ಮಾಹಿತಿ ಕಾಯ್ದೆ ಕೊಲ್ಲಲು ಒಂದು ಮಾಹಿತಿ ಆಯೋಗ ಸಾಕು!
Team Udayavani, Oct 2, 2017, 11:27 AM IST
ಜನರ ಹಿತ ಎಂಬ ಸೋಗಿನಡಿಯಲ್ಲಿ ಅನಗತ್ಯವಾಗಿ ಮೂಢನಂಬಿಕೆ ನಿಷೇಧ ಥರಹದ ಕಾನೂನುಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗುವುದರ ಹಿಂದೆ ಇರುವ ಉದ್ದೇಶಗಳೂ ಪ್ರಶ್ನಾರ್ಹ. ಅದೃಷ್ಟಕ್ಕೆ ಕೆಲವೊಮ್ಮೆ ಮಾಹಿತಿ ಹಕ್ಕು ಕಾಯ್ದೆ, ಸಕಾಲ, ಗ್ರಾಹಕ ಹಕ್ಕು ಕಾಯ್ದೆಯಂತ ಅಪರೂಪದ ಅಸ್ತ್ರಗಳು ಜನರಿಗೆ ಸಿಗುತ್ತವೆ. ಆದರೆ ಜಾರಿಗೆ ತರುವಾಗಿನ ಹುರುಪನ್ನು ನಂತರ ಸರ್ಕಾರ ತೋರುವುದಿಲ್ಲ.
ಅದರ ಮೇಲಿನ ಒತ್ತಡಗಳ ಕಾರಣದಿಂದ ಪ್ರಭಾವಿ ಕಾಯ್ದೆಯನ್ನು ಮೊಂಡುಗೊಳಿಸುವಲ್ಲಿ ಅಥವಾ ತಿದ್ದುಪಡಿಗಳ ಮೂಲಕ ಅಡ್ಡದಾರಿ ಹಿಡಿಯುವಂತೆ ನೋಡಿಕೊಳ್ಳಲಾಗುತ್ತದೆ. ಇಡೀ ವ್ಯವಸ್ಥೆ ಅಧಿಕಾರಿಗಳ ಕೈಯಲ್ಲೇ ಇರುವುದರಿಂದ ಅದನ್ನು ಅಕ್ಷರಶಃ ಹಳ್ಳ ಹಿಡಿಸುವ ತಂತ್ರವನ್ನು ಅನುಸರಿಸುತ್ತದೆ. ಈಗಾಗಲೇ ಸಕಾಲಕ್ಕೆ ಅಕಾಲ ಮೃತ್ಯು ಬರಿಸುವಲ್ಲಿ ಆಡಳಿತಶಾಹಿ ಸಫಲವಾಗಿದೆ. ಅದರ ಕೆಂಗಣ್ಣು ಮಾಹಿತಿ ಕಾಯ್ದೆಯ ಮೇಲೆ ಬಿದ್ದು ವರ್ಷಗಳೇ ಕಳೆದಿವೆ.
ಲೆಕ್ಕ ತಪ್ಪಿಸಿದ ಗ್ರಾಮ ಲೆಕ್ಕಿಗರು!
ಇಲ್ಲಿನ ಒಂದು ಪುಟ್ಟ ಪ್ರಕರಣವನ್ನು ಗಮನಿಸಿ. ಗ್ರಾಮ ಲೆಕ್ಕಿಗರು ಅವರವರ ಹೋಬಳಿಯಲ್ಲಿಯೇ ವಾಸ ಇದ್ದು ಜನರ ಕೆಲಸ ಮಾಡಿಕೊಡಬೇಕು ಎಂದು ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ತಾವು ಸದರಿ ಹೋಬಳಿಯ ನಿಖರ ವಿಳಾಸದಲ್ಲಿ ವಾಸವಾಗಿದ್ದೇನೆಂದು ದಾಖಲೆ ಸಮೇತ ದೃಢೀಕರಣ ಪತ್ರವನ್ನು ತಹಶೀಲ್ದಾರರಿಗೆ ನೀಡುವುದು ವಿಎಗಳ ಜವಾಬ್ದಾರಿ. ಈ ತರಹ ಸುಳ್ಳುಸುಳ್ಳೇ ಅಫಿಡವಿಟ್ ಸಲ್ಲಿಸಿ ನಗರದಲ್ಲಿ ವಾಸ ಮಾಡುತ್ತ, ಜನರನ್ನು ತಾಲ್ಲೂಕು ಕಚೇರಿಗೆ ಎಡತಾಕುವಂತೆ ಮಾಡುವ ಮತ್ತು ನಗರದಲ್ಲಿ ಕಚೇರಿ ಮಾಡಿ ಅಲ್ಲಿಗೇ ಜನರನ್ನು ಕರೆಸಿಕೊಳ್ಳುವ ಗ್ರಾಮ ಲೆಕ್ಕಿಗರ ಸಂಖ್ಯೆಯೇ ಹೆಚ್ಚು.
ಈ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಗ್ರಾಮಲೆಕ್ಕಿಗರ ಸಂಖ್ಯೆ, ಅವರ ಹೆಸರು, ವಿಳಾಸ, ಅವರು ತಮ್ಮ ವಾಸ ಸ್ಥಳದ ಬಗ್ಗೆ ತಾಲ್ಲೂಕು ಕಚೇರಿಗೆ ಕೊಟ್ಟ ದೃಢೀಕರಣದ ನಕಲು ಕೊಡುವಂತೆ ಓರ್ವ ಮಾತಿ ಹಕ್ಕು ಕಾರ್ಯಕರ್ತರು ಸಾಗರದ ತಹಶೀಲ್ದಾರರಿಗೆ ಮಾತಿ ಅರ್ಜಿ ಕಳುಹಿಸಿದರು. ತಿಂಗಳ ಅವಧಿ ಎರಡು ದಿನ ಉಳಿದಿದೆ ಎಂದಾಗ ತಹಶೀಲ್ದಾರರ ಕಾರ್ಯಾಲಯ ಪತ್ರ ಬರೆದು ಕೇಳಿದ ನಕಲುಗಳನ್ನು 88 ರೂ. ಪಾವತಿಸಿ ಪಡೆಯಬಹುದು ಎಂದು ಸೂಚಿಸಿತು.
ಭಂಡ ತಾಲ್ಲೂಕು ಕಚೇರಿ ಹಣ ಪಡೆದ ನಂತರವೂ ಮಾಹಿತಿ ಕೊಡುವುದೇ ಇಲ್ಲ. ಕಾದು, ಕಾದು ಸುಸ್ತಾದ ಅರ್ಜಿದಾರರು ಜುಲೈ 12ರಂದು ಮೇಲ್ಮನವಿ ಪ್ರಾಧಿಕಾರವಾದ ಉಪಭಾಗಾಧಿಕಾರಿಗಳಿಗೆ ಪಿರ್ಯಾದು ಸಲ್ಲಿಸುತ್ತಾರೆ. ಎ.ಸಿ ನ್ಯಾಯಾಲಯದಿಂದ ಮೊದಲ ಬಾರಿಗೆ 12ರ ಆಗಸ್ಟ್ 9ರಂದು ವಿಚಾರಣೆ ನಿಗದಿಯಾಗುತ್ತದೆ. ದುರಂತವೆಂದರೆ ಈ ಹಂತದಲ್ಲಿ ವಿಚಾರಣೆ ಯಾವುದೇ ಕಾರಣಗಳಿಲ್ಲದೆ ಕನಿಷ್ಠ ಆರು ಬಾರಿ ಮುಂದೂಡಲ್ಪಡುತ್ತದೆ. ಕೊನೆಯ ಬಾರಿಗೆ ಪ್ರಕರಣವನ್ನು ನವೆಂಬರ್ 26ಕ್ಕೆ ನಿಗದಿಪಡಿಸಲಾಗುತ್ತದೆ. ಈ ನಡುವೆ ಎಚ್ಚೆತ್ತುಕೊಂಡ ತಾಲ್ಲೂಕು ಕಚೇರಿ ನವೆಂಬರ್ 13ರಂದೇ 36 ಪುಟಗಳ ಅಸಮರ್ಪಕ ಮಾಹಿತಿಯನ್ನು ರವಾನಿಸುತ್ತದೆ.
ಮಾಹಿತಿ ಕೋರಿದ 183 ದಿನಗಳಷ್ಟು ವಿಳಂಬವಾಗಿ ಮಾಹಿತಿ ಕೊಟ್ಟಿದ್ದು ಗಮನಿಸಲೇಬೇಕಾದ ವಿಳಂಬ. ಮಾಹಿತಿ ಅರ್ಜಿಗೆ ಕನಿಷ್ಠ ಉತ್ತರಕ್ಕೆ 28 ದಿನ ಪಡೆದಿದ್ದು ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಪ್ರಯತ್ನ. ಹೋಗಲಿ, ಮಾಹಿತಿ 36 ಪುಟ ಇದೆ ಎಂತಾದರೆ 72 ರೂ. ಪಡೆಯಬಹುದಿತ್ತು. ರಾಜ್ಯ ಸರ್ಕಾರ ನಿಯಮದ ಕಲಂ 7(3) ಪ್ರಕಾರ ಪ್ರತಿ ಎ4 ಪುಟಕ್ಕೆ ನಿಗದಿಪಡಿಸಿದ 2 ರೂ.ಗಿಂತ ಹೆಚ್ಚು ಹಣ; 88 ರೂ. ಪಡೆದಿರುವುದು ಕೂಡ ಸಮ್ಮತವಾದ ಕ್ರಮವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು 2012ರ ಡಿ. 26ರಂದು ಕರ್ನಾಟಕ ಮಾತಿ ಆಯೋಗದ ಮುಂದೆ ದೂರು ಒಯ್ಯುತ್ತಾರೆ.
ಇನ್ನೊಂದು ಶಾಕ್!
ಹೇಳಿದ ದಿನ ಮಾಹಿತಿ ಆಯೋಗ ವಿಚಾರಣೆ ನಡೆಸುತ್ತದೆ. ಅರ್ಜಿದಾರರ ಅನುಪಸ್ಥಿತಿಯಲ್ಲಿ ಆಯೋಗ ಮೇಲ್ಮನಯ ಬೇಡಿಕೆಗಳನ್ನು ತಿರಸ್ಕರಿಸುತ್ತದೆ. ಅದು ತಹಶೀಲ್ದಾರರ ಹೇಳಿಕೆಯಲ್ಲಿ, ನಾವು ಮಾಹಿತಿ ಸಿದ್ಧಪಡಿಸುವ ವೆಚ್ಚ ಸೇರಿ 88 ರೂ. ಕೇಳಿದ್ದೆವು ಎಂದಿದ್ದನ್ನು ಒಪ್ಪಿಕೊಳ್ಳಲಾಗುತ್ತದೆ. ಅರ್ಧ ವರ್ಷಕ್ಕೂ ಹೆಚ್ಚಿನ ವಿಳಂಬವನ್ನು “ಇನ್ನು ಹೀಗೆ ಮಾಡದಿರಿ’ ಎಂಬ ಲಘುವಾದ ಕಿವಿಮಾತಿನೊಂದಿಗೆ ಆಯೋಗದಿಂದ ಪ್ರಕರಣವನ್ನೇ ಇತ್ಯರ್ಥಗೊಳಿಸಲಾಗುತ್ತದೆ.
ಅರ್ಜಿದಾರರಲ್ಲಿದ್ದ ಅಷ್ಟೂ ದಾಖಲೆಗಳನ್ನು ಆಯೋಗದ ಮುಂದಿಡಲಾಗಿತ್ತು. ದಾಖಲೆಗಳೇ ಮಾತನಾಡುವಾಗ ವಾದ ಮಂಡಿಸುವವರ ಅಗತ್ಯ ಖಂಡಿತವಾಗಿಯೂ ಬೇಡವಾಗಿತ್ತು. ಇಡೀ ಪ್ರಕರಣದಲ್ಲಿ ಮೂಡಿದ ಪ್ರಶ್ನೆಗಳಿಗೆ ಮಾಹಿತಿ ಆಯೋಗ ಉತ್ತರಿಸುವುದೇ ಇಲ್ಲ.
* ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ಎ4 ಪುಟವೊಂದಕ್ಕೆ 2 ರೂ. ದರ ನಿಗದಿಯಾಗಿದೆ. ಈ ಪ್ರಕಾರ 36 ಪುಟಕ್ಕೆ 72 ರೂ. 16 ರೂ. ಜಾಸ್ತಿ ಪಡೆದಿದ್ದಕ್ಕೆ ಆಯೋಗ ಪ್ರತಿಕ್ರಿಯಿಸಲೇ ಇಲ್ಲ!
* ಮಾಹಿತಿಗಳನ್ನು ಸಿದ್ಧಪಡಿಸುವ ವೆಚ್ಚ ಸೇರಿ 88 ರೂ. ಆಗುತ್ತದೆ ಎಂಬ ತಹಶೀಲ್ದಾರ್‌ರ ಕಚೇರಿಯ ಉತ್ತರ ಸಮರ್ಪಕವಾಗಿದ್ದರೆ ಅದು ಯಾವ ಕಲಂ ಅಡಿಯಲ್ಲಿ ಎಂಬುದನ್ನು ಮಾಹಿತಿ ಆಯೋಗ ತನ್ನ ತೀರ್ಪಿನಲ್ಲಿ ಬಹಿರಂಗಪಡಿಸಬಹುದಿತ್ತು. ಕಾಯ್ದೆಯ ಪ್ರಕಾರ ಮಾಹಿತಿ ಸಿದ್ಧಪಡಿಸುವ ವೆಚ್ಚ ಎಂದು ಹೆಚ್ಚುವರಿ ವೆಚ್ಚಗಳನ್ನು ಮಾಹಿತಿ ಕೇಳಿದವರ ಮೇಲೆ ಹೊರಿಸುವ ಪ್ರಾಧಾನವಿಲ್ಲ. ಅಷ್ಟಕ್ಕೂ ಈ ವೆಚ್ಚವನ್ನು ಯಾವ ಮಾನದಂಡದ ಮೇಲೆ ಲೆಕ್ಕ ಹಾಕಲಾಯಿತು ಎಂಬುದನ್ನಾದರೂ ವಿವರಿಸಲಾಗಿದೆಯೇ ಎಂದರೆ ಉತ್ತರ ಶೂನ್ಯ.
* ಮೇಲ್ಮನವಿ ಪ್ರಾಧಿಕಾರದ ನಂತರವೇ ತನ್ನನ್ನು ಸಂಪರ್ಕಿಸಬೇಕು ಎಂಬ ನಿಯಮ ಹೇರಿರುವ ಆಯೋಗ, ತನ್ನ ಮುಂದೆ ಬಂದ ಪ್ರಕರಣಗಳಲ್ಲಿ ಮುದ್ದಾಂ ದಂಡ ವಿಧಿಸಬೇಕಿತ್ತಲ್ಲವೇ? ಆ ಮೂಲಕ ಕೂಡ ಕಾನೂನನ್ನು ಉಲ್ಲಂ ಸಿದವರನ್ನು ಶಿಕ್ಷಿವಿಸುವುದರಿಂದ ಅದರ ಮುಂದೆ ಕೇಸುಗಳು ಕಡಿಮೆಯಾಗುತ್ತಿದ್ದವು! ವಾಸ್ತವವಾಗಿ ಇಡೀ ಮಾಹಿತಿ ಕಾಯ್ದೆಯಲ್ಲಿ ಈ ಪ್ರಥಮ ಮೇಲ್ಮನವಿ ಪ್ರಾಧಿಕಾರ ಎಂಬ ವ್ಯವಸ್ಥೆ ಹಲ್ಲಿಲ್ಲದ ಅನಾವಶ್ಯಕ ವ್ಯವಸ್ಥೆ.
ಸಾಮಾನ್ಯವಾಗಿ ಮಾತಿ ನೀಡುವವರ ತಕ್ಷಣದ ಮೇಲಿನ ಅಧಿಕಾರಿಗಳೇ ಪ್ರಥಮ ಮೇಲ್ಮನ ಪ್ರಾಧಿಕಾರ ಆಗಿರುವುದರಿಂದ ಮೇಲಧಿಕಾರಿಯ ಭಯದಿಂದ ಮಾಹಿತಿ ಕೊಡುವ ಕೆಲಸ ನಡೆಯುತ್ತದೆ ಎಂಬ ವಾದವೂ ಇತ್ತು. ಇದು ಬಹುಪಾಲು ಸಂದರ್ಭಗಳಲ್ಲಿ ನಿರರ್ಥಕವಾಗಿದೆ. ಕೆಲ ವರ್ಷಗಳ ಹಿಂದೆ ಈ ದೋಷವನ್ನು ಅರಿತ ಬಹುಪಾಲು ಮಾಹಿತಿ ಅರ್ಜಿದಾರರು ನೇರವಾಗಿ ರಾಜ್ಯ ಮಾತಿ ಆಯೋಗಕ್ಕೇ ತಮ್ಮ ಮೇಲ್ಮನವಿಯನ್ನು ಕೊಂಡೊಯ್ಯಲಾರಂಭಿಸಿದರು.
ಇದರಿಂದ ಮಾಹಿತಿ ಆಯೋಗಕ್ಕೆ ಹೆಚ್ಚಿನ ಅರ್ಜಿ ಒತ್ತಡ ಸೃಷ್ಟಿಯಾದ್ದರಿಂದ, ನೇರವಾಗಿ ತಮಗೆ ಬಂದ ಅರ್ಜಿಗಳನ್ನು ಪ್ರಥಮ ಮೇಲ್ಮನ ಪ್ರಾಧಿಕಾರಕ್ಕೆ ಸಾಗ ಹಾಕುವ ಕೆಲಸ ನಡೆಯಿತು ಮತ್ತು ಈ ಸಂಬಂಧ ಒಂದು ಸುತ್ತೋಲೆಯೂ ಹೊರಬಿದ್ದು ಅರ್ಜಿದಾರ ಮಾಹಿತಿ ಸಿಗದಿದ್ದಾಗ ಮೊದಲ ಮೇಲ್ಮನವಿ ಪ್ರಾಧಿಕಾರ ಸಂಪರ್ಕಿಸಿ ಸಫಲವಾಗದಿದ್ದರೆ ಮಾತ್ರ ರಾಜ್ಯ ಮಾಹಿತಿ ಆಯೋಗವನ್ನು ಸಂಪರ್ಕಿಸಬಹುದು ಎಂದು ಸೂಚಿಸಲಾಯಿತು.
* ಹೋಗಲಿ, 183 ದಿನಗಳ ವಿಳಂಬಕ್ಕೆ ಯಕಶ್ಚಿತ್ ಮಾಹಿತಿಗಳನ್ನು ಉಚಿತವಾಗಿ ಒದಗಿಸುವಂತೆ ಆದೇಶಿಸಿ, ಪಡೆದ 88 ರೂ. ಹಣವನ್ನು ವಾಪಾಸು ಮಾಡಲು ಆದೇಶಿಸಬಹುದಿತ್ತಲ್ಲವೇ? ರಾಜ್ಯ ಮಾಹಿತಿ ಆಯೋಗದಲ್ಲಿರುವವರು ಕೂಡ ನಿವೃತ್ತ ಅಧಿಕಾರಿಗಳು, ಸರ್ಕಾರದ ಮಟ್ಟದಲ್ಲಿ ಲಾಬಿ ಮಾಡಿ ಅಧಿಕಾರದ ಹುದ್ದೆ ಹಿಡಿದವರು ಕೂಡ ಇದ್ದಾರೆ. ಮಾಹಿತಿ ಆಯುಕ್ತರ ಆಯ್ಕೆ ಸಂದರ್ಭದಲ್ಲಿ ನಡೆಯುವ ರಾಜಕೀಯ ಲಾಬಿ ಆಯೋಗದ ಬಗ್ಗೆ ಇರುವ ಅಲ್ಪಸ್ವಲ್ಪ ನಿರೀಕ್ಷೆಗಳನ್ನು ಕೂಡ ಕಳಚಿಬಿಡುತ್ತದೆ.
ರಾಜ್ಯ ಆಯೋಗಕ್ಕೆ ಒಬ್ಬ ಅರ್ಜಿದಾರ ಬಂದಿದ್ದಾನೆ ಎಂತಾದರೆ ಅವನಿಗೆ ನಿಗದಿತ ಅವಧಿಯಲ್ಲಿ ಮಾತಿ ಕೊಡಲಿಲ್ಲ ಎಂಬುದು ಮೊದಲ ಅರ್ಥ. ಆದರೆ ಮೇಲ್ಮನವಿ ವಿಚಾರದಲ್ಲಿ ರಾಜ್ಯ ಆಯೋಗ ಕೂಡ ಅರ್ಜಿದಾರರಿಗೆ ಮಾಹಿತಿ ಕೊಡಿ ಎಂದೇ ಮೊದಲ ನೋಟೀಸ್‌ನಲ್ಲಿ ಸೂಚಿಸುತ್ತದೆ. ಮಾಹಿತಿ ಕೊಟ್ಟರು ಎಂದರೆ ಅರ್ಜಿ ಇತ್ಯರ್ಥವಾಗಿದೆ ಎಂದು ತೀರ್ಮಾನಿಸಲಾಗುತ್ತದೆ!
ಮಾಹಿತಿ ಕೊಟ್ಟರೆ ಮುಗಿಯಿತೇ?
ಇನ್ನೂ ಒಂದು ಅಪಾಯ ಇದೆ. ಎಷ್ಟೋ ಬಾರಿ ಮಾಹಿತಿ ಕೊಡುವವರು ನಾವು ಅರ್ಜಿದಾರರು ಕೇಳಿದ ಮಾಹಿತಿ ಕೊಟ್ಟಿದ್ದೇವೆ ಎಂದು ಜಾnಪನೆ ಮಾಡಿಕೊಂಡರೆ ಪ್ರಕರಣ ಇತ್ಯರ್ಥಪಡಿಸಿಬಿಡಲಾಗುತ್ತದೆ. ಅರ್ಜಿದಾರ ಕೇಳಿದ ಮಾಹಿತಿ ಕೊಡಲಾಗಿದೆಯೇ ಅಥವಾ ನಿಜಕ್ಕೂ ಮಾಹಿತಿ ಕೊಡಲಾಗಿದೆಯೇ ಎಂಬ ಸರಳ ವಿಚಾರವನ್ನು ದೃಢಪಡಿಸಿಕೊಳ್ಳುವ ಕಟ್ಟುಪಾಡನ್ನೂ ಅನುಸರಿಸಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅರ್ಜಿದಾರ ನನಗೆ ಮಾಹಿತಿ ಬಂದಿಲ್ಲ ಅಥವಾ ಸಮರ್ಪಕವಾಗಿಲ್ಲ ಎಂದು ಹೊಸದಾಗಿ ಹೋರಾಟ ಆರಂಭಿಸಬೇಕಾಗುತ್ತದೆ.
* ಮೇಲಿನ ಪ್ರಕರಣದಲ್ಲಿ, ತನಗೆ ಇರುವ 45 ದಿನಗಳ ಅವಕಾಶದಲ್ಲಿ ಒಮ್ಮೆ ಕೂಡ ಮೇಲ್ಮನವಿ ಪ್ರಾಧಿಕಾರ ವಿಚಾರಣೆಯನ್ನೇ ನಡೆಸಲಿಲ್ಲ ಎನ್ನವುದು ಕೂಡ ಮಾತಿ ಆಯೋಗಕ್ಕೆ ಮಹತ್ವದ ಅಂಶವಾಗಿ ಕಾಣದಿರುವುದು ಅಚ್ಚರಿಯ ಅಂಶ. ಜನರಿಗೆ ಕೇವಲ ವಿಳಂಬ ಮಾಡುವ ಈ ಹಂತದ ಬಗ್ಗೆ ಆಯೋಗ ಸರ್ಕಾರಕ್ಕೆ ತಿದ್ದುಪಡಿ ಮಾಡಲು ಸಲಹೆ ನೀಡುತ್ತದೆ ಎಂಬುದನ್ನು ನಿರೀಕ್ಷಿಸುವುದೇ ಮೂರ್ಖತನ.
ಮಾಹಿತಿ ಹಕ್ಕಿನ ಬಹುಪಾಲು ಪ್ರಕರಣಗಳಲ್ಲಿ ವಿಚಾರಣೆಯ ಅಗತ್ಯವೇ ಇಲ್ಲ. ಒಂದೊಮ್ಮೆ ದೂರುದಾರ ಸುಳ್ಳು ಮಾಹಿತಿ ನೀಡಿದ್ದಾನೆಂದರೆ ಅದನ್ನು ಮಾಹಿತಿದಾರ ಲಿಖೀತವಾಗಿಯೇ ದಾಖಲಿಸಬಹುದು. ಅರ್ಜಿದಾರನಂತೂ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕಿರುವಾಗ ವಿಚಾರಣೆಯಲ್ಲಿ ಆತನ ಹಾಜರಿ ಅನಿವಾರ್ಯವಲ್ಲ. ಮುಖ್ಯವಾಗಿ, ಮಾಹಿತಿ ಆಯೋಗ ಈ ಕಾಯ್ದೆಯ ಆಶಯಗಳಿಗೆ ಭಂಗ ಬರದಂತೆ ವರ್ತಿಸಬೇಕು. ಈ ಆಶಯಕ್ಕೆ ವಿರುದ್ಧವಾದ ಅಂಕಿಅಂಶಗಳು ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿಯೇ ಕಾಣುತ್ತೇವೆ.
ರಾಜ್ಯ ಮಾಹಿತಿ ಆಯೋಗದ ವೆಬ್
ಸುಮ್ಮನೆ ರಾಜ್ಯ ಮಾಹಿತಿ ಆಯೋಗದ http://kic.gov.in:8080/welcome.do ಈ ವೆಬ್‌ಸೈಟ್‌ನಲ್ಲಿಯೇ ನೋಡಿದರೆ ಹಲವು ಮಾಹಿತಿ ಸಿಗುತ್ತದೆ.
ಕಾಯ್ದೆ ಜಾರಿಯಾದ ಹೊಸಪರಿಯಲ್ಲಿಯೇ 2011-12ರಲ್ಲಿ ರಾಜ್ಯದಲ್ಲಿ ಸ್ವೀಕೃತವಾದ 3,04,535 ಅರ್ಜಿಗಳಲ್ಲಿ ಸಮಯ ಮಿತಿಯ ನಂತರ ಇತ್ಯರ್ಥವಾದದ್ದು 16,784 ಅರ್ಜಿ, ಇನ್ನೂ ಇತ್ಯರ್ಥಕ್ಕೆ ಬಾಕಿ ಇದ್ದದ್ದು 14,094 ಪ್ರಕರಣ.
ಈ ರೀತಿ ಮಾಹಿತಿ ಕೊಡದಿರುವ ಪ್ರಕರಣಗಳಲ್ಲಿ ಜನ ನೇರವಾಗಿ ಮಾಹಿತಿ ಆಯೋಗದ ಕದ ತಟ್ಟಲಾರಂಭಿಸಿದಾಗ ಆಯೋಗ ಪ್ರತಿ ಅರ್ಜಿ ಪ್ರಥಮ ಮೇಲ್ಮನ ಪ್ರಾಧಿಕಾರದ ಹಂತವನ್ನು ಬಳಸಿದ ನಂತರವೇ ಆಯೋಗದ ಮುಂದೆ ಬರಬೇಕೆಂದು ಆದೇಶಿಸಿತು. ಇದರಿಂದ ಮೊದಲು 30 ದಿನ ಕಳೆದ ನಂತರ ಆಯೋಗದ ಮುಂದೆ ಹೋಗಬಹುದಾಗಿದ್ದರೆ ಈಗ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಮುಂದೆ ಪರಮಾವಧಿ 45 ದಿನದ ಸಮಯವನ್ನು ಕೊಲ್ಲುವಂತಾಗಿದೆ.
ಈ ಹಂತದ ಅಧಿಕಾರಿಗೆ ಮಾಹಿತಿಯನ್ನು ಕೊಡಿಸಬಹುದಾದ ಸಾಧ್ಯತೆಯ ಹೊರತಾಗಿ ದಂಡ ವಿಧಿಸುವ ಪ್ರಾಧಾನವಲ್ಲ. ಮಾಹಿತಿ ಆಯೋಗದ ಹೆಜ್ಜೆಗಳು ಮಾಹಿತಿ ಕೊಡಬೇಕಾದವನನ್ನು ಇನ್ನಿಲ್ಲದಂತೆ ಪೋಷಿಸುವಂತಿದೆ. ಹಾಗಾಗಿ ಆತ ಮಿಸುಕಾಡಲಾರ! ಮೇಲ್ಮನ ಪ್ರಾಧಿಕಾರ, ಮಾಹಿತಿ ಆಯೋಗ ವಿಚಾರಣೆಯ ನೆಪದಲ್ಲಿ ಪ್ರಕರಣವನ್ನು ದುರ್ಬಲಗೊಳಿಸುತ್ತಿವೆಯೇ ಎಂಬ ಅನುಮಾನಕ್ಕೂ ಉತ್ತರ ಸಿಕ್ಕಿಲ್ಲ.
ಮಾಹಿತಿ ಆಯೋಗದ ವೆಬ್‌ಸೈಟ್‌ನ ವರದಿಗಳು 2014-15ರ ಸಾಲಿನದಕ್ಕಿಂತ ಮುಂದೆ ಹೋಗಿಯೇ ಇಲ್ಲ. ವರದಿಗಳು ಅಂಕಿಅಂಶದಿಂದ ಅಲಂಕೃತಗೊಂಡಿರುತ್ತವೆ. ವಾಸ್ತವವಾಗಿ ಕಾಯ್ದೆಗಳಲ್ಲಿ ತಪ್ಪಿಸಿಕೊಳ್ಳಲು ನೂರು ದಾರಿಗಳು ಸಿಗಬಹುದು. ಹಾಗೆ ತಪ್ಪಿಸಿಕೊಂಡೂ ಆಕರ್ಷಕ ಅಂಕಿಅಂಶ ಸೃಷ್ಟಿಸುವ ಸಕಾಲದಂತೆ ಮಾಹಿತಿ ಆಯೋಗದ ಮಾಹಿತಿಯೂ ಇದೆ. ಕಾಯ್ದೆಗಳು ಹುಟ್ಟಿಸುವ ಭಯ ಅಧಿಕಾರಿಗಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತದೆ. ಮಾಹಿತಿ ಹಕ್ಕು, ಸಕಾಲಗಳ ದಂಡ ಮತ್ತು ಅಲ್ಲಿನ ವ್ಯತ್ಯಯಗಳು ಅಧಿಕಾರಿಯ ಸೇವಾ ಪುಸ್ತಕದಲ್ಲಿ ದಾಖಲಾಗುತ್ತದೆ.
ಬಡ್ತಿಗೆ ಸಮಸ್ಯೆಯಾಗುತ್ತದೆ ಎಂಬ ಭಯ ಮೂಡಿದಾಗ ಕಾಯ್ದೆಗಳು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದೇ ಮಾಹಿತಿ ಆಯೋಗದ ವೆಬ್‌ನಲ್ಲಿ “ಆಯೋಗದ ತೀರ್ಮಾನಗಳ ಟ್ಯಾಬ್’ ಇದೆ. ಅಲ್ಲಿ ಕ್ಲಿಕ್ಕಿಸಿದರೆ ಬಹುಪಾಲು ಪ್ರಕರಣಗಳು ಅತ್ತ ದಂಡವೂ ಇಲ್ಲದೆ, ಇತ್ತ ಪರಿಹಾರವೂ ಇಲ್ಲದೆ ಇತ್ಯರ್ಥಗೊಂಡಿದ್ದನ್ನು ನೋಡುತ್ತೇವೆ. ಈಗೀಗ ಜನ ಮಾಹಿತಿ ಆಯೋಗಕ್ಕೆ ಹೋಗುತ್ತೇನೆಂದರೂ ಅಧಿಕಾರಿಗಳು ಭಯ ಬೀಳುವುದಿಲ್ಲ, ತಪ್ಪು ಯಾರದು?
* ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.