ಬಜೆಟ್ ಮಂಡನೆ ಮನೆ ಮನೆಯಲ್ಲೂ ಬರಲಿ….
Team Udayavani, Oct 23, 2017, 12:01 PM IST
ಹೆಚ್ಚು ಉಳಿತಾಯವಾಗುವ ಮಾಸದ ಗಳಿಕೆಯನ್ನು ಹೇಗೆ ವಿನಿಯೋಗಿಸಲಾಗುತ್ತದೆ ಎಂಬುದು ಬದುಕಿನ ಉನ್ನತಿಗೆ ಮುಖ್ಯವಾಗುತ್ತದೆ. ಒಮ್ಮೆಗೇ 5 ಕ್ವಿಂಟಾಲ್ ಅಡಿಕೆ ಮಾರಿದವನು ಆ ಹಣವನ್ನು ಒಮ್ಮೆಗೇ ಖರ್ಚು ಮಾಡುವುದಿಲ್ಲ. ಕೊನೆಪಕ್ಷ ಅದರಿಂದ ಬಡ್ಡಿ ಹುಟ್ಟುವಳಿಯಾಗುವಂತೆ ಮತ್ತು ಅದೇ ವೇಳೆ ದೈನಂದಿನ ಬದುಕು ಹಣಕಾಸು ಸಂಕಷ್ಟಕ್ಕೊಳಗಾಗದಂತೆ ವ್ಯವಸ್ಥಿತಗೊಳ್ಳಲೂ ಬಜೆಟ್ ಗ್ರಾಹಕನಿಗೂ ಬೇಕು.
ಆರ್ಥಿಕ ವರ್ಷದ ಆರಂಭವನ್ನು ಬಜೆಟ್ ಮೂಲಕ ಸ್ವಾಗತಿಸುವುದು ಹಣಕಾಸು ವಹಿವಾಟು ಮಾಡುವ ಸಂಸ್ಥೆಗಳಿಗೆ ಸಂಪ್ರದಾಯವಾಗಬೇಕು ಎಂಬ ವಾದವನ್ನು ಎಕನಾಮಿಕ್ಸ್ ಪ್ರತಿಪಾದಿಸುತ್ತದೆ. ಇಂದು ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ವಾರ್ಷಿಕ ಬಜೆಟ್ ಅನ್ನು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸುತ್ತವೆ. ಆ ಕುರಿತು ಅರ್ಥ ಶಾಸ್ತ್ರಜ್ಞರನ್ನು ಕೂರಿಸಿಕೊಂಡು ವಿಸ್ತೃತ ಚರ್ಚೆ ನಡೆಸುತ್ತವೆ.
ದುರಂತವೆಂದರೆ, ಅನುತ್ಪಾದಕ ಕ್ಷೇತ್ರಗಳು ಮತ್ತು ಅವಕ್ಕೆ ಹಣ ಮೀಸಲಿಡುವ ಮುಖಾಂತರ ಆಯಾ ಅವಧಿಯಲ್ಲಿ ಸರ್ಕಾರ ಮಾಡುವ ಪಕ್ಷಗಳು ಇದನ್ನು ತಮ್ಮ ಪ್ರಚಾರ ಸಾಮಗ್ರಿಯಂತೆ ಬಳಸಿಕೊಳ್ಳುತ್ತಿವೆ. ಅಭಿವೃದ್ಧಿಯ ದೂರಗಾಮಿ ದೃಷ್ಟಿ ಮಾಯವಾಗುತ್ತಿದೆ. ಮೊದಮೊದಲು ಚುನಾವಣಾ ವರ್ಷದ ಬಜೆಟ್‌ನಲ್ಲಿ ಮಾತ್ರ ತೀರಾ ಜನಪರ ಯೋಜನೆಗಳ ಪ್ರಕಟಣೆಯಾಗಿ ಅಷ್ಟರಮಟ್ಟಿಗೆ ಬಜೆಟ್‌ನ ಮೌಲ್ಯ ಉಳಿದಿತ್ತು. ಇಂದಿಗೂ ಜನ ಕರ್ನಾಟಕದಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಕಾಲದ ಬಜೆಟ್‌ಅನ್ನು ನೆನಪಿಸಿಕೊಳ್ಳುತ್ತಾರೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಣ ತರುವುದು ಮತ್ತು ಅದನ್ನು ದೀರ್ಘಾವಧಿ ಯೋಜನೆಗಳಿಗೆ ತೊಡಗಿಸಲು ಒಂದು ಕಲ್ಪನೆ ರೂಪಿಸಲು ಬಜೆಟ್ ತೀರಾ ಅಗತ್ಯ. ಅಂತಹ ದೂರಗಾಮಿ ಯೋಚನೆಗಳನ್ನು ಬಜೆಟ್ ಪ್ರತಿಫಲಿಸುತ್ತಿತ್ತು, ಈಗಲೂ ಪ್ರತಿಪಾದಿಸಬೇಕಾದುದು ಅದನ್ನೇ.
ನಮ್ಮದು ಸರ್ಕಾರದ ಬಜೆಟ್ ಆಗದಿರಲಿ!
ಕಾಲ ಕೆಟ್ಟು ಹೋಗಿದೆ, ಗೆದ್ದು ಬಂದ ದಿನವೇ ರಾಜ್ಯದ ಖಜಾನೆಯ ಅರಿಲ್ಲದೆ ಜನಾಕರ್ಷಣೆಯ ಯೋಜನೆಗಳನ್ನು ಪ್ರಕಟಿಸುವ ದಿನ ಇದು. ಬೇಕೆಂದೇ ಲಕ್ಷ ಕೋಟಿ ಗಾತ್ರದ ಬಜೆಟ್ ಘೋಷಣೆಯಾಗುತ್ತದೆ. ನಿರೀಕ್ಷಿತ ಆದಾಯವೇ ಅತಿರಂಜಿತವಾದಾಗ ಉತ್ಪಾದಕ ಯೋಜನೆಗಳಿಗೆ ತೊಡಗಿಸಲು ಹಣದ ಕೊರತೆ ಆಗುತ್ತದೆ ಎಂಬುದು ಸಹಜ. ಇದರಿಂದ ಬಜೆಟ್ ಎನ್ನುವುದು ಸುಂದರ ಸುಳ್ಳುಗಳ ಕಂತೆಯಾಗಿಯೇ ಇತ್ತೀಚಿನ ದಿನದಲ್ಲಿ ಜನರಿಗೆ ಕಾಣಿಸುವಂತಾಗಿದೆ. ಎಲ್ಲೋ ಒಂದು ಕಡೆ ಬಜೆಟ್‌ನಲ್ಲಿ ಸಾಲಮನ್ನಾ ಘೋಷಣೆ ಇದೆಯೇ ಎಂದು ಹುಡುಕುವ ಒಂದು ಕುತೂಹಲ ಬಿಟ್ಟರೆ ಸರ್ಕಾರ ಈ ಬಾರಿ ಜನೋಪಯೋಗಿ, ದೀರ್ಘಾವಧಿಯ ಎಷ್ಟು ಯೋಜನೆಗಳಿಗೆ ಹಣ ತೊಡಗಿಸಿದೆ, ಹೊಸ ಪ್ರಗತಿಪರ ಯೋಜನೆಗಳಲ್ಲಿ ಬಂಡವಾಳ ತೊಡಗಿಸಲಿದೆಯೇ, ತೆರಿಗೆ ನೀತಿಯಲ್ಲಿ ಮಾರ್ಪಾಡುಗಳನ್ನು ಮಾಡಿ ಬೊಕ್ಕಸದಿಂದ ಹಣ ಸೋರಿಹೋಗದಂತೆ ಮಾಡಲಾಗುತ್ತದೆಯೇ ಎಂಬ ಚಿಕಿತ್ಸಕ ನೋಟ ಬೀರುವ ಅಗತ್ಯವೇ ಇಲ್ಲ ಎನ್ನುವಷ್ಟು ಸಿನಿಕವಾಗುತ್ತದೆ.
ಸರ್ಕಾರಗಳ ಬಜೆಟ್ ಬಗೆಗಿನ ಮಾತುಗಳ ಹೊರತಾಗಿ ನೋಡುವುದಾದರೆ, ಒಬ್ಬ ಸಾಮಾನ್ಯ ಗ್ರಾಹಕನಿಗೂ ತನ್ನ ಮನೆಯ ವರ್ಷದ ಬಜೆಟ್‌ನ್ನು ತಯಾರಿಸುವುದು ಮತ್ತು ಅದರ ಜಾರಿಗೆ ಪ್ರಯತ್ನಿಸುವುದು ಹೆಚ್ಚು ಯುಕ್ತವಾದುದು. ಎಂತಹ ಕೃಷಿಕನಿಗೂ ಒಂದು ವರ್ಷದಲ್ಲಿ ಬರುವ ಸರಾಸರಿ ಆದಾಯದ ಬಗ್ಗೆ ಒಂದು ಚಿತ್ರಣವಿರುತ್ತದೆ. ಬರಬಹುದಾದ ಕನಿಷ್ಠ-ಗರಿಷ್ಠ ಆದಾಯದ ಅಂದಾಜಿರುತ್ತದೆ. ಆ ಮೊತ್ತಕ್ಕೆ ಆತ ರೂಪಿಸಿಕೊಳ್ಳಬೇಕಾದ ಕಾರ್ಯಚಟುವಟಿಕೆಗಳನ್ನು ಆದ್ಯತಾ ಪಟ್ಟಿಯಲ್ಲಿ ದಾಖಲಿಸಬೇಕು. ಅದಕ್ಕೆ ಆತನ ಮನೆಯ ಎಲ್ಲ ಸದಸ್ಯರು ಪಾಲ್ಗೊಳ್ಳುವಂತಾದರೂ ಚೆನ್ನ. ಅಧಿಕ ಆದಾಯದ ಸಂದರ್ಭದಲ್ಲಿ ಬಂದ ಹಣವನ್ನೆಲ್ಲ ಅನುತ್ಪಾದಕ ಕ್ಷೇತ್ರಕ್ಕೆ ತೊಡಗಿಸಬೇಕೆ ಎಂಬ ವಿವೇಚನೆಯನ್ನು ಕೂಡ ಆತನ ಬಜೆಟ್ ನೋಟ ಒದಗಿಸಬೇಕು.
ಉದಾಹರಣೆಗಳ ಸತವಾಗಿಯೇ ಹೇಳುವುದಾದರೆ, ಒಬ್ಟಾತ ಆ ಒಂದು ವರ್ಷ ಬರುವ ಹೆಚ್ಚುವರಿ ಆದಾಯವನ್ನು ‘ಹಾಗೇ’ ಖರ್ಚು ಮಾಡುವ ಬದಲು ಶೇ. 10ರಂತೆ ಬಡ್ಡಿ ಕಟ್ಟುವ ಒಂದು ದೀರ್ಘಾವಧಿ ಸಾಲದ (ಇಎಂಐ ಕೂಡ) ಎಲ್ಲ ಕಂತುಗಳನ್ನು ಒಮ್ಮೆಗೇ ಕಟ್ಟಲು ನಿರ್ಧರಿಸುತ್ತಾನೆ ಮತ್ತು ಆ ಪ್ರಕಾರವೇ ನಡೆದುಕೊಳ್ಳುತ್ತಾನೆ ಎಂತಾದರೆ ಅವನಿಗೆ ಮುಂದಿನ ಹಲವು ವರ್ಷ ಕಟ್ಟಬೇಕಾದ ಬಡ್ಡಿ ಮೊತ್ತ ಕೂಡ ಆದಾಯವಾಗಿಯೇ ಪರಿಣಮಿಸುತ್ತದೆ. ಒಮ್ಮೆಗೇ ನಾಲ್ಕಾರು ತೊಲ ಬಂಗಾರ ಖರೀದಿಗಿಂತ ಇದು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಜೀವವಿಮೆಯ ಮನಿ ಬ್ಯಾಕ್‌ನ ಹಣ ಈ ವರ್ಷ ಬರುತ್ತದೆ ಎಂಬುದು ಗೊತ್ತಿದ್ದಾಗ, ಅದರ ನಿಯೋಗವನ್ನು ಮೊದಲೇ ನಿರ್ಧರಿಸಬಹುದು. ಇದ್ದಕ್ಕಿದ್ದಂತೆ ಸರ್ಕಾರ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ ಎಂದರೆ, ಹಾಗೆ ಉಳಿಯುವ ಮೊತ್ತಕ್ಕೆ ರೈತ ಪ್ಲಾನ್ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಾಗಿಯೇ ಹೇಳುವುದು ಪ್ರತಿಯೊಬ್ಬರಿಗೂ ಬಜೆಟ್ ಪ್ಲಾನ್ ಬೇಕೇ ಬೇಕು.
ದುಡಿಮೆ ಪಾತ್ರೆಗೆ ಉಳಿತಾಯದ ಜೀವಜಲ!
ಸಾಮಾನ್ಯವಾಗಿ ಹೆಚ್ಚು ದುಡಿಯಲಾಗದವನು ಗರಿಷ್ಠ ಉಳಿತಾಯದ ಕುರಿತು ಚಿಂತಿಸಬೇಕು ಎಂಬುದು ಒಂದು ಅರ್ಥಸೂತ್ರ. ಪೌರೋಹಿತ್ಯ ಕೆಲಸ ಮಾಡುವವನಿಗೂ ದುಡಿಮೆ ಸೀಸನಲ್ ಆಗಿರುತ್ತದೆ. ಶ್ರಾವಣ ಮಾಸ, ಕಾರ್ತಿಕ ಮಾಸಗಳ ದುಡಿಮೆ ಆಷಾಢದಲ್ಲಿ ಆಗುವುದಿಲ್ಲ. ಹೆಚ್ಚು ಉಳಿತಾಯವಾಗುವ ಮಾಸದ ಗಳಿಕೆಯನ್ನು ಹೇಗೆ ವಿನಿಯೋಗಿಸಲಾಗುತ್ತದೆ ಎಂಬುದು ಬದುಕಿನ ಉನ್ನತಿಗೆ ಮುಖ್ಯವಾಗುತ್ತದೆ. ಒಮ್ಮೆಗೇ 5 ಕ್ವಿಂಟಾಲ್ ಅಡಿಕೆ ಮಾರಿದವನು ಆ ಹಣವನ್ನು ಒಮ್ಮೆಗೇ ಖರ್ಚು ಮಾಡುವುದಿಲ್ಲ. ಕೊನೆಪಕ್ಷ ಅದರಿಂದ ಬಡ್ಡಿ ಹುಟ್ಟುವಳಿಯಾಗುವಂತೆ ಮತ್ತು ಅದೇ ವೇಳೆ ದೈನಂದಿನ ಬದುಕು ಹಣಕಾಸು ಸಂಕಷ್ಟಕ್ಕೊಳಗಾಗದಂತೆ ವ್ಯವಸ್ಥಿತಗೊಳ್ಳಲೂ ಬಜೆಟ್ ಗ್ರಾಹಕನಿಗೂ ಬೇಕು.
ಏನು ಮಾಡಬಹುದು? 50 ಸಾವಿರ ಆದಾಯ ಕೈಗೆ ಸಿಕ್ಕಿದೆ ಎಂದುಕೊಂಡರೆ ಅದನ್ನೆಲ್ಲ ತಿಂಗಳ ತಿಂಗಳ ಖರ್ಚಿಗೆ ಬೇಕು ಎಂದು ಉಳಿತಾಯ ಖಾತೆಯಲ್ಲಿಡುವುದಕ್ಕಿಂತ ಐದೈದು ಸಾವಿರದ ಹತ್ತು ಠೇವಣಿಯಾಗಿಸಬಹುದು. ಅಗತ್ಯ ಬಿದ್ದಂತೆ ಅದನ್ನು ನಗದೀಕರಿಸಬಹುದು. ಇದರಿಂದ ಉಳಿತಾಯ ಖಾತೆಗಿಂತ ಹೆಚ್ಚು ಬಡ್ಡಿ ಆದಾಯ ಸಿಕ್ಕುವುದು ಖಚಿತ. ಈ ನಿಟ್ಟಿನಲ್ಲಿ ಉಳಿತಾಯ, ಆದಾಯಗಳ ನಿರ್ವಹಣೆಯನ್ನು ಮನೆಯ ಬಜೆಟ್‌ನಲ್ಲಿ ಮತ್ತೂಮ್ಮೆ ದುಡಿಮೆಗೆ ಹಚ್ಚಬಹುದು.
ಸೀಸನ್ ಚಿಂತನೆ ಎಂದರೆ…
ಲೆಕ್ಕಪತ್ರಗಳನ್ನು ನಿರ್ವಹಿಸುವವನಿಗೆ ವರ್ಷದ ಖರೀದಿಗಳ ಕುರಿತೂ ಒಂದು ಸ್ಪಷ್ಟ ಕಲ್ಪನೆ ಇರುತ್ತದೆ. ಪ್ರತಿಯೊಂದು ಖರೀದಿಯ ಹಿಂದೆ ‘ಸೀಸನ್ ಚಿಂತನೆ’ ಅಳವಡಿಸಿಕೊಂಡರೆ ಉಳಿತಾಯದ ಸುಖ ಸಿಕ್ಕೀತು. ಈ ವರ್ಷ ಫ್ರಿಜ್ ಕೊಳ್ಳಬೇಕು ಎಂಬ ನಿರ್ಧಾರದ ಜೊತೆ ಘೋರ ಬೇಸಿಗೆ ಸಂದರ್ಭದಲ್ಲಿ ಖರೀದಿಗೆ ಹೊರಟರೆ ಯಾವ ರಿಯಾಯ್ತಿಯೂ ಸಿಕ್ಕುವುದಿಲ್ಲ. ಅಂತಹ ಖರೀದಿಯನ್ನು ಮಳೆಗಾಲ, ಚಳಿಗಾಲದ ವಿಶೇಷ ಆಫರ್ ಸಂದರ್ಭದಲ್ಲಿ ಮಾಡಲು ಮೊದಲೇ ಕ್ರಿಯಾಯೋಜನೆ ರೂಪಿಸಿಕೊಂಡರೆ ಕ್ಷೇಮ.
ಒಂದು ಆರ್ಥಿಕ ವರ್ಷದಲ್ಲಿ ಮನೆಯ ಸಾಮಾನ್ಯ ನಿರ್ವಹಣೆಯ ಮಾಸಿಕ ಸರಾಸರಿಯನ್ನು ಕಂಡುಕೊಳ್ಳುವುದು
ಪ್ರತಿಯೊಬ್ಬನಿಗೂ ಅತ್ಯಂತ ಅಗತ್ಯ. ಮಾಸಿಕ ವೆಚ್ಚ 10 ಸಾವಿರ ಇರಲಿ, 30 ಸಾವಿರ ಆಗಲಿ, ಅಂಥದೊಂದು ಮಾಹಿತಿ ಬಜೆಟ್ ರೂಪಿಸಲು ದೊಡ್ಡ ಸಹಾಯ ಮಾಡುತ್ತದೆ. ಆರ್‌ಡಿ, ಪಿಗ್ಮಿಗೆ ಮಾಸಿಕ ಹಾಕಬೇಕಾದ ಹಣವನ್ನು ನಿರ್ಧರಿಸಿಕೊಳ್ಳಲು ಇಂತಹ ಬಜೆಟ್ ಪರಿಕಲ್ಪನೆ ಬೇಕು. ಅತ್ತ ದುಡಿಮೆ, ಇತ್ತ ಉಳಿತಾಯವೇ ಇಲ್ಲದೆ ತಿಂಗಳಿಗೆ ಐದು ಸಾವಿರ ರೂ. ಅಟಲ್ ಪೆನ್ಶನ್ ಯೋಜನೆಗೆ ಹಾಕತೊಡಗಿದರೆ 60 ವರ್ಷದ ನಂತರದ ಕಥೆ ಬಿಡಿ, ಈಗಿನ ಜೀವನವೇ ದುರ್ಭರವಾಗುತ್ತದೆ. ಅದಾಗಬಾರದು ಎಂತಾದರೆ ಲೆಕ್ಕಪತ್ರದ ಶಿಸ್ತು ಬೇಕು.
ಸರ್ಕಾರಗಳನ್ನು ದೂಷಿಸುವುದು ನಮ್ಮ ಜಾಯಮಾನ.ಆದರೆ, ನೆನಪಿರಲಿ. ಹಲವು ಸಂದರ್ಭಗಳಲ್ಲಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸುವ ಯೋಜನೆಗಳು ನಮ್ಮ ಬಜೆಟ್‌ನ್ನು ಲಾಭದಾಯಕ ಮಾಡುತ್ತವೆ. ಈ ವರ್ಷ ಮಾರ್ಚ್ 31ರೊಳಗೆ ಸುಕನ್ಯಾ ಸುರûಾದಲ್ಲಿ ಹಣ ತೊಡಗಿಸಿದರೆ ಹಿಂದಿನ ವರ್ಷದ ಏಪ್ರಿಲ್ ಒಂದರಿಂದ ಅಂದರೆ ಸದರಿ ಸಾಲಿಗೂ ಅದರ ಬಡ್ಡಿದರ ಅನ್ವಯವಾಗುತ್ತದೆ ಎಂತಾದರೆ ಅದರ ಸದಸ್ಯರಾಗಲು ಹೊಸ ಆರ್ಥಿಕ ವರ್ಷಕ್ಕೆ ಕಾಯುವಂತಾಗಬಾರದು. ನಮ್ಮ ಆದ್ಯತಾ ಪಟ್ಟಿಯನ್ನೊಮ್ಮೆ ಪರಿಶೀಲಿಸಿ ತುಸು ಕಡಿಮೆ ಅಗತ್ಯದ ಯೋಜನೆಗೆ ಮೀಸಲಿಟ್ಟ ಹಣವನ್ನು ಇಲ್ಲಿ ತೊಡಗಿಸುವುದು ಬಜೆಟ್ ರೂಪಿಸಿಕೊಂಡಿದ್ದರೆ ಸುಲಭ.
ನೆನಪಿರಲಿ, ತೀರಾ ದುಡ್ಡಿದ್ದವರಿಗೆ ಬಜೆಟ್ ಬೇಕಾಗುವುದಿಲ್ಲ. ಖರ್ಚು ಮಾಡುವ ದಾರಿ ಸಾಕು! ಸಾಮಾನ್ಯ ಗ್ರಾಹಕನಿಗೆ ಸರ್ಕಾರಗಳ ಮತ್ತು ಆತನ ಬಜೆಟ್ ಕಲ್ಪನೆಯೇ ಅವನಿಗೆ ನೆಮ್ಮದಿಯ ಹೆದ್ದಾರಿ ಹುಡುಕಿಕೊಡುತ್ತದೆ.
ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.