ಯೋನೋ ಆಗುತ್ತಿದೆ!
ಕಾರ್ಡ್‌ಲೆಸ್ ಬ್ಯಾಂಕಿಂಗ್‌ನ ಹೊಸ ಪರ್ವ
Team Udayavani, Aug 26, 2019, 3:11 AM IST
ಎಟಿಎಂ ಕಾರ್ಡ್ ವಂಚನೆಗಳಿಂದ ಬ್ಯಾಂಕುಗಳಿಗೆ ಮತ್ತು ಜನರಿಗೆ ಆಗುತ್ತಿರುವ ನಷ್ಟ- ಕಷ್ಟವನ್ನು ತಪ್ಪಿಸಲು, ಡೆಬಿಟ್ ಕಾರ್ಡ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಸ್‌ಬಿಐ ಹೆಜ್ಜೆ ಇಡುತ್ತಿದೆ. ಮುಂದಿನ 18 ತಿಂಗಳುಗಳಲ್ಲಿ ದೇಶಾದ್ಯಂತ 10 ಲಕ್ಷ “ಯೋನೋ ಕ್ಯಾಷ್ ಪಾಯಿಂಟ್’ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
ಎಟಿಎಮ್‌ಗಳಲ್ಲಿ ನಮ್ಮ ಖಾತೆಯಿಂದ ಹಣ ಪಡೆಯಲು ಬಳಸುವ ಡೆಬಿಟ್ ಕಾರ್ಡ್ ಅಥವಾ ಎಟಿಎಮ್ ಕಾರ್ಡ್‌ಗಳನ್ನು, ಇ-ವಾಣಿಜ್ಯ, ಇ-ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಹೋಟೆಲ್, ಅಂಗಡಿ ಮೊದಲಾದ ಕಡೆ ಕೂಡಾ ಬಳಸಬಹುದು. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ 90 ಕೋಟಿ ಡೆಬಿಟ್ ಕಾರ್ಡ್‌ಗಳು ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಲ್ಲಿವೆ. ಆದರೆ ಸೈಬರ್ ಅಪರಾಧಿಗಳು ಬ್ಯಾಂಕಿನ ಗ್ರಾಹಕರನ್ನು ವಂಚಿಸಿ, ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಮ್ಮ ದೇಶದಲ್ಲಿ ಮೇಲಿಂದ ಮೇಲೆ ವರದಿಯಾಗುತ್ತಿವೆ.
ಕೆಲವು ಎಟಿಎಮ್‌ಗಳಲ್ಲಿ ರಹಸ್ಯ ಕ್ಯಾಮೆರಾ, ಕಾರ್ಡ್ ಸ್ಕಿಮ್ಮರ್ ಮೊದಲಾದವುಗಳನ್ನು ಬಳಸಿ ಗ್ರಾಹಕರಿಗೆ ವಂಚಿಸುವುದು, ಗ್ರಾಹರಿಗೆ ದೂರವಾಣಿ ಕರೆ ಮಾಡಿ ಬ್ಯಾಂಕಿನ ಅಧಿಕಾರಿ ಎಂದು ಹೇಳಿಕೊಂಡು, ಡೆಬಿಟ್ ಕಾರ್ಡ್ ಮಾಹಿತಿ ಪಡೆದುಕೊಳ್ಳುವುದು, ಗ್ರಾಹಕರಿಗೆ ಬ್ಯಾಂಕಿನಿಂದ ಕಳುಹಿಸಲಾಗಿದೆ ಎಂದು ತೋರುವಂಥ ನಕಲಿ ಇ-ಮೇಲ್, ಎಸ್‌ಎಮ್‌ಎಸ್‌ಗಳ ಮೂಲಕ ವಂಚಿಸುವುದು, ಹೀಗೆ ನಡೆಯುತ್ತಿರುವ ವಿವಿಧ ರೀತಿಯ ವಂಚನೆಗಳಿಂದಾಗಿ ಗ್ರಾಹಕರು ಮತ್ತು ಬ್ಯಾಂಕುಗಳು ಲಕ್ಷಾಂತರ ರು. ನಷ್ಟ ಅನುಭವಿಸುತ್ತಿದ್ದಾರೆ.
ಕ್ಯಾಷ್ ಪಾಯಿಂಟುಗಳು: ಡೆಬಿಟ್‌ಕಾರ್ಡ್ ಬಳಸದೆ ಎಟಿಎಮ್‌ಗಳಲ್ಲಿ ತಮ್ಮ ಖಾತೆಯಿಂದ ಗ್ರಾಹಕರು ಹಣ ಪಡೆಯಲು ಸಾಧ್ಯವಾಗಬೇಕು ಮತ್ತು ಡೆಬಿಟ್‌ಕಾರ್ಡ್‌ಗಿಂತ ಈ ಸೌಲಭ್ಯ ಹೆಚ್ಚು ಸುರಕ್ಷಿತವಾಗಿರಬೇಕು ಎನ್ನುವುದು ಇಂದಿನ ಅಗತ್ಯವಾಗಿದೆ. ಇಂಥ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು “ಯೋನೋ’ ಎಂಬ ಹೆಸರಿನಲ್ಲಿ ತನ್ನ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನೀಡುತ್ತಿದೆ.
ಮುಂದಿನ 5 ವರ್ಷಗಳ ಅವಧಿಯಲ್ಲಿ ಎಸ್‌ಬಿಐ, ತಾನು ನೀಡುತ್ತಿರುವ ಯೋನೋ ವ್ಯವಸ್ಥೆಯನ್ನು ಗ್ರಾಹಕರು ಹೆಚ್ಚು ಬಳಸುವಂತೆ ಮಾಡಬೇಕೆನ್ನುವ ಉದ್ದೇಶ ಹೊಂದಿದೆ. ಹೀಗಾಗಿ, ಮುಂದಿನ 18 ತಿಂಗಳುಗಳಲ್ಲಿ ದೇಶಾದ್ಯಂತ 10 ಲಕ್ಷ ಯೋನೋ ಕ್ಯಾಷ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಈಗ 70,000 ಯೋನೋ ಕ್ಯಾಷ್ ಪಾಯಿಂಟ್‌ಗಳು ಕೆಲಸ ಮಾಡುತ್ತಿವೆ. ಈ ಯೋಜನೆಯಡಿ ಎಟಿಎಮ್‌ಗಳನ್ನೇ ಕ್ಯಾಷ್ ಪಾಯಿಂಟುಗಳನ್ನಾಗಿ ಪರಿವರ್ತಿಸಲಾಗುವುದು.
ಎ.ಟಿ.ಎಂ.ಗಿಂತ ಸುರಕ್ಷಿತ: ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎರಡು ಹಂತದ ಸುರಕ್ಷತೆಯನ್ನು ಬಳಸಲಾಗುತ್ತಿರುವುದರಿಂದ, ಡೆಬಿಟ್ ಕಾರ್ಡ್ ಬಳಕೆಗಿಂತ ಇದು ಹೆಚ್ಚು ಸುರಕ್ಷಿತ. ಎಟಿಎಮ್‌ನಲ್ಲಿ ಡೆಬಿಟ್‌ಕಾರ್ಡ್ ಬಳಸುವಾಗ, ಎಟಿಎಮ್ ಪಿನ್ ಸಂಖ್ಯೆಯನ್ನು ಗ್ರಾಹಕರು ಬಳಸುತ್ತಾರೆ. ಡೆಬಿಟ್ ಕಾರ್ಡ್ ಮಾಹಿತಿ ಮತ್ತು ಎಟಿಎಮ್ ಪಿನ್ ಸಂಖ್ಯೆ ಬೇರೆಯವರಿಗೆ ದೊರೆತರೆ, ಅವರು ಕೂಡಾ ಎಟಿಎಮ್‌ಗಳಲ್ಲಿ ಗ್ರಾಹಕರ ಖಾತೆಯಿಂದ ಹಣ ಪಡೆದುಕೊಳ್ಳಬಹುದು.
ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ, ಬ್ಯಾಂಕ್ ನೀಡುವ ತಂತ್ರಾಂಶವನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು ಡೌನ್‌ಲೋಡ್ ಮಾಡಿಕೊಳ್ಳಬೇಕು. ಗ್ರಾಹಕರು ಈ ಮೊಬೈಲ್ ಆ್ಯಪ್ ಬಳಸಲು, ನೆಟ್ ಬ್ಯಾಂಕಿಂಗ್‌ನ ಗ್ರಾಹಕ ಐಡಿ ಮತ್ತು ಪಾಸ್‌ವರ್ಡ್ ಬಳಸಬಹುದು ಅಥವಾ ಎಮ್‌ಪಿನ್ (ಮೊಬೈಲ್ ಬ್ಯಾಂಕಿಂಗ್ ಪಿನ್)ಅನ್ನು ಬಳಸಬಹುದು.
ಬ್ಯಾಂಕಿನ ಎಟಿಎಮ್‌ನಲ್ಲಿ ತಮ್ಮ ಖಾತೆಯಿಂದ ಹಣ ಪಡೆಯಲು ಗ್ರಾಹಕರು,
1) ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಡಿಜಿಟಲ್ ಬ್ಯಾಂಕಿಂಗ್ ಆ್ಯಪ್‌ಗೆ ಲಾಗಿನ್ ಆಗಬೇಕು. ತಾವು ಎಷ್ಟು ಹಣವನ್ನು ಎಟಿಎಮ್‌ನಿಂದ ಪಡೆಯಲು ಇಚ್ಛಿಸುತ್ತಿರುವುದಾಗಿ ನಮೂದಿಸಿ, ಹಣ ಪಡೆಯಲು ನಿರ್ದಿಷ್ಟ ಮಾಹಿತಿಯನ್ನು ಮೊಬೈಲ್‌ಆ್ಯಪ್‌ನಲ್ಲಿ ಟೈಪಿಸಬೇಕು.
2) ಬ್ಯಾಂಕು, ಎಸ್‌ಎಮ್‌ಎಸ್ ಮೂಲಕ 6 ಡಿಜಿಟ್‌ಗಳ ಪಿನ್ ನಂಬರನ್ನು ಗ್ರಾಹಕರ ಮೊಬೈಲ್ ಫೋನ್‌ಗೆ ಕಳುಹಿಸುತ್ತದೆ.
3) ಬ್ಯಾಂಕಿನ ಎಟಿಎಮ್‌ನಲ್ಲಿ ಗ್ರಾಹಕರು, ಬ್ಯಾಂಕು ಕಳುಹಿಸಿದ 6 ಡಿಜಿಟ್‌ಗಳ ಪಿನ್ ಸಂಖ್ಯೆ ಬಳಸಿ, ತಮ್ಮ ಖಾತೆಯಿಂದ ಹಣ ಪಡೆಯಬಹುದು.
ಈ ವ್ಯವಸ್ಥೆಯನ್ನು ಬಳಸುವಾಗ, ಗ್ರಾಹಕರು ಎರಡು ಪ್ರಮುಖ ವಿಷಯಗಳನ್ನು ಗಮನಿಸಬೇಕು,
1) ಬ್ಯಾಂಕಿನ ಆ್ಯಪ್ ತಂತ್ರಾಂಶದಲ್ಲಿ ಹಣ ಪಡೆಯಲು ಗ್ರಾಹಕರು ನಮೂದಿಸಿದ ಮೊತ್ತ ಮತ್ತು ಎಟಿಎಮ್‌ನಿಂದ ಗ್ರಾಹಕರು ಪಡೆಯಲು ನಮೂದಿಸಿದ ಮೊತ್ತ ಒಂದೇ ಆಗಿರಬೇಕು.
2) ಬ್ಯಾಂಕ್ ಕಳುಹಿಸಿದ 6 ಡಿಜಿಟ್‌ಗಳ ಪಿನ್ ಸಂಖ್ಯೆಯನ್ನು 30 ನಿಮಿಷಗಳ ಒಳಗೆ ಎಟಿಎಮ್‌ನಲ್ಲಿ ಬಳಸಬೇಕು. ಸಮಯ ಮೀರಿದರೆ, ಈ ಪಿನ್ ನಿಷ್ಕ್ರಿಯವಾಗುತ್ತದೆ ಮತ್ತು ಹೊಸ ಪಿನ್‌ಗಾಗಿ ಮತ್ತೂಮ್ಮೆ ಕೋರಿಕೆ ಸಲ್ಲಿಸಬೇಕಾಗುತ್ತದೆ.
ಸುಧಾರಣೆಯ ಅಗತ್ಯವಿದೆ: ಇಂಥ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರು ಹೆಚ್ಚು ಬಳಸಬೇಕಾದರೆ, ಬ್ಯಾಂಕಿನ ಆ್ಯಪ್ ತಂತ್ರಾಂಶ ಮತ್ತು ಎಟಿಎಮ್ ತಂತ್ರಾಂಶ ಸ್ಥಳೀಯ ಭಾಷೆಯಲ್ಲಿರಬೇಕು. ಉದಾಹರಣೆಗೆ, ಕರ್ನಾಟಕದಲ್ಲಿ ಎಸ್‌ಬಿಐ ಗ್ರಾಹಕರಿಗೆ ನೀಡುವ ಯೋನೋ ಆ್ಯಪ್ ಮತ್ತು ಯೋನೋ ಕ್ಯಾಷ್ ಪಾಯಿಂಟ್ ತಂತ್ರಾಂಶಗಳನ್ನು ಕನ್ನಡ ಭಾಷೆಯಲ್ಲಿ ನೀಡಬೇಕು.
ಯೋನೋ ಸೌಲಭ್ಯ ಬಳಸುವಾಗ ಗ್ರಾಹಕರಿಗೆ ಸಮಸ್ಯೆಯಾದರೆ ಬ್ಯಾಂಕಿನ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಎನ್ನಲಾಗುತ್ತದೆ. ಇಂಥ ಸಹಾಯವಾಣಿಗೆ ಕರೆ ಮಾಡುವ ಗ್ರಾಹಕರ ಜೊತೆ ಅವರ ಸ್ಥಳೀಯ ಭಾಷೆಯಲ್ಲಿ ಮಾತನಾಡುವ ಸಿಬ್ಬಂದಿಯನ್ನು ಸಹಾಯವಾಣಿಯಲ್ಲಿ ನೇಮಿಸಬೇಕು. ಎಟಿಎಮ್‌ನಿಂದ ಕಾರ್ಡ್ ಇಲ್ಲದೆ ಹಣ ಪಡೆಯುವುದು ಮಾತ್ರವಲ್ಲ, ಯೋನೋ ಬಳಸಿ ಬೇರೆಯವರ ಬ್ಯಾಂಕ್ ಖಾತೆಗೆ ಹಣ ಪಾವತಿಯನ್ನೂ ಮಾಡಬಹುದು. ಆನ್‌ಲೈನ್‌ನಲ್ಲಿ ಬಸ್ಸು, ರೈಲು ಅಥವಾ ವಿಮಾನದ ಟಿಕೆಟ್‌ಗಳನ್ನು ಖರೀದಿಸಬಹುದು,
ಹೀಗೆ ಹಲವು ರೀತಿ ಗ್ರಾಹಕರು ಸುರಕ್ಷಿತವಾಗಿ ವ್ಯವಹರಿಸಬಹುದು ನಿಜ. ಆದರೆ ಇಂಥ ಸೌಲಭ್ಯಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಲು, ಸುರಕ್ಷತೆ ಕುರಿತು ಇರುವ ಅನುಮಾನಗಳನ್ನು ಪರಿಹರಿಸಲು ಮತ್ತು ತರಬೇತಿ ನೀಡಲು ಮೊದಲು ಬ್ಯಾಂಕುಗಳು ಮುಂದಾಗಬೇಕಾಗುತ್ತದೆ. ಎಸ್‌ಬಿಐನ ಮಹಾತ್ವಾಕಾಂಕ್ಷೆಯ ಯೋನೋ ಜನಪ್ರಿಯವಾದಾಗ, ಬೇರೆ ಬ್ಯಾಂಕುಗಳು ಕೂಡಾ ಇಂಥ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ನೀಡಲು ಮುಂದಾಗುತ್ತಾರೆ.
* ಉದಯಶಂಕರ ಪುರಾಣಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.