ಕಣ್ಣ ಮುಂದೆ ಗುರಿ; ಸಿಗುವುದಾಗ ದಾರಿ
Team Udayavani, Apr 23, 2018, 11:52 AM IST
ದಿನೇ ದಿನೇ ಏರುತ್ತಿರುವ ಬೆಲೆಗಳಿಂದ ನಮ್ಮ ಜೀವನದ ಗುಣಮಟ್ಟ ಕುಸಿಯಬಾರದು ಎನ್ನುವ ಎಚ್ಚರಿಕೆ, ಕನಸುಗಳನ್ನು ನನಸಾಗಿಸಿಕೊಳ್ಳುವ ಆರಂಭಿಕ ಮತ್ತು ಬಹುಮುಖ್ಯ ಹೆಜ್ಜೆಯೇ ಉಳಿತಾಯ.
ನಾವು ಎಲ್ಲಿಗಾದರೂ ಹೋಗಬೇಕು ಎಂದು ಮೊದಲು ನಿರ್ಧರಿಸುತ್ತೇವೆ. ಆ ನಂತರ ಹೋಗುವ ದಾರಿ ಯಾವುದು ಎಂದು ನೋಡುತ್ತೇವೆ. ಯಾವ ದಾರಿಯಲ್ಲಿ ಹೋದರೆ ಸುಲಭವಾಗಿ ಹೋಗಬಹುದು, ಬೇಗ ಹೋಗಬಹುದು ಎಂಬುದನ್ನೆಲ್ಲಾ ಲೆಕ್ಕ ಹಾಕುತ್ತೆವೆ. ಅದು ಬಿಟ್ಟು, ಎಲ್ಲಿಗೆ ಹೋಗಬೇಕು ಎನ್ನುವುದೇ ಗೊತ್ತಿಲ್ಲದಿದ್ದರೆ, ನಮಗೆ ಯಾವ ದಾರಿಯಾದರೂ ಸರಿ. ಆಗ ಗುರಿ ಮುಟ್ಟುವ ಖಚಿತತೆ ಇರುವುದಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಗುರಿಯೇ ಇರದಿದ್ದರೆ; ದಾರಿ ಯಾವುದಾದರೆ ಏನು? ಸುಮ್ಮನೇ ನಡೆಯುತ್ತಿರುತ್ತೇವೆ. ಗುರಿ ಮುಟ್ಟಲೇ ಬೇಕೆಂಬುದೇ ಇರುವುದಿಲ್ಲ. ಉಳಿತಾಯ ಮಾಡಬೇಕು ಎಂದು ಅಂದುಕೊಳ್ಳುತ್ತೇವೆ. ಆದರೆ ಯಾವ ಕಾರಣಕ್ಕೆ ಎಂದು ಸ್ಪಷ್ಟವಾಗಿ ಇರದಿದ್ದರೆ ಉಳಿತಾಯ ಒಂದು ಬದ್ಧತೆಯಾಗುವುದಿಲ್ಲ. ಉಳಿತಾಯ ಮಾಡಬೇಕೆಂಬುದು ನಮ್ಮ ಅನಿವಾರ್ಯತೆಯ ಹಾಗೆ ಆಗಬೇಕು.
ಮನದ ಮುಂದೆ ಒಂದು ಕನಸು, ಗುರಿ, ಈಡೇರಿಸಲೇ ಬೇಕು ಎನ್ನುವ ಒತ್ತಡ ಇರಲೇ ಬೇಕು. ಉದಾಹರಣೆಗೆ, ಮನೆ ಕಟ್ಟಿಸಬೇಕು, ನಿವೇಶನ ಕೊಳ್ಳಬೇಕು, ಕಾರು ಖರೀದಿಸಬೇಕು, ಲೀಸ್‌ಗೆ ಮನೆ ಹಾಕಿಕೊಳ್ಳಬೇಕು, ಆರ್.ಡಿ ಕಟ್ಟಬೇಕು. ಹೀಗೆ ಯಾವುದಾದರೂ ನಿರ್ದಿಷ್ಟ ಉದ್ದೇಶ, ಗುರಿ ಇರಲೇಬೇಕು. ಹಾಗಿದ್ದಾಗ ಮಾಡುವ ಉಳಿತಾಯವೇ ಬೇರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೆಲಸಕ್ಕೆ ಸೇರಿದ ತಕ್ಷಣ, ತಂದೆ ತಾಯಿ ಅವರಿಗೆ ಒಂದು ಆಸ್ತಿ ಕೊಡಿಸಿ, ಸಾಲ ಮಾಡಿಸಿ, ಸಾಲದ ಕಂತು ಕಟ್ಟಲಿ ಎಂದು ಯೋಚಿಸುತ್ತಾರೆ. ಹೀಗೆ ಮಾಡುವ ಮೂಲಕ ಉಳಿತಾಯವನ್ನು ಪರೋಕ್ಷವಾಗಿ ಹೇರಿದ ಹಾಗೆ ಆಗುತ್ತದೆ. ಯಾವುದಾದರೂ ಆರ್ಥಿಕ ಗುರಿ ಇರದಿದ್ದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುವುದೇ ಇಲ್ಲ.
ಕಷ್ಟ ಬಂದಾಗ ದೇವರು ಕಾಪಾಡುತ್ತಾನೆ ಬಿಡು ಎಂದು ದುಡ್ಡಿದ್ದಾಗ ಉಳಿಸದಿದ್ದರೆ; ಯಾವ ದೇವರೂ ಕಾಪಾಡಲಾರ. ನಮ್ಮ ಸಂಪಾದನೆಯಲ್ಲಿ ಉಳಿಸಬೇಕೆಂದಿರುವ ಹಣವನ್ನು ಮೊದಲು ಕಳೆದ ನಂತರವೇ ಖರ್ಚು ಮಾಡಬೇಕು. ಮುಂದೆ ದುಡ್ಡು ಬರುತ್ತೆ; ಏನೂ ತೊಂದರೆ ಇಲ್ಲ ಬಿಡು ಎನ್ನುವುದು ಹಲವರ ನಿರಾಳತೆಯ ಮಾತು. ಮುಂದೆ ದುಡ್ಡು ಬರುತ್ತೋ ಇಲ್ಲವೋ ಅದಿನ್ನೂ ಕೈಗೆ ಸಿಗಲಿಲ್ಲ.
ಕಣ್ಣಿಗೆ ಕಾಣುವುದೂ ಇಲ್ಲ. ಹೀಗಿರುವಾಗ ಮುಂದಿನ ಬಗೆಗೆ ಯೋಚಿಸುವುದು ಏಕೆ? ಮಕ್ಕಳು ಹುಟ್ಟಿದ ತಕ್ಷಣ ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಾರೆ. ನಮ್ಮ ಪರಿಚಿತರೊಬ್ಬರು ಮಗು ಹುಟ್ಟಿದ ತಕ್ಷಣದ ತಿಂಗಳಿನಿಂದ ಮಗುವಿನ ಹೆಸರಿನಲ್ಲಿ500 ರೂಪಾಯಿ ಆರ್.ಡಿ. ಕಟ್ಟಲು ಆರಂಭಿಸಿದರು. ಮಗುವಿನ ಹುಟ್ಟು ಹಬ್ಬಕ್ಕೆ ಹಣ ವ್ಯಯಿಸಲಿಲ್ಲ. ಅವರು ಕಟ್ಟುತ್ತ ಬಂದ ಹಣ ಮುಂದೆ ಅವರ ಮಗುವಿನ ಉನ್ನತ ವಿದ್ಯಾಭ್ಯಾಸಕ್ಕೆ ಆಯಿತು.
ಇದನ್ನು ಗಮನಿಸಿದ ನಂತರವೂ ಒಬ್ಬರು ಕೇಳಿದರು “ಹೀಗೆಲ್ಲಾ ಯಾಕೆ ಉಳಿಸಬೇಕು? ಈ ಪ್ರಶ್ನೆ ಹೇಗಿದೆ ಎಂದರೆ ಬೆಳಗ್ಗೆಯವರೆಗೆ ರಾಮಾಯಣ ಕೇಳಿ ನಂತರ ರಾಮನಿಗೆ ಸೀತೆ ಏನಾಗಬೇಕು ಅಂದ ಹಾಗಾಯಿತು. ಆದರೂ ನಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಾಗಲೇ ನಾವು ಅದನ್ನು ಅನುಸರಿಸುತ್ತೇವೆ. ಪಾಲಿಸುತ್ತೇವೆ.
ಪ್ರತಿ ನಿತ್ಯವೂ ಏರುವ ಬೆಲೆಗಳಿಂದ ಪಾರಾಗುವುದಕ್ಕೆ, ಇವತ್ತು ಇದ್ದ ನೂರು ರೂಪಾಯಿಯ ಬೆಲೆ ಮುಂದಿನ ವರ್ಷಕ್ಕೆ ಇನ್ನಷ್ಟು ಕುಸಿಯುವುದೆಂಬ ಸತ್ಯದ ಅರಿವಿರುವ ಎಲ್ಲರೂ ಉಳಿತಾಯ ಮಾಡಲೇ ಬೇಕು. ಹಣದುಬ್ಬರದಿಂದ ನಮ್ಮ ಜೀವನದ ಗುಣಮಟ್ಟ ಕುಸಿಯದ ಹಾಗೆ ನೋಡಿಕೊಳ್ಳಬೇಕೆಂದರೆ, ಉಳಿತಾಯವೇ ಆದಾಯ ಆಗಬೇಕು.
* ಸುಧಾಶರ್ಮ ಚವತ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ
Naxal Surrender: ನಕ್ಸಲ್ ಶರಣಾಗತಿ ಪೂರ್ವಯೋಜಿತ ಸ್ಟೇಜ್ ಶೋ ಅಲ್ಲವೇ?
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ
Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.