ಕೃಷಿಯೇ ಜೀವನ ಸಾಕ್ಷಾತ್ಕಾರ


Team Udayavani, Aug 27, 2018, 6:00 AM IST

kalave-1.jpg

ಜೋಳ, ಹತ್ತಿ, ತೊಗರಿ, ಭತ್ತ, ಕಬ್ಬು, ರಾಗಿ, ಸೂರ್ಯಕಾಂತಿ, ಅಡಿಕೆ, ತೆಂಗು, ದಾಳಿಂಬೆ ಮುಂತಾದ ಏಕ ಬೆಳೆಯ ಸಾಮ್ರಾಜ್ಯ ಕಟ್ಟುವುದು ನಮಗೆಲ್ಲ ತಿಳಿದಿದೆ. ಸಾವಿರಾರು ಅಡಿ ಆಳದ ಕೊಳವೆ ಬಾವಿ ಕೊರೆದು ತೋಟ ಗೆಲ್ಲಿಸಲು ಹೋರಾಡುವವರ ಎದುರು ಹನಿ ನೀರನ್ನೂ ಬೇಡದ ಕಾಡು ಮರಗಳು, ಹಸಿರು ಅಭಿವೃದ್ಧಿಯ ಹೊಸ ಆಯಾಮ ತೋರಿಸುತ್ತಿವೆ. ಕಾಡೊಳಗೆ ತೋಟವಿರುವುದು ಗೊತ್ತಿದೆ,  ಆದಾಯ-ನೆಮ್ಮದಿ ತರುವ ಕಾಡು ತೋಟದ ಕನಸು ಶುರುವಾಗಿದೆ.

ಬೆಂಗಳೂರು ಬೇಜಾರಾಗಿದೆ. ಎರಡು ಎಕರೆ ಜಮೀನು ಖರೀದಿಸಿ, ಅಲ್ಲಿ ಕಾಡು ಬೆಳೆಸಿ, ಅದರ ನೆರಳಲ್ಲಿ ಬದುಕುವ ಆಸೆ ಇದೆ. ವನವಾಸಕ್ಕೆ ಹೊರಡಲು ಹಲವರು ಸಿಲಿಕಾನ್‌ ಸಿಟಿಯ ಹೊರಗಡೆ ಕಾಲಿಟ್ಟು ನಿಂತಿದ್ದಾರೆ. ಮರ, ಹಣ್ಣು, ಬಳ್ಳಿ, ಹಕ್ಕಿ, ಚಿಟ್ಟೆ, ಜೇನು, ನೀರು, ಮೀನು ಎನ್ನುತ್ತಾ ಮಾತಾಡಲು ಶುರು ಮಾಡುತ್ತಾರೆ. ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಓಡುವುದು, ಸಂಜೆ ಗೂಡು ಸೇರಲು ಟ್ರಾಫಿಕ್‌ ಜಾಮ್‌ನಲ್ಲಿ ಹೊಗೆ ಕುಡಿಯುವುದು.  ಸುಸ್ತಾಗಿ ಮಲಗಿದರೆ ಮತ್ತೆ ಅರೆನಿದ್ದೆಯಲ್ಲಿ ಓಡುವ ಯಾಂತ್ರಿಕತೆ ಜುಗುಪ್ಸೆ ಹುಟ್ಟಿಸಿದೆ. ದಿನ ಕಳೆಯುತ್ತಿದೆ…ಆರೋಗ್ಯ ಹಾಳಾಗುತ್ತಿದೆ….

ವಯಸ್ಸಾಗುತ್ತಿದೆಯೆಂದು ಅಳುತ್ತಾರೆ. ಗಡಿಯಾರ, ಮೊಬೈಲ್‌ ಮರೆಯಬೇಕು. ಹಸಿರ ನೆರಳಲ್ಲಿ ತಣ್ಣಗೆ ಬದುಕು ಶುರುಮಾಡಬೇಕೆಂಬ ಹುಚ್ಚು ಹಂಬಲಗಳಿವೆ.  ನೌಕರಿಗೆಂದು ನಗರ ಸೇರಿದವರ ಪರಿಸ್ಥಿತಿ ಹೀಗಿದ್ದರೆ, ಇತ್ತ ಅಜ್ಜನ ಕಾಲದಿಂದ ಬೇಸಾಯದಲ್ಲಿ ಬದುಕಿದ ಕುಟುಂಬಗಳದು ಇನ್ನೊಂದು ವ್ಯಥೆ. ಒಂದು ಬೆಳೆಯಲ್ಲಿ ಏಗಿದ್ದು ಸಾಕು. ನಮಗೆ ಅಗತ್ಯವಿರುವ ಹಣ್ಣು, ಹೂವು, ತರಕಾರಿ, ಮೂಲಿಕೆ, ಮೇವು ಎಲ್ಲವೂ ಭೂಮಿಯಲ್ಲಿರಬೇಕು. ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲು ಭೂಮಿಯ ರೈತರಲ್ಲಿ ಹೊಸ ಆಸೆ ಮೊಳೆತಿದೆ. ವನವಾಸದ ಪ್ರೀತಿ ಶುರುವಾಗಿದೆ. 

ದಶಕಗಳೀಚೆಗೆ ಕೃಷಿ ಜೀವನ ಶೈಲಿ ಬದಲಾಗಿದೆ. ಓದಿದ ಹುಡುಗರು ಹಲವರು ಬಂದಿದ್ದಾರೆ. ಜಗತ್ತಿನ ತಲ್ಲಣಗಳಿಗೆ ಮದ್ದರೆಯುವ ಮಂತ್ರವನ್ನು ಪುಟ್ಟ ಹೊಲದಲ್ಲಿ ಇದ್ದು ಕೊಂಡೇ ಹೇಳಬೇಕೆಂದು ಯೋಚಿಸಿದ್ದಾರೆ. ಬೆಲೆ ಕುಸಿತ, ಬರ, ಜಲಕ್ಷಾಮ, ಕೀಟ, ರೋಗಬಾಧೆಗಳ ಪಾಠ ದೊರಕಿದೆ. ರೈತರ ಒತ್ತಡಗಳು ಅರ್ಥವಾಗತೊಡಗಿವೆ. ಕೃಷಿಯೆಂದರೆ ನಿಸರ್ಗವನ್ನು ಅರ್ಥಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯ, ನೆಮ್ಮದಿಯನ್ನೂ ಪಡೆದುಕೊಳ್ಳುವುದೆಂದು ಸಹಜ ಕೃಷಿಯ ಮಸನೂಬು ಪುಕುವೊಕ ಹೇಳಿದ ಮಾತು ತಲೆಮಾರಿಗೆ ಕಾಡತೊಡಗಿದೆ. ಕ್ರಿ.ಶ. 1975ರಲ್ಲಿ “ಒಂದು ಹುಲ್ಲಿನ ಕ್ರಾಂತಿ’ ಮೂಲಕ ಕೃಷಿಕರನ್ನು ಕಾಡಿದ ಜಪಾನಿನ ಸಹಜ ಕೃಷಿಯ ಈ ಸಂತ ಪುಕುವೊಕ ಕಾಡು ನೋಡಿ ಕೃಷಿ ಮಾಡುವುದನ್ನು ಕಲಿಸಿದರು. 

1980ರ ದಶಕದಲ್ಲಿ ನಮ್ಮ ನೆರೆಯ ದೇಶ ಶ್ರೀಲಂಕಾದಲ್ಲಿ  ನೈಸರ್ಗಿಕ ಕಾಡು ಕಡಿದು ಏಕಜಾತೀಯ ನೆಡುತೋಪು ಬೆಳೆಸುವ ಕೆಲಸ ನಡೆಯುತ್ತಿತ್ತು (ಹದಿನಾರನೆಯ ಶತಮಾನದಲ್ಲಿ ವಿಶ್ವದ ಪ್ರಥಮ ತೇಗದ ತೋಟವನ್ನು ಶ್ರೀಲಂಕಾದಲ್ಲಿ ಬೆಳೆಸಲಾಗಿದೆ). ಸರಕಾರದ ನೆಡುತೋಪು ವಿರುದ್ಧ  ಪರಿಸರ ತಜ್ಞ ಡಾ.ರೇನಿಯಲ್‌ ಸೇನಾನಾಯಕೆ  ಧ್ವನಿ ಎತ್ತಿದರು. ಆರಣ್ಯ ಇಲಾಖೆಯ ಮಾರ್ಗದರ್ಶಕರಾಗಿದ್ದ ಅವರನ್ನು ಸರಕಾರೀ ಸೇವೆಯಿಂದ ಹೊರದಬ್ಬಲಾಯಿತು. ಮೊನೋಕಲ್ಚರ್‌ ನೆಡುತೋಪಿಗೆ ಪರ್ಯಾಯ ಏನಿದೆ ? ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲಿ ರೇನಿಯಲ್‌ರನ್ನು ಪ್ರಶ್ನಿಸಲಾಯ್ತು.  ಉತ್ತರ ಹುಡುಕಲು ಅಧ್ಯಯನ ಆರಂಭಿಸಿದರು. 

ಮಿರಾವತ್‌ ಊರಿನ ಬೆಟ್ಟಗುಡ್ಡಗಳ ನಡುವಿನ  ಬಂದರ್‌ ಲಾ  ಪ್ರದೇಶದ ಹಾಳು ಬಿದ್ದ ಚಹದ ತೋಟ ಖರೀದಿಸಿದರು. “ನಿಯೋ ಸಿಂಥಸಿಸ್‌ ರಿಸರ್ಚ್‌ ಸೆಂಟರ್‌’ ಸಂಸ್ಥೆ ಆರಂಭಿಸಿ  ತೋಟದಲ್ಲಿ ನೈಸರ್ಗಿಕ ಕಾಡು ಬೆಳೆಸುವ ವಿಧಾನ ಶುರುಮಾಡಿದರು.  ಚಹದ ಗಿಡಗಳನ್ನು ತೆಗೆದು ಆರಂಭದಲ್ಲಿ ನೆರಳು ನೀಡುವ, ಶೀಘ್ರ ಬೆಳೆಯುವ, ಸಾರಜನಕ ಸ್ಥಿರೀಕರಿಸುವ  ಸಸ್ಯಗಳನ್ನು ಬೆಳೆಸಿದರು. ನಂತರದ ವರ್ಷಗಳಲ್ಲಿ ಹಣ್ಣಿನ ಗಿಡ ,ಬಳ್ಳಿ, ಬೆಲೆ ಬಾಳುವ ಮರ, ಗಡ್ಡೆ ಗೆಣಸನ್ನು  ಬೆಳೆಸಿದರು. 10 ವರ್ಷಗಳಲ್ಲಿ ನೆಲ ಫ‌ಲವತ್ತಾಯಿತು, ತೋಟದ ಆಧಾಯ ಹೆಚ್ಚಿತು. ವಿವಿಧ ಪಕ್ಷಿ ಸಂಕುಲಗಳಿಗೆ  ತೋಟ ಆಶ್ರಯ ನೀಡಿತು. ಕಾಡು ತೋಟದ ಜನನವಾಯ್ತು. ಕ್ರಿ.ಶ. 1994ರಲ್ಲಿ ಮೆಕ್ಸಿಕೋದಲ್ಲಿ ಸಭೆ ಸೇರಿದ ಪರಿಸರ ತಜ್ಞರು, ಅನಲಾಗ್‌ ಫಾರೆಸ್ಟ್‌ (ಅnಚlಟಜ ಊಟ್ಟಛಿsಠಿ)) ತೋಟಗಾರಿಕೆಯ ಉತ್ತಮ ಮಾದರಿ ಎಂದರು. ಮುಂದೆ ಈ ವಿಧಾನ ಶ್ರೀಲಂಕಾ, ಕೆನಡಾ, ಕೀನ್ಯಾ, ಕೋಸ್ಟರಿಕಾ ದೇಶಗಳಲ್ಲಿ ಜನಪ್ರಿಯವಾಯಿತು.  ಸಾದ್ರಶ್ಯ ಅರಣ್ಯ, ಕಾನ್‌ತೋಟ, ಕಾಡು ತೋಟ ,ತದ್ರೂಪಿ ಕಾಡು  ಎಂದು ಇದನ್ನು  ಕರೆಯಲಾಗುತ್ತದೆ.  

ಮಲೆಕುಡಿಯ ವನವಾಸಿಗರು ಮದುವೆಗೆ ಹೋಗಿ ಬಂದವರು ಕಾಡಿನಂತೆ ಜನ ಸೇರಿದ್ದರು ಎಂದು ಹೇಳುತ್ತಾರೆ. ಕಾಡಿನಲ್ಲಿ ನೂರಾರು ಅಡಿಯೆತ್ತರದ ಮಹಾಮರಗಳು, ಪುಟ್ಟ ಮೊಳಕೆಯಿಂದ ಶುರುವಾಗಿ ವಿವಿಧ ಹಂತಗಳಲ್ಲಿ ಬೆಳೆದ ಸಸ್ಯ ಸಂಕುಲಗಳು. ಮರ, ಗಿಡ ,ಬಳ್ಳಿ, ಪೊದೆ, ಹುಲ್ಲುಗಳೆಲ್ಲ ಸೇರಿ ಕಾಡು ಕುಟುಂಬದಂತೆ ಕೂಡಿರುತ್ತದೆ. ಅಜ್ಜ ಅಜ್ಜಿಯರಿಂದ ಎಳೆ ಶಿಶುಗಳೆಲ್ಲ ಬಂದಿದ್ದರೆಂಬ ಕಾಡು ಕಲ್ಪನೆ ಇದು. ಕಾಡು ತೋಟವನ್ನು ಈ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.  ಗೊಬ್ಬರ ಹಾಕದೇ, ನೀರಾವರಿ ಇಲ್ಲದೇ ಅರಣ್ಯದ ಕನ್ನಡಿಯಲ್ಲಿ ಬೇಸಾಯದ ದಾರಿ ಹುಡುಕುವ ಪ್ರಯತ್ನವಿದು. ಅಬ್ಬರದ ಮಳೆ ಸುರಿಯುವ ಜಾಗದಲ್ಲಿ ಅಲ್ಲೆಲ್ಲೂ ಇಲ್ಲದ ಹುಲ್ಲಿನಂಥ ಬೆಳೆ ಬೆಳೆಯಲು ಹೊರಟಾಗ ಸಮಸ್ಯೆ ಶುರುವಾಗುತ್ತದೆ. ಕೃಷಿ ಪರಿಸರಕ್ಕೆ ಪರಕೀಯವಾಗುವ ಬದಲು ಅದರ ನೆರಳಿನ ಪ್ರತಿರೂಪವಾಗುವ ಸಾಧ್ಯತೆ ಮುಖ್ಯ.  ಮಣ್ಣಿಗೆ ಶಕ್ತಿ ದೊರೆಯಲು ನಿಸರ್ಗಕ್ಕೆ ಹೆಚ್ಚು ಅವಕಾಶ ಕಲ್ಪಿಸುವ ನೋಟವಿದೆ. ಕೃಷಿಯೆಂದರೆ ಅರಣ್ಯದ ಮೇಲಿನ ದಂಡಯಾತ್ರೆಯಲ್ಲ, ಇರುವುದನ್ನು ಕತ್ತಿ, ಕೊಡಲಿಗಳಿಂದ ಸಂಹರಿಸಿ ಹೊಸದನ್ನು ಬೆಳೆಯುವುದಕ್ಕಿಂತ  ನಿಸರ್ಗ ಸಂಧಾನದ ಮೂಲಕ ಕೃಷಿ ಬದುಕು ಕಟ್ಟುವುದೆಂಬ ಸೂತ್ರವಿದು.   

ಕಡಿಯುವ, ಕೊಚ್ಚುವ ಕ್ರಿಯೆಯಿಂದ ಗುಡ್ಡಗಳಿಗೆ ಗಾಯವಾಗಿದೆ. ಮಡಿಕೇರಿಯ ಗುಡ್ಡಬೆಟ್ಟಗಳು ಕುಸಿದಿವೆ.  ಶೇ. 60 ರಷ್ಟು ಅರಣ್ಯರಬೇಕಾದ ಕಡಿದಾದ ಬೆಟ್ಟದಲ್ಲಿ ಮರದಟ್ಟಣೆ ಇಲ್ಲ. ಎಕರೆಯಲ್ಲಿ ವರ್ಷಕ್ಕೆ ಒಂದೂವರೆ ಕೋಟಿ ಲೀಟರ್‌ ಮಳೆ ನೀರು ಸುರಿಯುವುದು ಹೊಸತಲ್ಲ. ಮರಗಳಿರುವ ಜಾಗದಲ್ಲಿ ಮನೆ, ರಸ್ತೆಗಳು ಬಂದಿವೆ. ಕುರುಚಲು ಗಿಡದಂತೆ ಕಾಫಿ ಹಬ್ಬಿದೆ. ಮಳೆಗಾಲವಿಡೀ ಮಣ್ಣು ಕೊಚ್ಚಿ ಹೋಗುತ್ತಿದೆ, ಬೇಸಿಗೆಯಲ್ಲಿ ಜಲಕ್ಷಾಮ ಹೆಚ್ಚುತ್ತಿದೆ. ಈಗ ಮಹಾಮಳೆಗೆ ಬದುಕು ನೆಲಸಮವಾಗಿದೆ.  ನಿಸರ್ಗದ ಸಹನೆ ಮೀರಿದ ಪರಿಣಾಮಗಳಲ್ಲವೇ ಇವು? ಆಳಕ್ಕೆ ಬೇರಿಳಿಸುವ ಮರಗಳ ಜಾಗದಲ್ಲಿ ಸಿಲ್ವರ್‌ ಓಕ್‌ ಬೆಳೆದಿದೆ. ಬೋಳುಗುಡ್ಡದಲ್ಲಿ ಹುಲ್ಲು ಹುಟ್ಟದಷ್ಟು ಮಣ್ಣು ಸತ್ವàನವಾಗಿ ಮಳೆಗೆ ಓಡಿದೆ. ಹಳ್ಳ, ಕೆರೆ, ನದಿಗಳಲ್ಲಿ ಹೂಳು ಭರ್ತಿಯಾಗುತ್ತಿದೆ. ನಾಡಿಗೆ ಅನ್ನ ಕೊಡುವವರ ಬದುಕು ನಿರಾಶ್ರಿತರ ನೆಲೆ ತಲುಪಿದ ತಾಜಾ ಉದಾಹರಣೆ ಇದೆ. 

ಬೆಳೆ ಬೆಳೆಯಲು ಶಕ್ತಿ ಇಲ್ಲದ ಮಣ್ಣಿಗೆ ಗೊಬ್ಬರ ಸುರಿಯುತ್ತೇವೆ. ರೋಗ ನಿಯಂತ್ರಣಕ್ಕೆ ರಾಸಾಯನಿಕ ಎರಚುತ್ತೇವೆ. ನೆಲದ ಜೀವಲೋಕದ ಸಂಬಂಧಗಳಿಲ್ಲದೇ ಬೇಸಾಯ ಕಟ್ಟುವ ಹೋರಾಟ ನಡೆಯುತ್ತಿದೆ. ವನ್ಯಜೀವಿಗಳಿಗೆ ಕಾಡಿನಲ್ಲಿ ಆಹಾರಯೋಗ್ಯ ಸಸ್ಯ ಬೆಳೆಯುವುದನ್ನೇ ಮರೆತಿದ್ದೇವೆ. ಕೃಷಿ ಬೆಳೆಗೆ ವನ್ಯಜೀವಿ ಉಪಟಳವೆಂದು ಬೊಬ್ಬೆ ಹೊಡೆಯುತ್ತೇವೆ. ಕೃಷಿ ಎಂಬು ಇವತ್ತು ಮಾನವ ಮತ್ತು ವನ್ಯಜೀವಿ ಸಂಘರ್ಷಗಳ ತಾಣವಾಗಿದೆ. ಹಸಿರು ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಪ್ರತಿಯೊಬ್ಬ ಕೃಷಿಕರೂ ವನವಾಸಿಯಾಗುವ ಕಾಲ ಈಗ ಸನ್ನಿಹಿತವಾಗಿದೆ. ನಿಸರ್ಗ ವಿಜಾnನಗಳನ್ನು ಕಾಡು ಕಲಿಸುವಷ್ಟು ಪರಿಣಾಮಕಾರಿಯಾಗಿ ಯಾವ ಪುಸ್ತಕವೂ ಹೇಳುವುದಿಲ್ಲ. ಕಾಡಿನಲ್ಲಿ ಕೃಷಿ ಮಾಡಿದ್ದೇವೆ. ಕಾಡಿನ ಮರ ಕಡಿದು ಬೇಸಾಯಕ್ಕೆ ಬಳಸಿದ್ದೇವೆ. ಈಗ ಕಾಡನ್ನು ಹೊಲಕ್ಕೆ ಕರೆಯಬೇಕಾಗಿದೆ. ಹೊಲದ ಬದುವಿನಲ್ಲಿ ಹೊಂಗೆ ನೆಡುವ ಲಾಗಾಯ್ತಿನ ಕೃಷಿ ಅರಣ್ಯ ಇದಲ್ಲ.  ಸಸ್ಯ ವೈವಿಧ್ಯಗಳಲ್ಲಿ ಸುಸ್ಥಿರ ಬದುಕಿನ ಸತ್ವ ಹುಡುಕುವುದು ಇಲ್ಲಿ ಮುಖ್ಯವಾಗಿದೆ. ಒಂದು ಸೋತರೆ ಇನ್ನೊಂದರಲ್ಲಿ ಗೆಲ್ಲುವ ಸಮಗ್ರ ಕೃಷಿಯ ತತ್ವಗಳಿವು. ಅಲ್ಲಿ  ನಮ್ಮಲ್ಲಿ ಕಾಡೆಂದರೆ ಮರ ಉತ್ಪಾದನೆಯ ತಾಣವೆಂಬ ಅರಿವಿದೆ. ಕಾಡು ತೋಟದ ಪರಿಕಲ್ಪನೆ ಯಾವತ್ತೂ ಮರದ ಸುತ್ತ ಮಾತ್ರ ತಿರುಗುವುದಿಲ್ಲ. ಕಾಡಿನ ಕೂಡು ಕುಟುಂಬದ ಸಸ್ಯ ಕೂಡಿಸುವ ಕಾಯಕವನ್ನು ಕೃಷಿಯಲ್ಲಿ ವಿನ್ಯಾಸಗೊಳಿಸುವುದಾಗಿದೆ.  

ನಾವು ಹುಟ್ಟತ್ತ ಕೃಷಿ ನೋಡುತ್ತ ಬೆಳೆದವರು. ನಮ್ಮ ಅನುಭವ ಉಳುಮೆ, ನೀರಾವರಿ, ಗೊಬ್ಬರ, ಕೀಟ ನಿಯಂತ್ರಣ, ರೋಗ ತಡೆಯುವುದು, ಕೊಯ್ಲು, ಸಂಸ್ಕರಣೆಯ ಸುತ್ತ ಬೆಳೆದಿದೆ. ನಮ್ಮ ಬೆಳೆಯ ಜಾnನಕ್ಕೆ ನಾವೇ ಕಟ್ಟಿಕೊಂಡ ಬೇಲಿ ಇದೆ. ಕೃಷಿ ಜಾnನ ವಿಸ್ತರಣೆಗೆ ಸುತ್ತಾಟ ಬೇಕು, ಕಲಿಕೆ ನಿರಂತರ. ಹವಾಮಾನ ವೈಪರಿತ್ಯ, ಅಕಾಲಿಕ ಮಳೆ, ಬರಗಾಲ, ಜಲಕ್ಷಾಮ ಗೆಲ್ಲಲು ನಾವು ಪಳಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೃಷಿಕರ ಆರೋಗ್ಯ ಉತ್ತಮವಾಗಿರಬೇಕು. ಮನಸ್ಸು ಖುಷಿ ಖುಷಿಯಾಗಿರಬೇಕು. ಕ್ರಿಯಾಶೀಲತೆ ಹುಟ್ಟುಗುಣ, ಹೊಸದಾಗಿ ಕಲಿಸಲಾಗದು ಎಂಬ ಮಾತಿದೆ. ಮನಸ್ಸು ಮಾಡಿದರೆ ಪ್ರತಿ ಗಿಡ, ಬಳ್ಳಿಗಳ ಜೊತೆ ಮಾತಾಡುತ್ತ ಕಲಿತು ಬೆಳೆಯುವ ತಾಕತ್ತು ಪ್ರತಿಯೊಬ್ಬರಲ್ಲಿದೆ. ಕೆಲವೇ ಕೆಲವು ಮಿಲಿ ಗ್ರಾಮ್‌ ಮಣ್ಣು ಒಯ್ದು ಪರೀಕ್ಷಿಸಿ ಇಡೀ ಭೂಮಿಯ ಗುಣ ನಿರ್ಧರಿಸುವ ತಾಂತ್ರಿಕತೆಯನ್ನು ನಾವಿಂದು ನಂಬಿದ್ದೇವಲ್ಲವೇ?  ನಾವು ನಮ್ಮ ಮಣ್ಣನ್ನು ಮರ, ಬಳ್ಳಿ, ಪೊದೆ, ಗಡ್ಡೆ, ಹುಲ್ಲುಗಳ ಆರೋಗ್ಯದ  ಮೂಲಕ ಅರಿಯುವ ಅಗತ್ಯವಿದೆ. ಪುಸ್ತಕ ಓದಿ ಕಾಡು ಬೆಳೆಯುವುದಿಲ್ಲ. ಲಭ್ಯ ಅವಕಾಶದಲ್ಲಿ ಸತತ ಹೋರಾಟದಲ್ಲಿ ಗೆಲ್ಲುತ್ತ, ಸೋಲುತ್ತ ನಮ್ಮ ಸುತ್ತ ಹಸಿರು ನಿಂತಿದೆ. ಸೋಲು ಗೆಲುವಿನ ಕಲಿಕೆಗೆ ಮಾದರಿಗಳ ಪ್ರಯೋಗಗಳು ಬೇಕು. ಫ‌ಲಾಫ‌ಲಗಳನ್ನು ಅರಿತು ನಡೆಯುವ ಜಾnನ ಬೇಕು. ವನಸಾಕ್ಷರತೆಯ ಮೂಲಕ ಪರಿಸರ ಪ್ರೀತಿಯ ನೀತಿ ಬೇಸಾಯದಲ್ಲಿ ಬೆಳೆಯಬೇಕು. ಅಲ್ಲಿಂದ ಕೃಷಿಯಲ್ಲಿ ವನ ಸಾಕ್ಷಾತ್ಕಾರ ಶುರುವಾಗುತ್ತದೆ.

ಕಾಡು ಕಲಿಸುವ ಪಾಠ
ನಮ್ಮ ಮಲೆನಾಡಿನ ಅರಣ್ಯೀಕರಣವನ್ನು ಗಮನಿಸಬೇಕು. ಅರಣ್ಯಾಭಿವೃದ್ಧಿ ಎಂದರೆ ತೇಗ, ಅಕೇಶಿಯಾ, ನೀಲಗಿರಿ ಬೆಳೆಯುವುದೆಂದು ಇಲಾಖೆ ಭಾವಿಸಿದೆ. ಇಲ್ಲಿನ ಕೃಷಿಕರು ಇದರ ಇನ್ನೊಂದು ರೂಪವಾಗಿ ಅಡಿಕೆ, ತೆಂಗು, ಕಾಫಿ, ರಬ್ಬರ್‌, ಅನಾನಸ್‌, ಗೇರು, ಮಾವು ಮುಂತಾದ ಏಕ ಬೆಳೆಗಳ ಸಾಮ್ರಾಜ್ಯ ಕಟ್ಟಿದ್ದಾರೆ. ಸಾಲಿನಿಂದ ಸಾಲಿಗೆ ಎಷ್ಟು ಅಂತರವಿರಬೇಕು? ಗಿಡದಿಂದ ಗಿಡಕ್ಕೆ ಎಷ್ಟು ದೂರ ಬೇಕು? ಲೆಕ್ಕಾಚಾರಗಳನ್ನು ತಾಂತ್ರಿಕತೆ ಕಲಿಸಿದೆ.   ಕಾಡೊಳಗೆ ಒಂದು ಮರದ ಪಕ್ಕ ಇನ್ನೊಂದು ಹೆಮ್ಮರ ಆರೋಗ್ಯವಂತವಾಗಿ ಬೆಳೆಯುತ್ತದೆ. ಆದರೆ ಈಗ ಕೃಷಿ ಮಾಡುವವರಾಗಲಿ, ಕಾಡಲ್ಲಿ ಮರ ಬೆಳೆಸುವ ಕೃತ್ಯಗಳಾಗಲಿ ಒಂದು ಶಿಸ್ತಿಗೆ ಒಳಪಟ್ಟಿದೆ. ಗೆಲ್ಲುವ ಪೈಪೋಟಿಯಲ್ಲಿ ಮಣ್ಣು ಸೋಲುತ್ತಿದೆ. ನಿಸರ್ಗ ಓದದೇ ಬದುಕಿದ ಇಂಥ ಹೆಜ್ಜೆಗಳ ಫ‌ಲವೇ ಇಂದು ನಮ್ಮೆದುರಿಗಿದೆ.

ಮುಂದಿನ ಭಾಗ- ಕೃಷಿ ಕಾಡಿನ ಜೀವದಾರಿ

– ಶಿವಾನಂದ ಕಳವೆ

ಟಾಪ್ ನ್ಯೂಸ್

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.