ತೆರಿಗೆ ಉಳಿಸುವ 5 ದಾರಿಗಳು
Team Udayavani, Jun 26, 2017, 3:25 AM IST
ಒಂದೆಡೆ ತೆರಿಗೆ ನಿಗದಿಪಡಿಸುವ ಸರ್ಕಾರವೇ ಅದನ್ನು ಕೆಲಮಟ್ಟಿಗಾದರೂ ತಪ್ಪಿಸಿಕೊಳ್ಳಲು ಹತ್ತುಹಲವು ದಾರಿಗಳನ್ನು ತೋರಿಸಿ ಚಾಲೆಂಜ್ ಮಾಡುತ್ತದೆ. ನೀವು ಇಂಟಲಿಜೆಂಟ್ ಎನ್ನಿಸಿಕೊಳ್ಳಲು ಈ ದಾರಿಗಳನ್ನು ಹುಡುಕಬೇಕು.
ತೆರಿಗೆ ತಪ್ಪಿಸುವುದನ್ನು ಕೂಡ ಸರ್ಕಾರ ಅಧಿಕೃತಗೊಳಿಸಿ ಅದಕ್ಕೆ 80 ಸಿ ಸೆಕ್ಷನ್ ಎಂದು ಹೆಸರಿಟ್ಟಿದೆ. ಹಾಗಂತ ಏಕಾಏಕಿ ಎಲ್ಲೋ ಹಣ ತೊಡಗಿಸಿ ಇಡಿಗಂಟನ್ನೂ ಕಳೆದುಕೊಂಡರೆ ಅದಕ್ಕಿಂತ ಸರ್ಕಾರಕ್ಕೆ ತೆರಿಗೆ ತುಂಬಿದ್ದರೇ ಒಳ್ಳೆಯದಿತ್ತು ಎಂದು ಕೊಳ್ಳುವ ಪರಿಸ್ಥಿತಿ ಬರಬಾರದು ಅಲ್ಲವೇ? ವಾಪಾಸು ಬರುವ ಆದಾಯ ಅರ್ಥಾತ್ ಬಡ್ಡಿದರದಲ್ಲಿ ಬಂಡವಾಳ ಹೂಡಿಕೆ ಫಲಿತಾಂಶ ಕೊಡುತ್ತದೆ ಎಂಬ ಅಂದಾಜು. ಜೊತೆಗೆ ತೊಡಗಿಸಿದ ಬಂಡವಾಳ ಅನಿರೀಕ್ಷಿತ ಅಗತ್ಯ ಬಂದಾಗ ತೆಗೆದು ಬಳಸಬಹುದಾದ ಸಾಧ್ಯತೆ, ವಾಪಾಸು ಕೈಗೆ ಬರುವ ಕಾಲಾವಧಿ ಮತ್ತು ಈ ಇನ್ವೆಸ್ಟ್‌ಮೆಂಟ್ ಉಳಿಸುವ ತೆರಿಗೆ ಪ್ರಮಾಣವನ್ನು ಆಧರಿಸಿಯೇ ಹಣ ತೊಡಗಿಸಬೇಕಾಗುತ್ತದೆ ಬೆಸ್ಟ್ ದಾರಿಗಳು ಇಲ್ಲಿವೆ.
ಲೈಫ್ ರಿಸ್ಕ್, ಶೇ. 7.7 ಬಡ್ಡಿ ಸೂತ್ರದ ವಿಮಾ ಪಾಲಿಸಿ!
ವಿಮಾ ಪಾಲಿಸಿಗಳನ್ನು ತೆರಿಗೆ ಉಳಿಸುವ ಮಾದರಿಯೆಂದು ಪರಿಗಣಿಸಬಹುದು. ಬದುಕಿನ ಸಂಕಷ್ಟಗಳಿಗೆ ನೆರವಾಗಬಹುದು ಎಂದೂ ಆಶಿಸಬಹುದು. ಆದರೆ ಇದನ್ನು ಲಾಭದಾಯಕ ಎಂದು ಮಾತ್ರ ಹೇಳಿಕೊಳ್ಳುವಂತಿಲ್ಲ. ಕೇವಲ ಶೇ. ಐದೂವರೆಯಿಂದ ಏಳೂವರೆ ಪ್ರಮಾಣದಲ್ಲಿ ಮಾತ್ರ ಬಂಡವಾಳಕ್ಕೆ ಪ್ರತಿಫಲದ ಬೆವರು ಕೊಡಿಸುವ ವಿಮಾ ಪಾಲಿಸಿಗಳು ಕೂಡ ಗೊಂದಲಗಳಿಲ್ಲದ ಕ್ಷೇತ್ರ ಎಂದು ಜೈ ಎನ್ನಬಹುದಷ್ಟೇ.
10 ವರ್ಷದ ಪಾಲಿಸಿ ಶೆ. 5.75ರ ದರದಲ್ಲಿ, 15-20 ವರ್ಷದ್ದಾದರೆ ಶೇ. 6.5ರಿಂದ 7.5ರ ಪ್ರಮಾಣದಲ್ಲಿ ವಾಪಾಸು ಇಡಿಗಂಟು ಸಿಗುತ್ತದೆ. 25 ಲಕ್ಷದ ಲೈಫ್ ವ್ಯಾಪ್ತಿಗೊಳಪಡಲು ವರ್ಷ 2.5 ಲಕ್ಷ ಹಣ ತೊಡಗಿಸುವುದು ಜಾಣ್ಮೆಯೇ ಎಂಬ ಪ್ರಶ್ನೆ ಹಾದುಹೊಗಬಹುದು. ನಿಜ, ತೆರಿಗೆ ಉಳಿಸಲು ಎಫ್ಡಿ, ಎನ್‌ಎಸ್‌ಸಿ, ಪಿಪಿಎಫ್ ಮೊದಲಾದವು ಇವೆ. ಮನೆಯಲ್ಲಿ ಒಂದು ಸುರಕ್ಷತೆಯ ವಾತಾವರಣ ಮೂಡಿಸಲು ಮಾತ್ರ ವಿಮಾ ಪಾಲಿಸಿ ಮಾಡಿ ಎಂಬ ಅಡಿಟಿಪ್ಪಣಿ ಇದೆ. ಆಯ್ಕೆ ನಿಮ್ಮದು. ಹೆಚ್ಚೆಚ್ಚು ತೆರಿಗೆಗೆ ಹಣ ಹೋಗುತ್ತಿದ್ದರೆ ಇಂಥ ಪಾಲಿಸಿಗೆ ಕೈ ಹಾಕುವುದರಲ್ಲಿ ಲಾಸು ಇಲ್ಲ.
ಆದಾಯ, ಬಡ್ಡಿ ಬಂದಾಗ ಬೆಚ್ಚಿ ಬೀಳುವ ಮುನ್ನ ತೆರಿಗೆ ಉಳಿಸುವ ಹಾದಿಗಳನ್ನು ಕಂಡು ಕೊಳ್ಳುವುದು ಒಳ್ಳೆಯದು.
ಇದು ಬ್ಯಾಂಕ್ ಲಾಕರ್!
ಷೇರು ಪೇಟೆ ಎಂದರೆ ಭಯವಾಗುತ್ತದೆ. ಏರಿಳಿತ ಅರ್ಥವಾಗದವರೇ ಹೆಚ್ಚು. ಹೀಗಿರುವಾಗ ಯುಲಿಪ್‌ನಲ್ಲಿ ಏಕೆ ಹಣ ತೊಡಗಿಸಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಈಗಾಗಲೇ ನೀವು ಸಾಂಪ್ರದಾಯಿಕ ವಿಮಾ ಪಾಲಿಸಿಗಳನ್ನು ಹೊಂದಿದ್ದರೆ, ಒಂದು ವ್ಯಾಪಾರೀ ಜಾಣ್ಮೆಯಾಗಿ ಯುಲಿಪ್‌ನ್ನು ಆಯ್ಕೆ ಮಾಡಿಕೊಂಡುಬಿಡಿ. ಒಂದು ಯುಲಿಪ್ ಖರೀದಿಯಿಂದ ತೆರಿಗೆ ಉಳಿತಾಯದ ಮೊದಲ ಗುರಿ ಈಡೇರುತ್ತದೆ. ಇದೇ ಕಾಲಕ್ಕೆ ಯುಲಿಪ್‌ನಲ್ಲಿ ಇರುವ ಇನ್ನೊಂದು ಅವಕಾಶ ತೆರೆಯಲು ಇದು ಸಕಾಲ. ಯುಲಿಪ್‌ನ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವ ಬದಲು ಡೆಪ್ಟ್ ಫಂಡ್‌ನಲ್ಲಿ ತೊಡಗಿಸಬಹುದು. ರಿಟರ್ನ್ ಕಡಿಮೆಯಾದರೂ ನಿಶ್ಚಿತ.
ಒಂದೊಮ್ಮೆ ಷೇರು ಮಾರುಕಟ್ಟೆಯಲ್ಲಿ ಮತ್ತೆ ಸಂಚಲನ ಶುರುವಾಯಿತು ಎಂತಾದರೆ ಯುಲಿಪ್‌ನಲ್ಲಿಯೇ ಷೇರು ಮಾದರಿಯಲ್ಲಿ ಹಣ ತೊಡಗಿಸಲು ತೊಂದರೆ ಇಲ್ಲ. ಮಾರುಕಟ್ಟೆಯ ಏರಿಳಿತಗಳನ್ನು ನೋಡಿಕೊಂಡು ಮತ್ತೆ ನಮ್ಮ ನಿರ್ಧಾರವನ್ನು ಬದಲಿಸಲು ಸಾಧ್ಯ. ಕಳೆದ ಮೂರು ವರ್ಷಗಳಲ್ಲಿ ಶೆ. 11.8ರ ಪ್ರಾಫಿಟ್ ಪಡೆದಿದ್ದುಂಟು. ಸೂಕ್ತ ಮಾದರಿ ಅನುಸರಿಸದವರಿಗೆ ಶೇ. 4.2ರ ಉಳಿತಾಯ ಖಾತೆ ಬಡ್ಡಿಯೂ ಸಿಕ್ಕಿದೆ!
ಪಿಪಿಎಫ್ನಲ್ಲಿ ಮನಿ ಸೇಫ್!
ಪಿಪಿಎಫ್(ಪಬ್ಲಿಕ್ ಪ್ರಾವಿಡೆಂಟ್ ಫಂಡ್)ನಲ್ಲಿ ಹಣ ತೊಡಗಿಸುವುದು ಒಳ್ಳೇದು. ಕಳೆದ ವರ್ಷ ಶೇ. 8.7ರ ದರದಲ್ಲಿ ದುಡಿದಿದ್ದ ಬಂಡವಾಳ ಈ ಬಾರಿಯೂ ಆ ಮಟ್ಟ ಮುಟ್ಟುವುದರಲ್ಲಿ ಯಾವುದೇ ಅನುಮಾನಲ್ಲ. ಈ ಸಣ್ಣ ಉಳಿತಾಯ ಯೋಜನೆ “ತೆರಿಗೆ ತಪ್ಪಿಸುವ’ ಚಾಣಾಕ್ಷ ಅಧಿಕೃತ ವ್ಯವಸ್ಥೆ ಇದು. ಕಳೆದ ಆರು ತಿಂಗಳಲ್ಲಿ ಶೇ. 8.5ರ ರಿಟರ್ನ್ ಕೊಟ್ಟಿದ್ದು, ಮುಖ್ಯವಾಗಿ, ಪೋಸ್ಟ್ ಆಫೀಸ್‌ನಿಂದ ಆರಂಭಿಸಿ ಎಲ್ಲ ಬ್ಯಾಂಕ್‌ನಲ್ಲಿ ಪಿಪಿಎಫ್ ಮಾಡಬಹುದಾಗಿರುವುದು, ಐಸಿಐಸಿಐನಂತ ಖಾಸಗಿ ಬ್ಯಾಂಕ್‌ಗಳು ಆನ್‌ಲೈನ್ ಮೂಲಕವೂ ಬಂಡವಾಳ ತೊಡಗಿಸುವ ಸೌಕರ್ಯ ಕೊಟ್ಟಿರುವುದು ಇದರ ಜನಪ್ರಿಯತೆಗೆ ಕಾರಣ. ಹಣ ತೊಡಗಿಸಲು ಇರುವ ಅವಧಿ ಆಯ್ಕೆ, ಗರಿಷ್ಠ ಒಂದು ಲಕ್ಷದಿಂದ. 5ನೇ ವರ್ಷದ ನಂತರ ಹಣ ವಾಪಾಸು ಪಡೆಯಬಹುದು. ಹಿಂದಿನ ವರ್ಷದ ಬ್ಯಾಲೆನ್ಸ್‌ನ ಶೇ. 25ರಷ್ಟನ್ನು ಸಾಲ ಪಡೆಯುವ ಅವಕಾಶವೂ ಇದೆ.
ಇಎಲ್‌ಎಸ್‌ಎಸ್‌ನಲ್ಲಿ ಬರೋಬ್ಬರಿ ರಿಟರ್ನ್!
ಕಳೆದ 5 ವರ್ಷಗಳಿಂದ ತನ್ನ ಗ್ರಾಹಕರಿಗೆ ಶೇ. 17.5ರಷ್ಟು ಪ್ರತಿಫಲವನ್ನು ಕೊಡುತ್ತಿರುವ ಇಎಲ್‌ಎಸ್‌ಎಸ್ ಫಂಡ್‌ನಲ್ಲಿ ಹಣ ತೊಡಗಿಸುವುದು ಒಳ್ಳೆಯ ದಾರಿ. ಹಣ ಹಾಕಿದವರಿಗೆ ಮೂರು ವರ್ಷ ವಾಪಾಸು ಇಲ್ಲ ಎಂಬ ನಿಬಂಧನೆ ಒಂದು ರೀತಿಯಲ್ಲಿ ಸಮಸ್ಯೆಯಾದರೆ, ಷೇರುಗಳಲ್ಲಿ ಈ ಹಣ ತೊಡಗಿಸುವ ಫಂಡ್ ಮ್ಯಾನೇಜರ್‌ನ ಸ್ವಾತಂತ್ರ್ಯದಿಂದಾಗಿ ದೂರಗಾಮಿ ಯೋಚನೆ ಮಾಡಿ ಕಂಪನಿಗಳಲ್ಲಿ ತೊಡಗಿಸಬಹುದು. ಇದೇ ಹೆಚ್ಚು ಹೆಚ್ಚು ಲಾಭಕ್ಕೆ ದಾರಿ ಎನ್ನಲಾಗಿದೆ. 3 ವರ್ಷ ಲಾಕ್ ಇನ್ ಪೀರಿಯಡ್ ಕಾರಣ ಇಲ್ಲಿನ ಬಡ್ಡಿಗೆ ತೆರಿಗೆ ಸಲ್ಲಿಸುವ ಕಿರಿಕಿರಿ ಇಲ್ಲ. ಇದೇ ವೇಳೆ 3 ವರ್ಷದ ಅವಧಿ ಪೂರೈಸಿದ ನಂತರ ಬರುವ ಹಣವನ್ನು ಪುನಃ ಬಂಡವಾಳ ಹೂಡುವುದರಿಂದ ಮತ್ತೆ ತೆರಿಗೆ ಉಳಿಸುವ ಸೂತ್ರಗಳಿಗೆ ರಾಜಬಾಗಿಲೇ ಸರಿ. 500 ರೂ.ನಷ್ಟು ಸಣ್ಣ ಮೊತ್ತವನ್ನೂ ಇಲ್ಲಿ ಹಾಕಬಹುದು. ಯುಲಿಪ್, ಪೆನ್ಶನ್ ಸ್ಕೀಮ್ ಅಥವಾ ವಿಮಾ ಪಾಲಿಸಿಯಲ್ಲಿದ್ದಂತೆ ಮತ್ತೆ ಮತ್ತೆ ಹಣ ಹಾಕಲೇಬೇಕು ಎಂಬ ಕಡ್ಡಾಯವೂ ಇಲ್ಲ. ಎಚ್ಚರ ಈ ಹಿಂದೆ ಒಳ್ಳೆ ರಿಟರ್ನ್ಕೊಟ್ಟಿದೆ ಎಂದು ಮುಂದಿನ ವರ್ಷವೂ ಅದೇ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಸರ್ಟಿಫಿಕೇಟ್ ಅಲ್ಲ. ಬಂಡವಾಳ ತೊಡಗಿಸಲು ಒಂದು ರಿಸ್ಕ್ ಇದ್ದೇ ಇದೆ ಎಂಬುದು ನೆನಪಿನಲ್ಲಿಟ್ಟಿಕೊಂಡು ಹೂಡಿಕೆ ಮಾಡುವುದು ಲೇಸು.
ಎನ್‌ಎಸ್‌ಸಿ , ಬ್ಯಾಂಕ್ ಎಫ್ಡಿ
ಈಗ ಹಣವನ್ನು ಎಸ್‌ಬಿ ಖಾತೆಯಲ್ಲಿ ಇಟ್ಟರೂ ತೆರಿಗೆ ಅಟಕಾಯಿಸಿಕೊಳ್ಳಬಹುದು. ಹಿರಿಯ ನಾಗರಿಕ, ಕೃಷಿ ಆದಾಯ ಎಂದು ತೋರಿಸಿ ಬಡ್ಡಿಯನ್ನು ತೆರಿಗೆ ವ್ಯಾಪ್ತಿಯಿಂದ ದೂರ ಇಡಲು ಸಾಧ್ಯ. ಎನ್‌ಎಸ್‌ಸಿ ಮತ್ತು ಬ್ಯಾಂಕ್ ಎಫ್ಡಿಗಳು ಸೆಕ್ಷನ್ 80ಸಿ ಅಡಿ ತೆರಿಗೆ ಒಜ್ಜೆಯಿಂದ ದೂರ ನಿಲ್ಲಬಹುದು. ಹೆಚ್ಚು ಬಡ್ಡಿದರದ ಆಸೆಗೆ ದೀರ್ಘ ಕಾಲದ ಠೇವಣಿ ಯೋಜನೆಗಳಿಗೆ ಹೋದರೆ ಅಲ್ಲಿ ಬರುವ ಬಡ್ಡಿ ಆದಾಯದ ಮೇಲೆ ತೆರಿಗೆ ಬೀಳುತ್ತದೆ. ಇದರ ಒಳಾರ್ಥದಲ್ಲಿ ಬಡ್ಡಿ ದರ ಕಡಿಮೆಯಾದಂತೆಯೇ ಆಗುತ್ತದೆ. ಟಿಡಿಎಸ್ ಆಗಿದೆ ಎಂದರೆ ಅದು ತೆರಿಗೆ ಕಟ್ಟಿದಂತಲ್ಲ.ಯಾವುದೇ ಗೊಂದಲಗಳಿಲ್ಲದೆ ಶೇ. 8.5ನಿಂದ 10ರವರೆಗೆ ಬಡ್ಡಿ ಬಂದರೆ ಸಾಕು ಎನ್ನುವವರಿಗೆ ಎನ್‌ಎಸ್‌ಸಿ, ಎಫ್ಡಿ ಹಾದಿ ಇರಲಿ.
– ಎಂ.ಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.