ಕಳ್ಳರ ಕಾಟದಿಂದ ನಿಮ್ಮಮನೆ ಸೇಫಾ?
Team Udayavani, Sep 18, 2017, 1:54 PM IST
ಮನೆ ಕಟ್ಟಿಸುವಾಗ ನಾವೆಲ್ಲಾ ಬಾಗಿಲು, ಕಿಟಕಿಗಳ ವಿನ್ಯಾಸದ ಬಗ್ಗೆ ಮಾತ್ರ ತಲೆಕೆಡಿಸಿ ಕೊಂಡಿರುತ್ತೇವೆ. ಸುರಕ್ಷತೆಯ ಬಗ್ಗೆ ಹೆಚ್ಚಾಗಿ ಯೋಚನೆಯನ್ನೇ ಮಾಡಿರುವುದಿಲ್ಲ. ನೀಜ ಹೇಳಬೇಕೆಂದರೆ, ಪ್ರತಿಯೊಂದು ಮನೆಗೂ ಅಗತ್ಯವಿರುವುದು ಸುರಕ್ಷತೆಯೇ ವಿನಃ ವಿನಸ್ಯಾಸವಲ್ಲ. ಕಳ್ಳಕಾಕರ ಕಾಟದಿಂದ ಪಾರಾಗಬೇಕೆಂದರೆ ನಮ್ಮ ಮನೆ ಹೇಗಿರಬೇಕು ಎಂಬ ಮಾಹಿತಿಗೆ ಉತ್ತರ ರೂಪದಲ್ಲಿ ಈ ಬರಹ.
ಮನೆಯಿಂದ ಹೊರಗೆ ಹೋಗಿದ್ದವರ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾದ ಕಳ್ಳರ ಬಗ್ಗೆ ಕೇಳಿದಾಗ ಕಸಿವಿಸಿಗೊಳ್ಳುವ ನಾವು, ಒಬ್ಬರೇ ಮನೆಯೊಳಗೆ ಇದ್ದಾಗ ಸುರಕ್ಷತೆಯ ಬಗ್ಗೆ ಯೋಚಿಸುವುದು ಸಹಜವೇ. ಕಳ್ಳಕಾಕರು ಮನೆಯ ಬಲಾಬಲಗಳನ್ನು ಲೆಕ್ಕಹಾಕಿ, ಎಲ್ಲಿ ದುರ್ಭಲವಾಗಿದೆಯೋ ಮೊದಲು ಅಲ್ಲೇ ನುಸುಳುವುದು ಉಂಟು. ನಾಲ್ಕಾರು ಮನೆಗಳ ಮೇಲೆ ಕಣ್ಣಿಡುವ ಕಳ್ಳರು, ಅವುಗಳಲ್ಲಿ ಅತಿ ಸುಲಭದಲ್ಲಿ ಕಳ್ಳತನ ಮಾಡಲು ಹಾಗೂ ಹೆಚ್ಚು ತ್ರಾಸವಿಲ್ಲದೆ ಒಳ ನುಸುಳಲು ಯಾವುದು ಅನುಕೂಲಕರವೋ ಅದನ್ನೇ ಆಯ್ದುಕೊಳ್ಳುತ್ತಾರೆ. ಈ ವಿಷಯದಲ್ಲಿ ಕಿಂಚಿತ್ತೂ ಸಂಶಯವಿಲ್ಲ! ಇದರಿಂದ, ಅಂದರೆ ಕಳ್ಳರ ಕಾಟದಿಂದ ಪಾರಾಗ ಬೇಕಾದರೆ ನಮ್ಮ ಮನೆಗಳನ್ನು ಕಳ್ಳ ನಿರೋಧಕಗಳಾಗಿ ಮಾಡಬೇಕು. ಅದು ಹೇಗೆಂದರೆ?
ಮುಂಬಾಗಿಲನ್ನು ಗಟ್ಟಿಗೊಳಿಸಿ
ಸಾಮಾನ್ಯವಾಗಿ ಫ್ರಂಟ್ ಡೋರ್ ಸುಂದರವಾಗಿರಲಿ ಎಂದು ಅತಿ ಹೆಚ್ಚು ಎನ್ನುವಷ್ಟು ಕೆತ್ತನೆ ಕೆಲಸಮಾಡಿ ಕಡೆಗೆ ಮರದ ಬಾಗಿಲಿನ ದಪ್ಪವನ್ನು ಮಾಮೂಲಿ ಒಂದೂಕಾಲು ಇಂಚಿನಿಂದ ಅರ್ಧಇಂಚಿಗೆ ಇಳಿಸಿಬಿಡುತ್ತೇವೆ. ಬಾಗಿಲಿನ ದೃಢತೆ ಅದರ ಕನಿಷ್ಠದಪ್ಪ ಎಷ್ಟಿರುತ್ತದೆ ಎಂಬುದರ ಮೇಲೆ ಆಧರಿಸಿರುತ್ತದೆ. ಕುಸುರಿ ಕೆಲಸಕ್ಕೆ ಕೆಲಭಾಗದಲ್ಲಾದರೂ ಬಾಗಿಲಿನ ದಪ್ಪ ಅರ್ಧ ಇಂಚಿನಷ್ಟಾಗಿದ್ದರೆ, ನಾವು ಅಂಥ ಬಾಗಿಲಿನ ದಪ್ಪವನ್ನು ಕೇವಲ ಅರ್ಧ ಇಂಚು ಎಂದೇ ಪರಿಗಣಿಸಬೇಕಾಗುತ್ತದೆ. ಇಷ್ಟು ತೆಳ್ಳನೆಯ ಬಾಗಿಲನ್ನು ದಢೂತಿ ವ್ಯಕ್ತಿಯೊಬ್ಬ ಜೋರಾಗಿ ದೂಡಿದರೂ ಸಾಕು; ಅದು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಆದುದರಿಂದ ನಾವು ಕುಸುರಿ ಕೆಲಸ ಮಾಡಿದ ಬಾಗಿಲಿನ ಹಿಂದೆ ಕಡೇ ಪಕ್ಷ ಮುಕ್ಕಾಲು ಇಂಚಿನ ಪ್ಲೆ„ವುಡ್ ಅಥವಾ ಬ್ಲಾಕ್‌ಬೋರ್ಡ್ ಪದರವನ್ನು ನೀಡುವುದು ಮುಖ್ಯ.
ಮುಂಬಾಗಿಲಿನ ಪಕ್ಕ ಕಿಟಕಿ
ಅನೇಕರು ಮನೆಯ ಮುಖ್ಯ ದ್ವಾರದ ಪಕ್ಕದಲ್ಲಿ ಸಣ್ಣದೊಂದು ಕಿಟಕಿಯನ್ನು ಇಟ್ಟು, ಬಾಗಿಲು ತೆರೆಯುವ ಮುನ್ನ ಯಾರು ಬಂದಿದ್ದಾರೆ ಎಂದು ನೋಡಲು ಅನುಕೂಲ ಮಾಡಿಕೊಂಡಿರುತ್ತಾರೆ. ಇದು ಒಳ್ಳೆಯದೇ ಆದರೂ ಇಂಥ ಕಿಟಕಿಗಳು ಬಾಗಿಲಿನ ಚಿಲಕ ಇರುವ ಕಡೆ ಇರಬಾರದು! ಬದಲಿಗೆ ಕೀಲಿ ಇರುವ ಕಡೆ ಇರಬೇಕು. ಬಾಗಿಲಿನ ಚಿಲಕ ಹಾಕುವ ಕಡೆ ಇದ್ದರೆ, ಈ ಕಿಟಕಿಯ ಮೂಲಕ ಕಳ್ಳರು ಕೈ ಹಾಕಿ ಚಿಲಕ ತೆಗೆದು ಮನೆಯನ್ನು ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಮುಂಬಾಗಿಲಿಗೆ ಹೆಚ್ಚುವರಿ ಸುರಕ್ಷತೆ ನೀಡಲು ಅಕ್ಕಪಕ್ಕವೂ ಬೋಲ್ಟ್‌ಗಳನ್ನು ಹಾಕುವುದು ಉತ್ತಮ.
ಖಾಸಗಿತನ ಕಾಪಾಡಿಕೊಳ್ಳಿ
ಮನೆ ಎಂಬುದು ಹೇಳಿಕೇಳಿ ಖಾಸಗಿ ಸ್ಥಳ. ಕೆಲವೊಮ್ಮೆ ಹೊರಗಿನಿಂದಲೇ ಮನೆಯ ದರ್ಶನ ಹೆಚೂ cಕಡಿಮೆ ಪೂರ್ಣವಾಗಿ ಆಗುವುದುಂಟು. ಹೀಗೆ “ದಿಗ್’ ದರ್ಶನ ನೀಡುವ ದೊಡ್ಡ ಗಾತ್ರದ ಕಿಟಕಿಗಳನ್ನು ಮನೆಯ ಮುಂದೆ- ರೋಡಿನಿಂದ ನೋಡುವ ರೀತಿಯಲ್ಲಿ ಇಡದಿರುವುದು ಮುಖ್ಯ. ಕೆಲವೊಮ್ಮೆ ಮನೆಯ ಆಗುಹೋಗುಗಳನ್ನು ಕಳ್ಳಕಾಕರು ಗಮನಿಸುವುದಿರಲಿ, ಟಿವಿ ನೋಡುತ್ತಿರುವ ವ್ಯಕ್ತಿಯನ್ನು ಕಿಟಕಿಯ ಮೂಲಕವೇ ಗುಂಡುಹಾರಿಸಿ ಕೊಲೆಗೈದಿದ್ದನ್ನೂ ನಾವು ಕೇಳಿರುತ್ತೇವೆ. ಆದುದರಿಂದ, ಆದಷ್ಟೂ ಖಾಸಗೀತನ ಕಾಪಾಡಿಕೊಳ್ಳಲು, ಮನೆಯ ಹೆಚ್ಚು ಭಾಗ ಹೊರಗಿನಿಂದ ಕಾಣದಂತೆ ಮನೆಯ ಪ್ಲಾನ್ ಬರೆಸುವುದು ಮುಖ್ಯ.
ಕಳ್ಳರ ಉಪಕರಣಗಳ ಬಗ್ಗೆ ಮಾಹಿತಿ
ಸಾಮಾನ್ಯವಾಗಿ ಕಳ್ಳರು ಈ ಹಿಂದಿನಂತೆ ಗೋಡೆಗೆ ಕನ್ನ ಕೊರೆಯುವುದು ಕಡಿಮೆ. ಎಲ್ಲೋ ಅತಿ ಶ್ರೀಮಂತ ಚಿನ್ನದ ಅಂಗಡಿಗಳಿಗೆ ಕನ್ನ ಕೊರೆಯುವುದು ಇಂದಿಗೂ ಇದ್ದರೂ ಬಹುತೇಕ ಕಳ್ಳರು ಕಿಟಕಿ ಇಲ್ಲವೇ ಬಾಗಿಲನ್ನು “ಜೆಮ್ಮಿ’ ಸರಳಿನಿಂದ ಮೀಟಿ ಒಡೆದು ನುಗ್ಗುವುದೇ ಹೆಚ್ಚು. ಕಳ್ಳರಿಗೆ ಕೂತು ಮೀಟುವುದು ಅನುಕೂಲಕರ. ಜೊತೆಗೆ ಕೂತಾಗ ಅವರು ಅಕ್ಕಪಕ್ಕದವರಿಗೆ, ದಾರಿಹೋಕರಿಗೆ ಹೆಚ್ಚು ಕಾಣಿಸುಕೊಳ್ಳುವುದೂ ಇಲ್ಲ. ಹಾಗಾಗಿ ನಾವು ಮನೆಗೆ ಕೈಗೆ ಸುಲಭದಲ್ಲಿ ಎಟುಕುವ ಸುಮಾರು ಎರಡೂವರೆ ಅಡಿ ಎತ್ತರದಲ್ಲಿ ಬೋಲ್ಟ್- ಚಿಲಕ ಹಾಗೂ ಲಾಕ್ ಅಳವಡಿಸುವುದರ ಜೊತೆಗೆ ಬಾಗಿಲಿನ ಕೆಳಮಟ್ಟದಲ್ಲಿ ಹೆಚ್ಚುವರಿಯಾಗಿ ಒಂದು ಚಿಲಕವನ್ನು ನೀಡುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.
ಹಿತ್ತಲ ಬಾಗಿಲಿನ ಸುರಕ್ಷತೆ
ಮನೆಯ ಮುಂಭಾಗದಲ್ಲಿ ಜನ ಓಡಾಡುವುದು ಹೆಚ್ಚಿದ್ದು, ಅದನ್ನು ಒಡೆಯಲು ಕಳ್ಳರು ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಮನೆಯ ಹಿಂದೆ ಅವರು ಯಾರಿಗೂ ಕಾಣದೆ ತಮ್ಮ ಕೈಚಳಕವನ್ನು ತೋರಿಸಲು ಅನುಕೂಲಕರ. ಹಾಗಾಗಿ ಮನೆಯ ಹಿಂಬಾಗಿಲಿಗೆ ಹೆಚ್ಚುವರಿಯಾಗಿ ಅಡ್ಡ ಪಟ್ಟಿ- ಸುಮಾರು ಮೂರು ಇಂಚು ಅಗಲ ಹಾಗೂ ಕಾಲು ಇಂಚಿನ ಉಕ್ಕಿನ ಪಟ್ಟಿಯನ್ನು ನೀಡುವುದು ಒಳ್ಳೆಯದು. ಕಳ್ಳರು ಬಾಗಿಲನ್ನು ಮೀಟಿದರೂ, ಮಧ್ಯಭಾಗದಲ್ಲಿ ಅದು ಕದಲದಿದ್ದರೆ, ಬಾಗಿಲು ಮುರಿಯುವುದು ಸುಲಭವಾಗುವುದಿಲ್ಲ.
ಕಿಟಕಿಗಳ ಸುರಕ್ಷತೆ
ಗ್ರಿಲ್ ವಿನ್ಯಾಸ ಮಾಡುವಾಗ ನಾವು ಸುರಕ್ಷತೆಯ ಬಗ್ಗೆ ಹೆಚ್ಚು ಯೋಚಿಸದೆ ಅಲಂಕಾರದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಂಡಿರುತ್ತೇವೆ. ಸಾಮಾನ್ಯವಾಗಿ ಕಳ್ಳರಿಗೆ “ನಿಲುವು’ ಸರಳುಗಳನ್ನು ಮುರಿಯುವುದು ಕಷ್ಟ. ನೀವು ಗಮನಿಸಿರಬಹುದು, ಜೈಲುಗಳಲ್ಲೂ ಬಾಗಿಲಿಗೆ ಕೆಳಗಿನಿಂದ ಮೇಲೆ ನಿಂತಂತೆ ಸರಳುಗಳನ್ನು ಅಳವಡಿಸಿರುತ್ತಾರೆ. ಹಾಗೆಯೇ ಹಳೆಯ ಮನೆಗಳಲ್ಲೂ ಸರಳುಗಳನ್ನು ನಿಂತಂತೆಯೇ ಅಳವಡಿಸಲಾಗುತ್ತಿತ್ತು. ಹೀಗೆ ಮಾಡುವುದರಿಂದ ಕಳ್ಳರಿಗೆ “ಅವರ ಪ್ರಿಯವಾದ ಆಯುಧ’ ಜಿಮ್ಮಿ ರಾಡ್ ಬಳಸಿ ಮೀಟಲು ಸುಲಭಸಾಧ್ಯವಿಲ್ಲ! ವಿನ್ಯಾಸಕ್ಕೋಸ್ಕರ ಕೆಲ ಅಡ್ಡ ಸರಳುಗಳನ್ನು ನೀಡಿದರೂ, ಮುಖ್ಯವಾದ ಸರಳುಗಳು ನೇರವಾಗಿ- ಕಿಟಕಿಯ ಕೆಳಗಿನಿಂದ ಮೇಲಕ್ಕೆ ಅಳವಡಿಸಿದ್ದರೆ, ಕಳ್ಳರ ಚೀಲದಲ್ಲಿರುವ ಆಯುಧಗಳಲ್ಲೊಂದು ನಿಷ್ಪ್ರಯೋಜಕವಾಗುತ್ತದೆ.
ಲಕ್ಷಾಂತರ ರೂಪಾಯಿ ವ್ಯಯಿಸಿ ಮನೆ ಕಟ್ಟುವಾಗ ಕೆಲವು ಮುಖ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ, ಮುಂದೆ ನಾವು ಯಾವುದೇ ಆತಂಕಗಳಿಲ್ಲದೆ ಆರಾಮವಾಗಿರಬಹುದು.
ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.