ಗೊಳಲು ನೆರಳಿನ ಮಾಯಾಲೋಕ
Team Udayavani, Oct 22, 2018, 12:21 PM IST
ಭತ್ತಕ್ಕೆ ಬಿಸಿಲು ಬೇಕು, ಮರದಡಿ ಬೆಳೆಯುವ ಕೆಸುವಿನ ಗಡ್ಡೆ ಮಳೆಗಾಲದಲ್ಲಿ ಬಯಲಿನಲ್ಲಿ ಚೆನ್ನಾಗಿ ಬೆಳೆಯಬಹುದು. ಗೆಣಸು ತೋಟದ ನಡುವೆ ಬಳ್ಳಿಯಾಗಬಹುದು. ಆದರೆ, ಮರಳು ಮಿಶ್ರಿತ ಬಯಲಿನಲ್ಲಿ ಬೆಳೆದಷ್ಟು ಗಡ್ಡೆ ದೊರೆಯುವುದಿಲ್ಲ. ಅಡಕೆಗೆ ಪಶ್ಚಿಮದ ಬಿಸಿಲಿನ ಭಯ, ಶಮೆ ಬಿದಿರಿಗೆ ಮರದ ಆಶ್ರಯದ ಹದ ಬಿಸಿಲು ಇಷ್ಟವಾಗುತ್ತದೆ. ಹೀಗೆ ಬೆಳೆ ಬದುಕಿನ ಸೂರ್ಯ ಸಂಬಂಧಗಳ ಅರಿವು ಕೃಷಿಕರಿಗೆ ಬೇಕು. ಆಗ ಯಾವ ಮರದ ಜೊತೆ ಯಾವ ಉಪಬೆಳೆ ಬೆಳೆಯಬಹುದೆಂದು ತಿಳಿಯುತ್ತದೆ…
ತೋಟದಂಚಿನ ಭತ್ತದ ಸಸಿಗಳಿಗೆ ಯಾವತ್ತೂ ಗೆಲುವಿನ ಮುಖವಿಲ್ಲ. ಬಳ್ಳೆಯಾಗಿ ಬೆಳೆಯುತ್ತವೆ, ತೆನೆ ಸರಿಯಾಗಿ ಬರುವುದಿಲ್ಲ, ಕಾಳಿನಲ್ಲಿ ಜೊಳ್ಳು ವಿಪರೀತ. ಗದ್ದೆಯ ಬಯಲೆಲ್ಲ ಮಾಗಿ ಗರಿಗಳು ಬಂಗಾರ ವರ್ಣಕ್ಕೆ ತಿರುಗಿದರೂ, ಇಲ್ಲಿ ಇನ್ನೂ ಹಸಿರು ಉಳಿದಿರುತ್ತದೆ. ಒಂದೇ ತಳಿಯ ಭತ್ತ ನಾಟಿ ಮಾಡಿ ಗದ್ದೆಯ ಎಲ್ಲೆಡೆಯೂ ಸರಿಯಾಗಿ ಗೊಬ್ಬರ ಹಾಕಿ ನೀರುಣಿಸಿದರೂ ಇಳುವರಿ ಬಹಳ ಕಡಿಮೆ. ತೋಟದಂಚಿನ ಬೇಲಿ ಗಿಡ ಕಡಿದು ಬೆಳಗಿನ ಬಿಸಿಲು ತಾಗುವ ವ್ಯವಸ್ಥೆಯಾದರೆ ಬೆಳೆ ಸ್ವಲ್ಪ ಬದಲಾಗುತ್ತದೆ. ಇದು ಗೊಳಲಿನ ಪರಿಣಾಮ. ನಾದ ಹೊಮ್ಮಿಸುವ ಕೊಳಲು ಗೊತ್ತಿದೆ. ಇದೇನು ಬೆಳೆಯ ಗಂಟಲು ಕಟ್ಟುವ ಗೊಳಲು? ಎಂಬ ಪ್ರಶ್ನೆ ಹುಟ್ಟಬಹುದು.
ಗೊಳಲು ಸೂರ್ಯನ ಬಿಸಿಲು, ಬೆಳಕು ಸರಿಯಾಗಿ ತಾಗದ ನೆಲೆ. ದಟ್ಟ ಕಾಡು, ತೋಟದ ಹೆಮ್ಮರಗಳ ನಡುನ ಗಿಡ ಬಳ್ಳಿಗಳು ಅತ್ತ ಸಾಯದೇ, ಚಿಗುರದೆ ನಿಂತ ಸ್ಥಿತಿ ಇದು. ಗೊಳಲಿನಲ್ಲಿ ಗಿಡಗಳು ಬದುಕುತ್ತವೆ. ಆದರೆ, ಸದೃಢವಾಗಿ ಬೆಳೆಯುವುದಿಲ್ಲ. ದಿನವಿಡೀ ನೆರಳಿನ ಕತ್ತಲು ಕವಿದಿರುವುದರಿಂದ ಸಸ್ಯಗಳ ಆಹಾರ ತಯಾರಿಕೆಗೆ ಅಗತ್ಯ ಸೂರ್ಯರಶ್ಮಿಯ ಅವಕಾಶ ದೊರೆಯುವುದಿಲ್ಲ. ನಿತ್ಯಹರಿದ್ವರ್ಣ ಮರಗಳ ನೆರಳು ಸಾಮಾನ್ಯವಾಗಿ ಗೊಳಲಿನ ಮುಖ್ಯ ನೆಲೆ. ಇಲ್ಲಿನ ಪರಿಸ್ಥಿತಿ ಹೇಗಿರುತ್ತದೆಂದರೆ ಮಧ್ಯಾಹ್ನ 12 ಗಂಟೆಯಾದರೂ ಭತ್ತದ ಗರಿಯ ಇಬ್ಬನಿ ಆರುವುದಿಲ್ಲ. ಗೊಳಲಿನಲ್ಲಿ ಬೆಳೆಯುವ ಹುಲ್ಲು, ಬಳ್ಳಿ, ಗಿಡಗಳೆಲ್ಲ ಒಂದರ್ಥದಲ್ಲಿ ಶಕ್ತಿ ಹೀನವಾಗಿರುತ್ತವೆ. ಅಪ್ಪನ ಯಜಮಾನಿಕೆಯ ದರ್ಬಾರಿನ ನೆರಳಲ್ಲಿ ಮಕ್ಕಳು ಯಾವುದಕ್ಕೂ ಧ್ವನಿ ಎತ್ತದೇ ಬದುಕುವಂತೆ ಇಲ್ಲಿನ ಸಸ್ಯ ಪರಿಸರ ಪರಿಸ್ಥಿತಿ.
ಗಿಡ ಬೆಳವಣಿಗೆಗೆ ಬಿಸಿಲು ಬೇಕು. ಕೆಲವು ಗಿಡಗಳಿಗೆ ನೇರ ಸೂರ್ಯನನ್ನು ಎದುರಿಸುವ ಆಂಜನೇಯ ಶಕ್ತಿ, ಮತ್ತೆ ಕೆಲವು ಕಾಫೀ ಗಿಡಗಳಂತೆ ಮರದ ಮರೆಯ ನೆರಳು ಬೆಳಕಿನಾಟ ಇಷ್ಟಪಡುತ್ತವೆ. ನಾವು ನೆಡುವ ಸಸಿಗೆ ಎಷ್ಟು ಕ್ಯಾಂಡಲ್ ಬೆಳಕು ಬೇಕು? ಕೃಷಿ ಮಾಡುವ ಮುಂಚೆ ಕಡ್ಡಾಯ ಅರಿಯಬೇಕಾದ ಸಂಗತಿ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದಲ್ಲಿ ಕಬ್ಬಿನ ಸಾಲಿನ ನಡುವೆ ಮೆಣಸು, ಹೂಕೋಸು, ಬದನೆ ಮುಂತಾದ ತರಕಾರಿ ಬೆಳೆಯುತ್ತಾರೆ. ಕಬ್ಬು ನಾಟಿ ಆರಂಭದಲ್ಲಿ ಬೆಳೆಯಬಹುದಾದ ಈ ಬೆಳೆಗಳನ್ನು ಕಬ್ಬು ಎತ್ತರಕ್ಕೆ ಬೆಳೆದ ನಂತರ ಬೆಳೆಯಲಾಗುವುದಿಲ್ಲ. ಇದಕ್ಕೆ ಸಸ್ಯಗಳಿಗೆ ಅಗತ್ಯ ಬಿಸಿಲು ದೊರಕದ್ದು ಮುಖ್ಯಕಾರಣ. ಯಾವ ಗಿಡಕ್ಕೆ ಎಲ್ಲಿ ಎಷ್ಟು ಬಿಸಿಲು ದೊರೆಯುತ್ತದೆಂದು ಅರಿತು ನಾಟಿ ಮಾಡಿದರೆ ಗೆಲುವು ಸಾಧ್ಯ.
ಮಳೆಗಾಲದ ಶುಂಠಿ ಬೇಸಾಯದ ಸಾಲಿನಲ್ಲಿ ಮೆಣಸಿನ ಸಸಿ ನೆಡುವುದು ಅರೆ ಮಲೆನಾಡಿನ ವಿಧಾನ. ಬಿಸಿಲಿನ ಬೀದರ್‌ನ ಹುಮನಾಬಾದ್ ಬಯಲಿನಲ್ಲಿ ಶುಂಠಿಯ ಜೊತೆ ಹರಳು ಗಿಡ ಗೆಲ್ಲುತ್ತದೆ. ಹರಳು ಗಿಡ ತೀವ್ರ ಬಿಸಿಲು ತಡೆದು ನೆಲಹಂತದ ಬೆಳೆಗೆ ಅಗತ್ಯ ಬಿಸಿಲು ಮಾತ್ರ ಒದಗಿಸುತ್ತದೆ. ಹೆಗ್ಗಡದೇವನ ಕೋಟೆಯ ಮಾವು, ಚಿಕ್ಕು ತೋಟಗಳಲ್ಲಿ ಮಳೆಗಾಲದಲ್ಲಿ ಮೇಲೆದ್ದು ನಿಲ್ಲುವ ಸುವರ್ಣ ಗಡ್ಡೆ ಈ ನೆರಳಿಗೆ ಒಗ್ಗಿದ್ದನ್ನು ಸಾಬೀತುಪಡಿಸುತ್ತದೆ. ಅಲ್ಲಿನ ಸೋಲಿಗರ ಹಿತ್ತಲಲ್ಲಿ ಬಾಳೆ ಗಿಡಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಮರ ಗೆಣಸು ಖುಷಿಯಲ್ಲಿ ಬೆಳೆಯುವುದಕ್ಕೆ ನೆರಳು ಬೆಳಕಿನ ಹೊಂದಾಣಿಕೆ ಕಾರಣವಾಗಿದೆ. ಕಾಡಿನ ನಿತ್ಯಹರಿದ್ವರ್ಣೆಯರು, ಎಲೆ ಉದುರಿಸುವವರು, ಮುಳ್ಳುಕಂಟಿಯಾಗಿ ಬದುಕುವ ಸಸ್ಯ ಸಂಕುಲ ಪರಿಚಯ ಎಲ್ಲರಿಗೆ ಇದೆ. ಸಸ್ಯ ಬರ, ಬಿಸಿಲು ಗೆಲ್ಲಲ್ಲು ತನ್ನದೇ ತಂತ್ರ ಕಲಿತಿದೆ. ಮಳೆ ಬಿದ್ದಾಗ ಚಿಗುರಿ ಬಳ್ಳಿ, ಗಿಡವಾಗಿ ಬೆಳೆದು ಬೇಸಿಗೆ ಆರಂಭದಲ್ಲಿ ಭೂಗತ ಗಡ್ಡೆಯಲ್ಲಿ ಜೀವ ಹಿಡಿದು ನಿಲ್ಲುವ ಲೋಕದೆ. ಸದಾ ತೇವವಿರುವ ಮಲೆನಾಡಿನ ನದಿ ಕಣಿವೆಯ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಅಗಲ ಎಲೆಯ ಸಸ್ಯ ನೋಡಬಹುದು. ಬಯಲುಸೀಮೆಯತ್ತ ಹರಿಯುವ ಅದೇ ನದಿ ಕಣಿವೆಯಲ್ಲಿ ಸಣ್ಣ ಸಣ್ಣ ಎಲೆಯ ಸಸ್ಯ ಕಾಣುತ್ತೇವೆ. ಬಿಸಿಲು, ಮಳೆ ನೀರಿನ ಲಭ್ಯತೆ ಗಮನಿಸಿ ಗಿಡ ಗೆಲ್ಲುವ ನೋಟಕ್ಕೆ ಕಣಿವೆಗಳಲ್ಲಿ ಪ್ರಾತ್ಯಕ್ಷಿಕೆ ಇದೆ.
ಮಳೆಗಾಲದ ಬಿಸಿಲು ಬೆಳಕು ಹುಡುಕುತ್ತ ನೆಲದಲ್ಲಿ ಹಬ್ಬುವ ಬಳ್ಳಿಗಳು ಕಾಲಕ್ಕೆ ತಕ್ಕಂತೆ ಬದುಕಲು ಕಲಿತಿವೆ. ಹುಲ್ಲುಗಾವಲಿನಲ್ಲಿ ಮಳೆಯಲ್ಲಿ ನೆಟ್ಟ ಸಸಿ ಸರಿ ಬಿಸಿಲು ತಾಗದೇ ನರಳುತ್ತವೆ. ಸುತ್ತಲಿನ ಹುಲ್ಲು ಕಟಾವು ಮಾಡಿದರೆ ಚಿಗುರಲು ಆರಂಭಿಸುತ್ತವೆ. ಹೀಗೆ ಸಸ್ಯ ಗುಣ ಕಲಿಕೆಗೆ ಸುತ್ತಲಿನ ಕಾಡು, ಕೃಷಿ ಪರಿಸರ ಓದಬೇಕು. ಎರಡು ವರ್ಷ ಸತತ ಬರ ಸಹಿಸಿ ಬದುಕುವ ತುಮಕೂರಿನ ತೆಂಗು ಫಲ ಬಿಡುವುದನ್ನು ಮರೆತು ತಟಸ್ಥವಾಗಿ ನಿಲ್ಲುತ್ತವೆ. ಮಳೆ ಸುರಿದಾಗ ಕಠಾರಿ ಮೂಡಿ ಹೂ ಅರಳುತ್ತದೆ. ಮುಳ್ಳುಗರಿಯ ಈಚಲಿಗೆ ಬಯಲು ಬಿಸಿಲು ಇಷ್ಟವಾಗುತ್ತದೆ. ಸದಾ ಬೆಂಕಿ ಬೀಳುವ ಗುಡ್ಡಗಳಲ್ಲಿ ಕಾಣಿಸುವ ಹಿಪ್ಪೆ, ತುಂಬ್ರಿ, ಮತ್ತಿ, ಕವಲು ಸಸ್ಯಗಳಿಗೆ ನದಿಯಂಚಿನ ತೇವದ ಬದುಕು ಇಷ್ಟವಿಲ್ಲ. ಎಷ್ಟೆಂದರೂ ಇವು ಗುಡ್ಡದ ಗೆಳೆಯರಲ್ಲವೇ? ಹಲಸಿನ ಮರ ತೋಟಕ್ಕೂ ಸೈ, ಬಯಲಿಗೂ ಜೈ ಎನ್ನುತ್ತದೆ. ನೀರಿನಂಚಿನಲಿ, ಬಯಲಿನಲ್ಲಿÉ ಬದುಕುವುದು ಅತ್ತಿ ಮರಗಳಿಗೆ ಗೊತ್ತು. ಕಪ್ಪು ಕಲ್ಲು ಸಂಧಿಯಲ್ಲಿ ಬೆಳೆಯುವ ಕಲ್ಲುಬಾಳೆ, ಕಡಿದಾದ ಗುಡ್ಡದ ನೆಲೆಯ ಹುಲ್ಲು ನೋಡಿದರೆ ನಿಸರ್ಗ ನೇಮಕಾತಿ ತಿಳಿಯುತ್ತದೆ. ಒಟ್ಟಿನಲ್ಲಿ ಯಾವ ಸಸ್ಯಕ್ಕೆ ಯಾವ ಪರಿಸರ ಇಷ್ಟವೆಂಬ ಪ್ರಥಮ ಪಾಠ ಅರ್ಥವಾದರೆ ಕಾಡು ತೋಟ ಕಟ್ಟುವ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು.
ನೆರಳು ವಿಚಾರದಲ್ಲಿ ಗಿಡ ಜಾತಿಗಳನ್ನು ಒಂದೇ ನೋಟದಲ್ಲಿ ನಿರ್ಧರಿಸಿ ತೀರ್ಪು ನೀಡಲಾಗುವುದಿಲ್ಲ. ಇವುಗಳಲ್ಲಿ ತಳಿ ಗುಣಗಳೂ ಮುಖ್ಯವಿದೆ. ಉದಾಹರಣೆಗೆ ಭತ್ತಕ್ಕೆ ಬಿಸಿಲು ಬೇಕೆಂದು ಕಣ್ಮುಚ್ಚಿ ಹೇಳಿದಂತಾಗುತ್ತದೆ. ನಮ್ಮ ಕರಾವಳಿಯಲ್ಲಿ ಉಪ್ಪುನೀರು ಸಸಿ ಬೆಳೆಯುವ ಕಗ್ಗ ಭತ್ತ, ಬನವಾಸಿಯ ವರದಾ ನದಿಯಂಚಿನ ಪ್ರವಾಹದಲ್ಲಿ ತಿಂಗಳ ಕಾಲ ನೀರಲ್ಲಿ ಮುಳುಗಿ ಬದುಕುವ “ನೆರೆಗುಳಿ ಜಡ್ಡು’ ತಳಿಗಳಿವೆ. ಸುಮಾರು 130 ವರ್ಷಗಳ ಹಿಂದೆ ಮಹಾರಾಷ್ಟ್ರದ ಆಜರಾ ಪ್ರದೇಶದದಿಂದ ಕರ್ನಾಟಕದ ಕಾಡಿಗೆ ವಲಸೆ ಬಂದವರು ಗೌಳಿಗರು. ಎಮ್ಮೆ ಸಾಕುವುದು ಮುಖ್ಯ ಕಸುಬಾದ ಇವರು ಕಾಡಿನಲ್ಲಿ ಭತ್ತ ಬೆಳೆದವರು. ಕ್ರಿ.ಶ. 1996ರಲ್ಲಿ ಗೌಳಿವಾಡಾಗಳನ್ನು ಸುತ್ತಾಡಿದಾಗ ಮತ್ತಿ, ಹುನಾಲು, ನಂದಿ, ಕಲಂ ಮರಗಳ ನೆರಳಲ್ಲಿ ಇವರು ಭತ್ತ ಬೆಳೆಯುತ್ತಿದ್ದರು. ಹಕ್ಕಲಸಾಲೆ, ದೊಡ್ಡಿಗ್ಯಾ, ಕುಂಬ್ರಿವಯಟಿಗ್ಯಾ ಭತ್ತದ ತಳಿಗಳು ನೆರಳು ಸಹಿಷ್ಣುವಾಗಿ ಮರದಡಿಯ ಬೇಸಾಯಕ್ಕೆ ನೆರವಾಗಿದ್ದವು. ಮರದೆಲೆಗಳು ನೆಲಕ್ಕೆ ಬಿದ್ದು ಇವರ ಗದ್ದೆಗೆ ಗೊಬ್ಬರವಾಗುತ್ತಿತ್ತು. ನಮ್ಮ ಗದ್ದೆಗಳು ಮರಗಳಿಲ್ಲದೇ ಬಯಲಾಗಿರುವಾಗ ಎಕರೆಯಲ್ಲಿ ನೂರಾರು ಮರವಿದ್ದ ಪ್ರದೇಶದಲ್ಲಿ ಹೆಚ್ಚಿನ ಖರ್ಚಿಲ್ಲದೇ ಎಕರೆಗೆ 10-12 ಚೀಲ ಭತ್ತ ಬೆಳೆಯುತ್ತಿದ್ದರು. ಇಲ್ಲಿ ಉದುರೆಲೆ ಕಾಡಿನ ನೆರಳು ಸಹಿಸುವ ಭತ್ತದ ತಳಿ ಇವರನ್ನು ಗೆಲ್ಲಿಸಿತು. ಮರದ ಜೊತೆ ಭತ್ತ ಉಳಿಸುವಾಗ ಇಂಥ ತಳಿ ಬಳಕೆ ಮುಖ್ಯವಿದೆ.
ಲಿಂಬು ಗಿಡಗಳಿಗೆ ಬಿಸಿಲು ಬೇಕು. ವಿಜಯಪುರದ ಬಿರುಬಿಸಿಲು ಬೆಳೆ ಗೆಲ್ಲಿಸಲು ಸಹಕಾರಿಯಾಗಿದೆ. ಉಪ್ಪಿನಕಾಯಿಗೆ ಬಳಸುವ ಇಟಾಲಿಯನ್ ಲಿಂಬು (ಗಜನಿಂಬೆ) ಗಿಡಗಳನ್ನು ಅಡಕೆ ತೋಟದಲ್ಲಿ ನಾಟಿ ಮಾಡಿದ ಶಿವಮೊಗ್ಗ ಗಾಜನೂರಿನ ಎಂ.ಪಿ. ದೇವರಾಜ್ ಉತ್ತಮ ಬೆಳೆ ಕಂಡವರು. ಲಿಂಬು ಗಿಡದ ಬೆಳವಣಿಗೆ ಗಮನಿಸಿ ಐದು ಎಕರೆ ಅಡಕೆ ತೋಟದ ತುಂಬ ಲಿಂಬು ನೆಟ್ಟಿದ್ದರು. ಅಡಕೆಯ ಜೊತೆ ಉಪಬೆಳೆಯಾಗಿ ಕೆಲವು ವರ್ಷ ಇದು ದೇವರಾಜರ ಕೈಹಿಡಿದಿತ್ತು. ದೇವರ ರಾಜರ ಸುಮಾರು ಐದಾರು ವರ್ಷದ ಅಡಕೆ ತೋಟದ ಪರಿಸರ ಲಿಂಬು ಬದುಕುವ ಪರಿಸರ ಒದಗಿಸಿತು. ತೋಟದಲ್ಲಿ ಬಾಳೆ, ಕಾಳು ಮೆಣಸು ಇರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ರಬ್ಬರ್ ಸಸಿ ನಾಟಿಯ ಆರಂಭದಲ್ಲಿ ಗಿಡಗಳ ನಡುವಿನ ಜಾಗದಲ್ಲಿ ಸುವರ್ಣಗಡ್ಡೆ, ಮರಗೆಣಸು, ಕೆಸುವಿನ ಗಡ್ಡೆಯನ್ನು ಮಳೆಗಾಲದ ಉಪಬೆಳೆಯಾಗಿ ಒಂದೆರಡು ವರ್ಷ ಬೆಳೆಯುವ ನೋಟಗಳು ಶಿವಮೊಗ್ಗ ರಿಪ್ಪನ್‌ಪೇಟೆ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಲ್ಲಿ ನೋಡಬಹುದು. ಅಡಕೆ ತೋಟಗಳಂಚಿನಲ್ಲಿ ತೆಂಗು ಬೆಳೆಸುವುದು ಮಲೆನಾಡು, ಕರಾವಳಿಯ ಜಾನ. ತೋಟದಂಚಿನ ಮರಗಳಲ್ಲಿ ಹೆಚ್ಚು ಫಸಲು ಸಿಗುವುದು ತೆಂಗಿನ ಬಿಸಿಲು ಪ್ರೀತಿಯ ಗುಣ. ರಾಜ್ಯದ ವಿವಿಧ ಕೃಷಿ ವಲಯಗಳಲ್ಲಿ ಈಗಾಗಲೇ ಬೆಳೆದು ಬದುಕಿದ ಚಿತ್ರ ನೋಡುತ್ತ ಹೋದರೆ ಪರಿಸರಕ್ಕೆ ಯೋಗ್ಯ ತೋಟ ಕಟ್ಟುವ ಕಲಿಕೆ ಸಾಧ್ಯವಾಗುತ್ತದೆ.
ಬಯಲುಸೀಮೆಯ ಭತ್ತದ ಗದ್ದೆಗಳು ಮಾವಿನ ತೋಟವಾಗಿ ಪರಿವರ್ತನೆಯಾದ ಹೊಸತರಲ್ಲಿ ಭತ್ತ ಬೆಳೆಯುತ್ತಿದ್ದರು. ಮಾವಿನ ಮರ ಬೆಳೆದಂತೆ ನೆರಳು ಹೆಚ್ಚಾಗಿ ಭತ್ತದ ಬೆಳೆ ನಿಂತಿತು. ಕಡಿಮೆ ನೀರು ಬಯಸುವ ಗೋವಿನ ಜೋಳ ಬೆಳೆದರು. ಹೀಗೆ ಮರ ಬೆಳೆಯುತ್ತ ವಿಸ್ತಾರಕ್ಕೆ ಚಾಚಿದ ಬಳಿಕ ತುಂಡು ಬಿಸಿಲಲ್ಲಿ ಹುರಳಿ ಮಾತ್ರ ಸಾಧ್ಯವಾಯ್ತು. ಯಾವ ನೆರಳು ಯಾರಿಗೆ ಇಷ್ಟ? ಯಾರಿಗೆ ಕಷ್ಟ? ಅರ್ಥಮಾಡಿಕೊಳ್ಳಲು ಪರಿಸರದ ಮರ ಓದುವ ಸೂಕ್ಷ್ಮತೆ ಬೇಕು. ಕಬ್ಬಿನ ಸಾಲಿನ ಜೊತೆಗೆ ಪುಂಡಿ, ಬೆಂಡೆ ಬೆಳೆಯುವ ವಿದ್ಯೆ ರಾಜ್ಯದ ಕರಾವಳಿಯಿಂದ ಬೀದರ್‌ವರೆಗೂ ಇದೆ. ಪಪ್ಪಾಯ, ಬಾಳೆ, ನುಗ್ಗೆ ತೋಟ ಆರಂಭಿಸುವ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ರೈತರು ಎಡೆ ಬೆಳೆಯಾಗಿ ಮೆಂತ್ಯೆ, ಕೊತ್ತಂಬರಿ ಮುಂತಾದ ಸೊಪ್ಪು ಬೆಳೆಯುತ್ತಾರೆ. ಬೆಳೆ ಕೂಡಿಸುವ ಇಂಥ ಪರಿಜ್ಞಾನ ನೆಲದ ಬೆಳಕು ಓದಿದ ಬದುಕಿನಿಂದ ಬಂದಿದೆ.
ಸೂರ್ಯನ ಚಲನೆ ಗಮನಿಸಿ ತೋಟ ನಿರ್ಮಿಸುವ ಮುಖ್ಯ ಉದ್ದೇಶ ಬಿಸಿಲಿನ ಪ್ರಕರತೆಯಿಂದ ಮರ ರಕ್ಷಿಸುವುದಾಗಿದೆ. ಪಶ್ಚಿಮದ ಇಳಿ ಬಿಸಿಲು ಅಡಕೆ ಮರಕ್ಕೆ ತಾಗಿದರೆ ಒಂದು ಪಾರ್ಶ್ವ ಸುಟ್ಟು ಹೋಗುತ್ತದೆ. ಹೀಗಾಗಿ ತೋಟದ ಪಶ್ಚಿಮ ದಿಕ್ಕಿನಲ್ಲಿ ನೆರಳಿಗೆ ಮರ ಬೆಳೆಸುವ ಪರಂಪರೆ ಇದೆ. ಇದರ ಜೊತೆಗೆ ಒಂದು ಅಡಕೆ ಮರದ ನೆರಳು ಇನ್ನೊಂದರ ಮೇಲೆ ಬೀಳುವಂತೆ ಹೊಸ ತೋಟ ರೂಪಿಸುವ “ಉತ್ತರಕಾಟಿ’ ವಿನ್ಯಾಸವಿದೆ. ಅಡಕೆ ತೋಟದ ಒಳಗಡೆ ಬಾಳೆ, ಏಲಕ್ಕಿ, ಕಾಳು ಮೆಣಸು, ಲವಂಗ, ಕೊಕ್ಕೋ ಮುಂತಾದ ಬೆಳೆ ಸೇರಿಸಲು ಬಿಸಿಲು ಬೆಳಕಿನ ಲಭ್ಯತೆಯ ಜಾnನ ಅಗತ್ಯವಿದೆ. ಗಿಡಗಳಿಗೆ ಬಿಸಿಲಿನಂತೆ ಗಾಳಿಯೂ ಬೇಕು. ಆದರೆ, ಜೋರು ಗಾಳಿಗೆ ನೆಲದ ತೇವ ಬಹುಬೇಗ ಆರಬಹುದು. ಫ್ಯಾನ್ ಹಾಕಿದಾಗ ಒದ್ದೆ ಬಟ್ಟೆಗಳು ಒಣಗುವಂತೆ ಇಲ್ಲಿನ ಕ್ರಿಯೆಯಾಗಿದೆ. ಬಿಸಿಲು, ಗಾಳಿ ತಡೆಗೆ ತೋಟದ ಆಯ್ದ ನೆಲೆಗಳಲ್ಲಿ ಮರ ಬೆಳೆದಾಗ ನೀರಿನ ಬಳಕೆ ಮಿತಗೊಳ್ಳುತ್ತದೆ. ನೆಲದ ತೇವ ಉಳಿಸುವುದು ಮರೆತು ತೋಟಕ್ಕೆ ಪ್ರವಾಹದಂತೆ ನೀರುಣಿಸುವುದು ತಪ್ಪಲ್ಲವೇ? ನೆಲದ ತಂಪು ಉಳಿಸುವ ಕಾಡಿನ ಸೂತ್ರದಲ್ಲಿ ನೀರಿನ ಮಿತ ಬಳಕೆಯ ದಾರಿ ಇದೆ.
(ಮುಂದಿನ ಭಾಗ: ಸಸ್ಯ ಲೋಕದಲ್ಲಿ ಜಾತಿ ಸಂಘರ್ಷ!)
- ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.