ಬಂಜರು ನೆಲದಲ್ಲಿ ಬಂಪರ್ ಬೆಳೆ
Team Udayavani, Nov 18, 2019, 5:06 AM IST
ಹತ್ತು ವರ್ಷಗಳ ಹಿಂದೆ ಅದು ಬಂಜರು ಭೂಮಿಯಾಗಿತ್ತು. ಆಲ್ಲಿ ಬಹುಬೆಳೆ ಬಿಡಿ, ವರ್ಷದಲ್ಲೊಂದು ಬೆಳೆಗೂ ನೀರು ಸಿಗುತ್ತಿರಲಿಲ್ಲ. ಅಂತರ್ಜಲ ಬತ್ತಿ ಹೋಗಿತ್ತು. ಹೀಗಿರುವ ಆ ನೆಲದಲ್ಲಿ ಹಸಿರನ್ನು ಚಿಗುರಿಸಿದವರು ಸದಾಶಿವ ಮಾತನವರ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ, ನೈಸರ್ಗಿಕ ಕೃಷಿ ಮಾಡಬೇಕೆಂಬ ಅವರ ಕನಸು ಈಗ ನನಸಾಗಿದೆ. ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದಾಡಿಭಾವಿ ಗ್ರಾಮದ ವಾಸಿಯಾಗಿರುವ ಸದಾಶಿವ ಅವರದು ಕೃಷಿ ಕುಟುಂಬ. ತಂದೆ ಸಂಗಪ್ಪ. ತಾಯಿ ಅನ್ನಪೂರ್ಣ, ಕೃಷಿಯನ್ನೇ ನೆಚ್ಚಿಕೊಂಡವರು. ಸದಾಶಿವ ಅವರು ಪಿ.ಯು.ಸಿ.ವರೆಗೆ ಓದಿದ್ದು, ಕೃಷಿಯಲ್ಲಿಯ ಆಸಕ್ತಿಯಿಂದ ಶಿಕ್ಷಣಕ್ಕೆ ವಿದಾಯ ಹೇಳಿದರು. ತಂದೆಯವರ ಮಾರ್ಗದರ್ಶನದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ವರ್ಷಕ್ಕೊಂದು ಪ್ರಯೋಗ
ಸದಾಶಿವರವರ ಕೃಷಿ ಸಾಧನೆಗೆ ಪ್ರೇರಣೆಯಾದವರು ಬೆಳಗಾವಿ ಜಿಲ್ಲೆಯ ಸುತಗಟ್ಟಿಯ ಕೃಷಿ ಪಂಡಿತ ಅಭಯ ಮುತಾಲಿಕ ದೇಸಾಯಿಯವರು. ಅಲ್ಲದೇ ಸಾವಯವ ಕೃಷಿ ತಜ್ಞರಾದ ಸುಭಾಷ ಪಾಳೇಕಾರ, ಅವರು ಮಾಡುತ್ತಿದ್ದ ಕೃಷಿ ಪದ್ದತಿಯ ಪ್ರಭಾವವೂ ಇವರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ, ಕಳೆದ ಹತ್ತು ವರ್ಷಗಳಿಂದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆ. ತಮ್ಮ 15 ಎಕರೆ ಜಮೀನಿನಲ್ಲಿ 5 ಎಕರೆ ಚಿಕ್ಕು, 5 ಎಕರೆ ಹುಣಸೆ ಹಾಗೂ 5 ಎಕರೆಯಲ್ಲಿ ಲಿಂಬು, ಪೇರಲ, ಶ್ರೀಗಂಧ ಮತ್ತು ನುಗ್ಗೆಯನ್ನು ಬೆಳೆದಿದ್ದಾರೆ. ಇವರ ತೋಟದಲ್ಲಿ 180 ಚಿಕ್ಕು, 180 ಹುಣಸೆ ಮತ್ತು 650 ನಿಂಬೆ ಗಿಡಗಳು ಸೊಂಪಾಗಿ ಬೆಳೆದಿವೆ. 2016ರಲ್ಲಿ 1200 ಪೇರಲ, 2017ರಲ್ಲಿ 550 ಶ್ರೀಗಂಧ ಹಾಗೂ 6 ತಿಂಗಳ ಹಿಂದೆಯಷ್ಟೇ 550 ನುಗ್ಗೆ ಸಸಿಗಳನ್ನು ನಾಟಿ ಮಾಡಿದ್ದಾರೆ.
ಶ್ರೀಗಂಧ ಪರಾವಲಂಬಿ ಬೆಳೆಯಾಗಿರುವುದರಿಂದ ಅದರ ಸುತ್ತಮುತ್ತಲೂ ಅರಣ್ಯದಂಥ ವಾತಾವರಣವನ್ನೇ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಶ್ರೀಗಂಧವು ನಳನಳಿಸುತ್ತಾ ಬೆಳೆಯುತ್ತಿದೆ. ಅವುಗಳಿಗೆ ಸಾಥ್ ನೀಡಲು ಹಣ್ಣು ಹಾಗೂ ಇತರೆ ಗಿಡಗಳಿವೆ. ಸದಾಶಿವರವರು ಪ್ರತಿ ವರ್ಷ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದ್ದಾರೆ. ಅದರ ಫಲವಾಗಿ ಅವರ ಜಮೀನು ದಟ್ಟ ಅರಣ್ಯದಂತೆ ಕಾಣುತ್ತದೆ.
ಹೆಚ್ಚು ಫಲವತ್ತಾಗಿದೆ
ನಿಸರ್ಗದ ಬಗ್ಗೆ ಕೃಷಿ ಹಾಗೂ ಸಸ್ಯ ಸಂಕುಲಗಳ ಬದುಕಿನ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು, ಕೃಷಿ ವಿಜ್ಞಾನವನ್ನು ಕಲಿತವರಲ್ಲ. ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಸಾಕಷ್ಟು ತಿಳಿದುಕೊಂಡವರು. ಈ ಪ್ರಯೋಗಗಳ ಫಲವಾಗಿಯೇ ಇಂದು ಇವರ ಜಮೀನಿನಲ್ಲಿ ತೆಂಗು, ಸೀತಾಫಲ, ಪಪ್ಪಾಯಿ, ಮಾವು ಸೇರಿದಂತೆ ಹಲವು ಬಗೆಯ ಸಸ್ಯ ಪ್ರಭೇದಗಳಿವೆ. ಅದರ ಜತೆಗೆ ನೂರಾರು ಸೂಕ್ಷ್ಮಜೀವಿಗಳು ಇವರ ಜಮೀನಿನಲ್ಲಿ ನೆಲೆಸುವುದರಿಂದ ಇವರ ತೋಟದ ನೆಲ ಹೆಚ್ಚು ಫಲವತ್ತಾಗಿದೆ.
ಗ್ರಾಹಕರ ಬಳಿಗೇ ಕೃಷಿ ಉತ್ಪನ್ನಗಳು
ಸದಾಶಿವರವರು ಹಸುವಿನ ಕೊಠಡಿಯನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದು ಸದ್ಯ 3 ಆಕಳು ಹಾಗೂ 2 ಎಮ್ಮೆಗಳಿವೆ. ಅಲ್ಲದೇ 30 ಟಗರು ಮರಿಗಳು ಮತ್ತು 12 ಆಡುಗಳಿವೆ. ಮುಂದಿನ ದಿನಗಳಲ್ಲಿ ಆಡುಗಳ ಸಾಕಣಿಕೆಯನ್ನು ವಿಸ್ತರಿಸುವ ಯೋಚನೆಯಲ್ಲಿದ್ದಾರೆ. ಇವರು ವಾರ್ಷಿಕವಾಗಿ ಚಿಕ್ಕುವಿನಿಂದ 2 ಲಕ್ಷ, ಹುಣಸೆಯಿಂದ 1ಲಕ್ಷ, ನಿಂಬೆಯಿಂದ 2 ಲಕ್ಷ, ವಿವಿಧ ತರಕಾರಿಗಳಿಂದ 2 ಲಕ್ಷ, ಹೀಗೆ ಎಲ್ಲಾ ಕೃಷಿ ಚಟುವಟಿಕೆಗಳಿಂದ ಒಟ್ಟು 10- 12 ಲಕ್ಷ ರೂ. ನಿವ್ವಳ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದಾಶಿವರವರ ಪತ್ನಿ ಪವಿತ್ರಾ ಅವರೂ ಪತಿಯ ನೈಸರ್ಗಿಕ ಕೃಷಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.
ರೈತರು ಬೆಳೆದ ಉತ್ಪನ್ನಗಳಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನೇರವಾಗಿ ಮಾರುಕಟ್ಟೆಗೆ ತಲುಪಿಸುವ ಸಲುವಾಗಿ 2017ರಲ್ಲಿ “ಲಕ್ಷಿ$¾à ವೆಂಕಟೇಶ್ವರ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಸಂಘ’ವನ್ನು ಸ್ಥಾಪಿಸಿದ್ದಾರೆ. ಈ ಸಂಘದಲ್ಲಿ ಒಟ್ಟು 500 ರೈತ ಸದಸ್ಯರಿದ್ದಾರೆ. ಸದಾಶಿವ ರೈತ ಉತ್ಪಾದಕ ಸಂಘದ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಬಹು ಚೆನ್ನಾಗಿ ಅದರ ಪ್ರಗತಿಯನ್ನು ಸಾಧಿಸುವತ್ತ ಮುನ್ನಡೆದಿದ್ದಾರೆ. ಅಲ್ಲದೇ ರೈತರು ಬೆಳೆದ ಸಾವಯವ ಕೃಷಿ ಉತ್ಪನ್ನಗಳನ್ನು ಸುಲಭವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ರಾಮದುರ್ಗದ ಮಾರುಕಟ್ಟೆಯಲ್ಲಿ ಕೆಲ ಮಿತ್ರರು ಸೇರಿ ಹಳ್ಳಿ ಅಂಗಡಿಯನ್ನು ಕಳೆದ ಆರು ತಿಂಗಳಿಂದ ಪ್ರಾರಂಭಿಸಿದ್ದಾರೆ.
ಸೂರ್ಯ ಮಂತ್ರ ಮತ್ತು ಭಸ್ಮ
ಹಾಗೆಯೇ ಸದಾಶಿವ ಪ್ರತಿನಿತ್ಯ ಸೂರ್ಯ ಉದಯವಾಗುವ ವೇಳೆಯಲ್ಲಿ ಹಸುವಿನ ಸಗಣಿಯಿಂದ ಮಾಡಿದ ಎರಡು (ಕುಳ್ಳು) ಭರಣಿ, ಒಂದು ಚಮಚ ಆಕಳ ತುಪ್ಪ ಹಾಗೂ ಒಂದು ಮುಷ್ಠಿ ಪಾಲಿಶ್ ಆಗದ ಅಕ್ಕಿ ಸೇರಿಸಿ ಪಿರಮಿಡ್ ಪಾತ್ರೆಯಲ್ಲಿ ಅಗ್ನಿ ಹಚ್ಚಿ “ಸೂರ್ಯಾಯ ಸ್ವಾಹಾಃ ಸೂರ್ಯಾಯ ಇದಂ ನಮಮ’ ಎಂದು ಸೂರ್ಯ ಮಂತ್ರ ಹೇಳಿ ಅರ್ಪಿಸುತ್ತಾರೆ. ಹೀಗೆ ಹಲವು ವರ್ಷಗಳಿಂದ ಅಗ್ನಿಹೋತ್ರವನ್ನು ಮಾಡುತ್ತಿದ್ದು, ಭಸ್ಮವನ್ನು ಜಮೀನಿನಲ್ಲಿ ಹರಡುವುದರಿಂದ, ಕ್ರಿಮಿಕೀಟಗಳು ಬೆಳೆ ನಾಶ ಮಾಡುತ್ತಿದ್ದ ದಿನಗಳು ಇನ್ನಿಲ್ಲವೆಂದು ಹೇಳಲಾಗಿದೆ. ಅಲ್ಲದೇ ಜೀವಾಮೃತ ಅಗ್ನಿ ಅಸ್ತ್ರವನ್ನು ತಯಾರಿಸಿ ಭೂಮಿಗೆ ಸಿಂಪಡಿಸುತ್ತಾರೆ. ಹೀಗೆ ಮಾಡುವುದರಿಂದ ಮಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿ ಭೂಮಿಗೆ ಫಲವತ್ತತೆ ಬರುತ್ತದೆ.
ಇವರ ಜಮೀನಿನಲ್ಲಿ ಎರಡು ಬೋರ್‌ವೆಲ್‌ಗಳಿದ್ದು ಹನಿ ನೀರಾವರಿ ಮೂಲಕ ಎಲ್ಲಾ ಗಿಡಗಳಿಗೂ ನೀರು ಪೂರೈಕೆಯಾಗುವಂತೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ತೋಟದ ಸುತ್ತಲೂ ಭದ್ರವಾದ ತಂತಿ ಬೇಲಿಯನ್ನು ಅಳವಡಿಸಿದ್ದಾರೆ. ಇವರ ಜಮೀನಿಗೆ ಕೃಷಿ ತಜ್ಞರಾದ ಅಭಯ ಮುತಾಲಿಕ್ ದೇಸಾಯಿ, ಕವಿತಾ ಮಿಶ್ರಾ ಮುಂತಾದವರು ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ.
ನೈಸರ್ಗಿಕ ಕೃಷಿಯಿಂದ ಭೂಮಿ ಕೆಡುವುದಿಲ್ಲ. ಮಣ್ಣು ಫಲವತ್ತಾಗುವುದರಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ. ಅಲ್ಲದೇ ಆಹಾರ ಪದಾರ್ಥಗಳಲ್ಲಿ ವಿಷ ಇರುವುದಿಲ್ಲ. ವಿಷ ಮುಕ್ತ ಆಹಾರ ಸೇವನೆಯಿಂದ ಆನಂದದ ಬದುಕು ಸಾಗಿಸಬಹುದು.
– ಸದಾಶಿವ ಮಾತನವರ, ರೈತ
ಸಂಪರ್ಕ: 9731796444
-ಸುರೇಶ ಗುದಗನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.