ನೀವು ತಿನ್ನುವ ದೇವರ ಪ್ರಸಾದ ಆಹಾರ ಗುಣಮಟ್ಟ ಕಾಯ್ದೆ ವ್ಯಾಪ್ತಿಗೆ ಬಂತು
Team Udayavani, Feb 27, 2017, 2:51 PM IST
ತಿರುಪತಿಯ ದೇವಸ್ಥಾನದ ಲಾಡು ಮತ್ತು ವಡೆ ಅಥವಾ ಶಬರಿಮಲೆಯ ಪ್ರಸಾದವನ್ನು ಜಾnಪಿಸಿಕೊಂಡರೆ ಸಾಕು ನಿಮ್ಮ ನಾಲಿಗೆ ನೀರೂರುತ್ತದಲ್ಲವೆ? ಈ ಪ್ರಸಾದ ಮಾತ್ರವಲ್ಲ ದೇಶಾದ್ಯಂತ ಇತರೆ ದೇವಸ್ಥಾನಗಳಲ್ಲಿ, ಚರ್ಚ್‌ಗಳಲ್ಲಿ, ಗುರುದ್ವಾರಗಳಲ್ಲಿ ವಿತರಿಸುವ ಅಥವಾ ಮಾರಟ ಮಾಡುವ ಪ್ರಸಾದ, ತೀರ್ಥ ಇತ್ಯಾದಿಗೆ ಭಕ್ತಾದಿಗಳು ಅನೇಕ ಗಂಟೆಗಳ ಕಾಲ ಕಾಯುತ್ತಾರೆ. ಇದು ಅವರ ನಂಬಿಕೆ ಮತ್ತು ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಸಂಬಂಧಿಸಿದ್ದು. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ ಅಥವಾ ಮೂಡನಂಬಿಕೆ ಎಂದು ಹೇಳಲಾಗದು. ಕೆಲವರು ದೇವರ ಪ್ರಸಾದವನ್ನು ಅದೆಷ್ಟು ಪವಿತ್ರವೆಂದು ಭಾವಿಸುತ್ತಾರೆಂದರೆ, ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸುವುದಿಲ್ಲ. ಮದುಮೇಹದಿಂದ ಬಳಲುತ್ತಿದ್ದರೂ, ದೇವಸ್ಥಾನದಲ್ಲಿ ಸಿಹಿ ಪ್ರಸಾದವನ್ನು ನಿರಾಕರಿಸುವುದಿಲ್ಲ. ಇದು ಜನರ ನಂಬಿಕೆಗೆ ಬಿಟ್ಟಿದ್ದು.
ಆದರೆ ದೇವರ ಪ್ರಸಾದ ಎಂಬ ಹೆಸರಿನಲ್ಲಿ ಮಾರಾಟವಾಗುವ ಅಥವಾ ವಿತರಣೆಯಾಗುವ ಆಹಾರ ಪದಾರ್ಥಗಳು ಎಷ್ಟು ಸುರಕ್ಷಿತ ಎಂಬುದು ಪ್ರಶ್ನೆ. ದಶಕಗಳ ಹಿಂದೆ ಸತ್ಯಜಿತ್ ರೇ ಅವರ ಒಂದು ಚಲನ ಚಿತ್ರದಲ್ಲಿ ಈ ಸಮಸ್ಯೆಯನ್ನು ಮನದಟ್ಟಾಗುವಂತೆ ಚಿತ್ರಿಸಿದ್ದಾರೆ. ಊರಿನ ದೇವಾಲಯದಲ್ಲಿದ್ದ ಒಂದು ಪುರಾತನ ಕಾಲದ ಕೊಳದ ನೀರು ಕುಲಷಿತವಾಗಿರುತ್ತದೆ. ಅದು ಕುಡಿಯುವುದಕ್ಕಿರಲಿ ಮೈಮೇಲೆ ಹಾಕಿಕೊಳ್ಳುವುದಕ್ಕೂ ಯೋಗ್ಯವಾಗಿರುವುದಿಲ್ಲ. ಸ್ಥಳೀಯ ಅಧಿಕಾರಿಗಳು ಇದರ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡಲು ಪ್ರಯತ್ನಿಸುತ್ತಾರೆ. ಕೊಳದ ನೀರನ್ನು ಕುಡಿಯಬೇಡಿ ಎಂದು ಹೇಳುತ್ತಾರೆ. ಆದರೂ ಕೆಲವರು ಅದಕ್ಕೆ ಕಿವಿಗೊಡುವುದಿಲ್ಲ. ಕಾರಣ ದೇವರಲ್ಲಿ ನಂಬಿಕೆ, ಭಕ್ತಿ ಇತ್ಯಾದಿ. ಈಗ ಇದೇ ವಿಷಯ
ಮತ್ತೂಮ್ಮೆ ಚರ್ಚೆಗೆ ಒಳಪಟ್ಟಿದೆ.
ನಾಗರೀಕರು ಪ್ರಸಾದ ಅಥವಾ ತೀರ್ಥ, ಪಾನಕ, ಮಜ್ಜಿಗೆ ಇತ್ಯಾದಿ ಸೇವಿಸಿ ಅಸ್ವಸ್ಥರಾದ ಪ್ರಕರಣಗಳು ಸಾಕಷ್ಟಿದೆ. ಆದರೆ ಎಲ್ಲಾ ಪ್ರಸಾದವೂ ಶುದ್ದವಲ್ಲ ಎಂದು ಹೇಳುವಂತಿಲ್ಲ.
ಈ ಹಿನ್ನೆಲೆಯಲ್ಲಿ ಪ್ರಸಾದದ ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಸರ್ಕಾರ ಜಾರಿಗೊಳಿಸಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿನಿಯಮದ ವ್ಯಾಪ್ತಿಗೆ ದೇವರ ಪ್ರಸಾದವನ್ನೂ ಸೇರಿಸಲು ಮುಂದಾಗಿದೆ. ಭಾವನಾತ್ಮಕ ಸಂಬಂಧ, ಸಂಪ್ರದಾಯ, ಶಾಸ್ತ್ರ, ಭಕ್ತಿ ಇತ್ಯಾದಿ ಒಳಗೊಂಡ ವಿಷಯದಲ್ಲಿ ಕಾಯ್ದೆಯನ್ನು ಅಳವಡಿಸುವುದು ಎಷ್ಟು ಸೂಕ್ತ ಮತ್ತು ಸಾಧ್ಯಾಸಾದ್ಯತೆಗಳ ಬಗ್ಗೆ ಯೋಚಿಸಬೇಕಿದೆ.
ಈ ವಿಷಯ ಮುನ್ನೆಲೆಗೆ ಬರಲು ಕಾರಣ ಬೆಂಗಳೂರಿನ ಟಿ.ನರಸಿಂಹಮೂರ್ತಿ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ತಿರುಮಲೆಯ ದೇವಸ್ಥಾನದ ಆಡಳಿತ ಮಂಡಳಿಗೆ ಅರ್ಜಿಯೊಂದನ್ನು ಸಲ್ಲಿಸಿ, ಅಲ್ಲಿ ತಯಾರಾಗುವ ಪ್ರಸಾದದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕೇಳಿದ್ದರು. ಪ್ರಸಾದ ತಯಾರಿಸುವ ಸ್ಥಳದ ಸ್ವತ್ಛತೆಯ ಬಗ್ಗೆಯೂ ತಮ್ಮ ಆತಂಕವನ್ನು ವ್ಯಕ್ತಪಡಿಸಿ ಮಾಹಿತಿ ಕೇಳಿದ್ದರು. ಆದರೆ ಟಿಟಿಡಿ ಆಡಳಿತ ಮಂಡಳಿಯು ಕೇಳಿದ ವåಹಿತಿಯನ್ನು ನಿರಾಕರಿಸಿತು.
ಈ ವಿಷಯವನ್ನು ಪರಿಗಣಿಸಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಪ್ರಸಾದ ತಯಾರಿಸುವ ಜಾಗವನ್ನು ಪರೀಕ್ಷಿಸಬೇಕೆಂದು ಟಿಟಿಡಿ ಆಡಳಿತ ಮಂಡಳಿಯನ್ನು ಕೇಳಿದಾಗ, ಮಂಡಳಿಯು ಅದಕ್ಕೆ ಅವಕಾಶ ನೀಡಿಲ್ಲ. ಅಲ್ಲಿ ಸಿದ್ಧಗೊಳ್ಳುವ ಲಾಡು ಮತ್ತು ವಡೆ ದೇವರ ಪ್ರಸಾದವೆಂದು, ಅದು ಆಹಾರವಲ್ಲ ಎಂಬ ಉತ್ತರ ನೀಡಿದೆ. ಅಲ್ಲದೆ ದೇವರ ಪ್ರಸಾದ ಪವಿತ್ರವಾದದ್ದು. ಅದನ್ನು ಶಾಸ್ತ್ರ ಸಂಪ್ರದಾಯದ ಪ್ರಕಾರ ತಯಾರಿಸಲಾಗುತ್ತದೆ. ಇದನ್ನು ವಾಣಿಜ್ಯವೆಂದಾಗಲಿ ಅಥವಾ ಮಾರಾಟವೆಂದಾಗಲಿ ಪರಿಗಣಿಸಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಹಾರ ಸುರಕ್ಷತೆ ಮತ್ತ ಗುಣಮಟ್ಟ ಪ್ರಾಧಿಕಾರ ಈ ವಾದವನ್ನು ಒಪ್ಪಿಲ್ಲ. ಕಾಯ್ದೆಯ ಪ್ರಕಾರ ಎಲ್ಲಾ ಆಹಾರ ಪದಾರ್ಥಗಳೂ ಅದರ ವ್ಯಾಪ್ತಿಗೆ ಒಳಪಡುತ್ತದೆ ಎಂದು, ಪ್ರಸಾದಕ್ಕೆ ಯಾವುದೇ ವಿನಾಯಿತಿ ಇಲ್ಲವೆಂದು ತಿಳಿಸಿದೆ. ಲಾಡು ಅಥವಾ ಲಡೂx ಆಹಾರ ಪದಾರ್ಥವೆಂದು ಪರಿಗಣಿಸಲಾಗಿದೆ. ಜೊತೆಗೆ ಟಿಟಿಡಿ ಒಂದು ಆಹಾರ ವ್ಯಾಪಾರ ಮಾಡುವ ಸಂಸ್ಥೆ ಫುಡ್ ಬ್ಯುಸಿನೆಸ್ ಆಪರೇಟರ್ ಎಫ್ಬಿಒ ಎಂದು ತನ್ನ ಅಭಿಪ್ರಾಯ ತಿಳಿಸಿದೆ. ಕಾಯ್ದೆಯ ಪ್ರಕಾರ ಆಹಾರ ಮಾರಾಟ ಮತ್ತು ವಿತರಣೆಯಲ್ಲಿರುವ ಎಲ್ಲಾ ಸಂಸ್ಥೆಗಳೂ ಅದಕ್ಕೆ ಒಳಪಡುತ್ತದೆ. ಆಹಾರವನ್ನು ಉಚಿತವಾಗಿ ಹಂಚುವ ವ್ಯವಸ್ಥೆ ಇದ್ದರೂ ಅದು ಕಾಯ್ದೆಯ ವ್ಯಾಪ್ತಿಗೆ ಬರಲಿರುವ ಕಾರಣ, ಕಾಯ್ದೆಯ ಪ್ರಕಾರ ಪರವಾನಗಿ ಪಡೆಯಬೇಕೆಂದು ಟಿಟಿಡಿಗೆ ಪತ್ರ ಬರೆದಿದ್ದು ಉತ್ತರದ ನಿರೀಕ್ಷೆಯಲ್ಲಿದೆ.
ನಮ್ಮ ದೇಶದಲ್ಲಿ ದೇವಸ್ಥಾನ, ಚರ್ಚ್, ಗುರುದ್ವಾರ ಇತ್ಯಾದಿಗಳಲ್ಲಿ ವಿತರಿಸುವ ಪ್ರಸಾದಕ್ಕೆ ತನ್ನದೆ ಆದ ಸ್ಥಾನವಿದೆ. ಭಕ್ತರಲ್ಲಿ ಅದರ ಬಗ್ಗೆ ಬಾವನಾತ್ಮಕ ಸಂಬಂಧ ಹೊಂದಿದ್ದಾರೆ. ಪ್ರಸಾದವನ್ನಾಗಲಿ ಅಥವಾ ತೀರ್ಥವನ್ನಾಗಲಿ ವ್ಯಾಪಾರದ ದೃಷ್ಟಿಯಿಂದ ನೋಡುವುದಿಲ್ಲ. ಅದನ್ನು ಮಾರಾಟದ ವಸ್ತುವೆಂದು ಪರಿಗಣಿಸುವುದಿಲ್ಲ. ಯಾರೂ ಪ್ರಸಾದವನ್ನು ಆಹಾರವೆಂದು ಭಾವಿಸುವುದಿಲ್ಲ. ಪರಿಸ್ಥಿತಿ ಹೀಗಿರುವಾಗ, ಒಂದು ಕಾಯ್ದೆಯನ್ನು ಅದಕ್ಕೆ ಅನ್ವಯಿಸವುದು ಎಷ್ಟು ಸರಿ ಎಂಬ ಪ್ರಶ್ನೆ ಉಂಟಾಗುತ್ತದೆ. ಜೊತೆಗೆ ಕಾಯ್ದೆಯನ್ನು ದೇವರ ಪ್ರಸಾದಕ್ಕೆ ಅನ್ವಯಿಸುವಾಗ ಆಡಳಿತಾತ್ಮಕ ಅಡಚಣೆಗಳೂ ಎದುರಾಗುತ್ತದೆ. ದೇಶದಲ್ಲಿರುವ ದೇವಾಲಯಗಳು ಮತ್ತು ಇತರೆ ಧಾರ್ಮಿಕ ಕ್ಷೇತ್ರಗಳು ಹಾಗೂ ಅದನ್ನು ಸಂದರ್ಶಿಸುವ ಭಕ್ತಾದಿಗಳ ಸಂಖ್ಯೆಯನ್ನು ಗಮನಿಸಿದಾಗ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಕೇಂದ್ರ ಸರ್ಕಾರದ 2011ರ ಸೆನ್‌ಸ್Õ ಪ್ರಕಾರ ಸುಮಾರು ಮುವತ್ತು ಲಕ್ಷ ಧಾರ್ಮಿಕ ಕ್ಷೇತ್ರಗಳಿದ್ದು ಲಕ್ಷಾಂತರ ಜನರು ಇದನ್ನು ಸಂದರ್ಶಿಸುತ್ತಾರೆ. ತಿರುಪತಿ ದೇವಸ್ಥಾನ ಅಗ್ರ ಸ್ಥಾನದಲ್ಲಿದೆ.
ಇದೆಲ್ಲದರ ನಡುವೆ ಕೆಲವೊಂದು ಪ್ರತಿಷ್ಟಿತ ದೇವಾಲಯಗಳು ಮತ್ತು ಧಾರ್ಮಿಕ ಕ್ಷೇತ್ರಗಳು ಅಲ್ಲಿ ಸಿದ್ಧವಾಗುವ ಮತ್ತು ವಿತರಣೆಯಾಗುವ ಪ್ರಸಾದದ ಸುರಕ್ಷತೆ ಮತ್ತು ಶುಚಿತ್ವಕ್ಕೆ ಆಧ್ಯತೆ ನೀಡಿದೆ. ಉದಾಹರಣೆಗೆ ಮುಂಬೈನಗರದ ಸಿದ್ಧಿವಿನಾಯಕ ದೇವಸ್ಥಾನ, ಶಿರಡಿ ಸಾಯಿಬಾಬ ದೇವಸ್ಥಾನ ಇತ್ಯಾದಿ. ಕರ್ನಾಟಕದ ಜನಪ್ರಿಯ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಶೃಂಗೇರಿಗಳಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಪ್ರಸಾದ ಸ್ವೀಕರಿಸುತ್ತಾರೆ. ಊಟ ಮಾಡುತ್ತಾರೆ. ಆದರೆ ಯಾವುದೇ ತೊಂದರೆ ಉಂಟಾಗಿಲ್ಲ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ನು ಧಾರ್ಮಿಕ ಕ್ಷೇತ್ರಗಳಿಗೆ ವಿಸ್ತರಿಸುವ ಮುನ್ನ ಮುಕ್ತ ಚರ್ಚೆ, ಸಂವಾದ ಅಗತ್ಯವೆಂದು ತೋರುತ್ತದೆ.
ವೈ.ಜಿ.ಮುರಳೀಧರನ್
ಸದಸ್ಯರು: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು, ಭಾರತ ಸರ್ಕಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.