ವಿಮಾ ಅಧಿಕಾರಿಯ ಕೃಷಿ ಪ್ರೇಮ
Team Udayavani, Dec 11, 2017, 11:00 AM IST
ಬೆಳಗಾಗುವ ಮೊದಲೇ ಅವರು ಹಾಸಿಗೆ ಬಿಟ್ಟು ಏಳುತ್ತಾರೆ. ಮನೆಯಿಂದ ಆರೇಳು ಕಿಲೋಮೀಟರ್ ದೂರದಲ್ಲಿರುವ ರಬ್ಬರ್ ತೋಟದೆಡೆ ಕಾರಿನಲ್ಲಿ ಹೋಗುತ್ತಾರೆ. ಮರಗಳಿಗೆ ಮಳೆಯಿಂದ ತೊಂದರೆಯಾಗದಂತೆ ಹೊದಿಸಿದ ಪ್ಲಾಸ್ಟಿಕ್ ರಕ್ಷಾ ಕವಚವನ್ನು ಮೇಲೆತ್ತಿ ಚಕಚಕನೆ ಕತ್ತಿಯಿಂದ ಗೆರೆ ಹಾಕುತ್ತ ಹೋಗುತ್ತಾರೆ. ನೋಡನೋಡುತ್ತಿದ್ದಂತೆ ನೂರು ಮರಗಳ ಟ್ಯಾಪಿಂಗ್ ಕೆಲಸ ಮುಗಿಯುತ್ತದೆ. ಬಳಿಕ ಹಾಲು ಸಂಗ್ರಹಿಸಿ, ಸಂಗ್ರಹಿಸಿದ ಹಾಲಿಗೆ ನೀರು ಮತ್ತು ಆ್ಯಸಿಡ್ ಬೆರೆಸಿ ಟ್ರೇಗಳಿಗೆ ತುಂಬುತ್ತಾರೆ. ಆಗ ಗಂಟೆ ಒಂಭತ್ತಾಗಿರುತ್ತದೆ. ಸ್ನಾನ ಮುಗಿಸಿ ಶಿಸ್ತಿನ ಸಿಪಾಯಿಯಂತೆ ಕಾರನ್ನೇರಿ ನ್ಯಾಷನಲ್ ಇನ್ಷೊರೆನ್ಸ್ ಕಂಪೆನಿಯ ಕಚೇರಿಯತ್ತ ಧಾವಿಸುತ್ತಾರೆ. ಅಲ್ಲಿ ಅವರು ಅಭಿವೃದ್ಧಿ ಅಧಿಕಾರಿ. ಸಂಜೆ ಮನೆಗೆ ಬಂದ ಬಳಿಕ ರಬ್ಬರ್ ಹಾಳೆಗಳ ತಯಾರಿ. ಅದನ್ನು ಒಣಗಲು ಹಾಕುವುದು, ಹೊಗೆಗೂಡಿಗೆ ಸೇರಿಸುವುದರಲ್ಲಿ ತಲ್ಲೀನ.
ಹೀಗೆ ವಿಮಾ ಅಧಿಕಾರಿಯಾಗಿ ಕಚೇರಿ ನಿರ್ವಹಣೆಯ ಜೊತೆಗೆ ಕೃಷಿಪ್ರೇಮವನ್ನೂ ಮೆರೆಯುತ್ತಿರುವ ಈ ಅಪರೂಪದ ಸಾಧಕ ಎಸ್. ಎಂ. ಹರಿದಾಸ್. ಬೆಳ್ತಂಗಡಿಯ ಮಾ ಕಚೇರಿಯಲ್ಲಿ ಅವರು ಅಭಿವೃದ್ಧಿ ಅಧಿಕಾರಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ಮೂಲತಃ ಕೇರಳದ ಕಣ್ಣೂರು ಬಳಿಯ ಪಯ್ಯನ್ನೂರಿನವರಾದ ಹರಿದಾಸ್ ಕೃಷಿ ಕುಟುಂಬದ ಕೂಸು. ತಂದೆ ದೇವಸ್ಥಾನದ ಹಿರಿಯ ಅರ್ಚಕರಾಗಿದ್ದವರು. ಪದವಿಯ ಬಳಿಕ ವಿಮಾ ಕಂಪೆನಿಯ ಅಧಿಕಾರಿಯಾಗಿ ಬೆಳ್ತಂಗಡಿಗೆ ಬಂದು ನೆಲೆಸಿದ ಅವರಿಗೆ ಕೃಷಿಯನ್ನು ಬಿಡಲು ಸಾಧ್ಯವೇ ಇರಲಿಲ್ಲ. ಕೃಷಿಯ ಮೇಲಿನ ವ್ಯಾಮೋಹದಿಂದಾಗಿ ಐದು ಎಕರೆ ಭೂಮಿಯನ್ನು ಖರೀದಿಸಿ ತೆಂಗು, ಅಡಿಕೆ, ರಬ್ಬರ್ ಕೃಷಿ ಮಾಡಿದ್ದಾರೆ. ಜೊತೆಗೆ ಭತ್ತದ ವ್ಯವಸಾಯದಲ್ಲಿ ಲಾಭವಿಲ್ಲವೆಂದು ಕೊಂಡವರಿಗೆ ಆ ಮಾತು ಸರಿಯಲ್ಲವೆಂಬುದಕ್ಕೆ ಮಾದರಿಯಾಗಿ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಸಮೃದ್ಧವಾಗಿ ಭತ್ತದ ಬೆಳೆ ಮನೆ ತುಂಬುತ್ತಿದೆ. ಹೆಂಡತಿ ಸುಕನ್ಯಾ, ಪದವಿ ಕಲಿಯುತ್ತಿರುವ ಮಗ ಕೂಡ ಅವರ ಜೊತೆಗೆ ಮಣ್ಣಿಗಿಳಿದು ಕೃಷಿ ಕಾಯಕದಲ್ಲಿ ನೆರವಾಗುತ್ತಿರುವುದು ಅವರ ಹಸಿರಿನ ಪ್ರೇಮಕ್ಕೆ ಆನೆಯ ಬಲ ತಂದಿದೆ.
ಸ್ವತಃ ಕೃಷಿ ಕೆಲಸಗಳನ್ನು ಮಾಡುತ್ತಿರುವ ಹರಿದಾಸ್ ಅವರಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕೃಷಿ ಕಾರ್ಮಿಕರ ನೆರವು ಬೇಕಾಗುತ್ತದೆ. ರಜಾ ದಿನಗಳಲ್ಲಿ ಒಂದು ನಿಮಿಷವನ್ನು ಕೂಡ ಹಾಳು ಮಾಡದೆ ತೋಟದಲ್ಲಿ ಅವರ ಇಡೀ ಕುಟುಂಬ ಶ್ರಮಿಸುತ್ತದೆ. 1,500 ರಬ್ಬರ್ ಮರಗಳಿಗೂ ಗೊಬ್ಬರ ಹಾಕುವುದು, ಸರತಿ ಪ್ರಕಾರ ದಿನವೂ ಟ್ಯಾಪಿಂಗ್ ಮಾಡಿ ಹಾಲು ತೆಗೆದು ಹಾಳೆಗಳನ್ನಾಗಿ ಮಾಡುವುದು ಗಂಡ ಹೆಂಡತಿ ಅನ್ಯೋನ್ಯವಾಗಿ ಮಾಡಿಕೊಂಡು ಬರುತ್ತಿರುವ ಕೆಲಸ. ಹತ್ತು ಮರಗಳಿಗೆ ಅರ್ಧ ಕಿಲೋ ತೂಕದ ಒಂದು ಹಾಳೆ ಸಿಗುತ್ತದೆ. ಕೂಲಿ ಕೊಡುವುದಾದರೆ ನೂರು ಮರಗಳಿಗೆ ನೂರೈವತ್ತು ರೂಪಾಯಿಯಾಗುತ್ತದೆ. ಸ್ವಂತ ಪರಿಶ್ರಮದಿಂದ ಈ ಹಣವನ್ನು ಉಳಿಸಿ ಗುಣಮಟ್ಟದ ಹಾಳೆಗಳನ್ನು ಅವರು ಪಡೆಯುತ್ತಿದ್ದಾರೆ. ಮಳೆಗಾಲದಲ್ಲಿ ರೇನ್‌ಗಾರ್ಡ್ ಹಾಕುವ ಪರಿಶ್ರಮದ ಕೆಲಸವೂ ಈ ಅಧಿಕಾರಿಗೆ ಸಲೀಸಿನಿಂದ ಆಗುತ್ತದೆ.
ಅನುಭವ ಗಳಿಕೆಗಾಗಿ ಹರಿದಾಸ್ ಸಾಧನೆ ಮಾಡಿದ ರೈತರನ್ನೆಲ್ಲ ಸಂದರ್ಶಿಸಿ ಬರುವ ಅಭ್ಯಾಸವಿಟ್ಟುಕೊಂಡಿದ್ದಾರೆ. ರೈತ ಸಂಘದ ಮುನ್ನೇತೃವಾಗಿ ಹಾಸನ, ಮಂಡ್ಯ ಮೊದಲಾದ ಕಡೆಗಳಿಗೆ ಹೋಗಿ ಹತ್ತಾರು ಕೃಷಿ ಸಾಧಕರ ತುಂಬು ಸಾಧನೆಯನ್ನು ಸನಿಹದಿಂದ ಕಂಡು ಬಂದು ತಮ್ಮ ಜಮೀನಿನಲ್ಲಿ ಅಳವಡಿಸಿದ್ದಾರೆ. ರೈತರಿಗೆ ಕಡಿಮೆ ಬೆಲೆಗೆ ಕೃಷಿ ಉಪಕರಣಗಳು ಮತ್ತು ಕ್ರಿಮಿನಾಶಕಗಳನ್ನು ಪೂರೈಸುವ ಸಹಕಾರ ಸಂಘದ ಸ್ಥಾಪನೆಯಲ್ಲಿಯೂ ಶ್ರಮ ಹರಿಸಿದ್ದಾರೆ. ಸಹಕಾರದ ನೆರಳಿನಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೆ ಕಡಿಮೆ ಬೆಲೆಗೆ ಔಷಧಗಳನ್ನು ಒದಗಿಸುವ ಸಹಕಾರ ಸಂಸ್ಥೆಯ ಕಾರ್ಯಾರಂಭದಲ್ಲೂ ಅವರ ಪಾತ್ರವಿದೆ.
ಹರಿದಾಸ್ ತಮ್ಮ ಮನೆಯ ಬಳಿ ಹೊಂಡ ತೆಗೆದು ಕಾಟ್ಲ ಜಾತಿಯ ಮೀನು ಮರಿಗಳನ್ನು ಸಾಕುವ ಪ್ರಾಯೋಗಿಕ ಪ್ರಯತ್ನದಲ್ಲಿಯೂ ಸಫಲರಾಗುತ್ತಿದ್ದಾರೆ. 15 ಅಡಿ ಅಗಲ, 10 ಅಡಿ ಉದ್ದ, 4 ಅಡಿ ಆಳದ ಹೊಂಡದಲ್ಲಿ ಪ್ಲಾಸ್ಟಿಕ್ ಹಾಳೆ ಹಾಸಿ ನೀರು ತುಂಬಿಸಿ ಕೃತಕ ಕೊಳವನ್ನಾಗಿ ಪರಿವರ್ತಿಸಿದ್ದಾರೆ. ಇದರಲ್ಲಿ 400 ಮೀನಿನ ಮರಿಗಳನ್ನು ಬೆಳೆಸುತ್ತಿದ್ದಾರೆ. ಮನೆಯಂಗಳವನ್ನು ಹಾಳು ಬಿಡದೆ ಹೀಗೆ ಲಾಭ ಮಾಡಿಕೊಳ್ಳಿ ಎಂದು ಇತರ ರೈತರಿಗೂ ಹೇಳುತ್ತಾರೆ. ಒಂದು ವರ್ಷ ಇದನ್ನು ಸಾಕಿದರೆ ಕನಿಷ್ಠ ಒಂದು ಕಿ.ಲೋಗಿಂತ ಹೆಚ್ಚು ತೂಕ ಬರುತ್ತದೆ. ಮೀನಿನ ಜಾತಿಯಲ್ಲೇ ಬಹು ರುಚಿಕರವಾದ ಈ ಮೀನುಗಳಿಗೆ ಅಪಾರವಾದ ಸ್ಥಳೀಯ ಬೇಡಿಕೆ ಇದೆ. ಕಿಲೋಗೆ 250 ರೂ. ತನಕ ಬೆಲೆ ಸಿಗುತ್ತದೆಯಂತೆ. ಮನೆಯಲ್ಲಿ ಉಳಿಯುವ ಅನ್ನ, ಹಿಟ್ಟು, ಕಾಳಕಡಿಗಳಲ್ಲದೆ ಜೀವಾಣು ವರ್ಧಕವಾದ ಹಸಿ ಸಗಣಿಯನ್ನು ಆಹಾರವಾಗಿ ನೀಡುವ ಮೂಲಕ ಸುಲಭವಾಗಿ ಈ ಮೀನುಗಳನ್ನು ಸಾಕಿ ರೈತರು ಮನೆಯಂಗಳವನ್ನೂ ಸಾರ್ಥಕವಾಗಿ ಬಳಸಬಹುದೆಂಬ ಉದಾಹರಣೆ ಅವರ ಈ ಪ್ರಯೋಗದಲ್ಲಿ ಎದ್ದು ಕಾಣುತ್ತದೆ. ಕೆಲಸಕ್ಕೆ ಜನ ಸಿಗುವುದಿಲ್ಲ ಎಂಬ ನೆಪವೊಡ್ಡಿ, ಸಿಕ್ಕಿದ ಬೆಲೆಗೆ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿರುವ ಹತಾಶ ಭಾವದ ರೈತರು ಈ ಸಾಧಕನ ಶ್ರಮ ಕಂಡರೆ ಬೆರಗಾಗಲೇಬೇಕು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.