ಅಡಿಕೆ ಲೋಕದಲ್ಲೊಂದು ಸುತ್ತು….
Team Udayavani, Dec 24, 2018, 6:00 AM IST
ಉತ್ತಮ ಮಳೆಯ ಕಾರಣದಿಂದ ಅಡಿಕೆ ಬೆಳೆ ಚೆನ್ನಾಗಿ ಆಗಿದೆ. ಅದರ ವಹಿವಾಟೂ ಜೋರಾಗೇ ಇಡೆಯುತ್ತಿದೆ ಎಂಬು ಮಾತುಗಳಿವೆ. ಈ ಸಂದರ್ಭದಲ್ಲಿಯೇ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಕಳಪೆ ಕ್ವಾಲಿಟಿಯ ಅಡಿಕೆಯನ್ನು ಮಿಕ್ಸ್ ಮಾಡುವ, ಆ ಮೂಲಕ ಅಡಿಕೆಗೆ ಕೆಟ್ಟ ಹೆಸರು ತರುವ ಕೆಲಸವೂ ಎಗ್ಗಿಲ್ಲದೇ ನಡೆದಿದೆ.
ಅಡಿಕೆ, ಮಲೆನಾಡ ಬದುಕಿನ ಅವಿಭಾಜ್ಯ ಅಂಗ. ವಾಣಿಜ್ಯ ದೃಷ್ಟಿಯಿಂದ ನೋಡಿದರೆ, ಈ ಸಲ ಉತ್ತಮ ಮಳೆಯಾಗಿರುವುದರಿಂದ ಅಡಿಕೆ ಬೆಳೆ ಕೂಡ ಚೆನ್ನಾಗಿ ಆಗಿದೆ. ವ್ಯಾಪಾರ, ವಹಿವಾಟು ದ್ವಿಗುಣಗೊಂಡಿದೆ. ಜೊತೆಗೇ ಕಳಂಕ ತರುವ ಕೆಲಸವೂ ನಿರಂತರವಾಗಿ ಸಾಗಿದೆ. ಮಲೆನಾಡು, ಅರೆ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೇರಳವಾಗಿ ಕಳಪೆ ಕ್ವಾಲಿಟಿಯ ಅಡಿಕೆ ಕಾಣಸಿಗುತ್ತದೆ. ಶಿವಮೊಗ್ಗ ಜಿಲ್ಲೆ ಒಂದರಲ್ಲೇ ಶೇ.28ರಷ್ಟು ಅಡಿಕೆ ಬೆಳೆ ಇದೆ.
ಅಡಿಕೆ ವಿಧಗಳು
ಮಾರುಕಟ್ಟೆಯಲ್ಲಿ ಪ್ರಸ್ತುತ ಐದಾರು ವಿಧಗಳು ಇವೆ. ಅದರಲ್ಲಿ ಹೆಚ್ಚು ಚಲಾವಣೆಯಲ್ಲಿರುವುದು ರಾಶಿ. ಅಡಿಕೆ ಕೀಳುವ, ಸುಲಿಯುವ ಯಂತ್ರೋಪಕರಣಗಳು ಬಂದಿರುವುದರಿಂದ ರಾಶಿ ಅಡಿಕೆ ಮಾರುಕಟ್ಟೆ ಹೆಚ್ಚಾಗಿದೆ. ಮರದಿಂದ ಕೊಯ್ದು ತಂದ ಹಸಿ ಅಡಿಕೆಯನ್ನು ಸುಲಿದು ಬೇಯಿಸಿ, 8-10 ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದೇ ರಾಶಿ ಅಡಿಕೆ. ಇದನ್ನು ಹೊರತುಪಡಿಸಿದರೆ ಸಿಪ್ಪೆ ಬಿಟ್ಟ ದುಂಡು ಅಡಿಕೆಯನ್ನು ಬೆಟ್ಟೆ ಎನ್ನಲಾಗುತ್ತದೆ. ಪೂರ್ಣ ಸಿಪ್ಪೆ ಇರದ ಅಡಿಕೆಯನ್ನು ಕೆಂಪುಗೋಟು, ಒಣಗಿ ಚಪ್ಪಟೆಯಾದ ಅಡಿಕೆಯನ್ನು ಆಪಿ ಅಡಿಕೆ ಎನ್ನುತ್ತಾರೆ. ಶಿವಮೊಗ್ಗ ಹಾಗೂ ಕೆಲವು ಭಾಗಗಳಲ್ಲಿ ಎಳೆ ಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳು ಮಾಡಿ ಬೇಯಿಸಿ ಒಣಗಿಸಲಾಗುತ್ತದೆ. ಇದಕ್ಕೆ ಸರಕು ಅಥವಾ ಹೋಳು ಅಡಿಕೆ ಎನ್ನುತ್ತಾರೆ. ಇದಕ್ಕೆ ಎಲ್ಲದಕ್ಕಿಂತ ಹೆಚ್ಚಿನ ಬೆಲೆ ಇದೆ. ಇವೆಲ್ಲಾ ಪಕ್ಕಕ್ಕೆ ಇರಲಿ.
ಕರಿ ನೆರಳು
ಮುಖ್ಯ ವಿಚಾರಕ್ಕೆ ಬಂದರೆ- ವಾರ್ಷಿಕ ಸಾವಿರಾರು ಕೋಟಿ ವ್ಯವಹಾರ ನಡೆಯುವ ಅಡಿಕೆ ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ ದಂಧೆಯಾಗುತ್ತಿದೆ. ಇತ್ತೀಚೆಗೆ ಅಡಿಕೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪಿಗಳ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಹೆಸರು ಕೇಳಿ ಬಂದಿದೆ ಅಂದರೆ ಅಡಿಕೆಯ ಆಳ ಅಗಲ ಎಷ್ಟಿದೆ ಎನ್ನುವುದನ್ನು ತಿಳಿಯಬಹುದು.
ಕರ್ನಾಟಕದ ಅಡಿಕೆ ಜೊತೆ ಬೇರೆ ರಾಜ್ಯದ ಅಡಿಕೆಯನ್ನು ಮಿಕ್ಸ್ ಮಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ. ಬೇರೆ ರಾಜ್ಯಗಳಲ್ಲಿ ಸಾಂಪ್ರದಾಯಿಕವಾಗಿ ಬಣ್ಣ ಕಟ್ಟುವ ವಿಧಾನ ಇಲ್ಲ ಹಾಗೂ ಅಲ್ಲಿನ ಅಡಿಕೆ ಸ್ವಲ್ಪ ಗಡಸು. ಹಾಗಾಗಿ, ಆ ಅಡಿಕೆಗೆ ಮಾರ್ಕೆಟ್ ಕಡಿಮೆ. ಇದನ್ನೂ ಮತ್ತೆ ಮಾರುಕಟ್ಟೆಗೆ ಸೇರಿಸುವ ಜಾಲ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಗುಣಮಟ್ಟದ ಅಡಿಕೆ ಜೊತೆ ಸ್ವಲ್ಪ ಕಳಪೆ ಅಡಿಕೆಯನ್ನು ಮಿಕ್ಸ್ ಮಾಡುವ ದಂಧೆ ಹೆಚ್ಚಾಗಿದೆ. ಶಿವಮೊಗ್ಗ ಮಾರುಕಟ್ಟೆಗೆ ಇಂಥ ಅಡಿಕೆಗಳು ಬರುತ್ತಿರುವುದು ಇದಕ್ಕೆ ಸಾಕ್ಷಿ.
ಇನ್ನು ತೆರಿಗೆ ವಂಚನೆ ಜಾಲ ಕೂಡ ಬೃಹತ್ತಾಗಿ ಬೆಳೆದಿದೆ. ಕರ್ನಾಟಕದ ಮಾರುಕಟ್ಟೆಗಳಿಂದ ಗುಜರಾತ್, ಮಧ್ಯಪ್ರದೇಶಕ್ಕೆ ಹೋಗುವ ಅಡಿಕೆಯು ಕಳಪೆ ಕ್ವಾಲಿಟಿಯ ಉತ್ಪನ್ನ ಎಂಬ ಕಾರಣದಿಂದ ವಾಪಸ್ ಬರುತ್ತಿದೆ. ಇದರಲ್ಲಿ ತೆರಿಗೆ ಕಬಳಿಸುವ ಹುನ್ನಾರ ಇದೆ ಎನ್ನುವ ಅನುಮಾನವಿದೆ. ಒಂದು ಟ್ರಕ್ ಅಡಿಕೆ ಒಯ್ದರೆ, ಶಿವಮೊಗ್ಗದಿಂದ ಗುಜರಾತ್ ತಲುಪುವಷ್ಟರಲ್ಲಿ ಹೆಚ್ಚಾ ಕಮ್ಮಿ 3 ಲಕ್ಷ ರೂ. ಟ್ಯಾಕ್ಸ್ ಕಟ್ಟಬೇಕಂತೆ. ಒಂದು ವೇಳೆ ಅಡಿಕೆ ರಿಜೆಕ್ಟ್ ಆದರೆ ಟ್ಯಾಕ್ಸ್ ಹಣವನ್ನು ಪೂರ್ತಿ ವಾಪಾಸ್ ಕೊಡಲಾಗುತ್ತದೆ. ಟ್ಯಾಕ್ಸ್ ವಾಪಾಸ್ ಸಿಗುತ್ತದೆ ಎನ್ನುವುದು ಒಂದು ಮಾತಾದರೆ, ಒಳ್ಳೆಯ ಅಡಿಕೆಯನ್ನು ಅಲ್ಲೇ ಇಟ್ಟುಕೊಂಡು ಅದೇ ಲಾರಿಯಲ್ಲಿ ಕಳಪೆ ಅಡಿಕೆ ತುಂಬಿ ಬೇರೆ ಮಾರುಕಟ್ಟೆಗಳಿಗೆ ತಲುಪಿಸುವ ದಂಧೆಯೂ ನಡೆಯುತ್ತಿದೆ.
ದೇಶದ ಎಲ್ಲೆಡೆ ಹೆಚ್ಚಾಗಿ ಬಳಕೆಯಾಗುತ್ತಿರುವುದು ಹೆಚ್ಚಾಗಿ ಆಗಮಿಸುತ್ತಿರುವುದು ಮಲೇಷಿಯಾದ ಅಡಿಕೆ ಅನ್ನೋ ಮಾತಿದೆ. ಮಲೇಷಿಯಾ ಮೂಲಕ ಭಾರತಕ್ಕೆ ಸಾಗಿಸಲು ಹೆಚ್ಚಿನ ತೆರಿಗೆ ಬೀಳುವುದರಿಂದ ಅದನ್ನು ಶ್ರೀಲಂಕಾ ಮೂಲಕ ತಲುಪಿಸಲಾಗುತ್ತಿದೆ. ಅಂತಾರಾಷ್ಟ್ರಿಯ ಮಟ್ಟದ ವ್ಯಾಪಾರಸ್ಥರು ಈ ದಂಧೆಯಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಚಿಲ್ಲರೆ ವ್ಯಾಪಾರಸ್ಥರು ಸಹ ಈಚೆಗೆ ಇದೇ ಹಾದಿಹಿಡಿದಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜಾnನೇಂದ್ರ ಅವರು ಬೆಳಗಾವಿಯ ಅಧಿವೇಶನದಲ್ಲಿ ಮಾತನಾಡುತ್ತಾ- ನೂರಾರು ಲಾರಿಗಳಲ್ಲಿ ಯಾವುದೇ ಟ್ಯಾಕ್ಸ್ ಕಟ್ಟದೇ ಅಡಿಕೆ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದ್ದು ಈ ಎಲ್ಲ ವಿಷಯಗಳಿಗೆ ಪುಷ್ಟಿ ನೀಡುತ್ತದೆ.
ಖರ್ಚು ವೆಚ್ಚ
ಒಂದು ಕ್ವಿಂಟಾಲ್ ಅಡಕೆಯನ್ನು ಮಾರುಕಟ್ಟೆಗೆ ತರಲು ಕನಿಷ್ಠ 18 ಸಾವಿರ ರೂ. ಖರ್ಚಾಗುತ್ತದೆ. ಇದರಲ್ಲಿ ತೋಟದ ನಿರ್ವಹಣೆ (ನೀರು, ಗೊಬ್ಬರ, ವಿದ್ಯುತ್ ಇತರೆ), ಅಡಕೆ ಕಟಾವು, ಪರಿಷ್ಕರಣೆ, ಸಾರಿಗೆ ವೆಚ್ಚ ಸೇರುತ್ತದೆ. ಮಲೆನಾಡು ಭಾಗದಲ್ಲಿ ಕೊಳೆರೋಗ ಸಾಮಾನ್ಯವಾಗಿದ್ದು ಫಸಲಿಗೆ ಬಂದ ಮರಗಳು ಕೊಳೆಯುವುದು, ಇನ್ನು ಅರೆಮಲೆನಾಡು, ಬಯಲು ಸೀಮೆಯಲ್ಲಿ ನೀರಿನ ಕೊರತೆಯಿಂದ ಅಡಿಕೆ ಮರಗಳು ನೆಲ ಕಚ್ಚುತ್ತಿವೆ.
ಗುಟ್ಕಾ ಕಂಪೆನಿಗಳೇ ಆಸರೆ
ವೀಳ್ಯದೆಲೆ ಜೊತೆ ಅಡಿಕೆಯನ್ನು ಬಳಸಲಾಗುತ್ತದೆಯಾದರೂ ಅದರ ಪ್ರಮಾಣ ತುಂಬಾ ಕಡಿಮೆ. ಶೇ.90ರಷ್ಟು ಅಡಿಕೆ ಗುಟ್ಕಾ ಕಂಪೆನಿಗಳಿಗೆ ರವಾನೆಯಾಗುತ್ತದೆ. ದೇಶದಲ್ಲಿ 10ಕ್ಕೂ ಹೆಚ್ಚು ಬ್ರಾಂಡೆಂಟ್ ಗುಟ್ಕಾ ಕಂಪೆನಿಗಳಿವೆ. ಸಾವಿರಾರು ಸಣ್ಣಪುಟ್ಟ ಕಂಪೆನಿಗಳಿವೆ. ಅಡಿಕೆ ಮೇಲಿರುವ ಕಪ್ಪು ಚುಕ್ಕೆ ತೊಲಗಿಸುವ ಉದ್ದೇಶದಿಂದ ಅಡಿಕೆಯಿಂದ ನಾನಾ ಪದಾರ್ಥಗಳನ್ನು ತಯಾರಿಸಿ ಅವನ್ನೆಲ್ಲ ಮಾರುಕಟ್ಟೆಗೆ ಬಿಡಲಾಗಿದೆಯಾದರೂ ಅವುಗಳು ದೊಡ್ಡ ಪ್ರಮಾಣದಲ್ಲಿ ಯಶ ಕಂಡಿಲ್ಲ. ಅರೆಕಾ ಟೀ ಇದರಲ್ಲಿ ಪ್ರಮುಖವಾದದ್ದು. ಅಮೇಜಾನ್, ಫ್ಲಿಪ್‌ಕಾರ್ಟ್‌ನಂಥ ಆನ್‌ಲೈನ್ ಸ್ಟೋರ್‌ಗಳಲ್ಲಿ ಅರೆಕಾ ಟೀ ಸಿಗುತ್ತದೆಯಾದರೂ ಅದಕ್ಕಿರುವ ಬಳಕೆದಾರರ ಪ್ರಮಾಣ ಕಡಿಮೆ.
ಸೆಸ್ ಕಡಿಮೆ ಮಾಡಿ
ರಾಜ್ಯದ ಎಪಿಎಂಸಿಗಳ ಮೂಲಕ ನಡೆಯುವ ಅಡಿಕೆ ವಹಿವಾಟಿನಿಂದ ಪ್ರತಿ ವರ್ಷ 300ಕೋಟಿಗೂ ಹೆಚ್ಚು ಆದಾಯ ಸೆಸ್‌ರೂಪದಲ್ಲಿ ಸರಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಪ್ರತಿ ಕ್ವಿಂಟಾಲ್‌ಗೆ ಶೇ.1.5ರಷ್ಟು ಸೆಸ್ ಇದ್ದು ಶಿವಮೊಗ್ಗದ ಎಪಿಎಂಸಿ ಒಂದರಲ್ಲಿ ವರ್ಷಕ್ಕೆ 25ರಿಂದ 30 ಕೋಟಿ ಸೆಸ್ ಸೇರ್ಪಡೆಯಾಗುತ್ತದೆ. ಆದರೆ ಜಿಎಸ್‌ಟಿ ಜಾರಿಗೆ ಬಂದ ಮೇಲೂ ಈ ತೆರಿಗೆ ಸಂಗ್ರಹ ಮಾಡುತ್ತಿರುವುದು ಸಲ್ಲದು ಎಂಬುದು ವ್ಯಾಪಾರಿಗಳ ವಾದ.
ಪ್ರಸ್ತುತ ಶೇ.5ರಷ್ಟು ಜಿಎಸ್‌ಟಿ ಕಟ್ಟಲಾಗುತ್ತಿದೆ. ವ್ಯಾಟ್ ಇದ್ದಾಗ ಶೇ.2ರಷ್ಟು ಕಟ್ಟಲಾಗುತಿತ್ತು. ಶೇ.3ರಷ್ಟು ಹೆಚ್ಚುವರಿ ಟ್ಯಾಕ್ಸ್ ಕಟ್ಟಿದರೂ ಎಪಿಎಂಸಿ 1.5ರಷ್ಟು ಸೆಸ್ ಸಂಗ್ರಹಿಸುತ್ತಿದೆ. ಇದನ್ನು ಕೈಬಿಟ್ಟು ಜಿಎಸ್‌ಟಿ ಒಳಗೆ ಇದನ್ನು ಸೇರಿಸಬೇಕು. ಎಪಿಎಂಸಿಗಳಲ್ಲಿ ಸರಿಯಾದ ಸಿಬ್ಬಂದಿ ಇಲ್ಲ. ಸೂಕ್ತ ವ್ಯವಸ್ಥೆ ಇಲ್ಲ. ಆದರೂ ಭರ್ಜರಿ ಆದಾಯ ಗಳಿಸುತ್ತಿದೆ ಎನ್ನುತ್ತಾರೆ ಅವರು.
ಕೇಂದ್ರ ಸರಕಾರ ಗುಟ್ಕಾ, ಪಾನ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದರಿಂದ ಕಳ್ಳ ವ್ಯವಹಾರ ಹೆಚ್ಚಾಗಿದೆ. ಸರಕಾರಕ್ಕೆ ಲೆಕ್ಕ ತೋರಿಸದೆ ಕೋಟ್ಯಂತರ ರೂ. ವ್ಯವಹಾರ ಮಾಡಲಾಗುತ್ತಿದೆ. ಮಧ್ಯವರ್ತಿಗಳಿಗೆ ಕೋಟಿಗಟ್ಟಲೇ ಹಣ ಸಂದಾಯವಾಗುತ್ತಿದೆ. ಸರಕಾರ ತೆರಿಗೆ ಮಾಡಿ ವ್ಯಾಪಾರ ಮಾಡಲು ಸುಗಮ ದಾರಿ ತೋರಿಸಬೇಕು. ಇದರಿಂದ ಸರ್ಕಾರಕ್ಕೂ ಭರ್ಜರಿ ಆದಾಯ ಸಿಗಲಿದೆ.
– ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.