ಏರ್ ಪಾಡು; ಮನೆಯೊಳಗೆ ಶುದ್ಧ ಗಾಳಿ ಹರಿಯಲಿ
Team Udayavani, Nov 18, 2019, 5:35 AM IST
ವಾಯುಮಾಲಿನ್ಯ ಎಂಬುದು, ರಸ್ತೆಯಲ್ಲಿ ಹೋಗುವಾಗ ಮಾತ್ರವೇ ಅಲ್ಲ, ಮನೆಯೊಳಗೆ ಇದ್ದಾಗಲೂ ಬಾಧಿಸಬಹುದು. ಕೆಲ ಕ್ರಮಗಳನ್ನು ಕೈಗೊಳ್ಳುವುದರಿಂದ, ಮನೆಯಲ್ಲಿ ಸ್ವತ್ಛ ಗಾಳಿ ಹರಿದಾಡುವಂತೆ ಮಾಡಬಹುದು.
ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿ ಶಾಲೆಗಳಿಗೆ ಒಂದು ವಾರ ರಜೆ ನೀಡಿದ್ದು ಸುದ್ಧಿಯಾಗಿತ್ತು. ಮಳೆಗೆ ಗಾಳಿಯನ್ನು ತೊಳೆದು ಶುದ್ಧಿಗೊಳಿಸುವ ಶಕ್ತಿಯಿದ್ದು, ವಾಯುಮಾಲಿನ್ಯ ಅತಿ ಹೆಚ್ಚು ಎನ್ನುವಷ್ಟು ಆಗಿಬಿಡುತ್ತದೆ. ಚಳಿಗಾಲದಲ್ಲಿ ಬೆಚ್ಚಗಿರಲು ಗಿಡಗಂಟಿಗಳನ್ನು ಹಾಗೆಯೇ ಒಣ ತ್ಯಾಜ್ಯವನ್ನು ಸುಡುವ ಹವ್ಯಾಸವೂ ಇರುವುದರಿಂದ ಮಾಲಿನ್ಯ ಹೆಚ್ಚುತ್ತದೆ. ರೈತಾಪಿ ಜನರೂ ಪೈರು ಕತ್ತರಿಸಿದ ಮೇಲೆ ಒಣಗಿದ ಬುಡ ಕೀಳುವ ತ್ರಾಸದಾಯಕ ಕೆಲಸ ಉಳಿಸಲು ಸುಮ್ಮನೆ ಬೆಂಕಿ ಹಚ್ಚುವುದರಿಂದಲೂ ಹೊಗೆ ಹೆಚ್ಚಾಗುತ್ತದೆ. ವಾತಾವರಣದಲ್ಲಿ ಒಂದಷ್ಟು ತಾಪಮಾನ ಇದ್ದರೆ, ಮೇಲೆದ್ದು ಹೋಗುವ ಮಾಲಿನ್ಯ, ತಂಪು ಹವಾಮಾನದಲ್ಲಿ ಕೆಳಹಂತದಲ್ಲಿಯೇ ಹರಡುತ್ತಿರುತ್ತದೆ. ಎಲ್ಲೆಡೆ ಮಾಲಿನ್ಯ ಇದ್ದರೆ, ಮನೆಯ ಒಳಗೂ ಕೂಡ ವಿಷಾನಿಲದ ಹಾವಳಿ ಉಂಟಾಗಬಹುದು. ಹಾಗಾಗಿ ನಾವು ಒಂದಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು, ರಕ್ಷಣೆ ಪಡೆಯುವುದು ಅನಿವಾರ್ಯ.
ಬೇ ವಿಂಡೋ ಮಾದರಿ ಕಿಟಕಿಗಳು
ಮನೆ ವಿನ್ಯಾಸ ಮಾಡುವಾಗಲೇ ನಾವು ಕಿಟಕಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಹಿಂದೆ ಕಳ್ಳಕಾಕರು ಒಳಗೆ ನುಸುಳದಂತೆ ಕಿಟಕಿಗಳಿಗೆ ಭದ್ರವಾದ ಗ್ರಿಲ್‌ಗಳನ್ನು, ಕಬ್ಬಿಣದ ಸರಳುಗಳನ್ನು ಹಾಕುತ್ತಿದ್ದ ರೀತಿಯಲ್ಲಿ, ವಾಯುಮಾಲಿನ್ಯ ನೇರವಾಗಿ ಮನೆಯನ್ನು ಪ್ರವೇಶಿಸದಂತೆ, ಸೂಕ್ತ ಉಪಾಯ ಮಾಡಬೇಕು. ಗಿಡಗಳಿಗೆ ವಿಶಾಲ ಹರವಿನ ಎಲೆಗಳಿದ್ದು, ಇವುಗಳಿಗೆ ಗಾಳಿಯಲ್ಲಿರುವ ಧೂಳು ಹಾಗೂ ಇತರೆ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುವ ಗುಣ ಇರುತ್ತದೆ. ಹಾಗಾಗಿ ಮನೆಯ ಒಳಕ್ಕೆ ಬರುವ ಗಾಳಿ, ಎಲೆಗಳನ್ನು ಹಾಯ್ದು ಬರುವಂತೆ ಮಾಡಿದರೆ, ಸಾಕಷ್ಟು ಮಾಲಿನ್ಯ ತಡೆದಂತೆ ಆಗುತ್ತದೆ. ಮೊದಲ ಮಹಡಿಯವರೂ ಸಹ ಕಿಟಕಿಗಳನ್ನು “ಬೇ ವಿಂಡೊ’ ಅಂದರೆ ಗುಂಡಾಗಿ ಇಲ್ಲವೆ ಉಬ್ಬಿದಂತೆ ಇರುವ ಕಿಟಕಿಗಳನ್ನು ವಿನ್ಯಾಸಮಾಡಿಸಿಕೊಂಡು, ಈ ಹೆಚ್ಚುವರಿ ಸ್ಥಳದಲ್ಲಿ ಹತ್ತಾರು ಗಿಡಗಳನ್ನು ಬೆಳೆಸಿದರೆ, ಸಾಕಷ್ಟು ರಕ್ಷಣೆ ಸಿಗುತ್ತದೆ. ಗಿಡಮರಗಳು ನಿರಂತರವಾಗಿ ವಿಷಾನಿಲಗಳನ್ನು ಹೀರಿಕೊಂಡು, ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತವೆ.
ಎಲೆಗಳಿಗೆ ನೀರುಣಿಸಲು ಟೈಮರ್!
ಸಾಮಾನ್ಯವಾಗಿ ನಾವು ಗಿಡದ ಬುಡಕ್ಕೆ ಮಾತ್ರ ನೀರನ್ನು ಹಾಕುತ್ತೇವೆ, ಆದರೆ ಹಸಿರೆಲೆಗಳ ಮೇಲೆ ದಿನಕ್ಕೆ ಒಂದೆರಡು ಬಾರಿಯಾದರೂ ನೀರನ್ನು ಸಿಂಪಡಿಸಬೇಕು. ಆಗ, ಅವುಗಳ ಮೇಲೆ ಕುಳಿತಿರುವ ಹೆಚ್ಚುವರಿ ಧೂಳು ನೀರಿನೊಂದಿಗೆ ಬುಡಕ್ಕೆ ಬಿದ್ದು ಮಣ್ಣು ಸೇರುತ್ತದೆ. ಗಿಡಗಳಿಗೆ ಈ ಧೂಳು ಸಹ ಆಹಾರವಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಸಣ್ಣ ಸಣ್ಣ ಸ್ಪ್ರೆà- ಸಿಂಪಡಿಸುವ ಸಲಕರಣೆಗಳು ಕಡಿಮೆ ಬೆಲೆಗೆ ಸಿಗುತ್ತದೆ. ಇವುಗಳನ್ನು ಬಳಸಿ ಹನಿ ನೀರಾವರಿ ಮಾದರಿಯಲ್ಲಿ ಗಿಡಗಳ ಮೇಲೆ ಅಳವಡಿಸಿದರೆ, ದಿನಕ್ಕೆ ಎರಡು ಬಾರಿ ಮಳೆಯಿಂದ ತೋಯ್ದಂತೆ ನೀರನ್ನು ಸಿಂಪಡಿಸಬಹುದು. ಹೀಗೆ ಶುದ್ಧಗೊಂಡ ಎಲೆಗಳ ಮೂಲಕ ಹರಿಯುವ ಗಾಳಿ, ಮನೆಯನ್ನು ವಾಯು ಮಾಲಿನ್ಯದಿಂದ ಸಾಕಷ್ಟು ರಕ್ಷಿಸಬಲ್ಲದು. ಇಡಿ ಮನೆಗೆ ಈ ರೀತಿ ಮಾಡಿ, ಬೇಕೆಂದರೆ ದಿನದ ನಿರ್ದಿಷ್ಟ ವೇಳೆಯಲ್ಲಿ ನೀರು ಸಿಂಪಡಿಸುವಂತೆ ಟೈಮರ್‌ಗಳನ್ನು ಅಳವಡಿಸಬಹುದು. ಇವುಗಳ ಬೆಲೆ ಸುಮಾರು ಮೂರು ಸಾವಿರ ಆಗುತ್ತದೆ. ಮನೆಯ ಮೇಲ್ಮಟ್ಟದ ನೀರಿನ ತೊಟ್ಟಿಯಿಂದ ಕೊಳವೆಗಳನ್ನು ಈ ಸಲಕರಣೆಗೆ ಅಳವಡಿಸಿದರೆ, ಪ್ರತಿನಿತ್ಯ ನಾವು ನೀರು ಹಾಯಿಸುವ ಅಗತ್ಯ ಇರುವುದಿಲ್ಲ!
ಹಸಿರು ಗೋಡೆ ನಿರ್ಮಾಣ
ಈ ಹಿಂದೆ ನಮ್ಮಲ್ಲಿ ಕೋರ್ಟ್‌ಯಾರ್ಡ್(ತೆರೆದ ಅಂಕಣದ) ಮನೆಗಳು ಜನಪ್ರಿಯವಾಗಿದ್ದವು. ಈ ಮಾದರಿಯ ಮನೆಗಳು ಹೊರಗೆ ಹೆಚ್ಚು ತೆರೆದುಕೊಳ್ಳದಿದ್ದರೂ, ಒಳಗೆ ವಿಶಾಲವಾಗಿ ಗಾಳಿ, ಮಳೆ ಹಾಗೂ ಬೆಳಕಿಗೆ ತೆರೆದುಕೊಳ್ಳುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಇಡೀ ನಿವೇಶನವನ್ನು ಕಟ್ಟಿಬಿಡುವ ಧಾವಂತದಲ್ಲಿ, ಅಕ್ಕಪಕ್ಕ ಒಂದೆರಡು ಅಡಿ ಸಣ್ಣ ಓಣಿಯಂತೆ ತೆರೆದ ಸ್ಥಳ ಬಿಡಲಾಗುತ್ತದೆ. ಈ ಜಾಗದಲ್ಲಿ ಗಿಡ ಬೆಳೆಸುವುದು ಕಷ್ಟ. ಹಾಗಾಗಿ ಮನೆಗಳ ವಿನ್ಯಾಸ ಮಾಡುವಾಗ ಕಡೆಪಕ್ಷ ನಾಲ್ಕು ಅಡಿಗೆ ಆರು ಅಡಿಯಷ್ಟು ತೆರೆದ ಸ್ಥಳವನ್ನು (ಮೆಟ್ಟಿಲಿಗೆ ಹೊಂದಿಕೊಂಡಂತೆ ಇದ್ದರೂ ಪರವಾಗಿಲ್ಲ) ಪ್ಲ್ಯಾನ್ ಮಾಡಿದರೆ, ಈ ಸ್ಥಳದಲ್ಲಿ ಹಸಿರು ಗೋಡೆ ನಿರ್ಮಿಸಲು ಸಹಾಯಕವಾಗುತ್ತದೆ. ಇಡೀ ಮನೆಗೆ ಈ ಭಾಗದಿಂದ ಗಾಳಿ ಹರಿಯುವಂತೆ ಮಾಡಿದರೆ, ಹೊರಗಿನ ಕಲುಷಿತ ವಾತಾವರಣದಿಂದ ರಕ್ಷಣೆ ಸಿಕ್ಕಂತೆ ಆಗುತ್ತದೆ. ಇಲ್ಲಿ ಕಳ್ಳಕಾಕರ ಭೀತಿ ಇರದ ಕಾರಣ, ಕಿಟಕಿ ಬಾಗಿಲುಗಳನ್ನು ತೆರೆದಿಟ್ಟರೂ ಭಯವೇನೂ ಇರುವುದಿಲ್ಲ. ಮಳೆ ನೀರು ಕೊಯ್ಲು ಮಾಡಲು ಸಣ್ಣ ತೊಟ್ಟಿ ಹಾಗೂ ಅದರ ಶುದ್ಧೀಕರಣಕ್ಕೆ ಪುಟ್ಟ ಕಾರಂಜಿಯನ್ನೂ ಕಲಾತ್ಮಕವಾಗಿ ಅಳವಡಿಸಬಹುದು.
ಗಾಳಿಯ ಹರಿವು ಕಡಿಮೆಯಾದರೆ…
ಮನೆಯ ಕಿಟಕಿ ಮುಂದೆ ಹಸಿರು ಗೋಡೆ ನಿರ್ಮಾಣವಾದರೆ, ಗಾಳಿಯ ಹರಿವು ಕಡಿಮೆಯಾಗಬಹುದು. ಹಾಗಾಗಿ ಕಿಟಕಿಯ ಕೆಳಮಟ್ಟದಲ್ಲಿ ಸಣ್ಣದೊಂದು ಎಕ್ಸಾಸ್ಟ್ ಫ್ಯಾನ್‌ಅನ್ನು ಅಳವಡಿಸಿದರೆ, ನಮಗೆ ಬೇಕೆಂದಾಗ ಸಾಕಷ್ಟು ತಾಜಾಗಾಳಿ ಮನೆಯೊಳಕ್ಕೆ ಪ್ರವೇಶಿಸುತ್ತದೆ. ಇದೇ ರೀತಿ, ಕಿಟಕಿಗಳ ಮೇಲೂ ಒಂದು ಸಣ್ಣ ಫ್ಯಾನ್ ಅಳವಡಿಸಿದರೆ, ನಿಶ್ವಾಸದ ಗಾಳಿ ಹೊರಗೆ ಹೋಗುತ್ತದೆ. ನಮ್ಮಲ್ಲಿ ಎಲ್ಲೆಡೆ ಸೀಲಿಂಗ್ ಫ್ಯಾನ್‌ಗಳನ್ನೇ ಹೆಚ್ಚು ಬಳಸಲಾಗುತ್ತದೆ. ಈ ಮಾದರಿಯ ಫ್ಯಾನ್‌ಗಳು ಸೂರಿನ ಮಟ್ಟದಲ್ಲಿ ಶೇಖರವಾಗುವ ಹಳಸಲು ಗಾಳಿಯನ್ನೇ ತಿರು ತಿರುಗೆ ಕೆಳಕ್ಕೆ ತಳ್ಳುತ್ತಿರುತ್ತದೆ. ಅದಕ್ಕೆ ಬದಲಾಗಿ ಮನೆಯೊಳಗೆ ತಾಜಾಗಾಳಿಯನ್ನು ಹರಿಸುವ ಹಾಗೂ ತ್ಯಾಜ್ಯ ಗಾಳಿಯನ್ನು ಹೊರಹಾಕುವ ಫ್ಯಾನ್‌ಗಳನ್ನು ಬಳಸುವುದು ಹೆಚ್ಚು ಸೂಕ್ತ.
ಗಿಡಗಳ ಗಾತ್ರದ ಮರಗಳು
ಕೆಲ ಗಿಡಗಳಿಗೆ ವಿಷಾನಿಲವನ್ನು ಹೀರಿಕೊಂಡು ತಾಜಾಗಾಳಿಯನ್ನು ಹರಿಸುವ ವಿಶೇಷ ಗುಣವಿರುತ್ತದೆ. ಇವುಗಳಲ್ಲಿ ಹೊಂಗೆ, ಬೇವು, ಇತ್ಯಾದಿ ಹಾಗೂ ಸಣ್ಣ ಗಿಡಗಳಾದ ಸೆನ್ಸಿವೇರಿಯ ಗುಂಪಿಗೆ ಸೇರಿದ ಗಿಡಗಳೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ, ಈ ಮಾದರಿಯ ಗಿಡಗಳು ಹೆಚ್ಚು ಆರೈಕೆಯನ್ನೂ ಬಯಸುವುದಿಲ್ಲ. ಮನೆ ನಿವೇಶನಗಳು ಸಣ್ಣದಿರುವಾಗ ನಾವು ಇವುಗಳನ್ನು ಮರದ ರೀತಿಯಲ್ಲೇ ಒಡ್ಡದಾಗಿ ಬೆಳಸಬೇಕು ಎಂದೇನೂ ಇಲ್ಲ, ನಮ್ಮ ಅಗತ್ಯಕ್ಕೆ ತಕ್ಕಂತೆ ಸಣ್ಣದಾಗಿಯೂ- ಕಿಟಕಿಗಳಿಗೆ ಬೋನ್ಸಾಯ್(ಪುಟ್ಟ ಗಾತ್ರ) ಮಾದರಿಯಲ್ಲೂ, ಗಿಡ್ಡದಾಗಿ ಬೆಳೆಸಿಕೊಳ್ಳಬಹುದು. ಮನೆಯ ವಿನ್ಯಾಸ ಮಾಡುವಾಗಲೇ ಅಲ್ಲದೆ ನಂತರವೂ ಮನೆಗಳಿಗೆ, ಅದರಲ್ಲೂ ಕಿಟಕಿಗಳಿಗೆ ಸೂಕ್ತ ಹಸಿರು ಗೋಡೆಗಳನ್ನು ಹಾಗೂ ಫ್ಯಾನ್ ವ್ಯವಸ್ಥೆಯನ್ನು ನುರಿತ ಆರ್ಕಿಟೆಕ್ಟ್ಗಳ ಸಲಹೆ ಪಡೆದು ಅಳವಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ: 9844132826
– ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.