ಬಹುಧಾನ್ಯ: ಗೇರು ಗ್ರಾಮಾಯಣ
Team Udayavani, Mar 6, 2017, 1:24 PM IST
ವನವಾಸದ ಕಥೆ ಹೇಳುವ ರಾಮಾಯಣ ಇದಲ್ಲ. ದಕ್ಷಿಣ ಅಮೆರಿಕಾದಿಂದ ನೆರೆಯ ಗೋವಾಕ್ಕೆ ಬಂದು ನಮ್ಮ ಗುಡ್ಡದಲ್ಲಿ ನಿಂತು ಫಲ ಜಾnನ ಹಂಚಿದ ಗೋಡಂಬಿ ಕಥೆ. ಇದರ ವರ್ತಮಾನ, ಬೀಜದ ಮುಖಬೆಲೆಯ ಸ್ವಾರಸ್ಯಗಳ ಅನಾವರಣ ಇಲ್ಲಿದೆ.
ಶಾಲೆಯ ಪಕ್ಕದ ಒಂದು ಗೇರು ಮರ ಹುಡುಗಾಟದ ನಮ್ಮ ಚಟುವಟಿಕೆಯ ಕೇಂದ್ರ ಸ್ಥಾನ. ಬೇಸಿಗೆ ಶುರುವಾದರೆ ದಿನವಿಡೀ ಒಬ್ಬರಲ್ಲಾ ಒಬ್ಬರು ಮರದಲ್ಲಿರುತ್ತಿದ್ದೆವು. ಬೆಳಗ್ಗೆ ಬೇಗ ಬಂದು ಒಬ್ಬ ಒಣಗಿದ ಬೀಜಗಳನ್ನು ಕೊಯ್ದು ಮುಗಿಸುತ್ತಿದ್ದ, ಆತ ಮರ ಇಳಿದು ಮನೆಗೆ ಹೋಗುವಷ್ಟರಲ್ಲಿ ಮತ್ತೂಬ್ಬ ಅದೇ ಮರಕ್ಕೆ ಬರುತ್ತಿದ್ದನು. ಮೊದಲಿನವ ಹಣ್ಣು ಕೊಯ್ದರೆ ಎರಡನೆಯವನಿಗೆ ಕುಟುಗ ಉಳಿದಿರುತ್ತಿತ್ತು. ಮತ್ತೂಬ್ಬ ಹಸಿಕುಟುಗ ಹರಿಯುತ್ತಿದ್ದನು. ವಾರಿಗೆಯ ಇನ್ನಷ್ಟು ಹುಡುಗರು ಹಸಿಬೀಜ ಕೊಯ್ಯುವವರು. ಬೀಜದ ಮೂತಿಯನ್ನು ಮರದ ತೊಗಟೆಗೆ ಉಜ್ಜುತ್ತ ಬೀಜ ಕವಚ ಸುಲಿಯುತ್ತಿದ್ದರು. ಆ ಬೀಜವನ್ನು ನೆಲಕ್ಕಿಟ್ಟು ಕಾಲಿನ ಹಿಮ್ಮಡದಲ್ಲಿ ಒತ್ತುತ್ತಿದ್ದರು. ದೇಹ ಭಾರದ ಒತ್ತಡಕ್ಕೆ ಹಸೀಬೀಜದ ಹುಂಗು ಪುಸುಕ್ಕನೆ ಹೊರಬೀಳುತ್ತಿತ್ತು. ಅದನ್ನು ನುರುಕಲು ಎಲೆಯಲ್ಲಿ ಒರೆಸಿ ತಿನ್ನುವುದರಲ್ಲಿ ಸಿಗುತ್ತಿದ್ದ ಖುಷಿ ಇವತ್ತಿನ ಯಾವ ಚಾಕಲೇಟಿನಲ್ಲೂ ಸಿಗಲಿಕ್ಕಿಲ್ಲ! ಗೇರು ಹೈನ ಮೈಗೆ ತಗಲಿ ಚರ್ಮ ಸುಟ್ಟು ಕಪ್ಪಾಗುತ್ತಿತ್ತು. ಒಂದೆರಡು ದಿನಗಳಲ್ಲಿ ಮೇಲ್ಪದರ ಕಿತ್ತು ಬೀಳುತ್ತಿತ್ತು. ಬೆಳಗಿನಿಂದ ಸಂಜೆಯವರೆಗೆ ಊರ ಮಕ್ಕಳ ಏರಿಳಿತದ ಪ್ರಹಾರಕ್ಕೆ ಅತ್ತ ಗೇರು ಕಾಂಡವೂ ಸವೆದು ಪುಸುಕ್ಕನೆ ಜಾರುಬಂಡಿಯಂತೆ ಜಾರುತ್ತಿತ್ತು.
ತುತ್ತ ತುದಿಯಲ್ಲಿ ನೇತಾಡುವ ಒಂದು ಬೀಜ ಕೊಯ್ಯುವುದಕ್ಕೂ ಮರವೇರುತ್ತಿದ್ದ ನಮ್ಮ ಅತ್ಯುತ್ಸಾಹ, ಅದನ್ನು ನಿಯಂತ್ರಿಸಲು ಅಸಹಾಯಕರಾದ ಹಿರಿಯರ ಅಸಾಧ್ಯ ಬೈಯುYಳಗಳಿಂದ ಮರದ ಸುತ್ತ ಗೇರು ಗ್ರಾಮಾಯಣದ ಅನಾವರಣವಾಗುತ್ತಿತ್ತು.
ಗೇರು ಬೀಜ ಮುಖಗಳನ್ನು ಸೂಕ್ಷ್ಮವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಇಲ್ಲಿ ಬೀಜವೆಂದರೆ ಮಾರುಕಟ್ಟೆಯಲ್ಲಿ ದೊರೆಯುವ ಸುಲಿದ ಸರಕಲ್ಲ, ಹಣ್ಣಿನಿಂದ ಬೇರ್ಪಡಿಸಿದ ಸಿಪ್ಪೆಸಹಿತ ಬೀಜ. ಅವು ನಮ್ಮ ಪರಿಚಿತರ ಮುಖಗಳಂತೆ ಕಾಣುತ್ತವೆ. ಸ್ವಾರಸ್ಯಕರ ಸಂಗತಿಯೆಂದರೆ ನಮಗೆ ಕಲಿಸಿದ ಅನೇಕ ಮೇಷ್ಟ್ರು, ಮೇಡಂ ಮುಖಗಳನ್ನು ಗೇರು ಬೀಜದಲ್ಲಿ ಕಾಣಬಹುದು. ಒಂದು ದೊಡ್ಡ ಗಾತ್ರದ ಬೀಜದ ಚಹರೆ ನೋಡಿ ಹೆಡಾ¾ಸ್ತರರ ಮುಖದಂತೆ ಕಾಣುತ್ತದೆಂದು ಒಮ್ಮೆ ಮಾತಾಡಿಕೊಂಡೆವು. ಇದಾದ ಬಳಿಕ ಎಲ್ಲರಿಗೂ ಪ್ರತಿ ಹಣ್ಣಿನ ಬೀಜದಲ್ಲಿ ಮಾಸ್ತರರೇ ಕಾಣುತ್ತಿದ್ದರು. 25 ವರ್ಷ ಬಳಿಕ ಈಗ ಆ ಹಳೆಯ ಮರದ ಬೀಜ ನೋಡುವಾಗಲೂ ಮೇಷ್ಟ್ರು ಮತ್ತೆ ನೆನಪಾಗುತ್ತಾರೆ. ನಮ್ಮೂರಿನ ಶಾಲೆ ಬೇಲಿಯಲ್ಲಿದ್ದ ಉದ್ದ ಮಾಟ, ಚಪ್ಪಟೆ ದೇಹದ ಗೇರು ಬೀಜವನ್ನು ಹುಡುಗ ನರಸಿಂಹ ದೀಕ್ಷಿತ ಹತ್ತಿರದ ಹಳ್ಳಿಯ ಹುಡುಗಿಯರ ಮುಖಕ್ಕೆ ಹೋಲಿಸಿದ್ದನು. ಆ ಗೇರು ಬೀಜ ನೋಡಿದರೆ ಅವನಿಗೆ ಕಾಲೇಜಿಗೆ ಓಡಾಡುತ್ತಿದ್ದ ಆ ಹುಡುಗಿಯರ ಮುಖ ನೆನಪಾಗುತ್ತಿತ್ತಂತೆ. ಆ ಹೋಲಿಕೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಬಸ್ಸಿನಲ್ಲಿ ಹೋಗುವಾಗ ಒಮ್ಮೆ ಆ ಹುಡುಗಿಯರು ಕಂಡಾಗ ಗೇರು ಮರವೂ ನೆನಪಾಗಿ ಕಿಸಕ್ಕನೆ ನಗುಬರುತ್ತಿತ್ತು.
ಬಾಲ್ಯದಲ್ಲಿ ಗೇರು ಮರವೇರಿದ ಗಾಯದ ಗುರುತು, ಕಥೆಗಳು ನೆನಪಿನ ಓಣಿಯಲ್ಲಿ ಸಾಕಷ್ಟು ಸಿಗುತ್ತವೆ. ಗೇರು ಬೀಜ ಕೊಯ್ಯುವ ಶ್ರಾಯದಲ್ಲಿ ಬೇಸಿಗೆ ರಜೆ ಶುರುವಾಗುತ್ತದೆ. ಆಗ ರಸ್ತೆಯಲ್ಲಿ ಗೇರುಬೀಜದ ಆಟ ಆರಂಭವಾಗುತ್ತಿತ್ತು. ಗೆದ್ದ ಬೀಜಗಳನ್ನು ಚಡ್ಡಿಕಿಸೆಯಲ್ಲಿ ತುಂಬುತ್ತಿದ್ದೆವು. ಕಲ್ಲಿನ ಹೊಡೆತಕ್ಕೆ ಬೀಜಕ್ಕೆ ಗಾಯವಾಗಿ ಎಣ್ಣೆ ಅಸರುತ್ತಿತ್ತು. ಆಟಕ್ಕೆ ಹೋದವರಿಗೆಲ್ಲ ತೊಡೆ ಚರ್ಮ ಸುಟ್ಟು ಕಪ್ಪಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮರದ ಒಡನಾಟದಲ್ಲಿ ಕಲಿತ ಕಸಗಟ್ಟೆ ಕಾಯಿ, ಕುಟುಗ, ಬಂಡಿಹಣ್ಣು, ಬಚ್ಚಬೀಜ, ಹೂಸು, ಕಸ್ತ್ರ, ಕಸರುಹಣ್ಣು ಹೀಗೆ ಗೇರು ಪದಗಳನ್ನು ಮರೆಯಲಾಗುವುದಿಲ್ಲ. ಅರಿಶಿಣ, ಕೆಂಪು, ಹಳದಿ, ಹಳದಿ ಮಿಶ್ರಿತ ಬಿಳಿ ಹೀಗೆ ವಿವಿಧ ವರ್ಣಗಳಲ್ಲಿ, ವಿವಿಧ ಗಾತ್ರಗಳಲ್ಲಿ ಗುಡ್ಡದ ಗೇರು ಜಾಹೀರಾತು. ಬಿಸಿಲಲ್ಲಿ ಬಾಯಾರಿಕೆ ಆದಾಗೆಲ್ಲ ತಾಜಾ ಜ್ಯೂಸಿನಂತೆ ಸರಕ್ಕನೆ ಸ್ವಾದಿಷ್ಟ ಹಣ್ಣಿನ ರಸ ಹೀರಬಹುದು. ಗೇರುಕಂಟ ಮಲೆನಾಡಿನಲ್ಲಿ ಗೇರು ಮರಗಳ ಮೂಲ ಕೃಷಿ ಸ್ಥಾನ ಸೂಚಕ. ಬೆಟ್ಟ ಬೇಣದ ಮಣ್ಣಿನ ಏರಿಗಳಲ್ಲಿ ಮಾತ್ರ ಹಿಂದೆ ಗಿಡ ನೆಡುತ್ತಿದ್ದರು. ಕೃಷಿಯ ಜಾnನ ಬೆಳೆದಂತೆ ಈಗ ಬಯಲು ಭೂಮಿ,ಭತ್ತದ ಗದ್ದೆಯಲ್ಲಿ ಬೆಳೆಯುವ ಆದ್ಯತೆ ದೊರೆತಿದೆ.
ಗ್ವಾವಿ ಬೀಜ ಕೊಡ್ಲಾ ಕರಾವಳಿಯ ಕುಮಟಾದಲ್ಲಿ ಹಾಲಕ್ಕಿ ಅಜ್ಜಿ ಕೇಳುತ್ತಿದ್ದಳು. ಬಟ್ಟಲಿನಲ್ಲಿ ಸುಲಿದ ಹಸಿ ಗೇರು ಬೀಜಗಳಿದ್ದವು. ಬಾಲ್ಯದಲ್ಲಿ ಹಸಿಬೀಜ ಸುಲಿದು ತಿಂದ ನೆನಪಾಯಿತು. ಅಜ್ಜಿ ಗೇರಿಗೆ ಗ್ವಾವಿ ಬೀಜ ಎಂದು ಕರೆದ ಸ್ವಾರಸ್ಯ ಹೇಳಬೇಕು. ಪೂರ್ವ ಬ್ರೆಜಿಲ್ ಮೂಲದ ಗೇರು ಸಸ್ಯ ಪೋರ್ಚುಗೀಸ್ ಕಾಲದಲ್ಲಿ 15ನೇ ಶತಮಾನದಲ್ಲಿ ಭಾರತಕ್ಕೆ ಬಂದಿದೆ. ಮುಖ್ಯವಾಗಿ ಗೋವಾದಲ್ಲಿ ಬೇರೂರಿದೆ. ಗೋವಾದಿಂದ ಕರ್ನಾಟಕದ ಕನ್ನಡ ಕರಾವಳಿಗೆ ಗಿಡ ತಲುಪಿ ನಮ್ಮ ಗುಡ್ಡಗಳಲ್ಲಿ ನಕ್ಕಿದೆ. ಕರಾವಳಿ ಹಿರಿಯರು ಗೇರು ಬೀಜವನ್ನು ಗೋವೆ ಬೀಜವೆಂದು ಆ ನೆನಪಿನಿಂದ ಈಗಲೂ ಕರೆಯುತ್ತಾರೆ!
ಗೇರು ಮೂಲಕ್ಕಿಂತ ಇಂದು ಬೀಜವನ್ನು ಸುಟ್ಟು ತಿಂದ ರುಚಿಮೂಲ ನೆನಪಿಸಬೇಕು. ಸುಟ್ಟ ಬೀಜದಲ್ಲಿನ ಗಮ್ಮತ್ತು ಕಾರ್ಖಾನೆಯಲ್ಲಿ ಸುಲಿದ ಬೀಜಗಳಲ್ಲಿ ಇರುವುದಿಲ್ಲ. ಅಬ್ಬರದ ಮಳೆ ಸುರಿಯುವ ಹೊತ್ತಿನಲ್ಲಿ, ಹೊಡತಲ ಬೆಂಕಿಯಲ್ಲಿ ಬೀಜ ಸುಡಬೇಕು. ಆಗ ಪಸರಿಸುವ ಪರಿಮಳ, ಬೀಜ ಕವಚ ಒಡೆದು ತಿನ್ನುವ ಖುಷಿ ಅನುಭವಿಸಿ ಅರ್ಥಮಾಡಿಕೊಳ್ಳಬೇಕು. ಉಳ್ಳಾಲ, ಧನ, ಭಾಸ್ಕರ, ಅಮೃತ್,ಧಾರಾಶ್ರೀ, ಚಿಂತಾಮಣಿ, ವೆಂಗುರ್ಲಾ ಹೀಗೆ ಸುಮಾರು 45ಕ್ಕೂ ಹೆಚ್ಚು ತಳಿಗಳನ್ನು ದೇಶದ ವಿವಿಧ ಸಂಶೋಧನಾಲಯಗಳು ಬಿಡುಗಡೆ ಮಾಡಿವೆ. ಬೀಜದ ಗಾತ್ರ, ಅಧಿಕ ಇಳುವರಿ, ಬೇಗ ಹೂವರಳಿಸುವುದು ಹೀಗೆ ತಳಿ ವಿಶೇಷಗಳು ಹಲವಿದೆ. ಗೇರು ಮರಗಳು ಕಡಿಮೆಯಿದ್ದ ಕಾಲದಲ್ಲಿ ಹಳ್ಳಿಗಳಲ್ಲಿ ಒಬ್ಬರ ಮನೆಯ ಮರಗಳಲ್ಲಿ ಇನ್ಯಾರೋ ಕಳ್ಳ ಕೊಯ್ಲು ನಡೆಸುತ್ತಿದ್ದ. ಕೊನೆಗೆ ಸಿಕ್ಕಿ ಬಿದ್ದಾಗ ಬೀಜದ ಸ್ವರೂಪ ನೋಡಿಕೊಂಡು ಇದು ಇಂಥಹುದೇ ಮರದ್ದೆಂದು ಗುರುತಿಸುವ ಪತ್ತೆದಾರಿ ಪುರುಷೋತ್ತಮನ ಪ್ರಾವಿಣ್ಯ ನಮಗಿತ್ತು. ಈಗ ಗೇರು ವಾಣಿಜ್ಯ ಬೆಳೆಯಾಗಿ ಮೆರೆದಿದೆ. ವಿವಿಧ ತಳಿಗಳು ಎಲ್ಲೆಡೆ ಹಂಚಿಕೆಯಾಗಿವೆ.
ಕ್ಷಮಿಸಿ, ಇವರೆಗೆ ಗೇರು ಹಣ್ಣು ಎಂದು ವಾಡಿಕೆಯಲ್ಲಿ ಹೇಳಿದ್ದು ಗೇರು ಹಣ್ಣಲ್ಲ. ಅದು ಹೂವು ಫಲಿತ ಬಳಿಕ ತೊಟ್ಟು ಉಬ್ಬಿ ರಸ ತುಂಬಿದ ಭಾಗ. ಹಣ್ಣಿನ ಹೊರಕ್ಕೆ ಬೀಜ ಅಂಟಿರುತ್ತದೆ. ಬೀಜದ ಮೇಲ್ಪದರ ಗಟ್ಟಿಯಾಗಿರುತ್ತದೆ. ತುಸು ಗಾಯವಾದರೂ ಗೇರೆಣ್ಣೆ ಜಿನುಗುತ್ತದೆ. ನಾವು ಗುರುತಿಸುವ ಈ ಗೇರು ಬೀಜವೇ ಸಸ್ಯಶಾಸ್ತ್ರೀಯವಾಗಿ ನಿಜವಾದ ಹಣ್ಣಂತೆ. ಆದರೆ ಇದಕ್ಕೆ ಹಣ್ಣಿನ ಪಟ್ಟ ನೀಡಲಿಲ್ಲ. ಗೋಡಂಬಿ ಬೀಜವೆಂದು ಪೇಟೆಯಲ್ಲಿ ಖರೀದಿಸುವುದು ಬೀಜವಲ್ಲ, ಭ್ರೂಣದ ದ್ವಿದಳಗಳೆಂದು ಹಸುರು ಹೊನ್ನು ಪುಸ್ತಕದಲ್ಲಿ ಬಿ.ಜಿ.ಎಲ್.ಸ್ವಾಮಿ ಬಹಳ ಚೆನ್ನಾಗಿ ಹೇಳಿದ್ದಾರೆ. ಇಷ್ಟು ವರ್ಷಗಳಿಂದ ನಾವು ತಿಂದದ್ದು ವೈಜಾನಿಕವಾಗಿ ಹಣ್ಣೂ ಅಲ್ಲ, ಬೀಜವೂ ಅಲ್ಲವೆಂದರೆ ಬಹಳ ಬೇಜಾರಾಗುತ್ತದೆ.
ಬಾಲ್ಯದ ನೆನಪುಗಳನ್ನು ತಲೆಯಲ್ಲಿ ತುಂಬಿಕೊಂಡು ಗೇರು ತೋಟದ ಬೀಜಗಳನ್ನು ಚೀಲ ತುಂಬುತ್ತಿದ್ದೆ. ನಿತ್ಯ ಹಲವರ ಮುಖ ಗಳನ್ನು ಪದೇ ಪದೇ ನೋಡುತ್ತಿರುತ್ತೇವೆ. ಗಮನಿಸಿ ನೋಡಿದರೆ ಬೀಜದಲ್ಲಿ ಮುಖ ವೈವಿಧ್ಯ ಅಚ್ಚರಿ ಹುಟ್ಟಿಸಿದೆ. ಈಗ ಮೇಷ್ಟ್ರು, ಮೇಡಮ್ ಹಾಗೂ ಹುಡುಗಿಯರ ಮುಖಗಳು ಹಿಂದಕ್ಕೆ ಬಿದ್ದಿವೆ. ಯಡಿಯೂರಪ್ಪನ ಸಿಡುಕು ಮುಖ, ಖರ್ಗೆ ಸಾಹೇಬರ ಕಣ್ಣು, ಕುಮಾರಸ್ವಾಮಿಯ ಉಬ್ಬಿದ ಗಲ್ಲ, ಸದಾನಂದ ಗೌಡರ ನಗು, ದೇವೇ ಗೌಡರ ಚಿಂತೆ ನೆನಪಿಸುವ ಬೀಜಗಳನ್ನು ಕಂಡಿದ್ದೇನೆ. ಎಲ್ಲವನ್ನೂ ಚೀಲದಲ್ಲಿ ಶೇಖರಿಸಿದ್ದೇನೆ. ಇವನ್ನು ತೂಕಕ್ಕೆ ಹಾಕಿ ಮಾರಾಟ ಮಾಡಬೇಕು. ಅತ್ತ ಚುನಾವಣೆ ಬಂದಿರುವಂತೆ ಇತ್ತ ಗೇರು ಖರೀದಿಗೆ ವ್ಯಾಪಾರಿಗಳೂ ಬಂದಿದ್ದಾರೆ. ನೀರಿಗೆ ಬೀಜ ಹಾಕಿ ವರ್ಗಿàಕರಿಸುವುದು ಪದ್ಧತಿ. ತೇಲುವ ಬೀಜಗಳಿಗೆ ಬಚ್ಚಬೀಜ ಎನ್ನುತ್ತಾರೆ. ಇವಕ್ಕೆ ದರವಿಲ್ಲವಂತೆ. ಯಾವ ಮುಖದ ಬೀಜ ಮುಳುಗುತ್ತದೋ, ಯಾವುದು ತೇಲುತ್ತದೋ, ಯಾವುದಕ್ಕೆ ದರ ಬರುತ್ತದೋ ಕಾದು ಕುಳಿತಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.