ನಾವು ಹಾಗೂ ನೀರಿನ ನಾಯಕತ್ವ
Team Udayavani, Feb 20, 2017, 3:45 AM IST
“ಮುಂದಿನ ವರ್ಷ ಮಳೆ ಒಳ್ಳೆಯ ರೀತಿಯಲ್ಲಿ ಬರಲಿ, ನಾಡು ನೀರಿನ ಸಂಕಷ್ಟದಿಂದ ಬಚಾವಾಗಲಿ’ ಎಂದು ಎಲ್ಲರೂ ಆಶಿಸೋಣ. ಆದರೆ ಲಭ್ಯ ಮಾಹಿತಿಗಳು ನಮ್ಮನ್ನು ದಂಗು ಬಡಿಸುತ್ತಿವೆ. ಮುಂದಿನ 2020ರವರೆಗೂ ಬರದ ಪರಿಸ್ಥಿತಿ ಹೀಗೆ ಇದ್ದರೆ ಏನು ಮಾಡೋಣ? ಮಳೆ ಕೊರತೆ ಈಗಿನಂತೆ ಶೇಕಡಾ 25-45ರಷ್ಟು ಕಡಿಮೆ ಇದ್ದರೆ ಹೇಗೆ ಬದುಕೋಣ? ಯೋಚಿಸಲು ಸಾಧ್ಯವೇ? ಈಗ ರಾಜ್ಯ ತುರ್ತಾಗಿ ಇಂಥ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ಗುಡ್ಡದ ತುತ್ತತುದಿಯ ನೀಲಮ್ಮನ ಮನೆವರೆಗೂ ಕುಡಿಯುವ ನೀರಿನ ಯೋಜನೆ ತಲುಪಿದರೆ ಬಹಳ ಅನುಕೂಲ.ಅವರಿಗೆ ಕುಡಿಯಲು ನೀರು ಸಿಗುತ್ತದೆನ್ನುವುದಕ್ಕಿಂತ ಊರಲ್ಲಿರುವ ಅವರ ಕುಟುಂಬಸ್ಥರು, ಜಾತಿಯವರ ಓಟು ಮುಂದಿನ ಚುನಾವಣೆಯಲ್ಲಿ ನಮಗೆ ದೊರಕಬಹುದು. ನೀರಿನ ಕೆಲಸದ ಕಾರಣ ನಾಳೆ ಆ ಊರಿಗೆ ಹೋಗಿ ಓಟು ಕೇಳುವ ನೈತಿಕತೆ ಉಳಿಯುತ್ತದೆ. ನಿಮಗೆ ನೀರಿನ ಸಮಸ್ಯೆ ಇದೆಯೇ? ಬಾವಿ, ನದಿ, ಕೆರೆಗಳಲ್ಲಿ ಎಲ್ಲಿಯೂ ನೀರಿಲ್ಲವೇ? ಹಾಗಾದರೆ ನಮ್ಮ ಟ್ಯಾಂಕರ್ ನೀರು ನಾಳೆ ಬೆಳಗ್ಗೆ ನಿಮ್ಮ ಗಲ್ಲಿಗೆ ಬರುತ್ತದೆ. ಟ್ಯಾಂಕರ್ ಹಿಂದೆ ಶಾಸಕರ ದೊಡ್ಡ ಪೋಟೋ, ಉಚಿತ ನೀರು ಪೂರೈಕೆಯ ವಿವರದ ಫ್ಲೆಕ್ಸ್‌ನಲ್ಲಿ ಕಾಣಿಸುತ್ತದೆ. ನೀರಿನ ಸಮಸ್ಯೆ ಬೆಳೆಯಬೇಕು, ಆಗ ನೀರು ಕೊಟ್ಟವರನ್ನು ಊರು ಮರೆಯುವುದಿಲ್ಲ. ಮಳೆಗಾಲದಲ್ಲಿ ಕೆರೆಗೆ ನೀರು ತುಂಬಿಸಿದರೆ ಬೇಸಿಗೆಯಲ್ಲಿ ಸುತ್ತಲಿನ ಬಾವಿಗಳಲ್ಲಿ ನೀರಿರುತ್ತದೆ. ಒಂದು ಹಳ್ಳಿಗೆ ಹೋಗಿದ್ದಾಗ ಮಳೆ ನೀರು ಕೆರೆಗೆ ತುಂಬಿಸುವುದಕ್ಕೆ ಅಲ್ಲಿನ ಪಂಚಾಯತ್ ಸದಸ್ಯರೇ ಅಡ್ಡಿಯಾದ ವಿಷಯ ತಿಳಿಯಿತು. ವಿಚಾರಿಸಿದರೆ ಬೇಸಿಗೆ ಶುರುವಾಗುತ್ತಲೇ ತಮ್ಮ ಕೊಳವೆ ಬಾವಿಯ ನೀರನ್ನು ಇವರ ಸಹೋದರರು ಟ್ಯಾಂಕರ್‌ನಲ್ಲಿ ತುಂಬಿ ನೀರು ಮಾರಾಟ ಆರಂಭಿಸುತ್ತಾರೆ. ಐದಾರು ವರ್ಷಗಳಿಂದ ಬೇಸಿಗೆಯ ಲಾಭದಾಯಕ ವ್ಯವಹಾರ ಅಭ್ಯಾಸವಾಗಿದೆ. ನೀರಿನ ಮುಖ ನೋಡುತ್ತ ಹೋದರೆ ಜನರ ಸಂಕಷ್ಟಕ್ಕೆ ಓಗುಡುವುದಕ್ಕಿಂತ ನಾಳಿನ ಚುನಾವಣೆಗೆ ಭೂಮಿ ಹಸನಾಗಿಸುವ ಆರಂಭ ಎಲ್ಲೆಡೆ ಕಾಣಿಸುತ್ತಿದೆ.
ಕೆರೆಗೆ ನದಿ ನೀರು ತುಂಬಿಸುತ್ತೇವೆ. ಇದರಿಂದ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಕೃಷಿ ಉತ್ಪಾದನೆ ಹೆಚ್ಚುತ್ತದೆಂದು ಶಾಸಕರು, ಸಚಿವರು ಮಾತಾಡುತ್ತಾರೆ. ಹಲವೆಡೆ ಈ ಕಾರ್ಯ ಉತ್ತಮವಾಗಿ ನಡೆದಿದೆ. ಕೆರೆಗೆ ನೀರು ಬರುವ ಚೆಂದದ ಕನಸು ಬಿತ್ತಿದರೆ ಜಲ ಕಾಯಕ ಮತವಾಗಿ ರೂಪಾಂತರವಾಗುತ್ತದೆಂದು ನಾಡಿನ ಜನಪ್ರತಿನಿಧಿಗಳಿಗೆ ಗೊತ್ತಿದೆ. ಆದರೆ ಯೋಜನೆ ಎಲ್ಲೆಡೆ ಸಾಧ್ಯವೇ? ಜಾರಿಯಾದ ನೀರಿನ ಯೋಜನೆಗಳು ಏಕೆ ಸೋತವೆಂದು ಇವರು ನೋಡುವುದಿಲ್ಲ. ನೀರಿನ ಬಗ್ಗೆ ಮಾತಾಡಲು ನಿಂತರೆ ಎಲ್ಲ ಹಳ್ಳಿಗರಿಗೆ ನೀರು ನೀಡುವುದಾಗಿ ಹೇಳುತ್ತಾರೆಯೇ ಹೊರತೂ ಪರಿಸರದ ಸತ್ಯ ಹೇಳಲು ಮುಂದಾಗುತ್ತಿಲ್ಲ, ದುಃಖದ ಸಂಗತಿಯೆಂದರೆ ಹೋರಾಟದ ಮುಂಚೂಣಿಯಲ್ಲಿ ನಿಂತ ಹಲವರಿಗೆ ಪರಿಸರ ಪರಿಸ್ಥಿತಿಯ ಕನಿಷ್ಟ ಅರಿವು ಇರುವುದಿಲ್ಲ. ನೀರಿನ ಬಳಕೆಯ ಜಾnನವಿಲ್ಲ.
ಹಿಮಾಲಯದಿಂದಾದರೂ ನೀರು ತಂದು ಬದುಕು ಹಸನಾಗಿಸುವ ಭರ್ಜರಿ ಕನಸು ಬಿತ್ತುವುದು ಭವಿಷ್ಯದ ರಾಜಕಾರಣಕ್ಕೆ ಲಾಭದಾಯಕವಾಗಿದೆ.
ಮಳೆ ನೀರು ಹಿಡಿಯ ಬೇಕು, ಭೂಮಿಗೆ ಇಂಗಿಸಬೇಕು, ನೀರಿನ ಮಿತ ಬಳಕೆಯ ಸೂತ್ರ ಅನುಸರಿಸಬೇಕೆಂದು ಯಾರೂ ಹೇಳುತ್ತಿಲ್ಲ. ಭೂಮಿಯಲ್ಲಿ ಬೇಕಾದಷ್ಟು ನೀರಿದೆ, ಹೇಗಾದರೂ ತಂದೇ ತರುತ್ತೇವೆಂದು ಘೋಸಿ ಚಪ್ಪಾಳೆ ಪಡೆಯುವ ಕಲೆ ಕರಗತವಾಗಿದೆ. ನೀರಿನ ಸಂಕಷ್ಟ ಅನುಭವಿಸುವ ನಮಗೆ ಎಲ್ಲಿಂದಾದರೂ ನೀರು ಬಂದರೆ ಸಾಕು, ಅದರಾಚೆಯ ಸತ್ಯಗಳ ಗಮನವಿಲ್ಲ. ಸಮುದ್ರದ ನೀರನ್ನು ಶುದ್ಧೀಕರಿಸಿ ಬಳಸುವ ಯೋಜನೆಗಳು ಚರ್ಚಿತವಾಗುತ್ತಿವೆ. ನೀರಿನ ಸುತ್ತ ಇಡೀ ಬದುಕು, ಆಡಳಿತ ಚಕ್ರ ತಿರುಗುತ್ತಿದೆ.
ಕಾವೇರಿ, ಮಹದಾಯಿ ಹೋರಾಟ ನೆನಪಿಸಿಕೊಂಡರೆ ನೀರು ನಮ್ಮನ್ನು ಹೇಗೆ ಕಾಡುತ್ತಿದೆಯೆಂದು ತಿಳಿಯುತ್ತದೆ. ನೀರಿಲ್ಲದೇ ಒಣಗಿದ ಕಾವೇರಿ, ತುಂಗಭದ್ರಾ ಮಡಿಲಿನ ಭತ್ತದ ನೆಲೆಗಳ ಅಧ್ಯಯನ ನಡೆಸಿದರೆ ನೀರಿನ ಮೇಲೆ ನಿಂತ ಹಳ್ಳಿಯ ಆರ್ಥಿಕತೆ ಅರಿಯಬಹುದು. ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಿದ್ದ ರಾಯಚೂರು, ಸಿಂಧನೂರು, ಗಂಗಾವತಿ ಸೀಮೆಯ ಭತ್ತದ ಗದ್ದೆಗಳು ಒಣಗಿವೆ. ದಾವಣಗೆರೆ, ಹರಿಹರ, ಭದ್ರಾವತಿ ನೆಲೆಗಳಲ್ಲಿ ನೆಲದ ನೋವು ಕಾಣಿಸುತ್ತಿದೆ. ಒಣ ಗದ್ದೆಗಳು ಕುರಿ ಮೇವಿನ ಹೊಸ ತಾಣವಾಗಿವೆ. ಎಕರೆಗೆ 50-55 ಚೀಲ ಭತ್ತದ ಉತ್ಪಾದನೆ ಇದ್ದ ಪ್ರದೇಶವಿದು. ಲಕ್ಷಾಂತರ ಎಕರೆ ಕ್ಷೇತ್ರದಲ್ಲಿ ಒಂದು ಬೆಳೆಗೆ ಸೀಮಿತವಾದಾಗ ಉತ್ಪಾದನೆ ಕುಸಿತದ ಜೊತೆಗೆ ರೈತರ ಸಂಕಷ್ಟವೂ ಹೆಚ್ಚುತ್ತದೆ. ಕೃಷಿಕರು, ಕೂಲಿಕಾರರು, ಟ್ರ್ಯಾಕ್ಟರ್ ಚಾಲಕರು, ಕೀಟನಾಶಕ, ಕಳೆನಾಶಕ, ರಸಗೊಬ್ಬರ, ಬೀಜ ಪೂರೈಕೆದಾರರು, ಕಟಾವು, ಸಂಸ್ಕರಣೆ ಗಿರಣಿಗಳಿಗೆ ನೀರಿನ ಬಿಸಿ ತಗಲಿದೆ. ಕೃಷಿ ನೆಲೆಗಳನ್ನು ಸುತ್ತಾಡಿ ಜನರನ್ನು ಸಂಘಟಿಸಿ ನೀರಿನ ಸಮಸ್ಯೆಗೆ ಅಣೆಕಟ್ಟೆಯಲ್ಲಿ ಹೂಳು ತುಂಬಿದ್ದು ಕಾರಣವಾಗಿದೆ. ಮಳೆ ಕೊರತೆಗೆ ಪರಿಹಾರವಾಗಿ ಇನ್ಯಾವುದೋ ನದಿ ಕಣಿವೆಯ ನೀರನ್ನು ಎರವಲು ಪಡೆಯುವ ಜಾಗೃತಿ ಮೂಡಿಸಿದರೆ ಸಂಕಷ್ಟ ಎದುರಿಸಿದವರು ಸಹಜವಾಗಿ ಜೊತೆ ಸೇರುತ್ತಾರೆ. ಕನಸು ಬಿತ್ತುವ ಕಾರಣಕ್ಕೆ ಜನಸಮೂಹ ಕೂಡಿಸಬಹುದು. ಚಳವಳಿ ನಡೆಸಬಹುದು. ಇದರಿಂದ ಜನಪ್ರಿಯ ನಾಯಕರಾಗಿ ಬೆಳೆಯಬಹುದು, ಆದರೆ ನೀರಿನ ಸತ್ಯಗಳನ್ನು ಅರಿಯದೇ ಚಳವಳಿ ಎಬ್ಬಿಸುವ ನಾಯಕತ್ವ ನಾಳಿನ ನಾಡಿನ ಇನ್ನಷ್ಟು ಸಂಕಷ್ಟಗಳಿಗೆ ಕಾರಣವಾಗುತ್ತಿದೆ.
“ಮುಂದಿನ ವರ್ಷ ಮಳೆ ಒಳ್ಳೆಯ ರೀತಿಯಲ್ಲಿ ಬರಲಿ, ನಾಡು ನೀರಿನ ಸಂಕಷ್ಟದಿಂದ ಬಚಾವಾಗಲಿ’ ಎಂದು ಎಲ್ಲರೂ ಆಶಿಸೋಣ. ಆದರೆ ಲಭ್ಯ ಮಾಹಿತಿಗಳು ನಮ್ಮನ್ನು ದಂಗು ಬಡಿಸುತ್ತಿವೆ. ಮುಂದಿನ 2020ರವರೆಗೂ ಬರದ ಪರಿಸ್ಥಿತಿ ಹೀಗೆ ಇದ್ದರೆ ಏನು ಮಾಡೋಣ? ಮಳೆ ಕೊರತೆ ಈಗಿನಂತೆ ಶೇಕಡಾ 25-45ರಷ್ಟು ಕಡಿಮೆ ಇದ್ದರೆ ಹೇಗೆ ಬದುಕೋಣ? ಯೋಚಿಸಲು ಸಾಧ್ಯವೇ? ಈಗ ರಾಜ್ಯ ತುರ್ತಾಗಿ ಇಂಥ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ನಾಡಿನ ಜನರನ್ನು ಹೆದರಿಸಲು ಈ ಮಾತು ಹೇಳುತ್ತಿಲ್ಲ. ಕಳೆದ ದಿನಗಳು ಖುಷಿ ದಿನಗಳಂತೆ ನನಗಂತೂ ಕಾಣಿಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಪ್ರತಿ ವರ್ಷ 35-40 ಸಾವಿರ ಕಿಲೋ ಮೀಟರ್ ರಾಜ್ಯದ ಕೃಷಿ ನೆಲೆ ಸುತ್ತಾಡುತ್ತಿದ್ದೇನೆ. ಬರ ಪರಿಸ್ಥಿತಿ ಹೇಗಿದೆಯೆಂಬ ನೆಲಮೂಲದ ಮಾಹಿತಿಗಳಿವೆ. ಜನರ ವೃತ್ತಿ, ಆಹಾರ ಬದಲಾಗುತ್ತಿದೆ. ವಲಸೆ ಬೆಳೆಯುತ್ತಿದೆ. ಮೇವಿನ ಸಮಸ್ಯೆಯಿಂದ ಜಾನುವಾರುಗಳನ್ನು ಮಾರುವವರು ಜಾಸ್ತಿ, ಇವನ್ನು ಕೃಷಿಕರು ಯಾರೂ ಕೊಳ್ಳುತ್ತಿಲ್ಲ, ಕಸಾಯಿಖಾನೆಗೆ ಹೋಗುತ್ತಿವೆ. ಹಾಸನ ಅರಸಿಕೆರೆಯತ್ತ ಸಂಚರಿಸಿ ಕೃಷಿಕರನ್ನು ಮಾತಾಡಿಸಿದರೆ ಮಳೆ ಬಂದ ನೆನಪಿಲ್ಲ. ಚಳಿಗಾಲದ ಮುದ್ದೆ ಊಟಕ್ಕೆ ಹೊಲದ ಅವರೆ, ತಡ್ನಿ(ಅಲಸಂದಿ), ಹುರಳಿ ಇಲ್ಲ. ಬೀದರ್‌ನಲ್ಲಿ ಬಿಳಿ ಜೋಳದ ರೊಟ್ಟಿಯ ಜೊತೆ ಸೇರುತ್ತಿದ್ದ ಕುಸುಬಿ ಪಲ್ಲೆ ನಾಪತ್ತೆಯಾಗಿದೆ. ಬೆಳಗಾವಿಯ ಪಾಶ್ಚಾಪುರದ ರೊಟ್ಟಿಯ ಜೊತೆ ತಟ್ಟೆಯಲ್ಲಿ ಚಳಿಗಾಲದಲ್ಲಿ ನಗುತ್ತಿದ್ದ ಕಡ್ಲೆ ತೊಪ್ಪಲು ಕಾಣಿಸುತ್ತಿಲ್ಲ. ಆಹಾರ ಬದಲಾದರೆ ಆರೋಗ್ಯ ಹಾಳಾಗುತ್ತದೆ. ಹೊಲದ ನೆಲೆಯಿಂದ ದೊಡ್ಡಿ, ಅಡುಗೆ ಮನೆವರೆಗೆ ಬರದ ತಲ್ಲಣ ಕಾಣಿಸುತ್ತಿದೆ. ನೀರು ಸಿಕ್ಕರೆ ಎಲ್ಲೆಡೆ ನೆಮ್ಮದಿ ಇರುತ್ತಿತ್ತು.
ನಾಡಿನ ಆಡಳಿತದ ಪರಿಸ್ಥಿತಿ ಹೇಗಿದೆಯೆಂದರೆ ಉತ್ತಮ ಮಳೆ ಸುರಿದು ಅಣೆಕಟ್ಟೆಗೆ ಸಂಪೂರ್ಣ ನೀರು ತುಂಬಿದರೂ ನೀರು ಹರಿಯದ ನೆಲೆಯಲ್ಲಿ ಬೃಹತ್ ಕಾಂಕ್ರೀಟ್ ಕಾಲುವೆ ಕಟ್ಟುತ್ತಿದ್ದೇವೆ, ಇದು ಯಾರ ಲಾಭಕ್ಕೆಂದು ಹೇಳಬೇಕಾಗಿಲ್ಲ. ಮುಖ ತೊಳೆಯುವುದಕ್ಕೆ ನೀರಿಲ್ಲದ ಊರುಗಳಲ್ಲಿ ಕಾಂಕ್ರೀಟ್ ಗಟಾರ, ಕಾಂಕ್ರೀಟ್ ರಸ್ತೆ, ಆಗಸದೆತ್ತರಕ್ಕೆ ಬೃಹತ್ ನೀರಿನ ತೊಟ್ಟಿ ಕಟ್ಟುತ್ತ ಸಾಗಿದ್ದೇವೆ. ಜನತೆ ಇಂಥ ಕಾಮಗಾರಿ ನೋಡುತ್ತ ಹಲವು ವರ್ಷಗಳಾಗಿವೆ. ಇವರೆಲ್ಲ ದಿನ ಬೆಳಗಾದರೆ ನೀರು ಹುಡುಕಿ ಹತ್ತಾರು ಕಿಲೋ ಮೀಟರ್ ಸುತ್ತುತ್ತಿದ್ದಾರೆ. ಊರಿನ ಕೆರೆಯ ಹೂಳು ತೆಗೆಯುವುದು, ನೀರು ಒಳ ಬರುವ ದಾರಿಗಳನ್ನು ಸರಿಪಡಿಸುವುದು, ಅರಣ್ಯೀಕರಣಕ್ಕೆ ಮಹತ್ವ ನೀಡುವುದು, ಕೃಷಿಯಲ್ಲಿ ನೀರಿನ ಮಿತ ಬಳಕೆಯ ಜಾಗೃತಿಗೆ ಮುಂದಾಗುವುದಕ್ಕೆ ಯಾರಿಗೂ ಸಮಯವಿಲ್ಲವೇ? ಇದರ ಪರಿಣಾಮ ನಾಳಿನ ತಲೆಮಾರನ್ನು ಕಾಡಲಿದೆ.
ಕೆರೆ ಹೂಳು ತೆಗೆಯಲು ಒಂದು ಕೋಟಿ ಮಂಜೂರಾದರೆ ಇದರಲ್ಲಿ ಹೆಚ್ಚೆಂದರೆ 25 ಲಕ್ಷ ರೂಪಾಯಿ ಕೆರೆ ಹೂಳು ತೆಗೆಯಲು ಬಳಕೆಯಾಗುತ್ತದೆ. ಇನ್ನುಳಿದ ಹಣವನ್ನು ಕಾಂಕ್ರೀಟ್ ಕೆಲಸಗಳಿಗೆ ಖರ್ಚು ಹಾಕುವ ಯೋಜನೆ ರೂಪಿಸುತ್ತಾರೆ. ಯೋಜನೆ ಕಾರ್ಯಗತವಾಗುವ ಸ್ವರೂಪದ ಬಗ್ಗೆ ಯಾರೂ ಯೋಚಿಸುವುದಿಲ್ಲ. ನೀರು ಹಿಡಿಯುವ ಪಾತ್ರೆಗಳನ್ನು ದೊಡ್ಡ ಮಾಡದೇ ನೀರು ಹೊರ ಹೋಗಲು ಕಾಂಕ್ರೀಟ್ ಕಾಲುವೆಗೆ ಹೆಚ್ಚಿನ ಹಣ ಹಾಕುವುದು ಏಕೆ ಮುಖ್ಯವಾಗುತ್ತದೋ ಅರ್ಥವಾಗುತ್ತಿಲ್ಲ. ಕೆರೆ ಹೂಳು ತೆಗೆದ ಬಳಿಕ ಮಳೆ ಬಂದರೂ ನೀರು ಶೇಖರಣೆಯಾಗದ ಪರಿಸ್ಥಿತಿ ನಮ್ಮದಾಗಿದೆ. 1,700 ವರ್ಷಗಳ ಕೆರೆ ನೀರಾವರಿಯ ಭವ್ಯ ಇತಿಹಾಸ ಹೊಂದಿದ ರಾಜ್ಯ ನಮ್ಮದು. ಸ್ಥಳೀಯವಾಗಿ ಹರಿಯುವ ನದಿ, ಮಳೆ ನೀರು ನಂಬಿಕೊಂಡು ಯೋಜನೆ ರೂಪಿಸುವ ಶ್ರೀಮಂತಿಕೆ ನೆಲದ್ದಾಗಿದೆ. ಈಗ ಪ್ರತಿ ಎಕರೆ ಹೊಲದಲ್ಲಿ, ಕಾಡಲ್ಲಿ, ಪ್ರತಿ ಮನೆಗಳಲ್ಲಿ ಹೇಗೆ ನೀರುಳಿಸಬಹುದೆಂಬ ಯೋಜನೆಗಳನ್ನು ರೂಪಿಸಬೇಕು. ಸುರಿವ ಮಳೆಯನ್ನು ಮೊದಲು ಹಿಡಿಯಲು ಕಲಿಯಬೇಕು, ಅಕಾಲಿಕ ಮಳೆ ಭರ್ಜರಿ ಸುರಿಯಿತೆಂದು ಬೊಬ್ಬೆ ಹೊಡೆಯುವ ಬದಲು ಆ ನೀರನ್ನು ಕೆರೆಯಂಗಳದಲ್ಲಿ ಹಿಡಿದಿಡುವ ಹೆಜ್ಜೆ ಅನುಸರಿಸಬೇಕು. ಇಂಥ ಸರಳ ಕೆಲಸಗಳನ್ನು ಜನ ಮನದಲ್ಲಿ ಬಿತ್ತಬೇಕು, ನೆಲದಲ್ಲಿ ನಿಂತು ಸಂರಕ್ಷಣೆಯ ಕಾಯಕ ಮಾಡಿಸಬೇಕು. ಇಂಥ ನೀರಿನ ನಾಯಕತ್ವ ಹೊರಲು ಹಳ್ಳಿಹಳ್ಳಿಯ ಜನ ಮುಂದಾಗಬೇಕು.
ನೀರಿನ ಮಿತ ಬಳಕೆಯ ಅನುಭವ ಪಾಠ ಬೇಕು. ಉದಾಹರಣೆಗೆ ಒಂದು ಕಳೆ ಇಲ್ಲದಂತೆ ಅಡಿಕೆ ತೋಟ ಸ್ವತ್ಛಗೊಳಿಸುವುದು, ಪ್ರಕರ ಬಿಸಿಲಿಗೆ ಮೇಲ್ಮಣ್ಣು ಒಣಗಿಸುತ್ತ ದಿನಕ್ಕೆ ಮರವೊಂದಕ್ಕೆ 10-15 ಲೀಟರ್ ನೀರು ಪೂರೈಸುವುದು ಸರಿಯಲ್ಲ. ಕಳೆ ಬೆಳೆಸಿ ತೋಟ ರೂಪಿಸಿದರೆ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ. ಹತ್ತು ದಿನಕ್ಕೊಮ್ಮೆ ನೀರು ನೀಡಿದರೂ ತೋಟ ಹಸಿರಾಗಿ ಉಳಿಯುತ್ತದೆ. ಈ ಅನುಭವ ಪಾಠ ಬಿತ್ತರಿಸಬೇಕು. ನೆಲದ ಸತ್ಯ ಅರ್ಥಮಾಡಿಕೊಂಡು ನೀರುಳಿಸುವ ಯೋಜನೆ ಕಾರ್ಯಗತಗೊಳಿಸುವ ನೀರಿನ ನಾಯಕತ್ವ ಬೇಕಾಗಿದೆ. ನೀರಿನ ಸಂರಕ್ಷಣೆ, ಮಿತಬಳಕೆಯ ಪುಟ್ಟ ಪುಟ್ಟ ಮಾದರಿಗಳನ್ನು ಜನಮನಕ್ಕೆ ಹಂಚುವ ಕಾಲಾಳುಗಳು ನಾಳಿನ ಬರ ಎದುರಿಸಲು ಕಲಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.