayavani, Oct 23, 2017, 11:22 AM IST
ನಾನು ಹೆಚ್ಚು ಕಲಿತವನಲ್ಲ ಎಂದು ಸೌಜನ್ಯದಿಂದ ಹೇಳಿಕೊಳ್ಳುವ ವಿನಯ ಪಂಜಿಗುಡ್ಡೆ ಈಶ್ವರಭಟ್ ಅವರಿಗಿದೆ. ಅಡಿಕೆ ಕೃಷಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಅವರು, ತಮ್ಮ ಯಶಸ್ಸಿನ ರಹಸ್ಯಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ.
ಆ ದಿನ, ದಕ್ಷಿಣ ಕನ್ನಡದ ಪುತ್ತೂರಿನಿಂದ ಮುರಕ್ಕೆ ಹೋಗುವ ರಸ್ತೆಯಲ್ಲಿ ನಮ್ಮ ವಾಹನದಲ್ಲಿ 20 ನಿಮಿಷ ಪ್ರಯಾಣಿಸಿ, ರಸ್ತೆಯ ಬಲಗಡೆಯ ದೊಡ್ಡ ಗೇಟು ದಾಟಿ ಸಾಗಿದಾಗ ಎದುರಾದದ್ದು ಹಿತಾಚಿ ಯಂತ್ರ. ಅಲ್ಲಿಂದ ಮುಂದಕ್ಕೆ ಹೋದಾಗ ಕಾಣಿಸಿತು, ಆ ಹಿಟಾಚಿ ಯಂತ್ರ ಗುಡ್ಡವನ್ನೇ ಬಗೆದು ನಿರ್ಮಿಸಿದ ವಿಶಾಲವಾದ ಅಂಗಳ. ದೂರಕ್ಕೆ ಕಣ್ಣು ಹಾಯಿಸಿದಾಗ, ಇನ್ನೂ ಎರಡು ಗುಡ್ಡಗಳನ್ನು ಕಡಿದು, ಆ ರಕ್ಕಸ ಯಂತ್ರ ನಿರ್ಮಿಸಿದ ಸಮಪಾತಳಿಗಳ ದರ್ಶನವೂ ಆಯಿತು.
ಹೀಗೆ, ಒಂದು ದೈತ್ಯ ಯಂತ್ರದಿಂದ ಬೆಕ್ಕಸಬೆರಗಾಗುವಂತೆ ಮಣ್ಣಿನ ಕೆಲಸ ಮಾಡಿಸಿ, ಅಡಿಕೆ ತೋಟ ಬೆಳೆಸಿದವರು ಪಂಜಿಗುಡ್ಡೆ ಈಶ್ವರ ಭಟ್. ಅವರದು ಒಟ್ಟು 19 ಎಕರೆ ಅಡಿಕೆ ತೋಟ. ಹಳೆಯ ತೋಟ ಸುಮಾರು ಐದು ಎಕರೆ. ಉಳಿದ ಜಮೀನಿನಲ್ಲಿ ನಾಲ್ಕೈದು ವರ್ಷಗಳ ಅಡಿಕೆ ಸಸಿಗಳು ಬೆಳೆಯುತ್ತಿರುವ ಹೊಸತೋಟ.
ಅಂದು ಚುರುಕಾಗಿ ಓಡಾಡುತ್ತಾ ತಮ್ಮ ತಂದೆ ಬೆಳೆಸಿದ ಅಡಿಕೆ ತೋಟವನ್ನು ತಾವು ವಿಸ್ತರಿಸಿದ ಕತೆ ಹೇಳಿದರು ಈಶ್ವರ ಭಟ್. ಅವರ ಮಾತುಗಳಲ್ಲಿ ಮಿಂಚಿದ್ದು ಅಡಿಕೆ ಕೃಷಿಯ ಯಶಸ್ಸಿಗೆ ಅತ್ಯಗತ್ಯವಾದ ಐದು ಸೂತ್ರಗಳು.
ಅಡಿಕೆ ಸಸಿ ಮತ್ತು ಮರಗಳಿಗೆ ಸಾಕಷ್ಟು ನೀರುಣಿಸುವ ವ್ಯವಸ್ಥೆ ಮಾಡಬೇಕೆಂಬುದು ಅವರ ಮೊದಲನೆಯ ಸೂತ್ರ. ತನ್ನ ವಿಶಾಲ ತೋಟಕ್ಕೆ ನೀರೊದಗಿಸಲು ಅವರು ಮಾಡಿರುವ ವ್ಯವಸ್ಥೆಯೇ ಇದಕ್ಕೊಂದು ನಿದರ್ಶನ. ಅವರ ಜಮೀನಿನಲ್ಲಿ ಒಂಭತ್ತು ಬೋರ್‌ವೆಲ್‌ಗಳಿಂದ ಎತ್ತಿದ ನೀರು ಮನೆಯಿಂದ ದೂರದ ಗುಡ್ಡದ ತುದಿಯಲ್ಲಿರುವ ಬೃಹತ್ ಕಾಂಕ್ರೀಟ್ ಟ್ಯಾಂಕಿಗೆ ತುಂಬುತ್ತದೆ. ಅದರಿಂದ ಪಿವಿಸಿ ಪೈಪುಗಳ ಜಾಲದ ಮೂಲಕ ವಿಸ್ತಾರವಾದ ಆ ತೋಟಕ್ಕೆ ನೀರುಣಿಸುವ ವ್ಯವಸ್ಥೆಯಾಗಿದೆ. ಪ್ರತಿ ವರುಷ ಒಂದು ಹೊಸ ಬೋರ್‌ವೆಲ… ಕೊರೆಸಬೇಕಾಗುತ್ತದೆ ಎನ್ನುತ್ತಾರೆ ಈಶ್ವರ ಭಟ್. ಯಾಕೆಂದರೆ ಪ್ರತಿ ವರುಷ ಒಂದಾದರೂ ಬೋರ್‌ವೆಲ… ಬತ್ತಿ ಹೋಗ್ತದೆ.
ತಮ್ಮ ತೋಟಕ್ಕೆ ಬೇಕಾದ ಅಡಿಕೆ ಸಸಿಗಳನ್ನು ತಾವೇ ಬೆಳೆಸುವುದು ಅವರ ಯಶಸ್ಸಿನ ಎರಡನೇ ಸೂತ್ರ. ಸಿಂಗಾರ (ಹೂ), ಇಳುವರಿ ಮತ್ತು ಹಣ್ಣಡಿಕೆಗಳ ಗಾತ್ರ ಇವನ್ನೆಲ್ಲ ಗಮನಿಸಿ ಒಳ್ಳೆಯ ತಾಯಿ ಅಡಿಕೆ ಮರಗಳನ್ನು ಅವರು ಗುರುತಿಸಿ¨ªಾರೆ. ಅವುಗಳ ಎರಡನೇ ಕೊಯ್ಲಿನ ಹಣ್ಣಡಿಕೆಗಳಿಂದ ಸಸಿ ಮಾಡಿ ತಮ್ಮ ತೋಟದಲ್ಲಿ ನೆಡುತ್ತಾರೆ. ಕೆಲವು ನರ್ಸರಿಗಳಲ್ಲಿ ಮಾಡುವ ಮೋಸವನ್ನು ಅವರು ವಿವರಿಸಿದ್ದು ಹೀಗೆ: ನರ್ಸರಿಯಿಂದ ಅಡಿಕೆ ಸಸಿ ತರುವುದು ಸುಲಭ. ಆದರೆ ಕೆಲವು ನರ್ಸರಿಗಳಲ್ಲಿ ಬೇಕಾಬಿಟ್ಟಿಯಾಗಿ ಸಸಿ ಮಾಡುತ್ತಾರೆ. ಮೂರನೇ ಕೊಯ್ಲಿನ ಅಡಿಕೆಕಾಯಿಗಳನ್ನು ನೆಲಕ್ಕೆ ಬಡಿದು, ಸಿಪ್ಪೆ ಒಡೆದು, ಪ್ಲಾಸ್ಟಿಕ್ ತೊಟ್ಟೆಗಳಲ್ಲಿ ಊರುತ್ತಾರೆ. ಅನಂತರ ಸ್ಟ್ರಾಂಗ್ ಡೋಸ್ ಯೂರಿಯಾ ಹಾಕಿ, ಅಡಿಕೆ ಸಸಿಗಳು ಒಂದೇ ವರುಷದಲ್ಲಿ ಸೊಕ್ಕಿ ಬೆಳೆಯುವಂತೆ ಮಾಡುತ್ತಾರೆ. ಆ ಅಡಿಕೆ ಸಸಿಗಳು ಚೆನ್ನಾಗಿವೆ ಎಂದು ತಂದು ನೆಟ್ಟರೆ, ಅವುಗಳ ಇಳುವರಿ ಕಡಿಮೆ ಅಂತ ಕೃಷಿಕನಿಗೆ ಗೊತ್ತಾಗೋದು ಆರೇಳು ವರ್ಷಗಳ ನಂತರ ಅವು ಬೆಳೆದು ಫಲ ಕೊಟ್ಟಾಗ.
ಅಡಿಕೆ ತೋಟದಲ್ಲಿ ಕನಿಷ್ಠ ಬೇರೆ ಎರಡು ಬೆಳೆಗಳನ್ನು ಬೆಳೆಸಬೇಕೆಂಬುದು ಅವರು ಹೇಳುವ ಮೂರನೇ ಸೂತ್ರ. ಅವರ ತೋಟದಲ್ಲಿ ಅಡಿಕೆ ಮರಗಳನ್ನು ಅಪ್ಪಿಕೊಂಡು ಬೆಳೆಯುತ್ತಿರುವ ಕರಿಮೆಣಸಿನ ಬಳ್ಳಿಗಳು, ಅಲ್ಲಲ್ಲಿ ಬೆಳೆದಿರುವ ಬಾಳೆಗಿಡಗಳು ಈ ಸೂತ್ರಕ್ಕೆ ಸಾಕ್ಷಿ. ಕರಿಮೆಣಸಿನ ತಳಿಗಳಲ್ಲಿ ಕರಿಮುಂಡ ಉತ್ತಮ ಎಂಬುದು ಅವರ ಅನುಭವ. ಬಲಿತ ಕರಿಮುಂಡ ಬಳ್ಳಿಯಿಂದ ವರ್ಷಕ್ಕೆ ಎರಡು ಕೊಯ್ಲು. ಅದರ ಕರಿಮೆಣಸಿನ ತೂಕ ಜಾಸ್ತಿ. ಅಡಿಕೆ ಮರಗಳಿಗೆ ಹಬ್ಬಿಸಿದ ಕರಿಮೆಣಸಿನ ಬಳ್ಳಿಗಳಿಗೆ ಪ್ರತ್ಯೇಕ ಗೊಬ್ಬರ ಒದಗಿಸಬೇಕು. ಆಗ ಉತ್ತಮ ಇಳುವರಿ ಲಭ್ಯ ಎಂದು ತಿಳಿಸಿದರು.
ಕೃಷಿಕರು ಒಗ್ಗಟ್ಟಿನಿಂದಿದ್ದು, ಆಗಾಗ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂಬುದು ಯಶಸ್ಸಿಗೆ ಅವರು ತಿಳಿಸುವ ನಾಲ್ಕನೇ ಸೂತ್ರ. ಇಲ್ಲದಿದ್ದರೆ ಕುರಿಗೊಬ್ಬರ ಮತ್ತು ಮೀನುಗೊಬ್ಬರ ಮಾರಾಟಗಾರರು, ಅಡಿಕೆ ಖರೀದಿದಾರರು ಹಾಗೂ ಮಧ್ಯವರ್ತಿಗಳು ಕೃಷಿಕರನ್ನು ಸುಲಿಗೆ ಮಾಡುತ್ತಲೇ ಇರುತ್ತಾರೆ ಎಂದು ಹಲವು ಉದಾಹರಣೆಗಳನ್ನು ನೀಡಿದರು. ಆ ಗೊಬ್ಬರಗಳಿಗೆ ಕಲಬೆರಕೆ ಮಾಡುವುದು ದೊಡª ಸಮಸ್ಯೆ. ಮೀನುಗೊಬ್ಬರಕ್ಕೆ ಹೊಯಿಗೆ (ಮರಳು)ಯನ್ನೇ ಕಲಬೆರಕೆ ಮಾಡಿ ಕೃಷಿಕರಿಗೆ ಅನ್ಯಾಯ ಮಾಡುತ್ತಾರೆ. ಇಂತಹ ಮೋಸ ಪತ್ತೆಯಾದೊಡನೆ ತಮ್ಮ ಪ್ರದೇಶದ ಎಲ್ಲ ಕೃಷಿಕರಿಗೂ ತಿಳಿಸಬೇಕು ಎಂಬುದು ಅವರ ಸಲಹೆ. ಅಡಿಕೆಯನ್ನು ಸಂಸ್ಥೆಗಳು ಹಾಗೂ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಖರೀದಿಸಿದರೆ ತಕ್ಷಣ ಎಲ್ಲ ಕೃಷಿಕರಿಗೂ ತಿಳಿಸಬೇಕೆನ್ನುತ್ತಾರೆ. ಗೊಬ್ಬರ, ಹಿಂಡಿ ಇತ್ಯಾದಿ ಖರೀದಿ ಮಾಡುವಾಗ ನಾಲ್ಕೈದು ಕೃಷಿಕರು ಒಟ್ಟಾಗಿ ಖರೀದಿ ಮಾಡಿದರೆ, ಚೌಕಾಸಿ ಮಾಡಿ, ಕಡಿಮೆ ದರಕ್ಕೆ ಖರೀದಿಸಲು ಸಾಧ್ಯ ಎಂದು ಈ ಸೂತ್ರ ಪಾಲನೆಯ ಇನ್ನೊಂದು ಅನುಕೂಲ ವಿವರಿಸಿದರು.
ಕೃಷಿಕನಿಗೆ ಕೃಷಿಯ ಎಲ್ಲ ಕೆಲಸಗಳನ್ನು ಮಾಡಲಿಕ್ಕೆ ಗೊತ್ತಿರಬೇಕು ಎಂಬುದು ಯಶಸ್ಸಿಗೆ ಅವರ ಐದನೇ ಸೂತ್ರ. ಯಾಕೆಂದರೆ ಈಗ ಕೆಲಸಗಾರರು ಹೇಳಿದ ಸಮಯಕ್ಕೆ ಬಾರದೆ ದಿನಗಟ್ಟಲೆ ಸತಾಯಿಸುತ್ತಾರೆ. ಆಗ ತಮ್ಮ ಕೆಲಸ ಬೇಗನೇ ಆಗಲಿ ಎಂಬ ಧಾವಂತದಲ್ಲಿ ಕೆಲಸಗಾರರ ಒತ್ತಡದ ತಂತ್ರಗಳಿಗೆ ಕೃಷಿಕರು ಮಣಿಯಬಾರದು ಎಂದು ಈಶ್ವರ ಭಟ್ ಎಚ್ಚರಿಸುತ್ತಾರೆ.
ಇಷ್ಟು ವಿಸ್ತಾರವಾದ ಅಡಿಕೆ ತೋಟದ ಕೆಲಸಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಅವರ ಉತ್ತರ: ಈಗ ಅಡಿಕೆ ಕೊಯ್ಯಲು, ಸಿಪ್ಪೆ ಸುಲಿಯಲು ಮತ್ತು ಬೋಡೋì ದ್ರಾವಣ ಸಿಂಪಡಿಸಲು ಯಂತ್ರಗಳಿವೆ. ಅವನ್ನು ಚೆನ್ನಾಗಿ ಬಳಸಿಕೊಳ್ಳುತ್ತೇನೆ. ಈ ಮೂರೂ ಕೆಲಸಗಳಿಗೆ ಕೆಲಸದಾಳುಗಳ ಬೇರೆಬೇರೆ ತಂಡಗಳಿವೆ. ಅವರ ಕುಟುಂಬದ ಎಲ್ಲ ವೆಚ್ಚಗಳಿಗೂ ನಾನು ಒತ್ತಾಸೆಯಾಗುತ್ತೇನೆ. ಅದಕ್ಕಾಗಿ ಅವರು ನನ್ನ ತೋಟದ ಕೆಲಸಕ್ಕೆ ಬಂದೇ ಬರುತ್ತಾರೆ.
ಅಂದು ಪುತ್ತೂರಿನ ಸಮೃದ್ಧಿ ಗಿಡಗೆಳೆತನ ಸಂಘದ ಸದಸ್ಯರು ಬೀಳ್ಕೊಡುವಾಗ ನಾನು ಹೆಚ್ಚು ಕಲಿತವನಲ್ಲ ಎಂದ ಪಂಜಿಗುಡೆª ಈಶ್ವರ ಭಟ್ ಅವರಿಂದ ಕೃಷಿಕರು ಕಲಿಯಬೇಕಾದ್ದು ಬಹಳಷ್ಟಿದೆ, ಅಲ್ಲವೇ?
(ಸಂಪರ್ಕ: 9611637667)
ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.